ವಿಡಿಯೋ ಸ್ಟೋರಿ | ಮಾನವೀಯತೆ ದೋಣಿಯೇರಿ ಸವಾಲುಗಳ ವಿರುದ್ಧ ಈಜುವ ತಬಸ್ಸುಮ್

ಪ್ರವಾಹದ ವಿರುದ್ಧ ಈಜುತ್ತಿರುವ ತಬಸ್ಸುಮ್ ಅವರು ಹಲವು ಜೀವನ್ಮುಖಿ ವಿಚಾರಗಳನ್ನು ಪಸರಿಸುತ್ತಿರುವ ಮಹಿಳೆ. ರೋಗಿಗಳಿಗಷ್ಟೇ ಅಲ್ಲ ಸಮಾಜದ ರೋಗಗ್ರಸ್ತ ಮನಸ್ಥಿತಿಗೂ ಮದ್ದು ಅರೆಯಬಲ್ಲ ಅವರ ಅಸೀಮ ಬಲವೇ ‘ಸ್ನೇಹದೀಪ’ದಂಥ ಸಂಸ್ಥೆಯನ್ನು ಮಾನವೀಯ ದಾರಿಯಲ್ಲಿ ಮುನ್ನಡೆಸುತ್ತಿದೆ

ಮಂಗಳೂರಿನ ಕೊಟ್ಟಾರ ಚೌಕಿಯಲ್ಲಿರುವ ‘ಸ್ನೇಹದೀಪ’ದ ತುಂಬಾ ಮಕ್ಕಳ ಚಿಲಿಪಿಲಿ. ಇಂದು ಕಾಣುವ ಆ ನಗು ನಾಳೆಯೂ ಹೀಗೆಯೇ ಇರುತ್ತದೆ ಎಂದೇನೂ ಇಲ್ಲ. ಕಾರಣ, ಆ ಮಕ್ಕಳು ಚಿಕಿತ್ಸೆ ಸಾಧ್ಯವೇ ಇಲ್ಲದ ಎಚ್‌ಐವಿ ಪೀಡಿತರು. ಸಾವು ಅವರ ಮತ್ತೊಂದು ಸಂಗಾತಿ. ಆದರೆ, ಇದಾವುದರ ಗೊಡವೆ ಇಲ್ಲದ ಅವರಲ್ಲಿ ಎಲ್ಲ ಎಳೆಯರೊಳಗೂ ಚಿಮ್ಮುವ ಜೀವನೋತ್ಸಾಹ. ಅದಕ್ಕೆ ಕಾರಣ, ತಬಸ್ಸುಮ್ ಎಂಬ ತಾಯಿಪ್ರೀತಿ.

16 ವರ್ಷಗಳ ಹಿಂದೆ ತಬಸ್ಸುಮ್ ಸ್ಥಾಪಿಸಿದ ‘ಸ್ನೇಹದೀಪ’ ಮಕ್ಕಳ ಕಲ್ಯಾಣ ಸಂಸ್ಥೆಯಲ್ಲಿ ಸದ್ಯ 25ಕ್ಕೂ ಹೆಚ್ಚು ಹೆಣ್ಣುಮಕ್ಕಳು ಆಶ್ರಯ ಪಡೆದಿದ್ದಾರೆ. ಇವರಲ್ಲಿ ಬಹುತೇಕರು ತಂದೆ-ತಾಯಿಯನ್ನು ಕಳೆದುಕೊಂಡ ಕುಡಿಗಳು. ಕೆಲವರು ಕಾಯಿಲೆಯ ಕಾರಣಕ್ಕೆ ತಮ್ಮ ಕುಟುಂಬದಿಂದ ದೂರವಾದವರು. ಐದು ವರ್ಷದಿಂದ 21 ವರ್ಷದವರೆಗಿನ ಎಚ್‌ಐವಿ ಪೀಡಿತರಿಗೆ ಸ್ನೇಹದೀಪ ಸಂಜೀವಿನಿಯಂತೆ. “ಇವತ್ತಲ್ಲ ನಾಳೆ ಏಡ್ಸ್ ಪೀಡಿತರಿಗೆ ಸಂಪೂರ್ಣ ಚಿಕಿತ್ಸೆ ಸಾಧ್ಯವಾಗುತ್ತದೆ. ಅಂಥ ಹೊತ್ತಿನಲ್ಲಿ ಮಕ್ಕಳಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಅವಕಾಶ ಇದ್ದೇ ಇದೆ. ಅದಕ್ಕಾಗಿ ಆರೋಗ್ಯದ ಜೊತೆಗೆ ಉತ್ತಮ ಶಿಕ್ಷಣ ನೀಡುವುದೂ ನಮ್ಮ ಆದ್ಯತೆ,” ಎನ್ನುತ್ತಾರೆ ಅವರು.

ಓದಿನಲ್ಲಿ ಮುಂದಿದ್ದ ತಬಸ್ಸುಮ್ ಅವರಿಗೆ ವಿದ್ಯಾರ್ಥಿ ದೆಸೆಯಿಂದಲೂ ಹೊಸತೇನನ್ನಾದರೂ ಮಾಡುವ ಉತ್ಸಾಹ. ಬಡ ಕುಟುಂಬದಿಂದ ಬಂದಿದ್ದರೂ ಆ ಮಿತಿಗಳನ್ನು ಮೀರುವ ಕಡೆಗೆ ಧ್ಯಾನ. ಆದರೆ, ಪಿಯುಸಿ ಓದುತ್ತಿರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಷ್ಟಾದರೂ ಮನೆಯಲ್ಲೇ ಉಳಿದುಬಿಡಲು ಒಪ್ಪದ ಅವರು, ಕಡೆಗೆ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕೆಲಸ ಹಿಡಿದರು. ಅಬಲಾಶ್ರಮ, ವೃದ್ಧಾಶ್ರಮಗಳಿಗಿಂತಲೂ ಭಿನ್ನವಾದುದನ್ನು ರೂಪಿಸುವ ಬಯಕೆ. ಅಷ್ಟರಲ್ಲಿ ಎಚ್‌ಐವಿ ಪೀಡಿತ ಸ್ನೇಹಿತೆಯೊಬ್ಬರ ಸಾವು ದಿಗ್ಭ್ರಮೆ ಮೂಡಿಸಿತು. ಕಡೆಗೆ ಅಂತಹ ಹೆಣ್ಣುಮಕ್ಕಳನ್ನು ನೋಡಿಕೊಳ್ಳಲೆಂದೇ ‘ಸ್ನೇಹದೀಪ’ ಹುಟ್ಟುಹಾಕಲು ಮುಂದಾದರು.

ಸಾಗುತ್ತಿದ್ದ ಹಾದಿ ಸುಗಮವಾಗಿಯೇನೂ ಇರಲಿಲ್ಲ. “ಮುಸ್ಲಿಂ ಹೆಣ್ಣಾಗಿ ಇಂಥದ್ದನ್ನೆಲ್ಲ ಮಾಡಬಾರದು,” ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಅನುಮಾನದ ದೃಷ್ಟಿಯಿಂದ ನೋಡತೊಡಗಿದರು. ಇನ್ನೂ ಕೆಲವರು “ಅನ್ಯಧರ್ಮದವರಿಗೆ ಯಾಕೆ ಆಶ್ರಯ ನೀಡುವೆ?” ಎಂದು ಕೆಂಗಣ್ಣು ಬೀರತೊಡಗಿದರು. ಆದರೆ, ತಬಸ್ಸುಮ್ ಕಣ್ಣೆದುರಿದ್ದದ್ದು ಮಕ್ಕಳ ಅಸಹಾಯಕ ಸ್ಥಿತಿ ಮಾತ್ರ. ಎಚ್‌ಐವಿ ಪೀಡಿತ ಮಕ್ಕಳು ದೈಹಿಕವಾಗಿಯಷ್ಟೇ ಅಲ್ಲದೆ ಮಾನಸಿಕವಾಗಿಯೂ ಕುಗ್ಗಿಹೋಗುತ್ತಿರುತ್ತಾರೆ. ತಾವು ಮಾಡದ ತಪ್ಪಿಗಾಗಿ ಸಂಕಟ ಅನುಭವಿಸುತ್ತಿರುತ್ತಾರೆ. ಅವರಿಗೆಲ್ಲ ಊಟೋಪಚಾರ, ಔಷಧ ಒದಗಿಸುವುದರ ಜೊತೆಗೆ ಆಪ್ತ ಸಮಾಲೋಚನೆಯನ್ನೂ ‘ಸ್ನೇಹದೀಪ’ ನೀಡುತ್ತದೆ.

“ನನಗೆ ಇಬ್ಬರು ಮಕ್ಕಳಿದ್ದಾರೆ. ಅವರನ್ನೂ ಇವರನ್ನೂ ಒಟ್ಟಿಗೆ ನೋಡುವಾಗ ಕಸಿವಿಸಿಯಾಗುತ್ತದೆ. ನನ್ನ ಮಕ್ಕಳು ನೀಡುವ ಖುಷಿಯನ್ನೇ ಇವರು ನೀಡುತ್ತಿದ್ದಾರೆ. ನಾನು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಬಳಿಕ ಸುಮಾರು 17 ಮಕ್ಕಳು ಸಾವಿಗೀಡಾದರು. ಕೊನೆಯ ಕ್ಷಣಗಳಲ್ಲಿ ಅವರೊಂದಿಗಿದ್ದೆ ಎನ್ನುವ ತೃಪ್ತಿ ಇದೆ,” ಎನ್ನುವಾಗ ತಬಸ್ಸುಮ್ ಕಣ್ಣುಗಳು ಹನಿಗೂಡುತ್ತಿದ್ದವು.

‘ಕೋಮು ಸಂಬಂಧಿ ಕಾಯಿಲೆ’ಗಳಿಗೂ ಮದ್ದು ಅರೆಯುವಂತಿದೆ ಸ್ನೇಹದೀಪ. ಇಲ್ಲಿ ಜಾತಿ, ಮತ, ಧರ್ಮದ ಗೋಡೆಗಳಿಲ್ಲ. “ನನಗೆ ಯಾವತ್ತೂ ಜಾತಿ-ಧರ್ಮಗಳ ಪ್ರಶ್ನೆ ಏಳಲಿಲ್ಲ. ಯಾರು ಅಸಹಾಯಕ ಸ್ಥಿತಿಯಲ್ಲಿರುತ್ತಾರೋ ಅವರಿಗೆ ಬೆಂಬಲವಾಗಿ ನಿಲ್ಲಬೇಕು ಎಂಬ ಮನಸ್ಸಿತ್ತು. ನನ್ನ ತಂದೆ ಹಾಗೂ ಕುಟುಂಬದವರು ನನ್ನ ಕನಸುಗಳಿಗೆ ಬೆಂಬಲವಾಗಿ ನಿಂತರು,” ಎಂಬುದು ಅವರ ಮಾತು.

25 ಮಕ್ಕಳನ್ನು ನೋಡಿಕೊಳ್ಳಲು ತಿಂಗಳಿಗೆ ಕನಿಷ್ಠ 50,000 ರುಪಾಯಿ ಖರ್ಚಾಗುತ್ತದೆ. ಧನಸಂಗ್ರಹವೇ ದೊಡ್ಡ ಸವಾಲು ಎನ್ನುವ ತಬಸ್ಸುಮ್, ಅದಕ್ಕೆಂದೇ ಒಂದು ದಿನವನ್ನು ಮೀಸಲಿಡುತ್ತಾರೆ. ಬಿಸ್ಕತ್ತಿನ ಪೊಟ್ಟಣದಿಂದ ಹಿಡಿದು ಯಾರು ಏನೇ ಸಹಾಯ ನೀಡಿದರೂ ಅವರ ‘ಜೋಳಿಗೆ’ ಸೇರುತ್ತದೆ. “ಯಾರಾದರೂ ಪ್ರಶಸ್ತಿ ಪುರಸ್ಕಾರ ನೀಡುವುದಕ್ಕಿಂತಲೂ ಆರ್ಥಿಕ ಸಹಾಯ ಒದಗಿಸಿದರೆ ಸಾಕು ಎನಿಸುತ್ತದೆ ಒಮ್ಮೊಮ್ಮೆ. ನಿಶ್ಚಿತ ಆದಾಯ ಮೂಲಗಳಿಲ್ಲದಿದ್ದಾಗ ದಾನಿಗಳಿಂದಲೇ ನೆರವು ಪಡೆಯಬೇಕು. ಸರ್ಕಾರ ಕೂಡ ಕಣ್ಣು ತೆರೆದರೆ ಅನುಕೂಲ,” ಎಂದು ಹೇಳುತ್ತಾರೆ ಅವರು.

ಇದನ್ನೂ ಓದಿ : ಸ್ಮರಣೆ | ಗ್ರಾಮಭಾರತದ ಆಪ್ತ ಚಿತ್ರಣದೊಂದಿಗೆ ಸಹಬಾಳ್ವೆ ಸಾರಿದ ಸಿದ್ದಲಿಂಗಯ್ಯ
ಸಿಸ್ಟರ್ ಜೆನಿಬುವಾ, ಸ್ನೇಹದೀಪ‌ ಸಂಸ್ಥೆಯ ಸಿಬ್ಬಂದಿ
ಪುಷ್ಪಲತಾ, ಸ್ನೇಹದೀಪ ಸಂಸ್ಥೆಯ ಮಕ್ಕಳ‌ ಮೇಲ್ವಿಚಾರಕಿ

ತಬಸ್ಸುಮ್ ಅವರೊಟ್ಟಿಗೆ ಒಬ್ಬ ನರ್ಸ್ ಹಾಗೂ ಕ್ರೈಸ್ತ ಸನ್ಯಾಸಿನಿಯೊಬ್ಬರು ಮಕ್ಕಳ ಆರೈಕೆಯಲ್ಲಿ ತೊಡಗಿದ್ದಾರೆ. “ನನ್ನೊಟ್ಟಿಗೆ ಕೀಟಲೆ ಮಾಡುತ್ತ, ತಮಾಷೆಯಲ್ಲಿ ತೊಡಗಿರುವ ಮಗು ನಾಳೆ ಬದುಕಿರುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಅದನ್ನು ನೆನೆದಾಗ ದುಃಖವಾಗುತ್ತದೆ. ಆದರೆ ಇವರೆಲ್ಲ ಚೆನ್ನಾಗಿ ಬದುಕಬೇಕು ಅನ್ನುವುದು ನಮ್ಮ ಆಸೆ,” ಎನ್ನುತ್ತಾರೆ ಸಿಸ್ಟರ್ ಜೆನಿಬೂವಾ.

ಧನ ಸಂಗ್ರಹದಿಂದ ಹಿಡಿದು ಸ್ವಂತ ಗೂಡು ಹೊಂದುವವರೆಗೆ ಪ್ರವಾಹದ ವಿರುದ್ಧ ಈಜುತ್ತಿರುವ ತಬಸ್ಸುಮ್ ಅವರದು ಸಂಘಟನೆ, ಸ್ತ್ರೀಪರ ನಿಲುವು, ಮಕ್ಕಳ ಪರ ಕಾಳಜಿ, ಸಹಬಾಳ್ವೆಯಂಥ ಹಲವು ಜೀವನ್ಮುಖಿ ವಿಚಾರಗಳನ್ನಿಟ್ಟುಕೊಂಡ ವ್ಯಕ್ತಿತ್ವ. ರೋಗಿಗಳಿಗಷ್ಟೇ ಅಲ್ಲ ಸಮಾಜದ ರೋಗಗ್ರಸ್ತ ಸ್ಥಿತಿಗೂ ಮದ್ದು ಅರೆಯಬಲ್ಲ ಅಸೀಮ ಬಲವೇ ಸ್ನೇಹದೀಪವನ್ನು ಮುನ್ನಡೆಸಲು ಅವರಿಗೆ ಬಲ ತುಂಬಿದೆ.

ಛಾಯಾಗ್ರಹಣ: ಗುರುಪ್ರಸಾದ್ ಅತ್ತಾವರ

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More