ಮಲೆನಾಡಿನ ಕುಗ್ರಾಮಗಳ ಸೋಲಾರ್ ಬೆಳಕಿನ ವ್ಯವಸ್ಥೆಯಲ್ಲಿ ವಂಚನೆಯ ಕರಿನೆರಳು

ಮಲೆನಾಡಿನ ವಿದ್ಯುತ್ ವಂಚಿತ ಹಳ್ಳಿಗಳಿಗೆ ಬೆಳಕು ಹರಿಸುವ ಉದ್ದೇಶದ ಸೋಲಾರ್ ದೀಪ ಯೋಜನೆ ವಿಫಲವಾಗಿದ್ದು, ಬಹುದೊಡ್ಡ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಸಾಗರ ತಾಲೂಕಿನ ವ್ಯಾಪ್ತಿಯಲ್ಲಿ ಇಂತಹ ವೈಫಲ್ಯ, ವಂಚನೆಗಳ ಸಾಲು-ಸಾಲು ಉದಾಹರಣೆಗಳು ಸಿಗುತ್ತವೆ

ದಟ್ಟ ಕಾಡಿನ ನಡುವಿನ ಮಲೆನಾಡಿನ ಕುಗ್ರಾಮಗಳಿಗೆ ಅಭಯಾರಣ್ಯದ ಕಾನೂನುಗಳು, ಕಡಿದಾದ ಬೆಟ್ಟಗುಡ್ಡಗಳ ದುರ್ಗಮ ಮಾರ್ಗಗಳ ಕಾರಣಕ್ಕೆ ವಿದ್ಯುತ್ ಎಂಬುದು ಈಗಲೂ ಕನಸಿನ ಮಾತು ಎಂಬಂತಹ ಪರಿಸ್ಥಿತಿ ಇದೆ. ದೇಶದ ರಾಜಧಾನಿಯ ಝಗಮಗಿಸುವ ಭವ್ಯ ಸೌಧಗಳಲ್ಲಿ ಕೂತವರು, ಇಡೀ ದೇಶದಲ್ಲಿ ಈಗ ವಿದ್ಯುತ್ ಬೆಳಕಿನ ಹೊಳಪು ಪಡೆಯದ ಯಾವ ಹಳ್ಳಿಯೂ ಉಳಿದಿಲ್ಲ; ಇಡೀ ದೇಶ ಪ್ರಕಾಶಿಸುತ್ತಿದೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವ ಹೊತ್ತಿಗೇ ಮಲೆನಾಡಿನ ಮೂಲೆ-ಮೂಲೆಯ ಊರು-ಕೇರಿಗಳು ಕತ್ತಲಕೂಪಗಳಾಗೇ ಉಳಿದಿವೆ.

ಮಲೆನಾಡಿನ ವಿದ್ಯುತ್ ವಂಚಿತ ಹಳ್ಳಿಮೂಲೆಗಳಿಗೆ ಬೆಳಕು ಹರಿಸುವ ಉದ್ದೇಶದಿಂದಲೇ ಆರಂಭವಾದ ಸೋಲಾರ್ ದೀಪ ಯೋಜನೆ ಕೂಡ ಈಗ ನತದೃಷ್ಟ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂಬುದಕ್ಕೆ ಸಾಗರ ತಾಲೂಕಿನ ಶರಾವತಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಸಾಲು-ಸಾಲು ಉದಾಹರಣೆಗಳು ಸಿಗುತ್ತವೆ.

೧೯೯೭-೯೮ರಷ್ಟು ಹಿಂದೆಯೇ ಈ ಭಾಗದ ಮೇಘಾನೆ ಎಂಬ ಕುಗ್ರಾಮಕ್ಕೆ ಅಂದಿನ ಸಂಸದರಾಗಿದ್ದ ಎಸ್ ಬಂಗಾರಪ್ಪ ಅವರ ಅನುದಾನದಡಿ ಸೋಲಾರ್ ದೀಪ ಅಳವಡಿಸಲಾಗಿತ್ತು. ಶಿವಮೊಗ್ಗ ಜಿಲ್ಲೆಯಷ್ಟೇ ಅಲ್ಲ, ಬಹುತೇಕ ಮಲೆನಾಡಿನ ಮಟ್ಟಿಗೇ ಆಗ ಸೋಲಾರ್ ದೀಪ ಅಳವಡಿಕೆ ದೊಡ್ಡ ಸುದ್ದಿಯಾಗಿತ್ತು. ಆ ಕುಗ್ರಾಮದ ಮೂಲಕ ಮಲೆನಾಡಿನ ಕತ್ತಲ ಊರುಗಳಿಗೆ ಬೆಳಕು ಕಾಣಿಸುವ ಮಹಾನ್ ಯೋಜನೆಯೊಂದು ಚಾಲನೆ ಪಡೆಯಿತು ಎಂದೇ ಬಣ್ಣಿಸಲಾಗಿತ್ತು. ಮಾಧ್ಯಮ ಪ್ರತಿನಿಧಿಗಳು ಅದೇ ಮೊದಲ ಬಾರಿಗೆ ಆ ಹಳ್ಳಿಗೆ ಹೋಗಿ, ಜನರ ಸಂಭ್ರಮವನ್ನೂ, ಜನಪ್ರತಿನಿಧಿಗಳ ಸಾಧನೆಯ ಹೆಮ್ಮೆಯನ್ನೂ ದಾಖಲಿಸಿದ್ದರು. ಅದಾದ ಬಳಿಕ ೨೦ ವರ್ಷಗಳ ಗತಿಸಿದರೂ, ಆ ಊರಿನ ಆ ಸೋಲಾರ್ ದೀಪಗಳು ಏನಾಗಿವೆ ಎಂಬ ಬಗ್ಗೆ ಯಾವ ಸುದ್ದಿಯೂ ಇರಲಿಲ್ಲ!

ಕಳೆದ ವಾರ ಕುಂಭದ್ರೋಣ ಮಳೆಯ ನಡುವೆ ಆ ಊರಿಗೆ ‘ದಿ ಸ್ಟೇಟ್’ ಕಾಲಿಟ್ಟಾಗ ಕಂಡದ್ದು ಬೇರೆಯದೇ ವಾಸ್ತವ. “೨೦ ವರ್ಷಗಳ ಹಿಂದೆ ಅಳವಡಿಸಿದ ಆ ಸೋಲಾರ್ ವ್ಯವಸ್ಥೆ, ವರ್ಷ- ಒಂದೂವರೆ ವರ್ಷದ ಹೊತ್ತಿಗೆಲ್ಲ ದುರಸ್ತಿಗೆ ಬಂದಿತ್ತು. ಅದನ್ನು ರಿಪೇರಿ ಮಾಡುವವರು, ಅಗತ್ಯ ಬಿಡಿಭಾಗಗಳು ಆ ಕಾಲದಲ್ಲಿ ೮೫ ಕಿಮೀ ದೂರದ ಸಾಗರ ಪಟ್ಟಣವಿರಲಿ, ದೂರದ ಶಿವಮೊಗ್ಗ ನಗರದಲ್ಲೂ ಲಭ್ಯವಿರಲಿಲ್ಲ. ಹಾಗಾಗಿ, ಒಂದು ಬಲ್ಬ್‌ ಹೋದರೂ, ಬೆಂಗಳೂರಿನಿಂದ ತಂದು ಹಾಕಬೇಕಾದ ವಿಚಿತ್ರ ಸ್ಥಿತಿ ಇತ್ತು. ಕಂಪನಿಯವರು ಉಚಿತ ಸೇವೆಯ ಮಾತು ಕೊಟ್ಟವರು, ಮತ್ತೆ ಮತ್ತೆ ದುರಸ್ತಿಗೆ ಬರಲಾಗದು; ಯಾವ ವಾಹನವೂ ಸಾಗದ ದುರ್ಗಮ ದಾರಿಯಲ್ಲಿ ೧೦ ಕಿಮೀ ನಡೆದುಕೊಂಡುಬಂದು ದುರಸ್ತಿ ಮಾಡಲು ಲಾಗುವುದಿಲ್ಲ ಎಂದು ಕೈಎತ್ತಿದರು. ಅಲ್ಲಿಗೆ ನಮ್ಮೂರಿಗೆ ಬೆಳಕು ಬಂದಷ್ಟೇ ಜೋರಾಗಿ ಕತ್ತಲೆಯೂ ಕವಿಯಿತು,” ಎನ್ನುತ್ತಾರೆ ಗ್ರಾಮದ ಮುಖಂಡ ಲೂಮಾ ಗಿಣಿಯಾ ಮರಾಠಿ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಪ್ರಧಾನಿಯವರು ಕ್ಷಮಿಸಬೇಕು... ದೇಶದ ಎಲ್ಲ ಹಳ್ಳಿಗೂ ವಿದ್ಯುತ್ ಸಿಕ್ಕಿಲ್ಲ!

ಬುಡಕಟ್ಟು ಕುಣಬಿ ಜನಾಂಗದವರೇ ಇರುವ ಈ ಕುಗ್ರಾಮಕ್ಕೆ ಬಳಿಕ ೨೦೦೬ರಲ್ಲಿ ವಿದ್ಯುತ್ ಮಾರ್ಗ ಸಂಪರ್ಕ ನೀಡಲಾಯಿತಾದರೂ, ದಟ್ಟ ಕಾಡಿನ ನಡುವೆ ವಿದ್ಯುತ್ ಮಾರ್ಗ ಹಾದುಹೋಗಿರುವ ಕಾರಣದಿಂದ ಮಳೆಗಾಳಿಯ ಆರು ತಿಂಗಳು ವಿದ್ಯುತ್ ಅಪರೂಪವೇ. ಹಾಗಾಗಿ, ಇದೀಗ ಎರಡು ವರ್ಷದಿಂದ ಈಚೆಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಆರ್ಥಿಕ ನೆರವು ಪಡೆದು ಸ್ವಂತ ಖರ್ಚಿನಲ್ಲಿ ಬಹುತೇಕ ಮಂದಿ ಸೋಲಾರ್ ಬೆಳಕಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸರ್ಕಾರದ ಉಚಿತ ಸೋಲಾರ್ ಮಾತ್ರ ಇಲ್ಲಿನ ಜನರಿಗೆ ಬೆಳಕು ಕೊಡುವಲ್ಲಿ ಯಶಸ್ವಿಯಾಗಲೇ ಇಲ್ಲ!

ಇನ್ನು, ಅದೇ ಭಾಗದ ಉರುಳುಗಲ್ಲು ಗ್ರಾಮ ವ್ಯಾಪ್ತಿಯ ಸಾಲ್ಕೋಡು, ಚೀಕನಹಳ್ಳಿ, ಹೆಬ್ಬಯ್ಯನಕೆರೆ, ಮುಂಡುವಾಳ, ಮೇಲಿನಕೇರಿ ಸೇರಿದಂತೆ ಕೆಲವು ಹಳ್ಳಿಗಳಲ್ಲಿ ಕಳೆದ ಎರಡು ವರ್ಷದ ಹಿಂದಷ್ಟೇ ಮೆಸ್ಕಾಂ ಕಂಪನಿಯವರೇ ಅಳವಡಿಸಿರುವ ಸೋಲಾರ್ ದೀಪಗಳು ಕೂಡ ಈಗ ಬಹುತೇಕ ದುರಸ್ತಿಗೆ ಬಂದಿವೆ. ಈ ಭಾಗದಲ್ಲಿ ಸುಮಾರು ೫೦ ಮನೆಗಳಿಗೆ ಸೋಲಾರ್ ಅಳವಡಿಸಿದ್ದು, ಆ ಪೈಕಿ ಬಹುತೇಕ ಈಗ ಕೆಲಸ ಮಾಡುತ್ತಿಲ್ಲ. ಹಾಗಾಗಿ, ಶರಾವತಿ ಅಭಯಾರಣ್ಯದೊಳಗಿನ ಈ ಹಳ್ಳಿಗಳಲ್ಲಿ ಯಾವುದೇ ಪರ್ಯಾಯ ಬೆಳಕಿನ ವ್ಯವಸ್ಥೆಯೂ ಇಲ್ಲದೆ ಕತ್ತಲಕೂಪವಾಗಿವೆ.

ಈ ಭಾಗದ ಹಳ್ಳಿಗಳಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿಯ ಯೋಜನೆಯಡಿ ಅಳವಡಿಸಿರುವ ಸೋಲಾರ್ ವ್ಯವಸ್ಥೆ ಕಳಪೆ ಗುಣಮಟ್ಟ ಮತ್ತು ನಿರ್ವಹಣೆಯ ಕೊರತೆಯಿಂದ ಕೆಲಸ ಮಾಡುತ್ತಿಲ್ಲ ಮತ್ತು ಅಪ್ರಯೋಜಕವಾಗಿದೆ ಎಂದು ಆ ಮಂಡಳಿಯ ಕಾರ್ಯಕ್ಷಮತೆಯ ಬಗ್ಗೆ ಅಧ್ಯಯನ ನಡೆಸಿರುವ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಕೂಡ ಹೇಳಿದೆ. ಮಂಡಳಿಯ ಚಟುವಟಿಕೆಗಳು ಮತ್ತು ಅವಶ್ಯಕತೆಗಳ ಕುರಿತು ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ (ಟೆಕ್ಸಾಕ್), ಇತ್ತೀಚೆಗೆ ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಆ ವರದಿಯಲ್ಲಿ ಶರಾವತಿ ಅಭಯಾರಣ್ಯ ವ್ಯಾಪ್ತಿಯ ಕುಗ್ರಾಮಗಳಲ್ಲಿ ಸೋಲಾರ್ ವ್ಯವಸ್ಥೆಯಲ್ಲಿ ಆಗಿರುವ ಲೋಪಗಳ ಬಗ್ಗೆ ಸ್ಪಷ್ಟವಾಗಿ ಗಮನ ಸೆಳೆದಿದೆ.

“ಮೆಸ್ಕಾಂನ ವೆಚ್ಚದಲ್ಲಿಯೇ ಸಾರ್ವಜನಿಕ ಬೆಳಕಿನ ಯೋಜನೆಯ ಭಾಗವಾಗಿ ಈ ಗ್ರಾಮಗಳಿಗೆ ಸೋಲಾರ್ ಅಳವಡಿಸಿದ್ದರೂ, ಸೋಲಾರ್ ಪ್ಯಾನಲ್, ಬ್ಯಾಟರಿ, ಬಲ್ಬ್, ವೈರ್ ಮುಂತಾದ ಪರಿಕರಗಳು ಗುಣಮಟ್ಟ ಕಳಪೆಯಾಗಿದೆ. ಹಾಗಾಗಿ, ಅಳವಡಿಸಿದ ಆರು ತಿಂಗಳಲ್ಲೇ ಬಹುತೇಕ ಸೋಲಾರ್ ಸಂಪರ್ಕಗಳು ಸ್ಥಗಿತಗೊಂಡಿವೆ. ಆರಂಭದ ಒಂದೆರಡು ತಿಂಗಳು ಕಂಪನಿಯ ಕಡೆಯಿಂದ ದೂರುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಬಳಿಕ, ದೂರ, ದಾರಿಯಲ್ಲಿ ವಾಹನ ಬರುವುದಿಲ್ಲ, ನಡೆದು ಬರಲಾಗುವುದಿಲ್ಲ, ಮಳೆ, ಚಳಿ ಎಂಬ ಒಂದೊಂದೇ ಕಾರಣಗಳನ್ನು ನೀಡಿ ಮುಂದೂಡುತ್ತಾ ಬಂದರು. ಇತ್ತೀಚಿನ ಒಂದು ವರ್ಷದಿಂದ ನಾವೇ ದೂರು ಕೊಡುವುದನ್ನು ಬಿಟ್ಟಿದ್ದೇವೆ. ದುಡ್ಡಿದ್ದವರು ಬದಲಿ ಸೋಲಾರ್ ಹಾಕಿಸಿಕೊಂಡಿದ್ದಾರೆ. ಇನ್ನು, ಇಲ್ಲದವರು ಕತ್ತಲೆಯಲ್ಲೇ ಬದುಕು ಕಳೆಯುತ್ತಿದ್ದಾರೆ,” ಎನ್ನುತ್ತಾರೆ ಸಾಲ್ಕೋಡು ನಾಗರಾಜ್.

“ವಿದ್ಯುತ್ ಇಲ್ಲ, ಸೋಲಾರ್ ಕೆಲಸ ಮಾಡುತ್ತಿಲ್ಲ, ಹಾಗಾದರೆ ನಾವೇನು ಮಾಡಬೇಕು? ವಿದ್ಯುತ್ ಸಂಪರ್ಕ ನೀಡಲು ಅರಣ್ಯ ಕಾನೂನು ಅಡ್ಡಿ, ಸೋಲಾರ್‌ಗೆ ಕಳಪೆ ವಸ್ತು ಮತ್ತು ದುರಸ್ತಿಗೆ ಬರದ ಸಿಬ್ಬಂದಿಯ ನಿರ್ಲಕ್ಷ್ಯವೇ ಅಡ್ಡಿ. ಇನ್ನು ಕನಿಷ್ಠ ಸೀಮೆಎಣ್ಣೆಯನ್ನಾದರೂ ಕೊಟ್ಟರೆ ಬುಡ್ಡಿದೀಪದಲ್ಲಿ ಬದುಕು ಕಳೆಯಬಹುದು. ಆದರೆ, ನ್ಯಾಯಬೆಲೆ ಅಂಗಡಿಯಲ್ಲಿ ಈಗ ಸೀಮೆಎಣ್ಣೆಗೂ ಸಂಚಕಾರ ಬಂದಿದೆ. ಹಾಗಾದರೆ, ನಾವು ಹೇಗೆ ಇಲ್ಲಿ ಬದುಕಬೇಕು?” ಎಂಬುದು ಗ್ರಾಮದ ರಾಮಚಂದ್ರ ನಾಯಕ ಅವರ ಪ್ರಶ್ನೆ.

ಈ ಪ್ರಶ್ನೆ ಅವರೊಬ್ಬರದ್ದೇ ಅಲ್ಲ, ಈ ಭಾಗದ ಹಲವು ಕುಗ್ರಾಮಗಳ ಜನರದ್ದು. ಬಾಗಲಮನೆ, ಹೊಸಗದ್ದೆ, ಚಂಡೆಮನೆ, ಸುಂಕದಮನೆ, ದೊಡ್ಡಬೈಲು, ಬಾಳಿಗೆ ಮುಂತಾದ ಕುಗ್ರಾಮಗಳಲ್ಲಿ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಚನ್ನಗೊಂಡ, ಭಾನುಕುಳಿ ಗ್ರಾಮ ಪಂಚಾಯ್ತಿಗಳು ಹಾಗೂ ಕಾರ್ಗಲ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಹಲವು ಕುಗ್ರಾಮಗಳಲ್ಲಿ ಅಳವಡಿಸಿರುವ ಸೋಲಾರ್ ವ್ಯವಸ್ಥೆಗಳೂ ಬಹುತೇಕ ವಿಫಲವಾಗಿವೆ.

ಬಹುತೇಕ ಕಡೆ ಪ್ರಮುಖ ಸಮಸ್ಯೆ ಇರುವುದು ಸೋಲಾರ್ ಪ್ಯಾನಲ್ ಮತ್ತು ಬ್ಯಾಟರಿಗಳಲ್ಲೇ. ಭಾರಿ ಮಳೆಯ ಈ ಪ್ರದೇಶದಲ್ಲಿ ಮುಂಗಾರಿನ ಅಲಿಕಲ್ಲು ಮಳೆಗೆ ಪ್ಯಾನಲ್‌ಗಳು ಒಡೆದುಹೋಗುವುದು ಸಾಮಾನ್ಯ. ಇನ್ನು, ಬ್ಯಾಟರಿಗಳಲ್ಲಿ ದೋಷ ಕಾಣಿಸಿಕೊಳ್ಳುವುದು ಮಾತ್ರ ಕಳಪೆ ಗುಣಮಟ್ಟದ ಕಾರಣಕ್ಕೆ ಎಂಬುದು ಸ್ಥಳೀಯರ ಆರೋಪ.

ಕಾರ್ಗಲ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸುಂಕದಮನೆ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ಕೇವಲ ಎರಡು ವರ್ಷದ ಹಿಂದೆ ಪಟ್ಟಣ ಪಂಚಾಯ್ತಿ ವತಿಯಿಂದಲೇ ಅಳವಡಿಸಿರುವ ಸೋಲಾರ್ ವ್ಯವಸ್ಥೆ ಕೂಡ ಈಗ ದುರಸ್ತಿಗೆ ಬಂದಿದೆ. ೨೦ಕ್ಕೂ ಹೆಚ್ಉ ಮನೆಗಳಿಗೆ ಸೋಲಾರ್ ಸೌಲಭ್ಯ ನೀಡಲಾಗಿದ್ದು, ಬಹುತೇಕ ಮನೆಗಳಲ್ಲಿ ಸೋಲಾರ್ ಕೆಲಸ ಮಾಡುತ್ತಿಲ್ಲ. ಪಟ್ಟಣ ಪಂಚಾಯ್ತಿ ವ್ಯಾಪ್ತಿ ಎಂಬ ಕಾರಣಕ್ಕೆ ಇವರಿಗೆ ಪಡಿತರ ಸೀಮೆಎಣ್ಣೆ ಕೂಡ ಸಿಗುತ್ತಿಲ್ಲ. ಹಾಗಾಗಿ ಮತ್ತೆ ಆ ಜನಗಳು ಶತಮಾನಗಳ ಕತ್ತಲ ಕೂಪಕ್ಕೆ ಜಾರಿದ್ದಾರೆ. ಹಾಗಾಗಿ ಈ ಬಗ್ಗೆ ಸೋಲಾರ್ ಅಳಡಿಸಿದ ಸಂಸ್ಥೆಗೆ ದೂರು ನೀಡಿದರೂ ಸರಿಯಾದ ಸ್ಪಂದನೆ ಇಲ್ಲ. ಬಹುತೇಕ ಸಂದರ್ಭದಲ್ಲಿ ಅವರು ಒಂದಿಲ್ಲೊಂದು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಜನರ ಪಾಲಿಗೆ ಕತ್ತಲು ಮತ್ತೆ ಕಾಯಂ ಆಗಿದೆ. ಈ ಭಾಗದಲ್ಲಿಯೂ ಗುಡ್ಡಗಾಡು ಸಮುದಾಯಗಳಿಗೆ ಸೇರಿದ ಹಸಲರು ಮತ್ತು ಗೊಂಡರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಒಟ್ಟಾರೆ, ಕಾಡಿನ ನಡುವಿನ ಕುಗ್ರಾಮಗಳ ಜನರಿಗೆ ಅತ್ತ ವಿದ್ಯುತ್ ಸಂಪರ್ಕವೂ ಇಲ್ಲ, ಇತ್ತ ಸೌರ ಬೆಳಕೂ ಇಲ್ಲ. ಕನಿಷ್ಟ ಸೀಮೆ ಎಣ್ಣೆಯೂ ಇಲ್ಲ. ಅಂತಿಮವಾಗಿ ಕತ್ತಲಕೂಪವೇ ಗತಿ ಎಂಬ ಸ್ಥಿತಿ ನಿರ್ಮಾಣವಾಗಿದೆ. ಮಲೆನಾಡು ಅಭಿವೃದ್ಧಿ ಮಂಡಳಿ, ಮೆಸ್ಕಾಂ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಸೇರಿದಂತೆ ಹಲವು ಸಂಸ್ಥೆ- ಆಡಳಿತಗಳ ಮೂಲಕ ಜಾರಿಯಾಗಿರುವ ಈ ಸೋಲಾರ್ ವ್ಯವಸ್ಥೆ ಸರ್ಕಾರದ ಅರಣ್ಯ ಕಾನೂನು ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ವಿದ್ಯುತ್ ವ್ಯವಸ್ಥೆಯಿಂದ ವಂಚಿತರಾಗಿರುವ ಮಲೆನಾಡಿನ ಗುಡ್ಡಗಾಡು ಜನರ ಕಣ್ಣೊರೆಸುವ ಯತ್ನವಾಗಿ ಈಗ ಕಾಣುತ್ತಿದೆ. ಜನರಿಗೆ ಕಣ್ಕಟ್ಟು ಮಾಡಿ, ತಾತ್ಕಾಲಿಕವಾಗಿ ಅವರಿಗೆ ಬೆಳಕು ತೋರಿಸಿ ವಂಚಿಸುವ ಪ್ರಯತ್ನ ಇದು ಎನಿಸುತ್ತಿದೆ ಎಂಬುದು ಸೋಲಾರ್ ಹೆಸರಿನಲ್ಲಿ ಮೋಸಹೋಗಿರುವ ಅಮಾಯಕ ಜನರ ಮಾತು.

ದುರಂತವೆಂದರೆ; ಇಂತಹ ಪ್ರಾಯೋಗಿಕ ಕ್ರಮಗಳ ಸಾಧಕ-ಬಾಧಕಗಳು, ಅವುಗಳ ಕಾರ್ಯಕ್ಷಮತೆ, ಕನಿಷ್ಠ ಆರಂಭದ ಕೆಲವು ವರ್ಷಗಳ ಕಾಲ ಅವುಗಳ ಸ್ಥಿತಿಗತಿ ಬಗ್ಗೆ ನಿಗಾ ಇಡುವಂತಹ ಯಾವ ಪ್ರಯತ್ನಗಳೂ ಈ ಸೋಲಾರ್ ಅಳವಡಿಸಿದ ಸಂಸ್ಥೆಗಳಿಂದ ಆಗಿಲ್ಲ ಎಂಬುದು. ಇಂತಹ ನಿರ್ಲಕ್ಷ್ಯ ಕೂಡ ಜನರಲ್ಲಿ ಮೋಸಹೋದ ಭಾವನೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತಿದೆ.

ಒಟ್ಟಾರೆ, ಲಕ್ಷಾಂತರ ರು. ಸಾರ್ವಜನಿಕ ತೆರಿಗೆಯ ಸರ್ಕಾರಿ ಹಣ ಸೋಲಾರ್ ಹೆಸರಿನಲ್ಲಿ ನೀರಿನಲ್ಲಿ ಹೋಮವಾದಂತಾಗಿದೆ. ಇದೇ ಮಾತನ್ನೇ ಮಲೆನಾಡು ಅಭಿವೃದ್ಧಿ ಮಂಡಳಿಯ ಕಾರ್ಯಕ್ಷಮತೆಯ ಕುರಿತು ಅಧ್ಯಯನ ನಡೆಸಿದ ಸರ್ಕಾರಿ ಸಮಿತಿ ಕೂಡ ಹೇಳಿದೆ! ಹಾಗಾಗಿ, ಇಡೀ ಮಲೆನಾಡು ಭಾಗದ ಸೋಲಾರ್ ದೀಪ ಅಳವಡಿಕೆಯ ವಿವಿಧ ಯೋಜನೆಗಳಲ್ಲಿ ಅವ್ಯವಹಾರ ಮತ್ತು ಸರ್ಕಾರಿ ಹಣದ ದುರುಪಯೋಗದ ವಾಸನೆ ಬಡಿಯುತ್ತಿದೆ. ಸೂಕ್ತ ತನಿಖೆ ನಡೆದಲ್ಲಿ ದೊಡ್ಡದೊಂದು ವಂಚನೆ ಬಯಲಿಗೆ ಬರುವುದರಲ್ಲಿ ಸಂಶಯವಿಲ್ಲ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More