ಮಡಿವಂತಿಕೆ-ರಂಜಕತೆಯ ನಡುವೆ ಸಾಹಿತ್ಯ, ಸಿನಿಮಾದಲ್ಲಿ ಸಲಿಂಗ ಪ್ರೇಮದ ನೆರಳು

ಸಲಿಂಗ ಪ್ರೇಮದ ಬಗ್ಗೆ ಮಡಿವಂತಿಕೆ ಇನ್ನೂ ಇದೆ. ಅದು ಸಾಹಿತ್ಯ, ಸಿನಿಮಾದಲ್ಲೂ ಕಾಣಿಸುತ್ತದೆ. ೩೭೭ನೇ ಕಾಯ್ದೆ ಕುರಿತು ಮಹತ್ವದ ತೀರ್ಪು ಹೊರಬೀಳುತ್ತಿರುವ ಹೊತ್ತಿನಲ್ಲಿ ಕನ್ನಡ ಸಾಹಿತ್ಯ, ಸಿನಿಮಾದಲ್ಲಿ ಸಲಿಂಗ ಪ್ರೇಮ ಕಥಾವಸ್ತುವಾಗಿ ಹೇಗೆ ಬಳಕೆಯಾಗಿದೆ ಎಂಬುದರತ್ತ ಇಣುಕುನೋಟ

ಸಾಹಿತ್ಯ ಅಥವಾ ಸಿನಿಮಾ ಸಮಾಜವನ್ನು ಪ್ರತಿಬಿಂಬಿಸುತ್ತದೆ ಎಂಬುದು ತಿಳಿದ ಸತ್ಯ. ಯಾವುದೇ ಸೃಜನಶೀಲ ಕೃತಿ ನಿರ್ವಾತದಿಂದ ಹುಟ್ಟುವುದಿಲ್ಲ. ಸಮಾಜದಲ್ಲಿ ಕಾಣುವ ಕತೆಗಳು ಅಥವಾ ಪಾತ್ರಗಳಿಂದ ಸ್ಫೂರ್ತಿ ಪಡೆದು ಹುಟ್ಟುವ ಅಭಿವ್ಯಕ್ತಿಗಳು ಬದುಕಿನ ಸತ್ಯಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನೆರವಾಗುತ್ತವೆ. ಇಂಥ ಸೃಜನಶೀಲ ಅಭಿವ್ಯಕ್ತಿಯೇ ಸಮಾಜದ ಶೋಷಿತ, ಉಪೇಕ್ಷಿತ ಸಂಗತಿಗಳು, ಪಾತ್ರಗಳತ್ತ ಗಮನ ಸೆಳೆಯುವಂತೆ ಮಾಡುತ್ತವೆ.

ಸಲಿಂಗ ಪ್ರೇಮವೂ ಅಂಥದ್ದೇ ಒಂದು ಸೂಕ್ಷ್ಮವಾದ ವಿಷಯ. ಈಗಲೂ ಈ ಕುರಿತು ಮಾತನಾಡುವುದು ನಿಷಿದ್ಧ. ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವುದೇ ಅಪರಾಧ ಎಂಬಂತಿರುವ ಸಮಾಜದಲ್ಲಿ ಸಲಿಂಗ ಪ್ರೇಮವನ್ನು ಅಸಹಜ, ಪ್ರಕೃತಿ ನಿಯಮಕ್ಕೆ ವಿರುದ್ಧವಾದುದು ಎಂದೇ ಪ್ರತಿಪಾದಿಸಲಾಗುತ್ತದೆ. ಆದರೂ ಮನುಷ್ಯನ ಮನೋಲೋಕವನ್ನು ಅನ್ವೇಷಿಸ ಬಯಸುವ ಪ್ರತಿಯೊಬ್ಬ ಸಂವೇದನಾಶೀಲ ವ್ಯಕ್ತಿಯೂ ಸಲಿಂಗ ಪ್ರೇಮದ ಕುರಿತು ಸಾಹಿತ್ಯದ ಮೂಲಕ ತಮ್ಮ ಗ್ರಹಿಕೆ ಮತ್ತು ಒಳನೋಟಗಳನ್ನು ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ದೃಶ್ಯ ಮಾಧ್ಯಮದಲ್ಲೂ ಇಂಥ ಪ್ರಯೋಗಗಳು ನಡೆದಿವೆ.

ಮೊದಲಿಗೆ, ಕನ್ನಡದ ಕತೆ ಮತ್ತು ಕಾದಂಬರಿಗಳಲ್ಲಿ ಈ ವಿಷಯವನ್ನು ಹೇಗೆ ಬಿಂಬಿಸಲಾಗಿದೆ ಎಂದು ನೋಡಿದರೆ, ಅಲ್ಲಲ್ಲಿ ಕೆಲವು ಉಲ್ಲೇಖಗಳು ಕಾಣಿಸುತ್ತವೆ. ಶಿವರಾಮ ಕಾರಂತರ 'ಮೂಕಜ್ಜಿಯ ಕನಸುಗಳು' ಕಾದಂಬರಿಯಿಂದ ಸಮಕಾಲೀನ ಕತೆಗಾರ ವಸುಧೇಂದ್ರ ಅವರ 'ಮೋಹನಸ್ವಾಮಿ'ಯವರೆಗೆ ಸಲಿಂಗ ಪ್ರೇಮವನ್ನು ವಿವಿಧ ರೀತಿಯಲ್ಲಿ ಚಿತ್ರಿಸಲಾಗಿದೆ.

'ಮೂಕಜ್ಜಿಯ ಕನಸುಗಳು' ಕಾದಂಬರಿ ಗಂಡು-ಗಂಡಿನ ನಡುವಿನ ಸಂಬಂಧವನ್ನು ಅನಾಗರಿಕ ಎನ್ನುತ್ತದೆ. ಕಾದಂಬರಿಯ ಮುಖ್ಯಪಾತ್ರದ ಅಜ್ಜಿ, ‘ಗೇ’ ಸಂಬಂಧವನ್ನು ಅಪರಾಧವೆಂದೇ ಟೀಕಿಸುತ್ತಾಳೆ. ಈ ಧೋರಣೆ 'ಕಾಮರೂಪಿ' ಎಂದು ಪರಿಚಿತರಾಗಿರುವ ಎಂ ಎಸ್ ಪ್ರಭಾಕರ ಅವರ 'ಕುದುರೆಮೊಟ್ಟೆ'ಯಲ್ಲೂ ಕಾಣಿಸುತ್ತದೆ. ಕುಂ ವೀರಭದ್ರಪ್ಪ ಅವರ ಕತೆ 'ಬೆಟ್ಟದಾಚೆ'ಯಲ್ಲಿ, ಲೇಖಕನ ಪಾತ್ರ ಸಲಿಂಗಿಯೊಬ್ಬನ ದಾಳಿಗೆ ಗುರಿಯಾಗುತ್ತದೆ.

ಈ ಮೇಲೆ ಉಲ್ಲೇಖಿಸಿದ ಕತೆ-ಕಾದಂಬರಿಗಳಲ್ಲಿ ಲೇಖಕರು ಸಲಿಂಗ ಪ್ರೇಮವನ್ನು ಹೇವರಿಕೆ, ಅಸಹಜತೆ, ತಪ್ಪು ಎಂಬ ಅಭಿಪ್ರಾಯಗಳೊಂದಿಗೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಇದರ ಇನ್ನೊಂದು ಅತಿರೇಕ ಕಾಣಿಸುವುದು ಎಸ್ ಎಲ್ ಭೈರಪ್ಪನವರ ಎರಡು ಕಾದಂಬರಿಗಳಲ್ಲಿ. 'ಅನ್ವೇಷಣೆ' ಕಾದಂಬರಿಯಲ್ಲಿ ಸನ್ಯಾಸಿಯೊಬ್ಬ ಯುವಕನೊಂದಿಗೆ ದೈಹಿಕ ಸಂಪರ್ಕ ಹೊಂದುತ್ತಾನೆ. ಒಂದೆರಡು ದಿನಗಳ ಕಾಲದ ಪ್ರೇಮ-ಕಾಮದ ಸಂಬಂಧ ಪಾಪಪ್ರಜ್ಞೆಯಲ್ಲಿ ಅಂತ್ಯ ಕಾಣುತ್ತದೆ. ಇನ್ನು, ವಿವಾದಕ್ಕೆ ಗುರಿಯಾದ 'ಆವರಣ'ದಲ್ಲಿ ಸಲಿಂಗಪ್ರೇಮ/ಕಾಮ ತಮ್ಮ ಕ್ರೌರ್ಯ, ಶೋಷಣೆಯ ಮಾರ್ಗವಾಗಿ ಬಳಕೆಯಾಗುತ್ತದೆ ಎಂದು ಭೈರಪ್ಪನವರು ಚಿತ್ರಿಸಲು ಯತ್ನಿಸುತ್ತಾರೆ.

ಬಹುತೇಕ ಕತೆ-ಕಾದಂಬರಿಗಳಲ್ಲಿ ಪಾತ್ರಗಳನ್ನು ಮೂರನೆಯವರನ್ನಾಗಿ ಚಿತ್ರಿಸುವ ಲೇಖಕರು, ಸಲಿಂಗ ಪ್ರೇಮಿಗಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಅಥವಾ ಅರ್ಥ ಮಾಡಿಸುವ ಪ್ರಯತ್ನ ಮಾಡುವುದಿಲ್ಲ. ಸಮಾಜಕ್ಕೆ ಒಪ್ಪಿತವಾಗದ ಸಂಬಂಧ ಎಂದು ಸುಪ್ತಮನಸ್ಸಿನಲ್ಲಿ ಅಚ್ಚೊತ್ತಿರುವಂತೆ ಅದನ್ನು ಸಮಾಜಬಾಹಿರವಾದ ಸಂಗತಿಯೆಂಬಂತೆ ನೋಡುತ್ತ ಬಂದಿರುವುದು ಕಾಣುತ್ತದೆ.

ಹಾಗೆ ನೋಡಿದರೆ, ಕನ್ನಡದ ಹೆಮ್ಮೆಯ ಕತೆಗಾರ ಮಾಸ್ತಿಯವರು ಈ ವಿಷಯವಾಗಿ ವಿಶಾಲ ಧೋರಣೆಯನ್ನು ವ್ಯಕ್ತಪಡಿಸುತ್ತಾರೆ. 'ಆಂಗ್ಲ ನೌಕಾ ಕ್ಯಾಪ್ಟನ್‌' ಇದಕ್ಕೆ ಉದಾಹರಣೆ. ಸಮುದ್ರದಲ್ಲೇ ದೀರ್ಘ ಕಾಲ ಇರಬೇಕಾದ ನೌಕಪಡೆಯ ಮುಖ್ಯಸ್ಥ ತನ್ನ ದೈಹಿಕ ಬಯಕೆಯನ್ನು ಜೊತೆಗಿರುವ ಯುವಕರೊಂದಿಗೆ ಪೂರೈಸಿಕೊಳ್ಳುತ್ತಾನೆಂದು ಕತೆಗಾರರು ವಿವರಿಸುತ್ತಾರೆ. ಅದರ ಬಗ್ಗೆ ತಕರಾರು, ಪಾಪಪ್ರಜ್ಞೆ, ತಿರಸ್ಕಾರಗಳಿಲ್ಲದೆ ಮಾಸ್ತಿ ಕತೆಯ ನಿರೂಪಣೆ ಮಾಡಿದ್ದಾರೆ.

ಕಾಲ ಸರಿದಂತೆ ಜಗತ್ತಿನಲ್ಲಿ ಇಂತಹ ಸಂಬಂಧ ಸಹಜವೆಂಬುದು ವೇದ್ಯವಾಗುತ್ತ, ನಮ್ಮ ಅರಿವು ವಿಸ್ತಾರವಾದಂತೆ ಸಲಿಂಗ ಸ್ನೇಹ, ಸಂಬಂಧ, ಪ್ರೀತಿಗಳು ಬಹುಶಃ ಸಾಹಿತ್ಯದಲ್ಲೂ ನೇರ-ಮುಕ್ತವಾಗಿಯಲ್ಲದಿದ್ದರೂ ಗುಪ್ತ ಒಪ್ಪಿತವಾಗಲಾರಂಭಿಸಿತು ಎನ್ನಿಸುತ್ತದೆ. ಹಾಗಾಗಿಯೇ ಕೆಲ ಲೇಖಕರು ಸಲಿಂಗ ಪ್ರೇಮವನ್ನು ಭಾವನಾತ್ಮಕ ನೆಲೆಯಲ್ಲಿ ತಿರಸ್ಕಾರ ಭಾವವಿಲ್ಲದೆ ನೋಡುತ್ತ ಬಂದಿದ್ದಾರೆ. ಅನಂತಮೂರ್ತಿಯವರ ಕತೆಗಳಲ್ಲಿ ಇದು ಕಾಣಿಸುತ್ತದೆ. ಲಂಕೇಶ್‌ ತಮ್ಮ ಆತ್ಮಕತೆಯಲ್ಲಿ ತಮ್ಮೊಳಗೆ ಸಲಿಂಗ ಪ್ರೀತಿಯ ಭಾವನೆಗಳು ಹುಟ್ಟಿದ್ದನ್ನು ಹಂಚಿಕೊಂಡಿದ್ದಾರೆ.

ಸಲಿಂಗ ಪ್ರೇಮದ ಬಗ್ಗೆ ಮತ್ತಷ್ಟು ಮುಕ್ತ ಅಭಿವ್ಯಕ್ತಿಯನ್ನು ನೋಡಲು ಸಾಧ್ಯವಾಗುತ್ತಿರುವುದು ಇತ್ತೀಚೆಗೆ. ಮಿತ್ರಾ ವೆಂಕಟ್ರಾಜು ಹೆಣ್ಣು-ಹೆಣ್ಣಿನ ನಡುವಿನ ಸಂಬಂಧದ ಕುರಿತು ಮುಕ್ತವಾಗಿ ಬರೆದಿದ್ದಾರೆ. ಯುವ ಲೇಖಕಿ ಕಾವ್ಯ ಕಡಮೆ ಅವರ 'ಪುನರಪಿ' ಕಾದಂಬರಿ ಕೂಡ ಲೆಸ್ಬಿಯನ್‌ ಕಥಾವಸ್ತು ಇರುವ ತೀರಾ ಇತ್ತೀಚಿನ ಉದಾಹರಣೆ.

ಇದೆಲ್ಲಕ್ಕೂ ಮುಖ್ಯವಾಗಿ, ತಾವು ‘ಗೇ’ ಎಂಬುದನ್ನು ಮುಕ್ತವಾಗಿ ಹೇಳಿಕೊಂಡ ವಸುಧೇಂದ್ರ, ಸಮಕಾಲೀನ ಕತೆಗಾರರಲ್ಲಿ ಮುಖ್ಯರು. ಅವರ 'ಮೋಹನಸ್ವಾಮಿ' ಕಥಾ ಸಂಕಲನವು ಗೇ ಸಂಬಂಧದ ಸೂಕ್ಷ್ಮಗಳನ್ನು ಕನ್ನಡದ ಓದುಗಲೋಕಕ್ಕೆ ಹೊಸ ಅನುಭವಗಳಿಗೆ ತೆರೆದುಕೊಳ್ಳುವಂತೆ ಮಾಡಿದೆ. ಇಂಥ ಸಾಹಿತ್ಯವನ್ನು ಓದುವುದೇ ಅಪರಾಧ ಎಂಬಂತೆ ನೋಡುವ ಸಮಾಜದಲ್ಲಿ ವಸುಧೇಂದ್ರ ತಮ್ಮ ಗುರುತು ಮತ್ತು ಅಭಿವ್ಯಕ್ತಿಯಲ್ಲಿ ಸಲಿಂಗ ಪ್ರೀತಿಯನ್ನು ಕಟ್ಟಿಕೊಡುತ್ತಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೊಸ ಬಗೆಯ ಸಾಹಿತ್ಯ ಮತ್ತು ಸಾಹಿತ್ಯಕ ಚರ್ಚೆಯ ಕೇಂದ್ರವೂ ಆಗಿದ್ದಾರೆ.

ಇನ್ನು, ವೈದ್ಯರೂ ಆಗಿರುವ ಗುರುಪ್ರಸಾದ್‌ ಕಾಗಿನೆಲೆ, ನಾಗರಾಜ್‌ ವಸ್ತಾರೆ ಮುಂತಾದ ಸಮಕಾಲೀನ ಲೇಖಕರು ಸಲಿಂಗ ಪ್ರೀತಿ/ಕಾಮವನ್ನು ಸಹಜ, ನೈಸರ್ಗಿಕ ಅಭಿವ್ಯಕ್ತಿಯಾಗಿ, ಆ ಸಂಬಂಧಗಳ ನಡುವಿನ ಸಂಕೀರ್ಣತೆಯನ್ನು ತಮ್ಮ ಕತೆಗಳಲ್ಲಿ, ಕಾದಂಬರಿಯಲ್ಲಿ ತರುವ ಮೂಲಕ ಅರಿವನ್ನು ದಾಟಿಸುತ್ತಿದ್ದಾರೆ.

ಇದನ್ನೂ ಓದಿ : ಅಕ್ಕೈ ಪದ್ಮಶಾಲಿ ಮನದ ಮಾತು | ಈಗಲಾದರೂ ಸೆಕ್ಷನ್ 377 ತಿದ್ದುಪಡಿ ಆಗಲಿ

ಇಂಗ್ಲಿಷ್‌ನಲ್ಲಿ ಹೋಶಾಂಗ್‌ ಮರ್ಚೆಂಟ್‌ ಗೇ ಸಾಹಿತ್ಯ ರಚನೆಯಿಂದ ಗಮನ ಸೆಳೆದವರು. ಮುಂಬೈ ಮೂಲದ ಕವಿ, ವಿಮರ್ಶಕರಾದ ಮರ್ಚೆಂಟ್‌, ಮೊತ್ತಮೊದಲ ಗೇ ಸಾಹಿತ್ಯ ಸಂಕಲನ, "ಯಾರಾನಾ: ಗೇ ರೈಟಿಂಗ್‌ ಫ್ರಮ್‌ ಇಂಡಿಯಾ’ ಸಂಪಾದಿಸಿದ್ದಾರೆ. ೧೦ಕ್ಕೂ ಹೆಚ್ಚು ಕವನ ಸಂಕಲನ ಪ್ರಕಟಿಸಿದ್ದು, ಇದರಲ್ಲಿ ಸಲಿಂಗ ಪ್ರೇಮವನ್ನು ಪ್ರತಿನಿಧಿಸುವ ಕವಿತೆಗಳು ಹಲವು ಇವೆ.

ಇದೆಲ್ಲ ಹೇಳುವಾಗ ಇಸ್ಮತ್‌ ಚುಗ್ತಾಯಿ ಅವರ ಹೊದಿಕೆ (ಕ್ವಿಲ್ಟ್‌) ಕತೆ ನೆನಪಿಸಿಕೊಳ್ಳದೆ ಇರಲು ಸಾಧ್ಯವಿಲ್ಲ. ಈ ಕತೆ ಚುಗ್ತಾಯಿ ಅವರನ್ನು ಕೋರ್ಟ್‌ ಮೆಟ್ಟಿಲು ಏರುವಂತೆ ಮಾಡಿತ್ತು. ೧೯೪೪ರಲ್ಲಿ 'ಲಿಹಾಫ್‌' ಹೆಸರಿನಲ್ಲಿ ಪ್ರಕಟವಾದ ಈ ಕತೆಯಲ್ಲಿ ಬೇಗಮ್‌ ಜಾನ್‌, ತನ್ನ ಗಂಡನಿಂದ ಸಿಗದ ದೈಹಿಕ ಮತ್ತು ಭಾವನಾತ್ಮಕವಾದ ಪ್ರೀತಿಯನ್ನು ತನ್ನ ಸೇವಕಿ ರಾಬುಳಲ್ಲಿ ಕಂಡುಕೊಳ್ಳುತ್ತಾಳೆ. ಹೆಣ್ಣು-ಹೆಣ್ಣಿನ ಸಲಿಂಗಪ್ರೇಮವನ್ನು ಹೇಳುವ ಈ ಕತೆ ಆ ಕಾಲಕ್ಕೆ ಕ್ರಾಂತಿಕಾರಿ ಸೃಜನಶೀಲ ಅಭಿವ್ಯಕ್ತಿಯಾಗಿತ್ತು.

ಸಿನಿಮಾದಲ್ಲಿ ಸಲಿಂಗ ಪ್ರೇಮಲೋಕ

ಇನ್ನು, ಸಿನಿಮಾ ಒಂದು ಜನಪ್ರಿಯ ಮಾಧ್ಯಮವಾದ್ದರಿಂದಲೋ ಏನೋ ಗೇ ಅಥವಾ ಲೆಸ್ಬಿಯನ್‌ ಸಂಬಂಧವನ್ನು ರಂಜಕವಾಗಿಯೇ ಬಿಂಬಿಸುತ್ತ ಬಂದಿದೆ. ಸಲಿಂಗ ಸಂಬಂಧ ಎಂಬುದು ಕೇವಲ ಕಾಮಕ್ಕೆ ಸಂಬಂಧಿಸಿದ್ದು ಎಂಬ ಸೀಮಿತ ಗ್ರಹಿಕೆಯೂ ಇದಕ್ಕೆ ಕಾರಣವಿರಬಹುದು. ಸಲಿಂಗಿಗಳ ನಡುವೆ ಇರಬಹುದಾದ ಭಾವನಾತ್ಮಕ, ಸೂಕ್ಷ್ಮ ಹಾಗೂ ಸಂಕೀರ್ಣ ಸಂಬಂಧವನ್ನು ಕಟ್ಟಿಕೊಡುವ ಪ್ರಯತ್ನ ವಿರಳ. ಭಾರತೀಯ ಸಿನಿಮಾಕ್ಕೆ ಸಲಿಂಗ ಸಂಬಂಧ ಪ್ರೇಮಕ್ಕಿಂತ ಕಾಮವಾಗಿಯೇ ಹೆಚ್ಚು ಮುಖ್ಯವಾಗಿದೆಯೇ ಎಂಬ ಅನುಮಾನವೂ ಬರುತ್ತದೆ. ಇಷ್ಟಾಗಿಯೂ ಭಾರತದಲ್ಲಿ ಬಂದಿರುವ ಕೆಲವು ಮುಖ್ಯ ಚಿತ್ರಗಳನ್ನು ಹೀಗೆ ಗಮನಿಸಬಹುದು.

೧. ಫೈರ್‌

ನಿರ್ದೇಶನ: ದೀಪಾ ಮೆಹ್ತಾ | ತಾರಾಗಣ: ಶಬಾನಾ ಆಜ್ಮಿ, ನಂದಿತಾ ದಾಸ್‌

ಹೆಣ್ಣುಗಳ ನಡುವಿನ ಸಲಿಂಗ ಪ್ರೀತಿಯ ಕತೆಯನ್ನು ಮುಖ್ಯವಾಹಿನಿಗೆ ತಂದ ಸಿನಿಮಾ ಇದು. ಅತಿರೇಕಗಳಿಲ್ಲದೆ ಅತ್ಯಂತ ಸೂಕ್ಷ್ಮವಾಗಿ ಭಾವನಾತ್ಮಕ ನೆಲೆಯಲ್ಲಿ ಸಲಿಂಗಪ್ರೀತಿಯನ್ನು ಕಟ್ಟಿಕೊಟ್ಟ ಚಿತ್ರ. ಕಥಾವಸ್ತುವಿನ ಕಾರಣಕ್ಕೆ ವಿವಾದಕ್ಕೂ ಗುರಿಯಾಗಿತ್ತು.

೨. ಅಲಿಗಢ

ನಿರ್ದೇಶನ: ಹನ್ಸಲ್‌ ಮೆಹ್ತಾ | ತಾರಾಗಣ: ಮನೋಜ್‌ ಬಾಜ್‌ಪಾಯಿ, ರಾಜ್‌ಕುಮಾರ್‌ ರಾವ್‌

ರಾಮಚಂದ್ರ ಸಿರಾಸ್‌ ಅವರ ಬದುಕನ್ನು ಆಧರಿಸಿದ ಚಿತ್ರ ಗೇ ಸಂಬಂಧದ ಕುರಿತದ್ದು. ಮರಾಠಿ ಪ್ರೊಫೆಸರ್‌ ಒಬ್ಬನ ಸಲಿಂಗ ಪ್ರೀತಿ ಆತನ ಬದುಕಿಗೆ ಎರವಾಗುವುದನ್ನು ಕಟ್ಟಿಕೊಡುತ್ತದೆ. ಅಪಾರ ಮೆಚ್ಚುಗೆಯನ್ನು ಗಳಿಸಿದ ಚಿತ್ರವಿದು.

೩. ಮಾರ್ಗರಿಟಾ ವಿತ್‌ ಎ ಸ್ಟ್ರಾ

ನಿರ್ದೇಶನ : ಶೋನಾಲಿ ಬಸು | ತಾರಾಗಣ: ಕಲ್ಕಿ ಕೋಚ್ಲಿನ್‌, ರೇವತಿ

ದೈಹಿಕ ನ್ಯೂನ್ಯತೆ ಇರುವ ಮಾರ್ಗರಿಟಾ ಹರೆಯದ ಹುಡುಗಿ. ವಯೋಸಹಜ ದೈಹಿಕ ಬಯಕೆ ಮತ್ತು ತನ್ನ ಮಿತಿಗಳ ನಡುವೆ ಸಹಪಾಠಿ ಗೆಳತಿಯೊಂದಿಗೆ ಬೆಳೆಸಿಕೊಳ್ಳುವ ಸಂಬಂಧವನ್ನು ಕಟ್ಟಿಕೊಡುವ ಚಿತ್ರ. ಸಂಕೀರ್ಣ ವಿಷಯವನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟ ಹಿರಿಮೆ ಈ ಚಿತ್ರದ್ದು.

೪. ಸಂಚಾರಂ

ನಿರ್ದೇಶನ: ಲಿಗಿ ಜೆ ಪುಲಪ್ಪಾಳಿ | ತಾರಾಗಣ: ಸುಹಾಸಿನಿ ನಾಯರ್, ಶೃತಿ ಮೆನನ್‌

ಹಿಂದಿ ಹೊರತಾಗಿ ಪ್ರಾದೇಶಿಕ ಭಾಷೆಗಳಲ್ಲೂ ಸಲಿಂಗ ಪ್ರೇಮ ಕುರಿತು ಚಿತ್ರಗಳು ಬಂದಿವೆ. ಯುವತಿಯರಿಬ್ಬರ ಸ್ನೇಹ-ಪ್ರೀತಿಯ ಕತೆಯನ್ನು ಬಿಚ್ಚಿಡುತ್ತದೆ. ಧರ್ಮಸೂಕ್ಷ್ಮಗಳನ್ನು ಒಳಗೊಂಡಿರುವ ಈ ಕತೆ ‘ಫೈರ್‌’ ನಂತರ ಹೆಣ್ಣಿನ ಸಲಿಂಗ ಪ್ರೀತಿಯನ್ನು ಸಮರ್ಥವಾಗಿ ಚಿತ್ರಿಸಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

೫. ಅನ್‌ಫ್ರೀಡಂ

ನಿರ್ದೇಶನ: ರಾಜ್‌ ಅಮಿತ್ ಕುಮಾರ್ | ತಾರಾಗಣ: ಪ್ರೀತಿ ಗುಪ್ತಾ, ಭವಾನಿ ಲೀ

ಪ್ರೀತಿಗಾಗಿ ತಾನು ಇಷ್ಟಪಟ್ಟ ಗೆಳತಿಯನ್ನು ಅಪಹರಿಸುವ ಯುವತಿಯ ಕತೆ ಇದು. ಪ್ರೀತಿ, ವ್ಯಾಮೋಹದ ಅತಿರೇಕಗಳನ್ನೂ ಹಿಂಸೆಯನ್ನೂ ಈ ಚಿತ್ರ ಕಟ್ಟಿಕೊಡುತ್ತದೆ. ವಿವಾದಕ್ಕೆ ಕಾರಣವಾದ ಚಿತ್ರವಿದು.

ಇವಿಷ್ಟೇ ಅಲ್ಲದೆ, 'ದಿ ಅದರ್ ಲವ್ ಸ್ಟೋರಿ' ವೆಬ್‌ ಸರಣಿ ಕೂಡ ಲೆಸ್ಬಿಯನ್‌ ವಿಷಯವನ್ನು ಆಧರಿಸಿದ್ದು, ಹರೆಯದ ಯುವತಿಯರಿಬ್ಬರ ಪ್ರೇಮವನ್ನು ಇದು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More