‘ಟು ಕಿಲ್‌ ಎ ಮಾಕಿಂಗ್‌ ಬರ್ಡ್‌’ ಕಾದಂಬರಿಯನ್ನು ಈ ಕಾರಣಗಳಿಗಾಗಿ ಓದಲೇಬೇಕು

ಹಾರ್ಪರ್‌ ಲೀ ಬರೆದ ‘ಟು ಕಿಲ್ ಎ ಮಾಕಿಂಗ್‌ ಬರ್ಡ್‌’ ಕಾದಂಬರಿ ಅಮೆರಿಕನ್ನರ ಬದುಕಿನಲ್ಲಿ ಪಡೆದಿರುವ ಸ್ಥಾನ ದೊಡ್ಡದು. ಅದನ್ನು ಬೈಬಲ್‌ನಷ್ಟೇ ಮಹತ್ವದ್ದು ಎಂದು ಅಮೆರಿಕನ್ನರು ಗೌರವಿಸುತ್ತಾರೆ. ಐವತ್ತೆಂಟು ವರ್ಷಗಳ ಹಿಂದೆ ಮುದ್ರಣ ಕಂಡ ಈ ಕೃತಿ ಮತ್ತೆ ಮತ್ತೆ ಓದಿಕೊಳ್ಳಬೇಕಾದದ್ದು.

ನನ್ನಿಷ್ಟದ ನಟ ಗ್ರೆಗರಿ ಪೆಕ್‌ ' ಟು ಕಿಲ್‌ ಎ ಮಾಕಿಂಗ್‌ ಬರ್ಡ್‌' ಚಿತ್ರದಲ್ಲಿ ನಟಿಸಿದ್ದು ಗೊತ್ತಾಗಿ ಚಿತ್ರದ ಡಿವಿಡಿ ಖರೀದಿ ಮಾಡಿದೆ. ಹಾರ್ಪರ್‌ ಲೀ ಬರೆದ ಕಾದಂಬರಿಯನ್ನು ಆಧರಿಸಿ, ರಾಬರ್ಟ್‌ ಮುಲ್ಲಿಗನ್‌ ನಿರ್ದೇಶಿಸಿದ ಚಿತ್ರವಿದು. ಕುತೂಹಲದಿಂದ ಎರಡೂವರೆ ಗಂಟೆಗಳ ಆ ಸಿನಿಮಾ ನೋಡಿದೆ. ಅದರ ಜೊತೆಗೆ ಇನ್ನೊಂದು ಡಿವಿಡಿ ಕೂಡ ಇತ್ತು. ಅದನ್ನೂ ನೋಡಲಾರಂಭಿಸಿದೆ. ಅದು ಮಾಕಿಂಗ್‌ ಬರ್ಡ್‌ ಚಿತ್ರದ ಯಶಸ್ಸಿನ ನಂತರ ಅಮೆರಿಕದ ವಿವಿಧ ಭಾಗಗಳಲ್ಲಿ ನಡೆದ ಸಂವಾದ, ನಟರೊಂದಿಗಿನ ಮಾತುಕತೆ ಇದ್ದ ಡಿವಿಡಿ. ಚಿತ್ರ ನೋಡಿ ಎಷ್ಟು ವಿಸ್ಮಿತನಾಗಿದ್ದೆನೊ, ಅದಕ್ಕಿಂತ ಹೆಚ್ಚು ವಿಸ್ಮಯವಾಗಿದ್ದು ಎರಡನೆಯ ಡಿವಿಡಿ ನೋಡುತ್ತಿರುವಾಗ. ಸಂವಾದವೊಂದರಲ್ಲಿ ಗ್ರೆಗರಿ ಪೆಕ್‌ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, "ನಾನು ಅಟಿಕಸ್‌ ಫಿಂಚ್‌ ನೋಡಿದ ಮೇಲೆ ವಕೀಲ ಆಗಬೇಕು ಅನ್ನಿಸಿದೆ. ನಾನು ಅದನ್ನೇ ಮಾಡ್ತೀನಿ'' ಎಂದು ಒಬ್ಬರು, "ನನ್ನ ಮಗಳನ್ನು ಮೇರಿ ಬದ್ಹಾಮ್‌ ರೀತಿಯಲ್ಲೇ ಬೆಳೆಸಬೇಕು ಎಂದು ನಿರ್ಧರಿಸಿದ್ದೇನೆ' ಎಂದು ಒಬ್ಬ ತಾಯಿ ಹೇಳುತ್ತಾಳೆ. ಮತ್ತೊಂದು ಸಂವಾದದಲ್ಲಿ 'ನಾನು ಮಾಕಿಂಗ್ ಬರ್ಡ್‌ ಚಿತ್ರದ ನೋಡಿದ ಮೇಲೆ ವಕೀಲನಾದೆ' ಎನ್ನುತ್ತಾನೆ. "ನನ್ನ ಮಗನಿಗೆ ಫಿಂಚ್‌ ಹೆಸರೇ ಇಟ್ಟಿದ್ದೀನಿ'' ಎಂದು ಮಗದೊಬ್ಬರು ಹೇಳುತ್ತಾರೆ.

'ಟು ಕಿಲ್‌ ಎ ಮಾಕಿಂಗ್‌ ಬರ್ಡ್‌' ಹಾರ್ಪರ್‌ ಲೀ ಬರೆದ ಕಾದಂಬರಿ. ಅದು ೧೯೬೦ರ ಜುಲೈ ೧೧ರಂದು ಮೊದಲ ಬಾರಿಗೆ ಪ್ರಕಟಗೊಂಡಿತ್ತು. ಇದಾಗಿ ಎರಡು ವರ್ಷಗಳಲ್ಲೇ ಚಲನಚಿತ್ರವೂ ಆಗಿ ತೆರೆಕಂಡಿತು. ಐವತ್ತು ಅರವತ್ತರ ದಶಕದ ಅಮೆರಿಕದ ದಕ್ಷಿಣ ಭಾಗದಲ್ಲಿರುವ ಜನಜೀವನ ವನ್ನು ಆಧರಿಸಿ ಬರೆದಿದ್ದ ಕಾದಂಬರಿ ಇದು.

ತಾಯಿಯಿಲ್ಲದ ಮಕ್ಕಳು, ಜನರಿಗಾಗಿ ಹೋರಾಡುವ ವಕೀಲ ತಂದೆ, ಜನಾಂಗೀಯ ತಾರತಮ್ಯ, ಕುತೂಹಲದಿಂದ ಕೂಡಿದ ಬಾಲ್ಯ, ಹಲವು ಆಯಾಮಗಳನ್ನು ಹೊಂದಿದ್ದ ಈ ಕೃತಿ ಪ್ರಕಟವಾದ ಕೆಲವೇ ತಿಂಗಳಲ್ಲಿ ಅಮೆರಿಕದ ಮನೆಮಾತಾಗಿ ಹೋಯಿತು. ಇದುವರೆಗೂ ೩೦ ಕೋಟಿ ಪ್ರತಿಗಳು ಮಾರಾಟವಾಗಿದ್ದು, ಜಗತ್ತಿನ ನಲವತ್ತು ಭಾಷೆಗಳಿಗೆ ಅನುವಾಗಿದೆ. ಅಮೆರಿಕದ ರಾಷ್ಟ್ರೀಯ ಪುಸ್ತಕ ಎಂಬ ಹಿರಿಮೆ, ಬೈಬಲ್‌ನಷ್ಟೇ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಸಾರ್ವಕಾಲಿಕ ಮನ್ನಣೆ ಪಡೆದ ಕೃತಿಗಳಲ್ಲಿ ಇದೂ ಒಂದು ಎನಿಸಿಕೊಂಡಿದೆ. ಏನಿದೆ? ಯಾಕೆ ಓದಬೇಕು?

ಕಾದಂಬರಿಕಾರ್ತಿ ಹಾರ್ಪರ್‌ ಲೀ ನೀಡಿದ ಏಕೈಕ ರೆಕಾರ್ಡೆಡ್‌ ಸಂದರ್ಶನ

ಟು ಕಿಲ್ ಎ ಮಾಕಿಂಗ್‌ ಬರ್ಡ್‌ ಚಿತ್ರದ ಟ್ರೇಲರ್‌

೧. ಜನಾಂಗೀಯ ತಾರತಮ್ಯವನ್ನು ಮೀರುವ ಪರಾನುಭೂತಿ

ಕಥೆ ನಡೆಯುವುದೇ ಕಪ್ಪು ಅಮೆರಿಕನ್‌ ಒಬ್ಬನು ಸವರ್ಣೀಯ ಮಹಿಳೆಯ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದ ಎಂಬ ಘಟನೆಯ ಸುತ್ತ. ಆತನನ್ನು ಸ್ಥಳೀಯ ಪೊಲೀಸರು ಬಂಧಿಸಿ, ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತುತ್ತದೆ. ವಾಸ್ತವದಲ್ಲಿ ಕಟ್ಟು ಮಸ್ತು ದೇಹದ ರಾಬಿನ್‌ಸನ್‌ ನೋಡಿದ ಮೇಯೆಲ್ಲಾ ಎವೆಲ್‌ ಮೋಹಕ್ಕೆ ಬೀಳುತ್ತಾಳೆ. ಅವನ ದೇಹ ಸಖ್ಯ ಬಯಸಿ, ಅವನಿಂದ ತಿರಸ್ಕೃತಳಾದಾಗ ಅವನ ಮೇಲೆ ಅತ್ಯಾಚಾರ ಆರೋಪ ಹೊರಿಸುತ್ತಾಳೆ. ಚರ್ಮದ ಬಣ್ಣದಿಂದ ಅವನನ್ನು ತಿರಸ್ಕಾರದಿಂದ ನೋಡುವ ಸವರ್ಣಿಯರು ನಿಜಕ್ಕೂ ಅವನು ತಪ್ಪು ಮಾಡಿರುತ್ತಾನೆಂದು ಅವನನ್ನು ಕೋರ್ಟಿಗೆ ಎಳೆತರುತ್ತಾರೆ. ಆದರೆ ಅವನ ಪರವಾಗಿ ವಾದ ಮಂಡಿಸಲು ಮುಂದಾಗುವುದು ಸವರ್ಣೀಯನೇ ಆದ ಆಟಿಕಸ್‌ ಫಿಂಚ್‌. ಕಪ್ಪು ಜನರು ಆತನಲ್ಲಿ ದೇವರನ್ನೇ ಕಾಣುತ್ತಾರೆ.

ಧರ್ಮ, ಬಣ್ಣ ಹೆಸರಿನಲ್ಲಿ ತಾರತಮ್ಯ, ಶೋಷಣೆ, ದೌರ್ಜನ್ಯಗಳು ಇಂದಿಗೂ ನಿಂತಿಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರನ್ನು ಶೋಷಿತರನ್ನು ಸುಲಭವಾಗಿ ತಪ್ಪಿತಸ್ಥರನ್ನಾಗಿ ಮಾಡಲಾಗುತ್ತದೆ. ತಾರತಮ್ಯ ಶೋಷಣೆಗಳು, ಕೊಲೆಗಳು ಅವ್ಯಾಹವಾಗಿ ನಡೆಯುತ್ತಿವೆ. ಅಮೆರಿಕದಲ್ಲಂತೂ ಈಗ ಟ್ರಂಪ್‌ ಆಡಳಿತದಲ್ಲಿ ಜನಾಂಗೀಯ ದ್ವೇಷ, ಸಂಘರ್ಷಗಳು ಹೆಚ್ಚಾಗಿರುವುದನ್ನು ನೋಡುತ್ತೇವೆ. ಈ ಹೊತ್ತಿನಲ್ಲಿ ಮಾಕಿಂಗ್‌ ಬರ್ಡ್‌ ನ್ಯಾಯ, ಮಾನವೀಯತೆ, ಸತ್ಯದ ಪರವಾಗಿ ನಿಲ್ಲುವುದಕ್ಕೆ ಯಾವ ಗಡಿಗಳು ಅಡ್ಡಬರುವುದಿಲ್ಲ ಎಂದು ಹೇಳುವ ಅಟಿಕಸ್‌ ಫಿಂಚ್‌ನ ಪರಾನುಭೂತಿ ಅನುಕರಣೀಯವಾಗಿ ಕಾಣುತ್ತದೆ.

೨. ಮಕ್ಕಳ ಅರಿವಿನ ಲೋಕ ವಿಸ್ತರಿಸುವ ಪೋಷಕರ ಹೊಣೆ

ಅಟಿಕಸ್‌ ಒಬ್ಬ ಬಡ ವಕೀಲ. ಆತನಿಗೆ ಇಬ್ಬರು ಮಕ್ಕಳು. ಮನೆಗೆ ಬರುವ ಕಲ್ಪುರ್ನಿಯಾಳೆ ಆ ಮಕ್ಕಳ ಆರೈಕೆಯನ್ನು ಮಾಡುವವಳು. ಆದರೆ ತಾಯಿಯಿಲ್ಲದ ಈ ಮಕ್ಕಳಲ್ಲಿ ಲೋಕ ಪ್ರಜ್ಞೆಯನ್ನು ಬೆಳೆಸುತ್ತಾ ತನ್ನ, ಸುತ್ತಮುತ್ತಲ ಜನರೊಂದಿಗೆ ವ್ಯವಹರಿಸುವುದನ್ನು ಹೇಳಿಕೊಡುವ ತಂದೆ, ವಿವೇಚನೆ, ಸ್ಪಂದನೆ ಎಲ್ಲ ಗುಣಗಳನ್ನು ಪೋಷಿಸುತ್ತಾನೆ. ಸ್ವಾತಂತ್ರ್ಯವನ್ನು ಆನಂದಿಸುವ ಮಕ್ಕಳು, ತನ್ನ ನೆರೆಯಲ್ಲೇ ಹುಚ್ಚನೆಂಬ ಪಟ್ಟಕ್ಕೆ ಗುರಿಯಾದ ಬೋ ರಾಡ್ಲಿಯೊಂದಿಗೆ ಮಾನವೀಯ ಸಂವಾದವನ್ನು ಸಾಧ್ಯವಾಗಿಸಿಕೊಳ್ಳುವ ಎಳೆಯ ಮಕ್ಕಳ ಧೈರ್ಯವನ್ನು, ಲೀ ಅದ್ಭುತವಾಗಿ ಕಟ್ಟಿಕೊಡುತ್ತಾರೆ. ಪೋಷಕರು ಮಕ್ಕಳೊಂದಿಗೆ ಕಾಲ ಕಳೆಯುವ ಬಗೆಯನ್ನು ಅಟಿಕಸ್‌ ಪಾತ್ರ ಕಟ್ಟಿಕೊಡುವ ಬಗೆಯೇ ಅದ್ಭುತ.

ಮಕ್ಕಳು ಹಟ ಮಾಡುತ್ತಾರೆಂದು ಕೈಯಲ್ಲಿ ವಿಡಿಯೋ ಪ್ಲೇ ಮಾಡಿದ ಮೊಬೈಲ್‌ ಕೊಡುವ ಕಾಲದಲ್ಲಿ ಮಕ್ಕಳ ಮನಸ್ಸು ಅರಳಿಸುವಂತೆ ಪೋಷಕರು ನಡೆದುಕೊಳ್ಳಬೇಕಾದ ಹೊಣೆಗಾರಿಕೆಯನ್ನು ಒತ್ತಿ ಹೇಳುತ್ತದೆ. ಮಕ್ಕಳಿಗೆ ಅವರ ತಂದೆ-ತಾಯಂದಿರೇ ಹೀರೋ, ಮಾದರಿ ಎಲ್ಲವೂ ಆಗಿರುತ್ತಾರೆ. ತಂದೆ-ತಾಯಿಯರ ಬಗ್ಗೆ ಹೆಮ್ಮೆ ಮೂಡುವಂತಾದರೆ, ಮಕ್ಕಳ ಸಾಮಾಜಿಕ ಗ್ರಹಿಕೆಯೇ ಭಿನ್ನವಾಗಿರುತ್ತದೆ. ಅದನ್ನು ಮಾಕಿಂಗ್‌ ಬರ್ಡ್‌ ಮನವರಿಕೆ ಮಾಡಿಕೊಡುತ್ತದೆ.

೩. ಹೆಣ್ಣೆಂದರೆ ದೃಢ, ಸ್ವತಂತ್ರ ಮತ್ತು ಸ್ಫೂರ್ತಿ

ಅಟಿಕಸ್‌ ಮಗಳು ಸ್ಕೌಟ್‌ ಟಾಮ್‌ ಬಾಯ್‌ ರೀತಿಯ ಹುಡುಗಿ. ಅಣ್ಣ ಜಿಮ್‌ನೊಂದಿಗೆ ಎಲ್ಲ ರೀತಿಯಲ್ಲೂ ಸಡ್ಡು ಹೊಡೆದು ಪಂದ್ಯಕ್ಕೆ ಇಳಿಯುವ ದೃಢ ಮನಸ್ಸಿನ ಹುಡುಗಿ. ತನ್ನ ಮನೆಗೆ ಬರುವ ಕಲ್ಪುರ್ನಿಯಾ, ನೆರೆಯ ಮಿಸ್‌ ಮಾಡಿ ಅವರ ವ್ಯಕ್ತಿತ್ವದಿಂದ ಪ್ರಭಾವಿತಳಾದ ಸ್ಕೌಟ್‌ ಅದೇ ರೀತಿಯ ಸ್ವತಂತ್ರ್ಯ ಮನಸ್ಸನ್ನು ಬೆಳೆಸಿಕೊಳ್ಳುವುದಕ್ಕೆ ಹಂಬಲಿಸುತ್ತಾಳೆ. ಅವಳ ಆ ಗುಣವನ್ನು ತಪ್ಪೆಂದು ಟೀಕಿಸುವ ಜನರೂ ಇದ್ದಾರೆ. ಡೂಬೋಸ್‌ ಸ್ಕೌಟ್‌ ತೊಡುವ ಬಟ್ಟೆಯ ಬಗ್ಗೆ ತಕರಾರು ತೆಗೆಯುತ್ತಾಳೆ. ಕುಟುಂಬ ಹೆಸರೇ ಹಾಳಾಗುತ್ತದೆ ಎಂದು ಬೈಯುತ್ತಾಳೆ. ಈ ಸಾಂಪ್ರದಾಯಿಕ ಮತ್ತು ಜನಾಂಗೀಯ ನಿಲುವುಗಳೂ ವ್ಯಕ್ತವಾಗುತ್ತವೆ. ಆದರೆ ಅಟಿಕಸ್‌ ಮಕ್ಕಳನ್ನು ಅಂಥ ವಿಚಾರಗಳಿಂದ ಕಂಗೆಡದಂತೆ ನೋಡಿಕೊಳ್ಳುತ್ತಾನೆ. ಸಮಾನತೆ, ಸ್ವಾತಂತ್ರ್ಯಗಳು ಹೆಣ್ಣಿನ ಹಕ್ಕು ಎಂಬುದನ್ನು ತಂದೆಯಾಗಿ, ನ್ಯಾಯವಾದಿಯಾಗಿ ಬಲ್ಲ ಆತ, ಮಗಳನ್ನು ಹಾಗೇ ಬೆಳೆಯುವುದಕ್ಕೆ ಪೂರಕ ವಾತಾವರಣ ಸೃಷ್ಟಿಸುತ್ತಾನೆ.

ಇಂದೂ ಬಟ್ಟೆಯ ಕಾರಣಕ್ಕೆ ಅತ್ಯಾಚಾರವಾಗುತ್ತದೆ ಎಂದು ಮಾತನಾಡುವ ಮೂರ್ಖರ ನಡುವೆ, ಹೆಣ್ತನವನ್ನು ಪ್ರದರ್ಶಿಸುವಂತಹ ನಡವಳಿಕೆಯನ್ನು ಕೈಬಿಡದಂತೆ, ಬಿಡುಬೀಸಾಗಿ ನಡೆದುಕೊಳ್ಳದಂತೆ ಎಚ್ಚರವಹಿಸುವ ಪೋಷಕರು ನಡುವೆ ಈ ಪಾತ್ರ ಮತ್ತು ಕಾದಂಬರಿ ಹೊರಡಿಸುವ ಧನಿ ಹೆಚ್ಚು ಕೇಳಿಸಿಕೊಳ್ಳುವಂತಾಗಬೇಕು ಎನ್ನಿಸುತ್ತದೆ,

೪. ಶಿಕ್ಷೆಗೆ ಗುರಿಯಾಗುವ ಮುಗ್ದತೆಯ ರಕ್ಷಣೆ

ಮಾಕಿಂಗ್‌ ಬರ್ಡ್‌ ಅಂದರೆ ನಮ್ಮಲ್ಲಿ ಸಾಮಾನ್ಯವಾಗಿ ಕಾಣಸಿಗುವ ಮೈನಾ ಹಕ್ಕಿಯಂಥದ್ದೇ ಒಂದು. ಇದು ಕೀಟಗಳು, ಸಣ್ಣ ಜೀವಿಗಳು ಹೊರಡಿಸುವ ಸದ್ದುಗಳನ್ನು ಅನುಕರಿಸುತ್ತಾ ತನ್ನ ಸುತ್ತಲ ಪರಿಸರದಲ್ಲಿ ರಂಜನೀಯ ವಾತಾವರಣವನ್ನು ಸೃಷ್ಟಿಸುತ್ತದೆ. ಯಾರಿಗೂ ಹಾನಿ ಮಾಡುವುದಿಲ್ಲ, ಯಾರ ಗೂಡನ್ನು ಆಕ್ರಮಿಸಿಕೊಳ್ಳುವುದಿಲ್ಲ. ಅದರಿಂದ ಯಾವ ಜೀವಿಗೂ ತೊಂದರೆಯಾಗುವುದಿಲ್ಲ. ಅಂಥ ಹಕ್ಕಿಯನ್ನು ಕೊಲ್ಲುವುದೆಂದರೆ ಪಾಪವಲ್ಲವೆ? ಹಾರ್ಪರ್‌ ಲೀ ತಮ್ಮ ಈ ಕಾದಂಬರಿಯಲ್ಲಿ ಮಾಕಿಂಗ್‌ ಬರ್ಡ್‌ನಂತೇ ಇರುವ ಮುಗ್ದ ಜೀವಿಗಳನ್ನು ಗುರುತಿಸುತ್ತಾರೆ, ಆರೋಪಕ್ಕೆ ಗುರಿಯಾಗಿ ಕಾನೂನಿನ ಮುಂದೆ ನಿಲ್ಲುವ ಟಾಮ್‌ ರಾಬಿನ್‌ಸನ್‌ ಆಗಲಿ, ಹುಚ್ಚನ ಆರೋಪ ಹೊತ್ತು ಕತ್ತಲ ಕೋಣೆಯಲ್ಲಿ ಮನೋವೈಕಲ್ಯದಿಂದ ಬಳಲುವ ಬೂ ರಾಡ್ಲಿ ಅಗಲಿ ತಮ್ಮ ಮುಗ್ದತೆಯ ಕಾರಣಕ್ಕೆ ಅನುಭವಿಸುವ ನೋವು, ಬಂಧನದ ಸಂಕಟಗಳನ್ನು ಲೀ ಮನಸ್ಸು ತಟ್ಟುವಂತೆ ಕಟ್ಟಿಕೊಡುತ್ತಾರೆ. ಲೋಕಜ್ಞಾನದ ವಿಸ್ತರಣೆಯಾಗಿ ಮುಗ್ದತೆ ಕಳೆದುಕೊಳ್ಳುವುದು ಒಂದೆಡೆಯಾದರೆ, ಲೋಕದ ಸ್ವಾರ್ಥದ ಹೊಡೆತಕ್ಕೆ ನಲುಗುವ ಮುಗ್ದತೆ ಒಂದೆಡೆ ಇರುವುದನ್ನು ಲೀ ಕಟ್ಟಿಕೊಡುತ್ತಾರೆ. ಇಂದಿಗೂ ಹೀಗೆ ಸಮಾಜದ ಸ್ವಾರ್ಥಕ್ಕೆ ಬಲಿಯಾಗುವ ಮುಗ್ದರನ್ನು ಎಲ್ಲ ವಲಯದಲ್ಲೂ ನೋಡುತ್ತಿದ್ದೇವೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More