ವಿಡಿಯೋ ಸ್ಟೋರಿ | ಲಾಲ್‌ಬಾಗ್‌ನಲ್ಲಿ ಕಣ್ಮನ ಸೆಳೆಯುತ್ತಿದೆ ಫಲಪುಷ್ಪ ಪ್ರದರ್ಶನ

ಸ್ವಾತಂತ್ರ್ಯೋತ್ಸವದ ಅಂಗವಾಗಿ ಆ.೪-೧೫ರವರೆಗೆ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ. ಭಾರತೀಯ ಸೇನೆ ಹಾಗೂ ಕನ್ನಡ ಚಿತ್ರರಂಗದ ಐತಿಹಾಸಿಕ ಸಾಧನೆಗೆ ೧೮೦ಕ್ಕೂ ಹೆಚ್ಚು ಬಗೆಯ ಪುಷ್ಪ ಬಳಸಿ ನಮನ ಸಲ್ಲಿಸಲಾಗುತ್ತಿದೆ

ಬೆಂಗಳೂರಿನ ಹೆಗ್ಗುರುತುಗಳಲ್ಲೊಂದಾದ ಲಾಲ್‌ಬಾಗ್ ಸದ್ಯ ಹಿಂದೆಂದಿಗಿಂತಲೂ ರಮಣೀಯವಾಗಿದೆ. ಮಳೆಯಿಂದಾಗಿ ಹಸಿರು ನಳನಳಿಸುತ್ತಿರುವುದು ಒಂದೆಡೆಯಾದರೆ, ಶನಿವಾರದಿಂದ ಫಲಪುಷ್ಪ ಪ್ರದರ್ಶನವು ಲಾಲ್‌ಬಾಗ್‌ ಅನ್ನು ಚಿಣ್ಣರಿಂದ ವೃದ್ಧರವರೆಗೆ ಎಲ್ಲರೂ ಕಣ್ತುಂಬಿಕೊಳ್ಳಲು ಹಾತೊರೆಯುವಂತೆ ಮಾಡಿದೆ. ಸುಮಾರು ೨೪೦ ಎಕರೆ ಭೂಪ್ರದೇಶದಲ್ಲಿ ವಿವಿಧ ಜಾತಿಯ ಮರಗಳಿಗೆ ನೆಲೆಯಾಗಿರುವ ಲಾಲ್‌ಬಾಗ್‌ನಲ್ಲಿ ವರ್ಷಕ್ಕೆ ಎರಡು ಬಾರಿ ತೋಟಗಾರಿಕಾ ಇಲಾಖೆ ಮತ್ತು ಮೈಸೂರು ಉದ್ಯಾನಕಲಾ ಸಂಘ ಜಂಟಿಯಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸುತ್ತವೆ.

ಜನವರಿ ೨೬ರಂದು ಗಣರಾಜ್ಯೋತ್ಸವ ಮತ್ತು ಆಗಸ್ಟ್‌ ೧೫ರ ಸ್ವಾತಂತ್ರ್ಯದ ದಿನದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ವಿವಿಧ ಜಾತಿಯ, ದೇಶೀಯ ಮತ್ತು ಅಂತಾರಾಷ್ಟ್ರೀಯ ಪುಷ್ಪಗಳಿಂದ ರಚಿಸಲಾಗುವ ಭಿನ್ನ ಕಲಾಕೃತಿಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುತ್ತವೆ. ಸಂಪ್ರದಾಯದಂತೆ ದಾಖಲೆಯ ೨೦೮ನೇ ಬಾರಿಗೆ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಆಗಸ್ಟ್ ೦೪-೧೫ರವರೆಗೆ ೧೨ ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.

ಸುಮಾರು ೧೮೦ಕ್ಕೂ ಹೆಚ್ಚು ದೇಶೀಯ ಹಾಗೂ ವಿದೇಶಿ ಹೂವುಗಳಿಂದ ರಾಷ್ಟ್ರ ಮತ್ತು ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಎರಡು ಸುಂದರ ಕಲಾಕೃತಿಗಳನ್ನು ರೂಪಿಸಲಾಗಿದೆ. ಜುಲೈ ೨೬ರಂದು ನಡೆದ ಕಾರ್ಗಿಲ್‌ ವಿಜಯ್‌ ದಿವಸ್‌ ಗಮನದಲ್ಲಿಟ್ಟುಕೊಂಡು ಭಾರತೀಯ ಸೇನೆಯ ಪ್ರತಿಕೃತಿಗಳನ್ನು ರಚಿಸಿ, ಹೂವಿನಿಂದ ಅಲಂಕರಿಸಲಾಗಿದೆ. ಕನ್ನಡ ಚಿತ್ರರಂಗಕ್ಕೆ ೮೫ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪುಷ್ಪನಮನ ಸಲ್ಲಿಸಲಾಗಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಲಾಲ್‌ಬಾಗ್‌ನಲ್ಲಿ ಬೆಳೆಸಲಾಗಿರುವ ಹೂವುಗಳು, ಖಾಸಗಿ ಫಾರ್ಮ್‌ಗಳು, ಊಟಿ ಮತ್ತು ಪುಣೆಯಿಂದ ಅಲಂಕಾರಕ್ಕೆ ಅಗತ್ಯವಾದ ವಿವಿಧ ಮಾದರಿಯ ಫುಷ್ಪಗಳನ್ನು ತರಿಸಿಕೊಳ್ಳಲಾಗಿದೆ. ಇದರ ಜೊತೆಗೆ ಹಾಲೆಂಡ್‌ನಿಂದ ಏಷ್ಯಾಟಿಕ್‌ ಲಿಲ್ಲಿ, ಲೆದರ್ ಲಿಫಿ, ಲಿಲಿಯಂ, ಎಕ್ಸಾಟಿಕ್‌ ಆರ್ಕಿಡ್‌ ಸೇರಿದಂತೆ ೧೩ ಬಗೆಯ ಪುಷ್ಪಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಗಾಜಿನ ಮನೆಯಲ್ಲಿ ಹಿಮಾಲಯ ಪರ್ವತ, ಅರಬ್ಬಿ ಸಮುದ್ರ, ಹಿಂದೂ ಮಹಾಸಾಗರದ ಜೊತೆಗೆ ಅಮರ್ ಜವಾನ್‌ ಜ್ಯೋತಿ, ನೌಕಾದಳ, ವಾಯುಸೇನೆ ಹಾಗೂ ಭೂಸೇನೆಯ ಪ್ರತಿಕೃತಿಗಳಿಗೆ ಬೆಂಗಳೂರಿನ ಕಲಾವಿದ ಜಗದೀಶ್‌ ಮತ್ತವರ ತಂಡ ಅತ್ಯಂತ ನಾಜೂಕಿನಿಂದ ಪುಷ್ಪಾಲಂಕಾರ ಮಾಡಿದೆ. ಭೂ, ನೌಕೆ, ವಾಯುಸೇನೆಯನ್ನು ಪ್ರಸ್ತುತಪಡಿಸಿರುವ ರೀತಿ ವೀಕ್ಷಕರನ್ನು ಪುಳಕಿತಗೊಳಿಸುವಂತಿವೆ. ಕನ್ನಡ ಚಿತ್ರರಂಗದ ಐತಿಹಾಸಿಕ ಸಾಧನೆಯನ್ನು ಬಿಂಬಿಸುವ ಕಲಾಕೃತಿಯನ್ನು ಕಲಾವಿದ ಅಗರವಾಲ್‌ ಮತ್ತವರ ತಂಡ ಅತ್ಯುತ್ತಮವಾಗಿ ಪ್ರಸ್ತುತಪಡಿಸಿದೆ. ರೀಲು-ಕ್ಯಾಮೆರಾ ಪ್ರತಿಕೃತಿಯು ನೋಡುಗರಲ್ಲಿ ಉದ್ಘಾರ ಹೊರಡಿಸುವಂತೆ ಪ್ರೇರೇಪಿಸುತ್ತದೆ. ಪುಷ್ಪಜೋಡಣೆಯ ಆಟದಲ್ಲಿ ಕಲಾವಿದರು ತಮ್ಮ ಕಲಾಸೌಂದರ್ಯವನ್ನು ಮೆರೆದಿದ್ದಾರೆ.

೧೨ ದಿನಗಳಲ್ಲಿ ನಾಲ್ಕು ದಿನಕ್ಕೊಮ್ಮೆ ಪುಷ್ಪಗಳ ಬದಲಾವಣೆ ಮಾಡಲಾಗುತ್ತದೆ. ಒಟ್ಟು ೬೫ ಸದಸ್ಯರ ತಂಡ ರಾತ್ರೋರಾತ್ರಿ ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಟೊಂಕ ಕಟ್ಟಿ ನಿಂತಿದೆ. “ವಿಶ್ವದಲ್ಲಿ ಚಲ್ಸಿ ಫ್ಲವರ್‌ ಶೋ ಆಫ್‌ ಲಂಡನ್‌ ನಂತರ ಅತಿ ದೊಡ್ಡಮಟ್ಟದಲ್ಲಿ ಫಲಪುಷ್ಪ ಪ್ರದರ್ಶನ ನಡೆಯುವುದು ಕರ್ನಾಟಕದ ಲಾಲ್‌ಬಾಗ್‌ನಲ್ಲಿ. ದಾಖಲೆಯ ೨೦೮ನೇ ಬಾರಿಗೆ ಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಪುಷ್ಪೋತ್ಸವ ಎಂದರೆ ಹೂವುಗಳ ಜೋಡಣೆಯಷ್ಟೇ ಅಲ್ಲ. ನಾಡು, ನುಡಿ, ದೇಶದ ಬಗ್ಗೆ ಅಭಿಮಾನ ಮೂಡಿಸುವ ಕೆಲಸವನ್ನು ಪುಷ್ಪೋತ್ಸವದ ಮೂಲಕ ಮಾಡಲಾಗುತ್ತಿದೆ,” ಎನ್ನುತ್ತಾರೆ ಲಾಲ್‌ಬಾಗ್‌ನ ಜಂಟಿ ನಿರ್ದೇಶಕ ಎಂ ಜಗದೀಶ್‌.

ಅಂದಹಾಗೆ, ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ೧.೭೫ ಕೋಟಿ ರುಪಾಯಿ ವೆಚ್ಚ ಮಾಡಲಾಗುತ್ತಿದೆ. ಪ್ರತಿ ವರ್ಷ ೪-೫ ಲಕ್ಷ ವೀಕ್ಷಕರು ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಈ ಬಾರಿ ೬ ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ಲೆಕ್ಕಾಚಾರ ಸಂಘಟಕರದ್ದು. ಗಾಜಿನ ಮನೆಯಲ್ಲಿ ಭಾರತೀಯ ಸೇನೆಯ ಸಾಧನೆಗಳು, ಇದುವರೆಗೆ ಸೇನಾಪಡೆಗಳನ್ನು ಮುನ್ನಡೆಸಿದ ಮುಖ್ಯಸ್ಥರು, ಸೇನೆಯ ರಣರಂಗದ ಸಾಧನೆ, ರಕ್ಷಣಾ ಸಚಿವಾಲಯದ ಜೊತೆ ಕೆಲಸ ಮಾಡುವ ಸಂಸ್ಥೆಗಳಾದ ಇಸ್ರೊ, ಎಚ್‌ಎಎಲ್‌ಗಳ ಸಾಧನೆ ವಿವರಿಸುವ ಫಲಕಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ : ಎಲ್ಲರ ಮನದ ಮೂಲೆಯಲ್ಲಿ ಪುಳಕ, ಸಂಭ್ರಮ, ಸಮಾಧಾನ ಸೃಷ್ಟಿಸಿದ ಮಹಾಮಳೆ

ಗಾಜಿನ ಮನೆಯ ಹೊರಗೆ ಎಚ್‌ಎಎಲ್‌ ತನ್ನ ಉತ್ಪನ್ನಗಳ ಪ್ರಾತ್ಯಕ್ಷಿಕೆ ನೀಡಲು ಮಳಿಗೆಯೊಂದನ್ನು ತೆರೆದಿದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸಹ ತನ್ನ ಬತ್ತಳಿಕೆಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲು ಮಳಿಗೆಯೊಂದನ್ನು ತೆರೆದಿದೆ. ಮಕ್ಕಳು, ಯುವಕರು ಹಾಗೂ ಆಸಕ್ತರ ಪ್ರಶ್ನೆಗಳಿಗೆ ನುರಿತ ಯೋಧರು ಅಷ್ಟೇ ಉತ್ಸಾಹದಿಂದ ವಿವರಣೆ ನೀಡುವ ದೃಶ್ಯವನ್ನು ಕಾಣಬಹುದಾಗಿದೆ. ವಾಯುಸೇನೆಯು ಸೋಮವಾರದಿಂದ ಮಳಿಗೆ ತೆರೆಯಲಿದ್ದು, ಸೇನೆಯಲ್ಲಿ ಉದ್ಯೋಗವಕಾಶ ಹಾಗೂ ಜನಸಾಮಾನ್ಯರ ಕುತೂಹಲಗಳನ್ನು ತಣಿಸಲು ಮುಂದಾಗಿದೆ. ೧೦೦ಕ್ಕೂ ಸಿಸಿಟಿವಿ ಕ್ಯಾಮೆರಾ ಹಾಗೂ ೧೫೦ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಏನುಂಟು, ಏನಿಲ್ಲ?

ಗಾಜಿನ ಮನೆಯಲ್ಲಿನ ರಮ್ಯ ಮನೋಹರ ದೃಶ್ಯಗಳನ್ನು ಸವಿದ ನಂತರ ಶಾಂಪಿಂಗ್‌ ಮಾಡಲು, ಮೆಲ್ಲಲು ಹಾಗೂ ಹಸಿವು ತಣಿಸಲು ನಾನಾ ರೀತಿಯ ೧೧೦ಕ್ಕೂ ಮಳಿಗೆಗಳನ್ನು ತೆರೆಯಲಾಗಿದೆ. ಸಾವಯವ, ಕರಕುಶ, ವಿವಿಧ ಖಾದ್ಯ, ಆಟಕಿ, ಗೃಹ ಉತ್ಪನ್ನ, ಆಯುರ್ವೇದಿಕ್‌ ಉತ್ಪನ್ನಗಳ ಮಳಿಗೆಗಳು ಎಲ್ಲರನ್ನೂ ತಮ್ಮತ್ತ ಸೆಳೆದುಕೊಳ್ಳುತ್ತಿವೆ. ೧೫ರಿಂದ ೨೫ ಸಾವಿರ ಬಾಡಿಗೆ ತೆತ್ತು ರಾಜ್ಯದ ವಿವಿಧ ಭಾಗಗಳ ವ್ಯಾಪಾರಿಗಳು ಮಳಿಗೆಗಳನ್ನು ಹಾಕಿಕೊಂಡಿದ್ದಾರೆ. ತಾರಸಿ ತೋಟ, ಹನಿ ನೀರಾವರಿ ಬಗ್ಗೆ ಮಾಹಿತಿ ನೀಡಲು ತೋಟಗಾರಿಕೆ ಇಲಾಖೆಯೇ ಆಧುನಿಕ ತಂತ್ರಜ್ಞಾನ ಮಳಿಗೆಯನ್ನು ತೆರೆದಿದ್ದು, ಪುಟ್ಟದಾಗಿಯಾದರೂ ಕೈತೋಟ ಮಾಡುವಂತೆ ಪ್ರೇರೇಪಿಸುವಲ್ಲಿ ನಿರತವಾಗಿದೆ.

ಮಕ್ಕಳ ಚಿನ್ನಾಟ, ಯುವಕ-ಯುವತಿಯರ ಮೋಜಿನಾಟ

ಸಾಮಾನ್ಯ ದಿನಗಳಲ್ಲಿ ಲಾಲ್‌ಬಾಗ್‌ನಲ್ಲಿ ಯುವಕ-ಯುವತಿಯರ ದಂಡೇ ನೆರೆದಿರುತ್ತದೆ. ಇಂಥ ಸ್ಥಿತಿಯಲ್ಲಿ ಫಲಫುಷ್ಪ ಪ್ರದರ್ಶನದಲ್ಲಿ ಕೇಳಬೇಕೇ? ವಿವಿಧ ಕಾಲೇಜುಗಳ ಯುವಕ-ಯುವತಿಯರ ತಂಡವೇ ಲಾಲ್‌ಬಾಗ್‌ ಆವರಿಸಿಕೊಳ್ಳಲಾರಂಭಿಸಿದೆ. ಮಕ್ಕಳಂತೂ ಸೇನೆಯ ಪ್ರತಿಕೃತಿಗಳು ಹಾಗೂ ಬಂಕರ್‌, ಗನ್‌ಗಳನ್ನು ನೋಡಿ ಅವುಗಳನ್ನು ಖರೀದಿಸುವಂತೆ ಪೋಷಕರಿಗೆ ದುಂಬಾಲು ಬೀಳುವ ದೃಶ್ಯ ಸಾಮಾನ್ಯ. ಕ್ಯಾಮೆರಾ, ಮೊಬೈಲ್‌ಗಳು ಬಿಡುವಿಲ್ಲದೆ ವಿವಿಧ ಭಂಗಿಗಳನ್ನು ಸೆರೆಹಿಡಿಯಲು ಬಳಕೆಯಾಗುತ್ತಿವೆ. ಸೆಲ್ಫಿ, ಗುಂಪು ಚಿತ್ರಗಳನ್ನು ಕ್ಲಿಕ್ಕಿಸಿ ಎಲ್ಲರೂ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More