ಬಕ್ರೀದ್ ವಿಶೇಷ | ಸುಂಟಿಕೊಪ್ಪ ಮದರಸದಲ್ಲಿ ಕಂಡದ್ದು ಅಪ್ಪಟ ಮನುಷ್ಯತ್ವ

ಕೊಡಗಿನಲ್ಲಿ ಪ್ರಕೃತಿ ಮುನಿದು ಮುಗಿಬಿದ್ದಿರುವ ಸಂದರ್ಭದಲ್ಲಿಯೂ ಕೆಲವು ರಾಜಕಾರಣಿಗಳು ಕ್ಷುಲ್ಲಕತನವನ್ನು ಮೆರೆಯುತ್ತಿದ್ದಾರೆ. ಆದರೆ, ಸಾಮಾನ್ಯ ಜನರು ಜಾತಿ, ಧರ್ಮಗಳ ‘ಸೃಷ್ಟಿತ’ ಇತಿಮಿತಿ ಮೀರಿ ಅಪ್ಪಟ ಮನುಷ್ಯರಂತೆ ನಡೆದುಕೊಳ್ಳುತ್ತಿರುವುದಕ್ಕೆ ಇಲ್ಲಿದೆ ಒಂದು ನಿದರ್ಶನ

ಪ್ರಕೃತಿ ವಿಕೋಪ ಕೊಡಗಿನಲ್ಲಿ ಮನುಷ್ಯರನ್ನು; ಮನುಷ್ಯತ್ವವನ್ನು ಬೆಸಿದಿದೆ. ಜಾತಿ, ಧರ್ಮ, ಆಸ್ತಿ ಅಂತಸ್ತು ಯಾವುದೂ ಈಗಿಲ್ಲಿ ಮುಖ್ಯವಲ್ಲ. ಮತೀಯ ಸಂಘರ್ಷ ಹುಟ್ಟುಹಾಕಿ, ಮತ ಧರ್ಮಗಳನ್ನು ಎತ್ತಿಕಟ್ಟಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರಿಗೇನೂ ಈ ಜಿಲ್ಲೆಯಲ್ಲಿ ಕಡಿಮೆಯಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇಂಥ ಹಿತಾಸಕ್ತಿವುಳ್ಳವರು ರಾಜಕೀಯವಾಗಿ ಪ್ರಬಲರಾಗಿ, ಜಿಲ್ಲೆಯ ಸಾಮಾಜಿಕ ವಾತಾವರಣವನ್ನು ಪ್ರಕ್ಷುಬ್ಧಗೊಳಿಸುವುದೂ ಹೆಚ್ಚಿದೆ. ಪ್ರಕೃತಿಯೇ ಮುನಿದು ಮುಗಿಬಿದ್ದಿರುವ ಈ ಸಂದರ್ಭದಲ್ಲಿ ಕೂಡ ಕೆಲವು ರಾಜಕಾರಣಿಗಳು; ಸಂಘಟನೆಗಳು ಕ್ಲುಲ್ಲಕ ರಾಜಕೀಯವನ್ನು ಮೆರೆಯುವುದು ನಡೆದಿದೆಯಾದರೂ,ಇಲ್ಲಿನ ಸಾಮಾನ್ಯ ಜನರು ಇಂಥ ಹಿತಾಸಕ್ತರನ್ನು ಮತ್ತು ಜಾತಿ,ಧರ್ಮಗಳ ‘ಸೃಷ್ಟಿತ ಇತಿಮಿತಿ’ಗಳನ್ನು ಆಚೆ ತಳ್ಳಿ, ಮನುಷ್ಯತ್ವವನ್ನು ಮೆರೆಯುತ್ತಿದ್ದಾರೆ ಮತ್ತು ‘ಅಪ್ಪಟ ಮನುಷ್ಯ’ರಂತೆ ನಡೆದುಕೊಳ್ಳುತ್ತಿದ್ದಾರೆ.

ಮೈಸೂರು- ಮಡಿಕೇರಿ ಹೆದ್ದಾರಿಯಲ್ಲಿರುವ ಸುಂಟಿಕೊಪ್ಪದಲ್ಲಿ ಮೂರು ನಿರಾಶ್ರಿತರ ಶಿಬಿರಗಳಿವೆ. ಖತೀಜಾ ಉಮ್ಮಾ ಮದ್ರಸಾ ಹಾಗೂ ಅರೆಬಿಕ್‌ ಶಾಲೆಯ ಆವರಣದಲ್ಲಿ ಮದ್ರಸಾ ವತಿಯಿಂದ ತೆರೆದಿರುವ ಶಿಬಿರದಲ್ಲಿ ಎಲ್ಲಾ ಜಾತಿ, ಧರ್ಮ ಮತ್ತು ವರ್ಗದ ಐದು ನೂರಕ್ಕೂ ಹೆಚ್ಚು ನಿರಾಶ್ರಿತರಿದ್ದಾರೆ. ಇದೇ ಪಟ್ಟಣದ ರಾಮಮಂದಿರ ಮತ್ತು ಚರ್ಚ್ ಆವರಣದಲ್ಲಿ ತೆರೆದಿರುವ ಮತ್ತೆರಡು ಶಿಬಿರಗಳಲ್ಲಿ ಇನ್ನೂರು ಮತ್ತು ೪೦೦ ನಿರಾಶ್ರಿತರಿದ್ದಾರೆ. ಅಲ್ಲದೆ, ಮಸೀದಿ, ಮಂದಿರ ಮತ್ತು ಚರ್ಚ್‌ಗೆ ಸಂಬಂಧಿಸಿದ ಯುವಪಡೆ ಈ ಸುತ್ತಲಿನ ಮಳೆ ವಿಕೋಪ ಪೀಡಿತ ಮಕ್ಕಂದೂರು, ಹಾಲೇರಿ, ಮಕ್ಕೋಡ್ಲು, ಕಾಂಡನಕೊಲ್ಲಿ, ಹಟ್ಟಿಹೊಳೆ ಮತ್ತಿತರ ಪ್ರದೇಶ ಗಳಲ್ಲಿ ಓಡಾಡಿ ಅಪಾಯ ಮತ್ತು ಆತಂಕದಲ್ಲಿದ್ದ ಹಲವರನ್ನು ರಕ್ಷಿಸಿ, ಈ ಶಿಬಿರಗಳಿಗೆ ಕರೆ ತಂದಿದೆ.

ಮದರಸಾದಲ್ಲಿ ಆಶ್ರಯ ಪಡೆದಿರುವ ಬಹುತೇಕರು ಬಡವರು ಮತ್ತು ಕಾಫಿತೋಟಗಳ ಲೈನ್‌ ಮನೆಗಳಲ್ಲಿ ಇದ್ದವರು. ಶುಕ್ರವಾರ ಮುಂಜಾನೆ ನಡೆದ ವ್ಯಾಪಕ ಭೂ ಕುಸಿತದಿಂದ ಭಯಭೀತರಾಗಿ ಉಟ್ಟ ಬಟ್ಟೆಯಲ್ಲಿ ಮನೆ ತೊರೆದು ನಿರಾಶ್ರಿತರ ಶಿಬಿರಗಳಿಗೆ ಬಂದಿದ್ದಾರೆ ಮತ್ತು ಕೆಲವರನ್ನು ರಕ್ಷಿಸಿ ಕರೆತರಲಾಗಿದೆ. ತಮ್ಮ ಮನೆ, ಜಮೀನುಗಳ ಸ್ಥಿತಿಗತಿ ಏನಾಗಿರಬಹುದು; ಕುಸಿದು ಬಿದ್ದಿರುವ ರಸ್ತೆಗಳು ದುರಸ್ತಿಯಾಗಿ, ತಾವೆಲ್ಲ ಮನೆಯ ಮುಖನೋಡುವುದು ಯಾವಾಗ, ಮಕ್ಕಳ ಕಲಿಕೆಯ ಕತೆ ಏನು ಎನ್ನುವುದು ಇಲ್ಲಿದ್ದ ಬಹುತೇಕರ ಚಿಂತೆ. “ ಹೀಗೆ ಭಯ, ಆತಂಕದಲ್ಲಿ ಬಂದವರಿಗೆ ಮೊದಲು ಎರಡು ದಿನ ಸ್ಥಳೀಯರೇ ಖರ್ಚು ವೆಚ್ಚ ಭರಿಸಿ ಊಟೋಪಚಾರದ ವ್ಯವಸ್ಥೆ ಮಾಡಿದೆವು. ಈಗ ಮೈಸೂರು, ಮಂಡ್ಯ, ಬೆಂಗಳೂರು ಸಹಿತ ರಾಜ್ಯದ ಹಲವೆಡೆಯಿಂದ ಆಹಾರ ಧಾನ್ಯ, ಬಟ್ಟೆ, ಔಷಧ, ನೀರು ಸಹಿತ ಹಲವು ಬಗೆಯ ಅಗತ್ಯ ವಸ್ತುಗಳ ಮಹಾಪೂರವೇ ಹರಿದು ಬರುತ್ತಿದೆ,’’ ಎನ್ನುತ್ತಾರೆ ಮದ್ರಸಾ ಶಿಬಿರದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿರುವ ಸುಂಟಿಕೊಪ್ಪದ ಇಲ್ಯಾಸ್.

ವಿಶೇಷ ಏನೆಂದರೆ, ಈ ಬುಧವಾರ (ಆ.೨೨) ಮುಸ್ಲಿಂ ಧರ್ಮೀಯರ ಪಾಲಿನ ದೊಡ್ಡ ಹಬ್ಬ ಬಕ್ರೀದ್. ಸುತ್ತಲಿನ ಜನ ಸಂಕಷ್ಟದಲ್ಲಿರುವಾಗ ಎಂದಿನ ಆಡಂಬರ ಬೇಡವೆಂದು, ಸರಳವಾಗಿ ಹಬ್ಬ ಆಚರಿಸಲು ನಿರ್ಧರಿಸಿದ್ದಾರೆ. “ಬುಧವಾರ ಬೆಳಗ್ಗೆ ಮಸೀದಿಯಲ್ಲಿ ನಮಾಜು ಮಾಡಿದ ನಂತರ ಮದರಸಾದಲ್ಲಿ ಆಶ್ರಯಪಡೆದಿರುವ ನಿರಾಶ್ರಿತರ ಜೊತೆ ಕುಳಿತು ಊಟ ಮಾಡುತ್ತೇವೆ. ಮಾತ್ರವಲ್ಲ ರಾಮಮಂದಿರ ಮತ್ತು ಚರ್ಚ್ ನಲ್ಲಿರುವ ನಿರಾಶ್ರಿತರಿಗೂ ಬುಧವಾರ ಮಧ್ಯಾಹ್ನ ಮದರಸಾದಿಂದಲೇ ಹಬ್ಬದ ಊಟ ಕಳುಹಿಸುತ್ತೇವೆ,’’ ಎಂದು ಖತೀಜಾ ಉಮ್ಮಾ ಮದ್ರಸಾದ ಸಿ.ಎಂ.ಹಮೀದ್ ಮೌಲವಿ ಹೇಳಿದರು. “ನಾವಿಲ್ಲಿ ಯಾವುದೇ ಜಾತಿ, ಧರ್ಮವನ್ನು ನೋಡುತ್ತಿಲ್ಲ. ಮನುಷ್ಯರು ಮತ್ತು ಮಾನವೀಯತೆಯ ಸೇವೆ ಮಾಡುತ್ತಿದ್ದೇವೆ. ಮನೆ, ಆಸ್ತಿ ಸಹಿತ ಎಲ್ಲವನ್ನೂ ಕಳೆದುಕೊಂಡ ಜನರಿಗೆ ಆಶ್ರಯ ನೀಡಲೆಂದು ಮದ್ರಸಾ ಕಾಲೇಜಿಗೆ ಹತ್ತು ದಿನ ರಜೆ ಘೋಷಿಸಿದ್ದೇವೆ. ಇವರಿಗೆ ಪರ್ಯಾಯ ವ್ಯವಸ್ಥೆ ಆಗುವವರೆಗೆ ಆಶ್ರಯ ನೀಡುತ್ತೇವೆ,’’ಎಂದರು ಮೌಲವಿ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಮಳೆ ಆರ್ಭಟಕ್ಕೆ ಕಂಗಾಲಾದ ಕೊಡಗು, ದ್ವೀಪಗಳಾದ ತಗ್ಗು ಪ್ರದೇಶ

ಸುಂಟಿಕೊಪ್ಪದಲ್ಲಿ ಮಾತ್ರವಲ್ಲ, ಕೊಡಗಿನ ಅನೇಕ ಕಡೆಗಳಲ್ಲೀಗ ಈ ಬಗೆಯ ‘ಅಪ್ಪಟ’ ಮನುಷ್ಯತ್ವ ಕೆಲಸ ಮಾಡುತ್ತಿದೆ. ಸ್ಥಳೀಯರು ಮತ್ತು ಎಲ್ಲೆಲ್ಲಿಂದಲೋ ಬಂದಿರುವ ಸ್ವಯಂ ಸೇವಕರು,ಸುರಿಯುವ ಮಳೆಯಲ್ಲೂ ನೆರವಿನ ಹಸ್ತ ಚಾಚುತ್ತಿದ್ದಾರೆ; ಪ್ರಕೃತಿಯ ಮುನಿಸಿಗೆ ಗುರಿಯಾಗಿ ಘಾಸಿಗೊಂಡವರಿಗೆ ಜಾತಿ,ಧರ್ಮವನ್ನು ಮೀರಿದ ಮನುಷ್ಯ ಸಹಜ ಸ್ಪಂದನೆ ನೀಡಿ, ಸಾಂತ್ವನ ತುಂಬುತ್ತಿದ್ದಾರೆ. ಈ ನೆಲೆಯಲ್ಲಿ ನೋಡಿದರೆ, ಯಾವತ್ತೂ ಒಡೆದಾಳುವ ರಾಜಕಾರಣಿಗಳು; ಹಿತಾಸಕ್ತ ಜನರು ಇಂಥವರೆದುರು ಕುಬ್ಜರಂತೆ ಕಾಣುತ್ತಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More