ವಿಡಿಯೋ | ೮೦ ಕುಗ್ರಾಮಗಳಿಗೆ ಬೆಳಕು ಕೊಟ್ಟ ‘ಹೈಡ್ರೋಮ್ಯಾನ್’ ಟರ್ಬೊ ರತ್ನಾಕರ್

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗುಡ್ಡೆತೋಟ ನಿವಾಸಿ ಆಗಿರುವ ೬೦ರ ಹರೆಯದ ರತ್ನಾಕರ್ ಓದಿದ್ದು ಎಸ್‌ಎಸ್‌ಎಲ್‌ಸಿವರೆಗೆ ಮಾತ್ರ. ಆದರೆ, ಸ್ವಪ್ರತಿಭೆ ಮತ್ತು ಪರಿಶ್ರಮದಿಂದ ತಮ್ಮ ಮನೆಯನ್ನಷ್ಟೇ ಅಲ್ಲ, ನೂರಾರು ಮನೆ ಬೆಳಗುವ ಮಟ್ಟಕ್ಕೆ ಇಂದು ಬೆಳೆದುನಿಂತಿದ್ದಾರೆ ಎಂಬುದು ವಿಶೇಷ

ರಾಜ್ಯದ ಮೂಲೆಮೂಲೆಯಲ್ಲಷ್ಟೇ ಅಲ್ಲ ಹಿಮಾಲಯದ ತಪ್ಪಲಿನಲ್ಲೂ, ನೆರೆಯ ರಾಜ್ಯಗಳಲ್ಲೂ ಸ್ವತಃ ಅಭಿವೃದ್ಧಿಪಡಿಸಿದ ನೂರಾರು ಕಿರು ಜಲವಿದ್ಯುತ್ ಉತ್ಪಾದನಾ ಟರ್ಬೈನ್ ಅಳವಡಿಸುವ ಮೂಲಕ ಟರ್ಬೊ ರತ್ನಾಕರ್ ಎಂದೇ ಜನಪ್ರಿಯರಾಗಿರುವವರು ಚಿಕ್ಕಮಗಳೂರು ಜಿಲ್ಲೆಯ ಜಯಪುರದ ಜಿ ಕೆ ರತ್ನಾಕರ್.

ಕೊಪ್ಪ ತಾಲೂಕಿನ ಗುಡ್ಡೆತೋಟ ಎಂಬ ಗ್ರಾಮದವರಾದ, ೬೦ರ ಹರೆಯದ ರತ್ನಾಕರ್ ಅವರು ಓದಿದ್ದು ಎಸ್‌ಎಸ್‌ಎಲ್‌ಸಿವರೆಗೆ ಮಾತ್ರ. ಆದರೆ, ಬಡತನ ಮತ್ತು ಕುಗ್ರಾಮದ ಹಿನ್ನೆಲೆಯ ಅವರು, ಸಾಮಾನ್ಯ ಶಿಕ್ಷಣದ ಬೆಳಕಿನಿಂದ ವಂಚಿತರಾದರೂ, ತಮ್ಮ ಸ್ವಪ್ರತಿಭೆ ಮತ್ತು ಪರಿಶ್ರಮದಿಂದ ತಮ್ಮ ಮನೆಯನ್ನಷ್ಟೇ ಅಲ್ಲ, ನೂರಾರು ಮನೆಗಳನ್ನೂ ಬೆಳಗುವ ಮಟ್ಟಕ್ಕೆ ಇಂದು ಬೆಳೆದುನಿಂತಿದ್ದಾರೆ ಎಂಬುದು ವಿಶೇಷ.

ಹರೆಯದ ದಿನಗಳಲ್ಲೇ ಯಾವುದೇ ಬೆಳಕಿನ ಸೌಲಭ್ಯವಿಲ್ಲದ ತಮ್ಮ ಮನೆಯ ಕತ್ತಲನ್ನು ಓಡಿಸುವ ಪ್ರಯತ್ನವಾಗಿ ಆರಂಭವಾದ ಅವರ ಬೆಳಕಿನ ಹುಡುಕಾಟ, ಸೈಕಲ್ ಡೈನಮೋ ಬಳಸಿ ಅಳಿವೆಯ ನೀರಿನಿಂದ ಒಂದಿಷ್ಟು ಬೆಳಕು ಉತ್ಪಾದನೆ, ನಂತರ ಜೀಪಿನ ಡೈನಾಮೋ ಬಳಕೆಯ ಮೂಲಕ ಇನ್ನಷ್ಟು ಬೆಳಕು ಪಡೆಯುವಲ್ಲಿ ಯಶಸ್ವಿಯಾಯಿತು. ಆ ನಂತರ, ಅವರು ಕಂಡುಕೊಂಡದ್ದು ಸ್ವತಃ ತಾವೇ ಅಭಿವೃದ್ಧಿಪಡಿಸಿದ ಟರ್ಬೈನ್ ಬಳಕೆಯ ಮೂಲಕ ಮನೆಯಂಚಿನ ಅಳಿವೆಯಲ್ಲಿ ಹರಿಯುವ ನೀರಿನಲ್ಲೇ ಮನೆಯಿಡೀ ಬೆಳಗುವ, ಫ್ಯಾನು, ಮಿಕ್ಸರ್, ಫ್ರಿಜ್ ಕೂಡ ಬಳಸಬಹುದಾದ ಅಧಿಕ ಪ್ರಮಾಣದ ವಿದ್ಯುತ್ ಉತ್ಪಾದನೆ.

ಟರ್ಬೈನ್‌ಗಳ ನಿರಂತರ ಅಭಿವೃದ್ಧಿಪಡಿಸುವಿಕೆ, ತಾಂತ್ರಿಕ ಉನ್ನತೀಕರಣದ ಮೂಲಕ ಅವರು ಕಳೆದ ೨೫ ವರ್ಷಗಳಿಂದ ಜಯಪುರದಲ್ಲಿ ಟರ್ಬೈನ್ ಉತ್ಪಾದನಾ ಘಟಕವನ್ನೇ ತೆರೆದಿದ್ದಾರೆ. ರಾಜ್ಯದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಷ್ಟೇ ಅಲ್ಲದೆ, ನೆರೆಯ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣದ ಹಲವು ಕಡೆ ಹಾಗೂ ಉತ್ತರಾಖಂಡದವರೆಗೆ ಈಗ ಅವರು ಸ್ಥಾಪಿಸಿರುವ ಕಿರು ಜಲವಿದ್ಯುತ್ ಉತ್ಪಾದನಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈವರೆಗೆ ಅವರು ೪೬೨ ಟರ್ಬೈನ್ ಘಟಕಗಳನ್ನು ವಿವಿಧೆಡೆ ಸ್ಥಾಪಿಸಿದ್ದು, ದಿನವೊಂದಕ್ಕೆ ಅವರು ಅಳವಡಿಸಿರುವ ಘಟಕಗಳಿಂದ ಸರಾಸರಿ ಒಂದು ಸಾವಿರ ಕಿ.ವ್ಯಾಟ್ ವಿದ್ಯುತ್‌ ಉತ್ಪಾದನೆಯಾಗುತ್ತಿದೆ.

ದಿವಂಗತ ರಾಷ್ಟ್ರಪತಿ, ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ‘ದಿ ಹೈಡ್ರೋಮ್ಯಾನ್’ ಎಂದೇ ಕರೆಸಿಕೊಂಡಿದ್ದ ರತ್ನಾಕರ್ ಅವರು, ೨೦೦೨ರಲ್ಲಿ ನ್ಯಾಷನಲ್ ಇನೋವೇಷನ್ ಅವಾರ್ಡ್‌ ಪಡೆದು, ಹದಿಮೂರು ದಿನಗಳ ಕಾಲ ರಾಷ್ಟ್ರಪತಿಗಳ ಅತಿಥಿಗಳಾಗಿ ರಾಷ್ಟ್ರಪತಿ ಭವನದಲ್ಲೇ ತಂಗಿ, ಅಬ್ದುಲ್ ಕಲಾಂ ಅವರೊಂದಿಗೆ ನೇರ ಸಮಾಲೋಚನೆ ಮಾಡಿದ ಹಿರಿಮೆಯನ್ನೂ ಹೊಂದಿದ್ದಾರೆ. ಈವರೆಗೆ ಸುಮಾರು ೮೦ ಹಳ್ಳಿಗಳಿಗೆ ಸಮೂಹ ವಿದ್ಯುದೀಕರಣ ಸೌಲಭ್ಯವನ್ನೂ ಒದಗಿಸಿರುವ ಅವರು, ನೂರಾರು ಕುಟುಂಬಗಳ ಪಾಲಿಗೆ ಬೆಳಕು ನೀಡಿದ್ದಾರೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಪ್ರಧಾನಿಯವರು ಕ್ಷಮಿಸಬೇಕು... ದೇಶದ ಎಲ್ಲ ಹಳ್ಳಿಗೂ ವಿದ್ಯುತ್ ಸಿಕ್ಕಿಲ್ಲ!

ಪರಿಸರಸ್ನೇಹಿ ಮತ್ತು ಪೋಲುರಹಿತ ವಿದ್ಯುತ್ ಮಿತಬಳಕೆಯ ಟರ್ಬೈನ್ ತಯಾರಿಕರಾಗಿ ಕಳೆದ ಮೂವತ್ತು ವರ್ಷದಿಂದ ನಿರಂತರವಾಗಿ ಶ್ರಮಿಸುತ್ತಿರುವ ರತ್ನಾಕರ್ ಅವರು, ಕಳೆದ ವರ್ಷ ಬೆಂಗಳೂರಿನ ಚರಂಡಿ ನೀರಿನಲ್ಲೂ ವಿದ್ಯುತ್ ಉತ್ಪಾದನೆಯ ಸಾಹಸಕ್ಕೆ ಕೈಹಾಕಿದ್ದಾರೆ. ಈಗಾಗಲೇ ಬೆಂಗಳೂರಿನ ವರ್ತೂರು ಕೆರೆ ನೀರಿನ ಕಾಲುವೆಗೆ ಟರ್ಬೈನ್ ಅಳವಡಿಸಿರುವ ಅವರು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನೂರಾರು ಟರ್ಬೈನ್ ಅಳವಡಿಕೆಯ ಗುರಿಯನ್ನೂ ಹೊಂದಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More