ಏಳುಬೀಳುಗಳ ನಡುವೆಯೂ ಸತತ 13 ಗೆಲುವು ಕಂಡ ಕರುಣಾನಿಧಿ ಜೀವನಗಾಥೆ

ತಮ್ಮ ಬದುಕಿನಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದ ಕರುಣಾನಿಧಿ ಅವರ ಸಾಧನೆಗಳು ಮಾತ್ರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ದ್ರಾವಿಡ ಚಳವಳಿಯನ್ನು ಮುಂದುವರಿಸಿಕೊಂಡು ತಮಿಳು ರಾಜಕಾರಣದಲ್ಲಿ ಉನ್ನತಿಗೇರಿದ್ದ ಮಹಾನಾಯಕ ಕರುಣಾನಿಧಿ ಅವರ ಜೀವನಗಾಥೆ ಇಲ್ಲಿದೆ

ಕರುಣಾನಿಧಿ, ಆರು ದಶಕಗಳಿಗೂ ಹೆಚ್ಚು ಕಾಲ ತಮಿಳು ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದ ಹೆಸರು. ಉತ್ತರ ಭಾರತದ ಆರ್ಯ ವಿಚಾರಧಾರೆಯ ರಾಜಕಾರಣಕ್ಕೆ ಸಡ್ಡು ಹೊಡೆದು ದ್ರಾವಿಡ ಚಳವಳಿ ರೂಪಿಸಿದ ನಾಯಕರಲ್ಲಿ ಎಂ ಕರುಣಾನಿಧಿ ಪ್ರಮುಖರು. ‘ದ್ರಾವಿಡ ಮುನ್ನೇತ್ರ ಕಳಗಂ’ ಮೂಲಕ ತಮಿಳುನಾಡಿನ ರಾಜಕಾರಣದ ಉತ್ತುಂಗಕ್ಕೇರಿದ ಕರುಣಾನಿಧಿ, 1950ರ ದಶಕದಲ್ಲಿ ಅಣ್ಣಾ ದೊರೈ (ಡಿಎಂಕೆ ಪಕ್ಷದ ಸಂಸ್ಥಾಪಕ) ಅವರ ಆಪ್ತರಾಗಿ ಗುರುತಿಸಿಕೊಂಡರು. ಅಲ್ಲಿಂದ ಶುರುವಾದ ಕರುಣಾನಿಧಿ ಅವರ ರಾಜಕೀಯ ಬದುಕು ಹತ್ತು ಹಲವು ಏಳುಬೀಳುಗಳನ್ನು ಕಂಡಿತು.

ಕರುಣಾನಿಧಿ ಅವರ ಮೂಲ ಹೆಸರು ದಕ್ಷಿಣಮೂರ್ತಿ. 1924ರಲ್ಲಿ ಪೂರ್ವ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ತಿರುಕ್ಕುವಲೈ ಎಂಬ ಕುಗ್ರಾಮದಲ್ಲಿ ಜನಿಸಿದರು. ತಮಿಳು ಜನಪದ ಸಂಗೀತಗಾರರ ಕುಟುಂಬದಲ್ಲಿ ಹುಟ್ಟಿದ ಕರುಣಾನಿಧಿ ಅವರ ಪೂರ್ವಿಕರ ಮಾತೃಭಾಷೆ ತೆಲುಗು. ಬಾಲ್ಯದಲ್ಲಿಯೇ ಸಾಹಿತ್ಯ, ನಾಟಕ ಹಾಗೂ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದ ಅವರು 14ನೇ ವಯಸ್ಸಿನಲ್ಲೇ ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯರಾದರು.

ಕರುಣಾನಿಧಿ ಅವರ ತಂದೆ ಮುತ್ತುವೇಲು‌ (ಕರುಣಾನಿಧಿ ಅವರ ಮೊದಲ ಮಗನಿಗೆ ಇದೇ ಹೆಸರು ಇಡಲಾಗಿದೆ), ತಾಯಿ ಅಂಜು. ಈ ದಂಪತಿಗಳಿಗೆ ಎರಡು ಹೆಣ್ಣಮಕ್ಕಳು ಜನಿಸಿದರು. ಮೂರನೆಯವರು ಕರುಣಾನಿಧಿ. ತಂದೆ-ತಾಯಿಗಳ ಅಪರೂಪದ ಮಗನಾಗಿ ಬೆಳೆದ ಅವರಿಗೆ ಬಾಲ್ಯದಲ್ಲಿಯೇ ಸಂಗೀತ, ಸಾಹಿತ್ಯ, ಮಹಾಗ್ರಂಥ ಹಾಗೂ ಜನಪದ ಕತೆಗಳನ್ನು ಪರಿಚಯಿಸಿದವರು ತಂದೆ ಮುತ್ತುವೇಲಾರ್‌. ನಾಟಿ ವೈದ್ಯ ಹಾಗೂ ಬಲ್ಲಾಡ್‌ ಸಂಗೀತಗಾರರಾಗಿದ್ದ ಮುತ್ತುವೇಲು‌ ಕರುಣಾನಿಧಿ ಅವರ ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹತ್ತನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ಕರುಣಾನಿಧಿ ಬದುಕು ಕಟ್ಟಿಕೊಳ್ಳಲು ಕೊಯಮತ್ತೂರಿಗೆ ಬಂದು ನೆಲೆಸಿದರು. ಅಪ್ಪನಿಂದ ಕಲಿತ ಅಕ್ಷರ, ಜನಪದ ಸಾಹಿತ್ಯ ಮತ್ತು ಬರವಣಿಗೆಗಳು ಕರುಣಾನಿಧಿ ಅವರ ಕೈಹಿಡಿದವು. ತಮಿಳುನಾಡಿನ ಜನಪದ, ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳಿಗೆ ಕತೆಗಳನ್ನು ಬರೆದು ಹೆಸರು ಮಾಡಿದರು. ಆ ದಾರಿಯೇ ಅವರ ಮುಂದಿನ ಬದುಕನ್ನು ಕಟ್ಟಿಕೊಟ್ಟಿತು. ಸೃಜನಶೀಲ ಬರವಣಿಗೆಯಿಂದ ಗುರುತಿಸಿಕೊಂಡಿದ್ದ ಕರುಣಾನಿಧಿ 1950ರ ಆರಂಭದಲ್ಲಿ ನಾಟಕಗಳಿಂದ ಸಿನಿಮಾಗಳಿಗೆ ಪದೋನ್ನತಿ ಹೊಂದಿದರು. 1952ರಲ್ಲಿ ಬಿಡುಗಡೆಯಾದ ‘ಪರಶಕ್ತಿ’ ಕರುಣಾನಿಧಿ ಅವರಿಗೆ ಹೆಸರು ತಂದುಕೊಟ್ಟಿತು. ಹಲವು ಬ್ಲಾಕ್‌ ಬಾಸ್ಟರ್‌ ಸಿನೆಮಾಗಳಿಗೆ ಕತೆ ಕಟ್ಟಿಕೊಡುವ ಮೂಲಕ ತಮಿಳು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದರು.

1953ರಲ್ಲಿ ತಮಿಳುನಾಡಿನ ಕಲ್ಲುಕುಡಿಯಲ್ಲಿ ಉತ್ತರ ಭಾರತದ ಉದ್ಯಮಿ ದಾಲ್ಮಿಯಾ ಮಾಲೀಕತ್ವದ ಸಿಮೆಂಟ್‌ ಕಾರ್ಖಾನೆಯಲ್ಲಿ ತಮಿಳು ಭಾಷಿಗರ ಮೇಲೆ ನಡೆಯುತ್ತಿದ್ದ ಶೋಷಣೆಯ ವಿರುದ್ಧ ಕರುಣಾನಿಧಿ ಹೋರಾಟಕ್ಕಿದರು. ಕಲ್ಲುಕುಡಿಯ ಸ್ಥಳೀಯ ಜನರನ್ನು ಸಂಘಟಿಸುವ ಮೂಲಕ ಉತ್ತರ ಭಾರತದ ಉದ್ಯಮಿಗಳ ಮೇಲೆ ದೊಡ್ಡದೊಂದು ಪ್ರತಿಭಟನೆಗೆ ಮುಂದಾದರು. ಆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಅಸುನೀಗಿ, ಕರುಣಾನಿಧಿ ಅವರ ಬಂಧನವಾಯಿತು.

ಅತ್ತ ದ್ರಾವಿಡ ಅಸ್ಮಿತೆಯನ್ನು ರಾಜಕೀಯವಾಗಿ ಬಳಸಿ ಅಧಿಕಾರ ಹೊಂದುವ ಪ್ರಯತ್ನದಲ್ಲಿದ್ದ ಅಣ್ಣಾದೊರೈ ಅವರನ್ನು ಕರುಣಾನಿಧಿಯಲ್ಲಿದ್ದ ಚಾಣಾಕ್ಷತೆ ಹಾಗೂ ರಾಜಕೀಯ ಸ್ಪಷ್ಟತೆಗಳು ಆಕರ್ಷಿಸಿದವು. ಈ ಮೂಲಕ ಅಲ್ಪ ಸಮಯದಲ್ಲೇ ಕರುಣಾನಿಧಿ ಅವರು ಅಣ್ಣಾದೊರೈ ಅವರ ನಿಕಟವರ್ತಿಯಾದರು. ದ್ರಾವಿಡ ಮುನ್ನೇತ್ರ ಕಳಗಂ ಖಜಾಂಚಿಯಾಗಿ ಆಯ್ಕೆಯಾದ ಕರುಣಾನಿಧಿ ಪಕ್ಷಕ್ಕೆ ಆರ್ಥಿಕ ಬಲ ತಂದುಕೊಡುವ ಕಾಯಕದಲ್ಲಿ ತೊಡಗಿದರು.

1957ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದಿಂದ ಕೇವಲ 13 ಸದಸ್ಯರು ಆಯ್ಕೆಯಾದರು. ಅದರಲ್ಲಿ ಕರುಣಾನಿಧಿ ಸಹ ಒಬ್ಬರು. ಅಲ್ಲಿಂದ ಸಕ್ರಿಯ ರಾಜಕಾರಣ ಆರಂಭಿಸಿದ ಅವರು ಇಲ್ಲಿವರೆಗೂ ಯಾವುದೇ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿಲ್ಲವೆಂಬುದು ಈಗ ಇತಿಹಾಸ. ಸತತವಾಗಿ ಹದಿಮೂರು ಭಾರಿ ವಿಧಾನಸಭೆಗೆ ಆಯ್ಕೆಯಾದ ಅವರು, ಐದು ಬಾರಿ ಮುಖ್ಯಮಂತ್ರಿಯಾದರು. ಅರವತ್ತು ವರ್ಷಗಳ ಡಿಎಂಕೆಯನ್ನು ಮುನ್ನೆಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

1967ರಲ್ಲಿ ತಮಿಳುನಾಡಿನ ಜನಸಮೂಹ ಡಿಎಂಕೆಯತ್ತ ಹೊರಳಿತು. ಆ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಸ್ಪಷ್ಟ ಬಹುಮತ ಗಳಿಸುವ ಮೂಲಕ ಅಧಿಕಾರ ಹಿಡಿದು, ಅಣ್ಣಾದೊರೈ ಮುಖ್ಯಮಂತ್ರಿಯಾದರು. ಕರುಣಾನಿಧಿ ಲೋಕೋಪಯೋಗಿ ಸಚಿವರಾದರು.

ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಅಣ್ಣಾದೊರೈ, ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದರು. ಅಣ್ಣಾದೊರೈ ಅವರ ಅಕಾಲಿಕ ಮರಣದಿಂದ ತೆರುವಾಗಿದ್ದ ಮುಖ್ಯಮಂತ್ರಿ ಸ್ಥಾನಕ್ಕೆ ಕರುಣಾನಿಧಿ ಬಂದು ಕುಳಿತರು. ಆ ನಂತರ ನಡೆದ 1971ರ ಚುನಾವಣೆಯಲ್ಲಿ ಡಿಎಂಕೆ ಪಕ್ಷಕ್ಕೆ ಬಹುಮತ ದೊರೆತು ಪೂರ್ವವಧಿಯ ಮುಖ್ಯಮಂತ್ರಿಯಾಗಿ ಕರುಣಾನಿಧಿ ಅಧಿಕಾರ ವಹಿಸಿಕೊಂಡರು.

ಆ ಅವಧಿಯಲ್ಲಿ ತಮ್ಮ ಪಕ್ಷದ ಇನ್ನೊಬ್ಬ ಪ್ರಭಾವಿ ನಾಯಕ, ಹೆಸರಾಂತ ಚಿತ್ರತಾರೆ ಎಂಜಿಆರ್‌ ಹಾಗೂ ಕರುಣಾನಿಧಿ ಅವರ ನಡುವೆ ಭಿನ್ನಾಭಿಪ್ರಾಯಗಳು ಸ್ಫೋಟಗೊಂಡವು. ಎಂಜಿಆರ್ ಅವರು ಕರುಣಾನಿಧಿ ಸಚಿವ ಸಂಪುಟದಲ್ಲಿ ಸ್ಥಾನ ಬೇಕೆಂಬ ಬೇಡಿಕೆ ಇಟ್ಟರು. ಸಚಿವ ಸ್ಥಾನ ಕೊಟ್ಟರೆ, ಎಂಜಿಆರ್‌ ಅವರು ಸಿನಿಮಾ ರಂಗದಲ್ಲಿ ಸಕ್ರಿಯರಾಗಿರಬಾರದು ಎಂದು ಕರುಣಾನಿಧಿ ಅವರ ಒತ್ತಾಸೆಯಾಗಿತ್ತು. ತಮ್ಮ ಜನಪ್ರಿಯತೆಯನ್ನು ಸಹಿಸದ ಕರುಣಾನಿಧಿ, ತಮಗೆ ಸಚಿವ ಸ್ಥಾನ ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಭಾವಿಸಿದ ಎಂಜಿಆರ್, ಡಿಎಂಕೆ ತೊರೆದು ಹೊಸ ಪಕ್ಷವೊಂದನ್ನು ಕಟ್ಟಲು ಮುಂದಾದರು.

1977ರ ವಿಧಾನಸಭಾ ಚುನಾವಣೆ ವೇಳೆಗೆ ಎಂಜಿಆರ್ ನೇತೃತ್ವದಲ್ಲಿ ಹೊಸ ಪಕ್ಷವೊಂದು ಉದಯವಾಗಿತು. ಅದಕ್ಕೆ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಡಿಎಂಕೆ) ಎಂದು ಹೆಸರಿಡಲಾಗಿತು. ತಮಿಳುನಾಡಿನಲ್ಲಿ ಜನಪ್ರಿಯ ನಾಯಕ ನಟರಾಗಿದ್ದ ಎಂಜಿಆರ್‌ಗೆ ಆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ದೊರೆತು, ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಇದು ಕರುಣಾನಿಧಿ ಅವರ ರಾಜಕೀಯ ಬದುಕಿನಲ್ಲಾದ ಮೊಟ್ಟಮೊದಲ ಆಘಾತವೆನ್ನಬಹುದು. 1977ರಿಂದ 87ರವರೆಗೆ ಎಡಿಎಂಕೆ ನಾಯಕ ಎಂಜಿಆರ್‌ ಅವರು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು. ಈ ಅವಧಿಯಲ್ಲಿ ಕರುಣಾನಿಧಿ ಅವರು ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. 1987ರ ಡಿಸೆಂಬರ್‌ ತಿಂಗಳಲ್ಲಿ ಎಂಜಿಆರ್‌ ತೀರಿಹೋದ ನಂತರ ಎಡಿಎಂಕೆ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ಸ್ಪೋಟಗೊಂಡವು. ಎಂಜಿಆರ್‌ ಪತ್ನಿ ಜಾನಕಿ ಹಾಗೂ ಜಯಲಲಿತಾ ಅವರ ನಡುವೆ ಸಂಘರ್ಷ ಏರ್ಪಟ್ಟ ಕಾರಣ, ಕರುಣಾನಿಧಿ ಅವರಿಗೆ ಅಧಿಕಾರ ಹಿಡಿಯುವ ಹಾದಿ ಸುಗಮವಾಯಿತು. ಎಂಬತ್ತರ ದಶಕದ ಕೊನೆಯ ವರ್ಷದಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಕರುಣಾನಿಧಿ ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಜಯಲಲಿತಾ ಅವರು ಆಲ್‌ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷದ ನೇತೃತ್ವ ವಹಿಸಿಕೊಂಡರು.

ಅದು ಮಾ.25, 1989. ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರೂ ಆಗಿದ್ದ ಕರುಣಾನಿಧಿ ಅವರು ಬಜೆಟ್‌ ಮಂಡಿಸುವ ದಿನ. ಅಂದು ಚೆನೈನ ವಿಧಾನಸೌಧ ಆವರಣಕ್ಕೆ ವಿರೋಧ ಪಕ್ಷದ ನಾಯಕಿ ಜಯಲಲಿತಾ ಆಗಮಿಸುತ್ತಿದ್ದಂತೆ, ಅವರನ್ನು ಪೊಲೀಸರು ತಡೆದಿದ್ದರು. ಇದರಿಂದ ವ್ಯಗ್ರಗೊಂಡಿದ್ದ ಜಯಲಲಿತಾ ಅವರು, “ಮುಖ್ಯಮಂತ್ರಿ ಕರುಣಾನಿಧಿ ಅವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಅವರೊಬ್ಬ ಭ್ರಷ್ಟ ರಾಜಕಾರಣಿ,” ಎಂದು ವಿಧಾನಸಭೆ ಕಲಾಪದ ನಡುವೆಯೇ ಎದ್ದುನಿಂತು ಅರಚಿದರು. ಇದನ್ನು ಸಹಿಸದ ಡಿಎಂಕೆ ಮುಖಂಡ ದೊರೈ ಮುರುಗನ್, ಜಯಲಲಿತಾ ಸೀರೆ ಎಳೆದು ಅಪಮಾನ ಮಾಡಿದರು. ಇದರಿಂದ ಅಪಮಾನಿತಗೊಂಡ ಜಯಲಲಿತಾ, “ನಾನು ಮುಖ್ಯಮಂತ್ರಿಯಾಗಿಯೇ ವಿಧಾನಸೌಧದೊಳಗೆ ಕಾಲಿಡುವೆ,” ಎಂದು ಶಪಥ ಮಾಡಿ ಹೊರನಡೆದರು. ಡಿಎಂಕೆ ನಾಯಕರ ಈ ವರ್ತನೆಗೆ ತಮಿಳುನಾಡಿನಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಯಿತು. ಈ ಘಟನೆಯೇ ಕರುಣಾನಿಧಿ ಅವರ ಮರುಪತನಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿ ಹತ್ಯೆಯಾದ ಕೆಲ ವಾರಗಳ ನಂತರ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಯಿತು. 1991ರಲ್ಲಿ ತಮಿಳುನಾಡಿನಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಹಾಗೂ ಡಿಎಂಕೆ ಮುಖಂಡರು ಮಾಡಿದ್ದ ಅವಮಾನವನ್ನು ಜಯಲಲಿತಾ ಅವರು ಚುನಾವಣೆ ಅಸ್ತ್ರವನ್ನಾಗಿ ಬಳಸಿಕೊಂಡು ದೊಡ್ಡ ಬಹುಮತ ಗಳಿಸುವ ಮೂಲಕ ಎಐಡಿಎಂಕೆಯನ್ನು ಅಧಿಕಾರಕ್ಕೆ ತಂದರು. ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಜಯಲಲಿತಾ ಅಧಿಕಾರ ಹಿಡಿದರು. ಆ ಬಳಿಕ ನಡೆದ 1996ರ ಚುನಾವಣೆಯಲ್ಲಿ ಕರುಣಾನಿಧಿ ಅವರು ಡಿಎಂಕೆಯನ್ನು ಅಧಿಕಾರಕ್ಕೆ ತಂದು ಮತ್ತೆ ಮುಖ್ಯಮಂತ್ರಿಯಾದರು. 2001ರಿಂದ 2006ರವರೆಗೆ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದರು. 2006ರಲ್ಲಿ ಕರುಣಾನಿಧಿ ಅವರು ಮುಖ್ಯಮಂತ್ರಿಯಾಗಿ ಮರುಆಯ್ಕೆ ಆದರು. 2011ರ ಚುನಾವಣೆಯಲ್ಲಿ ಸೋಲುಂಡ ಡಿಎಂಕೆ ಪಕ್ಷ ಇಲ್ಲಿವರೆಗೂ ಅಧಿಕಾರ ಹಿಡಿಯುವಲ್ಲಿ ಸಫಲವಾಗಿಲ್ಲ.

ಒಟ್ಟು 19 ವರ್ಷಗಳ ಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ, ಹತ್ತುಹಲವು ಸಾಧನೆ ಮಾಡಿದರು. ನೂರಾರು ಯೋಜನೆಗಳನ್ನು ರೂಪಿಸಿ ತಮಿಳುನಾಡಿನ ಜನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವಲ್ಲಿ ಸಫಲರಾದರು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ರಾಷ್ಟ್ರೀಕರಣ, ಎಲ್ಲ ಹಳ್ಳಿಗಳಿಗೆ ವಿದ್ಯುತ್ ಪೂರೈಕೆ, ಕೊಳಗೇರಿ ನಿರ್ಮೂಲನಾ ಮಂಡಳಿ ಸ್ಥಾಪನೆ, ಭಿಕ್ಷುಕರು ಪುನರ್ವಸತಿ ಯೋಜನೆ, ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿಗಳಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ಪಿಯುಸಿವರೆಗೆ ಉಚಿತ ಶಿಕ್ಷಣ, ಒಣಭೂಮಿಯ ಮೇಲಿನ ಜಾಮೀನು ತೆರಿಗೆ ರದ್ದು, ದೇಶದಲ್ಲೇ ಮೊದಲ ಬಾರಿಗೆ ರೈತರಿಗೆ ಉಚಿತ ವಿದ್ಯುತ್‌ ಪೂರೈಕೆ, ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕುಗಳ ಕಾನೂನು, ವಿಧವೆಯರಿಗೆ ಮರುಮದುವೆಯಾಗಲು ಧನಸಹಾಯ, ಅಂತರ್ಧರ್ಮಿಯ ಅಥವಾ ಅಂತರ್ಜಾತಿ ವಿವಾಹವಾದವರಿಗೆ ಆರ್ಥಿಕ ನೆರವು ಒಳಗೊಂಡಂತೆ ಇನ್ನೂ ಹಲವು ಜನಪ್ರಿಯ ಯೋಜನೆಗಳನ್ನು ಕೊಟ್ಟ ಕೀರ್ತಿ ಕರುಣಾನಿಧಿ ಅವರಿಗೆ ಸಲ್ಲುತ್ತದೆ.

ಈ ಎಲ್ಲ ಸಾಧನೆಗಳ ಹೊರತಾಗಿಯೂ ಕರುಣಾನಿಧಿ ಅವರು ಹುಟ್ಟುಹಾಕಿದ ವಿವಾದಗಳು, ಅವರ ಮೇಲಿದ್ದ ಭ್ರಷ್ಟಾಚಾರದ ಆರೋಪಗಳು, ಕುಟುಂಬ ರಾಜಕಾರಣಕ್ಕೆ ಅವರು ತೋರಿಸಿದ ಒಲವುಗಳು ಟೀಕೆಗಳಿಗೆ ಒಳಗಾಗಿದ್ದವು. ಎಲ್‌ಟಿಟಿಇ ಉಗ್ರ ನಾಯಕ ಪ್ರಭಾಕರನ್ ಅವರನ್ನು ತಮ್ಮ ನೆಚ್ಚಿನ ಗೆಳೆಯ ಎಂದು ಸಂಭೋದಿಸುವ ಮೂಲಕ ಕರುಣಾನಿಧಿ ಅವರು ದೊಡ್ಡದೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. 1990ರಲ್ಲಿ ತಮಿಳುನಾಡಿನ ರಾಜಧಾನಿ ಚೆನೈನಲ್ಲಿ 13 ಜನ ಶ್ರೀಲಂಕಾದ ಸಿಂಹಳ ಮುಖಂಡರ ಹತ್ಯೆ ನಡೆಯಿತು. ಆ ಹತ್ಯಾಕಾಂಡದ ಹೊಣೆಯನ್ನು ಎಲ್‌ಟಿಟಿಇ ಹೊತ್ತುಕೊಂಡಿತು. ಸಿಂಹಳ ನಾಯಕರ ಕೊಲೆಗೈದ ತಮಿಳು ಉಗ್ರರನ್ನು ಚೆನ್ನೈ ಬಂದರಿನಿಂದ ಹೊರಹೋಗಲು ಅವಕಾಶ ಮಾಡಿಕೊಟ್ಟಿದ್ದು ಅಂದಿನ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಎಂಬ ಆರೋಪವೂ ಕೇಳಿಬಂದಿತ್ತು.

ಸೇತುಸಮುದ್ರಂ ಕುರಿತು ವಿವಾದ ಬುಗಿಲೆದ್ದ ಸಂದರ್ಭದಲ್ಲಿ ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡಿದ್ದ ಕರುಣಾನಿಧಿ, ಹಿಂದೂವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. 1991ರಲ್ಲಿ ಭ್ರಷ್ಟಾಚಾರ ಆರೋಪದಡಿ ಕರುಣಾನಿಧಿ ಸರ್ಕಾರವನ್ನು ವಜಾಗೊಳಿಸಲಾಯಿತು. 2001ರಲ್ಲಿ ಚೆನೈ ನಗರದ ಮೇಲ್ಸೆತುವೆ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕರುಣಾನಿಧಿ ಹಾಗೂ ಅವರ ಅಪ್ತರನ್ನು ಬಂಧಿಸಲಾಯಿತು. ಕೇಂದ್ರದಲ್ಲಿ ಯುಪಿಎ ಆಡಳಿತದಲ್ಲಿದ್ದಾಗ ಡಿಎಂಕೆ ಮುಖಂಡ ಎ ರಾಜಾ ಹಾಗೂ ಮಗಳು ಕನ್ನಿಮೋಳಿ ಅವರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದು ಜೈಲುಪಾಲಾಗಿದ್ದರು. ಈ ಹಿನ್ನೆಲೆಯಲ್ಲಿ ಡಿಎಂಕೆ ನಾಯಕ ಕರುಣಾನಿಧಿ ಅವರು ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

ಇದನ್ನೂ ಓದಿ : ಕರುಣಾನಿಧಿ ನಿರ್ಗಮನ: ಬದಲಾಗಲಿದೆಯೇ ದ್ರಾವಿಡ ಚಳವಳಿಯ ರಾಜಕೀಯ ವ್ಯಾಕರಣ?

ಪದ್ಮಾವತಿ ಅಮ್ಮಾಳ್‌, ದಯಾಳು ಅಮ್ಮಾಳ್‌ ಹಾಗೂ ರಜತಿ ಅಮ್ಮಾಳ್‌ ಕರುಣಾನಿಧಿ ಅವರ ಮೂವರು ಪತ್ನಿಯರು. ಮುತ್ತು, ಆಳಗಿರಿ, ಸ್ಟಾಲಿನ್‌, ತಮಿಳರಸು ಎಂಬ ನಾಲ್ವರು ಪುತ್ರರು ಹಾಗೂ ಸೆಲ್ವಿ, ಕನಿಮೋಳಿ ಎಂಬ ಇಬ್ಬರು ಪುತ್ರಿಯರನ್ನು ಕರುಣಾನಿಧಿ ಹೊಂದಿದ್ದರು.

ತಮ್ಮ ಬದುಕಿನಲ್ಲಿ ಹಲವಾರು ಏಳುಬೀಳುಗಳನ್ನು ಕಂಡಿದ್ದ ಕರುಣಾನಿಧಿ ಅವರ ಸಾಧನೆಗಳು ಮಾತ್ರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ. ಪೆರಿಯಾರ್ ಹುಟ್ಟುಹಾಕಿದ್ದ ದ್ರಾವಿಡ ಚಳವಳಿಯನ್ನು ಮುಂದುವರಿಸಿಕೊಂಡು ತಮಿಳು ರಾಜಕಾರಣದಲ್ಲಿ ಉನ್ನತಿಗೇರಿದ್ದ ಮಹಾನಾಯಕ ಕರುಣಾನಿಧಿ ಅವರ ಹೆಸರು ಭಾರತೀಯ ರಾಜಕೀಯ ಚರಿತ್ರೆಯಲ್ಲಿ ಅಜರಾಮರವಾಗಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More