‘ಮೃದು ಹಿಂದುತ್ವ’ ಪೊರೆವವರ ಜತೆ ದಕ್ಷಿಣಾಯನದ ಸಹಿಷ್ಣುತೆ ಸಾಹಿತ್ಯ ಸಮ್ಮೇಳನ

ಪ್ರಸನ್ನರ ಗ್ರಾಮ ಸೇವಾ ಸಂಘ ಅದರ ಸೀಮಿತ ಚೌಕಟ್ಟಿನಲ್ಲಿ ಉದಾರವಾದಿ ಬ್ರಾಹ್ಮಣರನ್ನೆಲ್ಲಾ ಸೇರಿ ಅವರ ‘ನೈಜ ಹಿಂದೂ ಧರ್ಮ’ವನ್ನು ಉಳಿಸಿಕೊಳ್ಳುವ ನಿಟ್ಟನಲ್ಲಿ ಯಾವ ಕಾರ್ಯಕ್ರಮ ಬೇಕಾದರೂ ಮಾಡಿಕೊಳ್ಳಲಿ. ನಾವೂ ದೂರದಲ್ಲಿ ನಿಂತು ಅವರ ನಾಟಕಗಳನ್ನು ನೋಡೋನ, ಹಾಡುಗಳನ್ನು ಕೇಳೋಣ

ಕಲಬುರ್ಗಿ ಅವರ ಹತ್ಯೆ ಆದಾಗ ಇಡೀ ಸಮಾಜ ಬೆಚ್ಚಿಬಿದ್ದುದ್ದಕ್ಕಿಂತ ಹೆಚ್ಚಾಗಿ ಸಾಹಿತ್ಯಕ ಲೋಕ ಬೆಚ್ಚಿಬಿದ್ದಿತು. ಹೆಚ್ಚುತ್ತಿರುವ ವೈದಿಕ ಸಂಸ್ಕೃತಿಯ ದಮನಕಾರಿ ಪ್ರವೃತ್ತಿಯ ವಿರುದ್ಧ ಹೋರಾಡಲು ಸಾಮಾಜಿಕ ಹೋರಾಟಗಾರರಿಗೆ ನೈತಿಕ ಬೆಂಬಲ ನೀಡಿದ್ದ ದೊಡ್ಡ ಸಂಖ್ಯೆಯ ಬರಹಗಾರರು ಕಲಬುರ್ಗಿಯವರ ಕೊಲೆಯಾದಾಗ ನಡುಗಿಹೋಗಿದ್ದರು. ನಾವು ಉಸಿರಾಡುತ್ತಿರುವ ಸಮಾಜ ಹೀಗೆ ಕಾರುಣ್ಯಹೀನ ಪರಿಸ್ಥಿತಿಗೆ ಪಕ್ಕಾಗುತ್ತಿದೆ ಎಂಬುದನ್ನು ಅವರು ಊಹಿಸಲೂ ಹೆದರುತ್ತಿದ್ದರು. ಅಂಥಾ ಸಂದರ್ಭದಲ್ಲಿ ‘ದಕ್ಷಿಣಾಯನ’ ಹುಟ್ಟಿತು. ಜಿ ಎನ್ ದೇವಿ ಅವರಂಥಾ ಅದ್ವಿತೀಯ ವಿದ್ವಾಂಸರು, ರಹಮತ್ ತರೀಕೆರೆ, ರಾಜೇಂದ್ರ ಚೆನ್ನಿಯವರಂಥ ಹಿರಿಯರ ಜೊತೆ ಕೂತು ಇಂಥಾ ವಿಷಮ ಸಾಮಾಜಿಕ ಪರಿಸ್ಥಿತಿಯಲ್ಲಿ ಬರಹಗಾರರ ಜವಾಬ್ದಾರಿ ಏನಾಗಿರಬೇಕು ಎಂಬುದನ್ನು ಚರ್ಚಿಸಿದರು. ಎಂ ಡಿ ಒಕ್ಕುಂದ, ಬಸವರಾಜ ಸೂಳಿಬಾವಿ, ಅರುಣ್ ಜೋಳದ ಕೂಡ್ಲಿಗಿ, ಪೀರ್ ಭಾಷಾ ಥರದ ಹೋರಾಟದ ಹಿನ್ನೆಲೆಯ ಹತ್ತಾರು ಯುವ ಬರಹಗಾರರು ಅವರ ಆಶಯಗಳಿಗೆ ಅರ್ಥ ಕೊಡುವಲ್ಲಿ ಶ್ರಮಿಸಿದರು. ನಾನೂ ಅದರ ಭಾಗವಾಗಿ ಧಾರವಾಡದವರೆಗೂ ಹೋಗಿ ಬಂದೆ. ಧಾರವಾಡ ಸಭೆಯ ನಂತರದ ಶಿವಮೊಗ್ಗದ ‘ದಕ್ಷಿಣಾಯನ ಸಮಾವೇಶ’ ಕೆಲವರ ಹಿತಾಸಕ್ತಿಗೆ ಸಿಕ್ಕಿ ಸೊರಗಿತು.

ಆನಂತರದಲ್ಲಿ ನಾನು ಮತ್ತೆ ದಕ್ಷಿಣಾಯನದ ಹೆಸರು ಕೇಳಿದ್ದು ಮೊನ್ನೆಯೇ. ಗಾಂಧಿವಾದಿ ಹೆಗ್ಗೋಡು ಪ್ರಸನ್ನ ಅವರ ‘ಗ್ರಾಮ ಸೇವಾ ಸಂಘ’ದ ಜೊತೆ ಸೇರಿ ಬೆಂಗಳೂರಿನಲ್ಲಿ ‘ದಕ್ಷಿಣಾಯನ’ ಆಯೋಜಿಸಿದ್ದ ‘ಸಹಿಷ್ಣುತೆಗಾಗಿ ಸಾಹಿತ್ಯ ಸಮ್ಮೇಳನ’ದ ರೂಪುರೇಷೆ ಸಿದ್ಧವಾಗಿದ್ದು ನನ್ನ ಗಮನಕ್ಕೆ ಬಂದಿರಲೇ ಇಲ್ಲ. ಅದರ ಆಹ್ವಾನ ಪತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಏನೂ ಪ್ರತಿಕ್ರಿಯಿಸದೆ ಸುಮ್ಮನಿದ್ದೆ. ಯಾಕೆಂದರೆ, ಒಂದು ನಿರ್ದಿಷ್ಟ ಕಾರಣಕ್ಕಾಗಿ ಹುಟ್ಟಿಕೊಂಡ ಅಷ್ಟು ದೊಡ್ಡ ಸಂಘಟನೆ ಗಾಂಧಿಯ ಹೆಸರು ಹೇಳಿಕೊಂಡು ‘ಮೃದು ಹಿಂದುತ್ವ’ವನ್ನು ಪೊರೆಯುತ್ತಿರುವ ಪ್ರಸನ್ನ ಅಂಥವರೊಂದಿಗೆ ಸೇರಿ ಕಾರ್ಯಕ್ರಮ ಆಯೋಜಿಸಿದ್ದು ನನ್ನಂಥವರಿಗೆ ಇಂಥ ದುರಿತ ಕಾಲದಲ್ಲಿ ಅಸಹಜವಾಗಿ ಕಂಡಿತು. ಅಷ್ಟು ಹೊತ್ತಿಗೆ ಗೆಳೆಯ ಪೀರ್ ಭಾಷಾ ಫೋನ್ ಮಾಡಿದ ಕಾರಣಕ್ಕೆ ಅದೇ ಕಾರ್ಯಕ್ರಮದಲ್ಲಿ ನಾನೂ ಮಾತಾಡಲು ಒಪ್ಪಿಕೊಳ್ಳಬೇಕಾಯಿತು.

ಆದರೆ ಕಾರ್ಯಕ್ರಮಕ್ಕೆ ಹೋದ ನನ್ನನ್ನು ಎದುರುಗೊಂಡಿದ್ದು ವಾಸು ದೀಕ್ಷಿತ್ ಎಂಬ ನಗರದ ಹಾಡುಗಾರ ಹಾಡುತ್ತಿದ್ದ ರಾಮನ ಬಗೆಗಿನ ಹಾಡು. ಒಳಗೆ ಹೋದರೆ, ‘ದಕ್ಷಿಣಾಯನ’ದ ಹಿರಿಯರೆಲ್ಲ ಗಾಂಧಿ ಟೋಪಿ ಹಾಕಿದ್ದರು. ವೈದಿಕ ಪರಂಪರೆಯ ಜೊತೆಗೆ ಗುರ್ತಿಸಿಕೊಂಡ ಹಾಗು ಕಲ್ಬುರ್ಗಿ, ಗೌರಿ ಕೊಲೆಯಾದಾಗ ಗುಮ್ಮನ ಗುಸುಕನಹಾಗಿದ್ದ ಎಸ್ ಆರ್ ವಿಜಯಶಂಕರ್, ವಿವೇಕ್ ಶಾನುಬಾಗ್, ನಾಗರಾಜ ವಸ್ತಾರೆಯಂಥವರೇ ದೊಡ್ಡ ಪ್ರಮಾಣದಲ್ಲಿದ್ದರು. ಪ್ರಸನ್ನ ಅವರಂತೂ ‘ಸಾಹಿತ್ಯವನ್ನು ಸಂತೋಷದಿಂದ’ ರಚಿಸಬೇಕೆಂದು ಸಲಹೆ ನೀಡುತ್ತಿದ್ದರು. ದಲಿತ, ಜನಪದ ಹಾಡುಗಾರರ ಬದಲಿಗೆ ಎಂ ಡಿ ಪಲ್ಲವಿ, ವಾಸು ದೀಕ್ಷಿತ್, ಅಂಬೇಡ್ಕರ್, ಬುದ್ಧ, ಫುಲೆ ದಂಪತಿಗಳ ಫೋಟೋಗಳನ್ನು ಹೊರಗೆ ಮಾರುತ್ತಿದ್ದವರ ಬದಲಾಗಿ ಪ್ರಸನ್ನರ ದೇಸೀ ಅಂಗಡಿ. ನಾನು ಯಾವುದೋ ಉದಾರವಾದಿ ಹಿಂದುತ್ವದ ಕಾರ್ಯಕ್ರಮಕ್ಕೆ ಬಂದುಬಿಟ್ಟೆನಾ ಅನ್ನಿಸಿತು. ಹಿರಿಯ ದಲಿತ ಕವಿ ಮೂಡ್ನಾಕೂಡು ಚಿನ್ನಸ್ವಾಮಿಯವರು ಬುದ್ಧನ ಮೈತ್ರಿಯ ಬಗ್ಗೆ ಮಾತಾಡದೇ ಇದ್ದರೆ, ಜಿ ಎನ್ ದೇವಿಯವರು ಸಧ್ಯದ ಜವಾಬ್ದಾರಿ ಕುರಿತು ಪ್ರಸ್ತಾಪಿಸದೇ ಇದ್ದರೆ, ಮೀನಾಕ್ಷಿ ಬಾಳಿಯವರು ತಮ್ಮ ಎಂದಿನ ಶೈಲಿಯಲ್ಲಿ ನಿಂತು ಭಾಷಣ ಮಾಡದೇ ಇದ್ದರೆ, ಅರುಣ್ ಜೋಳದಕೂಡ್ಲಿಗಿ ಮುಂದೆನುಗ್ಗಿ ನಗರದ ಬರಹಗಾರರ ಮಿತಿಯ ಬಗ್ಗೆ ಗಮನ ಸೆಳೆಯದಿದ್ದರೆ ಇಡೀ ಕಾರ್ಯಕ್ರಮ ರಾಮನ ಭಜನೆಯೇ ಆಗಿಬಿಡುತ್ತಿತ್ತು.

ಇದನ್ನೂ ಓದಿ : ಸ್ಟೇಟ್‌ಮೆಂಟ್‌ | ಸಾವಿನಲ್ಲಿ ಸಿದ್ಧಾಂತದ ಮಿತಿಯನ್ನು ಮೀರಿದ ಗೌರಿಯನ್ನು ಮತ್ತದೇ ಚೌಕಟ್ಟಿಗೆ ಸೀಮಿತಗೊಳಿಸಿದ್ದು ಹೇಗೆ?

ನನ್ನ ಆತಂಕವಿರುವುದು ಇಂದಿನ ಜಾತಿವಾದ, ಕೋಮುವಾದಗಳನ್ನು ಹಿಮ್ಮೆಟ್ಟಿಸಲು, ಕನಿಷ್ಟಪಕ್ಷ ಎದುರಿಸಿ ನಿಲ್ಲಲು ಇಂಥಾ ಉದಾರವಾದಿ ಮಾರ್ಗಗಳನ್ನು ನಾವು ಬಿಡಲಾರೆವಾ ಅನ್ನುವುದು. ಭಾರತದ ವೈದಿಕ ಸಂಸ್ಕೃತಿಯ ದಮನಕಾರಿ ಆಕ್ರಮಣದ ಎದುರು ಸೆಣೆಸಲಾರದ ಗಾಂಧಿವಾದ ನಿರ್ದಿಷ್ಟ ಕಾರ್ಯಯೋಜನೆಗಳನ್ನು ರೂಪಿಸಲು ಆಗದೆ ನಿದ್ರಾವಸ್ಥೆಯಲ್ಲಿದೆ. ಖಾದಿ, ಗ್ರಾಮ ಸ್ವರಾಜ್ಯ, ಸಾವಯವ ಕೃಷಿಯಂತಹ ಕಾರ್ಯಕ್ರಮಗಳನ್ನು ನಿಕೃಷ್ಟ ಬದುಕುಗಳನ್ನು ಕಂಡ, ಭೂಮಿಹೀನ ದಲಿತ ಸಮುದಾಯಗಳಾಗಲಿ ಹಾಗು ಅವರೊಂದಿಗೆ ನಡೆಯುತ್ತಿರುವ ನಿಷ್ಠುರವಾದಿ ಬರಹಗಾರರಾಗಲಿ ಅವಲಂಭಿಸಲು ಸಾಧ್ಯವಿಲ್ಲ. ಈಗಿನ ಕೋಮುವಾದದ ವಿರಾಟ್ ಸ್ವರೂಪವನ್ನು ಎದುರುಗೊಳ್ಳಲು ಕೇವಲ ಸಾಹಿತ್ಯ ಚಳವಳಿಗೂ ಸಾಧ್ಯವಿಲ್ಲ. ಬೀದಿ ಹೋರಾಟಗಳು, ಸಮುದಾಯಗಳೊಂದಿಗಿನ ಒಡನಾಟ ಹಾಗೂ ಕಾರುಣ್ಯ ತುಂಬಿದ ಸಾಹಿತ್ಯ ಪರಂಪರೆಯ ಮರುಹುಟ್ಟು ಇವೆಲ್ಲವನ್ನೂ ಮೇಳೈಸಿದ ಕಾರ್ಯಯೋಜನೆಯನ್ನು ರೂಪಿಸಿಕೊಂಡರೆ ಮಾತ್ರ ‘ಪರಿಣಾಮಕಾರಿ ಪ್ರತಿಕ್ರಿಯೆ’ಯನ್ನಾದರೂ ಕೊಡುವ ಸಾಮರ್ಥ್ಯ ಬರುತ್ತದೆ. ಆದರೆ, ರಾಮ- ಕೃಷ್ಣರ ಬಗೆಗಿನ ಭಜನೆ, ಗಾಂಧಿ ಟೋಪಿಯ ಬಳಕೆ, ನಾಡಿನ ಸಂಕಷ್ಟಗಳಿಗೆ ಕುರುಡಾಗಿದ್ದು ಸಹಿಷ್ಣುತೆಯ ಸಾಲುಗಳನ್ನು ಬರೆಯುವ ಕಾಪಟ್ಯದ ಸಾಹಿತ್ಯ ಚಟುವಟಿಕೆ ನಮ್ಮ ಶ್ರಮವನ್ನಷ್ಟೇ ಬಸಿದುಕೊಳ್ಳುತ್ತದೆ. ಇಂಥಾ ಸಂದರ್ಭದಲ್ಲಿ ನಾಡಿನ ಸಂಕಷ್ಟಗಳಿಗೆ ದನಿಯಾಗಬೇಕಿದ್ದ ದಕ್ಷಿಣಾಯನ ಇಂಥಾ ಸ್ಥಿತಿಗೆ ಬಂದು ನಿಂತುಬಿಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಪ್ರಸನ್ನರ ಗ್ರಾಮ ಸೇವಾ ಸಂಘ ಅದರ ಸೀಮಿತ ಚೌಕಟ್ಟಿನಲ್ಲಿ ಉದಾರವಾದಿ ಬ್ರಾಹ್ಮಣರನ್ನೆಲ್ಲಾ ಸೇರಿಸಿಕೊಂಡು ಅವರ ‘ನೈಜ ಹಿಂದೂ ಧರ್ಮ’ವನ್ನು ಉಳಿಸಿಕೊಳ್ಳುವ ನಿಟ್ಟನಲ್ಲಿ ಯಾವ ಕಾರ್ಯಕ್ರಮ ಬೇಕಾದರೂ ಮಾಡಿಕೊಳ್ಳಲಿ. ನಾವೂ ದೂರದಲ್ಲಿ ನಿಂತು ಅವರ ನಾಟಕಗಳನ್ನು ನೋಡೋನ, ಹಾಡುಗಳನ್ನು ಕೇಳೋಣ. ಭಾರತದ ಜಾತಿ ವ್ಯವಸ್ಥೆಯನ್ನು ಬಲಿಸಿದ ಸಮುದಾಯಗಳಲ್ಲಿ ಅಂಥ ಅರಿವು ಬರಲೇಬೇಕು; ಆದರೆ, ‘ದಕ್ಷಿಣಾಯನ’ ತನ್ನ ಕೆಲಸಗಳನ್ನು ಇಂಥವರ ಸಹಯೋಗದಲ್ಲಿ ಮಾಡಲು ಹೊರಟರೆ ಅದು ವ್ಯರ್ಥ ಹಾಗೂ ಅಪರಾಧ. ಗೌರಿ ಹತ್ಯೆಯ ನಂತರ ಹೊರಬರುತ್ತಿರುವ ವರದಿಗಳನ್ನು ನೋಡಿದರೆ ನಮ್ಮ ಕೆಲಸಗಳು ಎಷ್ಟು ಸೂಕ್ಷ್ಮವೂ, ನಿರ್ದಿಷ್ಟವೂ ಆಗಿರಬೇಕು ಅನ್ನುವುದನ್ನು ನಾವಿನ್ನೂ ಯೋಚಿಸಿಯೇ ಇಲ್ಲ. ಮೊನ್ನೆಯ ಕಾರ್ಯಕ್ರಮ
ಕುರಿತ ನನ್ನ ಅಸಹನೆಗೆ ಕಾರಣ ಇದು.

ಈ ಬರಹದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳು ಲೇಖಕರದ್ದಾಗಿದ್ದು, ಸಂಸ್ಥೆಯದ್ದಲ್ಲ. ಈ ಸಂಬಂಧ ಚರ್ಚೆಯಲ್ಲಿ ಪಾಲ್ಗೊಳ್ಳಬಯಸುವವರು, ಆಸಕ್ತರು ತಮ್ಮ ಬರಹಗಳನ್ನು edit@thestate.news ಗೆ ಕಳುಹಿಸಿಕೊಡಬಹುದು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More