ಗಾಂಧಿ ಸಾಗಿದ ದಂಡಿಯಾತ್ರೆಯ ಹಾದಿಯಲ್ಲಿ ಅಮೆರಿಕನ್ ಮಹಿಳೆ ಅಲೀಸ್ ರೇ ಕಂಡದ್ದೇನು?

ಅಹಿಂಸೆಯ ಹಾದಿಯಲ್ಲಿ ನಡೆದ ಗಾಂಧಿಯಂತೆ ತಾನೂ ಸಾಗಬೇಕೆಂಬ ಬಯಕೆಯಿಂದ ಅಮೆರಿಕನ್ ಮಹಿಳೆಯೊಬ್ಬರು ದಂಡಿಯಾತ್ರೆಯನ್ನು ನಡೆಸಿದರು. ಆಗ ಅವರು ಕಂಡದ್ದು ಏನು? ಈ ಕುರಿತು ಸಹೋದರ ಸಂಸ್ಥೆ ‘ದಿ ಸ್ಟೇಟ್’ನ ‘ಸೌತ್‌ವರ್ಡ್‌’ನಲ್ಲಿ ಪ್ರಕಟವಾದ ಲೇಖನದ ಭಾವಾನುವಾದ ಇಲ್ಲಿದೆ

ನಾನು ಕಳೆದ ಜನವರಿಯಲ್ಲಿ ವ್ಯಾಪಾರಕ್ಕೆಂದು ಭಾರತಕ್ಕೆ ಬಂದಾಗ ಅಹಿಂಸೆಯನ್ನು ಇನ್ನಷ್ಟು ಆಳವಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಗಾಂಧೀಜಿಯವರು ನಡೆಸಿದ ದಂಡಿ ಯಾತ್ರೆಯ ಮಾರ್ಗವಾಗಿ ಹೆಜ್ಜೆ ಹಾಕಬೇಕೆಂದು ನಿರ್ಧರಿಸಿದೆ. ಮಧ್ಯ ಅಮೆರಿಕದಲ್ಲಿ ಅಹಿಂಸೆಯನ್ನು ಕ್ರಾಂತಿಕಾರಕವಾಗಿ ಪ್ರಯೋಗಕ್ಕೆ ತರುವ ಅಥವಾ ಹವಾಯಿ ಸರ್ಕಾರದ ವಿರುದ್ಧ ತಿರುಗಿಬಿದ್ದ ಅಲ್ಲಿನ ಕುಷ್ಠರೋಗಿಗಳಿಗೆ ಅಹಿಂಸೆಯ ಮಾರ್ಗದಲ್ಲಿ ಸಾಗುವುದು ಹೇಗೆ ಎಂದು ತಿಳಿಸಿಕೊಡುವಂತಹ ನನ್ನ ಜೀವನದ ಬಹುಮುಖ್ಯ ಸಂದರ್ಭಗಳಲ್ಲಿ ಗಾಂಧಿ ಸೃಜಿಸಿದ ಅಹಿಂಸೆಯ ಅದ್ಭುತ ಮಾದರಿ ನನಗೆ ಪ್ರೇರಣೆ. ಆದರೂ ಅವರ ಈ ಅಹಿಂಸೆಯ ಬ್ರಾಂಡ್‌ನಲ್ಲಿ ಏನೋ ಲೋಪವಿದೆ ಅನ್ನಿಸುತ್ತಿತ್ತು; ಅಹಿಂಸೆಯ ತತ್ವದೊಳಗೆ ಸ್ತ್ರೀಯರು ಮತ್ತು ಮಕ್ಕಳ ಸ್ಥಾನ ಏನು ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಹಾಗಾಗಿ ದಂಡಿಯಾತ್ರೆಯನ್ನು ಹಿಮ್ಮುಖವಾಗಿ ಆರಂಭಿಸಲು ಮುಂದಾದೆ. ಯಾತ್ರೆಯನ್ನು ಭೂಪಟದಲ್ಲಿರುವಂತೆ ದಂಡಿಯ ಉಪ್ಪಿನ ಬಯಲಿನಲ್ಲಿ ಆರಂಭಿಸಿ ಸಾಬರ್‌ಮತಿ ಆಶ್ರಮದಲ್ಲಿ ಪೂರ್ಣಗೊಳಿಸುವುದೆಂದು ನಿರ್ಧರಿಸಿದೆ ನಿಜ; ಆದರೆ, ಉಪ್ಪು ಮನುಷ್ಯನ ಕಣ್ಣೀರಿನಲ್ಲೂ ಇರುತ್ತದೆ. ಭಾರತದ ಯುವತಿಯರ, ಮಹಿಳೆಯರ, ಅಷ್ಟೇ ಏಕೆ, ಸ್ವಾತಂತ್ರ್ಯ ಬಯಸುವ ವಿಶ್ವದ ಎಲ್ಲರೊಳಗೂ ಇರುತ್ತದೆ. ಪ್ರಯಾಣದುದ್ದಕ್ಕೂ ನನ್ನನ್ನು ತಟ್ಟಿದ ಕೆಲವು ವಿಚಾರಗಳು ಹೀಗಿವೆ:

ಬೆಚ್ಚನೆ ಆತಿಥ್ಯ

ಗುಜರಾತಿಗಳ ಸರಾಸರಿ ಆಯಸ್ಸಿಗಿಂತ ಮೂರು ವರ್ಷ ಹೆಚ್ಚು ಅಂದರೆ, 71 ವರ್ಷ ವಯೋಮಾನದ ಅಮೆರಿಕ ಮಹಿಳೆಯಾದ ನಾನು, ಒಬ್ಬಂಟಿಯಾಗಿ ಯಾವುದೇ ವಾಹನಗಳನ್ನೇರದೆ ಹಿಂದೂ, ಮುಸ್ಲಿಂ ಸಮುದಾಯಕ್ಕೆ ಸೇರಿದ ಇಬ್ಬರು ಯುವ ಸಹೋದ್ಯೋಗಿಗಳೊಂದಿಗೆ ಹೊರಟೆ. ಗುಜರಾತಿನ ಯಾವುದೇ ಹಳ್ಳಿ, ಪಟ್ಟಣಕ್ಕೆ ಹೋದರೂ ಹೂಗಳು, ಚಹಾ (ಬಹಳಷ್ಟು ಚಹಾ), ಹಾಸಿಗೆ ಅಥವಾ ಚಾಪೆ, ಶಾಲಾ ಮಕ್ಕಳ ಉಡುಗೊರೆಗಳು ಇದ್ದಕ್ಕಿದ್ದಂತೆ ಎದುರಾಗಿಬಿಡುತ್ತಿದ್ದವು; ಹೊರಡುವ ಮೊದಲು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ ಎನ್ನುತ್ತಿದ್ದರು. ಇದು ಗುಜರಾತಿನ ಹಳ್ಳಿಗಳು ನೀಡುತ್ತಿದ್ದ ದೊಡ್ಡ ಆತಿಥ್ಯ. ಸೌಂದರ್ಯ ಮತ್ತು ಔದಾರ್ಯವೇ ಮೈವೆತ್ತಂತಿರುವ ಹಳ್ಳಿಗಾಡಿನ ಸೊಬಗನ್ನು ಸವಿಯಿರಿ ಎಂದು ಯಾರೂ ನನಗೆ ಹೇಳುತ್ತಿರಲಿಲ್ಲ. ಗುಜರಾತಿನ ಹೂಗಳು ಮತ್ತು ಸಮೃದ್ಧ ಕೃಷಿ ನೋಡಿ ಸ್ವತಃ ಬೆರಗಾದೆ. ಹತ್ತಿ ಮತ್ತು ಆಹಾರ ಪದಾರ್ಥಗಳನ್ನು ಈ ರಾಜ್ಯ ಹೇಗೆ ಇಡೀ ದೇಶಕ್ಕೆ ಹಂಚುತ್ತಿದೆ- ಆದರೆ ತಂಬಾಕು ಯಾಕೆ? ಕ್ಯಾನ್ಸರ್‌ಕಾರಕವಾದ ಈ ಬೆಳೆಯನ್ನು ಬೆಳೆದು ಯಾರು ಲಾಭ ಮಾಡಿಕೊಳ್ಳುತ್ತಾರೆ? ಬಹಳಷ್ಟು ನೀರು ಮತ್ತು ರಾಸಾಯನಿಕಗಳನ್ನು ಬೇಡುವ ಕಬ್ಬನ್ನು ಏಕೆ ಬೆಳೆಯಬೇಕು? ನಮ್ಮ ಡ್ರೈವರ್ ಅವರ ಸ್ವಂತ ಹಳ್ಳಿಗೆ ಹೋಗಿ ಅಲ್ಲಿನ ಮಕ್ಕಳನ್ನು ಉದ್ದೇಶಿಸಿ, “ನೀವು ಬದುಕಿನಲ್ಲಿ ಏನಾದರೂ ಬದಲಿಸಬೇಕು ಎಂದಿದ್ದರೆ ಅದು ಏನು?” ಎಂದು ಕೇಳಿದೆ. ಅವರು ಹೇಳಿದ್ದನ್ನು ಡ್ರೈವರ್ ತರ್ಜುಮೆ ಮಾಡಿ ತಿಳಿಸಿದರು: “ನಮ್ಮ ನೆಲ ಶುದ್ಧವಾಗಬೇಕು…”

ಮಹಿಳೆಯರ ಉಪಸ್ಥಿತಿ ಮತ್ತು ಅನುಪಸ್ಥಿತಿ

ನಾವು ಗುಜರಾತಿನ ಹಳ್ಳಿಗಳನ್ನು ಪ್ರವೇಶಿಸುತ್ತಿದ್ದಂತೆ ನಮ್ಮನ್ನು ಸ್ವಾಗತಿಸಲು ಬರುತ್ತಿದ್ದ ತಂಡಗಳಲ್ಲಿ ಹೆಣ್ಣುಮಕ್ಕಳ ಗೈರು ಎದ್ದುಕಾಣುತ್ತಿತ್ತು. ಹಿರಿಯರ ಮನೆಗಳಲ್ಲಿ ಚಹಾ ಕುಡಿಯಲು ಹೋದಾಗಲೂ ಮಹಿಳೆಯರು ಕಾಣುತ್ತಿರಲಿಲ್ಲ. ಬಚ್ಚಲಿಗೆಂದು ಹೋದಾಗ ಕುಕ್ಕರುಗಾಲಿನಲ್ಲಿ ಕುಳಿತಿದ್ದ ಹೆಂಗಸೊಬ್ಬಳು ಆತುರಾತುರವಾಗಿ ಬಚ್ಚಲನ್ನು ನನಗಾಗಿ ಸ್ವಚ್ಛ ಮಾಡಿಕೊಡಲು ಮುಂದಾದಳು. ಆದರೆ, ಅನಿರೀಕ್ಷಿತ ಸ್ಥಳಗಳಲ್ಲಿ ಹುಡುಗಿಯರು, ಹೆಂಗಸರು ಪ್ರತ್ಯಕ್ಷ ಆಗಿಬಿಡುತ್ತಿದ್ದರು. ಪೂರ್ತಿ ಸೀರೆಯುಟ್ಟಿದ್ದ ಹಿರಿಯರೊಬ್ಬರು ಕಬ್ಬಿನ ಗದ್ದೆಗಳಲ್ಲಿ ಬುಡಕಟ್ಟಿನ ಕಾರ್ಮಿಕರನ್ನು ಗತ್ತಿನಿಂದ ಕೆಲಸಕ್ಕೆ ಹಚ್ಚುತ್ತಿದ್ದುದನ್ನು ಕಂಡೆ. ನಾಚಿಕೆಯಿಂದ ಕಿಟಕಿಯೊಳಗಿನಿಂದಲೇ ಕೈಸನ್ನೆ ಮಾಡುತ್ತಿದ್ದವರನ್ನು ನೋಡಿದೆ. ಅಲ್ಲದೆ, ನೂರು ವರ್ಷ ವಯಸ್ಸಾದ ಅಜ್ಜಿ, ಆಕೆಯ ಮಗಳು ಹಾಗೂ ಮೊಮ್ಮಗಳನ್ನು ಭೇಟಿಯಾದೆ. ಆಕೆಯ ಪುಟ್ಟ ಮನೆಯ ಕೊಳೆಯಾಗಿದ್ದ ಸ್ಥಳದಲ್ಲೇ ನಾವು ಒಟ್ಟಿಗೆ ಕುಳಿತೆವು. ಯಾವುದೇ ಮಾತುಕತೆ ಇರಲಿಲ್ಲ. ಆದರೆ ನಮ್ಮ ಹೃದಯಗಳು ಪರಸ್ಪರ ಮಾತನಾಡಿದವು. ಆಕೆ ನಂತರ ಗೌರವ ಸೂಚಿಸುವಂತೆ ನನ್ನ ಕಾಲುಗಳನ್ನು ಮುಟ್ಟಿದಳು. ಆ ಅನುಗ್ರಹಪೂರ್ವಕವಾದ, ಶಕ್ತಿಯುತವಾದ ಮತ್ತು ಆಕರ್ಷಕವಾದ ಮುಗುಳ್ನಗೆಯ ಎದುರು ನಾನೂ ಏಕೆ ಮಂಡಿಯೂರಿ ನಮಿಸಿದೆ ಎಂದು ಆಕೆಗೆ ಅರ್ಥವಾಗಲಿಲ್ಲ.

ಸೃಜನಶೀಲತೆ, ಸಾಮರ್ಥ್ಯ ಮತ್ತು ಮಕ್ಕಳ ಅಳಲು

ನನ್ನ ಜೀವನದ ಬಹುಪಾಲನ್ನು ಮಕ್ಕಳ ವಿರುದ್ಧದ ಹಿಂಸೆ ತಡೆಯಲು ಮೀಸಲಿಟ್ಟಿದ್ದೇನೆ. ದೈಹಿಕ ಮತ್ತು ಲೈಂಗಿಕ ಹಿಂಸೆಯಷ್ಟೇ ಅಲ್ಲದೆ, ಬಡತನ ಎಂಬ ಪಿಡುಗನ್ನು ಕೂಡ ಹೋಗಲಾಡಿಸಲು ಯತ್ನಿಸಿದ್ದೇನೆ. ರಸ್ತೆಯಲ್ಲಿ ಸಗಣಿಯಿಂದಲೇ ಚಿತ್ರ ಬಿಡಿಸುತ್ತಿದ್ದ ಪುಟ್ಟ ಹುಡುಗಿಯೊಬ್ಬಳು ಭಾರತದ ಹಳ್ಳಿಗಳಲ್ಲಿರುವ ಬಡತನಕ್ಕೆ ಉದಾಹರಣೆ. ಆದರೆ, ಅಂದು ನನಗೆ ಅದು ಬೇರೆಯಾಗಿ ಕಂಡಿತು. ಅದುವೇ ಸೃಜನಶೀಲತೆಗೆ ಸಂಬಂಧಿಸಿದ ಮನುಷ್ಯನ ಸಾಮರ್ಥ್ಯದ ಪರೀಕ್ಷೆ. ಆಕೆ ಭವಿಷ್ಯದಲ್ಲಿ ಒಬ್ಬ ಒಳ್ಳೆಯ ಕಲಾವಿದೆಯಾಗಿ ಬೆಳೆಯಲಿ ಎಂದು ಹಾರೈಸಿದೆ. ಅಷ್ಟೇ ಅಲ್ಲ, ಅಮೆರಿಕದ ಮಕ್ಕಳು ಬರೀ ಸೃಜನಶೀಲತೆಯನ್ನು ಬಳಸದೆ, ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಅನುವಾಗುವಂತಹ ಬಡತನ ಅವರಿಗೆ ಒದಗಿ ಬರಲಿ ಎಂದು ಬಯಸಿದೆ. ಅಸ್ಮಿತಾ ಶಾಲೆಯ ಅಂಗವಿಕಲ ಮಕ್ಕಳು ಗಾಂಧೀಜಿ ಮತ್ತು ಅವರ ಪರಿವಾರದವರಂತೆ ವೇಷ ತೊಟ್ಟು ನನ್ನೊಟ್ಟಿಗೆ ಬರೂಚ್ ಜಿಲ್ಲೆಯ ತ್ರಾಸ್ಲಾ ಹಳ್ಳಿಯ ಬೀದಿಗಳಲ್ಲಿ ನಡೆದದ್ದು ಮರೆಯಲಾರದ ಅನುಭವ. ಇಲ್ಲಿನ ಹಳ್ಳಿಗಳ ಬಹುತೇಕ ಮಕ್ಕಳು ಸಹಜ ಬೆಳವಣಿಗೆಗೆ ಮಾರಕವಾದ, ನಡವಳಿಕೆ ದೋಷ ಹೊಂದಿದ ‘ಡೌನ್ ಸಿಂಡ್ರೋಮ್’ನಿಂದ ಬಳಲುತ್ತಿದ್ದಾರೆ ಎಂದು ತಿಳಿದು ಅಚ್ಚರಿಯಾಯಿತು. ಇದು ಗಾಳಿ, ನೀರಿನೊಂದಿಗೆ ಬೆರೆತ ವಿಷದ ಫಲವೇ? ವಿಷಪೂರಿತ ಹಿಂಸಾಚಾರ ನಡೆಸಿದ ದೈಹಿಕ ಮತ್ತು ಲೈಂಗಿಕ ಶೋಷಣೆ ಇದಿರಬಹುದೇ?

ಸೌಹಾರ್ದ

ಹಿಂದೂ-ಮುಸ್ಲಿಮರ ನಡುವಿನ ಭಯಾನಕ ಧಾರ್ಮಿಕ ದ್ವೇಷದ ಬಗ್ಗೆ ನಾನು ಓದಿದ್ದೆ. ಆದರೆ, ಗುಜರಾತಿನಲ್ಲಿ ನಾನು ಕಂಡಿದ್ದು ಅದಕ್ಕೆ ತದ್ವಿರುದ್ಧವಾಗಿತ್ತು. ಒಂದು ಉದಾಹರಣೆ: ಮೋಟಾರ್ ಸೈಕಲ್‌ನಲ್ಲಿ ಬಂದ ಪಾಶ್ಚಾತ್ಯ ಶೈಲಿಯ ಉಡುಗೆ ತೊಟ್ಟಿದ್ದ ಒಬ್ಬ ಮತ್ತು ಉದ್ದನೆಯ ಬಿಳಿ ಬಟ್ಟೆ ಧರಿಸಿದ್ದ ಇನ್ನೊಬ್ಬ ತಮ್ಮೂರಾದ ಕಪ್ಲೆಥಾಗೆ ಬನ್ನಿ ಎಂದು ಕೇಳಿಕೊಂಡರು. ಅವರ ಊರಿನಲ್ಲಿ ಗುಲಾಂ ಎಂಬ ಹಿರಿಯರೊಬ್ಬರಿದ್ದಾರೆ. ಗಾಂಧೀಜಿ ಅವರ ಒಡನಾಡಿಗಳಾಗಿದ್ದ ಅವರನ್ನು ಮಾತನಾಡಿಸಲೇಬೇಕು ಎಂದರು. ಚಹಾದೊಡನೆ ಕತೆಗಳನ್ನೂ ಹೇಳಿದ ಉದ್ದನೆ ಗಡ್ಡಧಾರಿ ಇದ್ದ ಮನೆಯಲ್ಲಿ ಹೆಣ್ಣುಮಗಳೊಬ್ಬಳು ಒಳಗೆ ಏಕಾಂಗಿಯಾಗಿರುವುದು ವಿಚಿತ್ರವಾಗಿ ತೋರಿತು. ನಮಗೆ ಹೃತ್ಪೂರ್ವಕ ಸ್ವಾಗತ ಸಿಕ್ಕಿತು. ಗಾಂಧೀಜಿ ಹೇಗೆ ಮತ್ತು ಯಾವಾಗ ಕಪ್ಲೆಥಾಕ್ಕೆ ಬಂದಿದ್ದರು ಎಂಬುದನ್ನು ಅವರು ವಿವರಿಸಿದರು. ಆಗ ಇಲ್ಲಿಂದ ನದಿ ದಾಟಿಯೇ ದಂಡಿಯನ್ನು ತಲುಪಬೇಕಿತ್ತು ಎಂಬುದನ್ನು ಹೇಳಿದರು. ಹಿಂದೂಗಳು ಮುಸ್ಲಿಮರು ಎಲ್ಲ ಸೇರಿ ಒಂದು ಉಪಾಯ ಹೂಡಿದರಂತೆ. ನದಿಗೆ ಅಡ್ಡಲಾಗಿ ಎತ್ತುಗಳಿಲ್ಲದ ಬಂಡಿಗಳನ್ನು ಒಂದಕ್ಕೊಂದು ಜೋಡಿಸಿ ತೇಲುವ ಸೇತುವೆ ನಿರ್ಮಿಸಿದರಂತೆ! ಆ ಹಳ್ಳಿಯಲ್ಲಿ ಈಗಲೂ ದೇಗುಲ ಮತ್ತು ಮಸೀದಿ ಶಾಂತಿಯಿಂದ ಸಹಬಾಳ್ವೆ ನಡೆಸುತ್ತಿವೆ. ಆದರೆ ಅವರ ಜೀವನಾಡಿಯಾಗಿದ್ದ ನದಿ ಕಲುಷಿತಗೊಂಡು ವಿಷ ಕಾರುತ್ತಿದೆ. ಪರಿಣಾಮ ಹಿಂದೂ ಮತ್ತು ಮುಸ್ಲಿಮರು ಸೇರಿದಂತೆ ಎಲ್ಲರ ಬದುಕು ಅಪಾಯದಲ್ಲಿದೆ.

ಮಾನವೀಯತೆಯ ಎರಡು ಮುಖ

ಎರಡು ವಾರಗಳ ಸತತ ಪ್ರಯಾಣದಿಂದ ನಾನು ಬಳಲಿದ್ದೆ. ನನ್ನ ಎದೆಯ ಮೇಲೆ ಯಾವುದೋ ಅಟ್ಟಣಿಗೆ ಬಂದು ಕುಳಿತಂತೆ ಅನ್ನಿಸುತ್ತಿತ್ತು. ಭೇದಿಯಾಯಿತು. ಎರಡು ದಿನಗಳ ಬಳಿಕ ನನ್ನ ವೈದ್ಯರು ಇಮೇಲ್ ಮೂಲಕ ಕಠಿಣ ಸೂಚನೆಗಳನ್ನು ನೀಡಿದರು. ಪರಿಣಾಮ, ನಮ್ಮ ಡ್ರೈವರ್ ಅಹಮದಾಬಾದ್‌ನಲ್ಲಿದ್ದ ಹೃದ್ರೋಗತಜ್ಞರ ಬಳಿಗೆ ಕರೆದೊಯ್ದರು. ಮಧ್ಯಾಹ್ನ ಅಲ್ಲಿಗೆ ಹೋದೆವು. ಬೆಳಿಗ್ಗೆ ಆಂಜಿಯೋಗ್ರಾಂ ಪರೀಕ್ಷೆ ಮಾಡುವುದಾಗಿ ವೈದ್ಯರು ಹೇಳಿದರು. ಅಷ್ಟೇ ಅಲ್ಲ, ಒಬ್ಬರೇ ಇರಬೇಡಿ ಎಂದು ಸಲಹೆ ನೀಡಿದರು.

ನಾವು ಈ ಮೊದಲು ತಂಗಿದ್ದ ಫರ್ನ್ ಹೋಟೆಲಿಗೆ ಹೋಗಿ, ನಾನಿದ್ದ ಅಂತಸ್ತಿನಲ್ಲೇ ಬೇರೊಂದು ರೂಮನ್ನು ನಮ್ಮ ಡ್ರೈವರಿಗೂ ನೀಡುವಂತೆ ಕೋರಿದೆ. ಮೊದಲು ಶೇ.50ರಷ್ಟು ಹೆಚ್ಚಿಗೆ ಬಾಡಿಗೆ ಕೊಡಬೇಕು ಎಂದರು. ಒಪ್ಪಿದೆ. ಬಳಿಕ, ಮುಸ್ಲಿಮರಿಗೆ ರೂಮು ಕೊಡುವುದಿಲ್ಲ ಎಂದುಬಿಟ್ಟರು! ಬೇಕಿದ್ದರೆ ಡ್ರೈವರ್‌ಗಳು ವಾಸಿಸುವ ಕೋಣೆಯಲ್ಲಿ ಇರಬಹುದು ಎಂದರು. ನಾನು ನೀಡಿದ ಗಾಂಧಿ ಚಿತ್ರವಿದ್ದ ನೋಟುಗಳನ್ನು ಅವರು ಪಡೆದುಕೊಂಡರು. ಆದರೆ, ಗಾಂಧಿ ಹೇಳಿದ್ದ ಜಾತಿ, ವರ್ಗವನ್ನು ಮೀರಿದ ಸಮಾನತೆಯ ಮೌಲ್ಯಗಳಿಗೆ ಬೆಲೆ ಕೊಡಲಿಲ್ಲ.

ಇದನ್ನೂ ಓದಿ : ಗಾಂಧಿ ಹತ್ಯೆ ಸಂಚು | ಕಂತು 16 | ಹಂತಕರನ್ನು ವೈಭವೀಕರಿಸುವ ಬಗ್ಗೆ ವ್ಯಾಪಕ ಖಂಡನೆ

ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ಸಿಐಎಂಎಸ್ ಆಸ್ಪತ್ರೆಯಲ್ಲಿ ನಡೆಯಿತು. ಅಲ್ಲಿನ ಸಿಬ್ಬಂದಿ ಮೊದಲಿಗೆ ನಮ್ಮ ಡ್ರೈವರ್ ಬಗ್ಗೆ ಆಕ್ಷೇಪ ಎತ್ತಿದರಾದರೂ ನಾನು, ‘ಎಲ್ಲರೂ ಒಂದೇ’ ಎಂಬ ಗಾಂಧಿತತ್ವ ಬೋಧಿಸಿದ ಮೇಲೆ ಅವರು ಹೆಜ್ಜೆಹೆಜ್ಜೆಗೂ ನನಗೆ ನೀಡಿದಷ್ಟೇ ಗೌರವವನ್ನು ನಮ್ಮ ಡ್ರೈವರ್ ಅವರಿಗೂ ನೀಡಿದರು. ಗಾಂಧೀಜಿ ತಮಗೆ ತಾವೇ ಚಿಕಿತ್ಸೆ ಪಡೆದುಕೊಳ್ಳಬೇಕಾದ ಸ್ಥಿತಿ ಇದೆ.

220 ಕಿಲೋಮೀಟರ್ ಗಳ ಸುದೀರ್ಘ ದಂಡಿ ಯಾತ್ರೆಯಲ್ಲಿ (ಅದರಲ್ಲಿ 20 ಕಿಮೀ ನನ್ನ ಎದೆನೋವಿನ ಕಾರಣಕ್ಕೆ ಪೂರೈಸಲಾಗಲಿಲ್ಲ) ಬೃಹತ್ ದೇಶವನ್ನೇ ಕಂಡೆನೋ ಅಥವಾ ಅದರ ಒಂದು ಪುಟ್ಟ ಭಾಗವನ್ನು ಕಂಡೆನೋ ಅದು ನಿಜವಾಗಿಯೂ ಪರಸ್ಪರ ಮತ್ತು ವಿರೋಧಾಭಾಸದ ಅಧ್ಯಯನಕ್ಕೆ ವಸ್ತು. ಸಂಪನ್ಮೂಲಗಳಲ್ಲಿ ಸಮೃದ್ಧವಾಗಿರುವ ಆದರೆ, ಅದರ ರಕ್ಷಣೆಯ ವಿಚಾರದಲ್ಲಿ ಬಡವಾಗಿರುವ ದೇಶದಂತೆ ಇದು ತೋರುತ್ತಿದೆ. ಹಸುಗಳನ್ನು ನೋಯಿಸಬಾರದು ಎನ್ನುವವರು ಇರುವ ಇಲ್ಲಿ, ಹೆಂಡತಿ-ಮಕ್ಕಳಿಗೆ ಹೊಡೆಯುವುದು ಪರಸ್ಪರ ವಿರೋಧಾಭಾಸದಂತೆ ಕಾಣುತ್ತದೆ. ಸಂವಿಧಾನದ ದತ್ತವಾಗಿ ಸಮಾನತೆಯನ್ನು ಹೇಳುವುದು ಮತ್ತು ಆರ್ಥಿಕ ಅಸಮಾನತೆ ಮೂಲಕ ರೈತರನ್ನು ಕಾರ್ಮಿಕರನ್ನು ಹಾಗೂ ನೆಲವನ್ನು ಶೋಷಿಸುವುದು ತದ್ವಿರುದ್ಧವಾಗಿ ಗೋಚರಿಸುತ್ತದೆ.

ಕಡೆಗೆ ಅಹಿಂಸೆಯಿಂದ ನಾನು ಕಲಿತದ್ದಾದರೂ ಏನು? ನೆಲ, ನೀರಿಗೆ ನಾವು ಹಿಂಸೆ ನೀಡಿ ಮಹಿಳೆ ಮತ್ತು ಮಕ್ಕಳನ್ನ ರಕ್ಷಿಸುವುದು ಸಾಧ್ಯವಿಲ್ಲ. ಗಾಂಧಿ ಆರಂಭಿಸಿದ ಆ ಕೆಲಸ ಇನ್ನೂ ಪೂರ್ಣಗೊಂಡಿಲ್ಲ.

ಅಲೀಸ್ ರೇ ಅವರು ಮಕ್ಕಳು ಮತ್ತು ಯುವಕರಲ್ಲಿ ಕೌಶಲ್ಯ ಬೆಳೆಸುವ ಮೂಲಕ ಪ್ರತಿಕೂಲ ವಾತಾವರಣದಲ್ಲಿ ಸಾಮರ್ಥ್ಯ ವೃದ್ಧಿಸಲು ಅನುವಾಗುವ ‘ರಿಪಲ್ ಎಫೆಕ್ಟ್’ ಸಂಸ್ಥೆಯ ಮುಖ್ಯಸ್ಥೆ

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More