ಜಿನ್ನಾರನ್ನು ಮರೆತ ದಲಾಯ್‌ ಲಾಮಾ ನೆಹರು ಬಗ್ಗೆ ಸುಳ್ಳು ಹೇಳಿದರೇ?

ತಮಗಿದ್ದ ಕಾಯಿಲೆಯಿಂದಾಗಿ ಜಿನ್ನಾ 2 ವರ್ಷ ಮೊದಲೇ ಮರಣ ಹೊಂದಿದ್ದರೆ ದೇಶ ವಿಭಜನೆ ತಪ್ಪಿಸಬಹುದಿತ್ತು ಎಂಬ ಅಭಿಪ್ರಾಯವನ್ನು ವೈಸ್‌ರಾಯ್‌ ಆಗಿದ್ದ ಮೌಂಟ್‌ಬ್ಯಾಟನ್‌ ಹಂಚಿಕೊಂಡಿದ್ದರು. ವಿಭಜನೆಗೆ ಯಾರು ಕಾರಣ ಎಂಬುದಕ್ಕೆ ಇದು ಉತ್ತರದಂತಿತ್ತು. ಆದರೆ, ದಲಾಯ್‌ ಲಾಮಾ ಅವರು ಮಾಜಿ ಪ್ರಧಾನಿ ನೆಹರು ಇದಕ್ಕೆಲ್ಲ ಕಾರಣ ಎಂದುಬಿಡುವುದೇ!

ಜವಾಹರಲಾಲ್‌ ನೆಹರು ಅವರ ಅಧಿಕಾರದ ಆಸೆಯೇ ದೇಶ ವಿಭಜನೆಗೆ ಕಾರಣ ಎನ್ನುವ ಅರ್ಥದ ವಿವಾದಾಸ್ಪದ ಹೇಳಿಕೆ ನೀಡಿದ್ದಕ್ಕಾಗಿ ಟಿಬೆಟಿಯನ್‌ ಧರ್ಮಗುರು ದಲಾಯ್‌ ಲಾಮಾ ಶುಕ್ರವಾರ ಬೆಂಗಳೂರಿನಲ್ಲಿ ಕ್ಷಮೆ ಯಾಚಿಸಿದ್ದಾರೆ. ಗೋವಾದ ಸಮಾರಂಭವೊಂದರಲ್ಲಿ ಬುಧವಾರ ಪ್ರಾಸ್ತಾವಿಕ ಭಾಷಣ ಮಾಡುತ್ತ, “ಒಂದು ವೇಳೆ ಪಂಡಿತ್ ಜವಾಹರಲಾಲ್‌ ನೆಹರು ಅವರೇನಾದರೂ ಮಹಾತ್ಮ ಗಾಂದಿಯವರ ಸಲಹೆಯಂತೆ ಜಿನ್ನಾ ಅವರನ್ನು ದೇಶದ ಮೊದಲ ಪ್ರಧಾನಿಯಾಗಲು ಒಪ್ಪಿದ್ದರೆ, ದೇಶ ವಿಭಜನೆಯಾಗುವುದನ್ನು ತಡೆಯಬಹುದಿತ್ತು,” ಎನ್ನುವ ಅವರ ಹೇಳಿಕೆ ಚರ್ಚೆಯ ವಸ್ತುವಾಗಿತ್ತು. ಅವರ ಹೇಳಿಕೆಯ ಬೆನ್ನಿಗೇ ಕಾಂಗ್ರೆಸ್‌ನ‌ ಹಿರಿಯ ವಕ್ತಾರ ಮನೀಷ್‌ ತಿವಾರಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಅದು ತಪ್ಪು ಅಭಿಪ್ರಾಯ ಎಂದು ಟ್ವೀಟ್‌ ಮಾಡಿದ್ದರು.

ಗೋವಾ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಶೈಕ್ಷಣಿಕ ಸಂಸ್ಥೆಯಲ್ಲಿ ‘ಭಾರತದ ಪ್ರಾಚೀನ ಜ್ಞಾನದ ಇಂದಿನ ಪ್ರಸ್ತುತತೆ’ ಎನ್ನುವ ವಿಷಯದ ಕುರಿತು ಪ್ರಾಸ್ತಾವಿಕ ಭಾಷಣದ ವೇಳೆ ದಲಾಯ್‌ ಲಾಮಾ, “ಮಹಾತ್ಮ ಗಾಂಧಿಯವರು ಜಿನ್ನಾ ಅವರಿಗೆ ಪ್ರಧಾನಿ ಹುದ್ದೆಯನ್ನು ನೀಡಲು ಆಸಕ್ತಿ ಹೊಂದಿದ್ದರು. ಆದರೆ, ಪಂಡಿತ್‌ ನೆಹರು ಅವರು ಅದನ್ನು ನಿರಾಕರಿಸಿದರು. ನೆಹರು ಅವರದು ಸ್ವಲ್ಪ ಸ್ವಕೇಂದ್ರಿತ ವ್ಯಕ್ತಿತ್ವ- ‘ನಾನು ಪ್ರಧಾನಿಯಾಗಬೇಕು’ ಎಂದು. ಒಂದು ವೇಳೆ, ಮಹಾತ್ಮ ಗಾಂಧಿಯವರ ಆಸೆ ಈಡೇರಿದ್ದರೆ, ಭಾರತ-ಪಾಕಿಸ್ತಾನ ಒಗ್ಗೂಡಿರುತ್ತಿದ್ದವು. ಪಂಡಿತ್‌ ನೆಹರು ಅವರು, ನಾನು ತಿಳಿದಂತೆ ಅತ್ಯಂತ ಅನುಭವಿಗಳು ಹಾಗೂ ಮಹಾನ್‌ ಬುದ್ಧಿವಂತರು. ಆದರೆ, ಕೆಲವೊಮ್ಮೆ ತಪ್ಪುಗಳು ಆಗುತ್ತವೆ,” ಎಂದು ಅವರು ಅಭಿಪ್ರಾಯಪಟ್ಟಿದ್ದರು.

ದಲಾಯ್‌ ಲಾಮಾ ಅವರ ಮಾತುಗಳು ದನಿಸುವ ಅಭಿಪ್ರಾಯವೇನಿದೆ, ಅಂತಹ ಅಭಿಪ್ರಾಯಗಳು ಹೊಸದಲ್ಲ. ನೆಹರು ಅವರಿಗೆ ಹೇಗಾದರೂ ಸರಿ ಅಧಿಕಾರವನ್ನು ಹಿಡಿಯಲೇಬೇಕು ಎನ್ನುವ ಹಪಹಪಿ ಇತ್ತು ಎಂಬ ತಪ್ಪು ಅಭಿಪ್ರಾಯವನ್ನು ಮೂಡಿಸುವ ಸಲುವಾಗಿ ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಇಂತಹ ಮಾತುಗಳನ್ನು ವ್ಯವಸ್ಥಿತವಾಗಿ ತೇಲಿಬಿಡಲಾಗಿದೆ. ದಲಾಯ್‌ ಲಾಮಾ ಅವರು ಸಹ ಇಂತಹದ್ದೇ ತಪ್ಪು ತಿಳಿವಳಿಕೆಗೆ ಸಿಲುಕಿ ಈ ಹೇಳಿಕೆ ನೀಡಿರಬಹುದು. ಆದರೆ, ಸಹಜವಾಗಿಯೇ ನೆಹರು ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿರುವ, ಅವರ ದಿಟ್ಟ ನಿರ್ಧಾರದ ಫಲವಾಗಿ ಚೀನಾದ ವಿರೋಧದ ನಡುವೆಯೂ ಭಾರತದಲ್ಲಿ ರಾಜಕೀಯ ಆಶ್ರಯವನ್ನು ತಮಗೆ ಹಾಗೂ ತಮ್ಮ ಸಂಗಡಿಗರಿಗೆ ಪಡೆಯುವಲ್ಲಿ ಸಫಲರಾದ ದಲಾಯ್‌ ಲಾಮಾ ಅವರು ಇಂತಹ ಹೇಳಿಕೆ ನೀಡುವ ಮುನ್ನ ಇತಿಹಾಸದ ದಾಖಲೆಗಳಿಗೆ ಮುಖಾಮುಖಿಯಾಗುವ ಮೂಲಕ ತಮಗಿರುವ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದಾಗಿತ್ತು.

ಇತಿಹಾಸವನ್ನೊಮ್ಮೆ ಗಮನಿಸಿದರೆ, ಗಾಂಧಿಯವರು ಮಾಡಿದ್ದ ಈ ಒಂದು ಪ್ರಸ್ತಾವನೆ ಸ್ವತಃ ಜಿನ್ನಾ ಅವರಿಗೇ ಪಥ್ಯವಾಗಿರಲಿಲ್ಲ ಎನ್ನುತ್ತವೆ ದಾಖಲೆಗಳು. ಅಂದಹಾಗೆ, ಗಾಂಧಿಯವರು ೧೯೪೭ರ ಏಪ್ರಿಲ್‌ನಲ್ಲಿ ಭಾರತದ ಕೊನೆಯ ವೈಸ್‌ರಾಯ್‌ ಆಗಿ ನಿಯುಕ್ತರಾದ ಲಾರ್ಡ್‌ ಮೌಂಟ್‌ಬ್ಯಾಟನ್‌‌ ಮುಂದೆ ದೇಶವಿಭಜನೆಯನ್ನು ತಡೆಯಲು ಇರುವ ಪರ್ಯಾಯಗಳನ್ನು ಚರ್ಚಿಸುವ ಸಂದರ್ಭದಲ್ಲಿ ಜಿನ್ನಾ ಅವರನ್ನು ಪ್ರಧಾನಿಯಾಗಿ ಮಾಡುವ ಪ್ರಸ್ತಾವನೆಯನ್ನು ಮಾಡುತ್ತಾರೆ. ಆದರೆ, ಹಾಗೆಂದು ಇದೇ ಮೊದಲ ಬಾರಿಗೆ ಅವರು ತಮ್ಮ ಈ ಆಲೋಚನೆಯನ್ನು ಹಂಚಿಕೊಂಡಿರುವುದಿಲ್ಲ. ೧೯೪೦ರಲ್ಲಿಯೂ ಅವರು ಇದೇ ಪ್ರಸ್ತಾಪವನ್ನು ಮಾಡಿರುತ್ತಾರೆ. ಆದರೆ, ಗಾಂಧಿಯವರ ಈ ಪ್ರಸ್ತಾವನೆಯ ಬಗ್ಗೆ ಮುಸ್ಲಿಂ ಲೀಗ್‌ ಆಗಲಿ, ಕಾಂಗ್ರೆಸ್‌ ಆಗಲಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಅದಕ್ಕೆ ಅಂದಿನ ರಾಜಕಾರಣದ ವಾಸ್ತವ ಸವಾಲುಗಳು ಕಾರಣವಾಗಿರುತ್ತವೆ.

ಭಾರತದ ವೈಸ್‌ರಾಯ್‌ ಆಗಿ ಆಗಷ್ಟೇ ಬಂದಿದ್ದ ಲಾರ್ಡ್ ‌ಮೌಂಟ್‌ಬ್ಯಾಟನ್‌ ಅವರಿಗೆ ಗಾಂಧಿಯವರ ಈ ಪ್ರಸ್ತಾವನೆ ದೇಶದ ವಿಭಜನೆಯನ್ನು ತಡೆಯುವ ನಿಟ್ಟಿನಲ್ಲಿ ಹೊಸದೊಂದು ಪರ್ಯಾಯ ಎನ್ನುವಂತೆ ಕಂಡರೂ ಅವರದೇ ಕಚೇರಿಯಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿದ್ದ ಹಿರಿಯ ಅಧಿಕಾರಿಗಳಿಗಾಗಲೀ, ಕಾಂಗ್ರೆಸ್‌ನ ಹಿರಿಯ ನಾಯಕ ನೆಹರು ಅವರಿಗಾಗಲೀ ಅದರಲ್ಲಿ ಹೊಸತೇನೂ ಕಾಣಿಸುವುದಿಲ್ಲ. ಹಾಗಾಗಿಯೇ, ಮೌಂಟ್‌ಬ್ಯಾಟನ್ ಈ ಪ್ರಸ್ತಾಪವನ್ನು ನೆಹರು ಅವರ ಮುಂದಿಟ್ಟಾಗ ಅವರು ಕೋಪಗೊಳ್ಳುವುದಾಗಲೀ, ಅಚ್ಚರಿಗೊಳಗಾಗುವುದಾಗಲೀ ಮಾಡುವುದಿಲ್ಲ. ಬದಲಿಗೆ, "ಈ ಪ್ರಸ್ತಾಪಕ್ಕೆ ಜಿನ್ನಾ ಒಪ್ಪುವರೇ?" ಎಂದು ಕೇಳುತ್ತಾರೆ. ಇದೆಲ್ಲವೂ ವೈಸ್‌ರಾಯ್ ಅವರ ಖಾಸಗಿ ಹಾಗೂ ಅಧಿಕೃತ ದಾಖಲೆಗಳಲ್ಲಿದೆ. ವಿಪರ್ಯಾಸವೆಂದರೆ, ನೆಹರು ಈ ಪ್ರಸ್ತಾವನೆಯನ್ನು ಕೇಳಿ ಆಘಾತಗೊಂಡರು, ಕೋಪದಿಂದ ಪ್ರತಿಕ್ರಿಯಿಸಿದರು ಎಂದೆಲ್ಲ ಸುಳ್ಳುಸುದ್ದಿಗಳನ್ನು ಆನಂತರದ ದಿನಗಳಲ್ಲಿ ಹಬ್ಬಿಸಲಾಗಿದೆ.

ಗಾಂಧಿಯವರ ಈ ಪ್ರಸ್ತಾವನೆ ಹೇಗೆ ವೈಸ್‌ರಾಯ್‌ ಅವರನ್ನು ಸಂಕಷ್ಟಕ್ಕೆ ಸಿಲುಕಿಸಲಿದೆ ಎನ್ನುವ ಬಗ್ಗೆ ಅವರ ಕಚೇರಿಯ ಹಿರಿಯ ಅಧಿಕಾರಿಗಳೇ ಚರ್ಚೆ ಹಾಗೂ ಟಿಪ್ಪಣಿಗಳ ಮೂಲಕ ಎಚ್ಚರಿಸುತ್ತಾರೆ . ವೈಸ್‌ರಾಯ್‌ ಅವರಿಗೆ ರಾಜಕೀಯ ಸಲಹಾಕಾರರಾಗಿದ್ದ ವಿ ಪಿ ಮೆನನ್‌ ಅವರು, ಜಿನ್ನಾ ಪ್ರಧಾನಮಂತ್ರಿಯಾಗುವ ಕುರಿತಾದ ಸಾಧಕ-ಬಾಧಕಗಳ ಬಗ್ಗೆ ಈ ಸಂದರ್ಭದಲ್ಲಿ ಮೌಂಟ್‌ಬ್ಯಾಟನ್‌ ಅವರ ಅನುಕೂಲಕ್ಕಾಗಿ ಟಿಪ್ಪಣಿಯೊಂದನ್ನು ಸಿದ್ಧಪಡಿಸುತ್ತಾರೆ. ಅವರು ತಮ್ಮ ಟಿಪ್ಪಣಿಯಲ್ಲಿ ಏನನ್ನು ಹೇಳಿದ್ದರು ಎನ್ನುವುದನ್ನು ಗಮನಿಸುವುದಕ್ಕೂ ಮುನ್ನ, ಗಾಂಧೀಜಿಯವರು ಪ್ರಸ್ತಾಪಿಸಿದ್ದ ಯೋಜನೆ ಏನಿತ್ತು ಎನ್ನುವುದನ್ನು ಅರಿಯುವುದು ಅಗತ್ಯ. ಗಾಂಧಿಯವರು ತಮ್ಮ ಪ್ರಸ್ತಾವನೆಯಲ್ಲಿ, “ಸ್ವಾತಂತ್ರ್ಯ ಘೋಷಣೆ ಮಾಡುವುದಕ್ಕೂ ಮುನ್ನ ಅಧಿಕಾರ ಹಸ್ತಾಂತರಕ್ಕೆ ಅಗತ್ಯವಿರುವ ಮಧ್ಯಂತರ ಸರ್ಕಾರದ ರಚನೆಯ ಅವಕಾಶವನ್ನು ಜಿನ್ನಾ ಅವರಿಗೆ ನೀಡಬೇಕು. ಜಿನ್ನಾ ಅವರು ತಮ್ಮ ಮುಸ್ಲಿಂ ಲೀಗ್‌ನ ಸದಸ್ಯರೊಂದಿಗೆ ಮಧ್ಯಂತರ ಸರ್ಕಾರವನ್ನು ರಚಿಸಬೇಕು. ಆ ಸರ್ಕಾರ ಪ್ರಸಕ್ತ ಇರುವ ಸರ್ಕಾರದ ರೀತಿಯಲ್ಲಿಯೇ (ವೈಸ್‌ರಾಯ್‌ ಅವರ ಅಡಿಯಲ್ಲಿ ರಚಿತವಾಗಿದ್ದ, ಅಧಿಕಾರ ಹಸ್ತಾಂತರದ ಉದ್ದೇಶಕ್ಕಾಗಿಯೆ ರೂಪಿಸಲ್ಪಟ್ಟಿದ ಸಚಿವರ ಸಮಿತಿ ಅಥವಾ ಕಾರ್ಯಕಾರಿ ಸಮಿತಿ. ವೈಸ್‌ರಾಯ್ ಅಧ್ಯಕ್ಷತೆಯ ಈ ಸಮಿತಿಯ ಉಪಾಧ್ಯಕ್ಷರಾಗಿ ನೆಹರು ಅವರು ಇರುತ್ತಾರೆ) ವೈಸ್‌ರಾಯ್‌ ಅವರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು,” ಎಂದು ಸಲಹೆ ನೀಡುತ್ತಾರೆ.

ಈ ಪ್ರಸ್ತಾವನೆಯ ಸಾಧಕ-ಬಾಧಕದ ಬಗ್ಗೆ ಮೌಂಟ್‌ಬ್ಯಾಟನ್‌ ಅವರಿಗೆ ವಿವರಿಸಿ ಮಾಡುವ ಟಿಪ್ಪಣಿಯಲ್ಲಿ ವಿ ಪಿ ಮೆನನ್‌ ಈ ಹಿಂದಿನ ಕೆಲ ಸಂಗತಿಗಳನ್ನು ನೆನಪಿಸುತ್ತಾರೆ. ೧೯೪೦ರಲ್ಲಿ ಲಾರ್ಡ್‌ ಲಿನ್ಲಿತ್‌ಗೋ ಅವರು ಕೇಂದ್ರ ಸರ್ಕಾರದಲ್ಲಿ ಭಾಗಿಯಾಗುವಂತೆ ಮುಸ್ಲಿಂ ಲೀಗ್‌ಗೆ ನೀಡಿದ ಸಲಹೆಯನ್ನು ಚರ್ಚಿಸುವ ಸಲುವಾಗಿ ಲೀಗ್‌ನ ಕಾರ್ಯಕಾರಿ ಸಮಿತಿ ಸಭೆ ಸೇರಿರುತ್ತದೆ. ಸಮಿತಿಯ ಸದಸ್ಯರಲ್ಲಿ ಬಹುತೇಕರಿಗೆ ಸರ್ಕಾರದಲ್ಲಿ ಪಾಲ್ಗೊಳ್ಳುವ ನಿರ್ಧಾರ ಸೂಕ್ತ ಎನಿಸಿರುತ್ತದೆ. ಆದರೆ, ಇದನ್ನು ಐವರು ಮಾತ್ರ ವಿರೋಧಿಸುತ್ತಾರೆ. ಈ ಅಲ್ಪಮತದ ನೇತೃತ್ವವನ್ನು ವಹಿಸುವ ಜಿನ್ನಾ ಅವರು ತಾವು ಬಹುಮತಕ್ಕೆ ತಲೆಬಾಗುವುದಾಗಿ ಹೇಳುತ್ತಲೇ, ಒಂದು ವೇಳೆ ಸರ್ಕಾರದಲ್ಲಿ ಪಾಲ್ಗೊಂಡರೆ ಆಗಲಿರುವ ಪರಿಣಾಮಗಳ ಬಗ್ಗೆ ಆಲೋಚಿಸುವಂತೆಯೂ ಸೂಚಿಸುತ್ತಾರೆ. ಒಂದೊಮ್ಮೆ, ಲೀಗ್‌ ಸರ್ಕಾರದ ಭಾಗವಾದರೆ ಭಾರತೀಯ ಸಾಮ್ರಾಜ್ಯವನ್ನು ರಕ್ಷಿಸುವ ಹೊಣೆಗಾರಿಕೆಯ ಜೊತೆಗೇ, ಆಂತರಿಕ ಕಲಹಗಳನ್ನು ನಿಭಾಯಿಸಬೇಕಾದ ಅನಿವಾರ್ಯತೆಗೆ ಈಡಾಗುತ್ತದೆ. ಇದಕ್ಕೆ ಆಗತ್ಯವಾದ ಮಾನವ ಸಂಪನ್ಮೂಲ, ಧನ ಸಂಪನ್ಮೂಲವನ್ನು ಸಂಭಾಳಿಸುತ್ತಲೇ ಆಡಳಿತವನ್ನು ನಿಭಾಯಿಸಬೇಕಾದ ಜವಾಬ್ದಾರಿಯನ್ನೂ ನಿರ್ವಹಿಸಬೇಕಾಗುತ್ತದೆ ಎಂದು ವಿವರಿಸುತ್ತಾರೆ. ಜಿನ್ನಾ ಮಾತಿಗೆ ಒಪ್ಪುವ ಸಮಿತಿಯು, ಅಂತಿಮವಾಗಿ ಬ್ರಿಟಿಷ್‌ ಸರ್ಕಾರ ಮಾಡಿದ ಸಲಹೆಯನ್ನು ತಿರಸ್ಕರಿಸಲು ನಿರ್ಧರಿಸಿತು ಎಂದು ಮೆನನ್ ದಾಖಲಿಸುತ್ತಾರೆ.

ಮುಂದುವರಿದು, ಒಂದೊಮ್ಮೆ ಜಿನ್ನಾ ಅವರು ಕೇವಲ ಮುಸ್ಲಿಂ ಲೀಗ್‌ ಸದಸ್ಯರನ್ನು ಮಾತ್ರವೇ ಒಳಗೊಂಡ ಸರ್ಕಾರವನ್ನು ಈಗ ರಚಿಸಲು ಮುಂದಾದರೆ, ಅವರು ಕಾಂಗ್ರೆಸ್‌ ಬಹುಮತವಿರುವ ಶಾಸನಸಭೆಯನ್ನು ಎದುರಿಸಬೇಕಾಗುತ್ತದೆ. ಈ ಶಾಸನಸಭೆಯ ಮೂಲಕವೇ ಜಿನ್ನಾ ಅವರು ಅಗತ್ಯ ಶಾಸನಗಳ ಬಲ ಪಡೆಯಬೇಕಾಗುತ್ತದೆ ಎಂದು ಹೇಳುವ ಮೂಲಕ, ಹೇಗೆ ಈ ಪ್ರಸ್ತಾಪ ಜಿನ್ನಾರನ್ನು ಕಾಂಗ್ರೆಸ್‌ಗೆ ಹೆಚ್ಚು ಆತುಕೊಳ್ಳಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ ಎನ್ನುವುದನ್ನು ವಿವರಿಸುತ್ತಾರೆ. ಹಾಗಲ್ಲದೆ, ಒಂದು ವೇಳೆ ಜಿನ್ನಾ ಏನಾದರೂ ಮೈತ್ರಿ ಸರ್ಕಾರಕ್ಕೆ ಮುಂದಾದರೆ, ಆಗ ಕಾಂಗ್ರೆಸ್‌ಗೆ ಹೆಚ್ಚು ಒಪ್ಪಿತವಾಗುವಂತಹ ಷರತ್ತುಗಳಿಗೆ ಬದ್ಧವಾಗಿ ಸರ್ಕಾರ ರಚಿಸಬೇಕಾಗುತ್ತದೆ ಎಂದು ವಿವರಿಸುವ ಜಿನ್ನಾ, ಇದನ್ನು ಒಪ್ಪುವ ಸಾಧ್ಯತೆ ಇಲ್ಲ ಎನ್ನುವುದನ್ನು ತಿಳಿಸುತ್ತಾರೆ. ಇದೇ ವೇಳೆ, ಅಧಿಕಾರ ಹಸ್ತಾಂತರಕ್ಕೆ ಮುಂದಾಗಿರುವ ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಪಕ್ಷ ರಾಜಕೀಯದ ಕೇಂದ್ರಕ್ಕೆ ನೂಕುವಂತಹ ಇಂತಹ ಪ್ರಸ್ತಾಪಗಳಿಂದ ದೂರವಿರುವಂತೆ ಮೌಂಟ್‌ಬ್ಯಾಟನ್‌ ಅವರಿಗೆ ಸಲಹೆ ನೀಡುತ್ತಾರೆ. ಪ್ರಸಕ್ತ ಸೂಕ್ಷ್ಮ ಸನ್ನಿವೇಶದಲ್ಲಿ ಆಯಾ ಪಕ್ಷಗಳೇ ಮುಂದಿನ ಹೊಣೆಗಾರಿಕೆಯನ್ನು ಹೊರುವಂತೆ ನೋಡಿಕೊಳ್ಳುವುದು ನಮ್ಮ ಪ್ರಾಥಮಿಕ ಕರ್ತವ್ಯವಾಗಿರಬೇಕು. ಇಂತಹ ಪ್ರಯತ್ನಗಳಿಗೆ (ಗಾಂಧಿಯವರ ಪ್ರಸ್ತಾವನೆ) ಮುಂದಾಗುವುದರಿಂದ ವೈಸ್‌ರಾಯ್‌ (ಮೌಂಟ್‌ಬ್ಯಾಟನ್‌) ಅವರ ಮೇಲೆಯೇ ಸಂಶಯಗಳು ಮೂಡಬಹುದು. ಅಲ್ಲದೆ, ಭಾರತ ಹಾಗೂ ಬ್ರಿಟನ್‌ ನಡುವೆ ಇರುವ ಉತ್ತಮ ಸಂಬಂಧಕ್ಕೆ ಸರಿಪಡಿಸಲಾಗದಂತಹ ಹಾನಿಯುಂಟಾಗಬಹುದು ಎಂದು ಎಚ್ಚರಿಸುತ್ತಾರೆ.

ಬಹುಮುಖ್ಯವಾಗಿ, ಜಿನ್ನಾ ಅವರು ಪ್ರತ್ಯೇಕ ಪಾಕಿಸ್ತಾನದ ಕಾರಣಕ್ಕಾಗಿಯೇ ಸರ್ಕಾರದ ಭಾಗವಾಗದೆ ದೂರ ಉಳಿದಿದ್ದಾರೆ. ಹಾಲಿ ಇರುವ ಮಧ್ಯಂತರ ಸರ್ಕಾರದಲ್ಲಿ ಮುಸ್ಲಿಂ ಲೀಗ್‌ ಪರಿಣಾಮಕಾರಿಯಾಗಿ ಭಾಗವಹಿಸುವ ಬಗ್ಗೆಯೂ ಅವರು ಯಾವುದೇ ಮಹತ್ವ ನೀಡಿಲ್ಲ. ಪ್ರತ್ಯೇಕತೆಯೇ ಅವರ ಉದ್ದೇಶ ಎನ್ನುವುದಾದರೆ, ಅವರೇಕೆ ಸರ್ಕಾರದ ಉಸ್ತುವಾರಿ ಹೊರಲು ಮುಂದಾಗುತ್ತಾರೆ ಎನ್ನುವ ಪ್ರಶ್ನೆಯನ್ನು ಮೆನನ್‌ ಎತ್ತುತ್ತಾರೆ. ಅಷ್ಟೇ ಅಲ್ಲದೆ, ಜಿನ್ನಾ ಸರ್ಕಾರದ ಉಸ್ತುವಾರಿ ಹೊತ್ತ ನಂತರ, ಪ್ರತ್ಯೇಕ ಪಾಕಿಸ್ತಾನದ ರಚಿಸುವುದಕ್ಕೆ ಸ್ವತಂತ್ರರು ಎಂದು ಗಾಂಧಿ ಹೇಳುತ್ತಾರೆ. ಆದರೆ, ಈ ವಿಚಾರವಾಗಿ ಬಲಪ್ರಯೋಗ ಮಾಡಬಾರದು ಎಂದು ಅಪೇಕ್ಷಿಸುತ್ತಾರೆ. ಅದರೆ, ಇದು ದುಬಾರಿಯಾದ ನಿರೀಕ್ಷೆ. ಒಂದೊಮ್ಮೆ ಜಿನ್ನಾ ಅವರಿಗೆ ಪಂಜಾಬ್‌ನಲ್ಲಿರುವ ಸಿಖ್‌ ಹಾಗೂ ಹಿಂದೂಗಳನ್ನು ಮತ್ತು ಬಂಗಾಳದಲ್ಲಿರುವ ಹಿಂದೂಗಳನ್ನು ಪಾಕಿಸ್ತಾನಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆ ಇದ್ದಿದ್ದರೆ ಅವರಿಗೆ ಮಧ್ಯಂತರ ಸರ್ಕಾರವನ್ನು ಸೇರುವ ಅವಶ್ಯಕತೆಯಾದರೂ ಏನಿರುತ್ತದೆ? ಎನ್ನುವ ತಾರ್ಕಿಕ ಪ್ರಶ್ನೆ ಮುಂದಿರಿಸುತ್ತಾರೆ. ಇದೇ ರೀತಿಯ ಅಭಿಪ್ರಾಯ ನೆಹರು ಅವರೊಂದಿಗಿನ ಚರ್ಚೆಗಳ ವೇಳೆಯೂ ಮೌಂಟ್‌ಬ್ಯಾಟನ್‌ ಅವರಿಗೆ ಮೂಡುತ್ತದೆ.

ಮೌಂಟ್‌ಬ್ಯಾಟನ್ ಅವರಿಗೆ ಜಿನ್ನಾ ಮನಸ್ಸನ್ನು‌ ಅರಿಯಲು ಹೆಚ್ಚಿನ ಸಮಯವೇನೂ ಬೇಕಾಗುವುದಿಲ್ಲ. ಜಿನ್ನಾ ಅವರೊಂದಿಗೆ ನಡೆಸುವ ಹಲವು ಸುತ್ತಿನ ಮಾತುಕತೆಗಳಲ್ಲಿ ಜಿನ್ನಾ ಪ್ರತ್ಯೇಕ ಪಾಕಿಸ್ತಾನದ ರಚನೆಯ ವಿಚಾರದಲ್ಲಿ ಸ್ಥಿರವಾಗಿರುವುದು ಅವರ ಅರಿವಿಗೆ ಬರುತ್ತದೆ. ಇತಿಹಾಸಕಾರರಾದ ಲ್ಯಾರಿ ಕೊಲಿನ್ಸ್‌ ಮತ್ತು ಡೊಮಿನಿಕ್‌ ಲೇಪಿಯರ್‌ ಅವರೊಂದಿಗಿನ ಸಂದರ್ಶನದಲ್ಲಿ ಮೌಂಟ್‌ಬ್ಯಾಟನ್‌‌ ಈ ಅಂಶಗಳನ್ನು ಹೇಳಿರುವುದು ಸ್ಪಷ್ಟವಾಗಿ ದಾಖಲಾಗಿದೆ. ಅಲ್ಲದೆ, ಜಿನ್ನಾ ಅವರ ವ್ಯಕ್ತಿತ್ವ, ವಿಚಾರಗಳ ಬಗ್ಗೆಯೂ ಸಂದರ್ಶನದಲ್ಲಿ ಸಾಕಷ್ಟು ಮಾಹಿತಿಯನ್ನು ಅವರು ನೀಡುತ್ತಾರೆ. “ನೆಹರು ಒಬ್ಬ ಅಸಾಮಾನ್ಯ ಬುದ್ಧಿವಂತ, ಉತ್ತಮ ವ್ಯಕ್ತಿ. ಅವರು ಪ್ರತಿ ವಿಚಾರದ ಸೂಕ್ಷ್ಮಗಳನ್ನೂ ಗಮನಿಸುತ್ತಿದ್ದರು,” ಎನ್ನುವ ಮೌಂಟ್‌ಬ್ಯಾಟನ್‌, “ದೇಶವಿಭಜನೆಯ ಬಗ್ಗೆ ನೆಹರು ಭೀತರಾಗಿದ್ದರು. ಒಂದೊಮ್ಮೆ ಜಿನ್ನಾ ಏನಾದರೂ ಮುಂದೆ ಬಂದಿದ್ದರೆ ಭಾರತದ ವಿಭಜನೆಯನ್ನು ತಡೆಯುವ ಸಲುವಾಗಿ ಯಾವುದೇ ರೀತಿಯ ಸಹಾಯವನ್ನು ನೀಡಲು ನೆಹರು ಸಿದ್ಧರಿದ್ದರು,” ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಉ.ಪ್ರದೇಶದಲ್ಲಿ ‘ಜಿನ್ನಾ’ ಎದುರು ಜಯಭೇರಿ ಬಾರಿಸಿದ ಘನ್ನಾ

ಇದೇ ವೇಳೆ, ಜಿನ್ನಾರ ಧೋರಣೆಗಳನ್ನು ಟೀಕಿಸುವ ಅವರು, ಅವರೊಂದಿಗಿನ ಚರ್ಚೆಗಳು ಹೇಗೆ ತಿರುತಿರುಗಿ ಪ್ರತ್ಯೇಕತೆಯ ವಿಚಾರಕ್ಕೇ ಮರಳುತ್ತಿದ್ದವು ಎನ್ನುವುದನ್ನು ನೆನಪಿಸಿಕೊಳ್ಳುತ್ತಾರೆ. ಜಿನ್ನಾ ದೇಶ ವಿಭಜನೆಯನ್ನು ತಡೆಯುವಂತಹ ಯಾವುದೇ ರೀತಿಯ ಪರಿಹಾರೋಪಾಯಗಳಿಗೆ, ಪರ್ಯಾಯ ಆಲೋಚನೆಗಳಿಗೆ ಸ್ವಲ್ಪವೂ ಸ್ಪಂದಿಸದೆ ತಣ್ಣಗಿರುತ್ತಿದ್ದರು ಎಂದು ಬೇಸರಿಸುತ್ತಾರೆ. “ಒಂದೊಮ್ಮೆ ಜಿನ್ನಾ ಏನಾದರೂ ತಮಗೆ ಆವರಿಸಿದ್ದ ಕಾಯಿಲೆಯಿಂದ ಎರಡು ವರ್ಷ ಮುಂಚಿತವಾಗಿಯೇ ಸಾವನ್ನಪ್ಪಿದ್ದರೆ ಬಹುಶಃ ದೇಶ ವಿಭಜನೆಯನ್ನು ತಡೆಯುವುದು ನಮಗೆ ಸಾಧ್ಯವಾಗುತ್ತಿತ್ತು,” ಎಂದು ಸಂಕೋಚಪಡದೆ ನೇರವಾಗಿ ಹೇಳುತ್ತಾರೆ. “ಜನರನ್ನು ಸೂಕ್ತವಾದ ಹಾಗೂ ಜಾಣ ನಿರ್ಧಾರವನ್ನು ಕೈಗೊಳ್ಳುವಂತೆ ಮನವೊಲಿಸುವ ನನ್ನ ಶಕ್ತಿಯ ಬಗ್ಗೆ ನನಗೆ ಸಾಕಷ್ಟು ನಂಬಿಕೆ ಇತ್ತು. ಇದಕ್ಕೆ ಕಾರಣ ನಾನು ಜನರನ್ನು ಮನವೊಲಿಸುವಂತೆ ಮಾತನಾಡುತ್ತೇನೆ ಎನ್ನುವುದಕ್ಕಿಂತ ವಿಚಾರಗಳನ್ನು ಅವರ ಪರವಾಗಿ ಹೇಗೆ ಬಿಂಬಿಸಬಹುದು ಎನ್ನುವುದನ್ನು ಅರಿತಿದ್ದೇನೆ ಎನ್ನುವುದು. ಆದರೆ, ಜಿನ್ನಾ ವಿಚಾರದಲ್ಲಿ ಮಾತ್ರ ಏನೂ ಮಾಡುವಂತಿರಲಿಲ್ಲ. ಅವರು ತನ್ನ ಮನಸ್ಸನ್ನು ಅದಾಗಲೇ ಸ್ಥಿರಗೊಳಿಸಿಬಿಟ್ಟಿದ್ದರು. ಯಾವುದೇ ಮಾತುಕತೆ ಅವರನ್ನು ಕದಲಿಸಲು ಸಾಧ್ಯವಿರಲಿಲ್ಲ. ಉತ್ತಮ ಶಿಕ್ಷಣ ಪಡೆದಿದ್ದ, ಬುದ್ಧಿವಂತನಾಗಿದ್ದ, ಇಂಗ್ಲೆಂಡ್‌ನಲ್ಲಿ ತರಬೇತಿ ಹೊಂದಿದ್ದ ವ್ಯಕ್ತಿ ಈ ಮಟ್ಟಿಗೆ ಮುಚ್ಚಿದ ಮನಸ್ಸು ಹೊಂದಿರಲು ಸಾಧ್ಯವೇ ಎನ್ನುವುದನ್ನು ಆವರೆಗೆ ನಾನು ಕಲ್ಪಿಸಿಕೊಳ್ಳುವುದಕ್ಕೂ, ಊಹಿಸಿಕೊಳ್ಳುವುದಕ್ಕೂ ಆಗಿರಲಿಲ್ಲ. ಈ ಬಗ್ಗೆ ಜಿನ್ನಾಗೆ ತಿಳಿದಿರಲಿಲ್ಲ ಎಂದಲ್ಲ, ಎಲ್ಲ ಗೊತ್ತಿದ್ದೂ, ಅವರು ಮುಚ್ಚಿದ ಮನಸ್ಸಿನವರಾಗಿದ್ದರು,” ಎಂದು ಹೇಳುವ ಮೂಲಕ, ಜಿನ್ನಾ ಹೇಗೆ ಕೇವಲ ದೇಶ ವಿಭಜನೆಯ ಸುತ್ತಲೇ ತಮ್ಮ ಮನಸ್ಸನ್ನು ಕೇಂದ್ರೀಕರಿಸಿದ್ದರು ಎನ್ನುವುದನ್ನು ಮೌಂಟ್‌ಬ್ಯಾಟನ್ ವಿವರಿಸುತ್ತಾರೆ. ದೇಶ ವಿಭಜನೆಯ ಸಮಸ್ಯೆಯ ಪರಿಹಾರದ ಚಾವಿ ಇದ್ದದ್ದು ಬಹುತೇಕರು ಭಾವಿಸಿರುವಂತೆ ಗಾಂಧೀಜಿಯ ಕೈಯಲ್ಲಾಗಲೀ, ನೆಹರು ಅವರ ಕೈಯಲ್ಲಾಗಲೀ ಅಲ್ಲ, ಬದಲಿಗೆ ಜಿನ್ನಾ ಅವರ ಕೈಯಲ್ಲಿ ಎಂದು ಅವರು ಸ್ಪಷ್ಟಪಡಿಸುತ್ತಾರೆ.

ಹೀಗೆ, ಇತಿಹಾಸದಲ್ಲಿ ದೇಶ ವಿಭಜನೆಯ ಕುರಿತ ಎಲ್ಲವೂ ಸ್ಪಷ್ಟವಾಗಿ, ನಿಚ್ಚಳವಾಗಿ ದಾಖಲಾಗಿರುವಾಗ ದಲಾಯ್‌ ಲಾಮಾ ಅವರು ನೆಹರು ಬಗ್ಗೆ ನಡೆಸಿರುವ ಕೀಳು ಅಪಪ್ರಚಾರಗಳಿಗೆ ಬಲಿಯಾಗಿ ಹೇಳಿಕೆ ನೀಡಿದ್ದು ಅಚಾತುರ್ಯ ಮಾತ್ರವೇ ಅಲ್ಲ, ಅನಪೇಕ್ಷಿತ ಕೂಡ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More