ಮೀನಾಕುಮಾರಿ ಎಂಬ ಸಮ್ಮೋಹಕ ನಟಿಯೊಳಗೆಗೊಬ್ಬಳಿದ್ದಳು ನೊಂದ ಕವಿ

ಬದುಕಿದ್ದು ೩೯ ವರ್ಷ. ಅದರಲ್ಲಿ ೩೦ ವರ್ಷದ ಚಿತ್ರರಂಗದಲ್ಲಿ ಬದುಕನ್ನು ಸವೆಸಿದ್ದರು ಮೀನಾಕುಮಾರಿ. ಓದಬೇಕೆನ್ನುವ ಹಟವಿದ್ದರೂ ಬಣ್ಣ ಹಚ್ಚಬೇಕಾದ ಅನಿವಾರ್ಯತೆಗೆ ಬಿದ್ದ ಮೀನಾ ಕುಮಾರಿ ಒಂಟಿತನದಲ್ಲಿ ಬೆಂದವರು. ತಮ್ಮ ಬೇಗುದಿಯನ್ನು ಕವಿಯಾಗಿ ಹೊರಹಾಕಿದರು. ಜನ್ಮದಿನದ (ಆಗಸ್ಟ್‌ ೧) ಹಿನ್ನೆಲೆಯಲ್ಲಿ ಆಕೆಯ ನೆನಪಿನಲ್ಲಿ ಕೆಲವು ಪದ್ಯಗಳ ಅನುವಾದ ಇಲ್ಲಿದೆ

ಮೀನಾಕುಮಾರಿ, ಅರವತ್ತು ಮತ್ತು ಎಪ್ಪತ್ತರ ದಶಕದ ಜನಪ್ರಿಯ ನಟಿ. ತಮ್ಮ ಭಾವಪ್ರಧಾನ ಅಭಿನಯದಿಂದಾಗಿ ಹಿಂದಿ ಚಿತ್ರರಂಗದ ಸೂಪರ್‌ ಸ್ಟಾರ್‌ ಆಗಿ ಮಿಂಚಿದವರು. ಆದರೆ ಆಕೆಯೊಳಗೆ ಒಬ್ಬ ಕವಿ ಇದ್ದರು. ಅತಿ ಚಿಕ್ಕವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಮೀನಾ ಕುಮಾರಿ ಇರುವಷ್ಟೂ ಕಾಲ ಬದುಕಿನ ಹಲವು ಅನುಭವಗಳನ್ನು ಕಳೆದುಕೊಂಡೇ ಬಂದರು.

ಜೀವನ ನಿರ್ವಹಣೆಗಾಗಿ ಬಾಲ್ಯವನ್ನು ಕಳೆದುಕೊಂಡರು. ಬಣ್ಣದ ಲೋಕದಲ್ಲಿ ಮಿಂಚುತ್ತಾ, ಖಾಸಗಿ ಬದುಕನ್ನು ಕಳೆದುಕೊಂಡರು. ಅಭಿಮಾನಿಗಳ, ರಸಿಕರ ಪ್ರೀತಿಯಲ್ಲಿ ಮಿಂದರೂ, ನಿಜ ಜೀವನದಲ್ಲಿ ಪ್ರೀತಿಗಾಗಿ ಹಂಬಲಿಸುತ್ತಲೇ ಇದ್ದರು. ಪರದೆಯ ಮೇಲೆ ನಾಯಕ ಜೀವನ ಪೂರ್ತಿ ಜೊತೆಗಿರುವ ಮಾತುಕೊಡುತ್ತಿದ್ದ, ಆದರೆ ಪರದೆಯಾಚೆಗೆ ಮೀನಾ ಒಂಟಿತನದಲ್ಲಿ ಕಳೆದುಹೋಗುತ್ತಿದ್ದರು.

ಅಪ್ಪ ಬಣ್ಣ ಹಚ್ಚು ಎಂದಾಗ, "ನಾನು ಶಾಲೆಗೆ ಹೋಗಬೇಕು, ಓದಬೇಕು'' ಎಂದು ಪಟ್ಟು ಹಿಡಿದಿದ್ದ ಮೀನಾ, ಕಡೆಗೂ ಶಾಲೆಗೆ ಹೋಗುವ ಅದೃಷ್ಟವಂತೆಯಾಗಲಿಲ್ಲ. ಆದರೆ ಸಂಕಟವನ್ನು ಹೊರಹಾಕುವುದಕ್ಕೆ ಆಕೆಗೆ ಆಸರೆಯಾದದ್ದು ಅಕ್ಷರಗಳೇ. ಮೀನಾ, ಕವಿತೆಗಳಲ್ಲಿ ತಮ್ಮ ನೋವುಗಳನ್ನು ಅದ್ದಿ ತೆಗೆದರು.

ಮೀನಾ ಕುಮಾರಿ ಅವರೊಳಗಿದ್ದ ಈ ವ್ಯಕ್ತಿತ್ವ, ನಟಿಯ ಮೆರುಗಿನಲ್ಲೇ ಅವಿತೇ ಹೋಗಿತ್ತು. ದುರಂತ ಕಂಡ ಮೀನಾ ಕುಮಾರಿ ಸಾಯುವ ಮುನ್ನ ತನ್ನ ಜೀವದ ಗೆಳೆಯ ಗುಲ್ಜಾರ್ ಅವರಿಗೆ ಪದ್ಯ, ಡೈರಿಗಳನ್ನು ಕೊಟ್ಟು ವಿದಾಯ ಹೇಳಿದರು. ಗುಲ್ಜಾರ್‌ ಆ ಎಲ್ಲ ಕವಿತೆಗಳನ್ನು ಸಂಕಲನದ ರೂಪದಲ್ಲಿ ಪ್ರಕಟಿಸಿದರು. ಮೀನಾ ತಮ್ಮ ಜೀವಿತಾವಧಿಯಲ್ಲೇ ಖಯ್ಯಾಮ್‌ ಅವರ ಸಂಗೀತದಲ್ಲಿ ಸ್ವತಃ ತಮ್ಮ ಕವಿತೆಗಳನ್ನು ಓದಿದ್ದರು. ಅವು ಈಗಲೂ ಆನ್‌ಲೈನ್‌ನಲ್ಲಿ ಕೇಳಲು ಲಭ್ಯ ಇವೆ. ಆದರೆ ಐವತ್ತಕ್ಕೂ ಹೆಚ್ಚು ಕವಿತೆಗಳನ್ನು ಗುಲ್ಜಾರ್‌ ಸಂಕಲನದ ರೂಪದಲ್ಲಿ ತಂದಾಗ ಅಚ್ಚರಿ ಪಟ್ಟವರೇ ಹೆಚ್ಚು.

ಮೀನಾ ಕವಿತೆಗಳು ಅದೆಷ್ಟು ಜನಮನ ತಟ್ಟಿದವು ಎಂದರೆ ಅದರ ಸಂಕಲನದ ನಕಲಿ ಪ್ರತಿಗಳು ಪಾಕಿಸ್ತಾನದ ರೈಲ್ವೆ ಸ್ಟೇಷನ್‌ನಲ್ಲಿ, ಪುಸ್ತಕದ ಅಂಗಡಿಗಳಲ್ಲಿ ಬಿಸಿಬಿಸಿ ದೋಸೆಯಂತೆ ಮಾರಾಟವಾದವು! ಕಮಲ್‌ ಅಮ್ರೋಹಿ, ಧರ್ಮೇಂದ್ರ ಅವರೊಂದಿಗನ ಪ್ರೀತಿ-ಪ್ರೇಮದ ಸಂಬಂಧಗಳು, ಎಲ್ಲರ ನಡುವೆ ಇದ್ದೂ, ಯಾರೂ ಇಲ್ಲದ ಏಕಾಕಿತನ, ಸಂಕಟ ಎಲ್ಲವನ್ನೂ ತಮ್ಮ ಕವಿತೆಗಳಲ್ಲಿ ಮೊಗೆದು ಕೊಟ್ಟ ಮೀನಾ ಪರದೆಯ ಮೇಲೆ ದುರಂತ ನಾಯಕಿಯಾಗಿ ಮಿಂಚುವುದಕ್ಕೆ ನೈಜ ಬದುಕೇ ಕಾರಣ ಎಂಬುದನ್ನು ಮನವರಿಕೆ ಮಾಡಿಕೊಡುತ್ತವೆ.

ಮೀನಾ ಕುಮಾರಿ ಅವರ ಆಯ್ದ ಕೆಲವು ಪದ್ಯಗಳ ಅನುವಾದವನ್ನು ಈ ಹೊತ್ತಿನಲ್ಲಿ ಓದಿಕೊಳ್ಳಬಹುದು.

ಒಂಟಿ

ಚಂದ್ರನೊಬ್ಬನೆ, ಆಕಾಶ ಒಂಟಿ

ಹೃದಯಗಳೆಲ್ಲಿ ಸೇರಿವೆ, ಎಲ್ಲಿ ಒಂಟಿ

ಆಸೆ ಬತ್ತಿವೆ, ನಕ್ಷತ್ರ ಮರೆಯಾಗಿವೆ

ನಡುಗುವ ಹೊಗೆಯು ತಾ ಒಂಟಿ

ಇದನ್ನೇನಾ ಜೀವನ ಎನ್ನುವುದು

ಜೀವ ಒಂಟಿ, ಆತ್ಮ ಒಬ್ಬಂಟಿ

ಯಾರೋ ಸಂಗಾತಿಯಾಗಿ ಎಲ್ಲೇ ಸಿಕ್ಕರೂ

ಇಬ್ಬರೂ ಸಹಪಯಣಿಗರು, ಒಂಟಿ ಒಂಟಿ

ಉರಿದು ಆರುವ ದೀಪದಾಚೆಗೆ

ಕೂಡಿಕೂಡಿಯಾದ ಮನೆ ಒಂಟಿ

ಕಾಲ ಕಾಲದವರೆಗೆ ದಾರಿ ಕಾಯುವುದು

ಬಿಟ್ಟು ಹೋಗುವಾಗ ಈ ಜಗ ಒಂಟಿ.

ಮೀನಾಕುಮಾರಿಯ ದನಿಯಲ್ಲಿ ಮೂಲ ಕವಿತೆ

ಚೂರು ಚೂರು

ತುಂಡು ತುಂಡಾದ ದಿನ, ಚೂರು ಚೂರಾದ ರಾತ್ರಿ

ಎಷ್ಟಿತ್ತೊ ಮಡಿಲು, ಅಷ್ಟೇ ಉಡುಗೊರೆ ಖಾತ್ರಿ

ತುಂತುರು ಹನಿಗಳಲ್ಲಿ ವಿಷವಿದೆ, ಅಮೃತವೂ

ಕಣ್ಣು ನಕ್ಕು, ಎದೆ ಅತ್ತಿತು, ಇದು ಒಳ್ಳೆಯ ಮಳೆ

ಹೃದಯವ ಅರ್ಥ ಮಾಡಿಕೊಳ್ಳಿ ಎಂದೆ, ನಕ್ಕಿದ್ದು ಕೇಳಿಸಿತು

ತಗೋ ನಿನಗೆ ಮತ್ತೊಂದು ಸೋಲೆಂದು ನುಡಿದಂತೆ

ಸೋಲೆಂಬುದು ಎಂಥ ಪೆಟ್ಟು, ನಡೆಯುತ್ತಲೇ ಇರು

ಎದೆಯೊಪ್ಪುವ ಸಖ ಸಿಕ್ಕರೆ ಜತೆಗೆ ದುಃಖವೂ ಸಿಗುವುದು

ತುಟಿಯ ಮುಟ್ಟುವ ಹೊತ್ತಿಗೆ, ಎಷ್ಟೆಷ್ಟು ರೂಪವೆತ್ತಿತೋ

ಆರಿ ನಂದಿದ ಕಣ್ಣೊಳಗೆ, ನಿಷ್ಕಪಟ ಮಾತು ಕಂಡಿತು.

ಮೀನಾಕುಮಾರಿಯ ದನಿಯಲ್ಲಿ ಮೂಲ ಕವಿತೆ

ಹಗಲು-ರಾತ್ರಿಗಳ ನಡುವೆ

ದಿನ ಕಳೆದದ್ದು ಗೊತ್ತಾಗುವುದಿಲ್ಲ

ರಾತ್ರಿ ಸರಿದರೂ ಸರಿದಂತೆನಿಸುವುದಿಲ್ಲ

ಈ ಹಗಲು ರಾತ್ರಿಗಳ ನಡುವೆ

ವಯಸ್ಸು ಹಂಚಿಯೂ ಹಂಚಿದಂತಿಲ್ಲ.

ಒಂಟಿತನದ ಕತ್ತಲಲ್ಲಿ ದೂರ ದೂರದವರೆಗೆ

ಬೆದರಿದ ಜೀವದ ಮೇಲೆ ಧೂಳಾಗಿ ಹರಡಿದೆ

ರೆಪ್ಪೆಯೊಡೆದ ದಾರಿಯಿಂದೆತ್ತಿ ಕೂಡಿಸಿದ್ದು

ಕಣ್ಣಿಂದ ಜಾರಿ ಚಕ್ಕನೆ ಕರಗಿ ಹೋದೀತು

ಬೇಸರದ ಸಂಜೆಯ ಈ ನಿಶ್ಶಬ್ದ

ಕಣ್ಣಿಗೆ ಕವಿದ ಮಂಜು ಹೆಚ್ಚಾಗಿದೆ

ಯಾಕೋ ಗೊತ್ತಿಲ್ಲ, ಇಲ್ಲಿ ಧೂಳು ತುಂಬಿದೆ

ಎದೆಗೆ ಸಮಾಧಾನ ಸುಡುತ್ತಲೇ ಇದೆ.

ನಿನ್ನ ದನಿಯಲ್ಲೇಕೆ ನಕ್ಷತ್ರ ಹೊಳೆಯತ್ತಿವೆ

ಯಾರ ಕಣ್ಣ ಕವಿತೆ ಕದ್ದು ತಂದಿಹೆ ನೀನು

ಯಾರ ಎದೆಯ ತಂಪಿಗೆ ಕನ್ನ ಹಾಕಿದೆ

ಯಾರ ತೆಕ್ಕೆಯ ಇಬ್ಬನಿಯ ತಂದಿರುವೆ.

ಇದನ್ನೂ ಓದಿ : ಜನುಮದಿನ | ದುರಂತ ನಾಯಕಿ ಇಮೇಜಿನ ಸುಂದರ ಹಿಂದಿ ನಟಿ ಮೀನಾಕುಮಾರಿ

ಕಡೆಯ ಆಸೆ

ಈ ರಾತ್ರಿ, ಈ ಒಂಟಿತನ

ಈ ಹೃದಯ ಬಡಿತದ ಸದ್ದು

ಈ ನೀರವತೆ

ಮುಳುಗು ತಾರೆಗಳ

ನಿಶ್ಯಬ್ದ ಗಝಲ್‌ ಗುನುಗು

ಕಾಲನ ಕಣ್ಣರೆಪ್ಪೆಯಲ್ಲಿ

ಮಲಗಿರುವ ಏಕಾಂತ

ಭಾವುಕ ಪ್ರೀತಿಯ ಕಡೆಯ ಮೈಮುರಿತ

ಹಬ್ಬುತ್ತಿದೆ ಸಾವಿನ ಸಂಗೀತ

ಎಲ್ಲ ನಿನ್ನ ಕರೆಯುತಿವೆ

ಒಂದು ಕ್ಷಣಕ್ಕಾದರೂ ಬಂದು ಬಿಡು

ಮುಚ್ಚುವ ನನ್ನ ಕಂಗಳಲ್ಲಿ

ಪ್ರೀತಿಯ ಒಂದು ಕನಸನ್ನಾದರೂ ಸಿಂಗರಿಸು.

ನಿನ್ನ ಮಡಿಲು ಸಿಕ್ಕಿದ್ದರೆ....

ಈ ಜೀವನ ಹೀಗೆ ಭಾರವಾಗಿ ಹೋಗಿದೆ

ನಿರೀಕ್ಷೆಯಲ್ಲಿ ಭಯವಿಲ್ಲ, ಆಸೆ, ಭರವಸೆಯೂ ಇಲ್ಲ

ಇಷ್ಟು ಹೇಳಿ ಸಾಗಿ ಹೋದವು ತಂಗಾಳಿ ರಾತ್ರಿಗಳು

ಸುಖದ ಕ್ಷಣ, ದುಃಖದ ಸಾಥಿ, ನಿನ್ನ ಚೆಲ್ಲಿದ ಕೈಗಳು

ಹಾಂ, ಆ ಮಾತೇ ಬೇರೆ, ಈ ಮಾತು ಬೇರಾಯ್ತು

ಕಣ್ಣು ಕಣ್ಣುಗಳಲ್ಲಿ ರಾತ್ರಿಯೇ ಕರಗಿ ಹೋಯ್ತು

ಬಗೆಹರಿಯದ ಯೋಚನೆಗಳ ಘಮಲು ನನ್ನಿರುವು

ನಿಯತ್ತನ್ನು ದೂರಿದೆ, ನಿಯತ್ತೇ ಎದುರಾಯ್ತು

ಬದುಕು, ಕಣ್ಣಿಂದ ಉದುರಿದ ಬಣ್ಣವಿಲ್ಲದ ತುಂಡು

ನಿನ್ನ ಮಡಿಲು ಸಿಕ್ಕಿದ್ದರೆ ಕಂಬನಿಯಾದರೂ ಆಗಿರುತ್ತಿತ್ತು.

ಮೀನಾ ಕುಮಾರಿ ನೆನಪಿನ ಚಿತ್ರಗಳು

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More