ಭಾರತ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲು ಬಹುಭಾಷೆಯೂ ಒಂದು ದಾರಿ

ನಮ್ಮ ದೊಡ್ಡ ಭಾಷಾ ಬಿಕ್ಕಟ್ಟಾಗಿರುವ ಜ್ಞಾನದ ಭಾಷೆ ಮತ್ತು ಮನೆಯ ಭಾಷೆಯ ನಡುವಿನ ಸಂಘರ್ಷವನ್ನು ಮೀರಲು ಮತ್ತು ಬಹುಭಾಷಾ ಸಾಮಾಜಿಕ ಪರಿಸ್ಥಿತಿಯನ್ನು ಅನುಕೂಲಕರವಾಗಿ ನಿರ್ವಹಿಸುವ ಅತ್ಯಂತ ನಾಗರಿಕ ಮಾದರಿಯಾಗಿ ಬಹುಭಾಷಾ ಪ್ರದೇಶ ಘೋಷಣೆ ಅಗತ್ಯ

ತನ್ನ ಸಂವಹನಕ್ಕಾಗಿ ನಿರ್ದಿಷ್ಟ ಭಾಷೆಯ ಬಳಕೆಯ ಮನುಷ್ಯನ ಸಾಮರ್ಥ್ಯವೇ ನಮ್ಮನ್ನು ಇತರ ಪ್ರಾಣಿ ಪ್ರಬೇಧಗಳಿಂದ ಭಿನ್ನವಾಗಿಸಿದೆ. ಭಾಷೆಯಲ್ಲಿ ಬಳಸುವ ಸ್ಥೂಲ ಮತ್ತು ನಿಖರ ಸಂವಹನದ ಸಂಕೇತಗಳು ಹೊಮ್ಮಿಸುವ ಅರ್ಥದ ಒಟ್ಟು ವ್ಯವಸ್ಥೆಯನ್ನೇ ನಾವು ಭಾಷೆ ಎಂದು ಕರೆಯುತ್ತೇವೆ. ವೈಜ್ಞಾನಿಕವಾಗಿ ಹೇಳುವುದಾದರೆ, ನಮಗೆ ಗೊತ್ತಿರುವ ಜಗತ್ತು ಮತ್ತು ಮನುಷ್ಯನ ಮನಸ್ಸು ಹೊಮ್ಮಿಸುವ ಆಲೋಚನೆಗಳನ್ನು ಅಭಿವ್ಯಕ್ತಿಸುವಲ್ಲಿ ಯಾವ ಭಾಷೆಯೂ ಸಂಪೂರ್ಣ ಶಕ್ತವೂ ಆಗಿಲ್ಲ; ಸಂಪೂರ್ಣ ವಿಫಲವೂ ಆಗಿಲ್ಲ.

ಮನುಷ್ಯ ತನ್ನ ಸಂವಹನ ಮತ್ತು ಆಲೋಚನೆಗಳ ವಿನಿಮಯಕ್ಕಾಗಿ ಭಾಷೆಯ ಮಾಧ್ಯಮವನ್ನು ಕಂಡುಕೊಂಡ ಸಂದರ್ಭವನ್ನು ಅರಿಯುವುದೇ ಆದರೆ, ಆರಂಭದಲ್ಲಿ ಪ್ರತಿ ಭಾಷೆಯೂ ಆ ಹೊತ್ತಿನ ಎಲ್ಲಾ ಜ್ಞಾನವನ್ನೂ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ದಾಟಿಸುವಲ್ಲಿ ಯಶಸ್ವಿಯಾಗಿತ್ತು ಎಂಬುದನ್ನು ಗಮನಿಸಬಹುದು. ಆದರೆ, ಎಲ್ಲಾ ಭಾಷೆಗಳಲ್ಲಿ ಅಭಿವ್ಯಕ್ತಿಗೊಂಡ ಜ್ಞಾನ ಒಂದೇ ತೆರನಾಗಿ ಇರಲಿಲ್ಲ. ಕೆಲವು ಭಾಷೆಗಳು ಇತರ ಭಾಷೆಗಳಿಗಿಂತ ಹೆಚ್ಚು ನೈಪುಣ್ಯತೆ ಪಡೆದುಕೊಂಡಿದ್ದವು. ಸಂವಹನದ ಸಾಧ್ಯತೆಯನ್ನು ವಿಸ್ತರಿಸಿಕೊಂಡಿದ್ದವು. ವಿವಿಧ ಭಾಷೆಗಳ ನಡುವಿನ ಈ ಭಿನ್ನತೆ ಒಂದು ಭಾಷೆಯ ಮೇಲಿನ ಮತ್ತೊಂದರ ಸಾಮಾಜಿಕ ಹೆಚ್ಚುಗಾರಿಕೆ, ಒಂದು ಭಾಷೆಯ ವಿರುದ್ಧ ಮತ್ತೊಂದರ ಬೋಧನೆಯ, ಕಲಿಕೆಯ ಹೊಸ ಸಾಧ್ಯತೆಗಳು ಶೋಧದಂತಹ ಕಾರಣಗಳಿಗಾಗಿ ಶಾಲಾಕಾಲೇಜು, ವಿವಿಗಳಲ್ಲಿ ಒಂದು ಭಾಷೆಯ ಬದಲಾಗಿ ಮತ್ತೊಂದನ್ನುಬಳಸುವ ಆಯ್ಕೆಗಳು ಹೆಚ್ಚಾದವು.

ಬೋಧಕರ ನಡುವೆ ಇತರೆ ಭಾಷೆಗೆ ಬದಲಾಗಿ ಕೆಲವು ಭಾಷೆಗಳು ಮಾತ್ರ ಯಾಕೆ ಮೆಚ್ಚುಗೆಗೆ ಪಾತ್ರವಾದವು ಎಂಬುದಕ್ಕೆ ಆ ಭಾಷೆಗಳ ಹಿಂದಿನ ಆರ್ಥಿಕ ಮತ್ತು ರಾಜಕೀಯ ಇತಿಹಾಸದ ಪಾತ್ರ ಮಹತ್ವದ್ದು. ೧೮೪೦ರಲ್ಲಿ ಇಂಗ್ಲೆಂಡಿನಲ್ಲಿ ಆದ ಚಾರ್ಟಿಸ್ಟ್ ಚಳವಳಿಯ ಪರಿಣಾಮವಾಗಿ ಬ್ರಿಟಿಷ್‌ ಶಾಲೆಗಳಲ್ಲಿ ಇಂಗ್ಲಿಷನ್ನು ಬೋಧನೆಯ ಮಾಧ್ಯಮವಾಗಿ ಜಾರಿಮಾಡಲಾಯಿತು. ಆವರೆಗೆ ಲ್ಯಾಟಿನ್ ಭಾಷೆ ಅಂತಹ ಮಾನ್ಯತೆಯನ್ನು ಪಡೆದಿತ್ತು. ಕೆಳಸ್ತರದ ಸಾಮಾಜಿಕ ವರ್ಗಗಳಿಗೆ ಇಂಗ್ಲಿಷ್‌ ಭಾಷೆಯ ಮೂಲಕ ಸಾಮಾಜಿಕ ಮತ್ತು ಶೈಕ್ಷಣಿಕ ಶಿಸ್ತನ್ನು ಕಲಿಸತೊಡಗಿದ ಬ್ರಿಟಿಷರು, ಇಂಗ್ಲಿಷಿನ ಶೈಕ್ಷಣಿಕ ಮೌಲ್ಯವನ್ನು ಕ್ರಮೇಣ ವೃದ್ಧಿಸಿ, ಮುಂದೆ ಅವರ ವಸಾಹತುಗಳಲ್ಲಿಯೂ ಆ ಭಾಷೆಯನ್ನೇ ಬಳಸತೊಡಗಿದರು. ಭಾರತ ಕೂಡ ಬ್ರಿಟಿಷ್ ವಸಾಹತುವಾಗಿದ್ದರಿಂದ, ಮತ್ತು ೧೯ನೇ ಶತಮಾನದ ಹೊತ್ತಿಗೆ ಆಧುನಿಕತೆಗೆ ತೆರೆದುಕೊಳ್ಳತೊಡಗಿದ ಹಿನ್ನೆಲೆಯಲ್ಲಿ ಇಲ್ಲಿಯೂ ಇಂಗ್ಲಿಷನ್ನು ಬರಮಾಡಿಕೊಳ್ಳಲಾಯಿತು. ಉಳಿದದ್ದು ಗೊತ್ತಿರುವ ಇತಿಹಾಸ.

ಇಂದು ಭಾರತದ ಜನಸಂಖ್ಯೆ ೧.೩ ಬಿಲಿಯನ್ ತಲುಪುತ್ತಿರುವ ಮತ್ತು ಆ ಪೈಕಿ ಬಹುದೊಡ್ಡ ಸಂಖ್ಯೆಯ ಜನ ೨೫ರ ವಯೋಮಾನಕ್ಕಿಂತ ಕಡಿಮೆ ವಯಸ್ಸಿನವರಾಗಿರುವ ಹೊತ್ತಿನಲ್ಲಿ; ಆ ಎಲ್ಲರಿಗೂ ಶಿಕ್ಷಣ ನೀಡುವುದು ಒಂದು ಸವಾಲಾಗಿದೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎಂಬುದು ನಮ್ಮ ಆಕಾಂಕ್ಷೆಯಾಗಿದ್ದರೂ, ನಾವಿನ್ನೂ, ಎಲ್ಲರನ್ನೂ ಸಾಕ್ಷರನ್ನಾಗಿಸುವ, ಆ ಸವಾಲಿನ ದಾರಿಯ ಆರಂಭವನ್ನೂ ತಲುಪಿಲ್ಲ. ವರ್ಗ, ಜಾತಿಗಳ ತಾರತಮ್ಯ, ನಿರ್ಲಕ್ಷಿತ ಗ್ರಾಮೀಣ ಸಮಾಜ, ಅಸಮರ್ಪಕ ಮೂಲಸೌಕರ್ಯ, ವೃತ್ತಿಬದ್ಧತೆಯ ಕೊರತೆ, ಕಣ್ಗಾವಲು ಸಂಸ್ಥೆಗಳ ವೈಫಲ್ಯ, ಸ್ಪಷ್ಟ ದೂರದೃಷ್ಟಿ ಕಳೆದುಕೊಂಡಿರುವ ಆಡಳಿತ ಮತ್ತು ಬೋಧಕರ ತರಬೇತಿಯ ಕಳಪೆ ಮಾದರಿಗಳು ಸೇರಿದಂತೆ ಎಲ್ಲಾ ಅಂಶಗಳು ಉತ್ತಮ ಶಿಕ್ಷಣದ ಆ ಆಕಾಂಕ್ಷೆಯನ್ನು ನಿರಂತರ ಡೋಲಾಯಮಾನ ಸ್ಥಿತಿಯಲ್ಲೇ ಇರಿಸಿಬಿಟ್ಟಿವೆ.

ಜ್ಞಾನದ ಯುಗ ಎಂದೇ ಎಲ್ಲರೂ ಸ್ವೀಕರಿಸಿರುವ ಈ ಶತಮಾನದಲ್ಲಿ ಕೂಡ ಭಾರತ, ಶೈಕ್ಷಣಿಕ ವಿಷಯದಲ್ಲಿ ಇಷ್ಟೊಂದು ಹಿಂದೆ ಬಿದ್ದಿರುವುದು ಮತ್ತು ಸದ್ಯಕ್ಕೆ ಅಂತಹ ಪರಿಸ್ಥಿತಿ ಬದಲಾಗುವ ಸಾಧ್ಯತೆಗಳು ಕಾಣದೇ ಇರುವುದು ಖಂಡಿತವಾಗಿಯೂ ಮುಂದೊಂದು ದಿನ ‘ಜ್ಞಾನದ ಪತನ’ಕ್ಕೆ ಸಾಕ್ಷಿಯಾಗಬಹುದು. ನಾವೆಲ್ಲಾ ಮೂಕ ಪ್ರೇಕ್ಷಕರಾಗಿರುವ ಈ ದುರಂತಗಾಥೆಯಲ್ಲಿ ಬಹುಶಃ ಕಲಿಕೆಯ ಮಾಧ್ಯಮವಾದ ಭಾಷೆಯೇ ಕಥಾನಾಯಕ, ದುರಂತ ನಾಯಕ. ಯಾವುದೇ ದುರಂತ ನಾಟಕದ ಕೊನೆಯ ಅಂಕವೆಂದರೆ, ಅದು ಕಥಾನಾಯಕನ ಅಂತ್ಯವಷ್ಟೇ ಅಲ್ಲ; ಬದಲಾಗಿ ಉಳಿದ ಪ್ರಮುಖ ಪಾತ್ರಗಳ ಅಂತ್ಯ ಕೂಡ. ಕಲಿಕೆಯ ಮಾಧ್ಯಮವಾಗದೇ ಬಳಕೆಯಲ್ಲಿರುವ ಇತರ ಭಾಷೆಗಳು, ಹೀಗೆ ದುರಂತ ನಾಟಕದ ಇತರ ಪ್ರಮುಖ ಪಾತ್ರಗಳಂತೆ; ಅಂತ್ಯಕಾಣಬಹುದು.

ಮತ್ತೊಂದು ಭಾಷೆ ತಮ್ಮ ಭಾಷೆಯ ಮೇಲೆ ದಾಳಿ ಮಾಡುತ್ತಿದೆ, ದಬ್ಬಾಳಿಕೆ ಮಾಡುತ್ತಿದೆ ಎಂಬ ಮಾತುಗಳು ಕೇವಲ ಭಾರತದಲ್ಲಿ ಮಾತ್ರವಲ್ಲ; ಜಗತ್ತಿನ ಎಲ್ಲೆಡೆಯೂ ಕೇಳಿಬರುವ ಹತಾಶೆ, ಆಕ್ರೋಶ ಮತ್ತು ಭಯ ತುಂಬಿದ ಒಂದು ಸಾಮಾನ್ಯ ದೂರು. ಹಾಗೆ ನೋಡಿದರೆ, ಬಹುತೇಕ ಭಾಷೆಗಳು-ಯುನೆಸ್ಕೋ ಮತ್ತು ಎಥ್ನೋಲಾಗ್‌ ಪ್ರಕಾರ ಜಗತ್ತಿನಲ್ಲಿ ಈಗ ಸುಮಾರು ೬೦೦೦ ಸಾವಿರಕ್ಕೂ ಅಧಿಕ ಭಾಷೆಗಳಿವೆ- ಸಾಮೂಹಿಕ ವಿನಾಶದ ಆತಂಕ ಎದುರಿಸುತ್ತಿವೆ. ಈ ಅಂಶವನ್ನು ಯುನೆಸ್ಕೋದ ಹಲವು ಸರಣಿ ವರದಿಗಳಲ್ಲಿ ಕೂಡ ನಮೂದಿಸಲಾಗಿದೆ. ಹೀಗೆ ಪತನದ ಭೀತಿ ಎದುರಿಸುತ್ತಿರುವ ಭಾಷೆಗಳೆಲ್ಲವೂ ಜ್ಞಾನದ ಭಂಡಾರವನ್ನು ಹೊಂದದೇ ಇರುವುದರಿಂದಲೇ ಹಾಗಾಗಿವೆ ಎಂದರ್ಥವೇನಲ್ಲ. ಜಗತ್ತಿನ ಕುರಿತ ಮನುಷ್ಯನ ಚಿಂತನೆ, ಗ್ರಹಿಕೆಗಳ ಅಪಾರ ಜ್ಞಾನವನ್ನು ಮತ್ತು ಆ ಜ್ಞಾನವನ್ನು ಮತ್ತೊಬ್ಬರಿಗೆ ದಾಟಿಸುವ ಶಕ್ತ ಪದ-ಶಬ್ಧ ಸಂಪತ್ತನ್ನೂ ಆ ಭಾಷೆಗಳು ಖಂಡಿತವಾಗಿಯೂ ಹೊಂದಿವೆ. ಆದರೆ, ಅಪಾರ ವೈವಿಧ್ಯತೆಯ ಈ ಭಾಷೆಗಳ ಮಾತನಾಡುವ ಮಂದಿ, ತಮ್ಮ ಶಾಲೆ, ವಿಶ್ವವಿದ್ಯಾಲಯ, ನ್ಯಾಯಾಲಯ, ಸರ್ಕಾರ, ಮಾಧ್ಯಮ ಮತ್ತು ಅರ್ಥವ್ಯವಸ್ಥೆಯ ಜ್ಞಾನದ ವಿನಿಮಯಕ್ಕೆ ತಮ್ಮ ಭಾಷೆಗಳು ಸಮರ್ಪಕವೆನಿಸುತ್ತಿಲ್ಲ. ಭಾಷೆಯ ಕೊರತೆ ಕಾಡುತ್ತಿದೆ ಎಂಬುದನ್ನು ಹೇಳುತ್ತಾರೆ. ಅಷ್ಟೇ ಅಲ್ಲದೆ, ಜಾಗತಿಕವಾಗಿ ಒಂದೇ ಭಾಷೆ ಇರಬೇಕು ಎಂಬ ವಾದವನ್ನೂ ಬೆಂಬಲಿಸಿ ಕೆಲವು ವಿಚಾರಹೀನ ತರ್ಕ ಮುಂದಿಡುತ್ತಾರೆ.

ಹಾಗಾದರೆ, ಜನರನ್ನು ಜಾಗತಿಕವಾಗಿ ಪರಸ್ಪರ ಬೆಸೆಯುವ ಮತ್ತು ಅದೇ ಹೊತ್ತಿಗೆ ಅವರನ್ನು ಭಾಷೆ ಮತ್ತು ಸಂಸ್ಕೃತಿಯ ವಿಷಯದಲ್ಲಿ ತಮ್ಮ ಬೇರುಗಳಿಗೆ ಅಂಟಿಕೊಂಡಿರುವಂತೆ ಯಾವುದೇ ಮಾರ್ಗೋಪಾಯಗಳಿಲ್ಲವೇ? ಏಕಕಾಲಕ್ಕೆ ವಿವಿಧ ಭಾಷೆಗಳು ಬಳಕೆಯಲ್ಲಿರುವಂತೆ ನೋಡಿಕೊಳ್ಳುವ ಮತ್ತು ಅದೇ ಹೊತ್ತಿಗೆ ಸಮಕಾಲೀನವಾದ ಎಲ್ಲ ಆಗುಹೋಗುಗಳಿಗೆ, ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುವ ಜ್ಞಾನವನ್ನು ಜನಸಮುದಾಯಗಳಿಗೆ ಒದಗಿಸುವ ಕಲಿಕೆಯ ಮಾದರಿಗಳು ಸಾಧ್ಯವಿಲ್ಲವೆ? ಭಾಷಾ ವೈವಿಧ್ಯತೆ ಮತ್ತು ಶಿಕ್ಷಿತ ಸಮುದಾಯಗಳು ಪರಸ್ಪರ ವೈರುಧ್ಯದ ಆಯ್ಕೆಗಳು ಅಲ್ಲ ಎಂಬ, ಅವೆರಡನ್ನೂ ಜೊತೆಜೊತೆಗೆ ಕಾಣುವುದು ಸಾಧ್ಯವಿಲ್ಲವೇ?

ಈ ಹೊತ್ತಿನ ಜ್ಞಾನದ ಯುಗದಲ್ಲಿ ಅದರ ಎಲ್ಲ ಅವಕಾಶಗಳೊಂದಿಗೆ ಯುವ ಭಾರತ, ತನ್ನ ಭಾಷಾ ವೈವಿಧ್ಯತೆಯನ್ನೂ ಕಾಯ್ದುಕೊಳ್ಳುವ ಒಂದು ಉಪಾಯವನ್ನು ನಾನು ನಿಮ್ಮ ಮುಂದಿಡಲು ಬಯಸುತ್ತೇನೆ. ಇದನ್ನು ಸರಿಯಾಗಿ ಗ್ರಹಿಸಬೇಕು ಎಂದರೆ; ನಾವು ಮೊದಲು ಈ ದೇಶದ ಒಕ್ಕೂಟ ವ್ಯವಸ್ಥೆಯ ರಚನೆಯನ್ನು ಮೊದಲು ಅರ್ಥಮಾಡಿಕೊಳ್ಳಬೇಕು.

ಸ್ವಾತಂತ್ರ್ಯ ಗಳಿಸುತ್ತಲೇ ಭಾರತ ಹಲವು ರಾಜ್ಯಗಳಾಗಿ ಹಂಚಿಹೋಯಿತು. ಸಂವಿಧಾನದ ಅನುಸಾರ ಆ ರಾಜ್ಯಗಳಿಗೆ ತಮ್ಮದೇ ಆದ ರಾಜ್ಯ ಸರ್ಕಾರಗಳನ್ನು ರಚಿಸುವ ಅಧಿಕಾರವನ್ನು ನೀಡಲಾಯಿತು. ಹಾಗೇ ನಿರ್ದಿಷ್ಟ ರಾಜ್ಯಕ್ಕೆ ಸೇರದೇ ಉಳಿದ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಲಾಯಿತು. ಹೀಗೆ ರಾಜ್ಯಗಳ ವಿಭಜನೆಯ ಹಿಂದಿನ ಅತ್ಯಂತ ಮಹತ್ವದ ಮಾನದಂಡವಾಗಿದ್ದದ್ದು ಭಾಷೆ. ಅಂದರೆ, ನಾವು ಏಕಭಾಷಾ ಪ್ರಾಧಾನ್ಯತೆಯ ರಾಜ್ಯಗಳ ಬಹುಭಾಷಾ ಒಕ್ಕೂಟವನ್ನು ರಚಿಸಿಕೊಂಡೆವು. ಹಾಗೆ ಭಾಷಾ ರಾಜ್ಯಗಳಾಗಿ ವಿಂಗಡನೆಯಾದ ಯಾವೊಂದು ರಾಜ್ಯದಲ್ಲಿಯೂ ಒಂದೇ ಭಾಷೆ ಎಂಬುದು ಇರಲಿಲ್ಲ. ಆದರೆ, ಆ ಇತರ ಭಾಷೆಗಳು ಆ ಇತಿಹಾಸದ ಕಾಲಘಟ್ಟದಲ್ಲಿ ಒಂದೋ ಮುದ್ರಣದಲ್ಲಿ ಇರಲಿಲ್ಲ ಅಥವಾ ಅವುಗಳ ಇರುವಿಕೆ ಸ್ಪಷ್ಟವಾಗಿ ಗೋಚರವಿರಲಿಲ್ಲ.

ಕೇವಲ ಮೂರು ವರ್ಷಗಳ ಕಾಲಮಿತಿಯಲ್ಲಿ ಸಂವಿಧಾನ ಸಭೆ ಏಕಕಾಲಕ್ಕೆ ಹಲವು ಮಹತ್ವದ ವಿಷಯಗಳ ಕುರಿತು ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇತ್ತು. ಹಾಗಾಗಿ ಭಾಷೆಯ ಬಿಕ್ಕಟ್ಟಿನ ಕುರಿತ ಎಲ್ಲಾ ಅಯಾಮಗಳ ಬಗ್ಗೆ ಅದು ಚರ್ಚಿಸುವುದು ಸಾಧ್ಯವಾಗಲಿಲ್ಲ. ಅಂತಹ ಒಂದು ಸಮಸ್ಯೆ ಎಂದರೆ; ಒಂದು ಭಾಷಾ ಪ್ರಾಂತ್ಯದಿಂದ ಮತ್ತೊಂದು ಭಾಷಾ ಪ್ರಾಂತ್ಯಕ್ಕೆ ಆದ ಭಾರೀ ಸಂಖ್ಯೆಯ ವಲಸೆ. ಹಾಗೆ ನೋಡಿದರೆ, ಸ್ವಾತಂತ್ರ್ಯಾನಂತರ ಕಳೆದ ಏಳು ದಶಕಗಳಲ್ಲಿ ಅಂತಹ ವಲಸೆಗಳು ನಿರಂತರವಾಗಿವೆ. ವಲಸೆ ಎಂಬುದು ಆಧುನಿಕ ಜಗತ್ತಿನ ಅವಿಭಾಜ್ಯ ಅಂಗವೇ ಆಗಿಬಿಟ್ಟಿದೆ. ಈಗ ದೇಶದ ಹತ್ತು ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯ ಪ್ರತಿ ನಗರವೂ ಬಹುಭಾಷಾ ಸಮುದಾಯಗಳ ಕೇಂದ್ರಗಳಾಗಿಬಿಟ್ಟಿವೆ. ಆ ಮೂಲಕ ಬಹುಭಾಷಾ ನಗರಗಳಾಗಿ ಬದಲಾಗಿಬಿಟ್ಟಿವೆ. ಆದರೆ ನಮ್ಮ ಶಿಕ್ಷಣ ನೀತಿ, ಭಾಷಾ ನೀತಿಗಳು ಮಾತ್ರ ಭಾಷಾವಾರು ರಾಜ್ಯಗಳ ವಿನ್ಯಾಸಕ್ಕೆ ಸರಿಹೊಂದುವಂತೆ ರಚಿತವಾಗಿವೆ ಮತ್ತು ಅದನ್ನೇ ನಾವು ಈಗಲೂ ಮುಂದುವರಿಸುತ್ತಿದ್ದೇವೆ. ಹಾಗಾಗಿ ಈಗ ಒಂದು ರಾಜ್ಯ ತನ್ನ ರಾಜ್ಯ ಭಾಷೆ(ಭಾಷೆಗಳು)ಯನ್ನು ಬೋಧನಾ ಮಾಧ್ಯಮವಾಗಿ ಬಳಸಲು ನಿರ್ಧರಿಸಿದರೆ, ಇತರೆ ಭಾಷಾ ಸಮುದಾಯಗಳು ಸಾಂಸ್ಕೃತಿಕವಾಗಿ ಆತಂಕ ಪಡುತ್ತವೆ. ಹಾಗೆಂದು ನಗರಗಳ ಬಹುಭಾಷಾ ಹಿನ್ನೆಲೆಯನ್ನು ಪರಿಗಣಿಸಿದರೆ, ಶಿಕ್ಷಣದ ಗುಣಮಟ್ಟ ಮತ್ತು ಕಲಿಕೆಯ ಮಟ್ಟಗಳು ಕುಸಿಯಲಿವೆ. ಈ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿರುವುದು ಜ್ಞಾನದ ಭಾಷೆ ಮತ್ತು ಅನ್ನದ ಭಾಷೆಯ ನಡುವಿನ ದೊಡ್ಡ ಕಂದರದ ವಸಾಹತೋತ್ತರ ಕಾಲಘಟ್ಟದ ವಿಪರ್ಯಾಸ. ಹಾಗಾದರೆ, ಈ ಬಿಕ್ಕಟ್ಟಿನಿಂದ ಪಾರಾಗುವುದು; ಸಿಸಿಪಸ್‌ನ ಶಾಶ್ವತ ಶಾಪಗ್ರಸ್ಥ ಸ್ಥಿತಿಯಂತೆ; ಸಾಧ್ಯವೇ ಇಲ್ಲವೇ? ನನಗೆ ಹಾಗೆನಿಸುವುದಿಲ್ಲ.

೧೯೫೦-೬೦ರ ದಶಕದಲ್ಲಿ ಕೇಂದ್ರಾಡಳಿತ ಪ್ರದೇಶಗಳ ರಚನೆಯನ್ನು ಹೇಗೆ ವಾಸ್ತವಿಕ ಅಗತ್ಯ ಎಂದು ಗ್ರಹಿಸಲಾಗಿತ್ತೋ ಹಾಗೇ, ಈಗ ಹತ್ತು ಲಕ್ಷಕ್ಕೂ ಅಧಿಕ ಜನಸಂಖ್ಯೆಯ ನಗರಗಳನ್ನು “ಬಹುಭಾಷಾ ಪ್ರದೇಶ”(ಎಂಟಿ)ಗಳೆಂದು ಗುರುತಿಸುವುದು ಅಗತ್ಯವಿದೆ. ಹಾಗೆ ಗುರುತಿಸಿದ ಮಾತ್ರಕ್ಕೆ ಆ ಪ್ರದೇಶಗಳು ಅವುಗಳು ಸೇರಿರುವ ಭಾಷಾವಾರು ರಾಜ್ಯಗಳಿಂದ ಕಾನೂನು ಮತ್ತು ಆದಾಯದ ವಿಷಯದಲ್ಲೂ ಪ್ರತ್ಯೇಕವಾಗಬೇಕೆಂದೇನೂ ಇಲ್ಲ. ಸಂವಿಧಾನ ತಿದ್ದುಪಡಿಯ ಅಗತ್ಯ ಕೂಡ ಇಲ್ಲದೆ ಇಂತಹ ಮಾನ್ಯತೆಯನ್ನು ನೀಡುವುದು ಸಾಧ್ಯ. ಆದರೆ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಮತ್ತು ರಾಜ್ಯ ಶಿಕ್ಷಣ ಇಲಾಖೆಗಳು ಇಂತಹ ಮಾನ್ಯತೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಹಾಗೆ ರಚನೆಯಾದ ಬಹುಭಾಷಾ ಪ್ರದೇಶಗಳಲ್ಲಿ ಒಂದು ನಿರ್ದಿಷ್ಟ ಸಂಖ್ಯೆಯ ಭಾಷೆಗಳಿಗೆ ಸಂಬಂಧಿಸಿದಂತೆ ವಿಶೇಷ ಭಾಷಾ ಸಂಪನ್ಮೂಲ ಕೇಂದ್ರಗಳನ್ನು (ಎಸ್‌ಎಲ್‌ಆರ್‌ಸಿ) ರಚಿಸಿ, ಅವುಗಳನ್ನು ಶಾಲೆಗಳಿಗೆ ಸಂಪರ್ಕಿಸಬೇಕು. ಉದಾಹರಣೆಗೆ ಬೆಂಗಳೂರಿನಂತಹ ನಗರವನ್ನು ತೆಗೆದುಕೊಂಡರೆ, ಅಲ್ಲಿ ಒಂದು ವಿಷಯವಾಗಿ ಅಥವಾ ಕಲಿಕಾ ಮಾಧ್ಯಮವಾಗಿಯಾದರೂ ಆಗಿ ಕನ್ನಡ ಕಡ್ಡಾಯ ಭಾಷೆಯಾಗಿದೆ. ಅದು ಬಹುಭಾಷಾ ಪ್ರದೇಶವಾದರೆ, ಆಗ ಅಲ್ಲಿ ೨೧ ಇತರ ಅಧಿಕೃತ ಭಾಷೆಗಳು ಮತ್ತು ಈಶಾನ್ಯ ರಾಜ್ಯಗಳ ಖಾಸಿ ಮತ್ತು ಗಾರೊ ಭಾಷೆ ಹಾಗೂ ತುಳು, ಬ್ಯಾರಿ ಮತ್ತಿತರ ಕರ್ನಾಟಕದ ಇತರ ಭಾಷೆಗಳು ಸೇರಿ ಸುಮಾರು ೩೦ ಭಾಷೆಗಳ ಸಂಪನ್ಮೂಲ ಕೇಂದ್ರಗಳ ಅಗತ್ಯಬೀಳಲಿದೆ. ಶಾಲೆಗಳು ವಾರದಲ್ಲಿ ಒಂದು ಅಥವಾ ಒಂದೂವರೆ ದಿನ ಈ ಕೇಂದ್ರಗಳಲ್ಲಿ ಮಕ್ಕಳ ಕಲಿಕೆಗೆ ಅವಕಾಶ ಮಾಡಿಕೊಟ್ಟರೆ, ಕೇಂದ್ರಗಳು ಕಲಿಕಾ ಪೂರಕ ಅಭ್ಯಾಸ, ಬೋಧನೆಗಳ ಮೂಲಕ ಅವರಿಗೆ ಇತರೆ ಭಾಷೆಗಳ ಕಲಿಕೆಗೆ ಅವಕಾಶ ಮಾಡಿಕೊಡಬಹುದು. ಪ್ರತಿ ಮಗುವೂ ತನ್ನ ಆಯ್ಕೆಯ ಒಂದು ಅಥವಾ ಎರಡು ಇಂತಹ ಭಾಷಾ ಸಂಪನ್ಮೂಲ ಕೇಂದ್ರಗಳನ್ನು ಆಯ್ಕೆಮಾಡಿಕೊಳ್ಳಬಹುದು. ಇಂತಹ ಕ್ರಮ ಖಂಡಿತವಾಗಿಯೂ ಮನೆಯ ಮಾತು ಮತ್ತು ಶಾಲೆಯ ಭಾಷೆಯ ನಡುವೆ ಮಗು ಒತ್ತಡಕ್ಕೊಳಗಾಗುವುದನ್ನು ತಪ್ಪಿಸಲಿದೆ.

ಇದನ್ನೂ ಓದಿ : ಇಲಾಜು | ಜಾತಿ, ಭಾಷೆ ಶ್ರೇಷ್ಠತೆಯ ವ್ಯಸನಿಗಳಿಗೆ ನನ್ನ ವೋಟಿಲ್ಲ; ನಿಮ್ಮದು?

ಹಾಗೇ, ಈ ಪದ್ಧತಿಯನ್ನು ಕ್ರಿಯಾಶೀಲವಾಗಿ ಬಳಸಿದಲ್ಲಿ, ಜ್ಞಾನದ ಭಾಷೆ ಮತ್ತು ಮನೆಯ ಭಾಷೆಯ ನಡುವಿನ ಸಂಘರ್ಷವನ್ನು ಕೂಡ ಕಡಿಮೆ ಮಾಡಬಹುದು. ನಮ್ಮ ಬಹುಭಾಷಾ ಸಾಮಾಜಿಕ ಪರಿಸ್ಥಿತಿಯನ್ನು ನಿರ್ವಹಿಸುವ ಅತ್ಯಂತ ನಾಗರಿಕ ಮಾದರಿ ಇದಾಗಿದ್ದು, ಆಧುನಿಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ವಿದ್ಯಾರ್ಥಿಗಳ ದ್ವಿಭಾಷಾ ಕಲಿಕೆಯ ಮಟ್ಟವನ್ನು ಮಾನದಂಡವಾಗಿಟ್ಟುಕೊಂಡು, ಅದರ ಅನುಕೂಲತೆಗಳನ್ನು ಬಹುಭಾಷಾ ಕಲಿಕೆಗೂ ವಿಸ್ತರಿಸಿಕೊಳ್ಳಬಹುದು.

ಈ ನನ್ನ ಸಲಹೆಗೆ ಸಿಗುವ ಮೊದಲ ಪ್ರತಿಕ್ರಿಯೆ ಸಾಮಾನ್ಯವಾಗಿ, “ಇಂತಹದ್ದನ್ನು ಯಾವುದಾದರೂ ಸರ್ಕಾರ ಪ್ರಯೋಗ ಮಾಡಿದೆಯೇ?” ಎಂಬುದಾಗಿರುತ್ತದೆ ಎಂದು ಬಲ್ಲೆ. ಭಾಷಾಭಿಮಾನದ ಕಿಚ್ಚಿಗೆ ತುಪ್ಪ ಸುರಿಯಬಹುದಾದ ಇಂತಹ ಒಂದು ಕ್ರಮಕ್ಕೆ ಯಾವ ಸರ್ಕಾರ ಮುಂದಾಗುತ್ತದೆ ಎಂಬುದು ಅವರ ಅಂತಹ ಪ್ರಶ್ನೆಯ ಹಿಂದಿನ ವಾದ. ಅಂತಹ ಸವಾಲಿನ ಸಂದರ್ಭದಲ್ಲಿಯೇ ನಾವು, ಭಾರತೀಯರು ಗಣನೆಗೆ ಬರುವುದು ಅಲ್ಲವೆ? ನಮ್ಮ ಬಹುಭಾಷಾ ವಾತಾವರಣವನ್ನು ಅರ್ಥಮಾಡಿಕೊಳ್ಳುವ ಮತ್ತು ಮಗುವಿನ ಮನೆಯ ಭಾಷೆ ಮತ್ತು ಕಲಿಕೆಯ ಭಾಷೆಯ ನಡುವಿನ ಕಂದಕವನ್ನು ಸರಿಪಡಿಸುವ ಹೊಣೆಗಾರಿಕೆ ನಾಗರಿಕರಾಗಿ ನಮ್ಮೆಲ್ಲರದು ಎಂಬುದನ್ನು ಅರಿಯಬೇಕಿದೆ. ಆಗ ಇಂತಹ ಕಾರ್ಯ ಜನರಿಂದಲೇ ಆರಂಭವಾಗಬೇಕಿದೆ. ಭಾಷಾ ಹಕ್ಕುಗಳ ಬಗ್ಗೆ ಆಸಕ್ತಿ ಇರುವ ಯಾವುದಾದರೂ ಎನ್‌ಜಿಒ ಅಥವಾ ಸಂಸ್ಥೆ ಮೊದಲು ಕೆಲವು ಆಯ್ದ ನಗರಗಳಲ್ಲಿ ಮೂರ್ನಾಲ್ಕು ವರ್ಷಗಳ ಕಾಲ ಇಂತಹದ್ದೊಂದು ಪ್ರಯೋಗ ಮಾಡಬೇಕಿದೆ. ಬಳಿಕ ಆ ಪ್ರಯೋಗದ ಫಲಿತಾಂಶವನ್ನು ಶಿಕ್ಷಣಕ್ಕೆ ಸಂಬಂಧಪಟ್ಟ ಆಡಳಿತ ಸಂಸ್ಥೆಗಳಿಗೆ, ಸರ್ಕಾರಕ್ಕೆ ಮನವರಿಕೆ ಮಾಡಬೇಕು. ಅಯಾ ನಗರಗಳ ಬಹುಭಾಷಾ ಸಮುದಾಯದ ಪರಿಣಿತರನ್ನೇ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಬಳಸಿಕೊಳ್ಳಬಹುದು. ಇಂತಹ ಸ್ವಯಂಪ್ರೇರಿತ ಉತ್ಸಾಹ ಹೊಸ ಪ್ರಯೋಗಗಳಿಗೆ ತೀರಾ ಅಗತ್ಯ.

ಬೋಧನಾ ವಿಜ್ಞಾನ ಮತ್ತು ಭಾಷಾ ಸೂಚ್ಯಂಕಗಳ ಪ್ರಕಾರ, ಇಂಥದ್ದೊಂದು ಪ್ರಯೋಗ ಖಂಡಿತವಾಗಿಯೂ ಪ್ರಯೋಜನಕಾರಿ ಆಗಲಿದೆ. ಸಕಾರಾತ್ಮಕ ಫಲಿತಾಂಶವನ್ನೇ ಕೊಡಲಿದೆ. ಆರಂಭದಲ್ಲಿ ಅವು ಎಷ್ಟೇ ಹುಚ್ಚುತನ ಎನಿಸಿದರೂ, ಜಗತ್ತನ್ನು ಬದಲಾಯಿಸುವುದು ಇಂತಹ ಹೊಸ ಆಲೋಚನೆಗಳೇ! ಶಾಲೆಗೆ ಹೋಗುವ ಮಕ್ಕಳ ಪ್ರತಿ ಆರು ಮಕ್ಕಳ ಪೈಕಿ ಒಬ್ಬರು ತಮ್ಮ ಮನೆ ಭಾಷೆಯ ‘ಭವಿಷ್ಯ’ ಎಂಬ ಪದಕ್ಕೂ ಮತ್ತು ‘ಅಧಿಕಾರ’ ಮತ್ತು ‘ಜ್ಞಾನ’ದ ಭಾಷೆಯಲ್ಲಿನ ಅದೇ ಪದಕ್ಕೂ ನಂಟು ಬೆಸೆಯುವ ಸೇತುವನ್ನು ಎದುರು ನೋಡುತ್ತಿದೆ. ಈ ಬಹು‍ಭಾಷಾ ಪ್ರದೇಶದ ಪ್ರಯೋಗದ ಮೂಲಕ ಅಂತಹ ಸೇತುವನ್ನು ಕಟ್ಟುವುದು ಸಾಧ್ಯವಾದರೆ, ಬಹುಶಃ ಜ್ಞಾನಪತನವನ್ನು ಕೆಲಮಟ್ಟಿಗಾದರೂ ತಡೆಯಬಹುದು. ಭಾರತ ಜಾಗತಿಕ ಜ್ಞಾನಸಮುದಾಯದ ನಡುವೆ ತನ್ನ ಸ್ಥಾನವನ್ನು ಖಾತ್ರಿಪಡಿಸಿಕೊಳ್ಳುವುದು ಏಕಭಾಷಾ ಸಮುದಾಯವಾಗುವುದರಿಂದಾಗಲೀ, ಸಾಂಸ್ಕೃತಿಕವಾಗಿ ನೆಲೆ ಕಳೆದುಕೊಳ್ಳುವುದರಿಂದಾಗಲೀ ಸಾಧ್ಯವಿಲ್ಲ; ಬದಲಾಗಿ, ಬಹುಭಾಷಾ ಸಮಾಜವಾಗಿ ಮತ್ತು ಅದೇ ಹೊತ್ತಿಗೆ ಸಾಂಸ್ಕೃತಿಕವಾಗಿ ಫಲಪ್ರದವಾಗಿ ಉಳಿಯುವ ಮೂಲಕ ಮಾತ್ರ ಸಾಧ್ಯ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More