ಸಮಾಧಾನ | ಟೆನಿಸ್ ಅನ್ನು ಇಷ್ಟಪಡುತ್ತಿದ್ದ ಮುರಳಿಗೆ ಇದ್ದ ಸಮಸ್ಯೆ ಏನು?

ಮಿದುಳಿಗೆ ಸಣ್ಣ ಪ್ರಮಾಣದಲ್ಲಿ ಆಗುವ ಹಾನಿಯಿಂದ ಮಕ್ಕಳಲ್ಲಿ ಕಂಡುಬರುವ ಅಟೆಂಶನ್ ಡೆಪಿಸಿವ್ ಹೈಪರ್ ಆಕ್ಟೀವ್ ಡಿಸಾರ್ಡರ್ ಹಲವು ತೊಂದರೆ ಸೃಷ್ಟಿಸುತ್ತದೆ. ಮಿದುಳಿನ ಹಾನಿ, ಮಗು ತಾಯಿಯ ಗರ್ಭದಲ್ಲಿದ್ದಾಗ ಆಗಬಹುದು. ಹೆರಿಗೆ ನಂತರವೂ ಆಗಬಹುದು ಎಂಬುದು ತಜ್ಞರ ಅಭಿಪ್ರಾಯ

“ನನ್ನ ಮಗ ಮುರಳಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಫಸ್ಟ್ ಕ್ಲಾಸ್ ಸ್ಟೂಡೆಂಟ್, ಪ್ರತಿ ವಿಷಯದಲ್ಲೂ 80ರ ಮೇಲೆ ತೆಗೆಯುತ್ತಾನೆ. ಸ್ಪೋರ್ಟ್‌ನಲ್ಲಿ ಆಸಕ್ತಿ ಇದೆ. ಲಾನ್ ಟೆನಿಸ್ ಅವನು ಇಷ್ಟಪಡುವ ಆಟ. ನಿತ್ಯ ಪ್ರಾಕ್ಟೀಸ್ ಮಾಡುತ್ತಾನೆ. ಎಲ್ಲವೂ ಸರಿ. ದೊಡ್ಡ ಸಮಸ್ಯೆ ಎಂದರೆ ಅವನ ಹಠ ಮತ್ತು ಕೋಪ. ಅವನು ಹೇಳಿದ್ದಕ್ಕೆ ನಾನು ಮತ್ತು ನನ್ನ ಹೆಂಡತಿ ಎಸ್ ಅನ್ನಬೇಕು. 'ನೋ' ಎಂದರೆ ಅಥವಾ ‘ಆಮೇಲೆ ನೋಡೋಣ’ ಎಂದರೆ ಮುಗಿಯಿತು ನಮ್ಮ ಕತೆ. ಕೈಗೆ ಸಿಕ್ಕಿದ್ದನ್ನು ನಮ್ಮ ಮೇಲೆ ಎಸೆಯುತ್ತಾನೆ, ಬೆಲೆಬಾಳುವ ವಸ್ತುಗಳನ್ನು ಹಾಳು ಮಾಡುತ್ತಾನೆ. ರೂಮಿಗೆ ಹೋಗಿ ಬೀರುವಿನಲ್ಲಿರುವ ಬಟ್ಟೆ ಮತ್ತಿತರ ವಸ್ತುಗಳನ್ನು ಹೊರಗೆಳೆದು ನೆಲದ ಮೇಲೆ ಬಿಸಾಡುತ್ತಾನೆ. ಅಡುಗೆಮನೆಗೆ ಹೋಗಿ ಫ್ರಿಜ್ ಬಾಗಿಲು ತೆಗೆದು ಅದರೊಳಗಿರುವ ಪದಾರ್ಥಗಳನ್ನು ಎಸೆಯುತ್ತಾನೆ. ಬಾತ್‌ರೂಮಿಗೆ ಹೋಗಿ ನಲ್ಲಿಯ ನೀರು ಬಿಡುತ್ತಾನೆ. ಅಡ್ಡಿ ಮಾಡಿದರೆ ನಮಗೂ ಹೊಡೆಯುತ್ತಾನೆ. ಹತ್ತು ನಿಮಿಷದಲ್ಲಿ ತಣ್ಣಗಾಗುತ್ತಾನೆ. ಕೆಲವು ಸಲ ಕ್ಷಮೆ ಕೇಳುತ್ತಾನೆ, ಕೆಲವು ಸಲ ಕ್ಷಮೆ ಕೇಳುವುದಿಲ್ಲ. ಏಕೆ ಮಾಡಿದೆ ಎಂದರೆ, ಉತ್ತರಿಸುವುದಿಲ್ಲ. ಇಲ್ಲವೇ ಎದ್ದು ಹೊರಹೋಗುತ್ತಾನೆ. ಅವನನ್ನು ಹೇಗೆ ಮ್ಯಾನೇಜ್ ಮಾಡುವುದೋ ಗೊತ್ತಾಗುತ್ತಿಲ್ಲ.”

“ಕೋಪ, ಹಠಮಾರಿತನವನ್ನು ಬಿಟ್ಟು ಇನ್ಯಾವುದಾದರೂ ಸಮಸ್ಯೆ ಇದೆಯೇ?” ಕೇಳಿದೆ.

“ಇಲ್ಲ ಸಾರ್... ಸ್ವಲ್ಪ ತಾಳಿ... ಅವನಿಗಿಷ್ಟವಾದ ಕೆಲಸ ಒಮ್ಮೆ ಶುರುಮಾಡಿದರೆ ಗಂಟೆಗಟ್ಟಲೆ ಮಾಡುತ್ತಾನೆ. ಮಾಡಬೇಕಾದ ಕೆಲಸ ಏನೂ ಮಾಡುವುದಿಲ್ಲ. ಉದಾಹರಣೆಗೆ ಟಿವಿಯಲ್ಲಿ, ಇಂಟರ್ನೆಟ್ಟಲ್ಲಿ ಅವನಿಗೆ ಇಷ್ಟವಾದ ಕಾರ್ಯಕ್ರಮ ಕಂಡರೆ, ಅದು ಮುಗಿಯುವ ತನಕ ಅದರಲ್ಲೇ ತಲ್ಲೀನ ಆಗಿಬಿಡುತ್ತಾನೆ; ಊಟ ಬೇಡ, ತಿಂಡಿ ಬೇಡ, ನಿದ್ರೆ ಬೇಡ. ಮಧ್ಯದಲ್ಲಿ ನಾವು, ‘ಊಟ ಮಾಡೋ, ಆಮೇಲೆ ನೀನು ನೋಡುವುದನ್ನು, ಮಾಡುವುದನ್ನು ಮುಂದುವರಿಸುವಂತೆ’ ಎನ್ನುವ ಹಾಗಿಲ್ಲ, ಸಿಟ್ಟಿಗೇಳುತ್ತಾನೆ. ಕಳೆದ ವಾರ ರೀಪಾಟ್ ಮಾಡುತ್ತೇನೆಂದು ಕುಳಿತವನು ಇಪ್ಪತ್ತೈದು ಪಾಟ್‌ಗಳ ಮಣ್ಣು ತೆಗೆದು ಹೊಸ ಮಣ್ಣು ಹಾಕಿ ನೀರುಣಿಸುವುದನ್ನು ಕಂಪ್ಲೀಟ್ ಮಾಡಿದಾಗ ಸಾಯಂಕಾಲವಾಗಿತ್ತು. ಟಿಫನ್, ಊಟ, ಸ್ನಾನ ಎಲ್ಲವನ್ನೂ ನಿರ್ಲಕ್ಷ್ಯ ಮಾಡಿದ.”

“ಚಿಕ್ಕಂದಿನಲ್ಲಿ ಹೇಗಿದ್ದ?”

“ಸ್ವಲ್ಪ ರೆಸ್ಟ್‌ಲೆಸ್ ಹುಡುಗ ಡಾಕ್ಟರೇ. ಏಕಾಗ್ರತೆ ಕಡಿಮೆ. ಚಂಚಲತೆ ಹೆಚ್ಚು. ತರಗತಿಯಲ್ಲಿ ಸುಮ್ಮನೆ ಕೂತುಕೊಳ್ಳುತ್ತಿರಲಿಲ್ಲ. ಏನಾದರೂ ತರ್ಲೆ ಮಾಡಿ ಟೀಚರ್ಸ್ ಕೈಲಿ ಬೈಸಿಕೊಳ್ಳೋನು. ವಾದ ಮಾಡೋನು. ಮನೆಯಲ್ಲಿ ಅವನದು ಹಠದ ಸ್ವಭಾವವೇ. ಅವನು ಹೇಳಿದಂತೆ ನಾವು ನಡೆಯಬೇಕು, ಕೇಳಿದ್ದನ್ನು ಕೊಡಬೇಕು. ಒಮ್ಮೆ ಬೇಡ, ಒಲ್ಲೆ ಎಂದರೆ ಮುಗೀತು; ಅವನನ್ನು ಬದಲಿಸಲು, ಅವನ ಇಷ್ಟಾನಿಷ್ಟ ಬದಲಿಸಲು ಸಾಧ್ಯ ಅಗುತ್ತಿರಲಿಲ್ಲ. ಯಾವುದಾದರೂ ಸಭೆ, ಸಮಾರಂಭಕ್ಕೆ ಕರೆದುಕೊಂಡು ಹೋದರೆ, ಯಾರಾದರೂ ನೆಂಟರಿಷ್ಟರ ಮನೆಗೆ ಕರೆದೊಯ್ದರೆ ಒಂದು ಕಡೆ ಕೂರುವವನಲ್ಲ. ಅಲ್ಲಿ ಇಲ್ಲಿ ಓಡಾಡುತ್ತ, ಮನೆಯಾದರೆ ಮನೆಯ ಪ್ರತಿಯೊಂದು ಕೊಠಡಿ ಮೂಲೆಮೂಲೆಯನ್ನು ನೋಡುತ್ತ, ಅಲ್ಲಿರುವ ಪ್ರತಿಯೊಂದು ವಸ್ತುವನ್ನು ಗಮನಿಸುತ್ತ 'ಅದೇನು? ಅದನ್ನು ಏಕೆ ಇಟ್ಟಿದ್ದೀರಿ? ಅದರಿಂದ ಏನು ಮಾಡಿತ್ತೀರಿ?' ಎಂದು ಕೇಳುವನು. ಜೊತೆಗೆ ಮೊಂಡು ಧೈರ್ಯ. ಬೀದಿ ನಾಯಿ, ಬೆಕ್ಕು, ಹಸು ಇತ್ಯಾದಿ ಪ್ರಾಣಿಗಳನ್ನು ಕಂಡರೆ ಹತ್ತಿರ ಹೋಗಿ ಮುಟ್ಟುವುದು, ಅದನ್ನು ತಟ್ಟುವುದು ಮಾಡುತ್ತಿದ್ದ; ಎಲ್ಲಿ ಪ್ರಾಣಿ ಇವನನ್ನು ಕಚ್ಚುತ್ತೋ,ಪರಚುತ್ತೋ ಅಂತ ನಮಗೆ ದಿಗಿಲು ಅವನಿಗೆ ಅದರ ಪರಿವಿಯೇ ಇಲ್ಲ. ಒಂದು ಕೆಲಸ ಶುರು ಮಾಡಿದರೆ ಮುಗಿಸುತ್ತಿರಲಿಲ್ಲ. ಮತ್ತಿನ್ನೇನಾದರೂ ಕಂಡರೆ, ಇದನ್ನು ಬಿಟ್ಟು ಅಲ್ಲಿಗೆ ಹೋಗುತ್ತಿದ್ದ. ಆದರೆ ಕೆಟ್ಟ ಬುದ್ಧಿ ಇರಲಿಲ್ಲ. ಸುಳ್ಳು ಹೇಳುವುದಾಗಲೀ, ಕಳ್ಳತನ ಮಾಡುವುದಾಗಲೀ ಮಾಡುತ್ತಿರಲಿಲ್ಲ. ಈಗಲೂ ಅವನಲ್ಲಿ ದುರ್ಬುದ್ಧಿ ಇಲ್ಲ. ಆದರೆ, ಇನ್ನೊಬ್ಬರ ಕಷ್ಟಕ್ಕೆ, ನೋವಿಗೆ ಸ್ಪಂದಿಸುವ ಮನೋಭಾವವಿಲ್ಲ. ನನಗಾಗಲೀ, ನನ್ನ ಹೆಂಡತಿಗಾಗಲೀ, ಜ್ವರ ಬಂದಿತು ಅಂತ ಇಟ್ಟುಕೊಳ್ಳಿ. ಗಾಯವಾಯಿತು ಎಂದಿಟ್ಟುಕೊಳ್ಳಿ, ಅಪ್ಪ ಹೇಗಿದ್ದೀರಿ, ಅಮ್ಮ ಹೇಗಿದ್ದೀಯಾ, ನೋವಾಗುತ್ತ ಎಂದು ವಿಚಾರಿಸುವುದಿಲ್ಲ, ತನ್ನ ಪಾಡಿಗೆ ತಾನಿರುತ್ತಾನೆ.

ADHD: ಅಟೆಂಶನ್ ಡೆಪಿಸಿವ್ ಹೈಪರ್ ಆಕ್ಟೀವ್ ಡಿಸಾರ್ಡರ್

ಮಿದುಳಿಗೆ ಸಣ್ಣ ಪ್ರಮಾಣದಲ್ಲಿ ಆಗುವ ಹಾನಿಯಿಂದ ಬರುವ ಈ ಸ್ಥಿತಿ ಮಕ್ಕಳಲ್ಲಿ ಮತ್ತು ಆನಂತರವೂ ಹಲವಾರು ನಡವಳಿಕೆ ತೊಂದರೆಗಳನ್ನು ಸೃಷ್ಟಿಸುತ್ತದೆ. ಮಿದುಳಿನ ಹಾನಿ, ಮಗು ತಾಯಿಯ ಗರ್ಭದಲ್ಲಿದ್ದಾಗ ಆಗಬಹುದು. ಹೆರಿಗೆ ನಂತರವೂ ಆಗಬಹುದು.

ADHD ಲಕ್ಷಣಗಳು

 • ಏಕಾಗ್ರತೆಯ ಕೊರತೆ. ಮನಸ್ಸು ವಿಪರೀತ ಚಂಚಲವಾಗುತ್ತಿರುತ್ತದೆ. ಒಂದು ಚಟುವಟಿಕೆಯನ್ನು ಶುರು ಮಾಡಿ, ಮತ್ತೊಂದು ಚಟುವಟಿಕೆಯತ್ತ ವ್ಯಕ್ತಿ ಓಡುತ್ತಾನೆ. ಯಾವ ಕೆಲಸವನ್ನೂ ಪೂರ್ಣ ಮಾಡುವುದಿಲ್ಲ.
 • ಇತರರಿಗೆ ತೊಂದರೆಯಾಗುವಂತಹ ಬೇಡದ ಕೆಲಸ ಚಟುವಟಿಕೆ/ತರಲೆ ಮಾಡುತ್ತಾರೆ. ಸುಮ್ಮನಿರು ಎಂದರೆ ಕೇಳುವುದೇ ಇಲ್ಲ.
 • ಪ್ರತಿಯೊಂದಕ್ಕೂ ಹಿಂದೆ-ಮುಂದೆ ನೋಡದೆ ಥಟ್ಟನೆ ಪ್ರತಿಕ್ರಿಯಿಸುತ್ತಾರೆ. ಯಾವಾಗ ಹೇಗೆ ಪ್ರತಿಕ್ರಿಯಿಸುತ್ತಾರೆ ಹೇಳಲು ಬರುವುದಿಲ್ಲ.
 • ಸಿಟ್ಟು, ಕೋಪ ಹೆಚ್ಚು, ವಿನಾಕಾರಣ ಅಥವಾ ಅಲ್ಪಕಾರಣ ಪ್ರಚೋದನೆಗೂ ಜಗಳ ಮಾಡುತ್ತಾರೆ, ಕೈ ಎತ್ತುತ್ತಾರೆ, ಹೊಡೆಯುತ್ತಾರೆ.
 • ವಸ್ತು ವಿಶೇಷಗಳನ್ನು ಹಾಳು ಮಾಡುತ್ತಾರೆ. ಮುರಿಯುವುದು, ಎಸೆಯುವುದು, ಚಚ್ಚಿ ಜಜ್ಜುವುದು, ಬೀದಿಗೆ-ನೀರಿಗೆ ಎಸೆಯುವುದು ಇತ್ಯಾದಿ ಮಾಡಿದ್ದಕ್ಕೆ ಕೆಲವೊಮ್ಮೆ ವಿಷಾದ ವ್ಯಕ್ತಪಡಿಸಿದರೆ, ಹಲವು ಸಲ ತಾವು ಮಾಡಿದ್ದೇ ಸರಿ ಎನ್ನಬಹುದು.
 • ಜೋರಾಗಿ ಮಾತನಾಡುವುದು, ಕಿರುಚುವುದು, ಗಹಗಹಿಸಿ ಶಬ್ದ ಮಾಡುತ್ತ ನಗುವುದು, ಗದ್ದಲ ಮಾಡುವುದು.
 • ಮಗು ಬೆಳೆದಂತೆ ADHD ಕಡಿಮೆಯಾಗಬಹುದು ಅಥವಾ ಮುಂದುವರಿಯಲೂಬಹುದು.

ಚಿಕಿತ್ಸೆ

 • ಕ್ಲೊವಿಡಿನ್, ಮಿಥೈಲ್ ಫನಿಡೆಲಿಟ್, ಅಟಮಾಕ್ಸಿಟಿನ್, ರಿಸ್ಪಿರಿಡಾನ್ ಇತ್ಯಾದಿ ಶಮನಕಾರಿ ಮಾತ್ರೆಗಳನ್ನು 6ರಿಂದ 12 ತಿಂಗಳ ಕಾಲ ಸೇವಿಸಬೇಕು.
ಇದನ್ನೂ ಓದಿ : ಸಮಾಧಾನ | ಮಂಜುಭಾಷಿಣಿಯ ಆತಂಕದ ಹಿಂದಿನ ನಿಜವಾದ ಕಾರಣವೇನು ಗೊತ್ತೇ?

ಏಕಾಗ್ರತೆಯನ್ನು ಹೆಚ್ಚಿಸುವ ಚಟುವಟಿಕೆಗಳು

 • ಚಿತ್ರ ಬಿಡಿಸುವುದು/ಕಾಪಿ ಮಾಡುವುದು
 • ಚಿತ್ರಕ್ಕೆ ಬಣ್ಣ ತುಂಬುವುದು
 • ಸಂಗೀತ ಕೇಳುವುದು/ ಕಲಿಯುವುದು
 • ನೃತ್ಯ ನೋಡುವುದು/ ಕಲಿಯುವುದು
 • 100 ರಿಂದ 3ನ್ನು ಕಳೆಯುತ್ತ ಹೋಗುವುದು 97, 94, 91, 88 ಹೀಗೆ
 • ತಿಂಗಳು ವಾರಗಳ ಹೆಸರನ್ನು ಹಿಂದಿನಿಂದ ಹೇಳುವುದು- ಭಾನು, ಶನಿ, ಶುಕ್ರ... ಡಿಸೆಂಬರ್, ನವೆಂಬರ್....
 • ಮುದ್ರಿತ ಹಾಳೆಯಲ್ಲಿ A, B, C, e, I, o, u ಹೀಗೆ ಯಾವುದಾದರೂ ಒಂದು ಅಕ್ಷರವನ್ನು ಕ್ರಾಸ್ ಮಾಡುವುದು
 • ಒಂದು ಬೌಲ್‌ನಲ್ಲಿ ನಾನಾ ಕಾಳುಗಳನ್ನು ಹಾಕಿ, ಒಂದೊಂದು ಕಾಳನ್ನು ತೆಗೆದು ಗುಂಪು ಮಾಡುವುದು
 • ನೇರಗೆರೆಯ ಮೇಲೆ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನಡೆಯುವುದು, ದಾರಕ್ಕೆ ಮಣಿಗಳನ್ನು ಪೋಣಿಸುವುದು
 • ಕೋಪ ತರಿಸುವ ಸನ್ನಿವೇಶ ಅಥವಾ ವ್ಯಕ್ತಿಯನ್ನು ಹೇಗೆ ನಿಭಾಯಿಸಬೇಕೆಂದು ಕಲಿಯುವುದು
 • ನಿರಾಶೆಯನ್ನು ನಿಭಾಯಿಸುವುದನ್ನು, ಆಸೆಗಳನ್ನು ತಗ್ಗಿಸುವುದನ್ನು ಹೇಳಿಕೊಡಬೇಕು

ಈ ಚಿಕಿತ್ಸೆ ಒಂದೆರೆಡು ವರ್ಷಗಳು ಮುಂದುವರಿಯಬೇಕು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More