ಮಾನ್ಸೂನ್ ಮೊಗವನ್ನೇ ಕಾಣದ ರಾಯಚೂರಿನ ಕಲ್ಮಲಾದ ಮೂರು ಕತೆ

ರಾಜ್ಯದ ಕೆಲ ಜಿಲ್ಲೆಗಳ ಮಂದಿ ಮಳೆ ನಿಂತರೆ ಸಾಕು ಎನ್ನುತ್ತಿದ್ದಾರೆ. ಆದರೆ, ಉತ್ತರದ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಜಲಾಶಯದತ್ತ ನೋಡುವ ಪರಿಸ್ಥಿತಿ. ಈ ಬಾರಿ ಶೇ.81ರಷ್ಟು ಮಳೆ ಕೊರತೆ ಅನುಭವಿಸಿರುವ ರಾಯಚೂರಿನ ಕಲ್ಮಲಾ ಹೋಬಳಿಯಲ್ಲಿ ಕಂಡ ಮೂರು ಭಿನ್ನ ಚಿತ್ರಣಗಳಿವು

2018ರ ಆಗಸ್ಟ್ 1; ಮಧ್ಯಾಹ್ನ 1.20

ಊರಿನ ಕೊಳಚೆನೀರೆಲ್ಲ ಬಂದು ಸೇರುವಂಥ ಜಾಗ. ಅದು ಕೂಡ ಒಣಗಿದ ಕೆರೆಯಂತಾಗಿತ್ತು. ಸ್ವಲ್ಪ ದೂರಕ್ಕೆ ಹತ್ತರಿಂದ-ಹದಿನೈದು ಮೇಕೆಗಳು ಒಣಗಿದ ಹುಲ್ಲು, ಜಾಲಿಯ ಚಿಗುರನ್ನೇ ಮೇಯುತ್ತ ಬಿಸಿಲನ್ನು ದೂಡುತ್ತಿದ್ದವು. ತಲೆ ಮೇಲೆ ಕೈ ಹೊತ್ತು ಕುಂತ ಯಜಮಾನರೊಬ್ಬರು ಕಾಣಿಸಿದರು. ಹತ್ತಿರ ಹೋಗಿ ನೋಡಿದರೆ ಮೈ ಆರಾಮಿಲ್ಲವೇನೋ ಎನಿಸಿತು. ಕೇಳಿದಾಗ ಹೌದೆಂದರು.

ಅವರ ಹೆಸರು ಮಲ್ಲಪ್ಪ. ವಯಸ್ಸು ಹತ್ತತ್ತಿರ ಅರವತ್ತು. ಐವರು ಹೆಣ್ಣುಮಕ್ಕಳು. ಹೇಗೋ ಕಷ್ಟಪಟ್ಟು ಎಲ್ಲರಿಗೂ ಮದುವೆ ಮಾಡಿಸಿದ್ದರು. ಇತ್ತೀಚೆಗೆ ನಾನಾ ಕಾರಣಕ್ಕೆ ಇಬ್ಬರು ಹೆಣ್ಣುಮಕ್ಕಳು ಗಂಡನ ಮನೆಗೆ ಕೊನೇ ನಮಸ್ಕಾರ ಹೇಳಿ ತವರು ಸೇರಿದ್ದರು.ಮನೆಯಲ್ಲೀಗ ನಾಲ್ಕು ಮಂದಿ. ತುಂಡುಭೂಮಿಯೂ ಇಲ್ಲ. ಕೂಲಿಯೇ ಗತಿ. ಹೆಣ್ಣುಮಕ್ಕಳಿಬ್ಬರು ಭತ್ತ ನಾಟಿ ಕೆಲಸಕ್ಕೆ ದೇವದುರ್ಗದತ್ತ ಹೋಗಿದ್ದರು. ಜೀವನ ಹೆಂಗೆ ಅಂತ ಕೇಳಿದಾಗ, ಧೂಳು ಅಡಗುವಷ್ಟು ಮಳೆಹನಿಯೂ ಗತಿ ಇಲ್ಲದ ನೆಲದತ್ತ ಒಮ್ಮೆ,ಆಕಾಶದತ್ತ ಒಮ್ಮೆ ಕೈತೋರಿಸಿ ಮೆಲುವಾಗಿ ನಗು ತುಳುಕಿಸಿದರು.

2018ರ ಆಗಸ್ಟ್ 1; ಮಧ್ಯಾಹ್ನ 2.35

ಹೊಲಗಳಲ್ಲಿ ನಡೆಯತೊಡಗಿದೆ. ಜೋಳ, ಹತ್ತಿ ಬಿತ್ತಿದ ಕುರುಹುಗಳು. ಆದರೆ, ಒಂದು ಜಮೀನಲ್ಲೂ ಅಪ್ಪಿತಪ್ಪಿಯೂ ಮೊಳಕೆ ಕಾಣಲಿಲ್ಲ! ಸುಮಾರು ನಲವತ್ತು ನಿಮಿಷ ನಡೆದ ನಂತರ ಸ್ವಲ್ಪ ದೂರದಲ್ಲಿ ಒಂದಷ್ಟು ತಾಳೆಮರಗಳ ಗುಚ್ಛ. ಅದಕ್ಕೆ ಸ್ವಲ್ಪ ಮೊದಲು ಹೊಲವೊಂದರ ಬದಿ ಎಲ್ಲಿದಂಲೋ ಹರಿದುಬಂದ ಹೊಸ ನೀರು. ಕಾಂಡ ಕತ್ತರಿಸಿದ ಮರದ ಬುಡದಲ್ಲಿ ನೀರನ್ನೇ ದಿಟ್ಟಿಸುತ್ತ ಕುಂತೆ.

ಸ್ವಲ್ಪ ಹೊತ್ತಿನ ನಂತರ ಎಂಥದೋ ಆವಾಜು. ಹಿಂತಿರುಗಿ ನೋಡಿದರೆ, ಬಿಂದಿಗೆ ಹಿಡಿದು ನೀರಿದ್ದತ್ತ ಬರುತ್ತಿದ್ದ ಮಹಿಳೆಯ (ಯಂಕಮ್ಮ) ಕೂಗು. ಎದ್ದು ಅವರಿದ್ದತ್ತ ಹೋಗುವಷ್ಟೊತ್ತಿಗೆ ಅವರ ಯಜಮಾನರೂ (ಗೋಕುಲಪ್ಪ) ಹಾಜರು. ಅದು ಅವರದೇ ಜಮೀನು. ಇದ್ದ ಮೂರು ಎಕರೆಗೂ ಹತ್ತಿ ಬಿತ್ತಿದ್ದರು. ಒಂದೇ ಒಂದು ಕಾಳೂ ಮೊಳಕೆ ಕಟ್ಟಿರಲಿಲ್ಲ. ಮನೆಯಲ್ಲಿ ಕುಂತರೆ ಬಣಬಣ. ಹೊಲಕ್ಕೆ ಬಂದರೆ ಜೀವ ಹಿಂಡುವ ಖಾಲಿ ನೆಲ. ಆದರೂ ಮೂರು ಬೇವಿನ ಸಸಿ ನೆಟ್ಟು ದಿನಕ್ಕೆ ಮೂರು ಸಲ ನೀರೆರೆಯುವ ಮನಸ್ಸು. ಮೂವರು ಹೆಣ್ಣುಮಕ್ಕಳು, ಒಬ್ಬ ಮಗ. ಹಣದ ಕೊರತೆ; ಎಲ್ಲರದ್ದೂ ಹೈಸ್ಕೂಲಿಗೇ ಸೀಮಿತ ಶಿಕ್ಷಣ. ಮಾತಾಡುತ್ತ ಭಾವುಕರಾದ ಗೋಕುಲಪ್ಪ, “ಇಂಗಾದ್ರ ವಿಷ ಕುಡಿಯದೆ ಮತ್ತೇನ್ರಿ ಸರ...” ಎನ್ನುತ್ತ ಹೆಂಡತಿಯತ್ತ ನೋಡಿದರು. ಆಕೆ, ಕಣ್ಣಲ್ಲೇ ಸಮಾಧಾನಿಸುತ್ತಿದ್ದರು.

2018ರ ಆಗಸ್ಟ್ 1; ಮಧ್ಯಾಹ್ನ 4.10

ಆ ತಾಳೆಮರಗಳ ಗುಚ್ಛ ಕಾಣುತ್ತಿದ್ದಲ್ಲಿಗೆ ಹೋದಾಗ ನನ್ನ ಕಣ್ಣ ನಾನೇ ನಂಬದಾದೆ; ಸುಮಾರು ಎರಡು ಎಕರೆಯಷ್ಟು ಅಗಲದ ದೊಡ್ಡ ಹೊಂಡ, ಅದರ ತುಂಬಾ ನೀರು! ಕಲ್ಲು ಕಟ್ಟದೆಯೂ ಸ್ವಚ್ಛ ನೀರು ನಿಲ್ಲುವಂತೆ ತುಂಬಾನೇ ವ್ಯವಸ್ಥಿತವಾಗಿ ನಿರ್ಮಿಸಲಾಗಿದ್ದ ಹೊಂಡವದು. ಮೋಟಾರ್ ಆನ್ ಆಗಿತ್ತು, ಪಕ್ಕದ ಗದ್ದೆಮಡಿಗೆ ಸಾಗುತ್ತಿತ್ತು ನೀರು. ಹೊಂಡದ ಸುತ್ತ ಒಮ್ಮೆ ಸುತ್ತಿ ಮಷೀನ್ ಮನೆಯತ್ತ ಹೊರಳಿದಾಗ 35-40ರ ನಡುವಿನ ಪ್ರಾಯದ ವ್ಯಕ್ತಿ ಕುಂತಿದ್ದರು. ಮಾತಿಗೆಳೆದೆ.

ಇದನ್ನೂ ಓದಿ : ಹಣ ನೀರಿನಂತೆ ಖರ್ಚಾದರೂ ಕುಡಿಯುವ ನೀರು ಸಿಕ್ಕಿದ್ದು 8,000 ಜನವಸತಿ ಪ್ರದೇಶಗಳಿಗಷ್ಟೆ!

ಅವರು ರಾಮು. ಓದಿದ್ದು ಆರನೇ ಕ್ಲಾಸು. ಆಂಧ್ರ ಮೂಲದವರು. ನಲವತ್ತು ವರ್ಷದ ಹಿಂದೆ ವಲಸೆ ಬಂದ ಕುಟುಂಬ ಇಲ್ಲಿ ಬರೋಬ್ಬರಿ ಮೂವತ್ತು ಎಕರೆ ಜಮೀನು ಮಾಡಿತ್ತು. ರಾಮು ಅವರ ತಂದೆ ವಾಪಸು ಆಂಧ್ರಕ್ಕೆ ಹೋಗಿದ್ದಾರೆ. ಇಲ್ಲಿದ್ದು ಹೊಲ ನೋಡಿಕೊಳ್ಳೋದು ರಾಮು ಕುಟುಂಬ ಮಾತ್ರ. ಹೊಂಡ ನಿರ್ಮಿಸಿ ಸುಮಾರು ಹನ್ನೆರಡು ವರ್ಷ ಕಳೆದಿವೆ. ನಾಲ್ಕು ವರ್ಷಕ್ಕೊಮ್ಮೆ ಪೂರಾ ನೀರು ಖಾಲಿ ಮಾಡಿ ಹೂಳು ತೆಗೆಯಲಾಗುತ್ತದೆ. ಮಳೆ ಬಾರದಿದ್ದರೂ ಹತ್ತು ಎಕರೆಯಲ್ಲಿ ಬೆಳೆ ತೆಗೆಯುವಷ್ಟು ನೀರಿಗಂತೂ ಕೊರತೆ ಇಲ್ಲ. ಹೊಂಡದಲ್ಲಿ ಮೀನು ಸಾಕಾಣಿಕೆಯೂ ನಡೆದಿದೆ. ಮೂವತ್ತು ಎಕರೆಯ ಮಳೆನೀರು ಸೀದಾ ಹೊಂಡಕ್ಕೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಕಾಲುವೆಯ ನೀರು ಬಂದರೂ ಮೊದಲು ಈ ಹೊಂಡಕ್ಕೆ ಬಂದೇ ಹೊಲದ ಮುಖ ಕಾಣುವುದು. ಇಷ್ಟೆಲ್ಲ ಹೇಳುವಾಗ ಅವರ ಮೊಗದಲ್ಲಿ ಅಪೂರ್ವ ನಿಧಿಯೊಂದನ್ನು ತನ್ನದಾಗಿಸಿಕೊಂಡ ಸಂತೃಪ್ತಿ, ನಸುನಗು, ನೆಮ್ಮದಿ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More