ಬಿ ಎ ಮೊಹಿದೀನ್‌ ಆತ್ಮಕತೆ | ಏಕಾಏಕಿ ‘ಯು ಆರ್‌ ದಿ ಕ್ಯಾಂಡಿಡೇಟ್‌’ ಅಂದರು ಅರಸು!

ಕರಾವಳಿಯ ಹಿರಿಯ ನಾಯಕ ಬಿ ಎ ಮೊಹಿದೀನ್‌ ಅವರ ಆತ್ಮಕತೆ ‘ನನ್ನೊಳಗಿನ ನಾನು’ ಬಿಡುಗಡೆಗೆ ಸಿದ್ಧವಾಗಿದೆ. ಕಾಂಗ್ರೆಸ್ ಹಾಗೂ ಜನತಾ ಪರಿವಾರದಲ್ಲಿ ಸಕ್ರಿಯರಾಗಿದ್ದ ಮೊಹಿದ್ದೀನ್‌, ತಮ್ಮ ಚುನಾವಣಾ ರಾಜಕೀಯ ಕುರಿತು ಹಂಚಿಕೊಂಡ ನೆನಪುಗಳನ್ನು ಎರಡು ಭಾಗದಲ್ಲಿ ನೀಡುತ್ತಿದ್ದೇವೆ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನು ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಆಗ ಕೇಂದ್ರದಲ್ಲಿ ಜನತಾ ಪಕ್ಷದ ಸರ್ಕಾರ ಅಧಿಕಾರದಲ್ಲಿತ್ತು. ಇಂದಿರಾ ಗಾಂಧಿಯವರು ಚುನಾವಣೆಯಲ್ಲಿ ಸೋತಿದ್ದರು. ರಾಜ್ಯದಲ್ಲಿದ್ದ ದೇವರಾಜ ಅರಸು ಅವರ ಸರಕಾರದ ಅವಧಿ 1978ರಲ್ಲಿ ಮುಗಿಯುವುದಿತ್ತು.

ಅರಸು ಅವರ ಕಾರ್ಯವೈಖರಿ, ಸಾಧನೆಗಳು, ಗಳಿಸಿದ ಜನಪ್ರಿಯತೆ ಇವೆಲ್ಲವನ್ನು ಗಮನಿಸಿದ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಜನತಾ ಪಕ್ಷ, ಅವರು ಅಧಿಕಾರದಲ್ಲಿರುವಾಗಲೇ ಚುನಾವಣೆ ನಡೆಸಿದರೆ ಅವರನ್ನು ಸೋಲಿಸುವುದು ಕಷ್ಟವಾಗಬಹುದೆಂದು ಮನಗಂಡು 1977ರ ಡಿಸೆಂಬರ್ 31ರಂದು ಅರಸು ಅವರ ಸರಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತ ಹೇರಿತು. ಜೊತೆಗೆ, ಚುನಾವಣೆಗೂ ಆದೇಶ ಹೊರಡಿಸಿತು. ಅರಸು ಅವರು ಇದರಿಂದ ಎದೆಗುಂದಲಿಲ್ಲ. ಅದೇ ಸಮಯದಲ್ಲಿ ಕಾಂಗ್ರೆಸ್‌ನಿಂದ ಹೊರಬಂದ ಕೆಂಗಲ್ ಹನುಮಂತಯ್ಯ, ಸ್ವರಾಜ್ಯ ಪಕ್ಷವನ್ನು ಕಟ್ಟಿದರು. ಮೈಸೂರಿನ ಪ್ರಭಾವಿ ನಾಯಕ ಎನ್ ರಾಚಯ್ಯ ಜನತಾ ಕಾಂಗ್ರೆಸ್ ಪಕ್ಷವನ್ನು ಕಟ್ಟಿದರು.

ಇಂತಹ ಅನಿರೀಕ್ಷಿತ ಬೆಳವಣಿಗೆಗಳಿಂದ ಕಿಂಚಿತ್ತೂ ವಿಚಲಿತರಾಗದ ಅರಸು ಅವರು, ಚುನಾವಣೆಯಲ್ಲಿ ಗೆಲ್ಲಲು ಶಕ್ತಿ ಇರುವ ಅಭ್ಯರ್ಥಿಗಳ ಹುಡುಕಾಟದಲ್ಲಿ ತೊಡಗಿಸಿಕೊಂಡರು. ನನ್ನನ್ನು 1978ರ ಎಲೆಕ್ಷನ್ ಕಮಿಟಿಯ ಸದಸ್ಯನನ್ನಾಗಿ ನೇಮಿಸಿದರು ಮತ್ತು ಟಿಕೆಟ್ ಹಂಚಿಕೆಯ ಮಹತ್ವದ ಜವಾಬ್ದಾರಿ ನನಗೂ ನೀಡಲಾಗಿತ್ತು. ಆ ಸಂದರ್ಭದಲ್ಲಿ 38 ಗಂಟೆಗಳ ಸುದೀರ್ಘ ಸಮಾಲೋಚನಾ ಸಭೆ ಅರಸು ಅವರ ನೇತೃತ್ವದಲ್ಲಿ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎಂಬ ವಿಷಯ ಬಂದಾಗ ಅಲ್ಲಿಯ ಹಾಲಿ ಶಾಸಕ ಬಿ ವಿ ಕಕ್ಕಿಲಾಯರು, "ನನಗೆ ಬಂಟ್ವಾಳ ಬೇಡ, ವಿಟ್ಲ ಕ್ಷೇತ್ರವನ್ನು ಕೊಡಿ,” ಎಂದು ಕೇಳಿದರು. ಅವರ ಬೇಡಿಕೆಯನ್ನು ಮನ್ನಿಸುವ ಅನಿವಾರ್ಯತೆ ಕಾಂಗ್ರೆಸ್‌ಗಿತ್ತು. ಏಕೆಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಪಿಐ ಒಂದು ಶಕ್ತಿಯಾಗಿತ್ತು ಮತ್ತು ಅದರೊಂದಿಗೆ ಕಾಂಗ್ರೆಸ್‌ ಪಕ್ಷ ಒಡಂಬಡಿಕೆಯನ್ನು ಮಾಡಿಕೊಂಡಿತ್ತು. ಕಾಂಗ್ರೆಸ್‌ನ ಶಿವರಾಮ ಶೆಟ್ಟಿಯವರು ವಿಟ್ಲ ಕ್ಷೇತ್ರದಲ್ಲಿ ಟಿಕೆಟ್ ಕೇಳುತ್ತಿದ್ದರು. "ಇಲ್ಲ, ಸಾಧ್ಯವಿಲ್ಲ. ನಾವು ಸಿಪಿಐಗೆ ಒಂದು ಸ್ಥಾನವನ್ನು ಕೊಡಲೇಬೇಕು, ನೀವು ಬಂಟ್ವಾಳದಲ್ಲಿ ನಿಲ್ಲಿ,” ಎಂದು ಶಿವರಾಮ ಶೆಟ್ಟಿ ಅವರಿಗೆ ಅರಸು ಹೇಳಿದರು. ಆದರೆ, ಶಿವರಾಮ ಶೆಟ್ಟಿ ಬಂಟ್ವಾಳದಲ್ಲಿ ನಿಲ್ಲಲು ನಿರಾಕರಿಸಿದರು. ಹೀಗೆ ಚರ್ಚೆ ಸಾಗುತ್ತಿರುವಾಗ ಅರಸು ಅವರು ನನ್ನೊಂದಿಗೆ, “ನಿನ್ನದು ಯಾವ ಕ್ಷೇತ್ರ?” ಎಂದು ಕೇಳಿದರು. “ನಾನು ಬಜಪೆಯವನು. ನನ್ನದು ಗುರುಪುರ ಹೋಬಳಿ ಆಗುತ್ತದೆ. ಅದು ಬಂಟ್ವಾಳ ಕ್ಷೇತ್ರಕ್ಕೆ ಸೇರುತ್ತದೆ,” ಎಂದು ಹೇಳಿದೆ. ಆಗ ಅರಸು ಅವರು, “ಯು ಆರ್ ದಿ ಕ್ಯಾಂಡಿಡೇಟ್,” ಎಂದು ಹೇಳಿಬಿಟ್ಟರು! “ಗೋ ಆಂಡ್ ಕಂಟೆಸ್ಟ್. ಯು ಆರ್ ಮೈ ಜನರಲ್ ಸೆಕ್ರೆಟರಿ,” ಎಂದು ಆದೇಶಿಸಿದರು. “ಇಲ್ಲ ಸರ್, ನನಗೆ ಆಗಲಿಕ್ಕಿಲ್ಲ. ಆ ಕ್ಷೇತ್ರ ನನಗೆ ಹೆಚ್ಚು ಪರಿಚಯವೂ ಇಲ್ಲ,” ಎಂದು ಹೇಳಿದೆ. “ಹೆದರಬೇಡ ಹೋಗು, ನಾಮಿನೇಶನ್ ಹಾಕು. ನಿನ್ನ ಚುನಾವಣಾ ಪ್ರಚಾರಕ್ಕೆ ನಾನು ಬರುತ್ತೇನೆ,” ಎಂದರು. ಆಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆ ಕೆ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು. ಕೆ ಕೆ ಅವರ ದಕ್ಷತೆ, ಕಾರ್ಯಶೈಲಿ ಮತ್ತು ಬದ್ಧತೆ ಜನಜನಿತವಾಗಿತ್ತು.

ಆದರೂ ನನಗೆ ಚುನಾವಣೆಗೆ ಸ್ಪರ್ಧಿಸುವುದರ ಬಗ್ಗೆ ಗೊಂದಲವಿತ್ತು. ನಾನು ಹುಟ್ಟಿದ್ದು ಮಂಗಳೂರಿನ ಬಜಪೆಯಲ್ಲಾದರೂ ಬದುಕಿನ ಹೆಚ್ಚಿನ ಭಾಗವನ್ನು ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲೇ ಕಳೆದಿದ್ದೆ. ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಅನೇಕರು ಅವರ ಕೆಲಸ ಕಾರ್ಯಗಳಿಗೆ ನನ್ನನ್ನು ಸಂಪರ್ಕಿಸುತ್ತಿದ್ದರು. ಇಲ್ಲಿ ಹೇಳಬೇಕಾದ ವಿಷಯವೇನೆಂದರೆ, ಆಗಿನ ಕಾಲದಲ್ಲಿ ಪಕ್ಷಕ್ಕೆ ಬಹಳ ಗೌರವ, ಮರ್ಯಾದೆ ಇತ್ತು. ಕೆಪಿಸಿಸಿ ಕಚೇರಿಯಿಂದ ಮುಖ್ಯಮಂತ್ರಿ ಸಹಿತ ಯಾವುದೇ ಮಂತ್ರಿ ಅಥವಾ ಇಲಾಖೆಗಳಿಗೆ ಒಂದು ಸಣ್ಣ ಪತ್ರ ಹೋದರೂ ಅದನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿತ್ತು ಮತ್ತು ಆ ಪತ್ರಕ್ಕೆ ಅನುಪಾಲನಾ ವರದಿಯೂ ಬರುತ್ತಿತ್ತು. ಯಾವುದೇ ಕೆಲಸಕ್ಕೆ ನಾವು ಮಂತ್ರಿಗಳನ್ನು ಭೇಟಿ ಮಾಡುವ ಅಥವಾ ಫೋನ್ ಮಾಡುವ ಪದ್ಧತಿಯೇ ಇರಲಿಲ್ಲ. ಪಕ್ಷದ ಕಚೇರಿಯಿಂದ ಹೋಗುವ ಒಂದು ಸಣ್ಣ ಪತ್ರಕ್ಕೂ ಅಷ್ಟು ಬೆಲೆ ಇತ್ತು.

ನಿಮಗೊಂದು ಉದಾಹರಣೆ ಹೇಳುವುದಾದರೆ, ಈಗ ರಾಜ್ಯದ ಪ್ರತಿಷ್ಠಿತ ‘ಪ್ರೆಸಿಡೆನ್ಸಿ ಸ್ಕೂಲ್’ ಇದೆಯಲ್ಲ, ಇದರ ಸ್ಥಾಪಕ ನಿಸಾರ್ ಎಂಬುವರು ನಾನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ನನ್ನ ಬಳಿ ಬಂದು, “ಸರ್, ನನ್ನ ಕೈಯಲ್ಲಿ ಸ್ವಲ್ಪ ಹಣ ಇದೆ. ನನಗೆ ಒಂದು ಶಾಲೆಯನ್ನು ಪ್ರಾರಂಭಿಸಬೇಕು ಎಂಬ ಆಸೆ ಇದೆ. ತಾವು ನನಗೆ ಸರಕಾರದ ಅನುಮತಿಯನ್ನು ಕೊಡಿಸಬೇಕು,” ಎಂದು ಕೋರಿದರು. ನಾನು ಪಕ್ಷದ ವತಿಯಿಂದ ಸಂಬಂಧಪಟ್ಟ ಸಚಿವರಿಗೆ ಒಂದು ಸಣ್ಣ ಪತ್ರ ಬರೆದು, ಸಹಿ ಮಾಡಿ ಕೊಟ್ಟೆ. “ಈ ಪತ್ರ ತೆಗೆದುಕೊಂಡು ಹೋಗು. ನಿನಗೆ ಅನುಮತಿ ಸಿಗುತ್ತದೆ,” ಎಂದು ಹೇಳಿದೆ. ಯಾವುದೇ ಅಡಚಣೆ ಇಲ್ಲದೆ ನಿಸಾರ್ ಅವರಿಗೆ ಶಾಲೆ ಪ್ರಾರಂಭಿಸಲು ಅನುಮತಿ ಸಿಕ್ಕಿತ್ತು. ಹಾಗೆ ಸ್ಥಾಪನೆಯಾದ ಪ್ರೆಸಿಡೆನ್ಸಿ ಎಂಬ ಚಿಕ್ಕ ಶಾಲೆ ಇಂದು ಪ್ರೆಸಿಡೆನ್ಸಿ ಯುನಿವರ್ಸಿಟಿ ಎಂಬ ಬೃಹತ್ ಸಂಸ್ಥೆಯಾಗಿ ಬೆಳೆದುನಿಂತಿದೆ.

ಈ ರೀತಿ ನನ್ನಿಂದ ಸಹಾಯ ಪಡೆದ ಕೆಲವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದರು. ದೇವರಾಜ ಅರಸು ಅವರು ಬಂಟ್ವಾಳದಲ್ಲಿ ನೀನು ಸ್ಪರ್ಧಿಸು ಎಂದು ಆದೇಶಿಸಿದಾಗ ತುಸು ವಿಚಲಿತನಾದ ನಾನು, ನೇರವಾಗಿ ಮಂಗಳೂರಿಗೆ ಬಂದೆ. ನನ್ನ ಆತ್ಮೀಯ ಮಿತ್ರರನ್ನು, ಕುಟುಂಬದ ಹಿರಿಯ ಕಿರಿಯರನ್ನೆಲ್ಲ ಸಂಪರ್ಕಿಸಿ ಒಂದು ಸುತ್ತಿನ ಮಾತುಕತೆ ನಡೆಸಿದೆ. ಎಲ್ಲರೂ ನನ್ನನ್ನು ಪ್ರೋತ್ಸಾಹಿಸಿದರು. “ಇದೊಂದು ಒಳ್ಳೆಯ ಅವಕಾಶ, ಇದನ್ನು ಕೈ ಬಿಡಬೇಡ,” ಎಂದು ಹೇಳಿದರು.

ಆಗ ನಾನು ನನ್ನ ಕೆಲವು ಅಭಿಪ್ರಾಯಗಳನ್ನು ಅವರ ಮುಂದಿಟ್ಟೆ. ಒಂದನೆಯದು ನನ್ನ ಬಳಿ ದುಡ್ಡಿಲ್ಲ. ಚುನಾವಣೆಯ ಖರ್ಚಿಗಾಗಿ ನಾನು ಯಾರ ಬಳಿಯೂ ಹಣ ಕೇಳುವುದಿಲ್ಲ. ಪಕ್ಷದ ವತಿಯಿಂದ ಏನಾದರೂ ಸಿಕ್ಕಿದರೆ ಆ ಹಣವನ್ನು ನಾನು ಕೈಯಿಂದ ಮುಟ್ಟುವುದಿಲ್ಲ. ಅದನ್ನು ಬ್ಲಾಕ್ ಅಧ್ಯಕ್ಷರಿಗೆ ಹಸ್ತಾಂತರಿಸುತ್ತೇನೆ. ನನ್ನ ಬಳಿ ಯಾರೂ ಹಣ ಕೇಳಬಾರದು, ನನ್ನ ಹೆಸರಿನಲ್ಲಿ ಯಾರೂ ಹಣ ಸಂಗ್ರಹಿಸಬಾರದು. ನನ್ನ ಎರಡನೆಯ ನಿಲುವು- ನಾನು ಯಾವುದೇ ಕಾರಣಕ್ಕೂ ದೇವಸ್ಥಾನ, ಚರ್ಚು, ಮಸಿದೀಗಳಿಗೆ ಹೋಗಿ ಮತ ಯಾಚಿಸುವುದಿಲ್ಲ. ಯಾವುದೇ ಧಾರ್ಮಿಕ ಸ್ಥಳಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ. ಧರ್ಮ, ಜಾತಿಯ ಹೆಸರಿನಲ್ಲಿ ಯಾರೂ ಮತ ಯಾಚಿಸಬಾರದು. ನನ್ನ ಚುನಾವಣೆಯ ಅವಧಿಯಲ್ಲಿ ಎಲ್ಲಿಯೂ ಯಾವ ರೀತಿಯ ಗಲಾಟೆ, ಘರ್ಷಣೆಗಳು ಆಗಬಾರದು. ಅಂತಹ ಘಟನೆಗಳು ಆಗಬಾರದು. ಅಂತಹ ಘಟನೆಗಳು ನಡೆದರೆ ನಾನು ಮಧ್ಯ ಪ್ರವೇಶಿಸುವುದಿಲ್ಲ. ಪೋಲಿಸ್ ಠಾಣೆಗಳಿಗೆ ಯಾರ ಪರವಾಗಿಯೂ ಫೋನ್ ಮಾಡುವುದಿಲ್ಲ. ಯಾರ ಬಿಡುಗಡೆ ಅಥವಾ ಬಂಧನಕ್ಕೆ ಶಿಫಾರಸು ಮಾಡುವುದಿಲ್ಲ.

ನನ್ನ ಆತ್ಮೀಯರು, ಸ್ನೇಹಿತರು, ಕುಟುಂಬದವರು, ಬಂಧು ಬಳಗದವರನ್ನೆಲ್ಲ ಸೇರಿಸಿ ನನ್ನ ಈ ವಿಚಾರಗಳನ್ನೆಲ್ಲ ಚರ್ಚಿಸುವಾಗ ಕುಪಿತಗೊಂಡ ಕೆಲವು ಯುವಕರು ಸಭೆಯಲ್ಲಿ ಎದ್ದುನಿಂತು, “ಇದೆಲ್ಲ ಆಗುವ ಹೋಗುವ ವಿ‍ಷಯವಲ್ಲ. ಹೀಗೆಲ್ಲ ಷರತ್ತು ಹಾಕಿ ಗೆಲ್ಲಲಿಕ್ಕೆ ಸಾಧ್ಯವಿದೆಯಾ?" ಎಂದು ಹೇಳಿ ಸಭೆಯಿಂದ ಹೊರನಡೆದರು. ಆಗ ಅವರನ್ನು ಹಿಂಬಾಲಿಸಿದ ಎಂ ಕೆ ಮುಹಮ್ಮದ್ ಮಳಲಿ ಎಂಬವ, ಆ ಯುವಕರನ್ನೆಲ್ಲ ವಾಪಸು ಸಭೆಗೆ ಕರೆತಂದು, ಏರಿದ ಧ್ವನಿಯಲ್ಲಿ ಮಾತನಾಡಲು ಪ್ರಾರಂಭಿಸಿದ. ಈ ಮುಹಮ್ಮದ್ ಮಳಲಿ ಬುದ್ಧಿವಂತ. ರಾಜಕೀಯದ ಆಟದಲ್ಲಿ ಬಹಳ ಪಳಗಿದವ. ಆತ ಯುವಕರನ್ನು ಉದ್ದೇಶಿಸಿ ಹೇಳಿದ, “ನಿಮ್ಮ ಸಮಸ್ಯೆ ಏನು? ಮೊಹಿದೀನ್ ಅವರು ಮಸೀದಿ, ದೇವಸ್ಥಾನ, ಚರ್ಚುಗಳಿಗೆ ವೋಟು ಕೇಳಲು ಹೋಗುವುದಿಲ್ಲ ಅಂತ ಅಲ್ಲವಾ? ಹೌದು ಅವನು ಬರುವುದಿಲ್ಲ. ಈ ಚುನಾವಣೆಯಲ್ಲಿ ನಾವು ಈ ವಿಷಯವನ್ನೇ ಪ್ರಚಾರ ಮಾಡುವ. ಮೊಹಿದೀನ್ ಒಬ್ಬ ಜಾತ್ಯತೀತ ವ್ಯಕ್ತಿ. ಯಾವತ್ತೂ ರಾಜಕೀಯಕ್ಕೆ ಮಸೀದಿ, ದೇವಸ್ಥಾನ, ಚರ್ಚು ಮತ್ತು ಯಾವುದೇ ಧಾರ್ಮಿಕ ನಂಬಿಕೆಗಳನ್ನು ಬಳಸಿಕೊಳ್ಳುವುದಿಲ್ಲ. ಧಾರ್ಮಿಕ ಸ್ಥಳಗಳಲ್ಲಿ ರಾಜಕೀಯ ಮಾಡುವುದಿಲ್ಲ. ಇದನ್ನೇ ನಮ್ಮ ಚುನಾವಣಾ ಪ್ರಚಾರದ ಅಸ್ತ್ರವನ್ನಾಗಿ ಬಳಸುವ, ಖಂಡಿತವಾಗಿಯೂ ಮೊಹಿದೀನ್ ನಿಲುವು ಎಲ್ಲರಿಗೂ ಇಷ್ಟವಾಗಬಹುದು.” ಮುಹಮ್ಮದ್ ಮಳಲಿ ಅವನದ್ದೇ ಆದ ಶೈಲಿಯಲ್ಲಿ, ಭಾಷೆಯಲ್ಲಿ ಇದನ್ನು ಹೇಳಿದಾಗ ಎಲ್ಲರೂ ತಲೆದೂಗಿದರು. ನಾನು ಸಹ ಚುನಾವಣೆಗೆ ಸ್ಪರ್ಧಿಸಲು ಮಾನಸಿಕವಾಗಿ ಸಜ್ಜಾದೆ.

ಬೆಂಗಳೂರಿಗೆ ಹಿಂದಿರುಗಿದ ನಾನು, ನಂತರ ನಾಮಪತ್ರ ಸಲ್ಲಿಸಲು ಮಂಗಳೂರಿಗೆ ಆಗಮಿಸಿದೆ. ಈ ಸಂದರ್ಭ ನಾನು ಮೊದಲು ಸಂಪರ್ಕಿಸಿದ್ದು ಬಂಟ್ವಾಳ-ಪಾಣೆ ಮಂಗಳೂರು ಬ್ಲಾಕ್‌ನ ಪ್ರಧಾನ ಕಾರ್ಯದರ್ಶಿ ಸದಾನಂದ ಪೂಂಜಾರನ್ನು. ಬಂಟ್ವಾಳ ಕ್ಷೇತ್ರಕ್ಕೆ ಸಂಬಂಧಪಟ್ಟ ಎರಡು ಬ್ಲಾಕ್‌ಗಳಿದ್ದವು. ಒಂದು ಗುರಪುರ ಬ್ಲಾಕ್, ಮತ್ತೊಂದು ಪಾಣೆ ಮಂಗಳೂರು ಬ್ಲಾಕ್. ಗುರಪುರ ಕ್ಷೇತ್ರಕ್ಕೆ ಸಂಬಂಧಪಟ್ಟ 29 ಗ್ರಾಮಗಳು. ಪಾಣೆ ಮಂಗಳೂರು ಕ್ಷೇತ್ರಕ್ಕೆ ಸಂಬಂಧಪಟ್ಟ 65 ಗ್ರಾಮಗಳಿದ್ದವು. ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಕಾರ್ಯಕರ್ತರ ಸಭೆಯೊಂದನ್ನು ಆಯೋಜಿಸಬೇಕಾಗಿತ್ತು. ಆದರೆ, ಜಿಲ್ಲೆಯ ರಾಜಕೀಯ ಸ್ಥಿತಿ ಇಂದಿರಾ ಕಾಂಗ್ರೆಸ್‌ಗೆ ಪೂರಕವಾಗಿರಲಿಲ್ಲ. ಬೆರಳೆಣಿಕೆಯ ಸ್ಥಳೀಯ ನಾಯಕರು ಮಾತ್ರ ಇದ್ದರು. ಕಾಂಗ್ರೆಸ್ (ಒ) ಪಕ್ಷಕ್ಕೆ ಪ್ರಭಾವಿ ವ್ಯಕ್ತಿಯಾಗಿದ್ದ ಮಹಾಬಲ ಶೆಟ್ಟಿ ಅವರು ಅಧ್ಯಕ್ಷರಾಗಿದ್ದರು. ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರದಲ್ಲಿದ್ದು, ಹೆಚ್ಚಿನ ಶ್ರೀಮಂತರು, ಭೂಮಾಲೀಕರು, ಬಂಡವಾಳಶಾಹಿಗಳು ಜನತಾ ಪಕ್ಷಕ್ಕೆ ಬೆನ್ನೆಲುಬಾಗಿದ್ದರು. ಆ ಸಮಯದಲ್ಲಿ ಬಂಟ್ವಾಳದಲ್ಲಿ ನಮಗಿದ್ದ ಶಕ್ತಿ ಎಂದರೆ ಸಿಪಿಐ ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು. ಸಿಪಿಐಯ ಬಿ ವಿ ಕಕ್ಕಿಲ್ಲಾಯ ಅವರಿಗೆ ಪಕ್ಕದ ವಿಟ್ಲ ಕ್ಷೇತ್ರವನ್ನು ಬಿಟ್ಟುಕೊಡಲಾಗಿತ್ತು. ಬಂಟ್ವಾಳ ಕ್ಷೇತ್ರದಲ್ಲಿ ಕಕ್ಕಿಲ್ಲಾಯ ಅವರ ಅಭಿಮಾನಿಗಳು ಮತ್ತು ಅನುಯಾಯಿಗಳ ದೊಡ್ಡ ದಂಡೇ ಇತ್ತು. ಅತ್ಯಂತ ನಿಷ್ಠಾವಂತ ಹಾಗೂ ಅವಿರತ ದುಡಿಯುವ ಆ ದಂಡು ನನ್ನ ಬೆಂಬಲಕ್ಕೆ ನಿಂತಿತು. ಸದಾನಂದ ಪೂಂಜಾ ಅತ್ಯಂತ ಸಮರ್ಪಕವಾಗಿ ಮತ್ತು ಧೈರ್ಯದಿಂದ ಎಲ್ಲರನ್ನೂ ಒಗ್ಗೂಡಿಸಿ ಚುನಾವಣೆಗೆ ಸಜ್ಜಾದರು. ಅವರೆಲ್ಲರಿಗಿದ್ದ ಒಂದು ದೊಡ್ಡ ಸಮಸ್ಯೆ ಎಂದರೆ, ನನ್ನನ್ನು ಕ್ಷೇತ್ರಕ್ಕೆ ಪರಿಚಯಿಸವುದು. ಆ ಕೆಲಸವನ್ನು ಸದಾನಂದ ಪೂಂಜಾ ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ನನಗೆ ಹೆಚ್ಚಿನ ಬೆಂಬಲ ನೀಡಿದವರು ಇತ್ತೀಚೆಗೆ ನಿಧನರಾದ ಕಾಮ್ರೆಡ್ ವಿಶ್ವನಾಥ ನಾಯ್ಕ ಮತ್ತು ಪಿ ಸಂಜೀವ ಅವರು.

ಮುಂದುವರಿಯುವುದು...

ಈ ಆತ್ಮಕತೆಯನ್ನು ಮುಹಮ್ಮದ್‌ ಕುಳಾಯಿ ಮತ್ತು ಮುಹಮ್ಮದ್‌ ಅಲಿ ನಿರೂಪಣೆ ಮಾಡಿದ್ದಾರೆ

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More