ಮಳೆರಾಯನ ಮಾಯೆಗೆ ತತ್ತರಿಸಿದ ಗೀಜಗನ ಗೂಡು; ಸಂಸಾರದ ಹಾಡು

ವಾರಗಳ ಮೋಡ-ಮಳೆಯ ಬಳಿಕ ಬುಧವಾರ ಬೆಳಗ್ಗೆ ಒಂದಿಷ್ಟು ಬಿಸಿಲು ಇಣುಕಿದ್ದೇ, ಶಿವಮೊಗ್ಗ ನಗರದ ಹೊರವಲಯದ ಗದ್ದೆಯಂಚಿನ ಗೀಜಗನ ಹಾಡಿಯಲ್ಲಿ ಗೂಡಿನ ರಿಪೇರಿ ಕೆಲಸ ಆರಂಭವಾಗಿತ್ತು. ಹೆಣ್ಣು ಜೀವಗಳು ಗೂಡಿನ ದೋಷಗಳನ್ನು ಪರೀಕ್ಷೆಸುತ್ತಿದ್ದರೆ, ಗಂಡಾಳುಗಳು ದುರಸ್ತಿ ಕೆಲಸ ಆರಂಭಿಸಿದ್ದವು

ಜೀವಕಂಟಕ ಮಹಾ ಮಳೆ ಮನುಷ್ಯರ ಬದುಕನ್ನಷ್ಟೇ ನರಕ ಮಾಡಿ ಹೋಗಿಲ್ಲ. ಗದ್ದೆಯಂಚಿನ ಮರದ ತುದಿಯಲ್ಲಿ ಮನೆಮಾಡಿಕೊಂಡಿದ್ದ ಗೀಜಗನ ಹಾಡಿಯಲ್ಲೂ ತಲ್ಲಣದ ಅಲೆ ಸೃಷ್ಟಿಸಿ ಹೋಗಿದೆ. ಎಂತಹ ಬಿರುಗಾಳಿ ಬಂದರೂ ಜಗ್ಗದ, ಕುಗ್ಗದ ಗಟ್ಟಿಮುಟ್ಟಾದ ಈ ಗೀಜಗನ ಗೂಡುಗಳೂ ಈಗ ಶಿಥಿಲವಾಗಿವೆ. ಬಿಟ್ಟೂಬಿಡದೆ ಸುರಿದ ಧೋ ಮಳೆಗೆ ಹುಲ್ಲಿನ ಎಳೆ ಲಡ್ಡು ಹಿಡಿದಿದೆ.

ವಾರಗಳ ಮೋಡ-ಮಳೆಯ ಬಳಿಕ ಬುಧವಾರ ಬೆಳಗ್ಗೆ ಒಂದಿಷ್ಟು ಬಿಸಿಲು ಇಣುಕಿದ್ದೇ, ಶಿವಮೊಗ್ಗ ನಗರದ ಹೊರವಲಯದ ಗದ್ದೆಯಂಚಿನ ಗೀಜಗನ ಹಾಡಿಯಲ್ಲಿ ಗೂಡಿನ ರಿಪೇರಿ ಕೆಲಸ ಆರಂಭವಾಗಿತ್ತು. ಹೆಣ್ಣು ಜೀವಗಳು ಗೂಡಿನ ದೋಷಗಳನ್ನು ಜಗ್ಗಿ- ಎಳೆದು ಪರೀಕ್ಷೆಗೊಳಪಡಿಸುತ್ತಿದ್ದರೆ, ಗಂಡಾಳುಗಳು ದುರಸ್ತಿ ಕೆಲಸ ಆರಂಭಿಸಿದ್ದವು. ದಾರಗಳು ಕಡಿದು, ಕೊಳೆತು, ಲಡ್ಡು ಹಿಡಿದು ಹಾಳಾದ ಕಡೆ ಹೊಸ ಹುಲ್ಲಿನ ಎಳೆ ಹಾಕಿ ನೇಯ್ದು ಸರಿಪಡಿಸತೊಡಗಿದ್ದವು. ಸರಿಪಡಿಸಿದ ಗೂಡುಗಳನ್ನು ಮತ್ತೆ ಒಂದಲ್ಲಾ ಎರಡಲ್ಲ, ಮೂರು-ನಾಲ್ಕು ಹೆಣ್ಣುಗಳು ಮತ್ತೆ ಮತ್ತೆ ಒಳಹೋಗಿ, ಹೊರಬಂದು, ಜೀಕಾಡಿ, ಜೋಲಾಡಿ ಪರೀಕ್ಷೆ ಮಾಡಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಂಡವು.

ಗೀಜಗಗಳ ವಿಶೇಷವೆಂದರೆ; ಗಂಡು ಹಕ್ಕಿಗಳೇ ಗೂಡು ಕಟ್ಟಬೇಕು. ಹೆಣ್ಣು ಹಕ್ಕಿಯನ್ನು ಸೆಳೆಯುವ ಉಪಾಯವೇ ಅಂದದ ಮತ್ತು ಅಷ್ಟೇ ಗಟ್ಟಿಮುಟ್ಟಾದ ಗೂಡು ಹೆಣೆಯುವುದು. ಗೂಡು ಕಟ್ಟುವ ಪ್ರತಿ ಹಂತದಲ್ಲೂ ಗಂಡು ಹಕ್ಕಿ, ಹೆಣ್ಣು ಹಕ್ಕಿಗಳನ್ನು ಕೂಗಿ ಕರೆದು, ಗೂಡನ್ನು ಪ್ರದರ್ಶಿಸುತ್ತವೆ. ಹೆಣ್ಣು ಹಕ್ಕಿಗಳು ಆ ಗೂಡಿನ ಅಂದವನ್ನಷ್ಟೇ ಅಲ್ಲದೆ, ಗಟ್ಟಿತನವನ್ನೂ, ಬಾಳಿಕೆಯನ್ನೂ, ಹಾವು, ಜನ, ಇತರ ಪ್ರಾಣಿಪಕ್ಷಿಗಳಿಂದ ಆ ಗೂಡು ಎಷ್ಟು ಸುರಕ್ಷಿತ ಎಂಬುದನ್ನು ಪರೀಕ್ಷೆಗೊಡ್ಡುತ್ತವೆ. ಸಾಮಾನ್ಯವಾಗಿ ಹೊಳೆ-ಹಳ್ಳ-ಕೆರೆಗಳಂಚಿನ ಮುಳ್ಳಿನ ಅಥವಾ ನಾಜೂಕಾದ ಎತ್ತರದ ಗಿಡ-ಮರಗಳ ತುತ್ತತುದಿಯ ರೆಂಬೆಗಳಿಗೆ ಗೂಡು ಕಟ್ಟುವ ಮೂಲಕ ಹಾವು ಮುಂತಾದ ಮೊಟ್ಟಬಾಕ ಜೀವಿಗಳಿಂದ ಗೂಡನ್ನು ಸುರಕ್ಷಿತವಾಗಿಸುವುದು ಗೀಜಗಗಳ ಜಾಣ್ಮೆ. ಅಲ್ಲದೆ, ಮುಂಗಾರು ಹಂಗಾಮಿನಲ್ಲಿ ಮಳೆ ಮಾರುತದ ದಿಕ್ಕಿಗೆ ವಿರುದ್ಧವಾಗಿ ಪೂರ್ವದ ಕಡೆಗೆ ಗೂಡು ಕಟ್ಟುವ ಮೂಲಕ ಮಳೆಯಿಂದ ಗೂಡನ್ನು ಕೆಲಮಟ್ಟಿಗಾದರೂ ಬಚಾವು ಮಾಡುವ ಬುದ್ಧಿವಂತಿಕೆ ತೋರುತ್ತವೆ ಕೂಡ!

ಸಾಮಾನ್ಯವಾಗಿ ಗುಂಪಾಗಿ ವಾಸಿಸುವ ಗೀಜಗಗಳು, ಒಂದು ಗುಂಪಿನಲ್ಲಿ ೧೫-೨೦ ಹಕ್ಕಿಗಳಿರುತ್ತವೆ. ಗುಂಪಿನ ಗಂಡು ಹಕ್ಕಿಗಳು ಆರು ತಿಂಗಳಿಗೊಮ್ಮೆ ಗೂಡು ಕಟ್ಟಿ ಹೆಣ್ಣನ್ನು ಸೆಳೆದು, ಸಂಸಾರಕ್ಕೆ ಚಾಲನೆ ನೀಡುತ್ತವೆ. ಗೂಡು ಕಟ್ಟುವ ಗಂಡಿನ ಕೌಶಲ ಮತ್ತು ಜಾಣ್ಮೆಯ ಮೇಲೆ ಹೆಣ್ಣು ಒಲಿಯುತ್ತವೆ. ಹೆಣ್ಣು ಹಕ್ಕಿ ನಡೆಸುವ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಆ ಗೂಡು ಪೂರ್ಣವಾಗುತ್ತದೆ. ಗೂಡು ಪೂರ್ಣವಾಗುವುದರೊಂದಿಗೆ ಗಂಡಿಗೆ ತಕ್ಕ ಸಂಗಾತಿಯೂ ಸಿಗುತ್ತಾಳೆ. ಪ್ರೀತಿ, ಮಿಲನ, ಮೊಟ್ಟೆ, ಮರಿ, ಸಂಸಾರಕ್ಕೆಲ್ಲಾ ಸುರಕ್ಷಿತ ಮತ್ತು ಅಂದದ ಗೂಡೇ ಸೋಪಾನವಾಗುತ್ತದೆ. ಒಂದು ವೇಳೆ ಗೂಡು ಹೆಣ್ಣಿನ ಮನ ಗೆಲ್ಲದೇ ಹೋದರೆ, ಗಂಡು ಆ ಗೂಡನ್ನು ಅರ್ಧಕ್ಕೇ ಬಿಟ್ಟು ಮತ್ತೊಂದು ಗೂಡು ಕಟ್ಟುತ್ತದೆ, ಅದೂ ಒಪ್ಪಿಗೆಯಾಗದೇ ಇದ್ದರೆ, ಮಗದೊಂದು... ಹೀಗೆ ಹೆಣ್ಣನ್ನು ಮೆಚ್ಚಿಸುವ ಗಂಡಿನ ಸಾಹಸ ಮುಂದುವರಿಯುತ್ತಲೇ ಹೋಗುತ್ತದೆ. ಹಾಗೆ ಗಂಡಿನ ವೈಫಲ್ಯಗಳ ಕುರುಹಾಗಿ ಉಳಿಯುವವೇ ಅರ್ಧ ಕಟ್ಟಿದ ಜೋಕಾಲಿಯಂತಹ ಗೂಡುಗಳು!

ಒಂದು ಹೆಣ್ಣಿನ ಒಲವು ಪಡೆದು ಗೂಡು ಕಟ್ಟಿ, ಅದರೊಂದಿಗೆ ಪ್ರಣಯದಾಟ ನಡೆಸುವ ಗಂಡು, ಹೆಣ್ಣು ಮೊಟ್ಟೆ ಇಡಲು ಶುರುಮಾಡುತ್ತಲೇ, ಮತ್ತೊಂದು ಗೂಡು ಕಟ್ಟತೊಡಗುತ್ತದೆ, ಮತ್ತೊಂದು ಹೆಣ್ಣಿನ ಪ್ರೀತಿಗೆ, ಅದರೊಂದಿಗಿನ ಪ್ರಣಯಕ್ಕೆ ಆ ಹೊಸ ಗೂಡು ಸೋಪಾನವಾಗುತ್ತದೆ. ಒಂದು ಹಂಗಾಮಿನಲ್ಲಿ ಗಂಡು ಹಾಗೇ ಮೂರ್ನಾಲ್ಕು ಹೆಣ್ಣುಗಳೊಂದಿಗೆ ಸಂಸಾರ ನಡೆಸುತ್ತದೆ.

ಗೂಡಿನ ಗಟ್ಟಿತನ, ಸುರಕ್ಷತೆ ಮತ್ತು ತಾಜಾತನಕ್ಕೆ ಹೆಚ್ಚು ಆದ್ಯತೆ ನೀಡುವ ಹೆಣ್ಣುಗಳು, ಆ ಮಾನದಂಡಗಳ ಮೇಲೆಯೇ ಗೂಡಿಗೆ ಗ್ರೀನ್ ಸಿಗ್ನನ್ ಕೊಡುತ್ತವೆ. ಗೂಡಿನ ಗ್ರೀನ್ ಸಿಗ್ನಲ್ ಸಿಕ್ಕಿ, ಸಂಗಾತಿ ಜೊತೆಯಾಗುವುದು ಖಾತ್ರಿದಾರೆ ಮಾತ್ರ ಗಂಡು ಗೂಡನ್ನು ಮುಂದುವರಿಸುತ್ತದೆ. ಇಲ್ಲವಾದರೆ, ಬೇರೆ ಬೇರೆ ಹೆಣ್ಣು ಹಕ್ಕಿಗಳನ್ನು ಸೆಳೆಯುತ್ತದೆ. ಯಾವುದಕ್ಕೂ ಒಪ್ಪಿಯಾಗದೇ ಇದ್ದರೆ, ಆ ಗೂಡನ್ನು ಅರ್ಧಕ್ಕೇ ಬಿಟ್ಟು ಮತ್ತೊಂದು ಗೂಡು ಕಟ್ಟತೊಡಗುತ್ತದೆ. ಜೋಕಾಲಿಯ ಹಂತದಿಂದ ಗೂಡು ಮುಂದುವರಿಯಿತೆಂದರೆ, ಆ ಹಕ್ಕಿಗೆ ಸಂಗಾತಿ ಖಾತ್ರಿಯಾಗಿದ್ದಾಳೆ ಎಂದರ್ಥ!

ಗೂಡಿನ ವಿಷಯದಲ್ಲಿ ಒಮ್ಮತ ಸಿಕ್ಕು ಸಂಸಾರ ಆರಂಭವಾಗುತ್ತಲೇ, ಹೆಣ್ಣು ಹಕ್ಕಿ ಕೂಡ ಗೂಡುಕಟ್ಟಲು ಗಂಡಿಗೆ ನೆರವಾಗುತ್ತದೆ. ಆದರೆ, ಅದು ಗೂಡಿನ ಒಳ ವಿನ್ಯಾಸವನ್ನಷ್ಟೇ ನೋಡಿಕೊಳ್ಳುತ್ತದೆ ವಿನಃ ಹೊರ ವಿನ್ಯಾಸ, ಸುರಕ್ಷತೆಯ ವಿಷಯದಲ್ಲಿ ತಲೆಹಾಕುವುದೇ ಇಲ್ಲ! ಒಳಗಿನ ಅಂದಚಂದದ ಜೊತೆ ಮೊಟ್ಟೆ ಮರಿಗೆ ಮೆತ್ತನೆ ಹಾಸಿಗೆ, ಒಳಬೆಳಕಿಗೆ ಹಸಿಮಣ್ಣಿನ ಅಂಟು ಅಂಟಿಸಿ, ಅದಕ್ಕೆ ಮಿಂಚುಹುಳು ತಂದು ಅಂಟಿಸುವುದು,.. ಹೀಗೆ ಒಳಾಂಗಣ ವಿನ್ಯಾಸ, ಸ್ವಚ್ಛತೆಯ ಹೊಣೆ ಮನೆಯ ಯಜಮಾನತಿಯದ್ದು!

ಇದನ್ನೂ ಓದಿ : ವಿಡಿಯೋ ಸ್ಟೋರಿ | ಮಳೆ ಬಾರದಿದ್ದರೂ ಪ್ರವಾಹ, ನಡುಗಡ್ಡೆಯಂತಾದ ಸಿಂಗಟಾಲೂರು

ಒಂದು ವೇಳೆ, ಈ ಬಾರಿಯಂತೆ ಮಾಯದ ಮಳೆ-ಗಾಳಿ ಬಂದರೆ ಮಾತ್ರ ಗಂಡಿಗೆ ಮತ್ತೆ ಕೆಲಸ ತಪ್ಪಿದ್ದಲ್ಲ. ಹೀಗೆ ಮಹಾಮಳೆ, ಬಿರುಗಾಳಿಗಳು ಬಂದು ಕಷ್ಟಪಟ್ಟು ಕಟ್ಟಿದ ಗೂಡನ್ನೂ ಹಾಳು ಮಾಡಿದರೆ, ಒಳಗಿನ ಮೊಟ್ಟೆ-ಮರಿಗಳಿಗೆ ಅಪಾಯವಾಗದಂತೆ ಮತ್ತೆ ಜತನ ಮಾಡುವ, ದುರಸ್ತಿ ಮಾಡುವ ಹೊಣೆ ಕೂಡ ಗಂಡುಗಳದ್ದೇ! ಹಾಗಾಗಿ, ಈಗ ಮಳೆ ನಿಂತು ತುಸು ಬಿಸಿಲು ಕಣ್ಣುಬಿಡುತ್ತಲೇ ಕೊಡಗಿನ ಜನರಿಗಷ್ಟೇ ಅಲ್ಲ, ಗೀಜನ ಗೂಡಿನಲ್ಲಿ ಒಂದು ನಿರಾಳ, ಮತ್ತೆ ಬದುಕು ಕಟ್ಟಿಕೊಳ್ಳುವ ಜೀವನಾಸಕ್ತಿ ಪುಟಿದೆದ್ದಿದೆ! ಜೀವ ಎಂದಿನಂತೆ.

(ಚಿತ್ರಗಳು: ಶಶಿ ಸಂಪಳ್ಳಿ)

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More