ಸರ್ವಜ್ಞನ ತ್ರಿಪದಿಗಳ ತಿಳಿವಳಿಕೆಗೆ ಮನಸೋತಿದ್ದ ಅಪರೂಪದ ರಾಜಕಾರಣಿ ಕರುಣಾನಿಧಿ

ತಮಿಳುನಾಡಿನ ರಾಜಕೀಯ ವಲಯದಲ್ಲಿ ಅಪರೂಪದ ರಾಜಕಾರಣಿಯಾಗಿ ಎಂ ಕರುಣಾನಿಧಿ ಕಾಣಿಸುತ್ತಾರೆ. ರಾಜಕೀಯ ಚೌಕಟ್ಟಿನಾಚೆ ತಮ್ಮನ್ನು ಸಾಹಿತ್ಯ, ಸಿನೆಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರ ವ್ಯಕ್ತಿತ್ವವನ್ನು ಸಾಹಿತಿ, ಅನುವಾದಕ ಎನ್ ದಾಸ್ ಅವರು ತಮ್ಮ ನೋಟದಲ್ಲಿ ಕಟ್ಟಿಕೊಟ್ಟಿದ್ದಾರೆ

ತಮಿಳುನಾಡಿನ ರಾಜಕೀಯ ವಲಯದಲ್ಲಿ ಅಪರೂಪದ ರಾಜಕಾರಣಿಯಾಗಿ ಎಂ ಕರುಣಾನಿಧಿ ಕಾಣಿಸುತ್ತಾರೆ. ರಾಜಕೀಯ ಚೌಕಟ್ಟಿನಾಚೆ ತಮ್ಮನ್ನು ಸಾಹಿತ್ಯ, ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು. ಅವರೊಳಗೆ ಸಾಹಿತ್ಯದ ಆರಾಧಕ ಮನಸ್ಸೊಂದು ಗಟ್ಟಿಯಾಗಿ ನೆಲೆಯೂರಿದ್ದರಿಂದಾಗಿಯೇ ಅವರಿಂದ ಹಲವಾರು ಸಾಹಿತ್ಯ ಕೃತಿಗಳು ರಚನೆಯಾಗಿವೆ. ಇಷ್ಟೇ ಅಲ್ಲದೆ, ಬೇರೆ-ಬೇರೆ ಭಾಷೆಯ ಕೃತಿಗಳು ತಮಿಳಿಗೆ ಅನುವಾದಗೊಂಡರೆ ಬಹಳ ಸಂತೋಷಪಟ್ಟಿದ್ದನ್ನು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಣ್ಣಾರೆ ಕಂಡಿದ್ದೇನೆ.

ಹಿರಿಯ ರಾಜಕಾರಣಿ ಎಂ ವೀರಪ್ಪ ಮೊಯಿಲಿ ಅವರು ಬರೆದ ‘ರಾಮಾಯಣ ಮಹಾನ್ವೇಷಣಂ’ ಕೃತಿಯನ್ನು ನಾನು ಹಾಗೂ ತಮಿಳು ಸೆಲ್ವಿ ತಮಿಳಿಗೆ ಅನುವಾದ ಮಾಡಿದ್ದೇವೆ. ಆ ಅನುವಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ ೨೦೦೯ ಚೈನ್ನೈ ನಲ್ಲಿ ನಡೆಯಿತು. ಆ ಪುಸ್ತಕವನ್ನು ಬಿಡುಗಡೆಗೊಳಿಸಿದ್ದು ಎಂ ಕರುಣಾನಿಧಿ ಅವರೇ. ಗಮನಾರ್ಹ ಸಂಗತಿ ಎಂದರೆ, ಆ ಪುಸ್ತಕದಲ್ಲಿ ದಶರಥನ ಕುರಿತು ಒಂದು ಕಥನಕಾವ್ಯ ಬರುತ್ತದೆ. ಅದನ್ನು ಕರುಣಾನಿಧಿ ತುಂಬಾ ಇಷ್ಟಪಟ್ಟು ವಾಚನ ಮಾಡಿದ್ದರು. ಅವರ ಕಾವ್ಯಾಸ್ವಾದನೆ ಉತ್ಕೃಷ್ಟವಾಗಿತ್ತು.

ಕನ್ನಡ ಭಾಷೆಯ ಸಾಹಿತ್ಯಕ ಕೃತಿಗಳ ಮೇಲೆ ಅವರಿಗೆ ವಿಶೇಷ ಅಭಿಮಾನ ಇತ್ತು. ಬೆಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ, “ಸರ್ವಜ್ಞನ ತ್ರಿಪದಿಗಳು ಕನ್ನಡದಿಂದ ತಮಿಳು ಭಾಷೆಗೆ ಅನುವಾದಗೊಂಡಿರುವುದು ನನ್ನ ಗಮನಕ್ಕೆ ಬಂತು. ಕೂಡಲೇ, ತಮಿಳುನಾಡು ಅಭಿವೃದ್ಧಿ ನಿಗಮದಿಂದ ಆ ಅನುವಾದಗೊಂಡ ಪುಸ್ತಕವನ್ನು ಮುದ್ರಣಗೊಳಿಸಿದೆ. ಅನುವಾದ ಮಾಡಿದ ಕನ್ನಡದ ಲೇಖಕರಿಗೆ ನಾನು ಕೃತಜ್ಞತೆಗಳನ್ನು ಅರ್ಪಿಸುತ್ತೇನೆ,” ಎಂದಿದ್ದರು. ಆ ಸಂದರ್ಭದಲ್ಲಿ ನಾನು ಅವರನ್ನು ಮುಖತಃ ನೋಡಿರಲಿಲ್ಲ. ಆದರೂ ಆ ಪುಸ್ತಕವನ್ನು ಅನುವಾದ ಮಾಡಿದ ಸಾರ್ಥಕ ಅನುಭವ ನನಗಾಗಿತ್ತು.

ಮೇಲೆ ತಿಳಿಸಿದ ಎರಡು ಘಟನೆಗಳು ನನ್ನ ನೇರ ಅನುಭವವಾದರೂ ಕೆಲವೊಂದಿಷ್ಟು ಕುತೂಹಲಕಾರಿ ವಿಷಯಗಳನ್ನು ಕೇಳಲ್ಪಟ್ಟಿದ್ದೇನೆ. ಎಚ್ ಡಿ ದೇವೇಗೌಡರು ಪ್ರಧಾನಿ ಆಗಲು ಪ್ರಮುಖ ಪಾತ್ರ ವಹಿಸಿದವರಲ್ಲಿ ಕರುಣಾನಿಧಿ ಮೊದಲಿಗರು. ಪ್ರಧಾನಿ ಯಾರಾಗಬೇಕು ಎಂಬ ಚರ್ಚೆಯಲ್ಲಿ ಕರುಣಾನಿಧಿ ಅವರು ರಾಮಕೃಷ್ಣ ಹೆಗಡೆ ಅವರಿಗಿಂಥ ದೇವೇಗೌಡರು ಪ್ರಧಾನಿ ಆಗುವುದು ಹೆಚ್ಚು ಸೂಕ್ತ ಎಂಬ ಅಭಿಪ್ರಾಯ ಹೇಳುವ ಮೂಲಕ ದೇವೇಗೌಡರ ಹೆಸರನ್ನು ಮೊದಲು ಪ್ರಸ್ತಾಪಿಸಿದ್ದರಂತೆ.

೧೯೫೨ ತಮಿಳಿನಲ್ಲಿ ‘ಪರಾಶಕ್ತಿ’ ಎಂಬ ಸಿನಿಮಾ ಬಂತು. ಅದರ ಸ್ಕ್ರಿಪ್ಟ್ ಅನ್ನು ಬರೆದಿದ್ದು ಕರುಣಾನಿಧಿ. ಅದರೊಳಗೊಂದು ಡೈಲಾಗ್ ಆ ಸಂದರ್ಭದಲ್ಲಿ ಬಹಳ ಪ್ರಸಿದ್ಧಿ ಪಡೆದಿತ್ತು. ಸಿನಿಮಾದ ನಾಯಕ ದೇವಸ್ಥಾನವನ್ನು ನಾಶ ಮಾಡಿ ಅದಕ್ಕೆ ಸಮರ್ಥನೆಯಾಗಿ ಹೇಳುತ್ತ, “ದೇವಸ್ಥಾನ ಹಾಳುಮಾಡಿದ್ದು ನಾನೇ. ಕಾರಣ, ದೇವಸ್ಥಾನಗಳಲ್ಲಿ ಬರೀ ಕಳ್ಳರೇ ತುಂಬಿಕೊಂಡಿದ್ದಾರೆ. ಅವರನ್ನು ಹೊರದಬ್ಬಲು ದೇವಸ್ಥಾನ ನಾಶ ಮಾಡಿದೆ,” ಎನ್ನುತ್ತಾನೆ. ಈ ಹೇಳಿಕೆ ಪುರೋಹಿತಶಾಹಿ ವ್ಯವಸ್ಥೆಯ ಮೇಲಿನ ವಿಮರ್ಶೆಯಂತಿದೆ.

ಪೊಲೀಸ್ ವ್ಯವಸ್ಥೆ ಹಾಗೂ ಕಾನೂನಿನ ಬಗ್ಗೆಯೂ ಅವರು ಗೌರವದಿಂದಲೇ ನಡೆದುಕೊಂಡಿದ್ದಾರೆ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಕರುಣಾನಿಧಿ ಮನೆಗೆ ಪೊಲೀಸರು ಮಗ ಸ್ಟಾಲಿನ್ ಬಂಧಿಸಲು ಬರುತ್ತಾರೆ. ಆ ವೇಳೆ ಸ್ಟಾಲಿನ್ ಮನೆಯಲ್ಲಿ ಇರುವುದಿಲ್ಲ. ಮಗ ಮನೆಗೆ ಬಂದ ನಂತರ ಪೊಲೀಸ್ ಠಾಣೆಗೆ ಹೋಗಿ ರಿಪೋರ್ಟ್ ಮಾಡಿಕೊಂಡು ಬಾ ಅಂತ ಕಳಿಸಿಕೊಡುತ್ತಾರೆ.

ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ರಾಜಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ. ಆ ಸಂದರ್ಭದಲ್ಲಿ ರಾಜ್ಯದಲ್ಲಿದ್ದ ತಮಿಳರಿಗೆ ಏನಾದರೂ ಹಿಂಸೆ ಆದೀತು ಎಂದು ತಿಳಿದು ಮುಖ್ಯಮಂತ್ರಿ ಆಗಿದ್ದ ಕರುಣಾನಿಧಿ ಕರ್ನಾಟಕಕ್ಕೆ ಬಂದು ಅಂದಿನ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಈ ಸೂಕ್ಷ್ಮ ಸನ್ನಿವೇಶದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ಮುತ್ಸದ್ಧಿತನ ತೋರಿದ ರೀತಿ ಅನುಕರಣೀಯ.

ಇದನ್ನೂ ಓದಿ : ತಮಿಳು ಚಿತ್ರಸಾಹಿತ್ಯವನ್ನು ಪುರಾಣದಿಂದ ಜನಸಾಮಾನ್ಯರತ್ತ ಕರೆತಂದ ಕರುಣಾನಿಧಿ

ಸಾರ್ವಜನಿಕ ಸಭೆಗಳಲ್ಲಿ ಕರುಣಾನಿಧಿಯವರು ಶಿಷ್ಟಾಚಾರ ಪಾಲಿಸುತ್ತಿದ್ದುದು ಗಮನಾರ್ಹ. ಒಂದು ಪ್ರಸಂಗವನ್ನು ಇಲ್ಲಿ ನೆನೆಯಲೇಬೇಕು. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ ಅವರಿಗೊಂದು ಚೀಟಿ ಬರುತ್ತದೆ. ಆ ಚೀಟಿಯಲ್ಲಿ ಅವರ ಮೊದಲ ಪತ್ನಿ ಸಾವನ್ನಪ್ಪಿದ ವಿಷಯವಿತ್ತು. ಅದನ್ನು ಗಮನಿಸಿಯೂ ಸಾರ್ವಜನಿಕ ಸಭೆಗೆ ಭಂಗ ತರದೆ ತಮ್ಮ ಮಾತುಗಳನ್ನಾಡಿ ತೆರಳಿದ್ದರು.

ಕರ್ನಾಟಕ ರಾಜಕಾರಣದಲ್ಲೂ ಕರುಣಾನಿಧಿ ಅವರ ಡಿಎಂಕೆ ಪಕ್ಷ ಒಂದಿಷ್ಟು ಪ್ರಭಾವ ಸಾಧಿಸಿತ್ತು. ೧೯೭೨ರಲ್ಲಿ ನಡೆದ ವಿಧಾನಸಭಾ ಚುನಾಚಣೆಯಲ್ಲಿ ಬೆಂಗಳೂರಿನ ಭಾರತಿನಗರ ಕ್ಷೇತ್ರದಲ್ಲಿ ಡಿಎಂಕೆ ಬೆಂಬಲಿದಿಂದ ಪಕ್ಷೇತರ ಅಭ್ಯರ್ಥಿ ಡಿ ಪೂಸಲಿಂಗಮ್ ಗೆಲವು ಸಾಧಿಸಿದ್ದರು. ಹಾಗೆಯೇ, 1994ರಲ್ಲಿ ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಎಡಿಎಂಕೆ ಅಭ್ಯರ್ಥಿ ಆರ್ ದಯಾನಂದ ರಾವ್ ಅವರ ಪ್ರಬಲ ಪೈಪೋಟಿ ನೀಡಿ ಕೊನೆಗೆ ಬಿ ಮುನಿಯಪ್ಪ ಗೆದ್ದಿದ್ದರು.

ನಿರೂಪಣೆ: ಶರಣು ಚಕ್ರಸಾಲಿ

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More