ಪಾಕಿಸ್ತಾನದಲ್ಲಿ ಗಾಳಿ ಬಂದೂಕು ಬಿಟ್ಟು ಪರಿಸರ ಸಂರಕ್ಷಣೆಗೆ ಬದ್ಧರಾದ ಮಕ್ಕಳು

“ಬೇಟೆಯಾಡುವುದು ನನ್ನ ಇಷ್ಟದ ಆಟ” ಎಂದು ಹೇಳಿಕೊಂಡು ನೂರಾರು ಹಕ್ಕಿಗಳನ್ನು ಕೊಂದಿದ್ದ ವಕಾಸ್ ಗಾಳಿ ಬಂದೂಕುಗಳನ್ನು, ದೇಸಿ ಬಿಲ್ಲುಗಳನ್ನು ಬಿಡಿಸಿ ಸುತ್ತಲಿನ ಎಲ್ಲ ಮಕ್ಕಳನ್ನು ಒಟ್ಟುಗೂಡಿಸಿ ಪರಿಸರದ ಪಾಠ ಹೇಳಿಕೊಡುತ್ತಿದ್ದಾರೆ

ಚಿಕ್ಕಂದಿನಿಂದ ಬೇಟೆಯಾಡಿಕೊಂಡು ಬಂದಿದ್ದ ಮಕ್ಕಳಿಗೆ ಈಗ ಪರಿಸರದ ಕಾಳಜಿ! ಒಬ್ಬನಲ್ಲಿ ಮೂಡಿದ ಜಾಗೃತಿ ಇಡೀ ಪ್ರಾಂತ್ಯಕ್ಕೆ ಹರಡಿಕೊಂಡಿದೆ. ಸರ್ಕಾರದ ಸಹಯೋಗದೊಂದಿಗೆ ಪಾಕಿಸ್ತಾನದ ಪ್ರಾಂತ್ಯವೊಂದರಲ್ಲಿ ಪರಿಸರ ಜಾಗೃತಿ ವ್ಯಾಪಿಸಿದೆ. ಕಂಡ ಕಂಡಲ್ಲಿ ದಿನವೊಂದಕ್ಕೆ ನೂರಾರು ಹಕ್ಕಿಗಳನ್ನು ಕೊಲ್ಲುತ್ತಿದ್ದ ಮಕ್ಕಳು ತಂಡ ಕಟ್ಟಿಕೊಂಡು ಮಾದರಿಯಾಗಿದ್ದಾರೆ.

ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವ ಪ್ರಾಂತ್ಯದ ಮಲಾಕಾಂಡ್ ಜಿಲ್ಲೆಯ ಡೆಹರಿ ಅಲ್ಲಾ ದಾಂಡ್ ಗ್ರಾಮದ ಮುಹಮ್ಮದ್ ವಕಾಸ್ ಅಲ್ಲಿನ ಜನರಲ್ಲಿ ಪರಿಸರ ಸಂರಕ್ಷಣೆಯ ಪಾಠ ಮಾಡುತ್ತಿದ್ದಾನೆ. “ಬೇಟೆಯಾಡುವುದು ನನ್ನ ಇಷ್ಟದ ಆಟ” ಎಂದು ಹೇಳಿಕೊಂಡು ನೂರಾರು ಹಕ್ಕಿಗಳನ್ನು ಕೊಂದಿದ್ದ ವಕಾಸ್ ಗಾಳಿ ಬಂದೂಕುಗಳನ್ನು, ದೇಸಿ ಬಿಲ್ಲುಗಳನ್ನು ಹಿಡಿದುಕೊಂಡು ಸುತ್ತಲಿನ ಎಲ್ಲ ಮಕ್ಕಳನ್ನು ಒಟ್ಟುಗೂಡಿಸಿ ದಿನಕ್ಕೆ ೨೦ ರಿಂದ ೩೦ ಹಕ್ಕಿಗಳನ್ನು ಕೊಲ್ಲುತ್ತಿದ್ದ.

“ತಾನು ಯಾಕಾಗಿ ಹಕ್ಕಿಗಳನ್ನು ಕೊಲ್ಲುತ್ತಿದ್ದೆ ಎಂಬುದಕ್ಕೆ ಆತನಲ್ಲಿ ಸ್ಪಷ್ಟ ಉತ್ತರವಿಲ್ಲ. ಆದರೆ ಆತ ಹೇಳುವಂತೆ “ಹಕ್ಕಿಗಳನ್ನು ಕೊಂದು ಮರದ ಗೂಡುಗಳಲ್ಲಿ ಉಳಿದ ಮರಿಗಳನ್ನು ಹಿಡಿದು ಮನೆಗೆ ತರುತ್ತಿದ್ದೆ, ಅವುಗಳಿಗೆ ಮಾಡಿದ ಪೋಷಣೆ ಸಾಕಾಗದೆಯೋ ಏನೋ ಮರಿಗಳು ಸಾಯುತ್ತಿದ್ದವು” ಎಂದು ಮರುಗುಡುತ್ತಿದ್ದ.

“ಗ್ರಾಮೀಣ ಪ್ರದೇಶಗಳಲ್ಲಿ ಬಿಲ್ಲುಗಳನ್ನು ಹಿಡಿದುಕೊಂಡು ಹೋಗುವುದು ಸಾಮಾನ್ಯ, ನನಗೆ ಆಗ ಯಾರೂ ಹಕ್ಕಿಗಳನ್ನು ಕೊಲ್ಲುವುದರಿಂದ ಜೀವ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಿಲ್ಲ” ಆದರೆ ಖೈಬರ್ ಪಖ್ತೂನ್ಖ್ವ ವನ್ಯಜೀವಿ ಇಲಾಖೆಯು ಪರಿಸರ ಶಿಕ್ಷಣ ನೀಡಿದ ಮೇಲೆ, ನಾನು ಬದಲಾಗಿದ್ದೇನೆ” ಎಂದು ವಕಾಸ್ ಹೇಳಿಕೊಳ್ಳುತ್ತಾನೆ.

ಈಗ ವಕಾಸ್ ೨೩ ಜನರ ತಂಡ ಕಟ್ಟಿಕೊಂಡು ಪರಿಸರ ಪ್ರೀತಿಯನ್ನು ಹಂಚುತ್ತಿದ್ದಾನೆ. ಈ ತಂಡ ಅವರ ಹಳ್ಳಿಯ ಜನರಿಗೆ, ಹಾಸ್ಟೆಲ್‌ಗಳಿಗೆ ತೆರಳಿ ಜೀವಿಗಳ ಆಹಾರ ಸರಪಳಿಗೆ ಧಕ್ಕೆ ತರದಂತೆ ನೋಡಿಕೊಳ್ಳಲು ಅದರ ಮಹತ್ವವನ್ನು ಹೇಳಿಕೊಡುತ್ತಿದ್ದಾರೆ.

ಮಕ್ಕಳು ಯಾರಾದರೂ ಬಿಲ್ಲು ಹಿಡಿದುಕೊಂಡು ನಿಂತಿದ್ದರೆ ಅಂತಹವರನ್ನು ಕರೆದು ಸರಿ ತಪ್ಪುಗಳನ್ನು ತಿಳಿಸುತ್ತಾರೆ. ಆತನ ಕೈಯಲ್ಲಿರುವ ಆಟದ ಅಸ್ತ್ರಗಳನ್ನು, ಅದರ ಎರಡು ಪಟ್ಟು ಹೆಚ್ಚಿನ ಬೆಲೆಯನ್ನು ಕೊಟ್ಟು ಖರೀದಿಸುತ್ತಾರೆ. ಆ ಮೂಲಕ ಜೀವಿಗಳ ಮಹತ್ವವನ್ನು ಹೇಳುತ್ತಾರೆ. ಹೀಗೆ ಬದಲಾಗಿ ವಕಾಸ್ ಗುಂಪನ್ನು ಸೇರಿಕೊಂಡವರು ಅನೇಕರಿದ್ದಾರೆ.

ಇದನ್ನೂ ಓದಿ : ವಿಶ್ವ ಪರಿಸರ ದಿನ ವಿಶೇಷ | ಕಲ್ಯಾಣಿಗಳ ಪುನಶ್ಚೇತನಕ್ಕೆ ಪ್ರೇರಣೆಯಾದ ‘ಪಾನಿ’

ಪಾಕಿಸ್ತಾನದ ಒಟ್ಟು 40% ನಷ್ಟು ಅರಣ್ಯದಲ್ಲಿ ಖೈಬರ್ ಪಖ್ತುನ್ಖ್ವಾದಲ್ಲಿ ಸುಮಾರು 20% ರಷ್ಟು ಕಾಡಿದೆ. ಈ ಪ್ರದೇಶವು ವಿಶಿಷ್ಟವಾದ ಜೀವವೈವಿಧ್ಯತೆಯಿಂದ ಕೂಡಿದ್ದು ಇತ್ತೀಚೆಗೆ ಸುನಾಮಿಯ ಪರಿಣಾಮದಿಂದ ಮೇಲೆದ್ದು ಅರಣ್ಯದ ಮರುಪೂರಣ ಕೆಲಸ ನಡೆಯುತ್ತಿದೆ. ಆದರೆ ಅಲ್ಲಿನ ವನ್ಯಜೀವಿಗಳು ಅಕ್ರಮ ಬೇಟೆ, ವ್ಯಾಪಾರ, ಕುಗ್ಗುತ್ತಿರುವ ಆವಾಸಸ್ಥಾನ, ಅರಣ್ಯನಾಶ, ಹವಾಮಾನ ಬದಲಾವಣೆ, ಜಾಗೃತಿ ಕೊರತೆ, ಬಡತನ ಮತ್ತು ಬೆಳೆಯುತ್ತಿರುವ ಜನಸಂಖ್ಯೆಯ ಕಾರಣದಿಂದ ಗಂಭೀರ ಪರಿಸರದ ಪರಿಣಾಮಗಳನ್ನು ಎದುರಿಸುತ್ತಿದೆ.

ಆ ಪ್ರಾಂತ್ಯದ ಸುತ್ತ ೨೯೯೬ ಗ್ರಾಮಗಳಲ್ಲಿ ಕೆಲವೇ ಕೆಲವು ಬೇಟೆಗಾರರು ಉಳಿದುಕೊಂಡಿದ್ದಾರೆ, ಅವರಿಗೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಲ್ಲಿನ ಅಲ್ಲಾ ದಂಡ್ ಹೈಸ್ಕೂಲ್‌ನ ಶಿಕ್ಷಕ ಕಮಲ್ ಹಸನ್ ಹೇಳುತ್ತಾರೆ.

ಖೈಬರ್ ಪಖ್ತೂನ್ಖ್ವ ವನ್ಯಜೀವಿ ಸಂರಕ್ಷಣಾ ಇಲಾಖೆಯು ೧೯೯೦ ರಲ್ಲೇ ನೇಚರ್‌ ಕ್ಲಬ್‌ಗಳನ್ನು ಸ್ಥಾಪಿಸಿದೆ. ಅಲ್ಲಿಂದ ಇಲ್ಲಿಯವರೆಗೂ ಸುಮಾರು ೧,೫೦,೦೦೦ ವಿದ್ಯಾರ್ಥಿಗಳು ಇದರ ಸದಸ್ಯರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಪರಿಸರದ ಬಗೆಗೆ ಜಾಗೃತಿ ಮೂಡಿಸುವುದರಿಂದ ಅದರ ಉತ್ತಮ ಪರಿಣಾಮ ಪ್ರಾಂತ್ಯದ ಮೇಲೆ ಆಗಲಿದೆ. ಈ ಕ್ಲಬ್‌ಗಳು ಪ್ರಾಂತ್ಯದ ೨೦೦ ಶಾಲೆಗಳಲ್ಲಿ ಸ್ಥಾಪಿತವಾಗಿದ್ದು ಒಂದೊಂದು ಕ್ಲಬ್‌ಗೆ ಕನಿಷ್ಟ ೪೦ ಮಕ್ಕಳು ಸದಸ್ಯರಾಗಿದ್ದಾರೆ ಎಂದು ಜಿಲ್ಲಾ ಅರಣ್ಯ ಅಧಿಕಾರಿ ಮೊಹಮ್ಮದ್ ನಿಯಾಜ್ ಮಾಹಿತಿ ನೀಡುತ್ತಾರೆ. ವೆಲ್‌ಕಮ್ ಬುಕ್ ಪ್ರಕಾಶಕರು ವನ್ಯಜೀವಿ ಇಲಾಖೆಯ ಸಹಯೋಗದೊಂದಿಗೆ ೩ ಲಕ್ಷ ವನ್ಯಜೀವಿ ಸಂಕುಲದ ಛಾಯಾಚಿತ್ರಗಳನ್ನು ಮುದ್ರಿಸಿ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಹಂಚಿದ್ದಾರೆ.

“ಶಿಕ್ಷಣದಿಂದ ನಮ್ಮ ಜೀವ ಸಂರಕ್ಷಣೆಯ ಉದ್ದೇಶವನ್ನು ಸಲೀಸಾಗಿ ಮುಟ್ಟಲಾಗುವುದಿಲ್ಲ” ಎಂದು ಪಾಕಿಸ್ತಾನ ಉನ್ನತ ಶಿಕ್ಷಣ ಆಯೋಗದ ಚೇರ್‌ಮೆನ್ ತಾರಿಕ್ ಬಾನುರಿ ಅಭಿಪ್ರಾಯಪಡುತ್ತಾರೆ. ಈ ಎಲ್ಲ ಪರಿಸರ ಸಂರಕ್ಷಣೆಯ ಮಕ್ಕಳ ಬದ್ಧತೆ, ಸರ್ಕಾರದ ನೀತಿಗಳು ಖೈಬರ್ ಪಖ್ತೂನ್ಖ್ವ ಪ್ರಾಂತ್ಯದ ಪರಿಸರ ಸಂಪತ್ತನ್ನು ಕಾಪಾಡುತ್ತಾ ಬರುತ್ತಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More