ಚರಿತ್ರೆಯ ಹೂವನ್ನು ವರ್ತಮಾನದಲ್ಲಿ ಮುಡಿದು ನಸುನಗುವ ‘ಬೇಗಮೋ ಕಾ ಭೋಪಾಲ್’

ಉದಯೋನ್ಮುಖ ನಿರ್ದೇಶಕಿ ರಚಿತಾ ಗೋರೊವಾಲ, ಭೋಪಾಲದ ಒಂದು ಕಾಲದ ರಾಣಿಯರ ಕತೆ ಹೇಳುತ್ತ ಭೂತ ಮತ್ತು ವರ್ತಮಾನದ ಉಯ್ಯಾಲೆಯಲ್ಲಿ ಪ್ರೇಕ್ಷಕರನ್ನು ತೂಗುತ್ತಾರೆ. ಆ ಕಾಲದ ಕತೆಯಾದರೂ ಅದು ನಮ್ಮ ಮನೆಯ ಹೆಣ್ಣುಮಕ್ಕಳ ಕತೆ ಕೂಡ ಆಗುವುದು ವಿಶೇಷ

ಚರಿತ್ರೆಯಲ್ಲದ ಚರಿತ್ರೆಯನ್ನು ವರ್ತಮಾನವಲ್ಲದ ವರ್ತಮಾನವನ್ನು ಏಕಕಾಲಕ್ಕೆ ತೆರೆದಿಡುವ, ಪ್ರಭಾವಳಿ ಕಳಚಿದ ರಾಣಿವಾಸವನ್ನು ಕಟ್ಟಿಕೊಡುತ್ತಲೇ ನಗರದ ನಿಶಬ್ದ ಚಲನೆಯನ್ನು ಒಟ್ಟಿಗೆ ಬಿಡಿಸಿಡುವ ಸಾಕ್ಷ್ಯಚಿತ್ರ ‘ಬೇಗಮೋ ಕಾ ಭೋಪಾಲ್.’

ಚಿತ್ರದುದ್ದಕ್ಕೂ ಇತಿಹಾಸ ಮುನ್ನೆಲೆಗೆ ಬರುವುದಿಲ್ಲ. ಬದಲಿಗೆ ಅದು ಇದೆ- ಇದ್ದೂ ಇಲ್ಲದಂತೆ. ಶಾಲೆಗೆ ನಿತ್ಯ ಹೋಗಿಬರುತ್ತಿದ್ದ ಹುಡುಗಿಯೊಬ್ಬಳಿಗೆ (ಅವರೇ ಸಾಕ್ಷ್ಯಚಿತ್ರದ ನಿರ್ದೇಶಕಿ ರಚಿತಾ ಗೋರೊವಾಲ) ಭೋಪಾಲದ ಪಾಳುಬಿದ್ದ ಕಟ್ಟಡಗಳು, ಮುರಿದುಹೋದ ಮನೆಗಳು ಯಾವುದೋ ಕತೆ ಹೇಳುತ್ತಿವೆ ಅನ್ನಿಸುತ್ತಿತ್ತು. ಒಳಹೊಕ್ಕಾಗ ಕಂಡದ್ದು ಸುಕ್ಕುಮುಖದ ಒಂದು ಕಾಲದ ರಾಣಿಯರ ನೆನಪುಗಳು. ನವಜಾತ ಶಿಶುವನ್ನು ಉತ್ತರಾಧಿಕಾರಿ ಎಂದು ಘೋಷಿಸಿ ರಾಜ್ಯಭಾರ ನಡೆಸುತ್ತಿದ್ದ ಹದಿನೆಂಟರ ವಿಧವೆ, ಗಂಡನ ಹತ್ಯೆ ತಪ್ಪಿಸಲು ಆತನನ್ನು ಬಚ್ಚಿಟ್ಟ ಪತ್ನಿ, ಅಮ್ಮನಿಗಾಗಿ ಪಟ್ಟ ತ್ಯಜಿಸಿದ ಮಗಳು…

19 ಮತ್ತು 20ನೇ ಶತಮಾನದ ಸುಮಾರು ನೂರು ವರ್ಷ ಭೋಪಾಲ್ ಯಾವ್ಯಾವುದೋ ಕಾರಣಕ್ಕೆ ಅಕ್ಷರಶಃ ಮಹಿಳೆಯರ ಸಾಮ್ರಾಜ್ಯವಾಗಿತ್ತು. ಧೈರ್ಯಶಾಲಿಗಳು, ಸುಧಾರಣಾವಾದಿಗಳು, ಚಾಣಾಕ್ಷರು, ಜನಾನುರಾಗಿಗಳೂ ಆಗಿ ಪುರುಷ ನವಾಬರನ್ನೂ ಆ ಪಠಾಣ್ ಮಹಿಳೆಯರು ಮೀರಿಸಿದ್ದರು. 1819ರಿಂದ 1926ರವರೆಗೆ ಆಳ್ವಿಕೆ ನಡೆಸಿದ ಈ ಗಟ್ಟಿಗಿತ್ತಿಯರು ಕಡೆಗೆ ಕಾಲನ ಹೊಡೆತಕ್ಕೆ ಸಿಲುಕಿದರು. ಪ್ರಜೆಗಳು ಪ್ರಭುಗಳಾಗುವ ಹೊತ್ತಿಗೆ ಹಿನ್ನೆಲೆಗೆ ಸರಿದರು, ಪಾಳುಬಿದ್ದ ಗೋಡೆಗಳಂತೆಯೇ ಆದರು.

ಇಷ್ಟಾದರೂ ಅವರೊಳಗೊಂದು ವರ್ತಮಾನವಿದೆ. ಅವರು ಏನನ್ನೋ ಕಳೆದುಕೊಂಡಿದ್ದಾರೆ, ಮತ್ತೇನನ್ನೋ ಉಳಿಸಿಕೊಂಡಿದ್ದಾರೆ. ಅದೇನು ಎಂಬುದನ್ನು ಕೆಲವೇ ಪದಗಳಲ್ಲಿ, ಆದರೆ ಸಮೃದ್ಧ ದೃಶ್ಯಗಳಲ್ಲಿ ಹಿಡಿದಿಡುವ ಯತ್ನ ‘ಬೇಗಮೋ ಕಾ ಸುಲ್ತಾನ್.’ ಕತೆ ಮುಂದುವರಿಸಬೇಕಿದ್ದ ಚರಿತ್ರೆ ಕಾಲು ಮುರಿದು ಕುಳಿತಂತಹ ಹೊತ್ತಿನಲ್ಲಿ ತೀರಾ ಖಾಸಗಿ ಎನ್ನುವಂತಹ ನೆನಪುಗಳೇ ಚರಿತ್ರೆ ಆಗಿಬಿಡುತ್ತವೆ. ಹಿಂದಿನದನ್ನು ಮುಂದುಮಾಡಿ ನೋಡುಗರೆದುರು ತಂದು ನಿಲ್ಲಿಸುತ್ತವೆ. ಮುಖ್ಯವಾಗಿ ನಿರ್ದೇಶಕಿ, ಹರಿಯುವ ನೀರು ಮತ್ತು ನಿಂತ ನೀರಿನ ಮೂಲಕ ಕಾಲದ ಗತಿಯನ್ನು ಹಿಡಿದಿಡಲು ನೋಡುತ್ತಾರೆ. ಬೆರಳುಗಳ ಮಧ್ಯೆ ತಿರುಗುವ ಜಪಮಣಿಗಳು ಕಾಲ ಸದಾ ತಿರುಗುವ ಚಕ್ರ ಎಂಬುದನ್ನು ಹೇಳಿ ಮರೆಯಾಗುತ್ತವೆ.

ಆಗಸ್ಟ್ 1ರಂದು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಮತ್ತು 2ರಂದು ಉಡುಪಿಯಲ್ಲಿ ಈ ಚಿತ್ರ ಪ್ರದರ್ಶನಗೊಂಡಿತು. ಈ ಸಂದರ್ಭದಲ್ಲಿ ‘ದಿ ಸ್ಟೇಟ್’ ಜೊತೆ ಮಾತನಾಡಿದ ರಚಿತಾ, “ಕತೆ ಹೇಳಬೇಕೆಂಬುದು ಪ್ರತಿಯೊಬ್ಬ ಚಿತ್ರ ತಯಾರಕರ ಆಸೆ. ಆದರೆ, ಅದಷ್ಟೇ ಅವರ ಕೆಲಸವಾಗಬಾರದು. ಬದಲಿಗೆ, ಕತೆಯನ್ನು ಜನ ಕೇಳಿಸಿಕೊಳ್ಳುವಂತಾಗಬೇಕು. ಹಾಗಾಗಿ ಚಿತ್ರದಲ್ಲಿ ಮಾತಿನ ಮೂಲಕ ನಡೆಯುವ ನಿರೂಪಣೆಗೆ ಪ್ರಾಧಾನ್ಯ ನೀಡಲಾಗಿಲ್ಲ,” ಎಂದರು.

26 ನಿಮಿಷಗಳ ಅವಧಿಯ ಸಾಕ್ಷ್ಯಚಿತ್ರದ ದೃಶ್ಯಗಳು ನಿರೂಪಕಿ ಬರೆದ ದಿನಚರಿಯ ಭಾಗದಂತೆ ಇವೆ. ಚದುರಿಹೋದ ಚಿತ್ರಗಳನ್ನೆಲ್ಲ ಒಂದೆಡೆ ಕಸೂತಿ ಹೆಣೆದಂತೆ ನಿರೂಪಣೆ ಇದೆ. ಇದು ರಾಣಿವಾಸದ ಕತೆ ಹೇಳುವ ಜೊತೆಗೆ ಭೋಪಾಲದ ಕಥನವನ್ನೂ ಕಟ್ಟಿಕೊಡುತ್ತದೆ. ಇದು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ ಅವರು, “ಭೋಪಾಲದಲ್ಲಿ ನಡೆದಾಡಿದರೆ ಸಾಕು, ಗತ-ಪ್ರಸ್ತುತದ ನಡುವೆ ಓಡಾಡಿದಂತೆ ಭಾಸವಾಗುತ್ತದೆ. ಅಲ್ಲಿನ ಒಂದೊಂದು ಕಲ್ಲು ಒಂದೊಂದು ಚರಿತ್ರೆ ಹೇಳುತ್ತವೆ. ಇಲ್ಲಿ ಬರುವ ಪಾತ್ರಗಳು ಕೂಡ ಭೋಪಾಲದ ಭಾಗವೇ ಆಗಿರುವುದರಿಂದ ಸಹಜವಾಗಿಯೇ ಇದು ಆ ನಗರದ ಕತೆ ಕೂಡ,” ಎಂದು ಉತ್ತರಿಸಿದರು.

ಇದನ್ನೂ ಓದಿ : ಹಾಕಿಂಗ್‌ ಅವರ ‘ಬ್ರೀಫ್‌ ಹಿಸ್ಟರಿ ಆಫ್‌ ಟೈಮ್‌’ ಆಧರಿಸಿದ ಬಿಬಿಸಿ ಸಾಕ್ಷ್ಯಚಿತ್ರ

ಹಾಗೆಂದು ಇದು ಕೇವಲ ಭೋಪಾಲದ ಕತೆಯಲ್ಲ, ಒಂದು ಕಾಲದ ರಾಣಿಯರ ಕತೆ ಕೂಡ ಅಲ್ಲ. ಅವರೊಳಗೆ ನಮ್ಮ ಮನೆಯ ಸ್ತ್ರೀ ಲೋಕವೂ ಕಾಣಬಹುದು. ಈ ಕುರಿತು ಮಾತನಾಡಿದ ರಚಿತಾ, “ಮಹಿಳೆಯರನ್ನು ವರ್ಗೀಕರಿಸಿ ನೋಡುವ ಪ್ರವೃತ್ತಿ ಎಲ್ಲಾ ಕಡೆ ಇದೆ. ಆದರೆ ಅವರನ್ನು ಸಡಗರದೊಡನೆ ಯಾಕೆ ತೋರಿಸಬಾರದು ಅನ್ನಿಸಿತು. ಆ ಅಂಶ ಕೂಡ ಚಿತ್ರದಲ್ಲಿದೆ. ಹಾಗೆ ತೋರಿಸಿದ್ದರಿಂದಲೇ ಆ ಪಾತ್ರಗಳು ಅನ್ಯ ಎನಿಸುತ್ತಿಲ್ಲ,” ಎಂದರು.

ಮೂಲತಃ ಭೋಪಾಲದವರಾದ ರಚಿತಾ, ವೃತ್ತಿಯಿಂದ ಎಂಜಿನಿಯರ್. ಕೆಲಕಾಲ ಮಂಗಳೂರಿನ ಇನ್ಫೋಸಿಸ್‌ನಲ್ಲಿ ಕೆಲಸ ಮಾಡಿದ್ದರು. ಚಲನಚಿತ್ರ ಕ್ಷೇತ್ರ ಸೂಜಿಗಲ್ಲಿನಂತೆ ಸೆಳೆಯಿತು. ಪರಿಣಾಮ, ಒಂದು ವರ್ಷ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪುಣೆಯ ಫಿಲಂ ಇನ್ಸ್‌ಟಿಟ್ಯೂಟ್‌ನಲ್ಲಿ ಅಧ್ಯಯನ ಮಾಡಿದರು. ‘ಬೇಗಮೋ ಕಾ ಭೋಪಾಲ್’ ನಿರ್ಮಾಣಕ್ಕೆ ಬರೋಬ್ಬರಿ ಮೂರು ವರ್ಷ ತಗುಲಿದೆ. ಅದರ ಸಂಕಲನ ಕಾರ್ಯವೇ ಒಂದು ವರ್ಷ ನಡೆದಿದೆ. ಭಾರತೀಯ ಫಿಲಂ ಡಿವಿಷನ್ ಚಿತ್ರವನ್ನು ನಿರ್ಮಿಸಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More