ಮೀನು ಮಾರುವ ವಿದ್ಯಾರ್ಥಿನಿ ಇದೀಗ ಕೇರಳ ಸರ್ಕಾರದ ದೇಶಿ ಉತ್ಸನ್ನಗಳ ರಾಯಭಾರಿ!

ಜುಲೈ 25ರಂದು ಮಲೆಯಾಳಂನ ‘ಮಾತೃಭೂಮಿ’ ಪತ್ರಿಕೆಯಲ್ಲಿ, 20 ವರ್ಷದ ಹನನ್ ಎಂಬ ಯುವತಿ ತನ್ನ ಶಿಕ್ಷಣದ ವೆಚ್ಚ ಭರಿಸಲು ಕಾಲೇಜು ಮುಗಿದ ಬಳಿಕ ಮೀನು ಮಾರಾಟ ಮಾಡುತ್ತಾಳೆಂಬ ಲೇಖನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಕೆಲ ಕಿಡಿಗೇಡಿಗಳಿಂದ ಆಕ್ರೋಶವೂ ವ್ಯಕ್ತವಾಗಿತ್ತು

ಕೊಚ್ಚಿಯಲ್ಲಿ ತೃತೀಯ ವರ್ಷದ ಬಿಎಸ್ಸಿ ಓದುತ್ತಿರುವ ಹನನ್ ಹಮೀದ್ ಎಂಬ ವಿದ್ಯಾರ್ಥಿನಿ ಕಾಲೇಜು ಸಮವಸ್ತ್ರದಲ್ಲೇ ಮೀನು ಮಾರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೇ ತಡ, ರಾತ್ರಿ ಬೆಳಗಾಗುವುದರೊಳಗೆ ಹನನ್ ದೇಶದ ಗಮನ ಸೆಳೆದಳು. ಆಕೆಯ ಕತೆ ಕೇಳಿದ ಚಿತ್ರನಿರ್ದೇಶಕ ಅರುಣ್ ಗೋಪಿ, ತನ್ನ ಮುಂದಿನ ಚಿತ್ರಕ್ಕೆ ನೀನೇ ನಾಯಕಿ ಎಂದು ಘೋಷಿಸಿಯೇಬಿಟ್ಟರು. ಯುವತಿಯ ಕಾರ್ಯಕ್ಕೆ ರಾಜಕಾರಣಿಗಳು ಹಾಗೂ ಚಿತ್ರತಾರೆಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಮುಸಲ್ಮಾನ್ ಯುವತಿಯೊಬ್ಬಳ ಈ ಸಾಧನೆಗೆ, ಕೆಲ ಕಿಡಿಗೇಡಿಗಳು ಆಕ್ರೋಶ ವ್ಯಕ್ತಪಡಿಸಿದ ದುರಂತವೂ ನಡೆಯಿತು.

“ಜುಲೈ 25ರಂದು ಮಲೆಯಾಳಂನ 'ಮಾತೃಭೂಮಿ' ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಸುಳ್ಳಾಗಿದ್ದು, ಹನನ್ ಪ್ರಚಾರಕ್ಕಾಗಿ ಈ ರೀತಿ ಗಿಮಿಕ್ ಮಾಡಿದ್ದಾಳೆ,” ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕವಾಗಿ ಆಕೆಯನ್ನು ಜರಿಯಲಾರಂಭಿಸಿದರು. ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ನಿಜ ಎಂದು ಕಾಲೇಜು ಪ್ರಾಂಶುಪಾಲರು ಹಾಗೂ ನೆರೆಹೊರೆಯವರು ತಿಳಿಸಿದರೂ, ಟೀಕಾಕಾರರು ಸುಮ್ಮನಾಗಲಿಲ್ಲ. ಯುವತಿಯ ಮೇಲೆ ವೈಯಕ್ತಿಕ ಟೀಕೆ ಹೆಚ್ಚಾಗಿದ್ದರಿಂದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಆಕೆಯ ಬೆಂಬಲಕ್ಕೆ ನಿಂತು, ಟ್ರೋಲಿಗರ ವಿರುದ್ಧ ಕ್ರಮಕ್ಕೆ ಸೂಚಿಸಿದರು. ಕಾರ್ಯಾಚರಣೆ ನಡೆಸಿದ ಪೊಲೀಸರು, ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹನನ್ ಕೇರಳದ ನವತಲೆಮಾರಿನ ಆಕಾಂಕ್ಷಿಗಳ ಪ್ರತಿನಿಧಿಯಾಗಿದ್ದು, ಕೇರಳ ಸರ್ಕಾರ ಆಕೆಯನ್ನು ದೇಸಿ ಉತ್ಪನ್ನಗಳ ಮಾರಾಟ ರಾಯಭಾರಿಯಾಗಿ ಆಯ್ಕೆ ಮಾಡಿದೆ. ಈ ಅವಕಾಶದಿಂದ ಆಕೆ ಖುಷಿಯಾಗಿದ್ದಾರೆ.

ಈ ನಡುವೆ, ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಹನನ್, "ನಾನು ಟ್ರೋಲಿಗರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನನ್ನ ಕುಟುಂಬವನ್ನು ನಿರ್ವಹಿಸಲು ನಾನು ಮೀನು ಮಾರುವ ಉದ್ಯೋಗ ಮಾಡುತ್ತಿದ್ದೇನೆ. ನಾನು ಮೀನು ಮಾರುವ ನಿರ್ಧಾರ ಕೈಗೊಂಡಾಗ, ‘ನೀನು ಹೆಣ್ಣು, ಮೀನು ಮಾರುವ ಉದ್ಯೋಗದಿಂದ ತೊಂದರೆಗೊಳಗಾಗುತ್ತಿಯ’ ಎಂದು ಕಿವಿಮಾತು ಹೇಳಿದ್ದರು. ಆದರೆ, ನಾನು ಹಿಮ್ಮೆಟ್ಟಲಿಲ್ಲ. ಹೆಣ್ಣಾದವಳು ವೃತ್ತಿಯನ್ನು ಆಯ್ದುಕೊಳ್ಳುವ ಮುನ್ನ ಸಾಕಷ್ಟು ಬಾರಿ ಯೋಚಿಸಬೇಕಿದೆ ಎಂಬ ಕಲ್ಪನೆಯನ್ನು ಸುಳ್ಳು ಎಂದು ದೇಶಕ್ಕೆ ಸಾಬೀತು ಮಾಡಿ ತೋರಿಸಬೇಕು ಎಂಬುದು ನನ್ನ ಅಚಲ ನಿರ್ಧಾರವಾಗಿದೆ," ಎಂದಿದ್ದಾರೆ ಹನನ್.

ಇದೇ ವೇಳೆ, ತಮ್ಮ ವಿಡಿಯೋ ವೈರಲ್ ಆದ ಬಳಿಕ ಸಹಾಯಹಸ್ತ ಚಾಚುತ್ತಿರುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಯುವತಿ, "ನಾನು ಸಂಕಷ್ಟದಲ್ಲಿದ್ದಾಗ ನನಗೆ ಯಾರೂ ಸಹಾಯ ಮಾಡಲಿಲ್ಲ. ನಾನು ನನ್ನ ಊಟವನ್ನು ಹೇಗೆ ಸಂಪಾದಿಸಬೇಕು ಎಂಬ ಚಿಂತೆಯಲ್ಲಿದ್ದಾಗ ಯಾರೂ ಕೈಹಿಡಿಯಲಿಲ್ಲ. ನನ್ನ ಕಷ್ಟದ ಮತ್ತು ಖುಷಿಯ ಗಳಿಗೆಯಲ್ಲಿ ನನ್ನ ಜೊತೆಗೆ ಇದ್ದವರ ಬಗ್ಗೆ ನನಗೆ ಗೌರವವಿದೆ. ಆದರೆ, ಟ್ರೋಲ್‌ಗೆ ಒಳಗಾದೆ ಎಂಬ ಕಾರಣಕ್ಕಾಗಿ ನನಗೆ ಸಹಾಯ ಮಾಡುವವರ ನೆರವು ನನಗೆ ಬೇಕಾಗಿಲ್ಲ," ಎಂದು ಹೇಳಿದ್ದಾರೆ.

“ಕೆಲವರಿಗೆ ಟ್ರೋಲ್ ಮಾಡುವುದು ಹವ್ಯಾಸ. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ದೇಶದ ಗಮನ ಸೆಳೆಯುವ ಯಾವುದೇ ಕೆಲಸವನ್ನು ನಾನು ಮಾಡಿಲ್ಲ. ಈ ಎಲ್ಲ ಪ್ರತಿಕ್ರಿಯೆಗಳು ನನ್ನನ್ನು ಇನ್ನಷ್ಟು ಗಟ್ಟಿಗೊಳಿಸಿದೆ,” ಎಂದಿದ್ದಾರೆ ಅವರು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More