ಮಂಗಳೂರಲ್ಲಿ ಸದ್ದು ಮಾಡುತ್ತಿದೆ ಮೀನು ಹಿಡಿದು ವಾಪಸು ಬಿಡುವ ಅಹಿಂಸಾ ಕ್ರೀಡೆ ‘ಆಂಗ್ಲಿಂಗ್’

ಭಾರತದಲ್ಲಿ ಬಹುತೇಕರಿಗೆ ‘ಆಂಗ್ಲಿಂಗ್’ ಎನ್ನುವುದು ಇನ್ನೂ ಅಪರಿಚಿತ ಪದ. ಗಾಳ ಹಾಕಿ ಮೀನು ಹಿಡಿಯುವ ಸಾಂಪ್ರದಾಯಿಕ ಪ್ರಕ್ರಿಯೆಗಿಂತಲೂ ತುಸು ಭಿನ್ನವಾಗಿರುವ ಇದನ್ನು ಕ್ರೀಡೆಯಾಗಿಸುವ ಎಲ್ಲ ಸಾಧ್ಯತೆಗಳಿವೆ. ಆದರೆ, ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳು ಮನಸ್ಸು ಮಾಡಬೇಕಷ್ಟೆ

ಇದೇ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ‘ಆಂಗ್ಲಿಂಗ್ ಕಾರ್ನಿವಲ್’ಗೆ ಮಂಗಳೂರಿನಲ್ಲಿ ಸಿದ್ಧತೆಗಳು ಚುರುಕಾಗಿವೆ. ಭಾರತದಲ್ಲಿ ಆಂಗ್ಲಿಂಗ್ ಅನ್ನು ಕ್ರೀಡೆಯಾಗಿ ಜನಪ್ರಿಯಗೊಳಿಸುವ ತವಕ ಅಲ್ಲಿ ಸೇರಿದ್ದ ಅನೇಕ ಯುವಕರಲ್ಲಿತ್ತು. ಪಣಂಬೂರಿನ ಬ್ರೇಕ್ ವಾಟರ್ ಭಾಗದಲ್ಲಿ ಈ ವರ್ಷ ಮತ್ತೆ ಕಾರ್ನಿವಲ್ ಆಯೋಜಿಸಬೇಕು ಎಂಬ ಕನಸಿನೊಂದಿಗೆ ಅವರೆಲ್ಲ ಸೇರಿದ್ದರು. ಹಾಗೆ ಸೇರಿದವರಲ್ಲಿ ಬಹುತೇಕರು ಹವ್ಯಾಸಿಗಳು ಮತ್ತು ಕೆಲವರು ವೃತ್ತಿಪರರು.

“ಗಾಳ ಹಾಕಿ ಮೀನು ಹಿಡಿಯುವುದಕ್ಕೂ ಆಂಗ್ಲಿಂಗೂ ವ್ಯತ್ಯಾಸವಿದೆ,” ಎನ್ನುತ್ತ ಮಾತಿಗಿಳಿದರು ಮನೋಜ್ ನಾರ್ವೇಕರ್. ಅವರು ವೃತ್ತಿಯಿಂದ ಟ್ರಾನ್ಸ್‌ಪೋರ್ಟ್ ವ್ಯವಹಾರ ನಡೆಸುತ್ತಿದ್ದಾರೆ, ಆಂಗ್ಲಿಂಗ್ ಪ್ರವೃತ್ತಿ. “ಮೀನುಗಾರರು ಮೀನನ್ನು ಹಿಡಿಯುತ್ತಾರೆ. ಮನೆಗೆ ಕೊಂಡುಹೋಗುತ್ತಾರೆ. ಕೆಲವರು ಮಾರಲೂಬಹುದು. ಆದರೆ ಆಂಗ್ಲಿಂಗ್ ಹಾಗಲ್ಲ. ಇಲ್ಲಿ ಮೀನಿಗೆ ಯಾವುದೇ ರೀತಿ ಹಿಂಸೆ ನೀಡದೆ ಅವುಗಳನ್ನು ಹಿಡಿದು, ಮತ್ತೆ ನೀರಿಗೆ ಬಿಡುವುದು ಕ್ರಮ. ಖುಷಿಗಾಗಿ ಮೀನು ಹಿಡಿಯುವುದು, ಮೀನು ಹಿಡಿಯುವುದಕ್ಕಿಂತಲೂ ಆ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ನಮಗೆ ಮುಖ್ಯ,” ಎಂದರು.

ಆಂಗ್ಲಿಂಗ್ ವಿದೇಶದಲ್ಲಿ ಜನಪ್ರಿಯ. ಅಮೆರಿಕ, ಜರ್ಮನಿ ಸೇರಿದಂತೆ ಅನೇಕ ದೇಶಗಳಲ್ಲಿ ಈ ಕುರಿತಂತೆ ಅಧ್ಯಯನಗಳು ನಡೆದಿವೆ. ಸುಮಾರು ಹತ್ತು ವರ್ಷ ಸಮೀಕ್ಷೆ ನಡೆಸಿದ ಅಮೆರಿಕದ ಅಧ್ಯಯನವೊಂದು, “ಈಗ ಆಂಗ್ಲಿಂಗ್‌ನಲ್ಲಿ ಬಹಳಷ್ಟು ಬದಲಾವಣೆಯಾಗಿವೆ. ವಿಶ್ರಾಂತಿ, ಹೊರಾಂಗಣ ಅನುಭವ ಪಡೆಯುವುದಕ್ಕಾಗಿ ನಡೆಯುತ್ತಿದ್ದ ಈ ಚಟುವಟಿಕೆ ಈಗ ಕುಟುಂಬದ ಮನರಂಜನೆಯ ವಿಚಾರವಾಗಿದೆ. ಹಿಡಿಯುವ ಮೀನನ್ನು ತಿನ್ನಲು ಬಯಸದ ಶ್ರೀಮಂತರು ಇದರತ್ತ ಆಕರ್ಷಿತರಾಗಿದ್ದಾರೆ,” ಎಂದು ಹೇಳುತ್ತದೆ. ಜರ್ಮನಿಯ ಅಧ್ಯಯನವೊಂದು, “ನಿಜವಾಗಿ ಮೀನು ಹಿಡಿಯುವಾಗ ಸಿಗುವ ತೃಪ್ತಿಗೂ ಆಂಗ್ಲಿಂಗ್‌ಗೂ ವ್ಯತ್ಯಾಸವಿದೆ. ಆದರೆ ಗಾಳ ಹಾಕುವವರ ಅನುಭವ ಇಲ್ಲಿ ಮುಖ್ಯವಾಗುತ್ತದೆ,” ಎನ್ನುತ್ತದೆ. 2006ರಲ್ಲಿ ಲೂಸಿಯಾನಾ ವನ್ಯಜೀವಿ ಮತ್ತು ಮೀನುಗಾರಿಕೆ ವಿಭಾಗ ಕೆಂಪು ನದಿ ಸುತ್ತಮುತ್ತಲಿನ ಆಂಗ್ಲರ್‌ಗಳನ್ನು ಅಧ್ಯಯನ ಮಾಡಿತು. “ಮೀನು ಹಿಡಿಯುವ ಮೋಜು ಅನುಭವಿಸುವುದು, ಅದರ ಅನುಭವ, ಹೆಚ್ಚು ಮೀನು ಹಿಡಿಯುವುದು, ದೊಡ್ಡ ಮೀನುಗಳನ್ನು ಹಿಡಿಯುವುದು, ಅದನ್ನು ಸಾಹಸ, ಸವಾಲಿನ ಸಂಗತಿಯಾಗಿ ಅನೇಕರು ಪರಿಗಣಿಸಿದ್ದು ಕಂಡುಬಂತು. ಅವರಲ್ಲಿ ಯಾರೂ ಮೀನನ್ನು ತಿನ್ನುವ ಉದ್ದೇಶ ಹೊಂದಿರಲಿಲ್ಲ,” ಎಂದು ಅಭಿಪ್ರಾಯಪಟ್ಟಿದೆ.

ಈ ಹವ್ಯಾಸ ಪರಿಸರದ ಬಗ್ಗೆ ಅರಿವು ಮೂಡಿಸುವುದಲ್ಲದೆ, ಅದರ ರಕ್ಷಣೆ ಕುರಿತಂತೆಯೂ ಕಾಳಜಿ ಮೂಡಿಸುತ್ತದೆ. ಮೀನುಗಳ ವೈವಿಧ್ಯತೆಯನ್ನು ಪರಿಚಯಿಸುತ್ತದೆ. ಒಂದರ್ಧದಲ್ಲಿ ಅದು ಚಟ ಕೂಡ. ಕೆಲವರು ತಮ್ಮ ಕೆಲಸಗಳನ್ನು ಬಿಟ್ಟು, ಒಮ್ಮೊಮ್ಮೆ ತಮ್ಮನ್ನೇ ಮರೆತುಬಿಡುವಷ್ಟು ಆವರಿಸಿಕೊಳ್ಳುವ ಚಟ. ಆದರೆ, ಇತರ ಕೆಟ್ಟ ಹವ್ಯಾಸಗಳಿಂದ ಯುವಕರನ್ನು ಮುಕ್ತಗೊಳಿಸುವ ಒಳ್ಳೆಯ ಚಟ.

ಭಾರತದಲ್ಲಿ ಆಂಗ್ಲಿಂಗ್ ಎನ್ನುವುದು ಇನ್ನೂ ಅಪರಿಚಿತ ಪದ. ದೇಶದ ಕರಾವಳಿಯುದ್ದಕ್ಕೂ, ನದಿಗಳ ದಂಡೆ ಮೇಲೆ ಗಾಳ ಹಾಕಿ ಮೀನು ಹಿಡಿಯುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ, ಅವರಿಗೆ ಆಂಗ್ಲಿಂಗ್ ಪರಿಚಯವಾಗಲೀ ಮಹತ್ವವಾಗಲೀ ಗೊತ್ತಿಲ್ಲ. ಕಾರಣ, ಅದನ್ನೊಂದು ಟ್ರೆಂಡ್ ಆಗಿ ರೂಪಿಸುವ ಕೆಲಸ ನಡೆದಿಲ್ಲ. ಪ್ರವಾಸೋದ್ಯಮವನ್ನೂ ಉತ್ತೇಜಿಸುವ, ಕ್ರೀಡೆಯಾಗಿಯೂ ರೂಪುಗೊಳ್ಳಬಲ್ಲ ಇದು ಸರ್ಕಾರಗಳ ಗಮನಕ್ಕೆ ಬಂದಿಲ್ಲ.

ಸಾಮಾನ್ಯವಾಗಿ ಆಂಗ್ಲರ್‌ಗಳು ಸಸ್ಯಾಹಾರಿ ಮೀನುಗಳನ್ನು ಹಿಡಿಯುವುದಿಲ್ಲ. ಒಂದು ಮೀನಿನ ಮೇಲೆ ಆಕ್ರಮಣ ಮಾಡುವ ಮತ್ತೊಂದು ಮೀನಿನತ್ತ ಅವರ ಚಿತ್ತ. ಆಂಗ್ಲಿಂಗ್‌ನಲ್ಲಿ ಮೂರು ವಿಧ; ಲ್ಯೂರ್, ಬೇಯ್ಟ್ ಹಾಗೂ ಫ್ಲೈ ಫಿಶಿಂಗ್. ಲ್ಯೂರ್ ವಿಧಾನದಲ್ಲಿ ನೀರಿನಲ್ಲಿ ಅಥವಾ ದಂಡೆ ಮೇಲೆ ಸಂಚರಿಸುತ್ತ ಮೀನು ಹಿಡಿಯುತ್ತಾರೆ. ಬೇಯ್ಟ್‌ನಲ್ಲಿ ಒಂದೆಡೆ ಕುಳಿತು ಗಾಳದ ತುದಿಗೆ ಮೀನನ್ನು ಆಕರ್ಷಿಸುವ ಆಹಾರ ಅಥವಾ ಕೃತಕ ಮೀನನ್ನು ಸಿಕ್ಕಿಸಿ ಹೊಂಚು ಹಾಕಲಾಗುತ್ತದೆ. ಹಾರುವ ಮೀನುಗಳಿಗೆ ನೀರಿನ ಮೇಲ್ಭಾಗದಿಂದಲೇ ಗಾಳ ಬೀಸಿ ಹಿಡಿಯುವುದು ಮತ್ತೊಂದು ವಿಧ. ಮಂಗಳೂರು ಸುತ್ತಮುತ್ತ ಸುಮಾರು 7 ಜಾತಿಯ ಆಕ್ರಮಣಕಾರಿ ಮೀನುಗಳು ಸಿಗುತ್ತವೆ. ಅವುಗಳನ್ನು ಹಿಡಿದು ಗಾತ್ರ, ತೂಕ ಮತ್ತಿತರ ಮಾಹಿತಿ ಕಲೆಹಾಕಲಾಗುತ್ತದೆ.

“ಇದನ್ನು ಕ್ರೀಡೆಯಾಗಿ ರೂಪಿಸುವ ಬಗ್ಗೆ ಕೆಲವು ವರ್ಷಗಳಿಂದ ಯತ್ನ ನಡೆಯುತ್ತಿದೆ. ಆದರೆ, ಮೀನು ಹಿಡಿಯುತ್ತೇವೆ ಎಂದ ಕೂಡಲೇ ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. 2017ರಲ್ಲಿ ಕಾರ್ನಿವಲ್ ಆಯೋಜಿಸಲು ಹರಸಾಹಸಪಡಬೇಕಾಯಿತು. 'ಗಿಫ್ಟೆಡ್ ಇಂಡಿಯಾ’ ಸಂಘಟನೆಯವರು ಅನುಮತಿಗಾಗಿ ದೆಹಲಿವರೆಗೂ ಹೋಗಿಬಂದರು. ಇಂತಹ ಅಡೆತಡೆಗಳನ್ನು ನಿವಾರಿಸುವ ಅಗತ್ಯವಿದೆ,” ಎಂಬುದು ಮಂಗಳೂರು ಆಂಗ್ಲರ್ಸ್ ಕ್ಲಬ್ ಸದಸ್ಯ ಅಮೃತೇಶ್ ಅವರ ಮಾತು.

ಮತ್ತೊಬ್ಬ ಸದಸ್ಯ ಅವಿಲ್, “ಸರ್ಕಾರವೇ ಮೀನು ಸಿಗುವಂತಹ ಪ್ರದೇಶಗಳನ್ನು ಪಟ್ಟಿ ಮಾಡಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಬಹುದು. ಆಂಗ್ಲಿಂಗ್ ತಾಣಗಳೆಂದೇ ಪ್ರತ್ಯೇಕವಾಗಿ ಘೋಷಿಸಿ ಜನರನ್ನು ಆಕರ್ಷಿಸಬಹುದು. ಇದರಿಂದ ಸರ್ಕಾರಕ್ಕೆ ಭಾರಿ ಅನುಕೂಲವಿದೆ, ಸಸಿಹಿತ್ಲು ಕಡಲದಂಡೆಯಲ್ಲಿ ಸರ್ಫಿಂಗ್‌ಗೆ ಅವಕಾಶವಿದೆ. ಅದೇ ರೀತಿ, ಮಂಗಳೂರಿನ ಬೇರೆ ಪ್ರದೇಶದಲ್ಲಿ ಆಂಗ್ಲಿಂಗ್‌ಗೆ ಅವಕಾಶ ನೀಡಬೇಕು. ಅಲ್ಲದೆ, ಕ್ರೀಡೆಗೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಬೇಕು. ನಿಯಮಗಳನ್ನು ಜಾರಿಗೆ ತರಬೇಕು,” ಎನ್ನುತ್ತಾರೆ. ಆದರೆ, ಅದೆಲ್ಲ ಅಂದುಕೊಳ್ಳುವಷ್ಟು ಸುಲಭವಲ್ಲ. ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡುವ ಮುನ್ನ ಪ್ರವಾಸೋದ್ಯಮ ಇಲಾಖೆಗೆ ಚೇತರಿಕೆ ನೀಡಬೇಕಾದ ಸ್ಥಿತಿ ಇದೆ ಎನ್ನುವುದು ಅತಿಶಯೋಕ್ತಿಯಲ್ಲ. ಕ್ರೀಡಾ ಇಲಾಖೆಗೂ ಈ ಮಾತು ಅನ್ವಯ.

ಇದನ್ನೂ ಓದಿ : ಮೀನು ಮಾರುವ ವಿದ್ಯಾರ್ಥಿನಿ ಇದೀಗ ಕೇರಳ ಸರ್ಕಾರದ ದೇಶಿ ಉತ್ಸನ್ನಗಳ ರಾಯಭಾರಿ!

ಕ್ಲಬ್ 2015 ಹಾಗೂ 2017ರಲ್ಲಿ ಮಲ್ಪೆ ದ್ವೀಪ ಮತ್ತು ಪಣಂಬೂರಿನಲ್ಲಿ ಆಂಗ್ಲಿಂಗ್ ಕಾರ್ನಿವಲ್ ಏರ್ಪಡಿಸಿತ್ತು. 2017ರ ಡಿಸೆಂಬರ್‌ನಲ್ಲಿ ಪಣಂಬೂರಿನ ಕಲ್ಲುದಿಬ್ಬಗಳ ಮೇಲೆ ಗಾಳದ ಹಬ್ಬ ಆಯೋಜನೆಗೊಂಡಿತ್ತು. ಈ ವರ್ಷ ಎನ್ಎಂಪಿಟಿ ಬ್ರೇಕ್ ವಾಟರ್ ಭಾಗದಲ್ಲಿ ನವೆಂಬರ್ 24 ಮತ್ತು 25ರಂದು ಕಾರ್ನಿವಲ್ ನಡೆಯಲಿದೆ. ಕಳೆದ ಬಾರಿ ಮಲೇಷ್ಯಾ, ಒಮನ್‌ನಿಂದಲೂ ಸ್ಪರ್ಧಿಗಳು ಆಗಮಿಸಿದ್ದರು. ಕ್ಲಬ್‌ನಲ್ಲಿ ಸುಮಾರು 200 ಮಂದಿ ಸದಸ್ಯರಿದ್ದು, ಜಾಲತಾಣವನ್ನು ಆರಂಭಿಸಿ ಹೆಚ್ಚು ಪ್ರಚಾರ ನೀಡುತ್ತಿರುವ ಕಾರಣ ಈ ಬಾರಿ ಇನ್ನಷ್ಟು ಸ್ಪರ್ಧಿಗಳು ಆಗಮಿಸುವ ನಿರೀಕ್ಷೆ ಇದೆ.

ಮಂಗಳೂರಿನ ಆಂಗ್ಲರ್‌ಗಳು ಕಾರ್ನಿವಲ್ ಸಂದರ್ಭದಲ್ಲಿ ಮಾತ್ರವೇ ಗಾಳ ಹಾಕುವುದಿಲ್ಲ. ವಾರಾಂತ್ಯದಲ್ಲಿ ಗೆಳೆಯರೆಲ್ಲ ಸೇರಿ ನದಿ ದಂಡೆ, ಸಮುದ್ರ ತೀರ ಅಥವಾ ದ್ವೀಪಗಳತ್ತ ಹೆಜ್ಜೆ ಹಾಕುತ್ತಾರೆ. ಬುತ್ತಿ ಕಟ್ಟಿಕೊಂಡು, ಗಾಳ ಹಿಡಿದು ಮೀನು ಅರಸುತ್ತ ಸಾಗುತ್ತಾರೆ. ಕೆಲವೊಮ್ಮೆ ರಾತ್ರಿ ವೇಳೆಯೂ ಮೀನು ಹಿಡಿಯುವ ಮೋಜಿನ ಅನುಭವ ಪಡೆಯುತ್ತಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More