ಭತ್ತ ಹೋಗಿ ಅಕ್ಕಿ ಆಗುವವರೆಗೂ ಕುಣಿದ ಗುರು ಕುಣಿದ... ಕುಣಿದ ಗುರು ಕುಣಿದ

ಉಡುಪಿಯಲ್ಲಿ ಯಕ್ಷಗಾನ ಗುರು ಸಂಜೀವ ಸುವರ್ಣರಿಗೆ ಅಭಿನಂದಿಸುವ ನೆಪದಲ್ಲಿ ಅವರ ಕಲಾಬದುಕಿನ ಹಲವು ಮಗ್ಗಲುಗಳನ್ನು ಸಹೃದಯರ ಎದುರು ಮಂಡಿಸಲಾಯಿತು. ಶಿವರಾಮ ಕಾರಂತರ ಶಿಷ್ಯರೂ ಆದ ಸುವರ್ಣರು ಯಕ್ಷಲೋಕದಲ್ಲಿ ಮಾಡಿದ ಪ್ರಯೋಗಗಳೂ ಕುಣಿತದಲ್ಲಿ ಅಡಕವಾಗಿದ್ದವು

ಶಾಲೆಯಲ್ಲಿ ಕೇವಲ ಒಂದೂವರೆ ವರ್ಷ ಕಲಿತ ಬನ್ನಂಜೆ ಸಂಜೀವ ಸುವರ್ಣ ಮುಂದೆ ಯಕ್ಷಗಾನದ ಬಹುದೊಡ್ಡ ಗುರುವಾದರು. ಗದ್ದೆ ಹುಣಿಯಲ್ಲಿ ತಲೆಯಿಟ್ಟು ಮಲಗುತ್ತಿದ್ದ ಅವರು ಇಂಗ್ಲೆಂಡ್, ಅಮೆರಿಕ, ಜರ್ಮನಿಯಂತಹ ದೇಶಗಳಲ್ಲಿ ಪಾಠ ಮಾಡತೊಡಗಿದರು. ಹುಲಿವೇಷದಲ್ಲಿ ಬೆಕ್ಕಿನ ಹೆಜ್ಜೆ ಇಡುವುದು ಹೇಗೆ ಎಂದು ಆಲೋಚಿಸುತ್ತ ‘ಭತ್ತ ಹೋಗಿ ಅಕ್ಕಿಯಾಗುವವರೆಗೂ’ ನರ್ತಿಸತೊಡಗಿದರು. ಅವರ ಆ ಶ್ರಮದ ಹಿಂದೆ ಗುರುಗಳಾದ ಗುಂಡಿಬೈಲು ನಾರಾಯಣ ಶೆಟ್ಟರು, ಮಟಪಾಡಿ ವೀರಭದ್ರ ನಾಯಕರು, ಜ್ಞಾನಪೀಠ ಪುರಸ್ಕೃತ ಕೋಟ ಶಿವರಾಮ ಕಾರಂತರ ಗುರುತುಗಳಿವೆ. ಕಾರಂತರ ಬ್ಯಾಲೆಯಂತಹ ಪ್ರದರ್ಶನಗಳಲ್ಲಿ ಮಿಂಚತೊಡಗಿದ ಅವರ ಆತ್ಮಕಥನದ ಹೆಸರು ‘ಸಂಜೀವನ.’

ನಾಟ್ಯಾಭಿನಯ, ತಯಾರಿಕೆ, ಬಣ್ಣಗಾರಿಕೆ, ಹಿಮ್ಮೇಳ, ಚಂಡೆ-ಮದ್ದಳೆ ತಯಾರಿಕೆ ಹೀಗೆ ಯಕ್ಷಗಾನದ ಸಕಲವನ್ನೂ ಮೈಗೂಡಿಸಿಕೊಳ್ಳುತ್ತ ಯಕ್ಷಲೋಕದ ವಿಶ್ವಕೋಶವೇ ಆದ ಅವರನ್ನು ಅಭಿನಂದಿಸಲೆಂದು ಜು.15ರಂದು ಉಡುಪಿಯಲ್ಲಿ ‘ಕರುಣ ಸಂಜೀವ’ ಸಮಾರಂಭ ಆಯೋಜಿಸಲಾಗಿತ್ತು. ಭಾಷಣ, ಹೊಗಳಿಕೆ ಇವುಗಳನ್ನೂ ಮೀರಿದ ವಿಶಿಷ್ಟ ಕಾರ್ಯಕ್ರಮವಾಗಿ ಅದು ರೂಪುಗೊಂಡಿತ್ತು. ಜಾರುಗುಪ್ಪೆ ಕುಣಿತದಿಂದ ಜಾಂಬವತಿ ಕಲ್ಯಾಣದವರೆಗೆ ಗುರು ಸಂಜೀವರು ಅಲ್ಲಿ ಮನದಣಿಯೆ ಕುಣಿದರು. ಲಕ್ಷ್ಮೀಶ ತೋಳ್ಪಾಡಿ, ಚಿದಂಬರರಾವ್ ಜಂಬೆ, ಸದಾನಂದ ಮೆನನ್, ಕ್ಯಾಥರಿನ್ ಬೈಂದರ್, ಎಂ ಎ ಹೆಗಡೆ ಮುಂತಾದ ಸಾಂಸ್ಕೃತಿಕ ಲೋಕದ ದಿಗ್ಗಜರು ಆ ಮಾಂತ್ರಿಕ ಕುಣಿತಕ್ಕೆ ಸಾಕ್ಷಿಯಾದರು.

ಛಾಯಾಗ್ರಹಣ: ಕೆ ವೆಂಕಟೇಶ್ ನಾಯ್ಕ್

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More