ಗ್ರಾಮ ವಾಸ್ತವ್ಯ | ದ್ವೀಪಕ್ಕೆ ಸಂಪರ್ಕ ಬೆಸೆದ ಸೇತುವೆ ಸೃಷ್ಟಿಸಿದ ಹಳವಂಡಗಳು

ಸದ್ಯ ಊರಿಗೆ ಸಂಪರ್ಕ ಕಲ್ಪಿಸಲು ಸಜ್ಜಾಗುತ್ತಿರುವ ಸೇತುವೆಯು ಭವಿಷ್ಯದಲ್ಲಿ ಒಳಿತಿನೆಡೆಗೆ ಸಂಪರ್ಕ ಬೆಸೆಯುತ್ತದೆಯೋ, ಕೆಡುಕಿನ ಮೂಲವೋ ಎಂದು ನಿರ್ಣಯಿಸಲಾಗದಂಥ ಸ್ಥಿತಿಯಲ್ಲಿ ಕೊಳ್ಳೇಗಾಲ ತಾಲೂಕಿನ ಎಡಕುರಿಯ ಜನರಿದ್ದಾರೆ. ಅಂಥದ್ದೇನಾಯಿತು? ಇಲ್ಲಿದೆ, ‘ದಿ ಸ್ಟೇಟ್’ ಗ್ರಾಮ ವಾಸ್ತವ್ಯ 

ಸುತ್ತಲೂ ನೀರು. ಹಸಿರು ಪರಿಸರ. ನೀರಿನ ಜೊತೆಗಿನ ಒಡನಾಟ, ಗುದ್ದಾಟದಲ್ಲೇ ಅರಳಿದ ಬದುಕು. ನೆರೆ ಬಂದೀತೆಂಬ ಭಯ. ನೀರಿಗೆ ಯಾವತ್ತೂ ಕೊರತೆಯಾಗದೆಂಬ ಅಭಯ. ಈಗ ನೀರಿನೊಂದಿಗಿನ ನಿತ್ಯದ ಒಡನಾಟ, ನೀರ ಮಾರ್ಗದ ಓಡಾಟ ತಪ್ಪುತ್ತಿದೆ. ಕೆಆರ್‌ಎಸ್, ಕಬಿನಿ ಜಲಾಶಯಗಳು ಭರ್ತಿಯಾಗಿ, ಹೊರ ಹರಿವು ಹೆಚ್ಚಿರುವುದರಿಂದ ಈ ಊರಿಗೆ ಮತ್ತೊಮ್ಮೆ ‘ಪ್ರವಾಹ’ ಭೀತಿ ಎದುರಾಗಿದ್ದರೂ, ಅದು ಹಿಂದಿನಷ್ಟು ತಲ್ಲಣವನ್ನು ಮೂಡಿಸಿಲ್ಲ. ನೀರ ನಡುವಿನ ಗ್ರಾಮ ಮತ್ತು ಈಚೆ ದಡಕ್ಕೆ ಸೇತುವೆ ಸಂಪರ್ಕ ಬಂದಿರುವುದು ಇದಕ್ಕೆ ಕಾರಣ. ತೆಪ್ಪದಲ್ಲಿ ಹುಟ್ಟು ಹಾಕುವ, ಪ್ರವಾಹ ಬಂದಾಗ ಜೀವ ಕೈಯಲ್ಲಿ ಹಿಡಿದು ಸಾಗುವ ಸಾಹಸಿ-ಜಂಜಡ ದೂರಾಗಿ ಸರಾಗ ಸಂಚಾರ ಸಾಧ್ಯವಾಗುತ್ತಿರುವ ಹೊತ್ತಿನಲ್ಲಿ ಗ್ರಾಮ ಹೊಸದೇನನ್ನೋ ಪಡೆಯುವ ನಿರೀಕ್ಷೆಯಲ್ಲಿದೆ. ತನ್ನ ತನವನ್ನು ಕಳೆದುಕೊಳ್ಳುವ ಆತಂಕವನ್ನೂ ಎದುರಿಸುತ್ತಿದೆ.

ಇದು ಎಡಕುರಿಯಾ; ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ಪಟ್ಟಣಕ್ಕೆ ೧೪ ಕಿಮೀ ದೂರದಲ್ಲಿರುವ ಇದೇ ತಾಲೂಕಿನ ಪುಟ್ಟ ದ್ವೀಪಗ್ರಾಮ. ಕಾವೇರಿ ನದಿ ಸುತ್ತುವರಿದಿರುವ ಈ ಗ್ರಾಮದ ಹೆಸರು ‘ಯಡಕುರಿಯಾ’ ಎಂದೂ ಕೆಲವೆಡೆ ಉಲ್ಲೇಖಗೊಂಡಿದೆ. ಯಾವುದು ಸರಿ, ಯಾಕೆ ಈ ಹೆಸರು ಬಂದಿರಬಹುದೆನ್ನುವ ಪ್ರಶ್ನೆಗೆ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿಯ ಉತ್ತರ ಹೀಗಿತ್ತು: “ಯಡಕುರಿಯವೇ ಸರಿ. ಯಡ ಎಂದರೆ ಯಡವಟ್ಟು ಎಂದರ್ಥ.ಈ ಊರು ಅತ್ತಲೂ ಅಲ್ಲ, ಇತ್ತಲೂ ಇಲ್ಲ ಎನ್ನುವ ಯಡವಟ್ಟು ಸ್ಥಿತಿಯಲ್ಲಿದ್ದುದರಿಂದ ಈ ಹೆಸರು ಬಂದಿರಬೇಕು.’’ ಆದರೆ, ಎಡಕುರಿಯಾ, ಯಡಕುರಿಯಾ ಎರಡೂ ತಪ್ಪು ಉಚ್ಚರಣೆ. ಕುರಿಯಾ ಎನ್ನುವುದರ ಮೂಲ ‘ಕುರುವ’ ಇರಬಹುದು. ಕುರುವ ಪದಕ್ಕೆ ದ್ವೀಪ, ದಿಬ್ಬ ಎನ್ನುವ ಅರ್ಥವಿದೆ. ಕೊಳ್ಳೇಗಾಲ-ಮಳವಳ್ಳಿ ಮಾರ್ಗದ ಸತ್ತೇಗಾಲದಲ್ಲಿ ಎಡಕ್ಕೆ ಹೊರಳಿ ಒಂದೂವರೆ ಕಿಮೀ ಕ್ರಮಿಸಿದರೆ ಸಿಗುವ ಈ ದ್ವೀಪ ಗ್ರಾಮ ಮೊದಲು ‘ಎಡ-ಕುರುವ' ಎನ್ನಿಸಿಕೊಂಡು, ಕಾಲ ಕ್ರಮೇಣ ಜನರ ಬಾಯಲ್ಲಿ ಎಡಕುರಿಯಾ, ಯಡಕುರಿಯಾ ಆಗಿರಬಹುದು. ಹೆಸರಿನ ವಿಷಯದಲ್ಲಷ್ಟೆ ಅಲ್ಲ, ಗ್ರಾಮ ಈಗೀಗ ಅಭಿವೃದ್ಧಿಯ ಅಪಸವ್ಯಕ್ಕೆ ಒಡ್ಡಿಕೊಳ್ಳಲೂ ಸಜ್ಜಾಗುತ್ತಿದೆ.

ಗ್ರಾಮಕ್ಕೆ ಮೂರ್ನಾಲ್ಕು ತಲೆಮಾರುಗಳ ಇತಿಹಾಸವಿದೆ ಎನ್ನುತ್ತಾರೆ ಹಿರಿಯರು. “ಸುತ್ತಲೂ ನೀರು ಹರಿಯುತ್ತಿದ್ದ ಈ ಪ್ರದೇಶಕ್ಕೆ ನಮ್ಮ ಮುತ್ತಾತಂದಿರು ಜಾನುವಾರು ಮೇಯಿಸಲು ಬರುತ್ತಿದ್ದರೆನಿಸುತ್ತೆ. ಕಾಲಕ್ರಮೇಣ ಜಾಗೇರಿ, ಧನಗೆರೆ, ಸರಗೂರು ಮುಂತಾದ ಊರುಗಳಿಂದ ಬಂದು ಇಲ್ಲೇ ನೆಲೆ ನಿಂತು ಕೃಷಿ ಮಾಡಲು ಆರಂಭಿಸಿದರಂತೆ. ಮೊದಲು ಜಹಗೀರುದಾರರ ಕಣ್ಗಾವಲಿನಲ್ಲಿದ್ದ ಭೂಮಿಯು ‘ಉಳುವವನೇ ಹೊಲದೊಡೆಯ’ ಕಾಯ್ದೆ ಬಂದ ಬಳಿಕ ನಮ್ಮ ಹಿರಿಯರಿಗೆ ಬಂದಿತು,’’ ಎನ್ನುತ್ತಾರೆ ಮಲ್ಲಿಕಾರ್ಜುನ ಸ್ವಾಮಿ. ಮೂರು ಬೀದಿಗಳಷ್ಟೆ ಇರುವ ಗ್ರಾಮದಲ್ಲಿರುವುದು ಲಿಂಗಾಯತರ ೬೦, ಕುರುಬಗೌಡರ ಸುಮಾರು ೩೦ ಕುಟುಂಬಗಳಷ್ಟೆ. ಒಟ್ಟು ಜನಸಂಖ್ಯೆ ೪೫೦. ಮತದಾರರ ಸಂಖ್ಯೆ ೩೪೦. ಇಲ್ಲಿರುವ ಸುಮಾರು ೭೦೦ ಎಕರೆ ಭೂಮಿಯ ಪೈಕಿ ೩೫೦ಕ್ಕೂ ಹೆಚ್ಚು ಎಕರೆಯಲ್ಲಿ ದಶಕಗಳಿಂದಲೂ ವರ್ಷಕ್ಕೆರಡು ಬಾರಿ ಭತ್ತವನ್ನಷ್ಟೆ ಬೆಳೆಯಲಾಗುತ್ತಿದೆ. ಏಕಬೆಳೆ, ಯಥೇಚ್ಛ ನೀರು, ರಸಗೊಬ್ಬರ ಬಳಕೆಯಿಂದ ಮಣ್ಣಿನ ಸತ್ವ ಕುಸಿದು, ಇಳುವರಿ ಕುಂಠಿತವಾಗಿದೆ. ಸತ್ವ ಸಂರಕ್ಷಣೆ, ಬಹುಬೆಳೆ ಪದ್ಧತಿಯಿಂದಾಗುವ ಲಾಭದ ಬಗ್ಗೆ ಇಲ್ಲಿನ ರೈತರಿಗೆ ಯೋಗ್ಯ ಮಾರ್ಗದರ್ಶನ ನೀಡಿದವರಿಲ್ಲ. ಈ ಮಧ್ಯೆ, ರೇಷ್ಮೆ ಬೆಳೆಯುವ ಪ್ರಯತ್ನ ನಡೆಯಿತಾದರೂ ಕೈ ಹತ್ತಲಿಲ್ಲ. ಈಗೀಗ ಅಲ್ಪಸ್ವಲ್ಪ ಭೂಮಿಯಲ್ಲಿ ಕಬ್ಬು, ಬಾಳೆ ಬೆಳೆಯಲಾಗುತ್ತಿದೆ. ಹೈನುಗಾರಿಕೆಯಿಂದ ಒಂದಷ್ಟು ಆದಾಯ ಲಭ್ಯ. “ಸಾಗಾಣಿಕೆ ಸಮಸ್ಯೆ ಇದ್ದುದರಿಂದ ಭತ್ತವನ್ನಷ್ಟೆ ಬೆಳೆಯುತ್ತಿದ್ದೆವು. ಸೇತುವೆ ಆರಂಭದ ನಂತರ ಕಬ್ಬು, ಬಾಳೆ, ತರಕಾರಿ ಮತ್ತಿತರ ಬೆಳೆ ಬೆಳೆಯಬಹುದು,’’ ಎನ್ನುವುದು ಇಲ್ಲಿನ ಕೃಷಿಕರ ನಿರೀಕ್ಷೆ.

ತೆಪ್ಪ, ಹರಿಗೋಲಿನ ಮೇಲೆ ತೇಲಿದ ಬದುಕು

ನಿಜ, ಈ ಗ್ರಾಮದ ಜನ ದಶಕಗಳಿಂದಲೂ ತೆಪ್ಪ, ಹರಿಗೋಲು ಮೂಲಕವಷ್ಟೇ ಹೊರಗಿನ ಸಂಪರ್ಕ ಸಾಧಿಸಬೇಕಿತ್ತು. ನದಿ ದಾಟಿಸಲು ನಿಯೋಜಿತ ವ್ಯಕ್ತಿಗೆ ಎಲ್ಲ ಕುಟುಂಬಗಳವರು ವರ್ಷಕ್ಕಿಷ್ಟು ಭತ್ತ ನೀಡುತ್ತಿದ್ದರು. ನಂತರ, ಸರ್ಕಾರ ಸ್ಟೀಮರ್‌ ನೀಡಿತು. ಎಲ್ಲ ಪದಾರ್ಥಗಳನ್ನು ನೀರಿನ ಮೇಲೆಯೇ ಸಾಗಿಸಲಾಗುತ್ತಿತ್ತು. ಮನೆ ಕಟ್ಟುವ, ಕೃಷಿಗೆ ಬಳಸುವ ಸಾಮಗ್ರಿಗಳನ್ನು ಊರಿಗೆ ತರುವಷ್ಟರಲ್ಲಿ ಪದಾರ್ಥದಷ್ಟೆ ಸಾಗಣೆಗೆ ಖರ್ಚಾದ ನಿದರ್ಶನಗಳೂ ಇವೆ. ಬೆಳೆದ ಭತ್ತವನ್ನು ಮಾರಲು ಸಾಗಿಸುವುದೂ ಅಷ್ಟೇ ತ್ರಾಸದಾಯಕ ಮತ್ತು ದುಬಾರಿ ಬಾಬತ್ತಾಗಿತ್ತು. ಅಗ್ಗಸುಗ್ಗಿ ಬೆಲೆಗೆ ಜಮೀನಿನಲ್ಲೇ ಮಾರುತ್ತಿದ್ದುದರಿಂದ ಸರ್ಕಾರದ ಬೆಂಬಲ ಬೆಲೆಯ ಲಾಭ ಸಿಕ್ಕಿದ್ದು ಕಡಿಮೆ. ಎಲ್ಲೆಡೆಯಂತೆ ಇಲ್ಲಿಯೂ ಕೃಷಿಗೆ ಆಳುಗಳ ಸಮಸ್ಯೆ ಎದುರಾಗಿ, ಯಂತ್ರ ಅವಲಂಬನೆ ಅನಿವಾರ್ಯವಾಯಿತು. ಆದರೆ, ಅವುಗಳನ್ನು ನದಿ ದಾಟಿಸುವುದು ಸುಲಭವಿರಲಿಲ್ಲ. ಬ್ಯಾರಲ್, ‌ಬೊಂಬುಗಳನ್ನು ಬಳಸಿ ನಿರ್ಮಿಸಿದ ತೆಪ್ಪದ ಮೂಲಕ ನೂರಾರು ಟನ್‌ ತೂಗುವ ಟ್ರ್ಯಾಕ್ಟರ್ ಮತ್ತು ಕೊಯ್ಲು ಯಂತ್ರಗಳನ್ನು ನದಿ ದಾಟಿಸಿದ ಸಾಹಸವನ್ನು ಜನ ಹೆಮ್ಮೆಯಿಂದ ಹೇಳಿಕೊಳ್ಳುವರು.

ನೀರಿನೊಂದಿಗಿನ ಒಡನಾಟ ಊರಿನ ಜನರಿಗೆ ಇಂಥ ನೂರಾರು ಆಪ್ತ, ಸಾಹಸಮಯ ಅನುಭವ ನೀಡಿದೆ. ಹೊರಗಿನ ಜನರಿಗೆ ಈ ಕತೆಗಳು ಥ್ರಿಲ್ಲಿಂಗ್‌‌ ಎನ್ನಿಸಿದರೆ, ಅವುಗಳ ಜೊತೆ ಬದುಕು ಸವೆಸಿದ ಜನರಿಗೆ ಒಮ್ಮೆಮ್ಮೊ ರೇಜಿಗೆ ಎನಿಸಿದ್ದು, ದುಸ್ವಪ್ನ ಸದೃಶವಾಗಿದ್ದೂ ಇದೆ. ನದಿಯಲ್ಲಿ ಪ್ರವಾಹ ಹೆಚ್ಚಿ, ಊರು ಮುಳುಗುವ ಸ್ಥಿತಿ ತಲುಪಿದ್ದ ಒಂದೆರಡು ಸಂದರ್ಭಗಳನ್ನು ಹಿರಿಯರು ನೆನಪಿಸಿಕೊಳ್ಳುವುದು ಹೀಗೆ:

 • “೧೯೯೧ರಲ್ಲಿ ಊರಿನ ಬಹುಪಾಲು ಮುಳುಗಿತ್ತು. ಜನರು ಜಾನುವಾರುಗಳೊಂದಿಗೆ ತುಸು ಎತ್ತರದ ಸ್ಥಳದಲ್ಲಿ ನಿಂತಿದ್ದರು. ಗಟ್ಟಿಮುಟ್ಟಾದ ಒಂದಿಬ್ಬರು ಸಾಹಸ ಮಾಡಿ ಆಚೆ ದಡಕ್ಕೆ ಹೋದರೆ, ಅಲ್ಲಿ ಅಂದಿನ ಜಿಲ್ಲಾಧಿಕಾರಿ ಸಿದ್ದಯ್ಯ ಸಹಿತ ಅನೇಕ ಅಧಿಕಾರಿಗಳು ಆತಂಕದಲ್ಲಿ ನಿಂತಿದ್ದರು. ಮುಳುಗಿದ ಊರಿನ ಜನರ ಸ್ಥಿತಿಯನ್ನು ಅರಿತ ಅಧಿಕಾರಿಗಳು ತಕ್ಷಣ ಹೆಲಿಕಾಪ್ಟರ್ ತರಿಸಿ, ಜನರನ್ನು ರಕ್ಷಿಸಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿದ್ದರು,’’ ಎಂದರು ಹಿರಿಯರಾದ ಗುರುಸ್ವಾಮಿ.
 • ದನಕರು ಬಿಟ್ಟು ನಾವಷ್ಟೇ ಊರು ಬಿಟ್ಟು ಹೋಗೋದು ಹೇಗೆ? ಹೆಲಿಕಾಪ್ಟರ್ ಬಂದಿತ್ತಾದರೂ, ನಾವದನ್ನು ಹತ್ತದೆ ಅಲ್ಲೇ ಉಳಿದಿದ್ದೆವು,’’ ಎಂದು ತಮ್ಮ ಸಾಹಸವನ್ನು ಬಣ್ಣಿಸಿದವರು ರತ್ನಮ್ಮ.೧೨ನೇ ವಯಸ್ಸಿಗೇ ಮದುವೆಗೆ ಕೊರಳೊಡ್ಡಿ ಊರಿಗೆ ಬಂದಾಗ ಕಾಡಿದ್ದ ಹೊಳೆಯ ಭಯವನ್ನು ಆಕೆ ಈಗಲೂ ಅಷ್ಟೇ ಭಯ, ಬೆರಗಿನಿಂದ ಹೇಳಿಕೊಳ್ಳುವರು. ೧೯೯೧ರಲ್ಲಿ ಮಹಿಳೆಯೊಬ್ಬರು ನದಿ ಸೆಳವಿನಲ್ಲಿ ಕೊಚ್ಚಿಹೋಗಿದ್ದರ ಹೊರತು ಎಷ್ಟೇ ಪ್ರವಾಹ ಬಂದಾಗಲೂ ಇಲ್ಲಿ ಜೀವಹಾನಿ ಆಗಿಲ್ಲವಂತೆ.

ಸೇತುವೆ ಬಂದಿದೆ, ಮಾರಿಕೊಳ್ಳುವ ಆತಂಕ ಎದ್ದಿದೆ!

ನದಿಯ ಉಬ್ಬರ-ಇಳಿತದ ಜೊತೆಗೇ ಬದಕಿನ ಏರಿಳಿತಗಳನ್ನು ಬೆಸೆದುಕೊಂಡ ಜನರಿಗೆ ಕ್ರಮೇಣ ಸೇತುವೆಯ ಅಗತ್ಯ ಕಂಡಿತು. ಸೇತುವೆ ಬಂದರೆ ಊರಿನ ಭಾಗ್ಯದ ಬಾಗಿಲು ತೆರೆಯುತ್ತದೆಂದು ಭಾವಿಸಿ ಹೋರಾಟ ಆರಂಭಿಸಿದರು. ದಶಕಗಳ ಹೋರಾಟಕ್ಕೆ ಮಣಿದ ಸರ್ಕಾರ ೨೦೦೮ರಲ್ಲಿ ೨.೮೫ ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಮಂಜೂರು ನೀಡಿತು. ನಂತರ ವರ್ಷಕ್ಕೆ ತಲಾ ೨೫ ಲಕ್ಷ ರು. ವೆಚ್ಚ ಹೆಚ್ಚಿಸಿಕೊಂಡು, ಅಂತೂ ೪. ೮೯ ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಯಿತು. ಚುನಾವಣೆಗೆ ಮುನ್ನ ಔಪಚಾರಿಕ ಉದ್ಘಾಟನೆಯೂ ಆಯಿತು. ಆದರೆ, ವಾಹನ ಸಂಚಾರಕ್ಕೆ ಇನ್ನೂ ಮುಕ್ತವಾಗಿಲ್ಲ. ಸೇತುವೆಯ ಎರಡೂ ತುದಿಯಲ್ಲಿ ರಸ್ತೆ ಸಂಪರ್ಕ ಕಲ್ಪಿಸಬೇಕಾದ ಭೂಮಿಗೆ ಸಂಬಂಧಿಸಿದ ತಕರಾರು ಬಗೆಹರಿದಿಲ್ಲ. ಆದ್ದರಿಂದ, ಇಷ್ಟು ಕಾಲ ನೀರಿನ ಮೇಲೆ ಸಾಹಸಪಡುತ್ತಿದ್ದ ಜನ ಈಗ ಅಪೂರ್ಣ ಸೇತುವೆ ಮೇಲೆಯೂ ಮತ್ತೊಂದು ರೀತಿ ಸಾಹಸ ಮೆರೆಯುತ್ತಿದ್ದಾರೆ. ಅದೇನಿದ್ದರೂ, ಮಳೆ-ಹೊಳೆ ಹೆಚ್ಚಿರುವ ಈ ವರ್ಷ ಊರಿನ ಜನರಲ್ಲಿ ಹಲವು ಬಗೆಯ ಬಿಡುಗಡೆಯ ಭಾವ ಮೂಡಿದೆ. ಈಗಲ್ಲ, ಸೇತುವೆ ಕಾಮಗಾರಿ ಶುರು ಆದಾಗಲೇ ಊರಿನ ಚಿತ್ರಣ ಬದಲಾವಣೆಗೆ ಒಡ್ಡಿಕೊಂಡಿತು. ಅವುಗಳಲ್ಲಿ ಎದ್ದುಕಾಣುವ ಒಂದೆರಡು ಅಂಶಗಳು ಹೀಗಿವೆ:

ಅಂಗನವಾಡಿ ಬಂದ್‌; ಶಾಲೆಗೆ ದಾಖಲಾತಿ ಕುಸಿತ

 • ಸೇತುವೆ ನಿರ್ಮಾಣಕ್ಕೆಂದು ನದಿಗೆ ಒಡ್ಡು ಕಟ್ಟುವ ಮೊದಲು ಹೊಳೆಯ ಆ ಅಂಚಿಗೆ ಬಂದು ನಿಲ್ಲುತ್ತಿದ್ದ ಕಾನ್ವೆಂಟ್ ಬಸ್‌ ನದಿ ದಾಟಿ ಊರಿಗೇ ಬಂದಿತು. ಆವರೆಗೆ ಮಕ್ಕಳನ್ನು ೫ನೇ ತರಗತಿವರೆಗೆ ಊರಿನ ಅಂಗನವಾಡಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲೇ ಓದಿಸುತ್ತಿದ್ದ ಪೋಷಕರು, ಬಳಿಕ ಕೊಳ್ಳೇಗಾಲದ ಕಾನ್ವೆಂಟ್‌ಗೆ ಸೇರಿಸುವುದು ಹೆಚ್ಚಿತು.
 • ಪರಿಣಾಮ, ಈ ವರ್ಷ ಒಂದು ಮಗುವೂ ದಾಖಲಾಗದ ಕಾರಣ ಊರಿನ ಅಂಗನವಾಡಿ ಕೇಂದ್ರ ಬಂದ್ ಆಗಿದೆ. ಮುಂದಿನ ವರ್ಷ ಶಾಲೆಗೆ ಯಾವ ಮಗುವೂ ದಾಖಲಾಗುವ ಸಾಧ್ಯತೆ ಇಲ್ಲ.
 • ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೧೦-೧೧ರಲ್ಲಿ ಇದ್ದ ಮಕ್ಕಳ ಸಂಖ್ಯೆ ೩೭.ಕಳೆದ ವರ್ಷ ೨೦ಕ್ಕೆ,ಈ ವರ್ಷ ೧೬ಕ್ಕೆ ಕುಸಿದಿದೆ. ೧ನೇ ತರಗತಿಗೆ ಈ ಬಾರಿ ಇಬ್ಬರು ದಾಖಲಾಗಿದ್ದಾರೆ. ೨ನೇ ತರಗತಿಯಲ್ಲಿ ೩, ಮೂರು ಮತ್ತು ೪ನೇ ತರಗತಿಯಲ್ಲಿ ತಲಾ ಎರಡು ಹಾಗೂ ೫ನೇ ತರಗತಿಯಲ್ಲಿ ಏಳು ಮಕ್ಕಳಿದ್ದಾರೆ.
 • “ಮನೆಮನೆಗೆ ಹೋಗಿ ಮಕ್ಕಳನ್ನು ಊರಿನ ಶಾಲೆಗೇ ಸೇರಿಸುವಂತೆ ಮನವಿ ಮಾಡಿದೆವು. ಆದರೆ, ಹೆಚ್ಚಿನವರು ಕಾನ್ವೆಂಟ್‌ಗೆ ಮಕ್ಕಳನ್ನು ಸೇರಿಸಿದ್ದಾರೆ,’’ ಎನ್ನುವುದು ಮುಖ್ಯಶಿಕ್ಷಕ ಮುರುಳೀಧರ್ ಅಸಹಾಯಕತೆ.
 • “ಇಂಗ್ಲಿಷ್‌ ಮೀಡಿಯಂ ಅಂತ ಬಂದಿದೆ ನೋಡಿ. ಒಬ್ಬರು ಸೇರಿಸಿದರು ಅಂತ ಇನ್ನೊಬ್ಬರು, ಅವರು ಸೇರಿಸಿದರು ಅಂತ ಇವರು ಮಕ್ಕಳನ್ನು ಕಾನ್ವೆಂಟ್‌ಗೆ ಕಳಿಸೋದು ಹೆಚ್ಚಿದೆ. ಈಗೆಲ್ಲ ವಿದ್ಯೆಯ ಮೇಲೇ ಎಲ್ಲ ವ್ಯವಹಾರ ನಡೆಯೋದು. ನಾವಂತೂ ಹೆಚ್ಚು ಓದಲಿಲ್ಲ. ಮಕ್ಕಳಾದರೂ ಚೆನ್ನಾಗಿ ಓದಿ, ಮುಂದೆ ಬರಲಿ ಅಂತ ಸೇರಿಸಿದ್ದೇವೆ,’’ ಎಂದವರು ಮೊಮ್ಮಗಳು ಮೋನಿಕಾಳನ್ನು ಕಾನ್ವೆಂಟ್ ಬಸ್ ಹತ್ತಿಸಲು ಕಾಯ್ದು ನಿಂತಿದ್ದ ನಾಗಪ್ಪ.
 • ಸೇತುವೆ ನಿರ್ಮಾಣ ಆರಂಭಕ್ಕೆ ಮೊದಲು ಚಿಕ್ಕ ಮಕ್ಕಳನ್ನು ಹೊಳೆ ದಾಟಿಸುವ ರಿಸ್ಕ್‌ ತೆಗೆದುಕೊಳ್ಳದೆ, ಊರಿನ ಶಾಲೆಯಲ್ಲೇ ಓದಿಸುತ್ತಿದ್ದ ಬಹುತೇಕರು, ಸೇತುವೆ ಕೆಲಸಕ್ಕೆ ಒಡ್ಡು ಹಾಕಿದ ಮೇಲೆ ಕೊಳ್ಳೇಗಾಲಕ್ಕೆ ಕಳುಹಿಸಲಾರಂಭಿಸಿದ್ದನ್ನು ಮುರುಳೀಧರ್‌ ಗುರುತಿಸಿದರು. ನಾಗಪ್ಪ ಅವರೂ ಅದನ್ನು ಒಪ್ಪಿದರು.

ರೆಸಾರ್ಟ್ ಬರುತ್ತದಂತೆ, ಭೂಮಿಗೆ ಚಿನ್ನದ ಬೆಲೆಯಂತೆ!

 • “ದಶಕಗಳ ಹೋರಾಟಕ್ಕೆ ಅಂತೂ ಜಯ ಸಿಕ್ಕಿದೆ. ವಿಶಾಲವಾದ ಸೇತುವೆಯೇ ನಿರ್ಮಾಣವಾಗಿದೆ. ಊರಿನ ಸಮಸ್ಯೆಗಳು ಒಂದೊಂದೇ ನೀಗುತ್ತವೆ,’’ ಎನ್ನುವುದು ಸೇತುವೆಗಾಗಿ ಹಲವು ಬಾರಿ ಬೆಂಗಳೂರು ದಾರಿ ಸವೆಸಿದ ಗುರುಸ್ವಾಮಿ ವಿಶ್ವಾಸ.
 • ಆದರೆ, ೪೫೦ ಜನಸಂಖ್ಯೆ ಇರುವ ಈ ಊರಿಗೆ ಸಂಪರ್ಕ ಕಲ್ಪಿಸಲಷ್ಟೆ ಅಧಿಕಾರಸ್ಥರು ವಿಶಾಲವಾದ ಸೇತುವೆ ನಿರ್ಮಾಣಕ್ಕೆ ಒಪ್ಪಿರುವಂತಿಲ್ಲ. ಊರಿನ ಇನ್ನೊಂದು ಭಾಗದಲ್ಲೂ ನದಿಗೆ ಸೇತುವೆ ನಿರ್ಮಿಸಿ, ಎಡಕುರಿಯಾ ‘ಹೃದಯ’ದ ಮೂಲಕ ಅದಕ್ಕೆ ಸಂಪರ್ಕ ಕಲ್ಪಿಸುವ ಕುರಿತು ಇಲಾಖೆ ಮಟ್ಟದಲ್ಲಿ ಚರ್ಚೆ ನಡೆದಿದೆಯಂತೆ.
 • ಇದು ಸಾಧ್ಯವಾದರೆ, ಶಿವನಸಮುದ್ರ-ತಲಕಾಡು ಮುಂತಾದ ಪ್ರವಾಸಿ ತಾಣಗಳ ಸಂಪರ್ಕ ಮಾರ್ಗ ಸಮೀಪ ಆಗುತ್ತದೆ. “ಪ್ರವಾಸೋದ್ಯಮಕ್ಕೆ ಅನುಕೂಲ ಆದರೆ ಆಗಲಿ. ನಮಗೇನೂ ಸಮಸ್ಯೆಯಿಲ್ಲ,’’ ಎಂದು ಕೆಲವರು ಹೇಳುತ್ತಾರೆ. ಗ್ರಾಮದ ದ್ವೀಪ ಸೌಂದರ್ಯ ನಾಶವಾಗುತ್ತದೆನ್ನುವ ಆತಂಕ ಇನ್ನು ಕೆಲವರದ್ದು.
 • ಪ್ರವಾಸೋದ್ಯಮಕ್ಕೆ ಈ ಊರನ್ನು ಮುಕ್ತ ಗೊಳಿಸಿದರೆ, ಇಲ್ಲೊಂದಿಷ್ಟು ರೆಸಾರ್ಟ್ ತಲೆ ಎತ್ತಬಹುದು, ಇಲ್ಲಿನ ಭೂಮಿಗೆ ಚಿನ್ನದ ಬೆಲೆ (ರಿಯಲ್‌ ಎಸ್ಟೇಟ್ ಬೆಲೆ) ಬರಬಹುದು, ಮೂರ್ನಾಲ್ಕು ತಲೆಮಾರುಗಳಿಂದ ಇಲ್ಲಿ ಹೋರಾಟದ ಬದುಕು ಕಟ್ಟಿಕೊಂಡಿದ್ದ ಜನ ಒಬ್ಬೊಬ್ಬರೇ ತಮ್ಮದೆಲ್ಲವನ್ನು ಮಾರಿಕೊಂಡು ಹೋಗುವ ಸ್ಥಿತಿಯೂ ಅನಿವಾರ್ಯವಾಗಬಹುದು.
 • ಕಾವೇರಿ ನದಿ ಕವಲೊಡೆಯುವ ಪ್ರದೇಶದಲ್ಲಿ ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ವಕೀಲರೊಬ್ಬರು ೪೦ ಎಕರೆ ಭೂಮಿ ಖರೀದಿಸಿ, ಮೀನು ಸಾಕಣೆ ಪ್ರಯತ್ನ ಮಾಡಿ ಕೈ ಸುಟ್ಟುಕೊಂಡಿದ್ದರಂತೆ. ಕಾವೇರಿ ಊರಿನ ಸುತ್ತ ಹರಿದು, ಮತ್ತೆ ಸೇರುವ ಸ್ಥಳದಲ್ಲಿ ಹೊರಗಿನ ವ್ಯಕ್ತಿಯೊಬ್ಬರು ಈಚೆಗೆ ನಾಲ್ಕೈದು ಎಕರೆ ಭೂಮಿ ಖರೀದಿಸಿದ್ದಾರೆ. “ದುಡ್ಡಿದ್ದವರು ಹೆಚ್ಚಿನ ಬೆಲೆ ಕೊಡುತ್ತೇವೆಂದರೆ ಮಾರುವವರನ್ನು ತಡೆಯಲಾಗದು. ಯಾವುದಾದರೂ ರೀತಿ ಊರಿನ ಅಭಿವೃದ್ಧಿ ಆಗಲಿ ಬಿಡಿ,’’ ಎನ್ನುವುದು ಸುರೇಶ್ ಮತ್ತಿತರ ಪ್ರತಿಪಾದನೆ. ಇಂಥ ನಿಲುವು ಮತ್ತು ಹೇಳಿಕೆಗೆ ಆಸೆಯಷ್ಟೆ ಕಾರಣವಲ್ಲ. “ಏನೇ ಆಗುವುದಿದ್ದರೂ, ಅದನ್ನು ನಮ್ಮಿಂದ ತಡೆಯಲಾಗದು,’’ ಎನ್ನುವ ಹತಾಶ ಮತ್ತು ಅಸಹಾಯಕ ಸ್ಥಿತಿಯೂ ಅದರಲ್ಲಡಗಿದಂತಿದೆ.

ಒಳಿತೋ, ಕೆಡುಕಿನ ಮೂಲವೋ ಎಲ್ಲ ಅಗೋಚರ

ಸದ್ಯ ಆಹ್ಲಾದಮಯ ಪರಿಸರವನ್ನು ಹೊಂದಿರುವ ಊರಿಗೆ ಸಂಪರ್ಕ ಕಲ್ಪಿಸಲು ಸಜ್ಜಾಗುತ್ತಿರುವ ಸೇತುವೆ ಭವಿಷ್ಯದಲ್ಲಿ ಒಳಿತಿನೊಂದಿಗೆ ಸಂಪರ್ಕ ಬೆಸೆಯುತ್ತದೆಯೋ, ಕೆಡುಕಿನ ಮೂಲವೋ ಎನ್ನುವುದನ್ನು ಸುಲಭಕ್ಕೆ ನಿರ್ಣಯಿಸಲಾಗದಂಥ ಸ್ಥಿತಿಯಲ್ಲಿ ಇಲ್ಲಿನ ಜನರಿದ್ದಾರೆ. ಎಲ್ಲೆಡೆ ಎಗ್ಗಿಲ್ಲದೆ ನಡೆಯುತ್ತಿರುವ ಅಭಿವೃದ್ಧಿಯ ಹೆಸರಿನ ಅಪಸವ್ಯಗಳನ್ನು ನೋಡಿ ಬಲ್ಲವರಿಗೆ ಈ ಊರು ಕೂಡ ಅಂಥದ್ದೇ ಅಪಸವ್ಯ ಮತ್ತು ಅಪಾಯಕ್ಕೆ ಒಡ್ಡಿಕೊಳ್ಳುತ್ತಿದೆಯೇನೋ ಎನ್ನಿಸಿದರೆ, ಸ್ಥಳೀಯರು ಈ ಎಲ್ಲದರಲ್ಲೂ ಒಳ್ಳೆಯದನ್ನು ನಿರೀಕ್ಷಿಸುತ್ತಿರುವುದು 'ದಿ ಸ್ಟೇಟ್' ಗ್ರಾಮ ವಾಸ್ತವ್ಯದ ಸಂದರ್ಭ ಎದ್ದುಕಂಡಿತು. “ನಮ್ಮ ಬದುಕಂತೂ ಇಲ್ಲೇ ಮುಗೀತು. ಮಕ್ಕಳಾದರೂ ಚೆನ್ನಾಗಿ ಓದಿ, ಒಳ್ಳೆಯ ದಾರಿ ಕಂಡುಕೊಳ್ಳಲಿ,’’ ಎಂದು ಅನೇಕರು ಆಸ್ಥೆ ವಹಿಸುತ್ತಿದ್ದಾರೆ. ಓದು ಮುಗಿಸಿದ ಒಂದಷ್ಟು ಹುಡುಗರು ಉದ್ಯೋಗ ನಿಮಿತ್ತ ಮೈಸೂರು, ಬೆಂಗಳೂರು ಸೇರಿಕೊಂಡಿದ್ದಾರೆ.

ಅಜ್ಜನ ಕಾಣ್ಗಾವಲಿನಲ್ಲಿ ಠಾಕುಠೀಕಾಗಿ ಕಾನ್ವೆಂಟಿಗೆ ಹೊರಟುನಿಂತ ಪುಟ್ಟ ಮೋನಿಕಾ. ಅವಳಲ್ಲಿ ಭವಿಷ್ಯ ಕಾಣುತ್ತಿರುವ ಅಜ್ಜ ನಾಗಪ್ಪ. ಕಾನ್ವೆಂಟ್ ಕೂಸುಗಳಷ್ಟೆ ಚೂಟಿಯಾಗಿದ್ದ ಊರಿನ ಕನ್ನಡ ಶಾಲೆಯ ಐಶ್ವರ್ಯಾ. ಅವಳನ್ನು ಕಾನ್ವೆಂಟಿಗೆ ಕಳುಹಿಸದ ಆಕೆಯ ಹೆತ್ತವರು. ಸುತ್ತಲೂ ನೀರ ಸೊಬಗು, ಹಸಿರು, ವಿಶಿಷ್ಟ ಹಕ್ಕಿಗಳ ಕಲರವ. ದ್ವೀಪ ಸೌಂದರ್ಯದ ತೆರೆಯ ಮರೆಯಲ್ಲಿ ಇಣುಕುತ್ತಿರುವ ಪ್ರವಾಸೋದ್ಯಮ ಮತ್ತು ರೆಸಾರ್ಟ್ ಸಂಸ್ಕೃತಿಯ ಮಾಯೆ. ಹಲವು ವರ್ಷಗಳ ಬಳಿಕ ಕಾವೇರಿ ಜಲಾನಯನ ಪಾತ್ರದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಕೆಆರ್‌ಎಸ್, ಕಬಿನಿ ಜಲಾಶಯಗಳು ಭರ್ತಿಯಾಗಿ, ಹೊರ ಹರಿವು ಹೆಚ್ಚಿರುವುದರಿಂದ ಊರಿನ ಸುತ್ತ ಮತ್ತೊಮ್ಮೆ ಕಾವೇರಿ ಭೋರ್ಗರೆಯುತ್ತಿದ್ದಾಳೆ. ಹಾಗಿದ್ದೂ, ಸೇತುವೆಯ ಕಾರಣವಾಗಿ ಇದೇ ಮೊದಲ ಬಾರಿ ಗ್ರಾಮಸ್ಥರು ನೀರ ಭಯದಿಂದ ಮುಕ್ತವಾಗಿದ್ದಾರೆ. ಊರಿಗೆ ಅತ್ಯವಶ್ಯವಿದ್ದ ಸೇತುವೆ ಇಲ್ಲಿನ ದ್ವೀಪ ಸೊಬಗಿಗೆ ಯಾವುದೇ ಬಗೆಯ ಘಾತ ಮಾಡದೆ, ಒಳಿತಿನ ಸಂಪರ್ಕ ಬೆಸೆಯಲಿ ಎಂದು ಮನಸ್ಸು ಆಶಿಸುತ್ತಿತ್ತಾದರೂ, ಹಲವು ಬಗೆಯ ಹಳವಂಡಗಳು ಆವರಿಸಿರುವ ಈ ಜಾಗೆಯಲ್ಲಿ ಯಾವುದು ಒಳಿತು, ಕೆಡುಕ್ಯಾವುದು ಎಂದು ನಿರ್ಣಯಿಸುವುದು ಸುಲಭವಿರಲಿಲ್ಲ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More