ನೆನಪು| ವಿ ಎಸ್ ನೈಪಾಲರಿಗೆ ಮುಂಬೈ ಭೂಗತ ಜಗತ್ತು ಪರಿಚಯಿಸಿದ ಆ ದಿನ

ಟ್ರಿನಿಡಾಡ್‌ ಮೂಲದ ಲೇಖಕ ವಿ ಎಸ್‌ ನೈಪಾಲ್‌ ಈಗ ನೆನಪು. ಎಂಬತ್ತರ ದಶಕದಲ್ಲಿ ಮುಂಬೈನ ಭೂಗತ ಜಗತ್ತಿನ ಬಗ್ಗೆ ತಿಳಿಯಲು ಬಂದಿದ್ದಾಗ ಪತ್ರಕರ್ತ ಅಜಿತ್‌ ಪಿಳ್ಳೈ ಅವರನ್ನು ಮಾಫಿಯಾದ ಜನರ ಬಳಿಗೆ ಕರೆದೊಯ್ದಿದ್ದರು. ಆ ನೆನಪುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ

ಖ್ಯಾತ ಲೇಖಕ ವಿ.ಎಸ್.ನೈಪಾಲ್ ಅವರನ್ನು ಮುಂಬೈನ ಮಾಫಿಯಾದ ಸದಸ್ಯರಿಗೆ ಭೇಟಿ ಮಾಡಿಸುವ ಜವಾಬ್ದಾರಿ ಒಮ್ಮೆ ನನ್ನದಾಗಿತ್ತು. ಅದೇನು ಪಕ್ಕಾ ಜರ್ನಲಿಸ್ಟಿಕ್ ಕೆಲಸವೇನಲ್ಲ. ಕೆಲವರಿಗೆ ಇದು ಕ್ರೈಂ ವರದಿಗಾರನಿಗೆ ಸಿಗಬಹುದಾದ ವಿಶೇಷ ಅವಕಾಶ ಎನ್ನಿಸಬಹುದು. ಮತ್ತೆ ಕೆಲವರಿಗೆ ನಾನು ಒಂದು ಸಂಜೆಯನ್ನು ಸುಖಾಸುಮ್ಮನೆ ಒಬ್ಬ ಪ್ರಮುಖ ವ್ಯಕ್ತಿಯೊಂದಿಗೆ ಅಥವಾ ಸಂಪಾದಕರ ಸ್ನೇಹಿತರೊಬ್ಬರೊಂದಿಗೆ ವ್ಯರ್ಥ ಮಾಡಿದೆ ಎನ್ನಿಸಬಹುದು. ಮುಂಬೈನ ಕತ್ತಲ ಸಾಮ್ರಾಜ್ಯದ ಬಗ್ಗೆ ಕುತೂಹಲ ಇಟ್ಟುಕೊಂಡು ಬರಹಗಾರರು, ವಿದೇಶಿ ಪತ್ರಕರ್ತರು ಬಾಂಬೆಗೆ ಬರುವುದು 1980ರ ದಶಕದ ಆ ದಿನಗಳಲ್ಲಿ ಸಾಮಾನ್ಯವಾಗಿತ್ತು. ಹಾಗೆ ಭೇಟಿ ನೀಡಿದವರು ಮುಂಬೈನ ಕ್ರೈಂ ವರದಿಗಾರರನ್ನು ಸಂಪರ್ಕಿಸಿ ರೆಡ್ ಲೈಟ್ ಏರಿಯಾಗಳಿಗೆ, ಮಸಾಜ್ ಪಾರ್ಲರ್‍ಗಳಿಗೆ, ಡ್ರಗ್ ವ್ಯಸನಿಗಳ ಭೇಟಿಗೆ ಹಾಗೂ ಭೂಗತ ಜಗತ್ತಿನವರನ್ನು ನೋಡಲು ಹೋಗುತ್ತಿದ್ದರು.

1980ರ ಕೊನೆಯಲ್ಲಿ ನಾನು ‘ಇಂಡಿಯಾ ಪೋಸ್ಟ್’ನಲ್ಲಿ ಕೆಲಸ ಮಾಡುತ್ತಿದ್ದೆ. ಕೆಲವೇ ದಿನಗಳ ಮಟ್ಟಿಗೆ ಜೀವಂತವಾಗಿದ್ದ ಅತ್ಯಂತ ಲೈವ್ಲಿ ಪತ್ರಿಕೆಯದು (ಗೂಗಲ್ ಸರ್ವರ್‍ನಲ್ಲಿ ಈ ಪತ್ರಿಕೆ ಬಗ್ಗೆ ಹುಡುಕಿದರೆ ತುಂಬಾ ಕಡಿಮೆ ಮಾಹಿತಿ ಸಿಗುತ್ತೆ, ಹಾಗೂ ಗೂಗಲ್ ಇದನ್ನು ಭಾರತೀಯ ಅಂಚೆ ಸೇವೆ ಎಂದು ತಪ್ಪಾಗಿ ಗ್ರಹಿಸುತ್ತದೆ). ಹೀಗೆ ಒಂದು ದಿನ ನನ್ನ ಸಂಪಾದಕ ವಿನೋದ್ ಮೆಹ್ತಾ ನನ್ನನ್ನು ಕರೆದು ತಾಜ್ ಹೊಟೇಲ್‍ನಲ್ಲಿ ಉಳಿದುಕೊಂಡಿದ್ದ ವಿ.ಎಸ್.ನೈಪಾಲ್ (ಆಗಿನ್ನೂ ಅವರಿಗೆ ನೊಬೆಲ್ ಬಂದಿರಲಿಲ್ಲ)ಗೆ ಕರೆ ಮಾಡಲು ಹೇಳಿದರು. ಆಗ ತಾನೆ ಪತ್ರಿಕೋದ್ಯಮಕ್ಕೆ ಬಂದಿದ್ದ ಯುವ ವರದಿಗಾರನಾಗಿ ನಾನು ಸಹಜವಾಗಿ ಸಂಭ್ರಮಪಟ್ಟೆ. ನೈಪಾಲ್‍ನಂತಹ ಲೇಖಕನನ್ನು ಭೇಟಿಯಾಗುವುದು ನನಗೆ ವಿಶೇಷ ಸಂದರ್ಭವಾಗಿತ್ತು. ಅವರ ಬಗ್ಗೆ ನಾನು ತುಂಬಾ ಕೇಳಿದ್ದೆ ಹಾಗೂ ಅವರ ‘ಎ ಹೌಸ್ ಫಾರ್ ಮಿ.ಬಿಸ್ವಾಸ್’ ಕೃತಿಯನ್ನೂ ಓದಿದ್ದೆ. ಮುಂಬೈನ ಫ್ಲೋರಾ ಫೌಂಟೇನ್ ಬಳಿಯ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರುವ ಅಂಗಡಿಯೊಂದರಲ್ಲಿ, ಪುಟಗಳ ಅಂಚುಗಳೆಲ್ಲಾ ಗುರುತಿಗೆಂದು ಮಡಿಚಿದ್ದ ಪುಟಗಳೇ ಇದ್ದ ಆ ಪ್ರತಿಯನ್ನು ಕೊಂಡು ಓದಿದ್ದೆ.

ನಾನು ಅವರಿಗೆ ಕರೆ ಮಾಡಿದೆ. ಅವರು ತಾನು ಭಾರತದ ಬಗ್ಗೆ ಒಂದು ಪುಸ್ತಕಕ್ಕಾಗಿ ಅಧ್ಯಯನ ಮಾಡುತ್ತಿರುವುದಾಗಿ ಹೇಳಿದರು. ಆ ಅಧ್ಯಯನಕ್ಕೆ ಪೂರಕವಾಗಿ ಭೂಗತ ಜಗತ್ತಿನ ಕೆಲ ಸದಸ್ಯರನ್ನು ನಾನು ಭೇಟಿ ಮಾಡಿಸಬೇಕೆಂದು ಕೇಳಿದರು. ಕೆಲವರಿಗೆ ಫೋನ್ ಮಾಡಿ ಅದೇ ದಿನ ಸಂಜೆ ಹೊತ್ತಿಗೆ ಶಿವಾಜಿ ಪಾರ್ಕ್ ಹತ್ತಿರದ ಒಂದು ಉತ್ತಮ ರೆಸಿಡೆನ್ಶಿಯಲ್ ಲೊಕಾಲಿಟಿಯ ಮನೆಯೊಂದರಲ್ಲಿ ಭೇಟಿ ನಿಗದಿಪಡಿಸಿದೆ. ನಾನು ತಾಜ್ ಹೊಟೇಲಿನ ಲಾಬ್ಬಿಯಲ್ಲಿ ನೈಪಾಲ್ ಅವರನ್ನು ಭೇಟಿ ಮಾಡಿ ಅವರನ್ನು ಕರೆದುಕೊಂಡು ಹೋಗಬೇಕಿತ್ತು. “ನನ್ನ ಕೊಠಡಿಗೆ ಬರುವುದು ಬೇಡ, ರಿಸೆಪ್ಶನ್‍ಗೆ ಬಂದು ಕರೆ ಮಾಡಿದರೆ ಸಾಕು, ನಾನೇ ಕೆಳಗೆ ಬರುತ್ತೇನೆ” ಎಂದರು.

ನಾವು ದಾದರ್‍ಗೆ ಎಸಿ ಇಲ್ಲದ ಕಾರಿನಲ್ಲಿ ಹೋದೆವು. ಹ್ಯುಮಿಡಿಟಿ ಹೆಚ್ಚಿರುವ ಆ ದಿನಗಳ ಮುಂಬೈನಲ್ಲಿ ನಾನ್-ಎಸಿ ಕಾರಿನಲ್ಲಿ ಪ್ರಯಾಣ ಹಿತಕರವಾಗಿರಲಿಲ್ಲ. ಆದರೆ ನೈಪಾಲ್ ಆ ಬಗ್ಗೆ ಅಷ್ಟು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಆದರೆ ನಿಧಾನವಾಗಿ ಚಲಿಸುತ್ತಿದ್ದ ಟ್ರಾಫಿಕ್‍ನಿಂದ ಹೆಚ್ಚು ವಿಚಲಿತರಾಗಿದ್ದರು. ಆ ಬಗ್ಗೆ ಅವರೇನು ದೂಷಿಸಲಿಲ್ಲ, ಆದರೆ 15 ಕಿ.ಮೀ. ಪ್ರಯಾಣಕ್ಕೆ 40 ನಿಮಿಷಗಳ ಕಾಲ ಕೂರಬೇಕಾದ್ದಕ್ಕೆ ಹತಾಶೆಗೊಂಡಿದ್ದರು ಎನ್ನಿಸುತ್ತೆ. ದಾರಿಯಲ್ಲಿ ಅವರ ಪುಸ್ತಕದ ಬಗ್ಗೆ ಒಂದಿಷ್ಟು ಮಾತನಾಡಿದರು. ಆದರೆ, ವಿವರವಾಗಿಯೇನು ಅಲ್ಲ. ನಂತರ ಮುಂಬೈ ಬಗ್ಗೆ ಮಾತು ಹೊರಳಿಸಿದರು. “ನನ್ನ ಈ ಕೆಲಸಕ್ಕೆ ನೀನೇ ಸರಿಯಾದ ವ್ಯಕ್ತಿ ಅಂತ ಭಾರೀ ಕೇಳಲ್ಪಟ್ಟೆ. ಎಷ್ಟು ದಿನಗಳಿಂದ ಮುಂಬೈನಲ್ಲಿ ಕೆಲಸ ಮಾಡ್ತಿದೀಯಾ?” ಎಂದರು. ನಾನು ಕೆಲವರು ಹುಬ್ಬೇರಿಸುವಂತಹ ಸುದ್ದಿಗಳನ್ನು ಮಾಡಿದ್ದೇನೆ. ಆದರೆ, ಯಾವುದೇ ವಿಷಯದ ಬಗ್ಗೆ ತಜ್ಞನಲ್ಲ ಎಂದೆ.

ಆ ನಂತರ ನೈಪಾಲ್ ಅವರು ಮುಸ್ಲಿಂ ಸಮುದಾಯದ ಬಗ್ಗೆ ಮಾತು ಆರಂಭಿಸಿದರು. ಮುಂಬೈ ಮಾಫಿಯಾದಲ್ಲಿ ಕೇವಲ ಮುಸಲ್ಮಾನರಿದ್ದಾರೆ ಎಂಬ ತೀರ್ಮಾನಕ್ಕೆ ಅವರು ಬಂದಿದ್ದರು. ಹಾಗೆ ಅವರಿಗೆ ಯಾರೋ ಹೇಳಿದ್ದಿರಬಹುದು. “ಮುಸ್ಲಿಮರು ಮೊದಲಿನಿಂದಲೂ, ಬೇರೆ ಸಮುದಾಯಗಳಿಗೆ ಹೋಲಿಸಿ ನೋಡಿದರೆ ಹೆಚ್ಚು ಅಪರಾಧಗಳಲ್ಲಿ ತೊಡಗಿಸಿಕೊಂಡವರೇ” ಎಂದರು. ಅಂದು ನಾನು ಅವರ ಮಾತಿಗೆ ಮಾರುತ್ತರ ಕೊಡುವಷ್ಟು ದೊಡ್ಡವನಲ್ಲವಾದರೂ, ಇರೋ ಬರೋ ಧೈರ್ಯವನ್ನೆಲ್ಲಾ ಒಟ್ಟುಮಾಡಿ “ಆ ತರಹ ಬೀಸು ಹೇಳಿಕೆಗಳನ್ನು ಒಂದು ಸಮುದಾಯದ ವಿರುದ್ಧ ಮಾಡಬಾರದು. ಯಾಕೆಂದರೆ ಅಪರಾಧಕ್ಕೆ ಯಾವುದೇ ಧರ್ಮ ಅಥವಾ ಪ್ರದೇಶ ಎನ್ನುವುದು ಇರುವುದಿಲ್ಲ. ಮಾಫಿಯಾದಲ್ಲೂ ಹಾಗೆನೇ. ದಾವೂದ್ ಇಬ್ರಾಹಿಂನ ಬಂಟ ಛೋಟಾ ರಾಜನ್ ಒಬ್ಬ ಹಿಂದು” ಎಂದು ಹೇಳಿದೆ ಹಾಗೂ ಭೂಗತ ಜಗತ್ತಿನಲ್ಲಿರುವ ಇತರೆ ಹಿಂದುಗಳಾದ ಅಮರ್ ನಾಯಕ್, ಅರುಣ್ ಗೌಳಿ, ವರದರಾಜನ್ ಮುದಲಿಯಾರ್... ಹೀಗೆ ಪಟ್ಟಿ ಕೊಟ್ಟೆ.

ವಿಪರ್ಯಾಸ ಎಂದರೆ ಮುಂಬೈ ಮಾಫಿಯಾ ಎಂದರೆ ಮುಸ್ಲಿಮರದೇ ಕಾರುಬಾರು ಎಂದುಕೊಂಡಿದ್ದ ನೈಪಾಲ್ ಅವರನ್ನು ನಾನು ಅಂದು ಕರೆದುಕೊಂಡು ಹೋಗಿದ್ದು ಹಿಂದುಗಳೇ ತುಂಬಿಕೊಂಡಿದ್ದ ಒಂದು ಅಡ್ಡಾಕ್ಕೆ. ನಾನೇನು ಹಾಗಂತ ಮೊದಲೇ ಯೋಜನೆ ಹಾಕಿದ್ದಲ್ಲ. ಆದರೆ ಕಡಿಮೆ ಅವಧಿಯಲ್ಲಿ ನನಗೆ ಸಾಧ್ಯವಾದದ್ದನ್ನು ಅರೇಂಜ್ ಮಾಡಿದ್ದೆ. ಮೇಲಾಗಿ ನೈಪಾಲ್ ಒಂದೇ ದಿನದಲ್ಲಿ ಆಗಬೇಕು ಎಂದು ತಾಕೀತು ಮಾಡಿದ್ದರು. ಪಾನ್ ಶಾಪ್ ಹತ್ತಿರ ನನ್ನ ಸಂಪರ್ಕದಲ್ಲಿದ್ದವನೊಬ್ಬನನ್ನು ಮಾತನಾಡಿಸಿ ಪೋರ್ಚುಗೀಸ್ ಚರ್ಚ್ ಸಮೀಪದ ಮನೆಯನ್ನು ತಲುಪಿದೆವು. ಆ ಜಾಗ ಕ್ರಿಕೆಟ್ ಆಟಗಾರ ಸಂದೀಪ್ ಪಾಟೀಲ್ ನೆಲೆಸಿದ್ದ ಮನೆಗೆ ತೀರಾ ಹತ್ತಿರವಿತ್ತು. ಆ ಮನೆಯೊಳಗೆ ಯಾರೇ ಕಾಲಿಟ್ಟರೂ, ಟಿವಿ, ಸೋಫಾ ಇರುವ ಒಂದು ಟಿಪಿಕಲ್ ಮಧ್ಯಮವರ್ಗದ ಮನೆಗೆ ಕಾಲಿಟ್ಟಂತಾಗುತ್ತಿತ್ತು. ಆದರೆ ಒಮ್ಮೆ ಮನೆಯಿಡೀ ಒಂದು ಸುತ್ತು ಬಂದರೆ ಅದೊಂದು ಬಾಲಿವುಡ್‍ನ ಗ್ಯಾಂಗ್ ಅಡ್ಡಾ ಸೆಟ್‍ನ್ನು ನೆನಪಿಸುವಂತಿತ್ತು. ಅಲ್ಲಲ್ಲಿ ಪಿಸ್ತೂಲ್‍ಗಳು, ವಿವಿಧ ನಮೂನೆಯ ಆಯುಧಗಳು ಇದ್ದವು.

ನೈಪಾಲ್ ಅವರಿಗೆ ಅಲ್ಲಿ ಕಪ್ಪಗೆ ಕುಳ್ಳಗೆ, ಆ ಗುಂಪಿನ ಸದಸ್ಯನಲ್ಲವೇನೋ ಎಂಬಂತಿದ್ದ ವ್ಯಕ್ತಿಯ ಪಕ್ಕ ಆಸನದ ವ್ಯವಸ್ಥೆ ಇತ್ತು. ಆ ವ್ಯಕ್ತಿಯನ್ನು ಯಾರಾದರೂ ಒಮ್ಮೆಗೆ ಶೇರು ದಲ್ಲಾಳಿ ಅಥವಾ ಈಗಷ್ಟೇ ಚರ್ಚ್‍ಗೇಟ್ ನಿಲ್ದಾಣದಲ್ಲಿ ಇಳಿದ ಕಾರುಗಳ ಸ್ಪೇರ್ ಪಾಟ್ರ್ಸ್ ಮಾರುವ ಆಸಾಮಿ ಎಂದುಕೊಂಡರೂ ಆಶ್ಚರ್ಯವಿಲ್ಲ. ಆ ವ್ಯಕ್ತಿ ತನ್ನ ಜೀವನದ ಕತೆಯನ್ನು ಹಾಗೂ ಭಾಗಿಯಾಗಿರುವ ಗ್ಯಾಂಗ್‍ವಾರ್‍ಗಳ ಬಗ್ಗೆ ಮಾತನಾಡಲಾರಂಭಿಸಿದ. ಸ್ವಲ್ಪ ಸಮಯದ ನಂತರ ನೈಪಾಲ್ ಅವರಿಗೆ ಈ ಬೇರೆ ಬೇರೆ ಗ್ಯಾಂಗ್‍ಗಳ ಬಗ್ಗೆಯಾಗಲಿ ಕಂಪನಿಗಳ ಬಗ್ಗೆಯಾಗಲಿ ಗೊತ್ತಿಲ್ಲ ಎಂದು ಮನಗಂಡ ಆ ವ್ಯಕ್ತಿ, ತಮ್ಮ ಗುಂಪಿನ ಚಟುವಟಿಕೆಗಳಾದ ಅಪಹರಣ, ಜಾಗ ಖಾಲಿ ಮಾಡಿಸುವುದು, ಸುಲಿಗೆ, ಸುಪಾರಿ ಕೊಲೆ ಕಡೆ ಮಾತು ತಿರುಗಿಸಿದ.

ಆರಂಭದಲ್ಲಿ ತುಸು ತಪ್ಪುಗ್ರಹಿಕೆಯಿಂದಾಗಿ ನೈಪಾಲ್ ಅಲ್ಲಿದ್ದ ಗ್ಯಾಂಗ್‍ನವರು ಮುಸಲ್ಮಾನರೆಂದೇ ಭಾವಿಸಿ ಆ ಹಿನ್ನೆಲೆಯ ಪ್ರಶ್ನೆಗಳನ್ನೇ ಕೇಳುತ್ತಿದ್ದರು. ಆದರೆ ನಿಜ ಅರಿವಿಗೆ ಬಂದ ನಂತರ ಅವರ ಪ್ರಶ್ನೆ ಕೇಳುವ ಧಾಟಿಯನ್ನು ಬದಲಾಯಿಸಿಕೊಳ್ಳಬೇಕಾಯಿತು. ಆ ಗ್ಯಾಂಗ್‍ನಲ್ಲಿ ಯಾರಾದರೂ ಮುಸಲ್ಮಾನರಿದ್ದಾರಾ ಎಂದು ಅವರು ಕೇಳಿದರು. ಕೆಲವರು ಇದ್ದಾರೆ. ಆದರೆ ಗ್ಯಾಂಗ್‍ನ ನಾಯಕ ತನ್ನ ಗುಂಪಿನ ಮುಸ್ಲಿಂ ಹುಡುಗರನ್ನು ಅಷ್ಟಾಗಿ ನಂಬುವುದಿಲ್ಲ ಎಂದು ನೈಪಾಲ್‍ಗೆ ಅಲ್ಲಿದ್ದವರು ಹೇಳಿದರು. ಆದರೆ ಇಂದು ಆ ಘಟನೆ ನೆನಪು ಮಾಡಿಕೊಂಡರೆ, ಆ ಮಾಫಿಯಾದ ವ್ಯಕ್ತಿ ತನ್ನ ಎದುರಿಗಿರುವ ನೈಪಾಲ್ ಖುಷಿಪಡಿಸಲು ಹಾಗೆ ಹೇಳುತ್ತಿದ್ದನಾ ಎಂಬ ಅನುಮಾನ ಕಾಡುತ್ತೆ. ಆ ವ್ಯಕ್ತಿ ಮುಸಲ್ಮಾನ ಕ್ರಿಮಿನಲ್‍ಗಳು ಹಿಂದುಗಳಂತೆ ಸುಶಿಕ್ಷಿತರೂ, ಸಭ್ಯರೂ ಅಲ್ಲ. ಅವರು ಕೆಳದರ್ಜೆಯವರು ಎಂದು ಹೇಳುತ್ತಿದ್ದ. ನೈಪಾಲ್ ಅವನು ಹೇಳುತ್ತಿದ್ದುದನೆಲ್ಲಾ ತಮ್ಮ ನೋಟ್ ಬುಕ್‍ನಲ್ಲಿ ಬರೆದುಕೊಳ್ಳುತ್ತಿದ್ದರು. ಆ ವ್ಯಕ್ತಿ ನನ್ನ ಬಳಿ ಬಂದು ಇವರು ಯಾವ ಬ್ರಿಟಿಷ್ ಪತ್ರಿಕೆಗೆ ಬರೆಯುತ್ತಾರೆ ಎಂದು ಕುತೂಹಲದಿಂದ ಕೇಳಿದ. ಯಾವಾಗ ನಾನು ಒಂದು ಪುಸ್ತಕಕ್ಕಾಗಿ ಅವರು ಅಧ್ಯಯನ ಮಾಡುತ್ತಿದ್ದಾರೆ ಎಂದು ಹೇಳಿದೆನೋ, ತಕ್ಷಣ ಆ ವ್ಯಕ್ತಿ ಆಸಕ್ತಿ ಕಳೆದುಕೊಂಡಂತಾದ. ಆದರೂ ನೈಪಾಲ್ ಅವರಿಗೆ ಬೇಸರ ಆಗದಿರಲೆಂದು ಆತನಿಗೆ ಸಂತೋಷಿ ಮಾ ಬಗ್ಗೆ ಎಂತಹ ಭಕ್ತಿ ಹಾಗೂ ಯಾವುದೇ ಆಪರೇಶನ್‍ಗೆ ಕೈ ಹಾಕುವ ಮುನ್ನ ಆಕೆಯಲ್ಲಿ ಬೇಡುತ್ತೇನೆ ಎಂದೆಲ್ಲಾ ಹೇಳಿದ.

ವಿಶೇಷ ಅಂದರೆ, ಅದೇ ಮನೆಗೆ ನಾನು ಕೆಲವೇ ದಿನಗಳ ಮೊದಲು ಹೋಗಿದ್ದೆ. ಆಗ ನನ್ನ ಬಳಿ ಆ ವ್ಯಕ್ತಿ ‘ಗ್ಯಾಂಗ್‍ಸ್ಟರ್‍ಗಳಿಗೆ ಧರ್ಮ ಅನ್ನೋದು ಇರೋಲ್ಲ. ನಾವು ದಂಧೆ ಮಾಡಲೇಬೇಕು... ಹಣಕ್ಕಾಗಿ” ಎಂದಿದ್ದ. ಅದುವರೆಗೆ ನಿರ್ವಹಿಸಿದ ಸುಪಾರಿ ಕೊಲೆಗಳ ಬಗ್ಗೆ ಕೊಚ್ಚಿಕೊಂಡಿದ್ದ, ಹಾಗೂ ಅವರಿಂದ ಮಾಮೂಲಿ ಪಡೆಯುವ ರಾಜಕಾರಣಿಗಳು, ಅಧಿಕಾರಿಗಳ ಬಗ್ಗೆಯೂ ಮಾತನಾಡಿದ್ದ. ಆದರೆ ನೈಪಾಲ್ ತುಂಬಾ ಜಾಗರೂಕನಾಗಿ ತನ್ನ ಯಾವುದೇ ರಾಜಕಾರಣಿಗಳ ಜೊತೆಗಿನ ಅಥವಾ ಇತರೆ ಗ್ಯಾಂಗ್‍ಗಳ ಸಂಪರ್ಕದ ಬಗ್ಗೆ ಮಾತನಾಡಲಿಲ್ಲ. ಅಲ್ಲಿ ಓಡಾಡಿಕೊಂಡಿದ್ದ ಯುವಕನೊಬ್ಬ ಕೈಗೆ ಬ್ಯಾಂಡೇಜ್ ಹಾಕಿದ್ದ. ಏನಾಯ್ತು ಅಂತ ಕೇಳಿದಾಗ... “ಇತ್ತೀಚೆಗೆ ನಡೆದ ಗ್ಯಾಂಗ್‍ಗಳ ನಡುವಿನ ಫೈಟ್‍ನಲ್ಲಿ ಗಾಯ ಆಯ್ತು” ಎಂದು ಇಂಗ್ಲಿಷ್‍ನಲ್ಲಿ ಹೇಳಿದ. ಇಂಗ್ಲಿಷ್‍ನಲ್ಲಿ ಮಾತನಾಡಿದ್ದನ್ನು ನೋಡಿ ಅಚ್ಚರಿಗೊಂಡ ನೈಪಾಲ್, ನಂತರ ಆ ಹುಡುಗ ಕರ್ನಾಟಕದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವ್ಯಾಸಂಗವನ್ನು ಅರ್ಧಕ್ಕೆ ಬಿಟ್ಟು ಬಂದವನೆಂದು ಗೊತ್ತಾದ ಮೇಲೆ ಮತ್ತಷ್ಟು ಗಲಿಬಿಲಿಗೊಂಡರು.

ಒಟ್ಟಿನಲ್ಲಿ ನೈಪಾಲ್ ಅಂದುಕೊಂಡಿದ್ದಂತೆ ಸಂಭಾಷಣೆ ಸಾಗುತ್ತಿರಲಿಲ್ಲ. ಅಲ್ಲಿದ್ದ ಅರ್ಧ ಡಜನ್ ಹುಡುಗರಲ್ಲಿ ಯಾರೊಬ್ಬರೂ ಮುಸ್ಲಿಮ್ ಆಗಿರಲಿಲ್ಲ. ಅವರಲ್ಲಿ ಕೆಲವರು ಇಂಗ್ಲಿಷ್ ಮಾತನಾಡಿದ್ದಷ್ಟೇ ಅಲ್ಲ, ಇಂಗ್ಲೆಂಡ್‍ಗೂ ಹೋಗಿ ಬಂದಿದ್ದರು. ಲಂಡನ್‍ಗೆ ಹಲವು ಬಾರಿ ಹೋಗಿದ್ದೇವೆ, ಅಲ್ಲಿಯ ರಿಜೆಂಟ್ ಸ್ಟ್ರೀಟ್, ಹ್ಯಾಂಪ್ ಸ್ಟೆಡ್, ಹ್ಯಾಮರ್ ಸ್ಮಿತ್ ಮತ್ತು ಹೈಡ್ ಪಾರ್ಕ್ ಅಷ್ಟೇ ಅಲ್ಲ ಸೋಹೋದ ಕೆಲವು ರಾತ್ರಿ ವೇಳೆಯಷ್ಟೆ ಭೇಟಿ ನೀಡುವ ಸ್ಥಳಗಳ ಬಗ್ಗೆಯೂ ಗೊತ್ತು ಎಂದರು (ಈ ಯಾವ ಮಾಹಿತಿಯೂ ನೈಪಾಲ್‍ರ ಪುಸ್ತಕದಲ್ಲಿ ಅಚ್ಚಾಗಲಿಲ್ಲ). ಆದರೆ ಆ ಮಾತುಗಳನ್ನೆಲ್ಲಾ ತುಂಬಾ ಮುತುವರ್ಜಿಯಿಂದ ಕೇಳಿಸಿಕೊಂಡಿದ್ದು ಮಾತ್ರ ಸತ್ಯ. ಅವರು ಒಬ್ಬ ಒಳ್ಳೆಯ ಕೇಳುಗ ಹಾಗೂ ಆ ಗ್ಯಾಂಗ್ ಸದಸ್ಯರು ತೋರಿಸಿದ್ದ ಪತ್ರಿಕಾ ತುಣುಕುಗಳನ್ನು ಕೂಡಾ ಸೂಕ್ಷ್ಮವಾಗಿ ಅಭ್ಯಾಸ ಮಾಡಿದರು. “ನೋಡಿ ನಮ್ಮ ಬಗ್ಗೆ ಇಂಗ್ಲಿಷ್ ಪೇಪರ್‍ನವರು ಕೂಡಾ ಬರೆದಿದ್ದಾರೆ” ಎಂದು ಅವರಲ್ಲಿದ್ದ ಒಬ್ಬ ಯುವಕ ಹೆಮ್ಮೆಯಿಂದ ಹೇಳಿದ. ಆ ಭೇಟಿಯ ಬಗ್ಗೆ ನಾನೇನಾದ್ರೂ ನನ್ನ ಪತ್ರಿಕೆಯಲ್ಲಿ ಬರೆಯುತ್ತೀನಾ ಎಂದು ಅವರು ಕೇಳಿದರು. ಹಾಗೂ ಬರೆದರೆ ತಪ್ಪದೆ ಆ ಸಂಚಿಕೆಯ 10-15 ಪ್ರತಿಗಳನ್ನು ಕಳಿಸಲು ಮರೆಯಬಾರದು ಎಂದು ಹೇಳಲು ಮರೆಯಲಿಲ್ಲ.

ಒಂದು ಗಂಟೆಯ ನಂತರ ಅಲ್ಲಿಂದ ಹೊರಟೆವು. ದಾರಿಯಲ್ಲಿ ನೈಪಾಲ್, “ಅವರು ತಮ್ಮ ಬಗ್ಗೆ ಭಾರಿ ಕೊಚ್ಚಿಕೊಳ್ಳುತ್ತಿದ್ದರಾ” ಎಂದು ಕೇಳಿದರು. ಆಗ ನಾನು, “ಅವರು ಹೇಳಿದ್ದಕ್ಕಿಂತ ಹೆಚ್ಚು ಪ್ರಳಯಾಂತಕರು ಎಂದು ನಾನು ಬಲ್ಲೆ” ಎಂದೆ.

ಅವರನ್ನು ಬೀಳ್ಕೊಟ್ಟು ಅಂದಿನ ಸಂಜೆಯನ್ನು ತಾಜ್ ಹೊಟೇಲ್‍ನ ಹಿಂದೆ ಇರುವ ಗೋಕುಲ್ ಬಾರ್‍ನಲ್ಲಿ ಕಳೆದೆ. ಅದೊಂಥರಾ ಪತ್ರಕರ್ತರಿಗೆ ಮತ್ತು ಜಾಹೀರಾತು ಕಂಪನಿಯಲ್ಲಿ ದುಡಿಯುವವರಿಗೆ ಆಶ್ರಯತಾಣ. ಬಿಸಿಲಿನ ತಾಪ, ಗೌಜು ಗದ್ದಲಗಳನ್ನು ಸಹಿಸುವುದಾದರೆ ಹಾಗೂ ಸಾಧಾರಣ ಟೇಬಲ್ ಹಾಸುಗಳೇ ಸಾಕು ಎನ್ನುವುದಾದರೆ, ಜೇಬಿಗೆ ಭಾರೀ ಕತ್ತರಿ ಇಲ್ಲದೆ ಅಲ್ಲಿ ಕುಡಿಯಬಹುದಿತ್ತು. ಅಲ್ಲಿದ್ದವರ ಪೈಕಿ ನನ್ನ ಒಬ್ಬ ಪತ್ರಕರ್ತ ಸ್ನೇಹಿತನಿಗೆ, “ನಾನು ಇಷ್ಟು ಹೊತ್ತು ನೈಪಾಲ್ ಜೊತೆಯಲ್ಲಿದ್ದೆ” ಎಂದೆ. ಆರಂಭದಲ್ಲಿ ನಂಬಲಿಲ್ಲ. ಆದರೆ ನಂತರ ಅದೇನು ದೊಡ್ಡ ಸಂಗತಿಯಲ್ಲ ಎನ್ನುವಂತೆ, “ಅಯ್ಯೋ ನೈಪಾಲ್ ಕೂಡಾ ನಮ್ಮಂತೆ ವರ್ಣಮಾಲೆ ಅಕ್ಷರಗಳನ್ನು ಬೇರೆ ಬೇರೆ ನಮೂನೆಯಲ್ಲಿ ಜೋಡಿಸುತ್ತಾರಷ್ಟೆ” ಎಂದ. ಅದು ನನಗೂ ಗೊತ್ತು. ಆದರೆ ಆತ ಅದೇ ಕೆಲಸವನ್ನು ನಮ್ಮೆಲ್ಲರಿಗಿಂತ ಚೆನ್ನಾಗಿ ಮಾಡುತ್ತಾರೆ.

ನೈಪಾಲ್ ಅವರ ‘ಇಂಡಿಯಾ: ಎ ಮಿಲಿಯನ್ ಮುಟಿನೀಸ್ ನೌ’ ಕೃತಿ 1990ರಲ್ಲಿ ಹೊರ ಬಂದ ನಂತರ ಆ ಕೃತಿ ಕೆಲವು ಬೆಳವಣಿಗೆಗಳಿಗೆ ಕಾರಣವಾಯಿತು. ಪೆಂಗ್ವಿನ್ ಇಂಡಿಯಾ ಸಂಪಾದಕರಾಗಿದ್ದ ಡೇವಿಡ್ ದವಿಧರ್ ಬಾಂಬೆಯ ಭೂಗತ ಜಗತ್ತಿನ ಇತಿಹಾಸದ ಬಗ್ಗೆ ಒಂದು ಕೃತಿಯನ್ನು ಇನ್ನೊಬ್ಬ ಗೆಳೆಯನೊಂದಿಗೆ ಸೇರಿ ಬರೆಯಲು ಒಂದು ಆಫರ್ ಕೊಟ್ಟರು. ನಾವು ಆ ಬಗ್ಗೆ ತಯಾರಿ ಶುರು ಮಾಡಿದೆವು. ದಾವುದ್-ಛೋಟಾ ರಾಜನ್-ಅಮರ್ ನಾಯಕ್ ಅವರ ಕಾಲದವರೆಗಿನ ಸಂಘಟಿತ ಅಪರಾಧಗಳ ಬಗ್ಗೆ ಅಧ್ಯಯನ ಮಾಡುವುದು ಸುಲಭವಲ್ಲ ಎಂದು ಮನವರಿಕೆಯಾಯಿತು. ಬರಹಕ್ಕೆ ಅಧಿಕೃತತೆ ಒದಗಿಸಲು ನಾವು ಪತ್ರಿಕಾ ವರದಿಗಳ ಹಾಗೂ ಪೊಲೀಸ್ ದಾಖಲೆಗಳ ಆಚೆಗೂ ಹೋಗುವ ಅಗತ್ಯವಿತ್ತು. ಕೇವಲ ದೂರವಾಣಿ ಮೂಲಕ ಮಾತನಾಡಿದರೆ ಸಾಲದು, ಗ್ಯಾಂಗ್ ಸದಸ್ಯರೊಂದಿಗೆ ಗಂಟೆಗಟ್ಟಲೆ ಕೂತು ಮಾಹಿತಿ ಸಂಗ್ರಹಿಸಬೇಕಿತ್ತು. ಆಗ ನಮಗೆ ಒಂದು ಸಮಸ್ಯೆ ಎದುರಾಯಿತು. ಹಿರಿಯ ಅಧಿಕಾರಿಯೊಬ್ಬರಿಂದ ನಾವು ಒಂದು ಪುಸ್ತಕಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಲಿಖಿತ ಒಪ್ಪಿಗೆ ಪತ್ರ ಪಡೆಯುವುದು ಒಳ್ಳೆಯದು ಎಂದು ನಮಗೆ ಕೆಲವರು ಸಲಹೆ ನೀಡಿದರು. ಇಲ್ಲದಿದ್ದರೆ, ಭೂಗತ ಜಗತ್ತಿನವರ ಜೊತೆ ಇದ್ದ ಕಾರಣಕ್ಕೆ ಪೊಲೀಸರು ನಮ್ಮನ್ನೂ ಬಂಧಿಸುವ ಸಾಧ್ಯತೆಗಳಿರುವುದರಿಂದ ಇಂತಹದೊಂದು ವ್ಯವಸ್ಥೆ ಆಗಬೇಕಿತ್ತು.

ಅಂತಹದೊಂದು ಪತ್ರ ಪಡೆಯುವುದು ಸಲೀಸು ಎಂದುಕೊಂಡು ಹಿರಿಯ ಅಧಿಕಾರಿಯೊಬ್ಬರನ್ನು ಸಂಪರ್ಕಿಸಿದೆ. ಅವರು ನನ್ನ ಮಾತುಗಳನ್ನೆಲ್ಲಾ ಕೇಳಿಸಿಕೊಂಡು, “ಮಿಸ್ಟರ್ ಪಿಳ್ಳೈ, ನಿಮಗೆ ಭದ್ರತೆ ಒದಗಿಸುವಂತಹ ಯಾವುದೇ ಪತ್ರವನ್ನು ನಾವು ನಿಮಗೆ ಕೊಡಲಾಗುವುದಿಲ್ಲ. ನೀವು ಪುಸ್ತಕ ಬರೆಯಲು ಸ್ವತಂತ್ರರು. ಆದರೆ ನೀವು ಯಾವುದಾದರೂ ತೊಂದರೆಯಲ್ಲಿ ಸಿಕ್ಕಿಕೊಂಡರೆ, ನೀವೇ ಜವಾಬ್ದಾರರು. ಹಾಗೇನಾದರೂ ಆದರೆ ಅದನ್ನು ವೃತ್ತಿ ಸಂಬಂಧಿ ಅವಘಡ ಎಂದು ಭಾವಿಸಿ. ಇದು ನಿಮ್ಮ ಖಾಸಗಿ ಕೆಲಸ. ಪೊಲೀಸರು ನಿಮಗೆ ಈ ಕೆಲಸ ಒದಗಿಸಿಲ್ಲ” ಎಂದರು. ಅವರು ಮುಂದುವರೆದು, ಯುದ್ಧ ಭೂಮಿಯಲ್ಲಿ ವರದಿಗಾರನಿದ್ದರೆ ಯಾವುದೇ ಸೈನ್ಯ ಆತನಿಗೆ ರಕ್ಷಣೆಯ ಖಾತ್ರಿ ನೀಡುವುದಿಲ್ಲ. ಇದು ಕೂಡಾ ಹಾಗೆನೇ ಎಂದು ಹೇಳಿ ನನಗೆ ಅಲ್ಲಿಂದ ಹೊರಡುವಂತೆ ಸೂಚಿಸಿದರು.

ಆ ಅಧಿಕಾರಿ ಹೇಳಿದ ಮಾತುಗಳ ಬಗ್ಗೆ ಸಾಕಷ್ಟು ಯೋಚಿಸಿದೆ. ಆಗ ನಾವಂದುಕೊಂಡಂತೆ ಆ ಕೆಲಸ ಅಷ್ಟು ಸಲೀಸಾಗಿರಲಿಲ್ಲ. ಅದು 1993ರ ಗಲಭೆ ಹಾಗೂ ಬಾಂಬ್ ದಾಳಿಗಳ ಕಾಲ. ಭೂಗತ ಜಗತ್ತಿನ ಜೊತೆಗಿದ್ದಾರೆ ಎಂಬ ಆರೋಪ ಹೊತ್ತಿದ್ದ ಒಂದು ಗುಂಪಿನ ಪೊಲೀಸ್ ಅಧಿಕಾರಿಗಳು ಅಷ್ಟು ಸಹಕಾರಿಯಾಗಿರಲಿಲ್ಲ. ಯಾವುದೋ ಒಂದು ಗಂಡಾಂತರಕಾರಿ ಕಾನೂನಿನ ಅಡಿ ಬಂಧಿಯಾಗಿ ಜೈಲು ಸೇರುವ ಸಂದರ್ಭ ಸೃಷ್ಟಿಯಾಗುವುದಾದರೆ, ನಾವು ಪುಸಕ್ತ ಬರೆಯುವ ಆಲೋಚನೆಯನ್ನೇ ಕೈಬಿಡುವುದು ಒಳ್ಳೆಯದು ಎನ್ನಿಸಿತು. ಆ ಯೋಜನೆಯನ್ನ ಕೈಬಿಟ್ಟೆವು. ನಾನು ಮಹಾರಾಷ್ಟ್ರ ರಾಜಕಾರಣದ ಬಗ್ಗೆ ವರದಿ ಮಾಡಲು ತೊಡಗಿಸಿಕೊಂಡೆ.

ಆದರೂ ನೈಪಾಲ್ ಅವರ ಪುಸ್ತಕ ನನಗೆ ಅಚ್ಚರಿಯೊಂದನ್ನು ಹೊತ್ತು ತಂದಿತ್ತು. ತುಂಬಾ ವರ್ಷಗಳ ಹಿಂದೆ ತಿರುವನಂತಪುರಂನಲ್ಲಿ ಪರಿಚಿತರಾಗಿದ್ದವರೊಬ್ಬರು ಒಮ್ಮೆ ಸಂಪರ್ಕಿಸಿದರು. ಆ ಹೊತ್ತಿಗೆ ನಾನು ವಿನೋದ್ ಮೆಹ್ತಾ ನೇತೃತ್ವದ ‘ಪಯೋನೀರ್’ ಸೇರಿದ್ದೆ. 1992ರ ಕಡೇ ದಿನಗಳಲ್ಲಿ ದೆಹಲಿಯಲ್ಲಿ ಪತ್ರಿಕೆಯ ರೀಲಾಂಚ್‍ಗೆ ಎಲ್ಲಾ ತಯಾರಿ ನಡೆಯುತ್ತಿತ್ತು. ಆ ಕರೆ ಬಂದ ತಕ್ಷಣ ನಾನು ಚಕಿತನಾದೆ. ತನ್ನನ್ನು ಪರಿಚಯ ಮಾಡಿಕೊಂಡ ನಂತರ, “ನನ್ನನ್ನು ನೀನು ಬಂದು ಕಾಣಬಹುದೇ? ನಿನ್ನೊಂದಿಗೆ ತುಂಬಾ ಮಾತನಾಡುವುದಿದೆ...” ಎಂದರು. ನಾನು ಅವರು ಇದ್ದ ಹೊಟೇಲ್‍ನ ವಿಳಾಸ ಪಡೆದು ರೈಲು ಹಿಡಿದು ತಲುಪಿದೆ.

ಆರಂಭದಲ್ಲಿ ನಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದೆವು. ಅವರು ತಮ್ಮ ಬಗ್ಗೆ ಹೇಳಿದರು. ಗಲ್ಫ್‍ನಲ್ಲಿ ಉಳಿದುಕೊಂಡಿರುವ ಅವರು ದಕ್ಷಿಣ ಆಫ್ರಿಕಾ ಮತ್ತಿತರ ದೇಶಗಳಲ್ಲಿ ವ್ಯಾಪಾರ ಹೊಂದಿದ್ದೇನೆ ಎಂದರು. ವಿ.ಎಸ್.ನೈಪಾಲ್ ಅವರು ತಮ್ಮ ಪುಸ್ತಕದಲ್ಲಿ ನನ್ನ ಹೆಸರು ಉಲ್ಲೇಖಿಸಿರುವುದು ಗೊತ್ತಾದ ಕಾರಣ ಅವರು ನನ್ನನ್ನು ಭೇಟಿಯಾಗಲು ಬಯಸಿದ್ದರು. “ನೈಪಾಲ್ ಭಾರೀ ದೊಡ್ಡ ಲೇಖಕ ಅನ್ಸುತ್ತೆ. ನಾನು ಅವರ ಪುಸ್ತಕ ಓದಿಲ್ಲ. ಇಂತಹ ದಪ್ಪ ಪುಸ್ತಕಗಳನ್ನು ನನ್ನಂಥವನಿಗೆ ಓದಲೂ ಆಗೋಲ್ಲ” ಎಂದು ಯಾವ ಹಿಂಜರಿಕೆ ಇಲ್ಲದೆ ಹೇಳಿದವರೇ ಸಿಗರೇಟು ಹಚ್ಚಿದರು. ದುಬೈನಿಂದ ಆ ವ್ಯಕ್ತಿಯ ಜೊತೆ ಬಂದಿದ್ದ ಅವರ ಸಹಚರನೊಬ್ಬ ಹಿಂದುಗಡೆ ಒಂದಿಷ್ಟು ದಾಖಲೆಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದ.

ಮಾತುಕತೆ ಗಾಂಭೀರ್ಯ ಪಡೆಯುತ್ತಿದ್ದಂತೆಯೇ ಆ ವ್ಯಕ್ತಿ ತಾನು ಸಾಕಷ್ಟು ದೇಶ ಸುತ್ತಿರೋದಾಗಿ ಹೇಳಿದ. “ನಾನು ಯಾವ ದೇಶಕ್ಕಾದರೂ ಸುಲಭವಾಗಿ ಹೋಗಬಲ್ಲೆ, ಆದರೆ ನಾನು ಹುಟ್ಟಿರುವ ಈ ದೇಶವೊಂದನ್ನು ಬಿಟ್ಟು” ಎಂದು ಭಾವುಕನಾಗಿ ಹೇಳಿದ. “ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆ ನಿಯಂತ್ರಣ ಕಾಯಿದೆ (COFEPOSA) ಅಡಿ ನಾನು ಭಾರತಕ್ಕೆ ಬೇಕಾದವನು. ನಾನು ಇಂದು ಬಾಂಬೆಯಲ್ಲಿ ವಿಮಾನ ಹತ್ತಿ ಬೇರೆಡೆಗೆ ಹೋಗಬೇಕೆಂದರೆ ಬಂಧಿತನಾಗುವ ಸಾಧ್ಯತೆಗಳಿವೆ. ಹಾಗಾಗಿ ಕಳ್ಳದಾರಿಯಲ್ಲಿ ಭಾಯ್‍ಗೆ ಸೇರಿದ ದೋಣಿ ಮೂಲಕ ಗುಜರಾತಿನ ಕರಾವಳಿಗೆ ಬಂದಿಳಿದೆವು” ಎಂದ. ನಾನು ಹೀಗೆ ಕರಾವಳಿಗೆ ಕಳ್ಳತನದಿಂದ ಬಂದಿಳಿಯುವ ಭೂಗತ ಜಗತ್ತಿನವರ ಬಗ್ಗೆ ಕೇಳಿದ್ದೆ. ಹಾಗಾದರೆ ಈ ವ್ಯಕ್ತಿಯೂ ಭೂಗತ ಜಗತ್ತಿಗೆ ಸೇರಿದವನಾ?

ಆತ ದುಬೈನಲ್ಲಿ ತನಗೆ ಅನೇಕ ಮಂದಿಯೊಂದಿಗೆ ಗೆಳೆತನವಿದೆ. ಆದರೆ ಅವರೆಲ್ಲ ನಾನಾ ಕಾರಣಗಳಿಗಾಗಿ ಭಾರತ ಸರಕಾರದ ಕೆಂಗಣ್ಣಿಗೆ ಗುರಿಯಾದವರೇ ಎಂದ. ದೊಡ್ಡ ಬ್ಯುಸಿನೆಸ್‍ನಲ್ಲಿ ಇರುವವರು ಹೀಗೆ ಕೆಂಗಣ್ಣಿಗೆ ಗುರಿಯಾಗುವುದು ಸಹಜ. ಅದಕ್ಕೆ ಯಾವುದೇ ಗಂಭೀರ ಕಾರಣ ಬೇಕಿಲ್ಲ ಎಂದ. ಆದಷ್ಟು ಬೇಗ ಇಂತಹ ಸ್ಥಿತಿಯಿಂದ ಹೊರಬರಬೇಕಿದೆ ಎಂದೆಲ್ಲ ಹೇಳಿದ. ಸ್ವಲ್ಪ ಹೊತ್ತಿನ ನಿಶ್ಶಬ್ದದ ನಂತರ ನಿನಗೆ ಯಾರಾದ್ರೂ ಕಾನೂನು ಅಥವಾ ಗೃಹ ಇಲಾಖೆಯಲ್ಲಿ ಇರುವವರು ಗೊತ್ತಾ? ಎಂದು ಕೇಳಿದ. ನಾನು ‘ಇಲ್ಲ' ಎಂದೆ. “ಹಾಗಾದರೆ ನೀನೇಕೆ ಪತ್ರಕರ್ತನಾಗಿದ್ದೀಯ?” ಎಂದು ಕೇಳಿದ. ನನ್ನ ಹತ್ತಿರ ಉತ್ತರ ಇರಲಿಲ್ಲ. ಪತ್ರಕರ್ತರಿಗೆ ಇಂತಹ ಸಂಪರ್ಕಗಳು ಇರಬೇಕಾಗುತ್ತೆ ಎಂದು ಸಲಹೆ ಕೊಟ್ಟ.

ನಂತರ ತಾಕಿ ಎನ್ನುವರೊಬ್ಬರಿಗೆ ಫೋನ್ ಮಾಡಿದ (ತಾಕಿಯುದ್ದೀನ್ ವಾಹಿದ್ ಆಗ ಈಸ್ಟ್-ವೆಸ್ಟ್ ಏರ್‍ಲೈನ್ಸ್‍ನ ವ್ಯವಸ್ಥಾಪಕ ನಿರ್ದೇಶಕ. ಆ ವ್ಯಕ್ತಿಯನ್ನು ನಂತರ 1995ರಲ್ಲಿ ಆತನ ಬಾಂದ್ರಾ ಕಚೇರಿ ಎದುರು ಗುಂಡಿಟ್ಟು ಕೊಲ್ಲಲಾಯಿತು). ನಾನು ಈಗ ಬಾಂಬೆಯಲ್ಲಿದೀನಿ. ನನಗೆ ಸದ್ಯ ತ್ರಿವೇಂಡ್ರಂ(ತಿರುವನಂತಪುರ)ಗೆ ಹೋಗಿಬರಲು ನಾಲ್ಕು ಟಿಕೆಟ್ ಬೇಕು. ಅರೇಂಜ್ ಮಾಡೋಕಾಗುತ್ತಾ?... ಥಾಂಕ್ಯೂ... ಎಂದ. ನನ್ನೊಂದಿಗೆ ಮಾತಾಡುತ್ತಾ, ಇದು ವಾಹಿದ್. ಈಸ್ಟ್-ವೆಸ್ಟ್ ಏರ್‍ಲೈನ್ಸ್ ಬಾಸ್. ಆ ಕಂಪೆನಿ ಬಗ್ಗೆ ನೀನು ಕೇಳಿರಬೇಕು. ನಿನಗೆ ಯಾವತ್ತಾದ್ರೂ ಟಿಕೆಟ್ ಬೇಕಾದ್ರೆ ವಾಹಿದ್‍ನ ಕಾಂಟ್ಯಾಕ್ಟ್ ಮಾಡು. ನನ್ನ ಹೆಸರು ಹೇಳು ಸಾಕು ಎಂದ. ಆಮೇಲೆ ಜುಹೂನಲ್ಲಿರುವ ಒಂದು ಹೊಟೇಲ್ ಬಗ್ಗೆ ಮಾತನಾಡಿದ. ಅದು ಒಂಥರಾ ನಮ್ಮದೇ ಹೋಟೆಲ್ ಎನ್ನುತ್ತಾ ಮತ್ತೊಂದು ಸಿಗರೇಟ್ ಹಚ್ಚಿದ. ನಮಗೆ ಭಾರೀ ಜನರ ಪರಿಚಯ ಇದೆ ಎಂದ. ಬಾಂಬೆಯ ವಾರಪತ್ರಿಕೆಯೊಂದರಲ್ಲಿ ದುಡಿಯುತ್ತಿದ್ದ ವರದಿಗಾರ್ತಿಯೊಬ್ಬಳಿಗೆ ಕೆಲಸ ಕೊಡಿಸಿದ್ದು ತನ್ನ ಸೀನಿಯರ್ ಭಾಯಿ ಎಂದ. ಅವಳು ದುಬೈನಲ್ಲಿ ಸೆಕ್ರೆಟರಿ ಆಗಿದ್ದಳು. ಈಗ ಪತ್ರಕರ್ತೆ. ನನಗೆ ಅವಳ ಸಂಪಾದಕ ಗೊತ್ತು. ನಿಂಗೆ ಅವರ ಪರಿಚಯ ಇದೆಯಾ ಎಂದು ಕೇಳಿದ. ಪತ್ರಿಕೋದ್ಯಮ ಕ್ಷೇತ್ರದಲ್ಲೂ ನನಗೆ ಗೊತ್ತಿರುವವರು ಇದ್ದಾರೆ ಎನ್ನುವುದನ್ನು ನನಗೆ ಮನವರಿಕೆ ಮಾಡಿಕೊಡಲು, ಆ ಸಂಪಾದಕರ ಹೆಸರನ್ನು ಬಳಸಿಕೊಂಡ. ನೀನು ಯಾವತ್ತಾದರೂ ಕೆಲಸ ಚೇಂಜ್ ಮಾಡಬೇಕು ಅಂತಿದ್ರೆ ನನಗೆ ಹೇಳು. ನಾನು ನಿನಗೆ ಸಹಾಯ ಮಾಡ್ತೇನೆ. ನೀನು ಈಗ ಕೆಲಸ ಮಾಡುತ್ತಿರುವ ‘ಪಯೋನೀರ್’ ಅಂಥ ದೊಡ್ಡ ಪೇಪರ್ ಏನಲ್ಲ ಎಂದ.

ನಾನೇನೂ ಪ್ರತಿಕ್ರಿಯೆ ನೀಡಲಿಲ್ಲ. ಆದರೆ ಆತನೇ ಮಾತು ಮುಂದುವರಿಸಿದ. ಕೊನೆಗೆ ತಾನು ಒಬ್ಬ ವಕೀಲನನ್ನು ಭೇಟಿಯಾಗಬೇಕಿದೆ ಎಂದು ಹೇಳಿ ತನ್ನ ಸಹಚರನಿಗೆ ಸೂಟ್‍ಕೇಸ್ ತಗೊಂಡು ತಯಾರಾಗಲು ಹೇಳಿದ. ನಾನು ಕಚೇರಿಗೆ ಬಂದವನೇ ಪಯೋನೀರ್‍ನ ಆವೃತ್ತಿಗೆ ಸುದ್ದಿಯೊಂದನ್ನು ಬರೆದೆ. ವಿಶಿಷ್ಟ ವ್ಯಕ್ತಿಯೊಬ್ಬ ಕಾನೂನುಬಾಹಿರವಾಗಿ ಭಾರತ ಪ್ರವೇಶಿಸಿದ್ದ ಬಗ್ಗೆ ವರದಿ ಮಾಡಿದೆ. ಅದು ಒಳಪುಟಗಳಲ್ಲಿ ಯಾವುದೋ ಒಂದು ಮೂಲೆಯಲ್ಲಿ ಪ್ರಕಟವಾಯಿತು.

ಈ ತಿರುವನಂತಪುರದ ವ್ಯಕ್ತಿ ನನಗೊಂದು ವಿಸಿಟಿಂಗ್ ಕಾರ್ಡ್ ಕೊಟ್ಟಿದ್ದ. ಅದರಲ್ಲಿದ್ದ ದೂರವಾಣಿ ಸಂಖ್ಯೆಗೆ 1993ರ ಬಾಂಬೆ ಬ್ಲಾಸ್ಟ್ ನಂತರ ಸಂಪರ್ಕಿಸಲು ಪ್ರಯತ್ನಿಸಿದೆ. ಆ ಸಂಖ್ಯೆ ಚಾಲ್ತಿಯಲ್ಲಿಲ್ಲ ಎಂಬ ಸಂದೇಶ ಬಂತು. ಹತ್ತು ವರ್ಷಗಳ ನಂತರ ಆ ಮನುಷ್ಯ ತನ್ನ ದುಬೈ ಫ್ಲಾಟ್‍ನಲ್ಲಿ ತೀವ್ರ ಹೃದಯಾಘಾತದಿಂದ ತೀರಿಕೊಂಡ ಎಂದು ಗೊತ್ತಾಯಿತು.

(ಜಿ ಟಿ ಸತೀಶ್‌ ಈ ಲೇಖನ ಅನುವಾದಿಸಿದ್ದು, 'ಇದು ಯಾವ ಸೀಮೆಯ ಚರಿತ್ರೆ' ಕೃತಿಯಲ್ಲಿ ಪ್ರಕಟವಾಗಿದೆ)

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More