ಮಂಚದ ಕೆಳಗಿಂದ ರವಾನೆಯಾದ ಸಂದೇಶವೊಂದು ಜೇಬುಗಳ್ಳರಿಗೆ ಮುಳುವಾಗಿದ್ದು ಹೇಗೆ?

ಲಾಡ್ಜ್‌ವೊಂದರ ಬೆಡ್ ಕೆಳಗಿನಿಂದ ರವಾನೆಯಾದ ‘ಬನ್ನಿ’ (COME) ಎಂಬ ಸಂದೇಶವೊಂದು, ಚೆನ್ನೈನಲ್ಲಿ ಬೀಡುಬಿಟ್ಟಿದ್ದ ಜೇಬುಕಳ್ಳರ ಬೃಹತ್ ಜಾಲವನ್ನು ಜೈಲಿಗಟ್ಟಿದೆ! ಡಿಎಂಕೆ ಕಾರ್ಯಾಕರ್ತರನ್ನೇ ಗುರಿ ಆಗಿಸಿಕೊಂಡಿದ್ದ ಈ ಗುಂಪನ್ನು ಚೆನ್ನೈ ಪೊಲೀಸರು ಸಿನಿಮೀಯ ರೀತಿಯಲ್ಲಿ ಹಿಡಿದಿದ್ದಾರೆ

ಅದು ಚೆನ್ನೈನ ಪ್ರಸಿದ್ಧ ಕಾವೇರಿ ಆಸ್ಪತ್ರೆಯಿಂದ ಕೊಂಚ ದೂರದಲ್ಲಿರುವ ಲಾಡ್ಜ್. ಅದರ ಕೊಠಡಿಯೊಂದರಲ್ಲಿ ತಂಗಿದ್ದ ಆ ಮೂವರ ಬಗ್ಗೆ ಅನುಮಾನಗೊಂಡ ಪೊಲೀಸರು, ಅವರ ಬೆನ್ನತ್ತಿದ್ದರು. ಕೊಠಡಿಯೊಳಗೆ ಹೋದ ಯುವಕರು, ಕೆಲಹೊತ್ತಿನಲ್ಲೇ ಕೋಣೆಗೆ ಬೀಗ ಹಾಕದೆ ಹೊರಹೋಗುತ್ತಾರೆ. ಇದೇ ಸಂದರ್ಭವನ್ನು ಬಳಸಿಕೊಂಡು ಮಫ್ತಿಯಲ್ಲಿ ಅವರನ್ನು ಹಿಂಬಾಲಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ಆ ಕೊಠಡಿ ಪ್ರವೇಶಿಸುತ್ತಾರೆ. ದುರದೃಷ್ಟಕ್ಕೆ ಯುವಕರ ತಂಡ ಮತ್ತೆ ಕೊಠಡಿಗೆ ಮರಳುತ್ತದೆ. ತಪ್ಪಿಸಿಕೊಳ್ಳುವ ಭರದಲ್ಲಿ  ಮಪ್ತಿಯಲ್ಲಿದ್ದ ಪೊಲೀಸ್ ಮಂಚದ ಕೆಳಗೆ ಅವಿತುಕೊಳ್ಳುತ್ತಾರೆ. ಇದರ ಅರಿವಿಲ್ಲದ ಯುವಕರು ತಮ್ಮ ಕಾರ್ಯಾಚರಣೆಯ ಕುರಿತಂತೆ ಸಂಭಾಷಣೆ ನಡೆಸುತ್ತಾರೆ. ಮಂಚದ ಕೆಳಗಿನ ಪೊಲೀಸ್, ‘ಕಮ್’ (ಬನ್ನಿ)  ಎಂಬ ಸಂದೇಶವೊಂದನ್ನು ಹೊಟೇಲ್ ಹೊರಭಾಗದಲ್ಲಿ ಕಾಯುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೊಬೈಲ್‌ಗೆ ಕಳುಹಿಸುತ್ತಾನೆ. ಮುಂದಿನ 10 ನಿಮಿಷಗಳಲ್ಲಿ ಚೆನ್ನೈನಲ್ಲಿ ಬೀಡುಬಿಟ್ಟಿರುವ ಬೃಹತ್ ಜೇಬುಗಳ್ಳರ ಜಾಲವೊಂದು ಪೊಲೀಸರ ವಶದಲ್ಲಿರುತ್ತದೆ. ಚೆನ್ನೈನಲ್ಲಿ ಹೀಗೆ ಸಿನಿಮೀಯ ಶೈಲಿಯಲ್ಲಿ ಜೇಬುಗಳ್ಳರನ್ನು ಬಂಧಿಸಿದ ಕಾರ್ಯಾಚರಣೆ ಈಗ ದೇಶದ ಗಮನ ಸೆಳೆದಿದೆ.

ಅಂದಹಾಗೆ ಈ ಜೇಬುಗಳ್ಳರ ಬಗ್ಗೆ ಪೊಲೀಸರಿಗೆ ಮೊದಲು ಅನುಮಾನ ಬಂದಿದ್ದು ಚೆನ್ನೈನ ಕಾವೇರಿ ಆಸ್ಪತ್ರೆ ಆವರಣದಲ್ಲಿ! ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಮ್ಮ ನೆಚ್ಚಿನ ನಾಯಕನ ಅನಾರೋಗ್ಯದಿಂದ ಸಹಜವಾಗಿಯೇ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಹೀಗಾಗಿ, ಕಾವೇರಿ ಆಸ್ಪತ್ರೆ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಡಿಎಂಕೆ ಕಾರ್ಯಕರ್ತರು ಜಮಾಯಿಸಿ ನಾಯಕ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಹೀಗೆ, ದೂರದ ಊರುಗಳಿಂದ ಬಂದು ಕರುಣಾನಿಧಿ ಅವರ ಆರೋಗ್ಯ ವಾರ್ತೆಗಾಗಿ ಕಾಯುತ್ತ ಕುಳಿತ ಈ ಕಾರ್ಯಕರ್ತರ ಮೊಬೈಲ್, ಪರ್ಸ್‌ಗಳು ನಾಪತ್ತೆಯಾದ ವರದಿ ಪೊಲೀಸರಿಗೆ ಬರಲಾರಂಭಿಸಿದವು. ಹೀಗಾಗಿ, ಜೇಬುಗಳ್ಳರ ಪತ್ತೆಗಾಗಿಯೇ 6 ಮಂದಿ ಪೊಲೀಸರ ವಿಶೇಷ ತಂಡ ರಚಿಸಲಾಯಿತು.

ಚೆನ್ನೈನ ಪೊಲೀಸ್ ಕಮೀಷನರ್ ಎ ಕೆ ವಿಶ್ವನಾಥನ್ ಪ್ರಕಾರ, “ಮಪ್ತಿಯಲ್ಲಿದ್ದ ವಿಶೇಷ ಪೊಲೀಸರ ತಂಡ ಕರುಣಾನಿಧಿ ಬೆಂಬಲಿಗರ ನಡುವೆ ಸೇರಿಕೊಂಡು ತನಿಖೆ ಆರಂಭಿಸಿತು. ಆಗ ಅವರ ಗಮನ ಸೆಳೆದವರು ಡಿಎಂಕೆ ಕಾರ್ಯಕರ್ತರಂತೆ ಧೋತಿ ಧರಿಸಿದ್ದ ಮೂವರು. ಇವರು ಕರುಣಾನಿಧಿ ಅವರ ಆರೋಗ್ಯಕ್ಕಾಗಿ ತಹತಹಿಸುತ್ತಿದ್ದ ಗುಂಪಿನಲ್ಲಿದ್ದ ಜನರಂತೆ ಘೋಷಣೆಗಳನ್ನು ಕೂಗದೆ, ಅತ್ತಿಂದಿತ್ತ ಓಡಾಡುತ್ತ ವಾಟ್ಸ್‌ಆ್ಯಪ್‌ ಸಂದೇಶ ರವಾನಿಸುವುದರಲ್ಲಿ ಬ್ಯುಸಿಯಾಗಿದ್ದರು.”

ಸೋಮವಾರ ಮಧ್ಯಾಹ್ನದ ಹೊತ್ತಿಗೆ, ಆಸ್ಪತ್ರೆ ಆವರಣದಿಂದ ಹೊರನಡೆದ ಈ ಮೂವರು ಯುವಕರನ್ನು  ನಾಲ್ವರು ಪೊಲೀಸರು ಹಿಂಬಾಲಿಸಿದ್ದಾರೆ. ಲಾಡ್ಜ್ ಒಳಗೆ ಹೋದ ಇವರು ಜೇಬುಗಳ್ಳರು ಎಂಬುದು ಪೊಲೀಸ್ ಅಧಿಕಾರಿಗೆ ಖಚಿತವಾಗುತ್ತಿದ್ದಂತೆ, ವಶಕ್ಕೆ ಪಡೆಯಲಾಗಿದೆ. ಈ ಮೂವರನ್ನು ವಿಚಾರಣೆ ನಡೆಸಿದಾಗ ಕುಳಿತಲ್ಲಿಂದಲೇ ಇವರನ್ನು ನಿಭಾಯಿಸುತ್ತಿದ್ದ ಕಿಂಗ್‌ಪಿನ್ ಅಮೀರ್ ಭಾಷಾ ಎಂಬಾತ ಸಿಕ್ಕಿಬಿದ್ದಿದ್ದಾನೆ. ಹೀಗೆ, ಪಿಕ್ ಪಾಕೆಟ್‌ ದಂಧೆ ಮಾಡುತ್ತಿದ್ದ ಒಟ್ಟು 11 ಮಂದಿ ಈಗ ಕಂಬಿ ಎಣಿಸುತ್ತಿದ್ದಾರೆ.

“ಚೆನ್ನೈನಲ್ಲಿ ಬೀಡುಬಿಟ್ಟಿರುವ ಈ ಜೇಬುಗಳ್ಳರ ಮುಖ್ಯಸ್ಥ ಅಮೀರ್ ಭಾಷಾ. ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಿ ಕೊಠಡಿಯಲ್ಲೇ ಕುಳಿತುಕೊಂಡು ಇಡೀ ಜಾಲವನ್ನು ಈತ ನಿಯಂತ್ರಿಸುತ್ತಿದ್ದ. ತನ್ನ ತಂಡದ ಸದಸ್ಯರಿಗೆ ದಿನಕ್ಕೆ ಒಂದು ಸಾವಿರ ರುಪಾಯಿಗಳಂತೆ ವೇತನ ನೀಡುತ್ತಿದ್ದ. ದಿನಗೂಲಿಗೆ ಪಿಕ್ ಪಾಕೆಟ್ ಮಾಡುತ್ತಿದ್ದ ಇವರು, 2016ರ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಜಯಲಲಿತಾ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲೂ ಅಪೋಲೋ ಆಸ್ಪತ್ರೆ ಹೊರಭಾಗದಲ್ಲಿ ಜಮಾಯಿಸಿದ್ದ ನೂರಾರು ಮಂದಿ ಕಾರ್ಯಕರ್ತರ ಹಣ ಹಾಗೂ ಮೊಬೈಲ್ ಎಗರಿಸಿದ್ದರು,” ಎಂದು ಇಂಡಿಯನ್ ಎಕ್ಸ್ ಪ್ರೆಸ್ಗೆ ಚೆನ್ನೈ ಪೊಲೀಸ್ ಕಮೀಷನರ್ ಎ ಕೆ ವಿಶ್ವನಾಥನ್ ವಿವರಿಸಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More