ಪತ್ನಿಯನ್ನು ನೋಡಲು ನಿತ್ಯ 6 ಕಿಮೀ ನಡೆಯುವ 99ರ ಹರೆಯದ ಲೂಥರ್

ಈ ವ್ಯಕ್ತಿಯ ಕತೆ ಕೇಳುತ್ತಿದ್ದರೆ ನಿಜಕ್ಕೂ ಕಣ್ಣಂಚು ಒದ್ದೆಯಾಗುತ್ತದೆ. ತನ್ನ ಪತ್ನಿಯ ನೆನಪಿಗಾಗಿ, 22 ವರ್ಷ ಸವೆಸಿ ಗುಡ್ಡಗಳ ನಡುವೆ ರಸ್ತೆ ನಿರ್ಮಿಸಿದ ದಶರಥ್ ಮಾಂಝಿಯದ್ದು ಒಂದು ಕತೆಯಾದರೆ, ಇದೀಗ ನಾವು ಹೇಳಲು ಹೊರಟಿರುವ ಲೂಥರ್ ಬದುಕು ಮತ್ತೊಂದು ರೀತಿಯ ರೋಚಕ ಕಥಾನಕ

ತನ್ನ ಪತ್ನಿಯ ಸಾವಿಗೆ ಕಾರಣವಾದ ಬೃಹತ್ ಬೆಟ್ಟವನ್ನು 22 ವರ್ಷಗಳವರೆಗೆ ಸತತವಾಗಿ ಕಡಿದು ಹಳ್ಳಿಗೆ ದಾರಿ ನಿರ್ಮಿಸಿದ ದಶರಥ ಮಾಂಝಿ ಪರ್ವತ ಮನುಷ್ಯ ಎಂದೇ ಖ್ಯಾತಿ. ಕುಗ್ರಾಮವೊಂದರಲ್ಲಿ ತನ್ನ ಮಡದಿಯೊಂದಿಗೆ ಮಾಂಝಿ ವಾಸಿಸುತ್ತಿದ್ದ. ಆದರೆ, ಒಂದು ದಿನ ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥಳಾದ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆತನಿಗೆ ಸಾಧ್ಯವಾಗಲಿಲ್ಲ. ದೂರದ ಆಸ್ಪತ್ರೆಗೆ ಕರೆದೊಯ್ಯುವಷ್ಟರದಲ್ಲಿ ಆಕೆ ಸಾವನಪ್ಪುತ್ತಾಳೆ. ಪತ್ನಿಯನ್ನು ಕಳೆದುಕೊಂಡ ದುಃಖದಲ್ಲಿದ್ದ ಮಾಂಝಿ, ತನ್ನ ಪರಿಸ್ಥಿತಿ ಮತ್ತಾರಿಗೂ ಬಾರದೆ ಇರಲಿ ಎಂದು ದೃಢಸಂಕಲ್ಪ ಮಾಡಿ, ಹಳ್ಳಿ ಮತ್ತು ಆಸ್ಪತ್ರೆಯ ನಡುವಿನ ಅಂತರ ಕಡಿಮೆ ಮಾಡಲು ಸುತ್ತಿಗೆ ಮತ್ತು ಉಳಿ ಬಳಸಿ ಸತತ 22 ವರ್ಷಗಳ ಪರಿಶ್ರಮದಿಂದ ರಸ್ತೆ ನಿರ್ಮಿಸಿ ಇತಿಹಾಸವಾದ.

ಪತ್ನಿಯ ಪ್ರೀತಿಗಾಗಿ ಮಾಂಝಿ ರಸ್ತೆ ನಿರ್ಮಿಸಿದರೆ; 99ರ ಹರೆಯದ ಲೂಥರ್ ಯಂಗರ್ ಜೀವನದ ಇಳಿಸಂಜೆಯ ಹೊತ್ತಲ್ಲೂ ದಣಿವನ್ನು ಲೆಕ್ಕಿಸದೆ, ಪ್ರೀತಿಯ ಮಡದಿಯನ್ನು ನೋಡಿಕೊಳ್ಳುವ ಸಲುವಾಗಿ ಪ್ರತಿದಿನ ಆರು ಕಿಲೋಮೀಟರ್ ನಡೆಯುತ್ತಾರೆ.

ಹೌದು, 99 ವರ್ಷ ವಯಸ್ಸಿನ ಲೂಥರ್ ನ್ಯೂಯಾರ್ಕ್ ನಿವಾಸಿ. ನೋಡಲು ಗಟ್ಟಿಮುಟ್ಟಾಗಿದ್ದಾರೆ. ಸದಾ ಉತ್ಸಾಹದ ಚಿಲುಮೆಯಂತಿರುವ ಅವರು, ಮಡದಿಯನ್ನು ನೋಡಲು ಕಳೆದ 9 ವರ್ಷಗಳಿಂದ ಪ್ರತಿದಿನ 6 ಕಿಲೋಮೀಟರ್ ಸಾಗುತ್ತ, ‘ಪ್ರೀತಿಗೆ ಸಾವಿಲ್ಲ’ ಎಂಬ ಮಾತನ್ನು ನೆನಪಿಸುತ್ತಾರೆ.

ಈ ಇಳಿವಯಸ್ಸಿನ ವ್ಯಕ್ತಿಯ ಪ್ರೇಮಕತೆಯನ್ನು ಮೊದಲ ಬಾರಿಗೆ ‘ಸ್ಪೆಕ್ಟ್ರಮ್ ನ್ಯೂಸ್ ರಾಚೆಸ್ಟರ್‌’ ವರದಿ ಮಾಡಿತ್ತು. ಈ ಸುದ್ದಿಯನ್ನು ಓದಿದ ‘ಸಿಬಿಎಸ್ ನ್ಯೂಸ್’ ವರದಿಗಾರ ಕೇಟ್ಲಿನ್ ಒಕೇನ್‌, ಲೂಥರ್ ಯಂಗರ್‌ರನ್ನು ಭೇಟಿ ಮಾಡಿದಾಗ, ಲೂಥರ್ ತಮ್ಮ ಜೀವನವನ್ನು ಒಕೇನ್ ಮುಂದೆ ಬಿಚ್ಚಿಟ್ಟರು.

"ನಾನು ಲೂಥರ್‌ನನ್ನು ಭೇಟಿಯಾಗಲು ಹೋದ ದಿನ ಅವರು ತಮ್ಮ 99ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಹೀಗಾಗಿ, ಒಳ್ಳೆಯ ಉಡುಪು ಧರಿಸಿ ಯುವಕರನ್ನೂ ನಾಚಿಸುವಂತೆ ತಯಾರಾಗಿದ್ದ ಅವರನ್ನು ನೋಡಿ ಹಸ್ತಲಾಘವ ಮಾಡಿದೆ. ಉತ್ಸಾಹದ ಚಿಲುಮೆಯಂತಿದ್ದ ಲೂಥರ್‌ನೊಂದಿಗೆ ನಾನು ಹೆಜ್ಜೆ ಹಾಕುತ್ತ ಮಾತಿಗಾರಂಭಿಸಿದೆ. 99ರ ಹರೆಯದಲ್ಲೂ ಮಕ್ಕಳಂತೆ ಓಡುತ್ತ, ನೆಗೆಯುತ್ತ ಮಾತನಾಡುತ್ತಿದ್ದ ಲೂಥರ್ ಅವರು, ದಾರಿಯುದ್ದಕ್ಕೂ ತಮ್ಮ ಪತ್ನಿಯ ಗುಣಗಾನ ಮಾಡಿದರು,” ಎಂದು ಒಕೇನ್ ಬರೆದಿದ್ದಾರೆ.

9 ವರ್ಷಗಳ ಹಿಂದೆ, ಲೂಥರ್ ಪತ್ನಿ ವೇವರ್ಲಿ ಯಂಗರ್‌ ಅವರ ಮೆದುಳಿನಲ್ಲಿ ಗಡ್ಡೆಯೊಂದು ಪತ್ತೆಯಾಗಿತ್ತು. "ಆಕೆ ಹೆಚ್ಚು ದಿನ ಬದುಕುವುದಿಲ್ಲ,” ಎಂದು ವೈದ್ಯರು ಹೇಳಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿರುವ ತಮ್ಮ ಪತ್ನಿಗಾಗಿ ಲೂಥರ್ ಪ್ರತಿದಿನ 6 ಕಿಲೋಮೀಟರ್ ನಡೆಯುತ್ತಾರೆ. ದಂಪತಿಗೆ ಲೂಥೇಟಾ ಎಂಬ ಮಗಳು ಕೂಡ ಇದ್ದಾಳೆ.

ತನ್ನ ತಂದೆ ಹಾಗೂ ತಾಯಿಯ ಬಗ್ಗೆ ಅಭಿಮಾನದಿಂದ ಮಾತನಾಡುವ ಲೂಥೇಟಾ, “ಅಮ್ಮ ಆಸ್ಪತ್ರೆಗೆ ದಾಖಲಾದಾಗಿನಿಂದ ತಂದೆ ಪ್ರತಿದಿನ ಆಸ್ಪತ್ರೆಗೆ ಬಂದು ಹೋಗುತ್ತಾರೆ. ಬಸ್ ಮೂಲಕ ಹೋಗು ಎಂದರೂ ಅವರು ಕೇಳುವುದಿಲ್ಲ,” ಎಂದು ತನ್ನ ಹೆತ್ತವರ ಪ್ರೀತಿಯನ್ನು ಒಕೇನ್‌ಗೆ ವಿವರಿಸಿದ್ದಾರೆ.

“ಬಸ್‌ಗಾಗಿ ಕಾಯುತ್ತ ಕೂರುವುದರಿಂದ ಸಮಯ ವ್ಯರ್ಥ. ನಡೆದುಕೊಂಡು ಬರುವುದರಿಂದ ಆದಷ್ಟು ಬೇಗ ನನ್ನ ಮಡದಿಯನ್ನು ನೋಡಲು ಸಾಧ್ಯವಾಗಿ ಮನಸ್ಸಿಗೆ ಸಮಾಧಾನವಾಗುತ್ತದೆ,” ಎನ್ನುತ್ತಾರೆ ಲೂಥರ್. ಅಂದಹಾಗೆ, ಕಳೆದ ಹಲವು ವರ್ಷಗಳಿಂದ ಪ್ರತಿದಿನ ನಡೆದಾಡುವ ಲೂಥರ್, ಇದೀಗ ಆ ಭಾಗದ ಹೀರೋ ಆಗಿದ್ದಾರೆ.

ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿ ಬೆಳೆದ ಲೂಥರ್ ಶ್ರಮಜೀವಿ. ಮಾಜಿ ಯೋಧನೂ ಆಗಿರುವ ಇವರಿಗೆ, ತಮ್ಮ ದೈಹಿಕ ಸಾಮರ್ಥ್ಯದ ಬಗ್ಗೆ ಹೆಮ್ಮೆ. “ನಾನು ಮದ್ಯಪಾನ ಮಾಡುವುದಿಲ್ಲ, ಧೂಮಪಾನದ ಹವ್ಯಾಸವಿಲ್ಲ. ಹೀಗಾಗಿ ಅದೆಷ್ಟೋ ಜನರಿಗೆ ನನ್ನ ಬಗ್ಗೆ ಅಸೂಯೆಯೂ ಇದೆ,” ಎಂದು ಲೂಥರ್ ಹೇಳಿಕೊಂಡಿದ್ದಾರೆ.

“ನನ್ನ ಶಕ್ತಿಪ್ರದರ್ಶನಕ್ಕಾಗಿ ನಾನು ಪ್ರತಿದಿನ ಇಷ್ಟು ದೂರ ನಡೆಯುವುದಿಲ್ಲ. ನನ್ನ ನಡಿಗೆಯಲ್ಲಿ ಪತ್ನಿಯ ಮೇಲಿನ ಕಾಳಜಿ, ಪ್ರೀತಿ ಇದೆ. ಆಕೆ ನನ್ನ ಶಕ್ತಿ. ನನ್ನನ್ನು ಮನುಷ್ಯನನ್ನಾಗಿ ರೂಪಿಸಿದ ಸುಂದರಿ ಆಕೆ. ನನ್ನನ್ನು ಹಾಗೂ ನನ್ನ ತಾಯಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ ಆಕೆ ಸಬಲೆ. ಅಂತಹ ಮಹಿಳೆಯೊಂದಿಗೆ ಸದಾ ನಾನಿರಬೇಕು,” ಎನ್ನುತ್ತಾರೆ ಲೂಥರ್.

“ಲಾಂಡ್ರೋಮ್ಯಾಟ್‌ನಲ್ಲಿ ಪರಸ್ಪರ ಭೇಟಿಯಾದ ನಾವು, ಮನೆಯಲ್ಲಿ ವಿವಾಹವಾದೆವು. ನಮ್ಮ ದಾಂಪತ್ಯಕ್ಕೆ 55 ವರ್ಷಗಳು. ಮದುವೆ ದಿನ ಆಕೆ ಸಿಕ್ಕಾಪಟ್ಟೆ ಸುಂದರವಾಗಿ ಕಾಣಿಸುತ್ತಿದ್ದಳು. ಆಕೆ ಅಷ್ಟು ಸುಲಭಕ್ಕೆ ಯಾವುದನ್ನೂ ಬಿಡುತ್ತಿರಲಿಲ್ಲ. ನಾನು ಕೆಲಸಕ್ಕೆ ಹೋಗುವುದಿಲ್ಲ ಎಂದರೂ ಬಿಡುತ್ತಿರಲಿಲ್ಲ. ಆಕೆ ನನ್ನ ಸಂಗಾತಿಯಾಗಿ ಸಿಗದಿದ್ದರೆ ಇಂದು ನಾನು ಇಷ್ಟೊಂದು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತಿರಲಿಲ್ಲ,” ಎಂದು ತಮ್ಮ ಹಳೆಯ ನೆನಪುಗಳನ್ನು ಒಕೇನ್‌ ಜೊತೆಗೆ ಮೆಲುಕು ಹಾಕಿದ್ದಾರೆ ಲೂಥರ್.

“ನನ್ನೊಂದಿಗೆ ಲವಲವಿಕೆಯಿಂದ ಮಾತನಾಡುತ್ತಿದ್ದ ಲೂಥರ್ ಇದ್ದಕ್ಕಿದ್ದಂತೆ ಓಡಲಾರಂಭಿಸಿದರು. ನನಗೆ ಭಯವಾಯಿತು. ‘ನಿಧಾನ, ಹುಷಾರು’ ಎಂದು ನಾನು ಹೇಳಿದರೂ ಕೇಳಿಸಿಕೊಳ್ಳದ ಲೂಥರ್, ‘ಕಮ್ ಆನ್... ನಾವು ಹೋಗಬೇಕಾದ ಸ್ಥಳ ಇದೇ’ ಎಂದು ಆಸ್ಪತ್ರೆಯೊಳಗೆ ಓಡಿದರು. ನಾನು ನಿಧಾನವಾಗಿ ಅವರನ್ನು ಹಿಂಬಾಲಿಸಿದೆ. ಲೂಥರ್ ಕೊಠಡಿಯೊಂದಕ್ಕೆ ಹೋಗಿದ್ದನ್ನು ನೋಡಿದ ನಾನು, ನಿಧಾನವಾಗಿ ಬಾಗಿಲು ತೆರೆದು ನೋಡಿದಾಗ ನನ್ನ ಕಣ್ಣನ್ನು ನನಗೇ ನಂಬಲಾಗಲಿಲ್ಲ. ಚಿಕ್ಕ ಮಗುವಿನಂತೆ ಕೊಠಡಿಯೊಳಗೆ ಹೋದ ಲೂಥರ್, ಮಡದಿ ವೇವರ್ಲಿಯನ್ನು ಚುಂಬಿಸುತ್ತಿದ್ದರು. ಆತನ ಮೊಗದಲ್ಲಿ ಅದೆಷ್ಟು ಸಂತಸ ಹೊರಚಿಮ್ಮುತ್ತಿತ್ತೆಂದರೆ, ಅದನ್ನು ವರ್ಣಿಸಲು ಮಾತೇ ಸಾಲದಾಯಿತು,” ಎಂದು ಒಕೇನ್ ಬರೆದಿದ್ದಾರೆ.

ಇದನ್ನೂ ಓದಿ : ವಿಡಿಯೋ | ಹತ್ತಿಪ್ಪತ್ತು ಸಾವಿರಕ್ಕೆ ಹೈರಾಣಾಗೋ ಬದಲು ಮಣ್ಣಿಗೆ ಮರಳಿ ಅಂತಾರೆ ಕವಿತಾ

“That's my cup of tea,” ಎನ್ನುತ್ತಾ ಮಡದಿ ಮಲಗಿದ್ದ ಬೆಡ್ ಪಕ್ಕ ಕುಳಿತ ಲೂಥರ್, ದೀರ್ಘವಾದ ನಿಟ್ಟುಸಿರು ಬಿಟ್ಟರು. “ಈಗ ನಾನು ಆಕೆಯನ್ನು ಹೇಗೆ ನೋಡಿಕೊಳ್ಳುತ್ತೇನೋ ಅದಕ್ಕಿಂತಲೂ ಅತಿಯಾದ ಆರೈಕೆಯನ್ನು ಆಕೆ ಮಾಡುತ್ತಿದ್ದಳು, ನನ್ನ ತಾಯಿಯನ್ನು ಕೂಡ ಪ್ರೀತಿಸುತ್ತಿದ್ದಳು. ನನ್ನ ತಾಯಿಗಾಗಿ ಕಠಿಣ ಕೆಲಸ ಮಾಡಲೂ ತಯಾರಿದ್ದಳು,” ಎಂದು ಒಕೇನ್‌ಗೆ ವಿವರಿಸಿದ್ದಾರೆ ಲೂಥರ್‌.

ಈ ನಡುವೆ, ಕಳೆದ ಹಲವು ವರ್ಷಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಯಿಯ ಆಸ್ಪತ್ರೆ ಖರ್ಚು ಭರಿಸುವುದು ಮಗಳು ಲೂಥೆಟಾಗೆ ಅಷ್ಟೊಂದು ಸುಲಭದ ಕೆಲಸವಲ್ಲ. ಹೀಗಾಗಿ, ಆಕೆ ದೇಣಿಗೆ ಸಂಗ್ರಹಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಂಡಿದ್ದಾಳೆ. “ಅಪ್ಪ ಬೆಳಗ್ಗೆಯಿಂದ ಸಂಜೆವರೆಗೂ ಆಸ್ಪತ್ರೆಯಲ್ಲಿ ಅಮ್ಮನೊಂದಿಗೆ ಇರುತ್ತಾರೆ. ರಾತ್ರಿಯಾಗುತ್ತಿದ್ದಂತೆ ಆಕೆಯನ್ನು ಮಲಗಲು ಬಿಟ್ಟು ಮನೆಗೆ ವಾಪಸಾಗುತ್ತಾರೆ,” ಎಂದು ಲುಥೆಟಾ, ವರದಿಗಾರ ಒಕೇನ್‌ ಮುಂದೆ ಹೆತ್ತವರ ಪ್ರೀತಿಯನ್ನು ವಿವರಿಸಿದ್ದಾರೆ. ತಂದೆ-ಮಗಳಿಗೆ ಹಸ್ತಲಾಘವ ಮಾಡಿ ನಾನು ವಾಪಸಾಗುತ್ತಿದ್ದಂತೆ, ಲೂಥರ್‌ನ ಬಗ್ಗೆ ಹೆಮ್ಮೆ ಎನಿಸಿತು ಎಂದು ಒಕೇನ್ ತಮ್ಮ ಲೇಖನದಲ್ಲಿ ಹೇಳಿಕೊಂಡಿದ್ದಾರೆ.

ಲೂಥರ್‌ನ ಅರ್ಥದಷ್ಟು ವಯಸ್ಸಾದವರಿಗೂ ಪ್ರತಿದಿನ 6 ಕಿಲೋಮೀಟರ್ ನಡೆಯುವುದು ಪ್ರಯಾಸದ ಕೆಲಸ. ಆದರೆ, 99ರ ಹರೆಯದಲ್ಲೂ ಪತ್ನಿಯ ಪ್ರೀತಿಗಾಗಿ ಹಂಬಲಿಸಿ ಆಸ್ಪತ್ರೆಗೆ ಓಡೋಡಿ ಬರುವುದು ನೋಡಿದರೆ ನಿಜಕ್ಕೂ ಕಣ್ಣಂಚು ಒದ್ದೆಯಾಗುತ್ತವೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More