ವಿಡಿಯೋ | ಪ್ರವಾಹ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಒಬ್ಬೊಬ್ಬರದ್ದೂ ಒಂದು ಕತೆ

ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಪ್ರಸೂತಿ ತಜ್ಞೆಯಾಗಿ ಕೆಲಸ ನಿರ್ವಹಿಸುತ್ತಿರುವ ಡಾ.ಶಾಂತಲಾ, ಕೊಡಗಿನ ಪ್ರವಾಹ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ತೆರಳಿದ್ದಾರೆ. ಪರಿಹಾರ ಕೇಂದ್ರದಲ್ಲಿ ಕಂಡ ವಿಷಯಗಳನ್ನು ‘ದಿ ಸ್ಟೇಟ್’ ಜೊತೆ ಹಂಚಿಕೊಂಡಿದ್ದಾರೆ 

ಬೆಂಗಳೂರಿನ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞೆಯಾಗಿರುವ ನಾನು ನಗರದ ಜಂಜಾಟದಿಂದ ಸ್ವಲ್ಪ ದಿನ ರಿಲ್ಯಾಕ್ಸ್ ಆಗಬೇಕು ಎಂದು ಅನಿಸಿದಾಗ ಹೋಗುತ್ತಿದ್ದುದು ಕೊಡಗಿಗೆ. ದಕ್ಷಿಣದ ಕಾಶ್ಮೀರ ಎಂದೇ ಖ್ಯಾತಿ ಪಡೆದ ಕೊಡಗಿನ ಪ್ರಕೃತಿ ಸೌಂದರ್ಯ ನನ್ನಲ್ಲಿ ಆಹ್ಲಾದತೆಯನ್ನು ತುಂಬುತ್ತಿತ್ತು. ಅಲ್ಲಿನ ಜನರ ಪ್ರೀತಿಯ ಆತಿಥ್ಯವೂ ಅಷ್ಟೇ ಅಪ್ಯಾಯಮಾನ. ಆದರೆ, ಪ್ರಕೃತಿಯ ಮುನಿಸಿಗೆ ತುತ್ತಾಗಿ ಕೊಡಗಿನ ಜನ ಸಂಕಷ್ಟದಲ್ಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ, ನನ್ನ ಕೈಲಾದ ನೆರವು ನೀಡೋಣ ಎಂದು ಇಲ್ಲಿಗೆ ಬಂದೆ.

ಸರ್ಕಾರ ನೀಡುವ ಗೂಗಲ್ ಶೀಟ್ ಫಾರಂ ಭರ್ತಿ ಮಾಡಿದ ನಾನು, ಕೊಡಗಿಗೆ ಬಂದಿಳಿದಾಗ ನನ್ನನ್ನು ಸ್ವಾಗತಿಸಿದ್ದು ಕುಸಿದುಬಿದ್ದ ಗುಡ್ಡಗಳು, ಬಾಯ್ತೆರೆದ ಭೂಮಿ, ಮುರಿದುಬಿದ್ದಿರುವ ಮನೆಗಳು, ನೆಲಕ್ಕುರುಳಿರುವ ವಿದ್ಯುತ್ ಕಂಬಗಳು, ಮುಳುಗಡೆಯಾಗಿರುವ ವಸತಿ ಪ್ರದೇಶಗಳು. ಒಂದೇ ಊರಲ್ಲಿದ್ದರೂ, ತಮ್ಮವರನ್ನು ಸಂಪರ್ಕಿಸಲು ಸಾಧ್ಯವಾಗದೆ ಕಂಗಾಲಾಗಿರುವ ಅಸಹಾಯಕ ಜನರನ್ನು ಮಾತನಾಡಿಸಿದಾಗ ಮನಸ್ಸಿಗೆ ತುಂಬಾ ಬೇಸರವಾಗಿದೆ.

ಜೆ ಸಂಗಪ್ಪ ಅನುಭವ ಕೇಂದ್ರದಲ್ಲಿರುವ ಪರಿಹಾರ ಕೇಂದ್ರ ತಲುಪಿದ ನನ್ನ ಮನ ಕರಗಿಸಿದ್ದು ಜನರ ಮಾನವೀಯತೆ. ಪ್ರವಾಹ ಸಂತ್ರಸ್ತರಿಗಾಗಿ ತೆರೆಯಲಾಗಿರುವ ಈ ಕೇಂದ್ರದಲ್ಲಿ ಜಾತಿ, ಧರ್ಮದ ಹಂಗಿಲ್ಲ. ನೋವಿನಲ್ಲೂ ನಗುವ ಪ್ರಯತ್ನ ಮಾಡುತ್ತಿರುವ ಇಲ್ಲಿ ನೆಲೆಸಿರುವ ಒಬ್ಬೊಬ್ಬರದ್ದೂ ಒಂದೊಂದು ಕತೆ.

ಪ್ರಾಣ ಉಳಿದರೆ ಸಾಕೆಂದು ಉಟ್ಟ ಬಟ್ಟೆಯಲ್ಲಿ ಬಂದವರ ಕಣ್ಣಲ್ಲಿ ಇದೀಗ ಮುಂದೇನು ಎನ್ನುವ ಪ್ರಶ್ನೆ ಕಾಣುತ್ತಿದೆ. ಅವರು ಒಂದು ಸ್ಥಳದಲ್ಲಿ ನೆಲೆಸಿದ್ದರು ಎಂದು ಸಾಬೀತು ಮಾಡಲು ಇದ್ದ ದಾಖಲೆಗಳೆಲ್ಲ ಮಣ್ಣಾಗಿವೆ. ಸಾಲ ಮಾಡಿ ಕಟ್ಟಿದ ಮನೆ, ಮಾಡಿದ ಕೃಷಿ ಎಲ್ಲವನ್ನೂ ಪ್ರಕೃತಿ ನುಂಗಿಹಾಕಿದೆ. ಕೈಯಲ್ಲಿ ಬಿಡಿಗಾಸಿಲ್ಲ, ದುಡಿಯಲು ಜಮೀನೇ ಇಲ್ಲ. ವರ್ಷಗಳಿಂದ ಮನೆಯ ಪಕ್ಕದಲ್ಲಿಯೇ ಶಾಂತವಾಗಿ ಹರಿಯುತ್ತಿದ್ದ ನದಿ, ನೋಡನೋಡುತ್ತಿದ್ದಂತೇ ರೊಚ್ಚಿಗೆದ್ದು ಎಲ್ಲವನ್ನೂ ಸರ್ವನಾಶ ಮಾಡಿದೆ. ಕಣ್ಣೆದುರೇ ಎಲ್ಲವೂ ನಾಶವಾದ ದೃಶ್ಯ ಇನ್ನೂ ಹಸಿರಾಗೇ ಇದೆ ಎನ್ನುತ್ತಾ ಕಣ್ಣೀರಿಡುತ್ತಾರೆ ಇಲ್ಲಿ ಆಶ್ರಯ ಪಡೆದಿರುವ ವ್ಯಕ್ತಿಯೊಬ್ಬರು.

ಪರಿಹಾರ ಕೇಂದ್ರದಲ್ಲಿರುವ 60 ದಾಟಿದ ಆ ವೃದ್ಧ ದಂಪತಿಗಳ ಕತೆ ಕೇಳಿದಾಗ ನನಗೆ ದುಃಖ ತಡೆಯಲಾಗಲಿಲ್ಲ. ಜಮೀನನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿಗಳ ಮುಖದಲ್ಲಿ ಆತಂಕ, ದುಃಖ ಮಡುಗಟ್ಟಿತ್ತು. “ಕೊಡಗಿನಲ್ಲಿ ಜೋರಾಗಿ ಮಳೆ ಸುರಿಯುತ್ತದೆ ಎಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ, ಕೆಲ ದಿನಗಳ ಕಾಲ ಅಕ್ಕನ ಮಗಳ ಮನೆಗೆ ಹೋಗಿದ್ದೆವು. ವಾಪಸು ಬಂದು ನೋಡಿದರೆ ಎಲ್ಲೆಡೆ ಪ್ರವಾಹ. ಮನೆ ಹೇಗಿದೆ, ಸಾಕುಪ್ರಾಣಿಗಳು ಹೇಗಿವೆ ಎಂಬುದೇ ತಿಳಿಯುತ್ತಿಲ್ಲ. ನಾವು ಇಲ್ಲಿ ವಾಸವಿದ್ದೆವು ಎನ್ನುವುದಕ್ಕೆ ಸಾಕ್ಷಿಯೇ ಉಳಿದಿಲ್ಲ. ನಾವು ನೆಲೆಸಿದ ಜಾಗವನ್ನು ತೋರಿಸಲು ನಮ್ಮಲ್ಲಿ ದಾಖಲೆಗಳೇ ಇಲ್ಲ. ಜಮೀನಿನ ದಾಖಲೆ, ಆಧಾರ್ ಕಾರ್ಡ್ ಯಾವುದೂ ಇಲ್ಲ. ಮುಂದೇನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ,” ಎನ್ನುತ್ತಾ ದುಃಖ ತೋಡಿಕೊಂಡರು ದಂಪತಿ.

ಪರಿಹಾರ ಕೇಂದ್ರದಲ್ಲಿರುವ ಹಿರಿಯರದ್ದೇ ಒಂದು ಕತೆಯಾದರೆ, ಯುವತಿಯರು, ಮಧ್ಯವಯಸ್ಕರದ್ದು ಇನ್ನೊಂದು ಆತಂಕ. ಇವರ ನೋವಿಗೆ ಕಿವಿಯಾಗಲು ಸ್ಥಳೀಯ ಸಂಘಸಂಸ್ಥೆಗಳು, ಚರ್ಚ್‌ಗಳು ನೆರವಾಗುತ್ತಿವೆ. ಮೆಡಿಟೇಷನ್ ತರಬೇತಿಯನ್ನೂ ನೀಡಲಾಗುತ್ತಿದೆ. ಇನ್ನೊಂದೆಡೆ, ತಮ್ಮ ಪರಿಸ್ಥಿತಿಯ ಅರಿವಿಲ್ಲದೆ ತಮ್ಮದೇ ಲೋಕದಲ್ಲಿ ತೇಲುತ್ತಿರುವ ಮುಗ್ಧ ಮಕ್ಕಳು ಆಟ-ಪಾಠದಲ್ಲಿ ತೊಡಗಿದ್ದಾರೆ. ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ಥ ಯುವತಿಯರು ಮಕ್ಕಳಿಗೆ ಪಾಠ ಹೇಳಿಕೊಡಲು ಪ್ರಯತ್ನಿಸುತ್ತಿದ್ದಾರೆ. ಮತ್ತೆ ಕೆಲವರು ಮಕ್ಕಳಿಗಾಗಿ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ, ಮನರಂಜನೆ ನೀಡುವ ಪ್ರಯತ್ನದಲ್ಲಿದ್ದಾರೆ.

“ಬದುಕೇ ಹೋಯ್ತು,” ಎಂದು ಕಂಗಾಲಾಗಿರುವ ಜನರ ನೋವಿಗೆ ಹೆಗಲಾಗಲು ಸ್ಥಳೀಯ ಜನರು, ಪಕ್ಕದೂರಿನ ಮಂದಿ, ಕುಟುಂಬ ಸಮೇತರಾಗಿ ಬಂದು ಸೇವೆ ಸಲ್ಲಿಸುತ್ತಿರುವ ಅಪರೂಪದ ದೃಶ್ಯ ನಿಜಕ್ಕೂ ಮಾನವೀಯತೆಗೆ ಹಿಡಿದ ಕನ್ನಡಿ.

ಒಟ್ಟಾರೆ ನಾ ಕಂಡ ಕೊಡಗಿನ ಜೆ ಸಂಗಪ್ಪ ಅನುಭವ ಕೇಂದ್ರದಲ್ಲಿರುವ ಪರಿಹಾರ ಕೇಂದ್ರ ಮಾನವೀಯ ಸೆಲೆಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜಾತಿ, ಧರ್ಮ ಎಲ್ಲ ಮರೆತು ಸಂಘಸಂಸ್ಥೆಗಳು, ಸರ್ಕಾರಿ ಅಧಿಕಾರಿಗಳು, ಪಕ್ಕದೂರಿನ ಜನ ನೋವಿನಲ್ಲಿರುವ ಮೊಗಗಳಲ್ಲಿ ನಗು ತರಿಸಲು ಶ್ರಮಿಸುತ್ತಿರುವ ರೀತಿ ನನಗೆ ಸೋಜಿಗವನ್ನುಂಟು ಮಾಡಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More