ಕನ್ನಡಿಗರಿಂದಲೇ ಕಳೆಗಟ್ಟಿದ ‘ಮಾಲ್ಗುಡಿ ಡೇಸ್’ ಕನ್ನಡಕ್ಕೆ ಡಬ್ ಆಗಬಾರದೇಕೆ?

ಅಮೆಜಾನ್‌ ಆಪ್‌ನ ವೆಬ್‌ಸರಣಿಗಳಲ್ಲಿ ‘ಮಾಲ್ಗುಡಿ ಡೇಸ್‌’ ಕಂಡು ಖುಷಿಯಾದ ನೆಟ್ಟಿಗರು, ಕನ್ನಡದ ನೆಲದ ಸವಿಯನ್ನು ಉಣಬಡಿಸುವ ಧಾರಾವಾಹಿಯೊಂದು ಕನ್ನಡಿಗರಿಗೇ ತಲುಪದಿರುವ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ವ್ಯಕ್ತವಾದ ಆಕ್ರೋಶದ ಇಣುಕುನೋಟ ಇಲ್ಲಿದೆ

80ರ ದಶಕದಲ್ಲಿ ಮನರಂಜನೆ ಎಂದರೆ ದೂರದರ್ಶನ ಎಂದು ತಿಳಿದಿದ್ದವರಿಗೆ ‘ಮಾಲ್ಗುಡಿ ಡೇಸ್‌’ ಧಾರಾವಾಹಿ ಪರಿಚಯವಿರದೆ ಇರುವುದಿಲ್ಲ. ಈಗ ‘ಮಾಲ್ಗುಡಿ ಡೇಸ್’ ಮತ್ತೆ ನೆನಪಾಗಲು ಕಾರಣ, ಅಮೆಜಾನ್ ಪ್ರೈಮ್ ತನ್ನ ವೆಬ್‌ಸರಣಿಗಳಲ್ಲಿ ‘ಮಾಲ್ಗುಡಿ ಡೇಸ್‌’ ಸೇರ್ಪಡೆಗೊಳಿಸಿರುವುದು. ಅಮೆಜಾನ್‌ ಆಪ್‌ನ ವೆಬ್‌ಸರಣಿಗಳಲ್ಲಿ '‘ಮಾಲ್ಗುಡಿ ಡೇಸ್‌’ ಕಂಡು ಖುಷಿಯಾದ ನೆಟ್ಟಿಗರು ಟ್ವಿಟರ್‌ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ, ಕರ್ನಾಟಕದಲ್ಲಿ ಚಿತ್ರೀಕರಣವಾದ, ಕನ್ನಡಿಗರು ನಿರ್ಮಿಸಿದ ಇಂದಿಗೂ ಪ್ರಸ್ತುತವಾಗಿರುವ ಇಂತಹ ಅದ್ಭುತ ಸೃಜನಶೀಲ ಸರಣಿಯೊಂದು ಕನ್ನಡದಲ್ಲಿ ಡಬ್ ಆಗದಿರುವ ಬಗ್ಗೆ ಬಹಳಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ.

‘ಮಾಲ್ಗುಡಿ ಡೇಸ್’ ಆರ್ ಕೆ ನಾರಾಯಣ್ ಅವರ ಬರಹವನ್ನು ಆಧರಿಸಿ ನಿರ್ಮಿಸಲಾದ ಧಾರಾವಾಹಿ. ನಿರ್ದೇಶಕ ಹಾಗೂ ನಟ ಶಂಕರ್ ನಾಗ್ ಈ ಧಾರಾವಾಹಿಯ ನಿರ್ದೇಶಕರು. ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಚಿತ್ರೀಕರಣವಾದ ಈ ಧಾರಾವಾಹಿಗೆ ಎಲ್ ವೈದ್ಯನಾಥನ್ ಸಂಗೀತ ನೀಡಿದ್ದು, ಪದ್ಮರಾಗ್ ಫಿಲಂ ಸಂಸ್ಥೆಯ ಟಿ ಎಸ್ ನರಸಿಂಹನ್ ನಿರ್ಮಿಸಿದ್ದಾರೆ. ಧಾರಾವಾಹಿಯ ಭಾಗಗಳು ‘ಸ್ವಾಮಿ ಮತ್ತು ಅವನ ಸ್ನೇಹಿತರು’ ಎನ್ನುವ ಆರ್ ಕೆ ನಾರಾಯಣ್ ಅವರ ತ್ರಿವಳಿ ಕಾದಂಬರಿಯ ಮೊದಲ ಕಂತಿನಿಂದ ಆರಿಸಿದ ಕತೆಯನ್ನು ಆಧರಿಸಿವೆ.

ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿರುವ ಶಿವಕುಮಾರ್ ನಾಯಕ, “ಅಮೆಜಾನ್ ಪ್ರೈಮ್‌ನಲ್ಲಿ ಮಾಲ್ಗುಡಿ ಡೇಸ್ ಧಾರಾವಾಹಿ ಪ್ರಸಾರವಾಗುತ್ತಿದೆ. ನೀವು ಅದೇ ಸರಣಿಯನ್ನು ಕನ್ನಡಕ್ಕೆ ಡಬ್ ಮಾಡಿ ಒಂದು ಕೋಟಿ ಕನ್ನಡಿಗರಿಗೆ ತಲುಪಿಸಬಾರದೇಕೆ?” ಎಂದು ಟ್ವೀಟ್ ಮಾಡಿದ್ದಾರೆ. ಅವರಿಗೆ ಉತ್ತರಿಸಿದ ಅಮೆಜಾನ್‌ ಸಂಸ್ಥೆಯ ಅಧಿಕೃತ ಟ್ವಿಟರ್ ಖಾತೆ 'ಅಮೆಜಾನ್ ಹೆಲ್ಪ್‌’, “ನಿಮ್ಮ ಈ ಅಭಿಪ್ರಾಯವನ್ನು ನಾವು ಆಂತರಿಕವಾಗಿ ಸೃಜನಶೀಲ ವಿಷಯಗಳ ಬಗ್ಗೆ ಗಮನಹರಿಸುವ ತಂಡಕ್ಕೆ ಖಂಡಿತ ಕಳುಹಿಸುತ್ತೇವೆ,” ಎಂದು ಪ್ರತಿಕ್ರಿಯಿಸಿದೆ.

‘ಮಾಲ್ಗುಡಿ ಡೇಸ್‌’ ಸರಣಿಯನ್ನು ಕನ್ನಡದಲ್ಲಿ ನೋಡಲು ಸಾಧ್ಯವಾಗದೆ ಇರುವುದಕ್ಕಾಗಿ ಬಹಳಷ್ಟು ಮಂದಿ ಬೇಸರಪಟ್ಟಿದ್ದಾರೆ. ಇದೇ ಕಾರಣಕ್ಕಾಗಿ ‘ಮಾಲ್ಗುಡಿ ಡೇಸ್‌’ ಅನ್ನು ಕನ್ನಡಕ್ಕೆ ಡಬ್ ಮಾಡಬೇಕು ಎಂದು #MalgudiDaysInKannada ಹ್ಯಾಷ್‌ಟ್ಯಾಗ್ ಅನ್ನೂ ಟ್ವಿಟರ್‌ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ಕನ್ನಡದ ಹುಡುಗ ಎಂದು ಟ್ವಿಟರ್‌ನಲ್ಲಿ ಹೇಳಿಕೊಂಡಿರುವ ಗೌತಮ್‌ ಹೆಗ್ಡೆ ಟ್ವೀಟ್ ಮಾಡಿ, “ಪ್ರತಿವರ್ಷವೂ ಹಲವಾರು ಧಾರವಾಹಿಗಳು ಬಂದುಹೋಗುತ್ತವೆ. ಆದರೆ ಇಂದಿಗೂ ಪ್ರಸ್ತುತವಾಗಿರುವ ಅತ್ಯುತ್ತಮ ಧಾರಾವಾಹಿ ‘ಮಾಲ್ಗುಡಿ ಡೇಸ್‌.’ ಹೆಮ್ಮೆಯ ಕನ್ನಡಿಗ ಶಂಕರ್‌ ನಾಗ್ ಮತ್ತು ಕನ್ನಡದ ನಟರು ಸೇರಿ ಮಾಡಿರುವ ‘ಮಾಲ್ಗುಡಿ ಡೇಸ್‌’ ಅನ್ನು ನಾವು ಕನ್ನಡದಲ್ಲಿ ನೋಡಲು ಬಯಸುತ್ತೇವೆ,” ಎಂದು ಹೇಳಿದ್ದಾರೆ. ಕನ್ನಡಕ್ಕೆ ಸಂಬಂಧಿಸಿದ ಟ್ವೀಟ್‌ಗಳನ್ನು ಮಾಡುವ ‘ಹೊರನಾಡು ಕನ್ನಡ’ ಎನ್ನುವ ಟ್ವಿಟರ್ ಖಾತೆಯೂ, “ಮಾಲ್ಗುಡಿ ಡೇಸ್ ಕನ್ನಡದಲ್ಲಿ ಡಬ್ ಆಗಿ ಪ್ರಸಾರವಾಗಬೇಕು,” ಎಂದು ಅಭಿಪ್ರಾಯಪಟ್ಟಿದೆ.

ಆದರೆ, ಕನ್ನಡದಲ್ಲಿ ಡಬ್ಬಿಂಗ್ ವಿರೋಧಿ ವಾತಾವರಣವಿರುವ ಕಾರಣ ‘ಮಾಲ್ಗುಡಿ ಡೇಸ್‌’ ಕನ್ನಡಕ್ಕೆ ಡಬ್ ಆಗಲು ಸಮಸ್ಯೆ ಇದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಕನ್ನಡದ ಬರಹಗಾರ ಗಣೇಶ್ ಚೇತನ್ ಟ್ವೀಟ್ ಮಾಡಿ, “ಕನ್ನಡ ಸಿನಿಮಾ ಮತ್ತು ಟಿವಿ ಉದ್ಯಮದ ಯಾವುದೇ ತಾರೆಗೂ ಬಹಿರಂಗವಾಗಿ ‘ಮಾಲ್ಗುಡಿ ಡೇಸ್’ ಕನ್ನಡದಲ್ಲಿ ಡಬ್ ಆಗಬೇಕು ಎಂದು ಬೆಂಬಲಿಸುವ ಧೈರ್ಯ ಇರದು. ಕನ್ನಡ ನಟರ ಬೆಂಬಲವಿಲ್ಲದೆಯೇ ನಾವು ಈ ಹೋರಾಟ ಗೆಲ್ಲುತ್ತೇವೆ. ಕನ್ನಡ ಸಿನಿಮಾ ಮತ್ತು ಟಿವಿ ಉದ್ಯಮಿಗಳು ಅಕ್ರಮವಾಗಿ ‘ಡಬ್ಬಿಂಗ್ ವಿರೋಧಿ’ ನಿಲುವನ್ನು ಕನ್ನಡಿಗರ ಮೇಲೆ ಹೇರುವುದನ್ನು ತಡೆಯಬೇಕು,” ಎಂದು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಭಾಷಾಶಾಸ್ತ್ರಜ್ಞ ನವನೀತ್ ಗೌಡ, “ಶಂಕರ್ ನಾಗ್ ನಿರ್ದೇಶಿಸಿದ ಮತ್ತು ಬಹುತೇಕ ಕನ್ನಡಿಗರೇ ಇರುವ ಮಾಲ್ಗುಡಿ ಡೇಸ್‌ನಂತಹ ಮಾಸ್ಟರ್ ಪೀಸ್ ಅನ್ನು ಇನ್ನೂ ಕನ್ನಡದಲ್ಲಿ ಡಬ್ ಮಾಡಲು ಧೈರ್ಯ ತೋರಿಸದೆ ಇರುವುದಕ್ಕಾಗಿ ಕನ್ನಡದ ದೊಡ್ಡ ಟೆಲಿವಿಜನ್ ಸ್ಟುಡಿಯೋಗಳಿಗೆ ನಾಚಿಕೆ ಆಗಬೇಕು,” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಸಿನಿಮಾ ಡಬ್ಬಿಂಗ್ ಹೋರಾಟದ ಪ್ರಮುಖ ರೂವಾರಿ ‘ಸಂಧ್ಯಾರಾಗ’ದ ಅನಕೃ

ಬಹಳಷ್ಟು ಮಂದಿ ಶಂಕರ್ ನಾಗ್ ಅವರ ಸಾಧನೆಗಳನ್ನು ಕನ್ನಡಿಗರೇ ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ; ‘ಮಾಲ್ಗುಡಿ ಡೇಸ್‌’ನಂತಹ ಕಾರ್ಯಕ್ರಮ ಕನ್ನಡಿಗರೇ ತಲುಪಿಲ್ಲ ಎಂದು ಬೇಸರಪಟ್ಟಿದ್ದಾರೆ. ಕನ್ನಡ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡುವ ಚಂದನವನ ಎನ್ನುವ ಟ್ವಿಟರ್ ಖಾತೆ ಮಾಲ್ಗುಡಿ ಡೇಸ್ ಕನ್ನಡದಲ್ಲಿ ಬೇಕು ಎನ್ನುವ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿರುವುದನ್ನು ಉಲ್ಲೇಖಿಸಿ ಪ್ರಶ್ನೆಯೊಂದನ್ನು ಮುಂದೆ ಇಟ್ಟಿದೆ. “ಶಂಕರ್ ನಾಗ್ ಅವರ ‘ಮಾಲ್ಗುಡಿ ಡೇಸ್’ ಇಂದು ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಡಬ್ಬಿಂಗ್ ಪರವಾಗಿರುವವರು ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ನಿಮ್ಮ ಅಭಿಪ್ರಾಯವೇನು ಎಂದು ತಿಳಿಸಿ,” ಎಂದು ಚಂದನವನ ಟ್ವೀಟ್ ಮಾಡಿದೆ. ಮತ್ತೊಬ್ಬ ಭಾಷಾತಜ್ಞ ರಾಮಚಂದ್ರ ಎಂ ಅವರೂ, “ಶಂಕರ್ ನಾಗ್ ಅವರ ಅದ್ಭುತ ಕೆಲಸವೊಂದು ಕನ್ನಡಿಗರಿಗೆ ತಲುಪದೆ ಇರುವುದು ನಾಚಿಕೆಗೇಡು,” ಎಂದು ಬೇಸರಪಟ್ಟಿದ್ದಾರೆ.

ಕನ್ನಡಿಗರ ಸೃಜನಶೀಲ ಕೆಲಸಗಳು ಕನ್ನಡಿಗರಿಗೇ ಲಭ್ಯವಿಲ್ಲದೆ ಇರುವ ಬಗ್ಗೆ ಬಹಳಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಾಪ್ ಕಣಗಾಲ್, ಅರುಣ್ ಜಾವಗಲ್, ಕಿರಣ್ ಮೊದಲಾದ ಟ್ವೀಟಿಗರು ಕನ್ನಡದಲ್ಲಿ ಟ್ವೀಟ್ ಮಾಡಿ ಈ ಬಗ್ಗೆ ಬೇಸರಪಟ್ಟಿದ್ದಾರೆ. ಕನ್ನಡ ನೆಲದಲ್ಲಿ ಚಿತ್ರೀಕರಣವಾದ, ಕನ್ನಡದ ನಟರು ಮತ್ತು ತಂತ್ರಜ್ಞರೇ ಇರುವ ಕಾರ್ಯಕ್ರಮವೊಂದು ಕನ್ನಡ ಭಾಷಿಕರಿಗೆ ತಲುಪದೆ ಇರುವ ಬಗ್ಗೆ ಇವರು ವಿಷಾದಿಸಿದ್ದಾರೆ. ಅಮರನಾಥ್ ಎಸ್ ಟ್ವೀಟ್ ಮಾಡಿ, “ಇಂತಹ ಒಂದು ಅದ್ಭುತ ಧಾರಾವಾಹಿ ನೋಡಲು ಕನ್ನಡಿಗರಿಗೆ ಸಾಧ್ಯವಾಗದೆ ಇರುವುದು ದುರದೃಷ್ಟಕರ,” ಎಂದಿದ್ದಾರೆ. ಈ ಬಗ್ಗೆ ಗೌತಮ್ ಹೆಗ್ಡೆ, ಸುಜನ ದೇವ, ಅಭಿನಂದನ್, ಶ್ರುತಿ ಮೊದಲಾದವರು ಸಹ ಟ್ವೀಟ್ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

‘ಮಾಲ್ಗುಡಿ ಡೇಸ್’ ಧಾರಾವಾಹಿ ಕನ್ನಡದಲ್ಲಿ ಲಭ್ಯವಿಲ್ಲ ಎನ್ನುವ ಆಕ್ರೋಶ ಟ್ವೀಟಿಗರ ನಡುವೆ ಕನ್ನಡ ಸಿನಿಮಾ ಮತ್ತು ಟಿವಿ ರಂಗದ ಡಬ್ಬಿಂಗ್ ವಿರೋಧಿ ನಿಲುವನ್ನೂ ಪ್ರಶ್ನಿಸುವಂತೆ ಮಾಡಿದೆ. ಹಿಂದೆಯೂ ಟ್ವಿಟರ್‌ನಲ್ಲಿ ಡಬ್ಬಿಂಗ್ ಬಗ್ಗೆ ಸಾಕಷ್ಟು ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ‘ಮಾಲ್ಗುಡಿ ಡೇಸ್’ ವಿಚಾರವಾಗಿ ಮತ್ತೆ ಅಂತಹುದೇ ಚರ್ಚೆಯಾಗಿದೆ. ಅಧ್ಯಾಪಕ ಅಚ್ಯುತ ಕೆ ರಾಜ್ ಟ್ವೀಟ್ ಮಾಡಿ, “ಡಬ್ಬಿಂಗ್ ವಿರೋಧಿಸುವ ಎಲ್ಲ ಹೇಡಿಗಳಿಗೆ ಕನ್ನಡ ಮತ್ತು ಕನ್ನಡ ಸಿನಿಮಾದ ವಿಚಾರ ಬಂದಾಗ ನಾನು ಕನ್ನಡವನ್ನೇ ಆರಿಸುವುದು ಎಂದು ಹೇಳಲು ಬಯಸುತ್ತೇನೆ. ಕೆಲವು ಸಿನಿಮಾ ಮಂದಿಯ ಹಿತಾಸಕ್ತಿ ಕಾಪಾಡಲು ಒಟ್ಟಾರೆ ಭಾಷೆಗೆ ಮಾರಕವಾಗುವ ನಿರ್ಧಾರ ಕೈಗೊಳ್ಳುವುದು ತಪ್ಪು,” ಎಂದು ಅಭಿಪ್ರಾಯಪಟ್ಟಿದ್ದಾರೆ. ಅಪರೂಪವೆನ್ನುವಂತೆ ಕೆಲವು ರಾಜಕಾರಣಿಗಳೂ ‘ಮಾಲ್ಗುಡಿ ಡೇಸ್’ ಕನ್ನಡಕ್ಕೆ ಡಬ್ ಆಗುವುದನ್ನು ಬೆಂಬಲಿಸಿದ್ದಾರೆ. ಬಿಜೆಪಿ ಶಾಸಕ ಸಿ ಟಿ ರವಿ ಟ್ವೀಟ್ ಮಾಡಿ, “ಕೆಲವು ವ್ಯಕ್ತಿಗಳ ಕ್ರಮಗಳಿಂದಾಗಿ ಶಂಕರ್ ನಾಗ್ ಅವರ ಮಾಸ್ಟರ್‌ ಪೀಸ್ ‘ಮಾಲ್ಗುಡಿ ಡೇಸ್’ ಇನ್ನೂ ಕನ್ನಡಿಗರಿಗೆ ತಲುಪದೆ ಇರುವುದು ದುರದೃಷ್ಟಕರ. ಸಮಯವನ್ನು ಮೀರಿದ ಸೃಜನಶೀಲತೆ ಹೊಂದಿದ್ದ ವ್ಯಕ್ತಿಯ ಸಾಧನೆಗೆ ಕಿರೀಟ ‘ಮಾಲ್ಗುಡಿ ಡೇಸ್’ ಎನ್ನುವುದರಲ್ಲಿ ಸಂಶಯವೇ ಇಲ್ಲ,” ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಮುಖಂಡ ಎಂ ಬಿ ಪಾಟೀಲ್ ನೇರವಾಗಿ ‘ಮಾಲ್ಗುಡಿ ಡೇಸ್’ ಬಗ್ಗೆ ಟ್ವೀಟ್‌ಗಳನ್ನು ಮಾಡದೆ ಇದ್ದರೂ, ಈ ಹ್ಯಾಷ್‌ಟ್ಯಾಗ್‌ನಲ್ಲಿ ಟ್ರೆಂಡ್ ಆಗುತ್ತಿದ್ದ ಕೆಲವು ಟ್ವೀಟ್‌ಗಳನ್ನು ಲೈಕ್ ಮಾಡಿದ್ದಾರೆ. ಚಂದ್ರಶೇಖರ್ ಟಿ ಮತ್ತು ಅನ್ನದಾನೇಶ್ ಎಸ್ ಅವರು ಮಾಲ್ಗುಡಿ ಡೇಸ್ ಅನ್ನು ಕನ್ನಡಕ್ಕೆ ಡಬ್ ಮಾಡಬೇಕು ಎಂದು ಒತ್ತಾಯಿಸಿ ಮಾಡಿರುವ ಟ್ವೀಟ್‌ಗಳನ್ನು ಎಂ ಬಿ ಪಾಟೀಲ್ ಲೈಕ್ ಮಾಡಿದ್ದಾರೆ.

‘ಮಾಲ್ಗುಡಿ ಡೇಸ್’ ಇನ್ನೂ ಕನ್ನಡಕ್ಕೆ ಡಬ್ ಆಗದೆ ಇರುವ ಬಗ್ಗೆ ಕೆಲವು ತಮಿಳು ಟ್ವೀಟಿಗರೂ ಆಶ್ಚರ್ಯಪಟ್ಟಿದ್ದಾರೆ. ಕೆಲವು ಟ್ವೀಟಿಗರು ಕನ್ನಡೇತರರಿಗೆ ಎಲ್ಲ ಪ್ರಮುಖ ಕಾರ್ಯಕ್ರಮಗಳೂ ಅವರ ಮಾತೃಭಾಷೆಯಲ್ಲಿ ಡಬ್ ಆಗಿ ನೋಡಲು ಸಿಗುತ್ತದೆ. ಆದರೆ ಕನ್ನಡ ಭಾಷಿಕರು ಮಾತ್ರ ತಮ್ಮ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ನೋಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಕನ್ನಡ ಮನರಂಜನಾ ಉದ್ಯಮದ ಡಬ್ಬಿಂಗ್ ವಿರೋಧಿ ನಿಲುವು ಮತ್ತು ‘ಮಾಲ್ಗುಡಿ ಡೇಸ್’ ಕನ್ನಡಿಗರಿಗೇ ತಲುಪದೆ ಇರುವ ಬಗ್ಗೆ ನೂರಾರು ಟ್ವೀಟ್‌ಗಳು ಟ್ವಿಟರ್‌ನಲ್ಲಿ ಹರಿದಾಡಿವೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More