ಕೇರಳ, ಕೊಡಗಿನ ಪ್ರವಾಹ ಹೊಮ್ಮಿಸುತ್ತಲೇ ಇರುವ ಸ್ಫೂರ್ತಿಯ ಕತೆಗಳಿವು

ಕೇರಳಿಗರ ಸಂಕಷ್ಟ ಕೇಳಿ ಅಕ್ಕಿಚೀಲವನ್ನೇ ಕೊಟ್ಟ ಅಡುಗೆ ಭಟ್ಟ, ಪೇಂಟಿಂಗ್‌ ಮಾರಿ ದೇಣಿಗೆ ಸಂಗ್ರಹಿಸಿದ ಲಖನೌ ವಿದ್ಯಾರ್ಥಿಗಳು; ಮಾನವೀಯತೆ ಹೇಗೆಲ್ಲ ಮಿಡಿಯತ್ತದೆ ಎಂಬುದಕ್ಕೆ ಇಲ್ಲಿವೆ ಇಂಥ ಹಲವು ಘಟನೆಗಳ ಮೆಲುಕು. ‘ಮುಂಬೈ ಮಿರರ್’ ಪ್ರಕಟಿಸಿರುವ ವಿಶೇಷ ವರದಿಯ ಭಾವಾನುವಾದ ಇದು

ಸುಪ್ರೀಂ ಮೆಶ್ರಾಮ್ ಅವರು ಕೇರಳದ ಪ್ರವಾಹದ ಬಗ್ಗೆ ಗೆಳೆಯೊನೊಂದಿಗೆ ಚಾಟ್ ಮಾಡುತ್ತಿದ್ದರು. ತಕ್ಷಣ ಅವರಿಗೆ ಅಲ್ಲಿಗೆ ಹೋಗಬೇಕೆನಿಸಿತು. ಡೊಂಬಿವಿಲಿಯ ಮೆಶ್ರಾಮ್ ಹಾಗೆ ಯೋಚಿಸಿದ್ದೇ ತಡ ಅವರ ಮಾಲೀಕತ್ವದ ಜಿಮ್ ಕೇಂದ್ರವು ಪ್ರವಾಹ ಪರಿಹಾರ ಸಾಮಗ್ರಿಗಳ ಸಂಗ್ರಹ ಸ್ಥಳವಾಗಿ ಬದಲಾಗಿತ್ತು. ಆಗಸ್ಟ್ 20ರ ಸಂಜೆಯ ಹೊತ್ತಿಗೆ ಏಳು ಪರಿಹಾರ ಸಾಮಗ್ರಿಗಳ ಪೆಟ್ಟಿಗೆಗಳೊಂದಿಗೆ ಅವರು ಕೇರಳದ ಅಲಪ್ಪುಳಕ್ಕೆ ಹೊರಟೇಬಿಟ್ಟರು. ಸದ್ಯ ಅಲ್ಲೇ ಇರುವ ಮೆಶ್ರಾಂ, ಫೇಸ್ಬುಕ್‌ನಲ್ಲಿ ಪರಿಹಾರ ಕಾರ್ಯ ಕುರಿತು ಪೋಸ್ಟ್ ಮಾಡುತ್ತಿದ್ದಾರೆ. ಎರ್ನಾಕುಲಂ ಮೂಲದ ಸರ್ಕಾರೇತರ ಸಂಸ್ಥೆಯೊಂದಿಗೆ ಕೈಜೋಡಿಸಿ ಸಂತ್ರಸ್ತರ ಒಳಿತಿಗೆ ಶ್ರಮಿಸುತ್ತಿದ್ದಾರೆ.

“ಸರ್ಕಾರ ಮತ್ತು ಅಧಿಕಾರಿಗಳು ಎಲ್ಲೆಡೆ ತಲುಪಲು ಸಾಧ್ಯವಿಲ್ಲ. ರಾಷ್ಟ್ರಗೀತೆ ಮೊಳಗಿದಾಗ ಎದ್ದು ನಿಲ್ಲುವ ನಾವೆಲ್ಲ ಇಂತಹ ಸಂಕಷ್ಟದ ಸಂದರ್ಭದಲ್ಲಿ ಏಕೆ ಎಚ್ಚೆತ್ತುಕೊಳ್ಳಬಾರದು, ದೇಶಕ್ಕಾಗಿ ಯಾಕೆ ಶ್ರಮಿಸಬಾರದು?” ಎನ್ನುವುದು ಅವರ ನೇರಮಾತು.

ಪ್ರವಾಹವು ಕೇರಳವನ್ನು ನಾಶಮಾಡಲು ಆರಂಭಿಸಿದ್ದು 18 ದಿನಗಳ ಹಿಂದೆ. ಈಗಲೂ ಅಪಾರ ನೀರು ಹರಿಯುತ್ತಿದೆ. ಈ ಬಾರಿಯ ಓಣಂ ಕೇರಳಿಗರ ಪಾಲಿಗೆ ಖುಷಿಯನ್ನೇನೂ ನೀಡಿಲ್ಲ. ನೀರು ಎಡಬಿಡದೆ ಹರಿಯುತ್ತಿರುವುದರ ನಡುವೆ ಸೂರ್ಯನ ಬೆಳಕು ನಿಧಾನಕ್ಕೆ ಇಣುಕುತ್ತಿದೆ. ಕೇರಳ ಸಹಜ ಸ್ಥಿತಿಗೆ ಮರಳುತ್ತಿದೆ. ಇನ್ನೂ ಒಂಬತ್ತು ಲಕ್ಷ ಮಂದಿ ನಿರಾಶ್ರಿತರ ಕೇಂದ್ರಗಳಲ್ಲಿ ನೆಲೆಸಿದ್ದಾರೆ. 1924ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮಡಿದವರಿಗಿಂತ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇರಳ ಸರ್ಕಾರ ಬಿಡುಗಡೆ ಮಾಡಿದ ಇತ್ತೀಚಿನ ವರದಿ ಹೇಳಿದೆ. ಓಖಿ ಚಂಡಮಾರುತ, ನಿಫಾ ವೈರಾಣುವಿನಿಂದಾಗಿ ತತ್ತರಿಸಿದ್ದ ಕೇರಳಕ್ಕೆ ಕಳೆದ 10 ತಿಂಗಳಲ್ಲಿ ಎದುರಾದ ಮೂರನೇ ದುರಂತ ಇದು. ಆದರೂ ಅಲ್ಲಿನ ಸರ್ಕಾರ ಧೃತಿಗೆಡದೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಇಂತಹ ಕತ್ತಲಿನ ಹೊತ್ತಿನಲ್ಲಿ ದೇಶದ ಅಸಂಖ್ಯ ಜನ ನೆರವಿನ ಹಸ್ತ ಚಾಚಿದ್ದಾರೆ. ಅವರೆಲ್ಲ ರಾಜ್ಯ ಸರ್ಕಾರ, ಸೇನಾಪಡೆ, ಸರ್ಕಾರೇತರ ಸಂಸ್ಥೆಗಳೊಂದಿಗೆ ಒಗ್ಗೂಡಿ ಕೇರಳವನ್ನು ಮತ್ತೆ ಕಟ್ಟಲು ದುಡಿಯುತ್ತಿದ್ದಾರೆ. ಜೀವದ ಹಂಗು ತೊರೆದು ನೂರಾರು ಜನರನ್ನು ರಕ್ಷಿಸಿದ ಕೇರಳದ ಮೀನುಗಾರರ ಸಮುದಾಯಕ್ಕೆ ಕೇರಳ ಸರ್ಕಾರ ತಲೆಬಾಗಿ ನಮಿಸಿದೆ.

ಅಂಬಾ ಸಾಲೇಕರ್ ಎಂಬ ಚೆನ್ನೈ ಮೂಲದ 35 ವರ್ಷದ ವಕೀಲೆ ಆಗಸ್ಟ್ 20ರಂದು ಟ್ವೀಟ್ ಮಾಡಿ, 30,000 ರುಪಾಯಿಗಿಂತಲೂ ಹೆಚ್ಚು ಪ್ರವಾಹ ಪರಿಹಾರ ನೀಡಿದ ಕಂಪನಿಗಳಿಗೆ ಉಚಿತ ಕಾನೂನು ಸೇವೆ ಒದಗಿಸುವುದಾಗಿ ಘೋಷಿಸಿದರು. ಅವರ ಕರೆಗೆ ಈವರೆಗೆ 9 ಕಂಪನಿಗಳು ಓಗೊಟ್ಟಿವೆ. “ಅವರು ಟ್ವೀಟ್ ನೋಡಿ ಹೀಗೆ ಮಾಡಿದರೋ ಅಥವಾ ಮೊದಲೇ ಪರಿಹಾರ ನೀಡಲು ನಿರ್ಧರಿಸಿದ್ದು ಈ ಅವಕಾಶ ಬಳಸಿಕೊಳ್ಳಲು ನಿರ್ಧರಿಸಿದರೋ ಗೊತ್ತಿಲ್ಲ,” ಎಂದು ಅಂಬಾ ಪ್ರತಿಕ್ರಿಯಿಸಿದ್ದಾರೆ.

ಈ ವಾರ ಟ್ವೀಟ್ ಮಾಡಿರುವ ಡಾ.ಶೀನು ಶ್ಯಾಮಲನ್, “ಇವತ್ತು ವಿಶ್ರಾಂತಿ ಇಲ್ಲ. 40 ಮನೆಗಳಿಗೆ ಭೇಟಿ ನೀಡಿದೆ. ಪ್ರವಾಹದ ನಂತರ ಉಂಟಾಗಬಹುದಾದ ಸಾಂಕ್ರಾಮಿಕ ರೋಗಗಳ ಬಗ್ಗೆ ವಿವರಿಸಿದೆ. ಆಹಾರದ ಪೊಟ್ಟಣಗಳನ್ನು ಕೊಟ್ಟೆ. ತುಂಬಾ ನಡೆದಾಡಿದೆ. ಅವರೊಂದಿಗೆ ಕಾಲ ಕಳೆದೆ,” ಎಂದಿದ್ದಾರೆ. ಅವರ ಪತಿ ರಾಹುಲ್ ಕೂಡ ವೈದ್ಯರು. ತಿರಚ್ಚೂರಿನಿಂದ ಬಂದವರು. ಇಬ್ಬರೂ ಎರಡು ವಾರಗಳಿಂದ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. “ಪ್ರವಾಹಪೀಡಿತ ಪ್ರದೇಶಗಳು, ಸಂಪರ್ಕವೇ ಸಾಧ್ಯವಿಲ್ಲದ ಸ್ಥಳಗಳಿಗೆ ತೆರಳಿದಾಗ ನಮ್ಮ ಕಣ್ಣುಗಳು ತೆರೆದವು,” ಎನ್ನುತ್ತಾರೆ ಆ ದಂಪತಿ. “ಸತ್ತ ಪ್ರಾಣಿಗಳಿಂದ ಹರಡುವ ಲೆಪ್ಟೊಸ್ಪೈರೋಸಿಸ್ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆತಂಕ ತಂದೊಡ್ಡಿದೆ. ಆದರೆ, ಜನರಿಗೆ ಸಹಾಯ ಮಾಡಲು ಅನೇಕ ವಿಧಾನಗಳಿವೆ. ಸಕ್ಕರೆ ಕಾಯಿಲೆ, ರಕ್ತದೊತ್ತಡದಿಂದ ಬಳಲುತ್ತಿರುವ ಅನೇಕ ಮಂದಿ ನಮ್ಮನ್ನು ಕಂಡು ಔಷಧಿಗಳಿಲ್ಲ ಎಂದರು. ಅಂತಹವರಿಗೆ ಸಹಾಯ ಮಾಡುವ ಅಗತ್ಯವಿದೆ,” ಎನ್ನುತ್ತಾರವರು.

ಇಂತಹುದೇ ಇನ್ನೊಂದು ಸ್ಫೂರ್ತಿದಾಯಕ ಕತೆ ಕುಟ್ಟನಾಡ್ ಮೂಲದ ಅಂತಾರಾಷ್ಟ್ರೀಯ ಜಲಕ್ರೀಡೆಗಳ ಆಟಗಾರ ರೊಚಾ ಚಾಕೊ ಮ್ಯಾಥ್ಯೂ ಅವರದು. ತಮ್ಮ ಕುಟುಂಬದವರು ಆಶ್ರಯ ಕೇಂದ್ರದಲ್ಲಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದ ಬಳಿಕ ಮ್ಯಾಥ್ಯೂ ಮತ್ತು ಅವರ ಇಬ್ಬರು ಸ್ನೇಹಿತರು ಸ್ಪೀಡ್ ಬೋಟುಗಳಲ್ಲಿ ಕುಳಿತರು. ಆಗಸ್ಟ್ 15ರಿಂದ 21ರವರೆಗೆ ಆರು ದಿನಗಳ ಕಾಲ ಕುಟ್ಟನಾಡ್, ಪಥನಂತಿಟ್ಟ ಮತ್ತು ಅಲಪ್ಪುಳದಲ್ಲಿ ಸುಮಾರು 1,500ಕ್ಕಿಂತಲೂ ಹೆಚ್ಚು ಜನರನ್ನು ರಕ್ಷಿಸಿದರು. “ಮನೆಗಳ ಮುಂದೆ ಬೋಟ್ ನಿಲ್ಲಿಸಿ, ಮನೆಯೊಳಗೆ ಈಜಿ ಹೋಗಿ ಜನರನ್ನು ರಕ್ಷಿಸಿ ಪರಿಹಾರ ಕೇಂದ್ರಕ್ಕೆ ಕರೆತರುತ್ತಿದ್ದೆವು. ಮುಳುಗಿದ್ದ ರಬ್ಬರ್ ತೋಟಗಳ ಮೇಲೆ ದೋಣಿ ಚಲಾಯಿಸಲು ಹೆಣಗಿದೆವು. ಎಂಜಿನ್ ಕೈಕೊಟ್ಟಾಗಲೆಲ್ಲ ಈಜುತ್ತ ದೋಣಿಯನ್ನು ಮುಂದಕ್ಕೆ ತಳ್ಳುತ್ತಿದ್ದೆವು. ನಮ್ಮಲ್ಲಿದ್ದ ಒಬ್ಬರು ದೋಣಿ ಎತ್ತ ಚಲಿಸಬೇಕು ಎಂದು ನಿರ್ಧರಿಸುತ್ತಿದ್ದರು,” ಎಂಬುದು ಚಾಕೋ ಅವರ ಮಾತು. ಸದ್ಯ, ಆಶ್ರಯ ಕೇಂದ್ರದಲ್ಲಿರುವ ಕುಟುಂಬವನ್ನು ಸೇರಿಕೊಂಡಿರುವ ಮ್ಯಾಥ್ಯೂ, “ಎಲ್ಲವನ್ನೂ ಕಳೆದುಕೊಂಡಿದ್ದೇವೆ,” ಎನ್ನುತ್ತಾರೆ; ಇಷ್ಟಾದರೂ ಯಾರಾದರೂ ಸಹಾಯ ಬೇಡಿ ಸಂದೇಶ ಕಳುಹಿಸಿದರೆ ತಕ್ಷಣ ರಕ್ಷಣೆಗೆ ಧಾವಿಸುತ್ತಿದ್ದಾರೆ.

‘ಕಂಪ್ಯಾಷನೇಟ್ ಕೇರಳಂ’ ಸಂಘಟನೆಯದು ಇನ್ನೊಂದು ಕತೆ. ಐಎಎಸ್ ಅಧಿಕಾರಿ ಪ್ರಶಾಂತ್ ನಾಯರ್ ಅವರ ಸ್ಫೂರ್ತಿಯಿಂದ ರಚನೆಯಾದ ಈ ಆನ್‌ಲೈನ್ ವೇದಿಕೆಯ ‘ಕಂಪ್ಯಾಷನೇಟ್ ಕೋಯಿಕ್ಕೋಡ್ ಘಟಕ’ವು ಮಾನಸಿಕ ಆರೋಗ್ಯ ಕೇಂದ್ರ ಹಾಗೂ ವಯೋವೃದ್ಧರ ಆಶ್ರಮ ತೆರೆಯಲು ಶ್ರಮಿಸುತ್ತಿದೆ. “ಪ್ರವಾಹ ತಲೆದೋರುತ್ತಿದ್ದಂತೆ ವೇದಿಕೆಯ ಸ್ವಯಂಸೇವಕರ ಸಂಖ್ಯೆ 6,000ದಷ್ಟು ಹೆಚ್ಚಿತು. ಅಮೆರಿಕ, ಇಂಗ್ಲೆಂಡ್‌ನ ತಂತ್ರಜ್ಞರಿಂದ ಹಿಡಿದು ಶಿಕ್ಷಕರವರೆಗೆ ಎಲ್ಲರೂ ನೆರವಿಗಾಗಿ ವಿಶ್ವಾದ್ಯಂತ ಸಮಯ ವಲಯಗಳನ್ನು ಮೀರಿ ಕೈಜೋಡಿಸಿದರು. ಚೆನ್ನೈ, ಬೆಂಗಳೂರು, ಮೈಸೂರು ಮತ್ತು ಕೇರಳದ ಅನೇಕ ನಗರಗಳಲ್ಲಿ ಒಂಬತ್ತು ಕಾಲ್ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ,” ಎಂದು ನಾಯರ್ ಹೇಳುತ್ತಾರೆ. ಈ ಕಾಲ್ ಸೆಂಟರ್‌ಗಳು ಅಹರ್ನಿಶಿ ದುಡಿದವು. ರಾಜ್ಯದಲ್ಲಿದ್ದ ತಂಡದ ಸದಸ್ಯರಿಗೆ ಕರೆಗಳನ್ನು ಪರಿಶೀಲಿಸಿ ವಿವರಗಳನ್ನು ರವಾನಿಸಿದವು. ವಾಟ್ಸಾಪ್ ಮತ್ತು ಸ್ಲ್ಯಾಕ್ ಗ್ರೂಪುಗಳನ್ನು ರಚಿಸಿ ನೆರವು ನೀಡಲಾಯಿತು.

ಎಲ್ಲರಿಗೂ ಸಹಾಯ ಮಾಡುವಷ್ಟು ದೊಡ್ಡ ಸಂಘಟನೆ ಅದು ಅಲ್ಲದೆ ಇರಬಹುದು; ಆದರೆ, ತನ್ನ ಸಾಮರ್ಥ್ಯವನ್ನೂ ಮೀರಿ ಜನರ ನೆರವಿಗೆ ಧಾವಿಸಿದೆ. “ನಮಗೆ ಗೊತ್ತಿದ್ದ ಎಲ್ಲರನ್ನೂ ಸಂಪರ್ಕಿಸಿದೆವು. ಪ್ರತ್ಯೇಕ ತಂಡಗಳಾಗಿ ರೂಪುಗೊಂಡೆವು. ಅಧಿಕಾರಿಗಳಿಗೆ ಮಾಹಿತಿ ನೀಡುವ ಮುನ್ನ ಪರಿಶೀಲಿಸುತ್ತಿದ್ದೆವು. ವಿಮಾನದ ಮೂಲಕ ನಮ್ಮ ಸ್ವಯಂಸೇವಕರು ಆಹಾರ ಪೊಟ್ಟಣಗಳನ್ನು ಹಂಚಿ ಬರುತ್ತಿದ್ದರು,”ಎನ್ನುತ್ತಾರೆ ಎರ್ನಾಕುಲಂ ಮೂಲದ ಉದ್ಯಮಿ ಬಿಂದು ಸತ್ಯಜಿತ್. ಇದರಾಚೆಗೆ ಐದು ಟ್ರಕ್ಕುಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ತುಂಬಿ ಬೇರೆ-ಬೇರೆ ಪ್ರದೇಶಗಳ ಜನರಿಗೆ ತಲುಪಿಸಿದೆ ಸಂಘಟನೆ. ಇನ್ನಷ್ಟು ಸಾಮಗ್ರಿಗಳನ್ನು ಹೊತ್ತ ಲಾರಿಗಳು ಮಂಗಳವಾರ ವಯನಾಡ್ ತಲುಪಲಿವೆ.

ಕೇರಳದಿಂದ 1000 ಕಿಮೀ ದೂರದಲ್ಲಿರುವ ಉತ್ತರ ಪ್ರದೇಶದ ಲಖನೌ ಐಐಎಂ ಪ್ರಾಧ್ಯಾಪಕರೊಬ್ಬರು ವಿನೂತನ ರೀತಿಯಲ್ಲಿ ಪರಿಹಾರ ಕಾರ್ಯಕ್ಕೆ ಮುಂದಾದರು. ತಮ್ಮ ಸ್ಟ್ರಾಟೆಜಿಕ್ ಬ್ಯುಸಿನೆಸ್ ನೆಗೋಷಿಯೇಷನ್ ಕೋರ್ಸ್ ಅನ್ನು ನಿಧಿ ಸಂಗ್ರಹಣೆಗೆ ಬಳಸಲು 140 ವಿದ್ಯಾರ್ಥಿಗಳೊಂದಿಗೆ ಅನುವಾದರು. ಅವರೆಲ್ಲ ಕಲಾಕೃತಿಗಳನ್ನು ರಚಿಸಿ ಹತ್ತಿರದ ಮಾಲ್‌ವೊಂದಕ್ಕೆ ದೌಡಾಯಿಸಿದರು. ಜನರೊಂದಿಗೆ ಮನವೊಲಿಸಿ ತಮ್ಮ ಕಲಾಕೃತಿಗಳನ್ನು ಮಾರಿದರು. ಭಾನುವಾರದ ಹೊತ್ತಿಗೆ ತಮ್ಮಲ್ಲಿದ್ದ ಎಲ್ಲ ಕಲಾಕೃತಿಗಳನ್ನು ಮಾರಿ 2 ಲಕ್ಷ ರುಪಾಯಿ ಸಂಗ್ರಹಿಸಿದರು.

ಮುಂಬೈನಲ್ಲಿ ಮತ್ತೊಂದು ವಿಶಿಷ್ಟ ಕೆಲಸ ನಡೆಯಿತು. ಮುಂಬೈ ಐಐಟಿ ಪಿಎಚ್‌ಡಿ ವಿದ್ಯಾರ್ಥಿ 33 ವರ್ಷದ ರಂಜಿತ್ ಎಂಬುವವರು ಕೇರಳಕ್ಕೆ ವಲಸೆಹೋದ ಕಾರ್ಮಿಕರ ಬಗ್ಗೆ ತಲೆಕೆಡಿಸಿಕೊಂಡಿದ್ದರು. “ಕೇರಳ ಸರ್ಕಾರ ಇಂಗ್ಲಿಷ್ ಮತ್ತು ಮಲಯಾಳಂನಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಎಚ್ಚರ ನೀಡಿತ್ತು. ಆದರೆ, ಅನೇಕರಿಗೆ ಆ ಭಾಷೆಗಳು ಗೊತ್ತಿರಲಿಲ್ಲ. ಹಾಗಾಗಿ, ನಾವೆಲ್ಲ ಸೇರಿ ಆ ಕ್ರಮಗಳನ್ನು ಬಂಗಾಳಿ, ಗುಜರಾತಿ, ಒಡಿಯಾ ಮುಂತಾದ ಭಾಷೆಗಳಿಗೆ ತರ್ಜುಮೆ ಮಾಡಿ ಫೇಸ್ಬುಕ್ ಪುಟಗಳಲ್ಲಿ ಪ್ರಕಟಿಸಿದೆವು. ಅಲ್ಲದೆ, ಕೇರಳದಲ್ಲಿರುವ ಸ್ವಯಂಸೇವಕರಿಗೂ ಅನುವಾದಿತ ಮಾಹಿತಿಯನ್ನು ರವಾನಿಸಿದೆವು. ನಂತರ ವಾಟ್ಸಾಪ್ ಮೂಲಕ ಆಡಿಯೊ ಕ್ಲಿಪ್ ಬಳಸಿ ಅವರವರ ಭಾಷೆಯಲ್ಲಿ ಮಾಹಿತಿ ನೀಡಿ ಧೈರ್ಯ ತುಂಬಲಾಯಿತು. ನನಗೆ ಕೇರಳ ತಲುಪಲು ಸಾಧ್ಯವಿರಲಿಲ್ಲ. ಆದರೆ, ಅವರಿಗೆ ಹೇಗಾದರೂ ಸಹಾಯ ಮಾಡಬೇಕಿತ್ತು,” ಎನ್ನುತ್ತಾರೆ ರಂಜಿತ್. ಐಐಟಿಯ 15ರಿಂದ 20 ಮಂದಿ ವಿದ್ಯಾರ್ಥಿಗಳ ತಂಡ ಬೆಳಿಗ್ಗೆಯಿಂದ ಸಂಜೆವರೆಗೆ ಪಾಳಿಗಳಲ್ಲಿ ಕೆಲಸ ಮಾಡಿತು. ವಲಸಿಗರಿಗೆ ಕೂಡ ಮಾರ್ಗದರ್ಶನ ಮಾಡಿ ಎಂದು ಅವರು ಕೇರಳ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಬೆಂಗಳೂರಿನ ಕೆಲ ಯುವಕರ ಗುಂಪು ಪರಿಹಾರಕ್ಕೆ ಧುಮುಕಿದ ಕತೆ ಹೀಗಿದೆ. ಕೆ ಎಂ ಜುಬೀಶ್ ಸಾಮಾಜಿಕ ಮಾಧ್ಯಮಗಳಲ್ಲಿ ಪರಿಣಿತ. ವಿವಿಧ ಗ್ರೂಪುಗಳಲ್ಲಿದ್ದ ಸ್ನೇಹಿತರ ಮನವೊಲಿಸಿ, ಎರಡು ಟ್ರಕ್ ಭರ್ತಿ ಪರಿಹಾರ ಸಾಮಗ್ರಿ ತುಂಬಿ ಆದಿವಾಸಿಗಳೇ ಹೆಚ್ಚಿದ್ದ ವಯನಾಡಿಗೆ ಕಳುಹಿಸಿಕೊಟ್ಟರು. ಆ ಸಂದರ್ಭವನ್ನು ಸ್ಮರಿಸುತ್ತ ಜುಬೀಶ್, “ನೇಪಾಳಿ ಅಡುಗೆ ಭಟ್ಟರೊಬ್ಬರು ತಮ್ಮ ಅಡುಗೆ ಮನೆಗೆ ಧಾವಿಸಿ ಅಲ್ಲಿದ್ದ ಅಕ್ಕಿಚೀಲಗಳನ್ನೇ ಪರಿಹಾರ ಸಾಮಗ್ರಿ ರೂಪದಲ್ಲಿ ನೀಡಿದರು. ಅವರಿಗೆ ಅಷ್ಟು ಮಾತ್ರ ಸಹಾಯ ಮಾಡಲು ಸಾಧ್ಯವಿತ್ತು. ಎಲ್‌ಕೆಜಿ ಮಕ್ಕಳು ತಮ್ಮಲ್ಲಿದ್ದ ಚಾಕೊಲೆಟ್‌ಗಳನ್ನೇ ದೇಣಿಗೆ ರೂಪದಲ್ಲಿ ನೀಡಿದರು,” ಎನ್ನುತ್ತಾರೆ. ವಯನಾಡಿನ ಚೇಕಡಿಯಲ್ಲಿ ಕೆಲ ಸಮಯ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಜುಬೀಶ್ ಮತ್ತವರ ಸಂಗಡಿಗರು, ಈಗ ಅಲ್ಲಿನ ಬುಡಕಟ್ಟು ಜನರಿಗೆ ಮನೆ ಕಟ್ಟಿಕೊಡಲು ನೆರವಾಗುತ್ತಿದ್ದಾರೆ.

ಇದನ್ನೂ ಓದಿ : ಪ್ರವಾಹದಂಥ ದುಸ್ಥಿತಿಯನ್ನು ಕೇರಳ ಘನತೆಯಿಂದ ನಿಭಾಯಿಸಿದ್ದರ ಗುಟ್ಟೇನು ಗೊತ್ತೇ?

ಮನುಷ್ಯರಷ್ಟೇ ಪ್ರಾಣಿಗಳು ಕೂಡ ಪ್ರವಾಹದಿಂದ ಸಂಕಷ್ಟಕ್ಕೆ ತುತ್ತಾಗಿದ್ದವು. ಇಡುಕ್ಕಿ ಜಿಲ್ಲಾಧಿಕಾರಿ ಮನವಿ ಮೇರೆಗೆ ಚೆನ್ನೈ ಮೂಲದ ದಿನೇಶ್ ಬಾಬಾ ಇಡುಕ್ಕಿಗೆ ಧಾವಿಸಿದರು. ಪ್ರಾಣಿ ಸಂರಕ್ಷಣಾ ಸಹಾಯವಾಣಿ ರಚಿಸಿ, ರಾಜ್ಯದೆಲ್ಲೆಡೆ ಪ್ರಾಣಿಗಳ ರಕ್ಷಣೆಗೆ ಮುಂದಾದರು. ಆರು ತಿಂಗಳಷ್ಟು ಎಳೆಯ ಲ್ಯಾಬ್ರೆಡಾರ್ ನಾಯಿಮರಿಯನ್ನು ರಕ್ಷಿಸಿದ್ದನ್ನು ಬಾಬಾ ಹೀಗೆ ನೆನೆಯುತ್ತಾರೆ: “ಪಂಡಲ್ಲೂರಿನ ಮನೆಯೊಂದರಲ್ಲಿ ಕುತ್ತಿಗೆ ಮಟ್ಟದವರವರೆಗೆ ನೀರು ತುಂಬಿತ್ತು. ಆ ಮನೆ ತಲುಪಲು 3 ಕಿಮೀ ನಡೆಯಬೇಕಿತ್ತು. ಎರಡಂತಸ್ತಿನ ಮನೆ ಮೇಲೆ ಹತ್ತಿ ನಾಯಿಮರಿಯನ್ನು ಬಚಾವ್ ಮಾಡಬೇಕಿತ್ತು.” ಬಾಬಾ ಅವರಂತೆಯೇ ಪ್ರಾಣಿಪ್ರಿಯರಾದ ಬೆಂಗಳೂರಿನ ವೈಎಸ್ಎಂ ರಾಜೀವ್ ಕೇರಳಕ್ಕೆ ಧಾವಿಸಿ ನೂರಾರು ಹಕ್ಕಿ, ನಾಯಿ ಹಾಗೂ ಕುರಿಗಳನ್ನು ರಕ್ಷಿಸಿದರು.

ಇನ್ನು, ಬೆಂಗಳೂರಿನ ಕೆಲವರು ಕೊಡಗಿನತ್ತ ನಡೆದಿದ್ದರು. ಕೊಡಗು ಕೂಡ ಕೇರಳದಂತೆಯೇ ಪ್ರವಾಹದಿಂದ ತತ್ತರಿಸಿತ್ತು. ಬೆಂಗಳೂರಿನ ಉದ್ಯಮಿ ಕಾರ್ತಿಕ್ ಮತ್ತು ಅವರ ಸ್ನೇಹಿತೆ ಅಪೂರ್ವ ಗುರುರಾಜ್ 16 ಹಸುಗಳನ್ನು ರಕ್ಷಿಸಿದರು. “ಎಲ್ಲರೂ ಮನುಷ್ಯರ ಬಗ್ಗೆಯೇ ಚಿಂತಿಸುತ್ತಿದ್ದರು. ಅವರನ್ನು ನೋಡಿಕೊಳ್ಳಲು ಇತರರು ಇದ್ದಾರೆ. ಆದರೆ ಪ್ರಾಣಿಗಳ ಕತೆ? ಪ್ರಾಣಿಪ್ರಿಯನಾಗಿದ್ದ ನಾನು ಆ ಬಗ್ಗೆ ಗಮನ ಹರಿಸಿದೆ,” ಎನ್ನುತ್ತಾರೆ ಕಾರ್ತಿಕ್.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More