ಮುಂಗಾರು ವಿಶೇಷ | ಮಳೆಗಾಲದ ಕೆಸರುಗದ್ದೆ ಕ್ರೀಡಾಕೂಟದ ಮಹಾ ಸಂಭ್ರಮ

ಮಂಗಳೂರು, ಉಡುಪಿ ಮತ್ತು ಕೊಡಗಿನ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಇತ್ತೀಚಿನ ಜನಪ್ರಿಯ ಕ್ರೀಡೆಯೇ ಕೆಸರುಗದ್ದೆ ಆಟೋಟ ಸ್ಪರ್ಧೆ. ನಾಟಿ ನೆಡುವ ಮೊದಲು ಕೆಸರಿನಿಂದ ತುಂಬಿಕೊಂಡ ಗದ್ದೆಯಲ್ಲಿ ವಯಸ್ಸಿನ ಪರಿವೆಯಿಲ್ಲದೆ ಜನರು ಕ್ರೀಡಾ ಸಂಭ್ರಮದಲ್ಲಿ ತೊಡಗುವುದು ಇದರ ವಿಶೇಷ

ಇತ್ತೀಚೆಗೆ ಕೊಡಗು ಜಿಲ್ಲೆಯ ತಾಕೇರಿಯಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದ ದೃಶ್ಯಗಳು

ಮಳೆಗಾಲ ಬಂತೆಂದರೆ ಹಳ್ಳಿ ಹುಡುಗರ ಕ್ರೀಡೋತ್ಸವಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತದೆ. ಭತ್ತದ ಗದ್ದೆಗಳಿಂದ ನಾಟಿ ತೆಗೆದು ಬದಿಗಿಟ್ಟ ಕೂಡಲೇ ಕೆಸರುಗದ್ದೆ ಕ್ರೀಡಾಕೂಟಗಳು ರಂಗು ಪಡೆದುಕೊಳ್ಳುತ್ತವೆ. ಬೀಜ ಬಿತ್ತಿದ ನಂತರ ಬೆಳೆದ ಭತ್ತವನ್ನು ತೆಗೆದು ಹೊಲದ ಮೂಲೆಯೊಂದರಲ್ಲಿ ಇಡಲಾಗುತ್ತದೆ. ಅದನ್ನು ಸಾಲುಸಾಲಾಗಿ ನೆಡುವುದನ್ನು ಗ್ರಾಮ್ಯ ಭಾಷೆಯಲ್ಲಿ ನೇಜಿ ನೆಡುವುದು ಅಥವಾ ನಾಟಿ ಮಾಡುವುದು ಎನ್ನುತ್ತಾರೆ. ಹೀಗೆ ನೇಜಿ ನೆಡುವ ಮೊದಲು ಕೆಸರು ತುಂಬಿದ ಗದ್ದೆ ಖಾಲಿ ಬಿದ್ದಿರುತ್ತದೆ. ಖಾಲಿ ಬಿದ್ದ ಗದ್ದೆಯೇ ಹಳ್ಳಿ ಹುಡುಗರ ಕ್ರೀಡೋತ್ಸವಕ್ಕೆ ವೇದಿಕೆಯಾಗುತ್ತದೆ.

ಮಂಗಳೂರು ಮತ್ತು ಕೊಡಗಿನ ಹಲವು ಗ್ರಾಮಗಳಲ್ಲಿ ಇಂತಹ ಕ್ರೀಡಾಹಬ್ಬಗಳನ್ನು ಪ್ರತಿವರ್ಷ ಆಯೋಜಿಸಲಾಗುತ್ತದೆ. ವರ್ಷವಿಡೀ ಹೊಲ, ಗದ್ದೆಗಳಲ್ಲಿ ದುಡಿಯುವ ರೈತ ಸಮೂಹಕ್ಕೆ ಮಳೆಗಾಲದಲ್ಲಿ ಮೈ-ಮನಸ್ಸಿಗೆ ಮುದ ನೀಡುವ ಕ್ರೀಡೆ ಇದು. ಗದ್ದೆಗಳನ್ನು ಉತ್ತು ನಾಟಿ ಮಾಡುವ ಮುನ್ನ ಆಯಾ ಗ್ರಾಮ ಅಥವಾ ಹೋಬಳಿ ಮಟ್ಟದಲ್ಲಿ ಬಹುತೇಕ ಯುವಕ ಸಂಘಗಳೇ ಆಯೋಜಿಸುತ್ತವೆ. ಈ ಕ್ರೀಡಾಕೂಟಗಳು ಒಂದೆರಡು ದಿನಗಳ ಕಾಲ ನಡೆಯುತ್ತವೆ. ಗ್ರಾಮದ ಹಿರಿಯರು, ಶ್ರೀಮಂತರು, ಮುಖಂಡರು, ಸಂಘಟನೆಗಳು ಕ್ರೀಡಾಕೂಟದ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳುವ ಒಂದು ಸಮುದಾಯ ಕ್ರೀಡಾಕೂಟ ಕೆಸರುಗದ್ದೆ ಹಬ್ಬ.

ವಿಶಾಲವಾದ ಗದ್ದೆಯ ಕೆಸರಿನಲ್ಲೇ ನಡೆಯುವ ಕ್ರೀಡಾಕೂಟವನ್ನು ಕೆಸರು ಇಲ್ಲದಿದ್ದರೆ ಕ್ರೀಡೆ ಆಯೋಜಿಸಲು ಸಾದ್ಯವಿಲ್ಲ. ಶಾಲಾ ಮಕ್ಕಳಿಂದ ತೊಡಗಿ ವಯಸ್ಸಾದ ಮುದುಕರವರೆಗೂ ಕೆಸರಿನಲ್ಲಿ ಕಾಲ್ನಡಿಗೆ, ಓಟ, ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ, ಫುಟ್ಬಾಲ್ ಕ್ರೀಡೆಗಳಲ್ಲಿ ಭಾಗವಹಿಸಿ ಸಂಭ್ರಮಪಡುತ್ತಾರೆ.

ಇದನ್ನೂ ಓದಿ : ಮುಂಗಾರು ವಿಶೇಷ | ಮಂಗಳೂರು ಸಮುದ್ರ ತೀರದ ಮಳೆಗಾಲದ ಪಿಸುಮಾತು

ಮೊದಲಿಗೆ ಇಂತಹ ಕೆಸರುಗದ್ದೆ ಕ್ರೀಡಾಕೂಟಗಳು ದಕ್ಷಿಣ ಕನ್ನಡ ಜಿಲ್ಲೆಗಷ್ಟೇ ಸೀಮಿತವಾಗಿತ್ತು. ನಿಧಾನವಾಗಿ ಇದು ಉಡುಪಿ ಮತ್ತು ಕೊಡಗು ಜಿಲ್ಲೆಗಳಿಗೂ ಆವರಿಸಿದೆ. ಆರಂಭದಲ್ಲಿ ಮಡಿಕೇರಿ ಸಮೀಪದ ಕಗ್ಗೋಡ್ಲು ಎಂಬಲ್ಲಿ ವಿಶಾಲವಾದ ಭತ್ತದ ಗದ್ದೆಯಲ್ಲಿ ಇಂತಹ ಕ್ರೀಡಾಕೂಟ ಆಯೋಜಿಸಲಾಯಿತು. ನಂತರ ಕೊಡಗಿನಾದ್ಯಂತ ಈ ಕ್ರೀಡೆ ಜನಪ್ರಿಯವಾಗಿದೆ. ಯುವಜನ ಮತ್ತು ಕ್ರೀಡಾ ಇಲಾಖೆಯೂ ಕೊಡಗಿನಲ್ಲಿ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತದೆ. ಕೊಡಗಿನ ಇತರೆಡೆಗಳಲ್ಲಿ ಹೋಬಳಿ ಅಥವಾ ತಾಲೂಕು ಮಟ್ಟದಲ್ಲೂ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗುತ್ತದೆ.

ಇತ್ತೀಚೆಗೆ ಸೋಮವಾರಪೇಟೆ ಸಮೀಪದ ತಾಕೇರಿ ಎಂಬಲ್ಲಿ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಕ್ರೀಡಾಕೂಟ ಆಯೋಜಿಸಲಾಗಿತ್ತು. ನೂರಾರು ಸ್ಪರ್ಧಿಗಳು ಪಾಲ್ಗೊಂಡು ಸಂಭ್ರಮಪಟ್ಟಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ೬೨ರ ಹರಯದ ಟಿ ಕೆ ಪೂವಯ್ಯ, “ಈ ಕ್ರೀಡಾಕೂಟದಲ್ಲಿ ನುರಿತ ಅಥವಾ ಅನುಭವವುಳ್ಳ ಕ್ರೀಡಾಳುಗಳೇ ಬೇಕೆಂದೇನಿಲ್ಲ. ಅನನುಭವಿಗಳೂ ಭಾಗವಹಿಸಬಹುದು. ವರ್ಷವಿಡೀ ಗದ್ದೆ ತೋಟಗಳಲ್ಲಿ ದುಡಿಯುವ ರೈತಾಪಿ ವರ್ಗಕ್ಕೆ ಈ ಕ್ರೀಡಾಕೂಟ ಉತ್ತಮ ಮನರಂಜನೆ. ಗ್ರಾಮಗಳ ನಡುವೆ ಉತ್ತಮ ಭಾಂದವ್ಯ ಬೆಸೆಯಲೂ ಇದು ನೆರವಾಗುತ್ತಿದೆ,” ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More