ವಿಡಿಯೋ | ಹತ್ತಿಪ್ಪತ್ತು ಸಾವಿರಕ್ಕೆ ಹೈರಾಣಾಗೋ ಬದಲು ಮಣ್ಣಿಗೆ ಮರಳಿ ಅಂತಾರೆ ಕವಿತಾ

ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ ಮಾಡಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಕವಿತಾ, ದಿಢೀರನೆ ಮದುವೆಯಾಗಿ ಗ್ರಾಮಕ್ಕೆ ಬಂದಾಗ ಕನಸುಗಳೆಲ್ಲ ಕಮರಿದ ಸ್ಥಿತಿಯಲ್ಲಿದ್ದರು. ಆದರೆ, ನಂತರ ಕೃಷಿ ಜೊತೆ ಜೇನು ಸಾಕಾಣಿಕೆ, ಹೈನುಗಾರಿಕೆ ಮುಂತಾದ ಉಪಕಸುಬುಗಳಿಂದ ಮಾದರಿ ಬದುಕು ಕಟ್ಟಿಕೊಂಡರು

ಕವಿತಾ ಮಿಶ್ರಾ, ರಾಯಚೂರು ಜಿಲ್ಲೆಯ ಕವಿತಾಳ ಗ್ರಾಮದ ಕೃಷಿ ಸಾಧಕಿ. ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ ಮಾಡಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಕವಿತಾ, ೨೩ ವರ್ಷದ ಹಿಂದೆ ಮದುವೆಯಾಗಿ ಕವಿತಾಳ ಗ್ರಾಮಕ್ಕೆ ಬಂದಾಗ ಕನಸುಗಳೆಲ್ಲ ಕಮರಿಹೋದ ಸ್ಥಿತಿಯಲ್ಲಿದ್ದರು. ಖಾಸಗಿ ಕಂಪನಿಯಿಂದ ಬಂದಿದ್ದ ಸಂದರ್ಶನ ಪತ್ರವನ್ನು ಹರಿದೊಗೆದಿದ್ದ ಪತಿ, ಮನೆಯ ಕೆಲಸ ಮಾಡಿಕೊಂಡಿರುವಂತೆ ಹೇಳಿದ್ದರಂತೆ. ಬಳಿಕ ಪತಿಯೇ ನೀಡಿದ ಸವಾಲು ಮತ್ತು ಬೆಂಬಲದಿಂದಾಗಿ ಬಿಸಿಲ ನಾಡಿನಲ್ಲಿ ಶ್ರೀಗಂಧ ಮತ್ತು ಬಹುಬೆಳೆ ಪದ್ಧತಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ. ಕೃಷಿಯ ಜೊತೆ ಕುರಿ, ಜೇನು ಸಾಕಾಣಿಕೆ, ಹೈನುಗಾರಿಕೆ ಮುಂತಾದ ಉಪಕಸುಬುಗಳಿಂದ ಕೃಷಿಯಲ್ಲೂ ಲಾಭವಿದೆ ಎನ್ನುವುದನ್ನು ಋಜು ಮಾಡಿ ತೋರಿಸಿದ್ದಾರೆ.

ಶ್ರೀಗಂಧ ಬೆಳೆ ವಿಷಯದಲ್ಲಿ ಆಶಾಕಿರಣ ಎನ್ನಿಸಿರುವ ಕವಿತಾ, ರಾಜ್ಯದ ರೈತರ ಬದುಕಿನಲ್ಲಿ ‘ಶ್ರೀಗಂಧ’ದ ಪರಿಮಳವನ್ನು ಹಬ್ಬಿಸಬೇಕು; ರೈತರೂ ‘ಕೋಟಿ’ಗಳ ಲೆಕ್ಕದಲ್ಲಿ ಮಾತನಾಡುವ ಸ್ಥಿತಿ ನಿರ್ಮಾಣವಾಗಬೇಕು ಎನ್ನುವ ಆಶಯ, ಕನಸು ಹೊಂದಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದಲ್ಲಿ ಸೋಮವಾರ (ಆ.೨೭) ವಿವಿಧ ಸಂಘಟನೆಗಳು ಆಯೋಜಿಸಿದ್ದ ‘ಬಾನುಲಿ ಕೃಷಿ ಬೆಳಗು’ ಕಾರ್ಯಕ್ರಮದದಲ್ಲಿ ಭಾಗವಹಿಸಿ ರೈತರನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿಯಲ್ಲಿ ಕಂಡುಂಡ ಕಷ್ಟ, ನಷ್ಟ ಮತ್ತು ಸತತ ಪರಿಶ್ರಮದಿಂದ ಪಡೆದ ಯಶಸ್ಸನ್ನು ವಿವರಿಸಿದರು. ಬಾನುಲಿ ಕೃಷಿ ಬಳಗ ನೀಡಿದ ‘ಕೃಷಿ ರತ್ನ’ ಪ್ರಶಸ್ತಿಯನ್ನು ಸ್ವೀಕರಿಸಿ, ಶ್ರೀಗಂಧ ಬೆಳೆಯುವಂತೆ ರೈತರಲ್ಲಿ ಉತ್ತೇಜನ ತುಂಬಿದರು. ತಮ್ಮ ಕುರಿತು ಡಿ ಎನ್‌ ಹರ್ಷ ಅವರು ಬರೆದ ‘ಕೃಷಿ ಶಕ್ತಿ’ ಪುಸ್ತಕ ಬಿಡುಗಡೆಗೂ ಸಾಕ್ಷಿಯಾದರು. ಅವರ ಮಾತು, ಮಂಥನವನ್ನು ‘ದಿ ಸ್ಟೇಟ್’ ಜಾನುಲಿಯಲ್ಲಿ (ಪಾಡ್‌ ಕಾಸ್ಟ್‌) ಆಲಿಸಿ. ಅದರ ಕೆಲವು ಮುಖ್ಯಾಂಶಗಳಿವು:

ವೆಚ್ಚ ಕಡಿಮೆ ಮಾಡಿದರೆ ಬರುವುದೆಲ್ಲ ಆದಾಯ

 • ಒಬ್ಬ ಎಂಜಿನಿಯರ್, ಡಾಕ್ಟರ್ ಪ್ರತಿಭಟನೆ ನಡೆಸಿದರೂ ಜಗತ್ತು ನಡೀತದೆ. ಆದರೆ, ಒಬ್ಬ ರೈತ ಪ್ರತಿಭಟನೆ ಕುಳಿತ‌ ಅಂದ್ರೆ ಯಾರೂ ಬದುಕುವುದೇ ಇಲ್ಲ. ಅನ್ನ ಕೊಡುವವನು ಅವನು. ಅವನೇ ನಿಂತುಬಿಟ್ಟ ಅಂದ್ರೆ ಜಗತ್ತೆ ನಿಂತಂಗ ಆಗ್ತದೆ.
 • ರವೀಂದ್ರನಾಥ ಟ್ಯಾಗೋರರಿಗೆ ಒಬ್ಬ ವ್ಯಕ್ತಿ ಕೇಳಿದನಂತೆ, “ಭಗವಂತನನ್ನು ಅತಿ ಸಮೀಪದಿಂದ ನೋಡಬೇಕು; ನಾನೇನು ಮಾಡಬೇಕು,’’ ಎಂದು. ಅದಕ್ಕೆ ರವೀಂದ್ರರು ಹೇಳಿದರಂತೆ, “ನೀನು ಕೃಷಿ ಚಟುವಟಿಕೆಯಲ್ಲಿ ತೊಡಗಿಬಿಡು ಅಲ್ಲಿ ನಿನಗೆ ದೇವರು ಸಾಕ್ಷಾತ್‌ ಕಾಣ್ತಾನೆ,’’ ಅಂತ. ಬಿತ್ತಿದ ಬೀಜ ಮೊಳಕೆಯೊಡೆದು ಹೂವಾಗೋದು, ಕಾಯಾಗೋದು, ಹಣ್ಣಾಗೊದು ಎಲ್ಲ ಹಂತವನ್ನು ನೋಡ್ತೇವೆ. ಅಂದರೆ, ಸಾಕ್ಷಾತ್‌ ದೇವರನ್ನೇ ನಾವು ನೋಡಿದ ಹಾಗೆ. ಒಬ್ಬ ರೈತನಲ್ಲಿ ದೇವರು ನೆಲಸಿದ್ದಾನೆ.
 • ಆದರೆ, ಅಂತಹ ರೈತನ ಸ್ಥಿತಿ ಚಿಂತಾಜನಕವಾಗಿದೆ. ಆತ ‘ಬಾಲ್’ ಆದಂಗೆ ಆಗಿದ್ದಾನೆ. ಚೆಂಡನ್ನು ಕ್ಯಾಚ್‌‌ ಹಿಡಿಬಹುದು, ಒದೆಯಲೂಬಹುದು. ಆರ್ಥಿಕವಾಗಿ ಸದೃಢನಾಗಿಲ್ಲದ ರೈತನನ್ನು ಎಲ್ಲರೂ ತುಳಿಯಲು ನೋಡುತ್ತಾರೆ. ಎಲ್ಲಿವರೆಗೆ ಈ ಸ್ಥಿತಿ? ರೈತರಿಗೋಸ್ಕರ ಎಲ್ಲರೂ ಮಾತನಾಡುತ್ತಾರೆ. ಸರ್ಕಾರ, ಸಂಘಸಂಸ್ಥೆ, ಮಠಮಾನ್ಯಗಳು ಎಲ್ಲವೂ ರೂಪುರೇಷೆಗಳನ್ನು ಮಾಡುತ್ತವೆ. ಆದರೂ, ರೈತ ಉದ್ಧಾರ ಆಗಿಲ್ಲ. ಏನು ಕಾರಣ? ಅದನ್ನು ತಿಳಿದುಕೊಳ್ಳಬೇಕಾದವರು ರೈತರೇ.
 • ಜಗತ್ತು ನಮಗೆ ಅನುಕಂಪ ಕೊಡಬಹುದು, ದಯೆ ತೋರಿಸಬಹುದು. ಆದರೆ, ನಮ್ಮ ಅಧಿಕಾರ ಮತ್ತು ಹಕ್ಕನ್ನು ಕೊಡುವುದಿಲ್ಲ. ಅವುಗಳನ್ನು ಪಡೆಯಬೇಕೆಂದರೆ ನಾವು ಮೊದಲು ನಮ್ಮ ಕರ್ತವ್ಯಗಳನ್ನು ಮಾಡಬೇಕು. ನಮ್ಮ ಕರ್ತವ್ಯ ಎಂದರೆ, ಕಷ್ಟಪಟ್ಟು ದುಡಿಯಬೇಕು, ತಾಳ್ಮೆಯನ್ನು ಹೊಂದಬೇಕು. ಎ.ಸಿ ಕೋಣೆಯಲ್ಲಿ ಕುಳಿತು ಸಹಿ ಹಾಕಿದ್ದಕ್ಕೆ ದುಡ್ಡು ಬರುವಂಥ ವೃತ್ತಿ ಇದಲ್ಲ. ಮಳೆ, ಚಳಿ, ಬಿಸಿಲಿನ ಎಲ್ಲ ಕಾಲದಲ್ಲೂ ದುಡಿಯಲೇಬೇಕು. ಇಲ್ಲ ಅಂದ್ರೆ ಹೊಲದಲ್ಲಿ ಏನೂ ಬೆಳೆಯುವುದಿಲ್ಲ.
 • ನೀರು, ಎಣ್ಣೆ (ಕೀಟನಾಶಕ), ಗೊಬ್ಬರ ಎಲ್ಲ ಹಾಕ್ತೀವಿ. ಆಳುಗಳು ಬೇರೆ ತುಟ್ಟಿ. ಆದ್ರೂ ಎಲ್ಲ ಪ್ರಯತ್ನ ಮಾಡ್ತೀವಿ. ಬೆಳೆ ಬಂದಾಗ ಮಾರುಕಟ್ಟೆ ಇರಲ್ಲ, ವೈಜ್ಞಾನಿಕ ಬೆಲೆ ಸಿಗಲ್ಲ. ಸಾಲ ಮಾಡಿ ವೆಚ್ಚ ಮಾಡಿದ ಹಣದ ಬಡ್ಡಿ ತೀರಿಸಲೂ ಆಗದ ಸ್ಥಿತಿ. ಅದಕ್ಕೆ ನಮ್ಮ ಯುವಜನರೆಲ್ಲ, “ಹೊಲ, ಮನಿಯೊಳಗೆ ಏನೂ ಸುಖ ಇಲ್ಲ, ನಾವ್ಯಾಕೆ ಮಾಡೋದು,’’ ಅಂತ ನಗರಗಳಿಗೆ ಹೋಗ್ತಾರೆ. ಅಲ್ಲಿ ಕೆಲಸ ಮಾಡಿ, ತಿಂದುಂಡು ವಾಪಸ್ ಬರೋಣ ಅಂತ ಊರಿನಲ್ಲಿ ಮುದುಕರನ್ನಷ್ಟೆ ಬಿಟ್ಟು ಹೋಗಿರ್ತಾರೆ.
 • ಹಳ್ಳಿಗಳು ದೇಶದ ಬೆನ್ನೆಲುಬು ಅಂತೀವಿ. ಅವು ಗಟ್ಟಿಯಾದರೆ ರಾಜ್ಯ, ದೇಶ ಗಟ್ಟಿ ಆಗೋದು. ಆದರೆ, ನಮ್ಮ ಹಳ್ಳಿಗಳೇ ದುರ್ಬಲ ಆಗ್ತಿವೆ. ಹಳ್ಳಿಗಳ ಯುವಶಕ್ತಿಯೇ ತಮ್ಮ ಹಳ್ಳಿಯನ್ನು ಬಿಟ್ಟುಹೋದರೆ ಆ ಹಳ್ಳಿ, ಆ ಊರು ಹೇಗೆ ಉದ್ದಾರ ಆಗ್ತದೆ ಹೇಳಿ? ಇದು ಗಂಭೀರ ಸಮಸ್ಯೆ.
 • ಇಂಥ ಸ್ಥಿತಿಯನ್ನು ಕೊನೆಗಾಣಿಸಬೇಕಾದವರೂ ನಾವೇ. ಕೃಷಿ ಪದ್ಧತಿಯಲ್ಲಿ ಬದಲಾವಣೆ ಅವಶ್ಯ. ಕಡಿಮೆ ಖರ್ಚು ಮಾಡಿ, ಹೆಚ್ಚು ಆದಾಯ ಪಡೆಯುವಂಥ ಶಾಣ್ಯಾತನ ಪ್ರದರ್ಶಿಸಬೇಕು. ವೆಚ್ಚವನ್ನು ಕಡಿಮೆ ಮಾಡಿದರೆ ಬರುವುದೆಲ್ಲ ಆದಾಯವೇ ಆಗುತ್ತದೆ. ನನ್ನ ಪ್ರಕಾರ, ೧೫ ಲಕ್ಷ ರು. ಖರ್ಚು ಮಾಡಿ ೨೦ ಲಕ್ಷ ರು. ಪಡೆಯುವವನು ಪ್ರಗತಿಪರ ರೈತ ಅಲ್ಲ. ಏನೂ ಖರ್ಚು ಮಾಡದೆ ತಿಂಗಳಿಗೆ ೫ ಲಕ್ಷ ರು. ಪಡೆಯುವುದು ಶಾಣ್ಯಾತನ.
ಇದನ್ನೂ ಓದಿ : ಸಂಕಲನ | ಸಮ್ಮಿಶ್ರ ಸರ್ಕಾರ ಮಾಡಿದ ಕೃಷಿ ಸಾಲ ಮನ್ನಾ ಕುರಿತು ರಾಜ್ಯದ ರೈತರ ಮಾತು

ಪತಿ ನೌಕರಿ ಪತ್ರ ಹರಿದು ಒಗೆದಿದ್ದರು!

 • ನಾನೇನೂ ಮೂಲತಃ ಕೃಷಿಕಳಲ್ಲ. ಕಂಪ್ಯೂಟರ್‌ ಎಂಜಿನಿಯರಿಂಗ್‌ ಓದಿ, ಕರ್ನಾಟಕ ವಿವಿಯಲ್ಲಿ ಸೈಕಾಲಜಿಯಲ್ಲಿ ಎಂಎ ಮಾಡಿದವಳು. ಬಿಸಿಲನಾಡು ಕವಿತಾಳ ಗ್ರಾಮಕ್ಕೆ ಹೋದಾಗ ಅಳುವೇ ಬಂದುಬಿಟ್ಟಿತ್ತು. ಇವತ್ತಿಗೂ ಆ ಊರಿನಲ್ಲಿ ಹೆಣ್ಮಕ್ಕಳಿಗೆ ಸ್ವಾತಂತ್ರ್ಯ ಇಲ್ಲ. ಮದುವೆಯಾಗಿ ಅಲ್ಲಿಗೆ ಹೋಗಿ ೨೩ ವರ್ಷವಾದರೂ ಇನ್ನೂ ಆ ಊರಿನ ಓಣಿಗಳ ಪರಿಚಯವಿಲ್ಲ ನನಗೆ.
 • ನನಗೆ ನೌಕರಿಗೆ ಸಂದರ್ಶನ ಪತ್ರ ಬಂದಾಗ ಪತಿ ಅದನ್ನು ಹರಿದೊಗೆದು, “ಮನೆಯೊಳಗೆ ಏನಾದರೂ ಕೆಲಸ ಮಾಡು,’’ ಎಂದಿದ್ದರು. ಮಾತ್ರವಲ್ಲ, ಮತ್ತೆ ಅರ್ಜಿ ಹಾಕುತ್ತೇನೆಂದು ತಿಳಿದಿದ್ದ ಪತಿ ಪೋಸ್ಟ್‌ಮ್ಯಾನ್‌ಗೆ ರೊಕ್ಕ ಕೊಟ್ಟು, “ನಮ್ಮ ಮನೆ ಕಡೆ ಬರಬ್ಯಾಡ,’’ ಅಂತ ಹೇಳಿದ್ದರಂತೆ.
 • ನಾನು ಅಸಹಾಯಕಳಾಗಿ ಕುಳಿತಿದ್ದೆ. ಕನಸು ಸಾಕಾರ ಆಗುವುದೆಂದರೆ ಸಂಸಾರ ಮಾಡಿಕೊಂಡಿರುವಂಥ ಅನಿವಾರ್ಯ ಸ್ಥಿತಿ. ಅಂಥ ಸಂದರ್ಭದಲ್ಲಿ ನನ್ನ ಗಂಡ (ಉಮಾಶಂಕರ್‌ ಮಿಶ್ರಾ), “ಎಲ್ಲರೂ ಹೊಲ ಮನಿ ಒಳಗೆ ಏನೂ ಸುಖಾ ಇಲ್ಲ ಅಂತಾರೆ. ಅದ್ರೊಳಗೆ ನೀನ್‌ ಏನಾದರೂ ಮಾಡಿ ತೋರಿಸು,’’ ಎಂದು ಸವಾಲು ಕೊಟ್ಟರು.
 • ಆವರೆಗೆ ನಾನು ಹೊಲಮನಿ ಕೆಲಸ ಮಾಡಿದ್ದಿಲ್ಲ. ತೌರಿನಲ್ಲಿದ್ದಾಗ ಓದುವುದಷ್ಟೇ ಗೊತ್ತಿದ್ದದ್ದು. ಎಲ್ಲೆಲ್ಲೂ ಜಾಲಿಗಿಡಗಳೇ ಹೆಚ್ಚಿರುವ ಊರಲ್ಲಿ ಉರಿಬಿಸಿಲು, ಕಲ್ಲು ತುಂಬಿದ ಹೊಲ. ನೀರು, ವಿದ್ಯುತ್‌ ಕೂಡ ಇಲ್ಲ. ಅಂಥಲ್ಲಿ ಕೆಲಸ ಶುರುಮಾಡಿದೆ. ಆರು ಬೋರ್‌ ತೆಗೆದರೂ ನೀರು ಬೀಳಲಿಲ್ಲ. ಮನೆಯವರು, “ಸಾಕು,’’ ಎಂದರು. ಆದರೆ, ಅವರು ನನ್ನ ಮನಸ್ಸಿನಲ್ಲಿ ಹಚ್ಚಿದ್ದ ಕಿಡಿ ಜ್ಯೋತಿಯಾಗಿ ಎರಡು ಮನೆಗಳನ್ನು (ತವರು ಮತ್ತು ಗಂಡನ ಮನೆ) ಬೆಳಗಬೇಕಾಗಿತ್ತು. ಆಗುವುದಿಲ್ಲ ಎನ್ನುವುದು ದೊಡ್ಡ ಮಾತಲ್ಲ. ಇದ್ದು ಸಾಧಿಸಬೇಕಿತ್ತು. ಅಂತೂ ೧೩ನೇ ಬೋರ್‌ನಲ್ಲಿ ನೀರು ಬಿತ್ತು.
 • ಎಂಟು ಎಕರೆ ಹತ್ತು ಗುಂಟೆ ಭೂಮಿಯಲ್ಲಿ ದಾಳಿಂಬೆ ಬೆಳೆದೆ. ಮೊದಲ ನಾಲ್ಕು ವರ್ಷ ಫಸಲು ಚೆನ್ನಾಗಿ ಬಂತು. ಒಳ್ಳೆ ಬೆಲೆಯೂ ಸಿಕ್ಕಿತು. ಐದನೇ ವರ್ಷ ದುಂಡಾಣು ಅಂಗಮಾರಿ ರೋಗ ಬಂದಿತು. ಈ ರೋಗಕ್ಕೆ ಔಷಧವೇ ಇರಲಿಲ್ಲ. ಎಲ್ಲ ಗಿಡಗಳನ್ನು ತೆಗೆಯಬೇಕಾಯಿತು. ೬ ವರ್ಷ ಕಷ್ಟಪಟ್ಟು ಕಟ್ಟಿದ ಸಾಮ್ರಾಜ್ಯ ಕುಸಿದುಹೋಗಿತ್ತು. ಎಲ್ಲವನ್ನೂ ಕಳೆದುಕೊಂಡಿದ್ದ ನಾನು ಕಳೆದುಹೋಗಿದ್ದೆ, ಸತ್ತುಹೋಗಿದ್ದೆ. “ನೌಕರಿ ಹಿಡಿದು ಇಲ್ಲಿಂದ ಹೋಗದೆ, ಗಂಡನ ಮಾತು ಕೇಳಿ ತಪ್ಪು ಮಾಡಿದೆ,’’ ಎನ್ನಿಸಲಾರಂಭಿಸಿತು. ಡಿಪ್ರೆಷನ್‌ಗೆ ಜಾರಿದೆ. ಮತ್ತೆ ಎದ್ದು ನಿಲ್ಲಲಾಗದ ಸ್ಥಿತಿ. ಕಾಲು ಮುರಿದಿದ್ದರೆ ಏಳಲು ಪ್ರಯತ್ನಿಸಬಹುದಿತ್ತು. ಆದರೆ, ನನ್ನ ಸೊಂಟವೇ ಮುರಿದಂತಾಗಿತ್ತು. ಅತ್ತು ಮೆತ್ತಗಾಗಿದ್ದ ನನ್ನ ಕಣ್ಣೀರು ಒರೆಸಿ, “ಮತ್ತೊಮ್ಮೆ ಪ್ರಯತ್ನ ಮಾಡು,’’ ಎಂದು ಪತಿ ನನ್ನ ಬೆಂಬಲಕ್ಕೆ ನಿಂತರು.

ಕೈಹಿಡಿದ ಬಹುಬೆಳೆ ಪದ್ಧತಿ ಮತ್ತು ಶ್ರೀಗಂಧ

 • ಆಗ, ಒಂಟಿ ಬೆಳೆ ಯಾವತ್ತೂ ಮಾರಕ ಎನ್ನಿಸಿ ಬಹುಬೆಳೆ ಪದ್ಧತಿಯನ್ನು ಅನುಸರಿಸಿದೆ. ಅದರಲ್ಲೂ ಶ್ರೀಗಂಧವನ್ನು ಮುಖ್ಯ ಬೆಳೆಯನ್ನಾಗಿ ಆಯ್ಕೆ ಮಾಡಿಕೊಂಡು, ತೋಟಗಾರಿಕೆ ಬೆಳೆಯಲ್ಲಿ ಅರಣ್ಯ ಕೃಷಿಯನ್ನು ಆರಂಭಿಸಿದೆ. ಶ್ರೀಗಂಧಕ್ಕೆ ಆಶ್ರಯವಾಗುವ ತೋಟಗಾರಿಕೆ ಬೆಳೆಗಳು ನಮಗೂ ಆಶ್ರಯ ಆದವು. ೨,೧೦೦ ಶ್ರೀಗಂಧ, ೧ ಸಾವಿರ ದಾಳಿಂಬೆ, ತಲಾ ೬೦೦ ಮಾವು ಮತ್ತು ಪೇರಳೆ, ೨೦೦ ಲಿಂಬೆ,೪೫೦ ಸೀತಾಫಲ, ತಲಾ ೧೦೦ ನೇರಳೆ ಮತ್ತು ಬಾರೆ, ೮೦೦ ಸಾಗುವಾನಿ ಸಹಿತ ೮,೧೦೦ ಗಿಡಗಳನ್ನು ನೆಟ್ಟೆ. ಜೊತೆಗೆ ಕುರಿ, ಕೋಳಿಗಳ ಸಾಕಣೆ ಮಾಡಿದೆ. ಬಹುಬೆಳೆ ಮತ್ತು ಸರ್ವಋತು ಕೃಷಿ ಪದ್ಧತಿಯಿಂದ ರೈತರಿಗೆ ವರ್ಷದ ಹನ್ನೆರಡು ತಿಂಗಳೂ ಪಗಾರ ಸಿಗುತ್ತದೆ. ಶ್ರೀಗಂಧ ಫಿಕ್ಸೆಡ್ ಡೆಪಾಸಿಟ್‌ನಂತೆ. ತೋಟದ ಬೆಳೆಗಳು ಬೋನಸ್ ರೀತಿ.
 • ಕೀಟನಾಶಕ, ಗೊಬ್ಬರ ಬೇಕಿಲ್ಲ. ಆಳುಗಳೂ ಹೆಚ್ಚು ಅಗತ್ಯವಿಲ್ಲ. ಕಡಿಮೆ ನೀರು ಸಾಕು. ನಮ್ಮ ಜಮೀನಿನಲ್ಲಿ ಒಂದೂವರೆ ಇಂಚು ನೀರು ಲಭ್ಯವಿದ್ದು, ಅದರಲ್ಲೇ ೮,೧೦೦ ಗಿಡಗಳನ್ನು ಬೆಳೆಸುತ್ತಿದ್ದೇವೆ. ನೈಸರ್ಗಿಕ, ಸ್ವಾಭಾವಿಕ ಮತ್ತು ಶೂನ್ಯ ಬಂಡವಾಳ ಕೃಷಿ ಪದ್ಧತಿ ಅನುಸರಿಸುತ್ತಿದ್ದೇವೆ. ೧೦ ಜವಾರಿ ಹಸುಗಳಿದ್ದು, ಜೀವಾಮೃತ, ದಶಪರಣ ಮತ್ತು ಪಂಚಗವ್ಯ ಸಿದ್ಧಪಡಿಸಿ ಬಳಸುತ್ತಿದ್ದೇವೆ. ಈ ಎಲ್ಲ ಕೆಲಸಗಳನ್ನೂ ಒಬ್ಬನೇ ಆಳು ನಿರ್ವಹಿಸುತ್ತಾನೆ. ೮ ಎಕರೆ ಭೂಮಿಯನ್ನು ೮ ಸಬ್‌ ವಾಲ್‌ಗಳಲ್ಲಿ ವಿಂಗಡಿಸಿದ್ದು, ಅದರ ಮೂಲಕವೇ ನೀರು, ಜೀವಾಮೃತಗಳನ್ನು ನೀಡಲಾಗುತ್ತದೆ.
 • ಕೃಷಿಕಾರ್ಮಿಕರು‌ ಮತ್ತು ನೀರು ಕಡಿಮೆ ಇದ್ದರೂ, ಎಣ್ಣೆ (ಕೀಟನಾಶಕ), ಔಷಧ, ಗೊಬ್ಬರಕ್ಕೆ ರೊಕ್ಕೆ ಇಲ್ಲದಿದ್ದರೂ ನಾವು ಹೊಲ ಮಾಡಬಹುದು. ಶ್ರೀಗಂಧ ಬೆಳೆದರೆ ಕಳ್ಳತನವಾಗುತ್ತೆ ಎನ್ನುವ ಭಯ ಬೇಕಿಲ್ಲ. ಗಿಡಕ್ಕೆ ೮ ವರ್ಷ ಆದ ಬಳಿಕ ಮೈಕ್ರೋ ಚಿಪ್‌ ಅಳವಡಿಸಿದರೆ, ಬುಡಕ್ಕೆ ಕೊಡಲಿ ಬಿದ್ದೊಡನೆ ನಿಮಗೆ ಎಚ್ಚರಿಕೆ ಸಂದೇಶ ಬರುತ್ತದೆ.
 • ಶ್ರೀಗಂಧ ಬೆಳೆಯುವಲ್ಲಿ ಸಸಿಗಳ ಆಯ್ಕೆ ಬಹುಮುಖ್ಯ. ಹೆಚ್ಚಿನ ಕಡೆ ೧೦ ಸಾವಿರ ಸಸಿಗಳಲ್ಲಿ ನೂರಷ್ಟೆ ಬದುಕಿರುವ ನಿದರ್ಶನಗಳಿವೆ. ಜೀವಾಮೃತ ಬಳಸಿ, ೧೫ ತಿಂಗಳು ಬೆಳೆಸಿರುವ ೨ ಅಡಿ ಎತ್ತರದ ಸಸಿಗಳನ್ನು ಪ್ರತಿ ಸಸಿಗೆ ೩೩ ರು.ಗೆ ರೈತರಿಗೆ ನೀಡುತ್ತಿದ್ದೇನೆ. ನಾನು ಮಾಡುವಾಗ ಹೇಳುವವರು ಇದ್ದಿಲ್ಲ. ಆದ್ದರಿಂದ ಬಾಳ ಸಲ ಬಿದ್ದೆ. ಆ ಅನುಭವದಿಂದ ನಿಮ್ಮ ಮುಂದೆ ಬಂದು ನಿಂತಿದ್ದೇನೆ, ನಿಮ್ಮನ್ನು ಬೀಳಲು ಬಿಡುವುದಿಲ್ಲ.
 • ಶ್ರೀಗಂಧ ನೆಟ್ಟು ಎರಡು ವರ್ಷ ವೈಜ್ಞಾನಿಕ ಮತ್ತು ತಾಂತ್ರಿಕವಾಗಿ ಮೂಲಸೌಕರ್ಯಗಳನ್ನು ಕಲ್ಪಿಸಿದರೆ, ಬಳಿಕ ನೀವು ನಿಮ್ಮ ವ್ಯವಹಾರ, ನೌಕರಿಯಲ್ಲಿ ತೊಡಗಬಹುದು. ಶ್ರೀಗಂಧದ ಗಿಡಗಳು ತನ್ನಿಂತಾನೇ ಬೆಳೆಯುತ್ತವೆ ಮತ್ತು ನಿಮ್ಮನ್ನು ಕೋಟಿಗಳ ಲೆಕ್ಕದಲ್ಲಿ ಮಾತನಾಡುವಂತೆ ಮಾಡುತ್ತವೆ.
 • ಹೊಲ, ಮನೆ ಬಿಟ್ಟು ಹೊಂಟಿರುವ ಯುವಜನರೇ, ಮಣ್ಣು ನಿಮ್ಮನ್ನು ಮರಳಿ ಕರೆಯುತ್ತಿದೆ. ಹತ್ತು, ಇಪ್ಪತ್ತು ಸಾವಿರಕ್ಕೆ ಯಾಕೆ ಲೆಫ್ಟ್ ರೈಟ್ ಮಾಡ್ತೀರಿ, ಕೋಟಿ ಕೊಡ್ತೀವಿ ಮರಳಿ ಮಣ್ಣಿಗೆ ಬನ್ನಿ. ಕರ್ನಾಟಕ ನಿಮ್ಮ ಕೈಯಲ್ಲಿದೆ. ನೀವು ಬಿಟ್ಟು ಹೊರಟಿದ್ದನ್ನು ಎಲ್ಲರೂ 'ಸರಳ'ವಾಗಿ ತೆಗೆದುಕೊಳ್ಳುತ್ತಿದ್ದಾರೆ. ಮುಂದಿದು ಗಂಭೀರ ಸಮಸ್ಯೆಗಳನ್ನು ತಂದೊಡ್ಡುತ್ತದೆ. ನಿಮ್ಮ ಹಳ್ಳಿಗೆ, ನಿಮ್ಮ ಹೊಲಕ್ಕೆ, ಆ ಮಣ್ಣಿಗೆ ನೀವು ಕಳಶ. ಈಗ ೩೩ ರು. ಡೆಪಾಸಿಟ್ ಮಾಡಿದರೆ ಆ ಮಣ್ಣು ೧೨ರಿಂದ ೧೫ ವರ್ಷದಲ್ಲಿ ನಿಮಗೆ ೪ರಿಂದ ೫ ಕೋಟಿ ಆದಾಯ ಕೊಡ್ತದೆ.
 • ನೀವು ನೂರಕ್ಕೆ ನೂರು ಕೃಷಿಯಲ್ಲಿ ಬದ್ಧತೆಯಿಂದ ತೊಡಗಿಸಿಕೊಂಡರೆ ಬೇರೆಯ ಯಾವುದೇ ವ್ಯವಹಾರಕ್ಕಿಂತ ಇದು ಉತ್ತಮ ವ್ಯವಹಾರ. ಸತತ ಪರಿಶ್ರಮದಿಂದ ಹೊಲಮನೆಯಲ್ಲಿ ದುಡಿದಿರೆಂದರೆ ಅದು ಕಸುಬಷ್ಟೇ ಆಗಿರುವುದಿಲ್ಲ, ಒಳ್ಳೆಯ ವ್ಯಾಪಾರವೂ ಆಗುತ್ತದೆ. ನನ್ನ ಶ್ರೀಗಂಧದ ಮರಗಳು ೩ ವರ್ಷದಿಂದ ಬೀಜಗಳನ್ನು ನೀಡುತ್ತಿವೆ. ಈ ವರ್ಷ ಉತ್ತರ ಭಾರತವೂ ಸಹಿತ ವಿವಿಧ ರಾಜ್ಯಗಳಿಗೆ ೫ ಕ್ವಿಂಟಾಲ್‌ ಬೀಜ ಮಾರಾಟ ಮಾಡಿದ್ದು, ೫ ಲಕ್ಷ ರು. ಬಂದಿದೆ. ಅಂತೆಯೇ ಸಿದ್ಧಪಡಿಸಿದ ೭ ಲಕ್ಷ ಸಸಿಗಳಲ್ಲಿ ೫ ಲಕ್ಷ ಮಾರಾಟ ಆಗಿವೆ. ಮುಂದಿನ ವರ್ಷ ೧೦ ಲಕ್ಷ ಸಸಿ ನೀಡುವಂತೆ ತೆಲಂಗಾಣ ಸರ್ಕಾರ ಕೇಳಿದೆ.
 • ತೆಲಂಗಾಣ ರಾಜ್ಯದ ರೈತನೊಬ್ಬ ೧೮ ಗಂಧದ ಮರಗಳನ್ನು ೩೬ ಲಕ್ಷಕ್ಕೆ ಮಾರಾಟ ಮಾಡಿದ್ದಾನಂತೆ. ೧ ಮರಕ್ಕೆ ೨ ಲಕ್ಷ ರು. ಅಂದರೆ, ಒಂದು ಎಕರೆಯಲ್ಲಿ ಮುನ್ನೂರು ಗಿಡ ಹಾಕಿದರೆ ಈಗಿನ ದರದಲ್ಲಿ ೬ ಕೋಟಿ ರು. ಕರ್ನಾಟಕದ ಶ್ರೀಗಂಧಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಯಾವತ್ತೂ ಬೇಡಿಕೆ ಇದ್ದೇ ಇರುತ್ತದೆ. ನಮ್ಮ ರೈತರು ಹೆಚ್ಚು ಶ್ರೀಗಂಧ ಬೆಳೆಯಬೇಕು, ಕೋಟಿಗಳ ಲೆಕ್ಕದಲ್ಲಿ ಮಾತನಾಡುವಂತಾಗಬೇಕು.
ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More