ಬೆಂಗಳೂರು ಬಾಲಕನ ಜೀವ ಉಳಿಸಿದ ವಿಶಾಖಪಟ್ಟಣಂ ಯುವಕನ ಹೃದಯ

ಆಂಧ್ರಪ್ರದೇಶದ ವಿಶಾಖಪಟ್ಟಣಂ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 22 ವರ್ಷದ ಯುವಕನ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಯುವಕನ ಹೃದಯ ಇದೀಗ ಬೆಂಗಳೂರಿನ ಬಾಲಕನ ಜೀವ ಉಳಿಸಿದ್ದು, ಫೋರ್ಟೀಸ್ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ

ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನೊಬ್ಬನ ಹೃದಯ ಬೆಂಗಳೂರಿನ ಬಾಲಕನ ದೇಹದಲ್ಲಿ ಮಿಡಿಯುವ ಮೂಲಕ ಜೀವ ಉಳಿಸಿದ ಕತೆಯಿದು. ಆಸ್ಪತ್ರೆ ವೈದ್ಯರು ಹಾಗೂ ಸಂಚಾರ ಪೊಲೀಸರ ಸಹಾಯದಿಂದ ಕೇವಲ ಒಂದೂವರೆ ಗಂಟೆಯೊಳಗೆ ವಿಶಾಖಪಟ್ಟಣದಿಂದ ಬನ್ನೇರುಘಟ್ಟ ಫೋರ್ಟೀಸ್ ಆಸ್ಪತ್ರೆ ಜೀವಂತ ಹೃದಯವನ್ನು ಸೋಮವಾರ ರಾತ್ರಿ ತಲುಪಿಸಿದ್ದು, ತಕ್ಷಣ ಬಾಲಕನಿಗೆ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಗಿದೆ ಎಂದು ಫೋರ್ಟೀಸ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ವಿಶಾಖಪಟ್ಟಣಂ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 22 ವರ್ಷದ ಯುವಕನ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ, ಯುವಕನ ಅಂಗಾಂಗ ದಾನಕ್ಕೆ ಮನೆಯವರು ಸಮ್ಮತಿಸಿದ್ದರು. ಅಂಗಾಂಗ ಅಗತ್ಯವಿರುವ ರೋಗಿಗಳ ಹುಟುಕಾಟ ನಡೆಸಿದಾಗ, ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಫೋರ್ಟೀಸ್ ಆಸ್ಪತ್ರೆಯಲ್ಲಿ ಬಾಲಕನಿಗೆ ಹೃದಯ ಕಸಿ ಮಾಡಬೇಕಾಗಿರುವ ವಿಚಾರ ತಿಳಿದಿದೆ. ತಕ್ಷಣವೇ ಅಲ್ಲಿನ ವೈದ್ಯರು, ಫೋರ್ಟೀಸ್ ಆಸ್ಪತ್ರೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರ ತಂಡ, ರಾತ್ರಿ 9.30ಕ್ಕೆ ವಿಶಾಖಪಟ್ಟದಿಂದ ವಿಮಾನದ ಮೂಲಕ ಜೀವಂತ ಹೃದಯವನ್ನು ಬೆಂಗಳೂರಿಗೆ ರವಾನಿಸಿದ್ದಾರೆ. ರಾತ್ರಿ ಸುಮಾರು 10.10ರ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುುಪಿದ ಹೃದಯವನ್ನು ಸಂಚಾರ ಪೊಲೀಸರ ಸಹಾಯದಿಂದ ಕೇವಲ 45 ನಿಮಿಷಗಳಲ್ಲಿ ಫೋರ್ಟೀಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಿಂದ 45 ಕಿಲೋಮೀಟರ್ ದೂರದ ಫೋರ್ಟೀಸ್ ಆಸ್ಪತ್ರೆವರೆಗೆ ಪೊಲೀಸರು ಗ್ರೀನ್ ಕಾರಿಡಾರ್ ವ್ಯವಸ್ಥೆ ಕಲ್ಪಿಸಿದ್ದರು. ಬಳಿಕ ವೈದ್ಯರ ತಂಡ ಬಾಲಕನಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. ಹೃದಯ ಕಸಿ ಸಂದರ್ಭದಲ್ಲಿ, ಹೊರತೆಗೆದ ಜೀವಂತ ಹೃದಯವನ್ನು 3 ಗಂಟೆಯೊಳಗೆ ಶಸ್ತ್ರಚಿಕಿತ್ಸೆ ಮಾಡಿ ಜೋಡಿಸಬೇಕಾಗುತ್ತದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More