ನೆಹರು ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿ ವಾಜಪೇಯಿ ಆಡಿದ್ದ ಹೃದಯಸ್ಪರ್ಶಿ ಮಾತುಗಳು

ಭಾರತದ ಮೊದಲ ಪ್ರಧಾನಿ ನೆಹರು ೧೯೬೪ರ ಮೇ ೨೭ರಂದು ನಿಧನರಾದಾಗ, ವಾಜಪೇಯಿ ಅವರು ರಾಜ್ಯಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಿ ಆಡಿದ ಮಾತುಗಳು, ನೆಹರು ಅವರೊಂದಿಗೆ ಅಟಲ್ ಮೇರು ವ್ಯಕ್ತಿತ್ವಕ್ಕೂ ಕನ್ನಡಿಯಾಗಿವೆ. ‘ದಿ ಪ್ರಿಂಟ್’ ಪ್ರಕಟಿತ ಆ ಮಾತುಗಳು ಯಥಾವತ್ತಾಗಿ ಇಲ್ಲಿವೆ

ಸರ್, ಒಂದು ಕನಸು ನುಚ್ಚುನೂರಾಗಿದೆ, ಒಂದು ಹಾಡು ದನಿ ಕಳೆದುಕೊಂಡಿದೆ, ಒಂದು ಬೆಳಕಿನ ಜ್ವಾಲೆ ಅಸೀಮದಲ್ಲಿ ಲೀನವಾಗಿದೆ; ಹಸಿವು ಮತ್ತು ಭೀತಿ ಮುಕ್ತ ಜಗತ್ತಿನ ಕನಸು ಅದಾಗಿತ್ತು. ಗೀತೆಯ ಮಾಧುರ್ಯ ಮತ್ತು ಗುಲಾಬಿಯ ಕಂಪಿನ ಪಾಕವಾಗಿದ್ದ ಒಂದು ಮಹಾಕಾವ್ಯದ ಹಾಡು ಅದಾಗಿತ್ತು. ಕರಾಳ ರಾತ್ರಿಯಿಡೀ ಉರಿದು, ಪ್ರತಿ ಕತ್ತಲಿನೊಂದಿಗೆ ಸೆಣೆಸಿ, ನಮಗೆ ದಾರಿ ತೋರಿದ ಆ ಜ್ವಾಲೆ, ಒಂದು ಮುಂಜಾನೆ ನಿರ್ವಾಣ ಹೊಂದಿದೆ.

ಸಾವು ನಿಶ್ಚಿತ, ದೇಹ ನಶ್ವರ. ನಿನ್ನೆಯ ದಿನ ನಾವು ಶ್ರೀಗಂಧದ ಕಾಷ್ಠದ ನಡುವೆ ಉರಿವ ಅಗ್ನಿಯ ಕೆನ್ನಾಲಿಯ ವಶಕ್ಕೆ ಕೊಟ್ಟ ಆ ಬಂಗಾರದಂತಹ ಆ ದೇಹಕ್ಕೆ ಕೊನೆ ಎಂಬುದು ನಿಶ್ಚಿತವಾಗಿತ್ತು. ಆದರೆ, ಸಾವು ಹಾಗೆ ಕಳ್ಳನ ಹಾಗೆ ಬರಬೇಕಿತ್ತೇ? ಗೆಳೆಯರೆಲ್ಲ ಮಲಗಿರುವಾಗ, ಕಾವಲುಗಾರರು ಮೈಮರೆತ ಹೊತ್ತಲ್ಲಿ ನಮ್ಮ ಈ ಬದುಕಿನ ಬೆಲೆಕಟ್ಟಲಾಗದ ಉಡುಗೊರೆಯೊಂದಕ್ಕೆ ಸಾವು ಕನ್ನ ಹಾಕಿದೆ.

ಭಾರತ ಮಾತೆ ಇಂದು ದುಃಖದಿಂದ ತತ್ತರಿಸಿದ್ದಾಳೆ; ಆಕೆ ತನ್ನ ಪ್ರೀತಿಯ ರಾಜಕುಮಾರನನ್ನು ಕಳೆದುಕೊಂಡಿದ್ದಾಳೆ. ಮಾನವೀಯತೆಯೇ ನೋವಿನ ಮಡುವಲ್ಲಿದೆ; ತನ್ನ ಆರಾಧಕನನ್ನು ಅದು ಕಳೆದುಕೊಂಡಿದೆ. ಶಾಂತಿಗೇ ಇಂದು ಭಂಗ ಬಂದಿದೆ; ಅದರ ರಕ್ಷಕ ಈಗ ಇನ್ನಿಲ್ಲ. ಶೋಷಿತರು- ದುರ್ಬಲರು ತಮ್ಮ ಆಶ್ರಯದಾತನನ್ನು ಕಳೆದುಕೊಂಡಿದ್ದಾರೆ. ಶ್ರೀಸಾಮಾನ್ಯ ತನ್ನ ಕಣ್ಣ ಕಾಂತಿಯ ಬೆಳಕನ್ನೇ ಕಳೆದುಕೊಂಡಿದ್ದಾನೆ. ಕಾಲನ ತೆರೆ ಸರಿದಿದೆ. ಜಗದ ರಂಗದ ಮೇರುನಟ ತನ್ನ ಅಂತಿಮ ಪಾತ್ರ ಮುಗಿಸಿ, ಶಿರಬಾಗಿ ನಮಿಸಿ ನಿರ್ಗಮಿಸಿದ್ದಾರೆ.

ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿ ತನ್ನ ಶ್ರೀರಾಮನ ಕುರಿತು, ಅಸಾಮಾನ್ಯ ಸಂಗತಿಗಳನ್ನು ಬೆಸೆದವನು ಎನ್ನುತ್ತಾರೆ. ಪಂಡಿತ್‌ ನೆಹರು ಅವರ ಬದುಕಲ್ಲೂ ನಾವು ಅಂತಹ ಮಹಾಕವಿ ಹೇಳಿದ್ದರ ಕಿರುನೋಟವನ್ನು ಕಾಣಬಹುದು. ಅವರು ಶಾಂತಿಯ ಆರಾಧಕರಾಗಿದ್ದಂತೆಯೇ, ಕ್ರಾಂತಿಯ ಪ್ರವರ್ತಕರೂ ಆಗಿದ್ದರು. ಅಹಿಂಸೆಯ ಪರಮ ಅನುಯಾಯಿಯಾಗಿದ್ದ ಅವರು, ಸ್ವಾತಂತ್ರ್ಯ ಮತ್ತು ಆತ್ಮಗೌರವದ ರಕ್ಷೆಗೆ ಬೇಕಾದ ಎಲ್ಲ ಅಸ್ತ್ರವನ್ನೂ ಪ್ರತಿಪಾದಿಸಿದ್ದರು.

ಅವರು ವ್ಯಕ್ತಿ ಸ್ವಾತಂತ್ರ್ಯದ ಪ್ರವರ್ತಕರಾದಂತೆಯೇ, ಆರ್ಥಿಕ ಸಮಾನತೆಯ ಹರಿಕಾರರೂ ಆಗಿದ್ದರು. ಯಾರೊಂದಿಗೂ ರಾಜಿಯ ವಿಷಯದಲ್ಲಿ ಹಿಂಜರಿಯದ ಅವರು, ಭಯ-ಭೀತಿಯ ಕಾರಣಕ್ಕೆ ಯಾರಿಗೂ ಮಣಿದವರಲ್ಲ. ಅಂತಹ ಆ ಅಪರೂಪದ ಅವರ ವ್ಯಕ್ತಿತ್ವಕ್ಕೆ ಪಾಕಿಸ್ತಾನ ಮತ್ತು ಚೀನಾದ ಅವರ ನೀತಿಯೇ ನಿದರ್ಶನ. ಆ ನೀತಿಯಲ್ಲಿ ಔದಾರ್ಯದಂತೆಯೇ, ನಿಷ್ಠುರ ದಿಟ್ಟತನ ಕೂಡ ಮಿಳಿತವಾಗಿತ್ತು. ಆದರೆ, ಅಂತಹ ಅವರ ಔದಾರ್ಯವನ್ನು ದೌರ್ಬಲ್ಯವೆಂದು ಭಾವಿಸಿದ್ದು ದುರದೃಷ್ಟಕರ, ಹಾಗೇ, ಅವರ ನಿಷ್ಠುರ ದಿಟ್ಟತನವನ್ನು ಕೂಡ ಮೊಂಡುತನವೆಂದು ತಪ್ಪಾಗಿ ಅರ್ಥೈಸಲಾಗಿತ್ತು.

ಚೀನಾ ಆಕ್ರಮಣದ ದಿನಗಳಲ್ಲಿ ಒಮ್ಮೆ ಅವರನ್ನು ಭೇಟಿ ಮಾಡಿದ ಒಂದು ಘಟನೆ ನೆನಪಾಗುತ್ತಿದೆ. ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದೊಂದಿಗೆ ಒಂದು ಹೊಂದಾಣಿಕೆಯ ಸೂತ್ರಕ್ಕೆ ಬರುವಂತೆ ನಮ್ಮ ಪಾಶ್ಚಿಮಾತ್ಯ ಮಿತ್ರರು ಒತ್ತಾಯಿಸುತ್ತಿದ್ದ ಸಂದರ್ಭವದು. ಕಾಶ್ಮೀರದ ವಿಷಯದಲ್ಲಿ ನಾವು ಹೊಂದಾಣಿಕೆಗೆ ಬರದೆಹೋದರೆ, ಏಕಕಾಲಕ್ಕೆ ಎರಡೂ ಕಡೆಯಿಂದ ದಾಳಿ ಎದುರಿಸಬೇಕಾಗಬಹುದು ಎಂಬ ಆ ಮಿತ್ರರ ಮಾತನ್ನು ಕೇಳಿದ ಅವರು, ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿ, ಅಗತ್ಯಬಿದ್ದರೆ ಎರಡೂ ಕಡೆ ಸೆಣೆಸಲು ನಾವು ಸಿದ್ಧ ಎಂದು ತಕ್ಕ ಪ್ರತ್ಯುತ್ತರ ನೀಡಿದ್ದರು. ಯಾವುದೇ ಬಗೆಯ ಒತ್ತಡ, ಬೆದರಿಕೆಯ ಕಾರಣಕ್ಕೆ ಯಾವ ಹೊಂದಾಣಿಕೆಗೂ ಮುಂದಾಗುವುದು ಅವರ ಜಾಯಮಾನವೇ ಆಗಿರಲಿಲ್ಲ.

ಸರ್, ಅವರು ಮಹಾದಂಡನಾಯಕರಾಗಿ ರಕ್ಷಿಸುತ್ತಿದ್ದ ಸ್ವಾತಂತ್ರ್ಯ ಎಂಬುದು ಈಗ ಅವರ ಬಳಿಕ ಅಪಾಯಕ್ಕೆ ಸಿಲುಕಿದೆ. ನಮ್ಮೆಲ್ಲ ಪ್ರಯತ್ನದ ಮೂಲಕ ನಾವು ಅದರ ಜತನ ಮಾಡಬೇಕಿದೆ. ಅವರೇ ಸ್ವತಃ ಪ್ರತಿರೂಪವಾಗಿದ್ದ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆ ಕೂಡ ಇಂದು ಆತಂಕದಲ್ಲಿವೆ. ಎಂತಹದ್ದೇ ಬೆಲೆ ತೆತ್ತಾದರೂ ನಾವು ಅವನ್ನು ಉಳಿಸಿಕೊಳ್ಳಬೇಕಿದೆ. ಅವರೇ ಸ್ಥಾಪಿಸಿದ ಮತ್ತು ಆ ಮೂಲಕ ಮಹತ್ತರ ಯಶಸ್ಸು ಸಾಧಿಸಿದ ಭಾರತೀಯ ಪ್ರಜಾಪ್ರಭುತ್ವ ಕೂಡ ಅನಿಶ್ಷಿತ ಭವಿಷ್ಯ ಎದುರಿಸುತ್ತಿದೆ. ನಮ್ಮ ಒಗ್ಗಟ್ಟು, ಶಿಸ್ತು ಮತ್ತು ಆತ್ಮ ವಿಶ್ವಾಸದ ಮೂಲಕ ನಾವು ಈ ಪ್ರಜಾಪ್ರಭುತ್ವದ ಯಶಸ್ಸನ್ನು ಸಾಧಿಸಬೇಕಿದೆ.

ಇದನ್ನೂ ಓದಿ : ಸಂಕಲನ | ಅಟಲ್‌ ಬಿಹಾರಿ ವಾಜಪೇಯಿ ಕುರಿತ ವಿಡಿಯೋ, ಫೋಟೊ, ಬರಹಗಳು

ಕಾಲನ ಓಟದಲ್ಲಿ ನಾಯಕರು ಮುಂದೆ ಸಾಗಿಹೋಗುತ್ತಾರೆ, ಅವರ ಅನುಯಾಯಿಗಳು ಉಳಿಯುತ್ತಾರೆ. ಸೂರ್ಯ ಮುಳುಗಿದ್ದಾನೆ, ತಾರೆಗಳ ಬೆಳಕಲ್ಲಿ ನಾವೀಗ ನಮ್ಮ ದಾರಿಯನ್ನು ಕಂಡುಕೊಳ್ಳಬೇಕಿದೆ. ಇದು ನಿಜಕ್ಕೂ ದೊಡ್ಡ ಪರೀಕ್ಷೆಯ ಕಾಲ. ಶಕ್ತಿಶಾಲಿ ಮತ್ತು ಸಂಪದ್ಭರಿತ ಭಾರತದ ಮಹಾನ್ ಆದರ್ಶಕ್ಕೆ ನಮ್ಮನ್ನು ನಾವು ಸಮರ್ಪಿಸಿಕೊಂಡು, ಜಾಗತಿಕ ಶಾಂತಿಗೆ ನಿರಂತರ ಕೊಡುಗೆ ನೀಡುವುದಕ್ಕಿಂತ ದೊಡ್ಡ ಗೌರವ ಆ ಮೇರುವ್ಯಕ್ತಿಗೆ ಮತ್ತೊಂದು ಇರಲಾರದು.

ದೇಶದ ಸಂಸತ್ತಿಗೆ ಆದ ನಷ್ಟವನ್ನಂತೂ ತುಂಬಲಾಗದು. ಆ ವರ್ಣರಂಜಿತ ವ್ಯಕ್ತಿತ್ವ, ಪ್ರತಿಪಕ್ಷವನ್ನೂ ಜೊತೆಜೊತೆಗೆ ಕರೆದುಕೊಂಡು ಹೋಗುವ ವಿಶ್ವಾಸದ ನಡೆ, ಆ ಪುಟಕ್ಕಿಟ್ಟ ಚಿನ್ನದಂತಹ ಸಭ್ಯತೆ, ಅಂತಹ ಮೇರುವ್ಯಕ್ತಿತ್ವವನ್ನು ನಮ್ಮ ಸದ್ಯದ ಭವಿಷ್ಯದಲ್ಲಿ ನಾವು ಮತ್ತೊಮ್ಮೆ ಕಾಣಲಾರೆವು. ಅವರ ಮೇರು ಆದರ್ಶ, ಬದ್ಧತೆ, ದೇಶದ ಬಗೆಗಿನ ಅವರ ಅಪಾರ ಪ್ರೀತಿ ಮತ್ತು ಮಣಿಸಲಾಗದ ಅವರ ಸ್ಥೈರ್ಯಗಳ ಬಗ್ಗೆ ನಮಗೆ ಅಪಾರ ಗೌರವವಿದೆ. ನಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಅವರ ಆದರ್ಶದ ವ್ಯಕ್ತಿತ್ವದ ಬಗೆಗಿನ ಅಪಾರ ಗೌರವ ಮುಕ್ಕಾಗದೆ ಉಳಿದಿದೆ.

ಈ ಮಾತುಗಳೊಂದಿಗೆ ನಾನು, ಆ ಮಹಾನ್ ಚೇತನಕ್ಕೆ ನನ್ನ ವಿನಮ್ರ ನಮನ ಸಲ್ಲಿಸುತ್ತೇನೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More