ಮನು ಎಸ್‌ ಪಿಳ್ಳೈ ಸಂದರ್ಶನ | ಇತಿಹಾಸ ಬರವಣಿಗೆ ಉ.ಭಾರತದತ್ತ ವಾಲಿದ್ದೂ ಒಂದು ರಾಜಕೀಯ

ಮನು ಅವರ ‘ರೆಬಲ್ ಸುಲ್ತಾನ್ಸ್: ದಿ ಡೆಕ್ಕನ್ ಫ್ರಂ ಖಿಲ್ಜಿ ಟು ಶಿವಾಜಿ’ ಎಂಬ ಹೊಸ ಪುಸ್ತಕ ರೋಚಕ ಕತೆಗಳ ಜೊತೆಗೆ ಚಾರಿತ್ರಿಕ ವ್ಯಕ್ತಿಗಳ ಕುರಿತು ಮಾತನಾಡುವ ಅಪರೂಪದ ಪುಸ್ತಕ. ‘ಸೌತ್‌ ವರ್ಡ್‌’ನಲ್ಲಿ ಪ್ರಕಟವಾದ, ಅಜಿತ್ ಪಿಳ್ಳೈ ಅವರೊಂದಿಗಿನ ಮನು ಅವರ ಮಾತುಕತೆಯ ಭಾವಾನುವಾದ ಇಲ್ಲಿದೆ

ಮನು ಎಸ್ ಪಿಳ್ಳೈ ಅವರ ಮೊದಲ ಕೃತಿ ‘ದ ಐವರಿ ಥ್ರೋನ್’ ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ್ದು ಮಾತ್ರವಲ್ಲ, ವ್ಯಾವಹಾರಿಕ ದೃಷ್ಟಿಯಿಂದಲೂ ಯಶಸ್ವಿಯಾದ ಪುಸ್ತಕ. ಅದು ತಿರುವಾಂಕೂರು ರಾಜವಂಶದ ಕೊನೆಯ ಮತ್ತು ಮರೆತುಹೋದ ರಾಣಿ ಸೇತುಲಕ್ಷ್ಮಿ ಬಾಯಿ ಅವರ ಬದುಕು, ಬವಣೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ‘ರೆಬಲ್ ಸುಲ್ತಾನ್ಸ್: ದಿ ಡೆಕ್ಕನ್ ಫ್ರಂ ಖಿಲ್ಜಿ ಟು ಶಿವಾಜಿ’ ಎಂಬ ಅವರ ಹೊಸ ಪುಸ್ತಕ ರೋಚಕ ಕತೆಗಳನ್ನು ಮತ್ತು ಗಮನಾರ್ಹ ಚಾರಿತ್ರಿಕ ವ್ಯಕ್ತಿಗಳನ್ನು ಆಕರ್ಷಕವಾಗಿ ಕಟ್ಟಿಕೊಡುವ ಪುಸ್ತಕವಾಗಿದೆ. ಹದಿಮೂರನೇ ಶತಮಾನದ ಕೊನೆಯ ಭಾಗದಿಂದ ಹದಿನೆಂಟನೇ ಶತಮಾನದ ಆರಂಭದ ಅವಧಿವರೆಗಿನ ದಕ್ಷಿಣ ಪ್ರಸ್ಥಭೂಮಿಯ ಚರಿತ್ರೆಯನ್ನು ನಿರೂಪಿಸುವ ಈ ಪುಸ್ತಕ, ಇತರರು ಹೇಳಿರದ ವಿಷಯಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿ ಬೆಳಕು ಚೆಲ್ಲುತ್ತದೆ. ಅಜಿತ್ ಪಿಳ್ಳೈ ಅವರ ಜೊತೆಗಿನ ಇಮೇಲ್ ಸಂದರ್ಶನದಲ್ಲಿ ಲೇಖಕರು ತಮ್ಮ ಹೊಸ ಪುಸ್ತಕದ ಬಗ್ಗೆ ಮತ್ತು ಇತಿಹಾಸ ಬರೆಯುವ ತಮ್ಮ ಗೀಳಿನ ಬಗ್ಗೆ ಮಾತಾಡಿದ್ದಾರೆ.

ಇತಿಹಾಸ ಕಥನದ ಬರವಣಿಗೆಯತ್ತ ನಿಮ್ಮನ್ನು ಸೆಳೆದದ್ದು ಏನು? ಗತವನ್ನು ಮರುಪರಿಶೀಲನೆ ಮಾಡುವಂತೆ ನಿಮ್ಮನ್ನು ಪ್ರಚೋದಿಸಿದ್ದು ಏನು?

ಚಾರಿತ್ರಿಕ ಕತೆಗಳಲ್ಲಿರುವ ಶಕ್ತಿಯೇ ನನ್ನನ್ನು ಪ್ರೇರೇಪಿಸಿತು ಎಂದೆನಿಸುತ್ತದೆ. ಕುತೂಹಲಕಾರಿ ಕತೆಗಳನ್ನು ಕೇಳುತ್ತಲೇ ಬೆಳೆದವನು ನಾನು. ಗ್ರಾಮೀಣ ಕೇರಳದ ಬಡತನದ ಬೇಗೆಯಲ್ಲಿ ಬೇಯ್ದ ನನ್ನ ತಂದೆಯ ಬದುಕಿನ ಕತೆಯಿಂದ ಮೊದಲುಗೊಂಡು, ತಮ್ಮ ಗಂಡಂದಿರನ್ನು ಭಯಭೀತಗೊಳಸಿದ್ದ ಮಾತೃಪ್ರಧಾನ ಕುಟುಂಬಗಳ ಮುಖ್ಯಸ್ಥೆಯರಿಂದ ಹಿಡಿದು, ಅಸಂಖ್ಯ ಅಕ್ರಮ ಮಕ್ಕಳನ್ನು ಹೊಂದಿದ್ದ ರಸಿಕ ಹಿರಿಯಜ್ಜಂದಿರ ಬಗ್ಗೆ ಹರಡಿದ್ದ ಗಾಳಿಸುದ್ದಿಗಳ ತನಕ ಅನೇಕ ಥರದ ಕತೆಗಳನ್ನು ಕೇಳುತ್ತ ಬೆಳೆದಿದ್ದೇನೆ. ನನಗೆ ಇತಿಹಾಸ ಎಂದರೆ ಜನರೊಂದಿಗೆ ಅನ್ಯೋನ್ಯವಾಗಿ ಬೆಸೆದುಕೊಂಡಿರುವ ವಿಷಯವೇ ಹೊರತು ಕೇವಲ ಘಟನೆಗಳ, ತಾರೀಖುಗಳ ವಿವರಣೆಯಲ್ಲ. ನಾನು ಬೆಳೆದಂತೆ, ಇತಿಹಾಸದ ಬಗೆಗಿನ ನನ್ನ ಆಸಕ್ತಿಯು ನನ್ನನ್ನು ಕೆಲವು ವಿದ್ವತ್ಪೂರ್ಣ ಪುಸ್ತಕಗಳತ್ತ ಮಾತ್ರವಲ್ಲದೆ, ಲಾವಣ್ಯಮಯವಾಗಿ ಬರೆದ ಅದ್ಭುತ ಕಾಲ್ಪನಿಕ-ಕತೆಯೇತರ ಪುಸ್ತಕಗಳನ್ನೂ ಪರಿಚಯಿಸಿತು. ಈ ಎರಡು ಭಿನ್ನ ಬರವಣಿಗೆಯ ಶೈಲಿಗಳನ್ನು ಸಮ್ಮಿಳಿಸಿ ವರ್ತಮಾನದಲ್ಲಿರುವವರಿಗೆ ಚರಿತ್ರೆಯನ್ನು ಕಟ್ಟಿಕೊಟ್ಟರೆ ಅದ್ಭುತವಾಗಿರುತ್ತದೆ ಎನ್ನಿಸಿತು.

ಆರಂಭದಲ್ಲಿ ಕತೆ ಹೇಳುವ ನನ್ನ ಗೀಳಿಗೆ ಬಲಿಯಾದವರು ನನ್ನ ಸ್ನೇಹಿತರು. ಸ್ವಲ್ಪ ದಿನ ನನ್ನ ಚಿತ್ರಹಿಂಸೆಯನ್ನು ಅವರೆಲ್ಲ ಸಹಿಸಿಕೊಂಡರು. ಆದರೆ, ಕತೆ ಹೇಳುವ ನನ್ನ ಹವ್ಯಾಸಕ್ಕೆ ಬರವಣಿಗೆಯೇ ಸೂಕ್ತ ಮಾಧ್ಯಮ ಎಂಬುದನ್ನು ಬೇಗನೆ ಅರಿತುಕೊಂಡೆ; ಜನರೂ ತಮಗೆ ಅನುಕೂಲವಾದ ಸಮಯದಲ್ಲಿ, ತಮಗೆ ಅನುಕೂಲವಾದ ವೇಗದಲ್ಲಿ ಕತೆಗಳನ್ನು ಓದಿ ಅರ್ಥ ಮಾಡಿಕೊಳ್ಳುವುದಕ್ಕೂ ಅದರಿಂದ ಸಾಧ್ಯ ಎಂಬುದನ್ನು ಮನಗಂಡೆ. ಅದಾದ ಮೇಲೆ, ನಾನು ಮುಂದೆ ಏನು ಮಾಡಬೇಕು, ಚರಿತ್ರೆ ಮತ್ತು ಬರವಣೆಗೆಗಳನ್ನು ಹೇಗೆ ಎದುರುಗೊಳ್ಳಬೇಕು ಎಂಬುದನ್ನು ಯೋಜಿಸುವುದಕ್ಕೆ ಬಹಳ ಸಮಯ ಹಿಡಿಯಲಿಲ್ಲ.

ನಿಮ್ಮ ಮೇಲೆ ಪ್ರಭಾವ ಬೀರಿದ ಇತಿಹಾಸತಜ್ಞರು ಮತ್ತು ಬರೆಹಗಾರರು ಯಾರು?

ಅಂತಹ ಯಾವುದೇ ನೆಚ್ಚಿನ ಇತಿಹಾಸತಜ್ಞರು ಅಥವಾ ಬರೆಹಗಾರರು ನನಗಿಲ್ಲ. ನಾನು ಎಲ್ಲ ರೀತಿಯ ಪುಸ್ತಕಗಳಿಗೆ ಮುಕ್ತವಾಗಿ ತೆರೆದುಕೊಂಡಿದ್ದೇನೆ. ನಾನು ಓದಿದ್ದೆಲ್ಲವೂ ನನ್ನಲ್ಲಿ ತನ್ನ ಗಾಢ ಪ್ರಭಾವ ಬೀರಿದೆ. ಫುಲೆ ಮತ್ತು ಅಂಬೇಡ್ಕರ್ ಅವರನ್ನು ಓದುತ್ತ ಬಹಳಷ್ಟನ್ನು ಕಲಿತೆ. ರಾಮಚಂದ್ರ ಗುಹಾ ಅವರ ‘ಇಂಡಿಯಾ ಆಫ್ಟರ್ ಗಾಂಧಿ’ ಪುಸ್ತಕದಂತಹ ಉತ್ತಮ ಕೃತಿಗಳು ಆಧುನಿಕ ಭಾರತದ ಬಗೆಗಿನ ನನ್ನ ತಿಳಿವಳಿಕೆಯನ್ನು ಶ್ರೀಮಂತಗೊಳಿಸಿವೆ. ಶಶಿ ತರೂರ್ ಅವರ ಜೊತೆ ಕಾರ್ಯನಿರ್ವಹಿಸುವ ಮುನ್ನವೇ ಅವರ ‘ದಿ ಗ್ರೇಟ್ ಇಂಡಿಯನ್’ ಕಾದಂಬರಿ ಓದಿ ಬಹಳ ಆನಂದಿಸಿದ್ದೆ. ಆಧುನಿಕ ಭಾರತವನ್ನು ಮಹಾಭಾರತದ ಮೂಲಕ ವಿವರಿಸುವ ಅದರ ಶೈಲಿ ನನ್ನನ್ನು ಅವುಬ್ರೆ ಮೆನನ್ ಅವರ ರಾಮಾ ರೀಟೊಲ್ಡ್ (ರಾಮಾಯಣವನ್ನು ವಿಡಂಬನೆ ಮಾಡಿದ್ದಕ್ಕಾಗಿ ನಿಷೇಧಕ್ಕೊಳಗಾದ ದೇಶದ ಮೊಟ್ಟಮೊದಲ ಪುಸ್ತಕಗಳಲ್ಲಿ ಒಂದು) ಪುಸ್ತಕವನ್ನು ಓದುವಂತೆ ಮಾಡಿತು. ಇವುಗಳ ಜೊತೆಗೆ, ಶುನ್ಗುನಿ ಮೆನನ್, ನೀಲಕಂಠ ಶಾಸ್ತ್ರಿ ಮತ್ತು ಜಾದುನಾಥ್ ಸರ್ಕಾರ್ ಥರದ ವಸಾಹತುಶಾಹಿ ಯುಗದ ಬರೆಹಗಾರರಿಂದ ಹಿಡಿದು ಬೆನೆಡಿಕ್ಟ್ ಆಂಡರ್ಸನ್, ಮೀರಾ ನಂದಾ ಮತ್ತು ಅರುಂಧತಿ ರಾಯ್ ತನಕ ಹಲವರು ನನ್ನನ್ನು ಪ್ರಭಾವಿಸಿದ್ದಾರೆ.

ತಿರುವಾಂಕೂರು ರಾಜವಂಶದ ಚರಿತ್ರೆಯ ಬಗೆಗಿನ ನಿಮ್ಮ ಮೊದಲ ಪುಸ್ತಕ ‘ದ ಐವರಿ ಥ್ರೋನ್’ ಬರೆಯುವುದಕ್ಕೆ ಆರು ವರ್ಷ ಬೇಕಾಯಿತು. ಆದರೆ, ‘ರೆಬೆಲ್ ಸುಲ್ತಾನ್ಸ್’ ಬರೆಯುವುದಕ್ಕೆ ಎರಡು ವರ್ಷಕ್ಕಿಂತ ಕಡಿಮೆ ಸಮಯ ತೆಗೆದುಕೊಂಡಿರಿ. ಅಗತ್ಯವಿದ್ದ ದಸ್ತಾವೇಜುಗಳು, ದಾಖಲೆಗಳು ಮತ್ತು ಸಂಶೋಧನಾ ಬರೆಹಗಳು ಸುಲಭವಾಗಿ ಸಿಕ್ಕಿದ್ದು ಇದಕ್ಕೆ ಕಾರಣವೇ?

‘ದ ಐವರಿ ಥ್ರೋನ್’ ನನ್ನ ಮೊದಲ ಪುಸ್ತಕ. ನಾನದನ್ನು ಬರೆಯಲು ಪ್ರಾರಂಭಿಸಿದಾಗ ನನಗೆ ಹತ್ತೊಂಬತ್ತು ವರ್ಷ ವಯಸ್ಸು. ಅದಕ್ಕಾಗಿ ಮಾಡಿದ ಸಂಶೋಧನೆ ಬಹಳ ಆಳವಾಗಿತ್ತು. ಪತ್ರಗಳು, ಗೌಪ್ಯ ವರದಿಗಳು, ದಿನಚರಿಗಳು ಮತ್ತು ಮೂರು ಖಂಡಗಳಿಂದ ಸಂಗ್ರಹಿಸಿದ ಅಧ್ಯಯನ ಸಾಮಗ್ರಿಗಳನ್ನು ಅದು ಒಳಗೊಂಡಿತ್ತು. ಅಲ್ಲದೆ, ನನ್ನದೇ ಬರೆಹಶೈಲಿಯನ್ನು ನಾನು ವಿಕಾಸ ಮಾಡುತ್ತಿದ್ದೆ. ಕತೆಯ ಮುಖ್ಯ ಪಾತ್ರಧಾರಿಯ ಜೊತೆಗೆ ಅವಳ ಮನಸ್ಸನ್ನೂ ಅರ್ಥಮಾಡಿಕೊಳ್ಳುವುದಕ್ಕೆ, ಅವಳು ಯಾರು ಎಂಬುದನ್ನು ನಿರ್ಧರಿಸುವುದಕ್ಕೆ ಹಾಗೂ ಅವಳು ಹಾಗೇಕೆ ಮಾಡಿದಳು ಎಂಬುದನ್ನು ಅರಿಯುವುದಕ್ಕೆ ಪ್ರಯತ್ನಿಸಿದ್ದೆ. ನಾನು ಹುಟ್ಟುವ ಎಷ್ಟೋ ವರ್ಷಗಳ ಮೊದಲೇ ಸತ್ತುಹೋಗಿದ್ದ ಸಂಕೋಚ ಮತ್ತು ಮೌನ ಸ್ವಭಾವದ ಅವಳ ವ್ಯಕ್ತಿತ್ವವನ್ನು ಕಟ್ಟಿಕೊಡುವುದಕ್ಕೆ ನನ್ನೆದುರು ಕೆಲವು ಸವಾಲುಗಳಿದ್ದವು. ನಾನು ಬರೆಯುವ ಒಂದೊಂದು ವಾಕ್ಯಕ್ಕೂ ಚಾರಿತ್ರಿಕ ದಾಖಲೆಗಳ ಆಧಾರವಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ಇತ್ತು. ‘ರೆಬೆಲ್ಸ್ ಸುಲ್ತಾನ್’ ಬರೆಯುವಾಗ ಸಂಶೋಧನೆಯು ಬಂಡೆಯ ಹಾಗೆ ಗಟ್ಟಿಯಾಗಿರುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಇತ್ತಾದರೂ, ಯಾವುದೇ ಒಬ್ಬ ಚಾರಿತ್ರಿಕ ವ್ಯಕ್ತಿಯ ಮನಸ್ಸಿನೊಳಗೆ ನುಸುಳಿ ಅವರನ್ನು ಅರಿಯಬೇಕಾದ ಅನಿವಾರ್ಯತೆ ಇರಲಿಲ್ಲ. ಅದು ದೀರ್ಘ ಕಾಲಘಟ್ಟದಲ್ಲಿ ಹರಡಿದ ವಿಶಾಲ ಘಟನಾವಳಿಗಳ ಚಿತ್ರಣವಾಗಿತ್ತು, ಪುಸ್ತಕದ ವೇಗ ಹೆಚ್ಚಾಗಿತ್ತು. ಅದು ನಮ್ಮ ಕಾಲಕ್ಕಿಂತ ಬಹಳ ಮುಂಚೆಯೇ ನಡೆದುಹೋದ ಘಟನೆಗಳ ಚಿತ್ರಣವಾಗಿತ್ತು. ಅಂದರೆ, ಮಾಹಿತಿಯ ಸ್ವಭಾವ ಮತ್ತು ಅದನ್ನು ನಾನು ನೋಡುವ ರೀತಿ ನನ್ನ ಮೊದಲನೆಯ ಪುಸ್ತಕಕ್ಕಿಂತ ತೀರಾ ಭಿನ್ನವಾಗಿತ್ತು. ಸಾಮಾನ್ಯೀಕರಿಸಿ ಹೇಳುವುದಾದರೆ, ಡೆಕ್ಕನ್‌ನಲ್ಲಿ ನಾನು ಪ್ರವಾಸ ಮಾಡಿದಾಗೆಲ್ಲ ಅಥವಾ ಯಾವುದಾದರೊಂದು ಸ್ಮಾರಕವನ್ನು ಎದುರುಗೊಂಡಾಗ ಟಿಪ್ಪಣಿಗಳನ್ನು ಬರೆದಿಟ್ಟುಕೊಳ್ಳುತ್ತಿದ್ದೆ. ೨೦೧೬ರಲ್ಲಿ ನಾನು ಗೋಲ್ಕೊಂಡಾ ಮತ್ತು ಕುತುಬ್‌ಶಾಹಿ ಗೊಮ್ಮಟಗಳನ್ನು ನೋಡಿದಾಗ ಈ ವಿಷಯದ ಬಗ್ಗೆ ಕಿರುಹೊತ್ತಿಗೆಯೊಂದನ್ನು ಬರೆಯುವ ಆಲೋಚನೆ ಮಾಡಿದೆ.

ಇಲ್ಲೊಂದು ವೈಯಕ್ತಿಕ ವಿಷಯವೂ ಇತ್ತು. ‘ದಿ ಐವರಿ ಥ್ರೋನ್’ ವಿಷಯದಲ್ಲಿ ೨೦,೦೦೦ ಪದಗಳಿರುವ ಉದ್ದನೆಯ ಅಧ್ಯಾಯಗಳನ್ನು ಬರೆಯುವುದು ಅಭ್ಯಾಸವಾಗಿತ್ತಲ್ಲದೆ, ಅತ್ಯಂತ ಸಣ್ಣ-ಸಣ್ಣ ವಿಷಯಗಳನ್ನೂ ಒಳಗೊಂಡಂತೆ ವಿಷಯವನ್ನು ವಿವರವಾಗಿ ಕಟ್ಟಿಕೊಡುವ ಕೌಶಲ್ಯವನ್ನೂ ರೂಢಿಸಿಕೊಂಡಿದ್ದೆ. ಆರು ವರ್ಷಗಳ ಕಾಲ ಕಟ್ಟಿಕೊಂಡಿದ್ದ ನಿರ್ದಿಷ್ಟ ಬರವಣಿಗೆಯ ಶೈಲಿಯನ್ನು ಮುರಿದು ಈಗ ಭಿನ್ನ ರೀತಿಯ ಪುಸ್ತಕವನ್ನು ಭಿನ್ನ ಶೈಲಿಯಲ್ಲಿ, ಭಿನ್ನ ಉದ್ದೇಶದೊಂದಿಗೆ ಬರೆಯಬೇಕೆನ್ನಿಸಿತು. ‘ರೆಬೆಲ್ ಸುಲ್ತಾನ್ಸ್’ ಕೃತಿಯ ಗುರಿ ಸರಳವಾಗಿದೆ- ಶ್ರೀಮಂತವಾಗಿರುವ ಶಿವಾಜಿ-ಪೂರ್ವ ಚರಿತ್ರೆಯನ್ನು ಜನಪ್ರಿಯ ಶೈಲಿಯಲ್ಲಿ ಮರುನಿರ್ಮಿಸಿಕೊಡುವುದು. ೫೦ ಪುಟಗಳ ಟಿಪ್ಪಣಿಯು ಹೆಚ್ಚಿನ ವಿವರಗಳನ್ನು ಕೆದಕುವುದಕ್ಕೆ ಅಥವಾ ಅವುಗಳನ್ನು ವಿವರಿಸುವ ಪುಸ್ತಕಗಳನ್ನು ಓದುವುಕ್ಕೆ ಆಸಕ್ತ ಓದುಗರನ್ನು ಪ್ರೇರೇಪಿಸಬಹುದು. ನನ್ನ ಉದ್ದೇಶವಿದ್ದದ್ದು ಒಂದು ಸಂಕ್ಷಿಪ್ತ ಪಕ್ಷಿನೋಟವನ್ನು ಒದಗಿಸುವುದು, ಮಹಾಕಥನವನ್ನು ಮರುನಿರ್ವಚಿಸುವುದು. ‘ದಿ ಐವರಿ ಥ್ರೋನ್’ ಪುಸ್ತಕವು ಒಂದು ರಾಜವಂಶದ ಕತೆಯನ್ನು, ಅದರ ಪೂರ್ವಾಪರಗಳನ್ನು, ಅದು ನಡೆದುಬಂದ ಹಾದಿಯನ್ನು ಮತ್ತು ಅದರ ವೈಭವ ಮತ್ತು ಹಗರಣಗಳ ಚಿತ್ರಣವನ್ನು ಕಟ್ಟಿಕೊಡುತ್ತದೆಯಾದರೆ, ‘ರೆಬೆಲ್ ಸುಲ್ತಾನ್ಸ್’ ಆ ರೀತಿಯಲ್ಲಿ ಯಾವುದೇ ಒಂದು ನಿರ್ದಿಷ್ಟ ರಾಜಮನೆತನಕ್ಕೆ ಸೇರಿದ ವಿವರಗಳಿಗಷ್ಟೇ ಸೀಮಿತವಾಗಿಲ್ಲ.

ಮೊಘಲರ ಬಗ್ಗೆ ಬೇಕಾದಷ್ಟು ಬರೆಯಲಾಗಿದೆ. ಚರಿತ್ರೆಗಳನ್ನೂ ಬರೆಯಲಾಗಿದೆ, ಅದನ್ನಾಧರಿಸಿ ಕತೆಗಳನ್ನೂ ಬರೆಯಲಾಗಿದೆ. ಆದರೆ, ದಕ್ಷಿಣದ ರಾಜ್ಯಗಳ ಬಗ್ಗೆ ಮತ್ತು ಸುಲ್ತಾನರ ಬಗ್ಗೆ ಬರೆದಿರುವುದು ಕಡಿಮೆ. ಬರೆದಿದ್ದೂ ಶಿವಾಜಿಗೆ ಸೀಮಿತವಾಗಿದೆ ಎನ್ನಿಸುತ್ತದೆ. ಇತರ ಆಡಳಿತಗಾರರನ್ನು ಮತ್ತು ರಣಧೀರರನ್ನು ಕಡೆಗಣಿಸಿರುವುದಕ್ಕೆ ಅಥವಾ ಅವರ ಬಗ್ಗೆ ಹೆಚ್ಚು ಗಮನ ಕೊಡದಿರುವುದಕ್ಕೆ ಏನು ಕಾರಣವಿರಬಹುದು ಎಂದು ನಿಮಗನ್ನಿಸುತ್ತದೆ?

ಇತಿಹಾಸ ಬರೆಯುವಲ್ಲಿರುವ ಸಾಮಾನ್ಯ ರಾಜಕೀಯ ಕೂಡ ಒಂದಷ್ಟು ಮಟ್ಟಿಗೆ ಇದಕ್ಕೆ ಕಾರಣ. ಉದಾಹರಣೆಗೆ, ಇತಿಹಾಸ ಬರವಣಿಗೆಯಲ್ಲಿ ಉತ್ತರ ಭಾರತದ ಗಾಢ ಛಾಯೆ ಇದೆ. ಹಾಗಾಗಿ, ಜನಪ್ರಿಯ ಚರಿತ್ರೆಯಲ್ಲಿ ತನ್ನಿಂದ ತಾನೇ ಎಲ್ಲವೂ ಉತ್ತರ ಭಾರತದ ಸುತ್ತವೇ ಗಿರಕಿ ಹೊಡೆಯುತ್ತದೆ. ಔರಂಗಜೇಬನಿಗೆ ದಿಟ್ಟವಾಗಿ ಸಡ್ಡು ಹೊಡೆದ ಶಿವಾಜಿಯ ದಕ್ಷಿಣ ಕಂಡಾಗ ಅದು ಮೊಘಲರ ಮಸಣದಂತೆ ಕಾಣುತ್ತದೆ, ಉಳಿದದ್ದೆಲ್ಲವೂ ನಗಣ್ಯ. ಇಲ್ಲೂ ಶಿವಾಜಿಯ ಸುತ್ತ ಒಂದು ರಾಜಕೀಯವಿದೆ. ಹೊಸ ಮುನ್ನೋಟಗಳ, ಹಲವು ಪದರಗಳ ಮತ್ತು ಆಕರ್ಷಕ ಬದುಕಿನ ಗಮನಾರ್ಹ ಚಾರಿತ್ರಿಕ ವ್ಯಕ್ತಿಯಾಗಿದ್ದ ಶಿವಾಜಿಯನ್ನು ರಾಜಕೀಯ ಕಾರಣಗಳಿಗೋಸ್ಕರ ಆತನ ಬದುಕಿನ ಕೆಲವು ಆಯಾಮಗಳಿಗಷ್ಟೇ ಇಳಿಸಿ ಕುಬ್ಜನನ್ನಾಗಿಸಲಾಗಿದೆ. ಕೆಲವು ರಾಜಕೀಯ ಪಕ್ಷಗಳಿಗೆ ಶಿವಾಜಿ ಕಾಮಧೇನುವಾಗಿದ್ದು, ಅವನನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳ್ಳುತ್ತಿವೆ. ಇದರಲ್ಲಿ ರಾಜಕೀಯ ಬೆರೆತಿರುವುದರಿಂದ ನಾವೀಗ ಶಿವಾಜಿಯ ಕತೆಯನ್ನೇ ಹೆಚ್ಚಾಗಿ ಕೇಳುತ್ತಿದ್ದೇವೆ. ಉಳಿದ್ದೆಲ್ಲವೂ ಅವನ ನೆರಳಿನಲ್ಲಿ ಮರೆಯಾಗಿಬಿಟ್ಟಿದೆ. ಈಗಾಗಲೇ ಶಿವಾಜಿಯ ಬಗ್ಗೆ ನೂರಾರು ಪುಸ್ತಕಗಳಿರುವುದರಿಂದ ಹಾಗೂ ಆತನ ಬದುಕಿನ ಬಗ್ಗೆ ಉತ್ತಮ ಇತಿಹಾಸತಜ್ಞರು ಅತ್ಯುತ್ತಮವಾಗಿ ಬರೆದಿರುವುದರಿಂದ ನಾನು ಮತ್ತೆ ಶಿವಾಜಿಯ ಬಗ್ಗೆ ನನ್ನ ಪುಸ್ತಕದಲ್ಲಿ ಪ್ರತ್ಯೇಕ ಅಧ್ಯಾಯ ಬರೆಯುವುದಕ್ಕೆ ಹೋಗಿಲ್ಲ. ಅದರ ಬದಲಿಗೆ, ಎಚ್ ಕೆ ಶೇರ್ವಾನಿ ಮತ್ತು ಪಿ ಎಂ ಜೋಶಿಯವರಿಂದ ಹಿಡಿದು ರಿಜರ್ಡ್ ಈಟನ್ ಮತ್ತು ಸಂಜಯ್ ಸುಬ್ರಮಣಿಯಂ ಅವರ ತನಕ ಹೊಸ ಚರಿತ್ರೆಕಾರರು ಬರೆದ ದಕ್ಷಿಣದ ಆರಂಭಿಕ ಚರಿತ್ರೆಯ ಮೇಲೆ ಹೆಚ್ಚು ಗಮನ ಕೊಟ್ಟು ಶಿವಾಜಿಯ ಉಗಮಕ್ಕೆ ಕಾರಣವಾದ ಅಂಶಗಳನ್ನು ವಿವರಿಸುವುದಕ್ಕೆ ಹಾಗೂ ಬೇರೆಯವರ ಕತೆಗಳಲ್ಲಿ ಕೇವಲ ಅಡಿಟಿಪ್ಟಣಿ ಆಗುವುದಕ್ಕಷ್ಟೇ ಅಲ್ಲದೆ, ಅದಕ್ಕಿಂತಲೂ ಹೆಚ್ಚಿನ ಮಹತ್ವವಿರುವ ಚಾರಿತ್ರಿಕ ವ್ಯಕ್ತಿಗಳನ್ನು ಪುನರ್‌ಸ್ಥಾಪಿಸಿಕೊಡಲು ಪ್ರಯತ್ನ ಮಾಡಿದ್ದೇನೆ.

ಭಾರತದಲ್ಲಿ ಮುಸ್ಲಿಮರ ಆಡಳಿತವನ್ನು ವರ್ಣಿಸುವಾಗ ಇತಿಹಾಸಕಾರರು ಅನೇಕ ಸಲ ಅತಿರೇಕದ ನಿಲುವುಗಳನ್ನು ತಾಳುತ್ತಾರೆ. ಕೆಲವರು ಈ ಅವಧಿಯನ್ನು ಹಿಂದೂ ಮತ್ತು ಇಸ್ಲಾಮಿಕ್ ಸಂಸ್ಕೃತಿಗಳು ಪರಸ್ಪರ ಕೊಡುಕೊಳ್ಳುವಿಕೆಯನ್ನು ನಡೆಸಿ ಇಬ್ಬರಿಗೂ ಅನುಕೂಲವಾಗುವ ಸಾಮರಸ್ಯ ಸಂಬಂಧವನ್ನು ರೂಪಿಸಿದ ಕಾಲಘಟ್ಟ ಎಂದು ನೋಡುತ್ತಾರೆ. ಮತ್ತೆ ಕೆಲವರು, ಎಲ್ಲ ರೀತಿಯ ಪಿಡುಗುಗಳಿಗೆ ಅದೇ ಕಾರಣ ಎಂದು ನಂಬುತ್ತಾರೆ. ದಕ್ಷಿಣದ ಮುಸ್ಲಿಂ ರಾಜರ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಸ್ವಲ್ಪ ವಿರಾಮ ತೆಗೆದುಕೊಂಡು ತಾಜಾ ದೃಷ್ಟಿಯಿಂದ ಹಿಂದಕ್ಕೆ ನೋಡಬೇಕು ಎಂದು ನನಗನ್ನಿಸುತ್ತದೆ. ಆ ಕಾಲದಲ್ಲಿ ಹಿಂದೂ-ಮುಸ್ಲಿಮರ ನಡುವೆ ಹಿಂಸೆಯೇ ಪ್ರಧಾನ ಧಾರೆಯಾಗಿತ್ತು ಎಂದು ಹೇಳುವುದು ಹೇಗೆ ತಪ್ಪಾಗುತ್ತದೆಯೋ ಅದೇ ರೀತಿಯಲ್ಲಿ, ಹಿಂದೂ-ಮುಸ್ಲಿಂ ಸಂಬಂಧಗಳು ಯಾವುದೇ ಹಿಂಸೆಯಿಲ್ಲದೆ ಸಂಪೂರ್ಣವಾಗಿ ಸಾಮರಸ್ಯದಿಂದ ಕೂಡಿದ್ದವು ಎಂದು ಹೇಳುವುದೂ ತಪ್ಪಾಗುತ್ತದೆ. ನಮಗೆ ಕಾಣುವುದು ಅವೆರಡರ ಮಿಶ್ರಣ. ಅಂದೂ ಮತ್ತು ಇಂದೂ, ಎಂದೆಂದೂ ಬದುಕು ಕಪ್ಪು-ಬಿಳುಪಿನಂತೆ ಸ್ಪಷ್ಟವಾಗಿರುವುದಿಲ್ಲ. ಹಿಂದಿನ ದಿನಗಳಲ್ಲಿ ರಾಜಕೀಯವನ್ನು ಬಹಳಷ್ಟು ಸಲ ಧಾರ್ಮಿಕ ದೃಷ್ಟಿಕೋನದಿಂದಲೇ ನೋಡಲಾಗುತ್ತಿತ್ತು. ಹಾಗಾಗಿ, ನಾವು ಚಾರಿತ್ರಿಕ ಪಠ್ಯಗಳನ್ನು ಮತ್ತು ಸಾಹಿತ್ಯಿಕ ಮೂಲಗಳನ್ನು ಅವುಗಳ ಮುಖಬೆಲೆಯಿಂದಷ್ಟೇ ಅಳೆದರೆ ನಾಸ್ತಿಕರನ್ನು ಹೇಗೆ ಭೂಮಿಯಿಂದಲೇ ನಿರ್ನಾಮ ಮಾಡಲಾಯಿತು, ಟರ್ಕರು ಹೇಗೆ ದಮನಕಾರಿಯಾಗಿದ್ದರು, ಹಿಂದೂ ರಾಜರು ಹೇಗೆ ಮಸೀದಿಗಳನ್ನು ಕೆಡವಿದರು ಇತ್ಯಾದಿ ಇತ್ಯಾದಿ ಉತ್ಪ್ರೇಕ್ಷಾಮಯ ವಿವರಣೆಗಳೇ ಕಾಣುತ್ತವೆ. ಪಠ್ಯಗಳು ಚರಿತ್ರೆಗೆ ಸಮರ್ಥನೆಗಳಾಗಿರುತ್ತವೆ ಎಂಬುದು ನಿಜವಾದರೂ ಅವು ಘಟಿಸಿದ ಸತ್ಯದ ಪ್ರತಿಬಿಂಬಗಳಲ್ಲ.

ವಿಜಯನಗರವು ಸಂಸ್ಕೃತ ಹಿಂದೂ ಪರಿಭಾಷೆಯಲ್ಲಿ ತನ್ನ ಸ್ವಯಂ-ಚಿತ್ರಣವನ್ನು ರೂಪಿಸಿಕೊಂಡು, ತನ್ನನ್ನು ತಾನು ಹಿಂದೂ ಎಂದು ಧನಾತ್ಮಕವಾಗಿ ನಿರ್ವಚಿಸಿಕೊಂಡಾಗಲೂ ಅದು ಇಸ್ಲಾಮಿನ ವಾಣಿಜ್ಯಿಕ ಜಾಲದೊಂದಿಗೆ ವ್ಯವಹರಿಸುತ್ತಿತ್ತು, ಪರ್ಶಿಯನ್ ಪ್ರಭಾವಗಳನ್ನು ಹೀರಿಕೊಳ್ಳುತ್ತಿತ್ತು, ಮುಸ್ಲಿಮರನ್ನು ಸಾವಿರಾರು ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುತ್ತಿತ್ತು, ಅಷ್ಟೇ ಏಕೆ, ತನ್ನ ರಾಜರನ್ನು ಹಿಂದೂ ಸುಲ್ತಾನರು ಎಂದು ಕರೆದುಕೊಳ್ಳುತ್ತಿತ್ತು. ಅದೇ ರೀತಿಯಲ್ಲಿ, ತಮ್ಮ ಭಾಷೆ ಮತ್ತು ಇಸ್ಲಾಮಿನ ಪ್ರತಿಮೆಗಳನ್ನು ನಿರ್ವಚಿಸಿಕೊಂಡಿದ್ದ ದಕ್ಷಿಣದ ಮುಸ್ಲಿಂ ಸುಲ್ತಾನರು ತಮ್ಮ ಆಡಳಿತಾಂಗವನ್ನು ಮರಾಠರು, ಬ್ರಾಹ್ಮಣರು ಮತ್ತು ಬೇಕಾದಷ್ಟು ಹಿಂದೂಗಳನ್ನು ನೇಮಿಸಿಕೊಂಡು ರಚಿಸಿದ್ದರು. ಯುದ್ಧದ ಸಮಯದಲ್ಲಿ ಬಹಮನಿ ಸುಲ್ತಾನನೊಬ್ಬ ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿರಬಹುದು. ಅಂದಮಾತ್ರಕ್ಕೆ ಅದೇ ರಾಜವಂಶಸ್ಥನೊಬ್ಬ ಭಕ್ತಿ ಸನ್ಯಾಸಿಯಾಗಿ ಅದೈತ ಸಿದ್ಧಾಂತದ ಅನುಯಾಯಿಯಾಗದಂತೆ ತಡೆಯುವುದಕ್ಕೆ ಸಾಧ್ಯವಾಗಲಿಲ್ಲ. ಅದೇ ರೀತಿಯಲ್ಲಿ, ವಿಜಯನಗರದ ರಾಮರಾಯ ತನ್ನ ದಂಡಯಾತ್ರೆಗಳ ಸಮಯದಲ್ಲಿ ಮಸೀದಿಗಳನ್ನು ಕೆಡಿಸಿದ್ದಿರಬಹುದು. ಆದರೆ, ಆತ ತನ್ನ ಆಡಳಿತ-ಭವಿತವ್ಯವನ್ನು ಪ್ರಾರಂಭಿಸಿದ್ದೇ ಸುಲ್ತಾನನೊಬ್ಬನ ಆಸ್ಥಾನದಲ್ಲಿ; ಈ ದಂಡಯಾತ್ರೆಗಳಲ್ಲಿ ತನ್ನ ಸೈನ್ಯವನ್ನು ಮುನ್ನಡೆಸುವುದಕ್ಕೆ ಆತ ಮುಸ್ಲಿಮರನ್ನೇ ಸೇನಾನಾಯಕರನ್ನಾಗಿ ನೇಮಿಸಿಕೊಂಡಿದ್ದ. ಅವರಿಗೆ ಇದರಲ್ಲಿ ಅಂತಹ ವ್ಯಂಗ್ಯವೇನೂ ಕಾಣಲಿಲ್ಲ; ಏಕೆಂದರೆ ಅವರು ಬದುಕಿದ್ದೇ ಅಂತಹ ಯುಗದಲ್ಲಿ. ಆದರೆ, ಈ ಯುಗದಲ್ಲಿ ಬದುಕಿರುವ ನಾವು ನಮ್ಮ ಆತಂಕಗಳನ್ನು ಸಾಂತ್ವನಗೊಳಿಸಿಕೊಳ್ಳಲು ಕೆಲವು ನಿರ್ದಿಷ್ಟ ವಿಧಾನಗಳಲ್ಲಿ ಚರಿತ್ರೆಯನ್ನು ವಿವರಿಸುವುದಕ್ಕೆ ಪ್ರಯತ್ನಪಡುತ್ತಿದ್ದೇವೆ. ಹೀಗಾಗಿ, ಚಾರಿತ್ರಿಕ ವ್ಯಕ್ತಿಗಳು ಬದುಕಿದ ಸನ್ನಿವೇಶಗಳನ್ನು ನಿಜವಾದ ಪ್ರೌಢಿಮೆಯೊಂದಿಗೆ ಅರ್ಥ ಮಾಡಿಕೊಳ್ಳುವುದನ್ನು ಬಿಟ್ಟು ಚರಿತ್ರೆಯ ಕಳಪೆ ಅನುಕರಣೆಯೊಂದಿಗೆ ಹಾಗೂ ವರ್ತಮಾನದ ನಮ್ಮ ವೈಫಲ್ಯಗಳಿಗೆ ಚರಿತ್ರೆಯಿಂದ ಸಮರ್ಥನೆಗಳನ್ನು ಹುಡುಕುವುದರೊಂದಿಗೆ ನಮ್ಮ ಪ್ರಯತ್ನ ಕೊನೆಯಾಗುತ್ತದೆ.

ನಿಮ್ಮ ಪುಸ್ತಕದಲ್ಲಿ ಕೆಲವು ಮನಮೋಹಕ ಪಾತ್ರಗಳಿವೆ. ಉದಾಹರಣೆಗೆ, ಎರಡನೇ ಇಬ್ರಾಹಿಂ. ಅವನು ತನ್ನನ್ನು ಗುರು ಗಣಪತಿ ಮತ್ತು ತಾಯಿ ಸರಸ್ವತಿಯ ಪುತ್ರ ಎಂದು ಹೇಳಿಕೊಳ್ಳುತ್ತಾನೆ; ರುದ್ರಾಕ್ಷಿ ಮಾಲೆಯನ್ನೂ ಹಾಕಿಕೊಳ್ಳುತ್ತಾನೆ. ದಕ್ಷಿಣದ ಅಕ್ಬರ್‌ನಂತೆ ಕಾಣುತ್ತಾನೆ ಅಥವಾ ಅವನಿಗೆ ಆ ಸ್ಥಾನಮಾನ ನೀಡುವುದು ತಪ್ಪಾಗುತ್ತದೆಯೆ? ಕೆಲವರು ಹೇಳುವ ಪ್ರಕಾರ, ಎರಡನೇ ಇಬ್ರಾಹಿಂ ಸ್ಥಳೀಯ ಸಂಸ್ಕೃತಿ, ಧರ್ಮ, ಭಾಷೆಗಳನ್ನು ಮೈಗೂಡಿಸಿಕೊಂಡು ಕಲೆಗೆ ಪ್ರೋತ್ಸಾಹ ನೀಡಿದ ಮತ್ತೊಬ್ಬ ನಿರಂಕುಶಪ್ರಭುವಷ್ಟೇ ಎಂದು ಹೇಳಬಹುದೇ?

ಎಲ್ಲರೂ ನಿರಂಕುಶ ಪ್ರಭುಗಳೇ. ನಾನು ಸರ್ವಾಧಿಕಾರಿಯೊಬ್ಬನ ಶುದ್ಧೀಕರಣ ಮಾಡುತ್ತಿದ್ದೇನೆ ಎಂದು ಟ್ವಿಟರ್‌ನಲ್ಲಿ ಹಿರಿಯ ಗಣ್ಯರೊಬ್ಬರು ಹೇಳಿಕೊಂಡಿದ್ದರು ಒಮ್ಮೆ. ಆದರೆ, ಪ್ರಶ್ನೆ ಏನೆಂದರೆ, ಆ ಸಮಯದಲ್ಲಿ ಯಾರು ಸರ್ವಾಧಿಕಾರಿಯಾಗಿರಲಿಲ್ಲ? ಹಿಂದೂ ರಾಜನಾಗಿರಲಿ ಅಥವಾ ಮುಸ್ಲಿಂ ರಾಜನಾಗಿರಲಿ, ಆ ಸಮಯದಲ್ಲಿದ್ದ ಯಾವ ಆಡಳಿತಗಾರರೂ ಪ್ರಜಾತಂತ್ರವಾದಿಯಾಗಿರಲಿಲ್ಲ. ಹಿಂಸೆ ಮತ್ತು ಅಧಿಕಾರಗಳು ಹೊಕ್ಕಳುಬಳ್ಳಿಯಿಂದ ಬೆಸೆಯಲ್ಪಟ್ಟಿದ್ದವು. ಅಧಿಕಾರಕ್ಕೆ ಗುಪ್ತ ಹಿಂಸೆಯ ಅವಶ್ಯಕತೆ ಇಲ್ಲ, ಬಹಿರಂಗ ಮತ್ತು ಪ್ರದರ್ಶನಾತ್ಮಕ ಹಿಂಸೆಯ ಅವಶ್ಯಕತೆ ಇತ್ತು (ಭಾರತೀಯ ಚರಿತ್ರೆಯಲ್ಲಿನ ಹಿಂಸೆಯ ಬಗ್ಗೆ ಉಪಿಂದರ್ ಸಿಂಗ್ ಅದ್ಭುತ ಪುಸ್ತಕವೊಂದನ್ನು ಬರೆದಿದ್ದಾರೆ). ಹಾಗಾಗಿ, ರಾಜನಾದವನು ಕೇವಲ ಉದಾರಿಯಾಗಿದ್ದರೆ ಸಾಕಾಗುತ್ತಿರಲಿಲ್ಲ, ಆತ ಸಾರ್ವಜನಿಕವಾಗಿ ಉದಾರಿ ಆಗಿರಬೇಕಾಗುತ್ತಿತ್ತು; ಆತ ಖಾಸಗಿಯಾಗಿ ಶ್ರೀಮಂತನಾಗಿದ್ದರೆ ಸಾಕಾಗುತ್ತಿರಲಿಲ್ಲ, ಸಿಂಹಾಸನದಲ್ಲಿ ಮುಂದುವರಿಯಲು ಆತ ತನ್ನ ಶ್ರೀಮಂತಿಕೆಯನ್ನು ಬಹಿರಂಗವಾಗಿ ಪ್ರದರ್ಶಿಸಬೇಕಾಗುತ್ತಿತ್ತು. ಅದು ಕೋಪದ ವಿಷಯದಲ್ಲೂ ಸತ್ಯ. ವ್ಯಕ್ತಿಗಳ ಬದುಕು ಮತ್ತು ಸಾವುಗಳನ್ನು ನಿರ್ಧರಿಸುವ ತನ್ನ ವಿಶೇಷಾಧಿಕಾರವನ್ನು ಆತ ಬಹಿರಂಗವಾಗಿ ಪ್ರದರ್ಶಿಸಬೇಕಿತ್ತು. ಹಾಗಾಗಿ, ಕವಿಯೂ, ಹಲವು ಧರ್ಮಗಳ ಪ್ರಶಂಸಕನೂ, ಕಲಾಪೋಷಕನೂ ಹಾಗೂ ಹಲವು ನಗರಗಳ ನಿರ್ಮಾತೃವೂ ಆಗಿದ್ದ ಬಿಜಾಪುರದ ಎರಡನೇ ಇಬ್ರಾಹಿಂ ಕೂಡ ತನ್ನ ರಾಜಪ್ರಮುಖನನ್ನೇ ಕುರುಡನನ್ನಾಗಿ ಮಾಡಿದ; ಸ್ವಂತ ಸಹೋದರ ತನ್ನ ವಿರುದ್ಧ ನಿಂತಾಗ ಅವನನ್ನೂ ಕೊಲ್ಲಿಸಿದ. ಹಾಗೆ ಮಾಡಿದ್ದು ಅವನೊಬ್ಬ ಮಾತ್ರವೇ? ಮರಾಠ ಮೋರ್ ಕುಟುಂಬದ ಸ್ವಾಧೀನದಲ್ಲಿದ್ದ ಜವಳಿಯ ಮೇಲೆ ಶಿವಾಜಿ ಮಾಡಿದ್ದರ ಬಗ್ಗೆ ಏನು ಹೇಳುತ್ತೀರಿ? ಶಿವಾಜಿಯು ರಾಜತಾಂತ್ರಿಕರ ವೇಷದಲ್ಲಿ ಮಾತುಕತೆಯ ನೆಪ ಮಾಡಿಕೊಂಡು ಕೊಲೆಗಾರರನ್ನು ಜವಳಿಗೆ ಕಳಿಸಿದ್ದ. ಈ ಕೊಲೆಗಾರರಲ್ಲೊಬ್ಬ ಅಲ್ಲಿನ ರಾಜಪ್ರಮುಖನೊಬ್ಬನನ್ನು ಇರಿದು ಕೊಂದ. ಅದೇ ರೀತಿಯಲ್ಲಿ ಎರಡನೇ ಇಬ್ರಾಹಿಂ ಕೂಡ ತನ್ನ ಸಹೋದರನನ್ನು ಕೊಂದ. ವಿಜಯನಗರದ ಸಂಗಮ ರಾಜವಂಶ ಇನ್ನೇನು ಪತನವಾಗುತ್ತಿದ್ದ ಸಮಯದಲ್ಲಿ ವಿಜಯನಗರದ ರಾಜನೊಬ್ಬ ಹೀಗೇ ಮಾಡಿದ್ದ. ಸಾರಾಂಶದಲ್ಲಿ ಹೇಳುವುದಾದರೆ, ಅವರೆಲ್ಲರೂ ನಿರಂಕುಶಾಧಿಕಾರದ ಫಲಗಳು. ಮುಸ್ಲಿಂ ರಾಜರ ಹೆಸರುಗಳನ್ನಷ್ಟೇ ಬೇರ್ಪಡಿಸಿ ಅವರ ತಲೆಗೆ ಮಾತ್ರ ಘಾತಕೃತ್ಯಗಳನ್ನು ಕಟ್ಟುವುದು ಹಾಗೂ ಅದೇ ಕಾಲದಲ್ಲಿ ರಾಜ್ಯವಾಳಿದ ಹಿಂದೂ ರಾಜರನ್ನು ಮರೆಮಾಚುವುದು ಕುಚೇಷ್ಟೆಯಾಗುತ್ತದೆ; ಏಕೆಂದರೆ, ಆ ಕಾಲಘಟ್ಟದಲ್ಲಿದ್ದ ಎಲ್ಲ ಆಡಳಿತಗಾರರೂ ಒಂದೇ ತೆರನಾಗಿದ್ದರು.

ಆ ಗೌರವಾನ್ವಿತ ಹಿರಿಯರೊಬ್ಬರು ಟ್ವಿಟರ್‌ನಲ್ಲಿ ಮಾಡಿದ ತಪ್ಪು ಹಾಗೂ ಸಾಮಾನ್ಯವಾಗಿ ನಾವೆಲ್ಲ ಮಾಡುವ ತಪ್ಪು ಏನೆಂದರೆ, ನಿನ್ನೆಯ ಆಡಳಿತಗಾರರನ್ನು ಅಳೆಯಲು ಇವತ್ತಿನ ಪ್ರಮಾಣಕಗಳನ್ನು ಬಳಸುವುದು. ಅವರು ಭಿನ್ನ ಸನ್ನಿವೇಶದಲ್ಲಿ, ಭಿನ್ನ ಕಾಲಘಟ್ಟದಲ್ಲಿ ಬದುಕಿದ್ದರು. ಅವರಿಗೆ ನ್ಯಾಯ, ರಾಜತ್ವ, ಅಷ್ಟೇ ಏಕೆ ಬದುಕಿನ ಮೌಲ್ಯದ ಬಗ್ಗೆಯೂ ಭಿನ್ನ ತಿಳಿವಳಿಕೆ ಇತ್ತು. ಅವರು ಊಳಿಗಮಾನ್ಯ ಸಾಮಾಜಿಕ ಸಂರಚನೆಯ ಮೇಲೆ ಕುಳಿತು ರಾಜ್ಯಭಾರ ಮಾಡುತ್ತಿದ್ದ ನಿರಂಕುಶಾಧಿಕಾರಿಗಳಾಗಿದ್ದರು. ಆ ಸನ್ನಿವೇಶದೊಳಗೇ ಎರಡನೇ ಇಬ್ರಾಹಿಂ ಮತ್ತು ಶಿವಾಜಿ ಥರದ ಕೆಲವರು ಅಸಾಮಾನ್ಯ ಚಾರಿತ್ರಿಕ ವ್ಯಕ್ತಿಗಳಾಗಿ ಹೊರಹೊಮ್ಮಿದರೆ, ಉಳಿದವರು ಅಷ್ಟೊಂದು ಆಕರ್ಷಕ ವ್ಯಕ್ತಿಗಳಾಗದೆ ತಮ್ಮ ಕಾಲಘಟ್ಟದ ಪಾರಂಪರಿಕ ನಿರಂಕುಶಾಧಿಕಾರಕ್ಕಿಂತ ಮೇಲೇರಿ ಹೆಚ್ಚಿನದನ್ನು ಮಾಡುವಲ್ಲಿ ವಿಫಲರಾದರು. ನೆನಪಿಡಿ, ಅಕ್ಬರ್ ಕೂಡ ತನ್ನ ರಾಜ್ಯಭಾರದ ಆರಂಭಿಕ ಹಂತದಲ್ಲಿ, ಅವನಿನ್ನೂ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದ ಸಮಯದಲ್ಲಿ ಬಹಳ ಕ್ರೂರಿಯಾಗಿದ್ದ. ತನ್ನ ಅಧಿಕಾರ ಗಟ್ಟಿಯಾಗಿ ನೆಲೆಯೂರಿದ ಮೇಲಷ್ಟೇ ಆತ ಬಹಳ ಉದಾರಿಯಾಗಿ ಕಾಣಿಸಿಕೊಂಡಿದ್ದು, ಬೌದ್ಧಿಕ ಚಟುವಟಿಕೆಗಳತ್ತ ಕ್ರಿಯಾಶೀಲವಾಗಿ ವಾಲಿಕೊಂಡಿದ್ದು ಹಾಗೂ ಒಬ್ಬ ಶಕ್ತಿಶಾಲಿ ರಾಜನ ಸ್ಥಾನದಿಂದ ಮೇಲೇರಿ ಮಹಾ ಚಕ್ರವರ್ತಿಯಾಗಿ ಮಾರ್ಪಟ್ಟಿದ್ದು.

ನಿಮ್ಮ ಪುಸ್ತಕವು ದಕ್ಷಿಣದ ಆಡಳಿತಗಾರರನ್ನು ಮೊಘಲರಿಗೆ ಹೋಲಿಸುವ ಪ್ರಯತ್ನ ಮಾಡಿದೆ. ಇಬ್ಬರಲ್ಲೂ ಇದ್ದ ಸಾಮ್ಯತೆ ಮತ್ತು ಭಿನ್ನತೆಗಳೇನು?

ಇಬ್ಬರಲ್ಲೂ ಬಹಳಷ್ಟು ಭಿನ್ನತೆಗಳಿವೆ. ದಕ್ಷಿಣದ ಬಹಳಷ್ಟು ಆಡಳಿತಗಾರರು ಷಿಯಾ ಮುಸ್ಲಿಮರಾದರೆ, ಮೊಘಲರು ಸುನ್ನಿ ಮುಸ್ಲಿಮರಾಗಿದ್ದರು (ಆದರೂ ಅವರು ಅನೇಕ ಷಿಯಾ ವಧುಗಳನ್ನು ವರಿಸಿದ್ದರು ಹಾಗೂ ಷಿಯಾ ಕುಲೀನರನ್ನು ಆಡಳಿತಾಂಗದಲ್ಲಿ ನೇಮಿಸಿಕೊಂಡಿದ್ದರು). ಈ ಸಂಕುಚಿತ ಭಿನ್ನತೆಯೇ ಮುಂದೆ ಔರಂಗಜೇಬನಿಗೆ ತನ್ನ ವಿಸ್ತರಣಾವಾದಿ ದಂಡಯಾತ್ರೆಯನ್ನು ಪಾಷಂಡಿ ರಾಜರ ವಿರುದ್ಧದ ಹೋರಾಟವೆಂದು ಸಮರ್ಥಿಸಿಕೊಳ್ಳುವುದಕ್ಕೆ ನೆರವಾಯಿತು.

ಇದಲ್ಲದೆ, ಅಧಿಕಾರಗಳಲ್ಲಿ ಭಿನ್ನತೆ ಇತ್ತು. ಮೊಘಲರು ಹೆಚ್ಚು ಬಲಿಷ್ಠವಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅವರು ಬಹಳಷ್ಟು ಕಡಲತೀರಗಳನ್ನು ಹೊಂದಿಲ್ಲದ ಸಾಮ್ರಾಜ್ಯವನ್ನು ಆಳುತ್ತಿದ್ದರು. ಸಾಕಷ್ಟು ಕಡಲ ತೀರಗಳನ್ನು ಹೊಂದಿದ್ದ ದಕ್ಷಿಣದ ರಾಜರು ತಮ್ಮ ಬಂದರುಗಳ ಮೂಲಕ ಸುದೀರ್ಘ ಕಾಲದಿಂದ ವಿದೇಶಗಳೊಂದಿಗೆ ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿದ್ದರು. ಅಲ್ಲದೆ, ಅವರು ಪರ್ಷಿಯನ್ ಷಾನ ನೆರವು ಮತ್ತು ಸ್ನೇಹಗಳನ್ನು ಸಂಪಾದಿಸಿದ್ದರೇ ಹೊರತು ಮೊಘಲರನ್ನು ನೆಚ್ಚಿಕೊಂಡಿರಲಿಲ್ಲ. ಸಣ್ಣ ರಾಜರಾಗಿದ್ದರೂ ವ್ಯಾಪಾರದಲ್ಲಿ ಹೂಡಿದ ಬಂಡವಾಳ ಅವರನ್ನು ಬಹಳ ಶ್ರೀಮಂತರನ್ನಾಗಿಯೂ ಹಾಗೂ ಬಲಿಷ್ಠರನ್ನಾಗಿಯೂ ಮಾಡಿತ್ತು. ದಕ್ಷಿಣದ ರಾಜರು ಆಫ್ರಿಕನ್ನರನ್ನು ತಮ್ಮ ಮಿಲಿಟರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸೇರಿಸಿಕೊಂಡಿದ್ದರು. ಉತ್ತರದ ರಾಜ್ಯಗಳ ಸೇನೆಗಳಲ್ಲೂ ಅಲ್ಲಲ್ಲಿ ಆಫ್ರಿಕಾದ ಯೋಧರಿದ್ದರು (ಹದಿಮೂರನೇ ಶತಮಾನದಲ್ಲಿ ರಜಿಯಾ ಸುಲ್ತಾನಳನ್ನು ಕೊಲ್ಲುವುದಕ್ಕೆ ಆಕೆ ಕಪ್ಪು ಸೇನಾಧಿಕಾರಿಯನ್ನು ಪ್ರೀತಿಸುತ್ತಿದ್ದಳು ಎಂಬುದೂ ಒಂದು ಕಾರಣವಾಗಿತ್ತು).

ಮೊಘಲ್ ಮತ್ತು ದಕ್ಷಿಣದ ಸುಲ್ತಾನರಲ್ಲಿ ಬಹಳಷ್ಟು ಸಾಮ್ಯತೆಗಳೂ ಇದ್ದವು. ಹೇಗೆ ಮೊಘಲರು ಸ್ಥಳೀಯ ಸಂಸ್ಕೃತಿಯನ್ನು ಹೀರಿಕೊಳ್ಳುತ್ತ, ರಜಪೂತ ರಾಜಕುಮಾರಿಯರನ್ನು ಮದುವೆಯಾಗುತ್ತ, ಸ್ಥಳೀಯ ಸಮಾಜದೊಳಗೆ ಮಿಳಿತಗೊಂಡರೋ ಹಾಗೆಯೇ, ದಕ್ಷಿಣದ ಸುಲ್ತಾನರೂ ಹಿಂದೂ ಪರಂಪರೆಗಳಿಂದ ಪ್ರೇರಿತಗೊಂಡಿದ್ದರಲ್ಲದೆ ಮರಾಠ ವಧುಗಳನ್ನು ವರಿಸಿದ್ದರು.

ನಿಮ್ಮ ಪುಸ್ತಕದಲ್ಲಿ ಕಾಣಸಿಗುವ ಇನ್ನೊಂದು ಆಕರ್ಷಕ ಪಾತ್ರ ಎಂದರೆ ಮಲಿಕ್ ಅಂಬರ್ ಎಂಬಾತನದ್ದು. ಆಫ್ರಿಕಾ ಮೂಲದ ಗುಲಾಮನಾಗಿದ್ದ ಅಂಬರ್, ರಾಜಕುಮಾರನಂತಹ ಸ್ಥಾನಮಾನಕ್ಕೆ ಏರಿದ ಸೈನ್ಯಾಧಿಕಾರಿಯಾಗಿದ್ದ. ಈತನ ಸೈನ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಮರಾಠ ಸೈನಿಕರಿದ್ದರು. ನಿಧಾನವಾಗಿ ಮುನ್ಸಾಗುತ್ತಿದ್ದ ಮೊಘಲ್ ಸೈನ್ಯದ ವಿರುದ್ಧ ಮೊದಲು ಗೆರಿಲ್ಲಾ ಯುದ್ಧತಂತ್ರ ಅಳವಡಿಸಿ ಹೋರಾಡಿದ್ದು ಈತನೇ ಎಂದು ನಿಮ್ಮ ಪುಸ್ತಕ ಹೇಳುತ್ತದೆ. ಈ ಯುದ್ಧತಂತ್ರವನ್ನು ತದನಂತರದ ದಿನಗಳಲ್ಲಿ ಶಿವಾಜಿ ಪರಿಣಾಮಕಾರಿಯಾಗಿ ಉಪಯೋಗಿಸಿದ. ಈ ಸತ್ಯವನ್ನು ಏಕೆ ಚರಿತ್ರೆಯ ಪಠ್ಯಗಳಿಂದ ಮರೆಮಾಚಲಾಗಿದೆ?

ಉದ್ದೇಶಪೂರ್ವಕವಾಗಿ ಅದನ್ನು ಮರೆಮಾಚಲಾಗಿದೆ ಎಂದು ನನಗನ್ನಿಸುವುದಿಲ್ಲ. ಶಿವಾಜಿಗೆ ಅತಿ ಹೆಚ್ಚು ಮಹತ್ವ ಕೊಟ್ಟ ಕಾರಣದಿಂದಾಗಿ ಅವನ ಹಿಂದಿನವರು ಕಡೆಗಣಿಸಲ್ಪಟ್ಟಿದ್ದಾರಷ್ಟೆ. ವ್ಯಂಗ್ಯ ಏನೆಂದರೆ, ಮಲಿಕ್ ಅಂಬರನನ್ನು ಖುದ್ದು ಶಿವಾಜಿಯೇ ಬಹಳ ಮೆಚ್ಚಿಕೊಂಡಿದ್ದ. ಮಲಿಕ್ ಅಂಬರ್, ತನ್ನ ಮರಾಠ ಸಹಪಾಠಿಗಳ (ಶಿವಾಜಿಯ ಅಜ್ಜ ಮಾಲೋಜಿಯನ್ನೂ ಒಳಗೊಂಡಂತೆ) ಜೊತೆ ಸೇರಿಕೊಂಡು ಮೊಘಲರ ವಿರುದ್ಧ ಗೆರಿಲ್ಲಾ ಯುದ್ಧತಂತ್ರ ಅಭಿವೃದ್ಧಿಗೊಳಿಸಿದ್ದವನು. ನಂತರ ಈ ಯುದ್ಧತಂತ್ರ ಕರಗತ ಮಾಡಿಕೊಂಡದ್ದು ಶಿವಾಜಿ. ಮಲಿಕ್ ಅಂಬರ್‌ನನ್ನು ಏಕೆ ಚರಿತ್ರೆಯ ಪುಸ್ತಕಗಳಿಂದ ಹೊರಗಿಡಲಾಗಿದೆ ಎಂಬ ಪ್ರಶ್ನೆಗೆ ಬಂದರೆ, ಅವನಂತೆಯೇ ಆಕರ್ಷಕವಾಗಿಯೂ ಮತ್ತು ಸಂಕೀರ್ಣವಾಗಿಯೂ ಇದ್ದ ಅನೇಕ ಚಾರಿತ್ರಿಕ ವ್ಯಕ್ತಿಗಳನ್ನೂ ಹಾಗೂ ಮನಮೋಹಕವಾಗಿರುವ ಚಾರಿತ್ರಿಕ ಕತೆಗಳನ್ನೂ ಇತಿಹಾಸ ಪುಸ್ತಕಗಳಿಂದ ಹೊರಗಿಡಲಾಗಿದೆ. ನಮ್ಮದು ಅಸಂಖ್ಯ ವೈವಿಧ್ಯತೆಗಳಿರುವ ಎಷ್ಟೊಂದು ದೊಡ್ಡ ದೇಶ ಎಂದರೆ, ೧೦೦ ಪುಟಗಳ ಶಾಲಾ ಪಠ್ಯಪುಸ್ತಕಗಳಲ್ಲಿ ಎಲ್ಲವನ್ನೂ ತುಂಬಲಾಗದೆ ಅನುಕೂಲಕ್ಕೆ ತಕ್ಕಂತೆ ಚರಿತ್ರೆಯ ಅಸ್ಥಿಪಂಜರವನ್ನಷ್ಟೇ ಇಡಲಾಗಿದೆ; ಇಲ್ಲಿ ಇಸವಿಗಳು, ಯುದ್ಧಗಳ ಜೊತೆಗೆ ಕೆಲವೇ ಕೆಲವು ಪ್ರಮುಖ ಚಾರಿತ್ರಿಕ ವ್ಯಕ್ತಿಗಳಿರುತ್ತಾರೆ. ಎಲ್ಲವನ್ನೂ ಬರೆದರೆ ಪುಸ್ತಕಗಳು ಭಾರವಾಗಿಬಿಡುತ್ತವೆ. ಶಾಲಾ ಮಕ್ಕಳಿಗೆ ಇತಿಹಾಸದ ಬಗ್ಗೆ ಸ್ಥೂಲ ಪಕ್ಷಿನೋಟವನ್ನು ಕಟ್ಟಿಕೊಡುವ ಪಠ್ಯಪುಸ್ತಕಗಳ ಜೊತೆಗೆ ಯಾವುದಾದರೊಂದು ನಿರ್ದಿಷ್ಟ ಚಾರಿತ್ರಿಕ ವಸ್ತುವಿಷಯದ ಬಗ್ಗೆ ಆಳವಾದ ಮಾಹಿತಿಯನ್ನೊದಗಿಸುವ ಒಂದು ಪುಸ್ತಕವನ್ನು ಪ್ರತಿವರ್ಷ ಓದುವುದಕ್ಕೆ ಕೊಡಬೇಕು. ಆಗ ಚರಿತ್ರೆಯೆಂದರೆ, ಕೇವಲ ಇಸವಿಗಳು ಅಥವಾ ಘಟನೆಗಳು ಮಾತ್ರವಲ್ಲದೆ, ಅದು ಕೂಡ ನಮ್ಮನಿಮ್ಮಂತೆಯೇ ಬೇರೆ-ಬೇರೆ ಕಾಲಘಟ್ಟದಲ್ಲಿ ಬೇರೆ-ಬೇರೆ ಸನ್ನಿವೇಶಗಳಲ್ಲಿ ಬದುಕಿ ಬಾಳಿದ, ನಮಗೆ ಸಿಕ್ಕಿರುವ ಪ್ರಪಂಚವನ್ನು ಸೃಷ್ಟಿಸುವುದಕ್ಕೆ ನೆರವಾದ ಮನುಷ್ಯ ಜೀವಿಗಳ ಕತೆ ಎಂಬುದು ಅವರಿಗೆ ಅರ್ಥವಾಗುತ್ತದೆ.

ಇತಿಹಾಸವನ್ನು ಇನ್ನಷ್ಟು ಓದುಗಸ್ನೇಹಿಯನ್ನಾಗಿ, ಓದುಗರನ್ನು ತಲ್ಲೀನವಾಗಿಸುವ ಹಾಗೆ ಮಾಡುವುದಕ್ಕೆ ಭಾರತದಲ್ಲಿ ಇತಿಹಾಸ ಬರವಣಿಗೆಯ ಶೈಲಿ ಬದಲಾಗಬೇಕು ಎಂದು ನಿಮಗನ್ನಿಸುತ್ತದೆಯೇ?

ಹೌದು, ಬದಲಾಗಬೇಕಿದೆ. ವರ್ಷಗಳು ಉರುಳಿದಂತೆ ಆಶ್ಚರ್ಯಕರವಾಗಿ ಉತ್ತಮ ಬರವಣಿಗೆಗಳು ಅಕಾಡೆಮಿಕ್ ವಲಯದಿಂದ ಹೊರಬರುತ್ತಿವೆ. ಆದರೆ, ದುರದೃಷ್ಟ ಎಂದರೆ ಇಂತಹ ಅತ್ಯುತ್ತಮ ಕೃತಿಗಳು ವಿಚಾರ ಸಂಕಿರಣಗಳಿಗೋ ಅಥವಾ ಬುದ್ದಿಜೀವಿ ವಲಯಗಳಿಗೋ ಸೀಮಿತವಾಗಿಬಿಡುತ್ತವೆ. ನಮಗೆ ಈಗ ಬೇಕಿರುವುದೇನೆಂದರೆ, ಓದುಗ ಪ್ರಪಂಚಕ್ಕೂ ಮತ್ತು ವಿದ್ವಾಂಸ ಪ್ರಪಂಚಕ್ಕೂ ಸೇತುವೆಯಾಗಿ ಪ್ರವರ್ತಿಸಬಲ್ಲ ಬರೆಹಗಾರರು. ಇದನ್ನೇ ಬೇರೆ ಮಾತಿನಲ್ಲಿ ಹೇಳುವುದಾದರೆ, ಸಂಶೋಧನೆಗೆ ಬದ್ಧವಾಗಿ ನಿಂತುಕೊಂಡು ಅದರ ಫಲಿತಾಂಶಗಳನ್ನು ಓದುಗನು ತಲ್ಲೀನನನ್ನಾಗಿಸುವಂತೆ ಆಕರ್ಷಕವಾಗಿ ಕಟ್ಟಿಕೊಡಬೇಕು. ಇಂತಹ ಬರವಣಿಗೆಯ ಅಗತ್ಯ ಬಹಳ ಇದೆ.

ನಾನು ‘ದಿ ಐವರಿ ಥ್ರೋನ್’ ಕೃತಿ ಬರೆದಾಗ ಯಾರಿಗೂ ಪರಿಚಿತನಲ್ಲದ ೨೫ ವರ್ಷದ ಹುಡುಗ. ಬಹಳ ಜನಕ್ಕೆ ಗೊತ್ತಿಲ್ಲದ ರಾಜ್ಯದ ಬಗ್ಗೆ, ಬಹುತೇಕ ಮರೆತೇಹೋಗಿದ್ದ ಅದರ ಮುಖ್ಯಪಾತ್ರಧಾರಿಯ ಬಗ್ಗೆ ೭೦೦ ಪುಟಗಳ ಪುಸ್ತಕ ಬರೆದೆ. ನನ್ನ ಪುಸ್ತಕ ಪ್ರಕಟಣೆಯ ತಂಡದಲ್ಲಿ ಕೆಲವರಿಗಾದರೂ ಈ ಪುಸ್ತಕ ಮಾರಾಟವಾಗುವ ಬಗ್ಗೆ ಅನುಮಾನಗಳಿದ್ದವು ಎಂಬುದು ನನಗೆ ಗೊತ್ತಿತ್ತು. ಆದರೆ, ಈ ಪುಸ್ತಕ ವಿಮರ್ಶಕ ವಲಯದಲ್ಲಿ ಮೆಚ್ಚುಗೆ ಗಳಿಸಿ ಬಹುಮಾನ ಗೆದ್ದುಕೊಂಡಿದ್ದು ಮಾತ್ರವಲ್ಲ, ವ್ಯಾವಹಾರಿಕ ದೃಷ್ಟಿಯಿಂದಲೂ ಯಶಸ್ವಿಯಾಯಿತು- ಈ ಪುಸ್ತಕದ ಅಂತಃಸ್ಸಾಧ್ಯತೆಯ ಬಗ್ಗೆ ನನ್ನ ಸಂಪಾದಕ ವಿ ಕೆ ಕಾರ್ತಿಕಾ ಅವರಿಗಿದ್ದ ನಂಬಿಕೆಯ ಕಾರಣದಿಂದ. ಅಂದರೆ, ಪ್ರಸಿದ್ಧನಲ್ಲದ ವ್ಯಕ್ತಿಯೊಬ್ಬ ಬರೆದ ೭೦೦ ಪುಟಗಳ ಪುಸ್ತಕವನ್ನು ಕೈಗೆತ್ತಿಕೊಂಡು ಓದುವ ಹಾಗೂ ಓದುತ್ತ ಆ ಪುಸ್ತಕ ಹೇಳುವ ಕತೆಯನ್ನು ಆಸ್ವಾದಿಸಿ ಆನಂದಿಸುವ ಜನರೂ ಇದ್ದರು ಎಂಬುದು ಇದರರ್ಥ. ನಿರೂಪಣಾತ್ಮಕ ಚರಿತ್ರೆಯ ಓದುಗ ವಲಯ ನಿಧಾನವಾಗಿ ಬೆಳೆಯುತ್ತಿದೆ. ವಿಲಿಯಂ ಡಾಲ್ ರಿಂಪಲ್ ಅವರು ಕಳೆದ ದಶಕದಲ್ಲಿ ಇದನ್ನು ಬಹಳ ದೊಡ್ಡದಾಗಿ ಪ್ರಾರಂಭಿಸಿದ್ದರು. ಅವರ ಪುಸ್ತಕಗಳನ್ನು ಓದುತ್ತಲೇ ಬೆಳೆದ ನಾನು ಚರಿತ್ರೆಯನ್ನು ಹೇಳುವುದಕ್ಕೆ ಇದೇ ಅತ್ಯದ್ಭುತ ವಿಧಾನ ಎಂದು ಅರ್ಥಮಾಡಿಕೊಂಡೆ.

ನಿಮ್ಮ ಪುಸ್ತಕಗಳಲ್ಲಿರುವ ಕೆಲವು ನಿರೂಪಣೆಗಳು ಸಿನಿಮಾ ಆಗುವುದಕ್ಕೆ ಅಥವಾ ಚಾರಿತ್ರಿಕ ಕಾದಂಬರಿ ಆಗುವುದಕ್ಕೆ ಯೋಗ್ಯವಾಗಿವೆ ಅನ್ನಿಸುತ್ತದೆ. ಮೊಘಲರ ವಿಷಯದಲ್ಲಿ ಆದಂತೆಯೇ ದಕ್ಷಿಣದ ಸುಲ್ತಾನರ ವಿಷಯದಲ್ಲೂ ಈ ರೀತಿ ಸಿನಿಮಾ ಮತ್ತು ಕಾದಂಬರಿಗಳು ಹೊರಬರಹುದು ಎಂದೆನಿಸುತ್ತದೆಯೇ?

ಹಾಗೇ ಆಗಲಿ ಎಂದು ಆಶಿಸುತ್ತೇನೆ. ಇಲ್ಲಿನ ಅನೇಕ ಚಾರಿತ್ರಿಕ ವ್ಯಕ್ತಿಗಳು ನಾಟಕದ ಅಥವಾ ಸಿನಿಮಾದ ಕತೆಗಳಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆಯಲ್ಲದೆ, ಅನೇಕ ಕಾದಂಬರಿ ಆಗುವುದಕ್ಕೂ ಯೋಗ್ಯವಾಗಿವೆ. ಅದು ಚಾಂದ್ ಬೀಬಿ ಆಗಿರಬಹುದು ಅಥವಾ ಅವಳ ತಾಯಿ ಕುಂಝಾ ಹುಮಾಯುನ್ ಆಗಿರಬಹುದು ಅಥವಾ ಮೊಟ್ಟಮೊದಲ ಬಾರಿಗೆ ದಕ್ಷಿಣದ ಮೇಲೆ ದಂಡೆತ್ತಿ ಬರುತ್ತಿದ್ದ ಅಲ್ಲಾವುದ್ದೀನ್ ಖಿಲ್ಜಿಯ ಸೇನೆಯನ್ನು ಅಡ್ಡಗಟ್ಟಿದ ಮರಾಠ ಮಹಿಳೆಯರಿರಬಹುದು ಅಥವಾ ವಿಜಯಪುರದ ಎರಡನೇ ಇಬ್ರಾಹಿಂ ಆಗಿರಬಹುದು ಅಥವಾ ವಿಜಯನಗರ ಧ್ವಂಸವಾದಾಗ ಇದ್ದ ರಾಮರಾಯ ಥರದ ವ್ಯಕ್ತಿಗಳಿರಬಹುದು- ಕತೆ, ಸಿನಿಮಾ, ಕಾದಂಬರಿಯಂತಹ ವಿವಿಧ ರೂಪಗಳಾಗುವುದಕ್ಕೆ ಬೇಕಾದಷ್ಟು ಚಾರಿತ್ರಿಕ ಸಾಮಗ್ರಿ ಇಲ್ಲಿದೆ.

ನಿಮ್ಮ ಮುಂದಿನ ಪುಸ್ತಕ ಅಥವಾ ಯೋಜನೆ ಏನು?

ನನಗೂ ಒಂಥರಾ ಮೂಢನಂಬಿಕೆಯಿದೆ; ಯೋಜನೆ ಪೂರ್ತಿಯಾದ ಮೇಲಷ್ಟೇ ಅದರ ಬಗ್ಗೆ ಮಾತಾಡುವುದು ನನ್ನ ಅಭ್ಯಾಸ. ಎಲ್ಲ ಅಂದುಕೊಂಡಂತೆ ನಡೆದರೆ ೨೦೨೦ರಲ್ಲಿ ನಿಮ್ಮ ಈ ಪ್ರಶ್ನೆಗೆ ಉತ್ತರಿಸುತ್ತೇನೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More