ಮಂಗಳೂರಿನಲ್ಲಿ ನಿಧಾನವಾಗಿ ಆವರಿಸಿಕೊಳ್ಳುತಿದೆ ಅರಬ್‌ ಖಾದ್ಯದ ಘಮ

ವಿವಿಧ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಬಹಳಷ್ಟು ಅರೆಬಿಕ್ ಶೈಲಿಯ ಆಹಾರ ತಯಾರಾದರೂ, ಅರೆಬಿಕ್ ಸಂಸ್ಕೃತಿಯನ್ನೇ ಅನುಕರಿಸಿ ಒಳಾಂಗಣ ಶೈಲಿ ವಿನ್ಯಾಸಗೊಳಿಸಿದ್ದರೂ ಬಹಳಷ್ಟು ಜನ ಸ್ಥಳೀಯ ರುಚಿಗೇ ಮನಸೋಲುತ್ತಿದ್ದಾರೆ. ಹೀಗೇಕೆ ಎಂದು ಪ್ರಶ್ನಿಸಿದಂತೆ ಕುತೂಹಲದ ವಿವರಗಳು ಸಿಕ್ಕವು

ಮಂಗಳೂರಿನಲ್ಲಿ ಅರಬ್ ತಿನಿಸುಗಳನ್ನು ಉಣಬಡಿಸುವ ಐವತ್ತಕ್ಕೂ ಹೆಚ್ಚು ಮಾಂಸಾಹಾರ ಹೋಟೆಲ್ ಗಳಿವೆ. ಅವೆಲ್ಲವೂ ಅರಬ್ ಸೊಗಡಿನ ತರಹೇವಾರಿ ಆಹಾರಗಳನ್ನು ಉಣಬಡಿಸುತ್ತವೆ. ಉದಾಹರಣೆಗೆ ಅಲ್ಫಾಹಂ, ಮಕ್ಲೂಬಾ, ಶವರ್ಮಾ, ಮಟನ್ ಮಂದಿ, ಅಲ್ಫಾಹಂ ಮಂದಿ, ಮೆಶಾವಿ (ಗ್ರಿಲ್ಡ್) ಇತ್ಯಾದಿ. ಆದರೆ ಮಂಗಳೂರಿನ ಜನ ಇನ್ನೂ ಅರೆಬಿಕ್ ರುಚಿಗೆ ಒಗ್ಗಿಕೊಂಡಂತಿಲ್ಲ. ವಿವಿಧ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಬಹಳಷ್ಟು ಅರೆಬಿಕ್ ಶೈಲಿಯ ಆಹಾರ ತಯಾರಾದರೂ, ಅರೆಬಿಕ್ ಸಂಸ್ಕೃತಿಯನ್ನೇ ಅನುಕರಿಸಿ ಒಳಾಂಗಣ ಶೈಲಿ ವಿನ್ಯಾಸಗೊಳಿಸಿದ್ದರೂ ಬಹಳಷ್ಟು ಜನ ಸ್ಥಳೀಯ ರುಚಿಗೇ ಮನಸೋಲುತ್ತಿದ್ದಾರೆ. ಬ್ಯಾರಿ ಶೈಲಿಯ ತಿನಿಸುಗಳು, ಕೊಂಕಣಿ, ತುಳು ಶೈಲಿಯ ಮಾಂಸಾಹಾರಕ್ಕೆ ಇಲ್ಲಿ ಹೆಚ್ಚು ಬೇಡಿಕೆ.

‘ಹೀಗೇಕೆ?’ ಎಂಬ ಪ್ರಶ್ನೆಗೆ ಮಂಗಳೂರಿನ ಕಂಕನಾಡಿಯ ‘ಬ್ಯಾಂಬೂ ರೆಸ್ಟೋರೆಂಟ್’ ಮಾಲೀಕರಲ್ಲಿ ಒಬ್ಬರಾದ ಮುಶಿಬುದ್ದೀನ್ ಕುತೂಹಲದ ಉತ್ತರ ಹೇಳಿದರು: “ಅರಬ್ ಶೈಲಿಯ ಆಹಾರ ಹೆಚ್ಚು ಜನ ಇಷ್ಟಪಡದೇ ಇರಲು ಮುಖ್ಯ ಕಾರಣ ಅದರಲ್ಲಿ ಮಸಾಲೆ ಪದಾರ್ಥವನ್ನು ಹೆಚ್ಚು ಬಳಸದೇ ಇರುವುದು. ಅರಿಶಿನ ಮತ್ತು ಉಪ್ಪು ಸವರಿದ ಮಾಂಸಾಹಾರ ಅರಬ್ ತಿನಿಸುಗಳ ವೈಶಿಷ್ಟ್ಯ. ಆದರೆ ಇಲ್ಲಿನವರು ಹೆಚ್ಚು ಮಸಾಲೆ ಬೆರೆಸಿದ ತಿನಿಸುಗಳನ್ನು ಕೇಳುತ್ತಾರೆ. ಉದಾಹರಣೆಗೆ ಅರೆಬಿಯನ್ನರಿಗೆ ತಟ್ಟೆಯ ಮೇಲೆ ತಿನಿಸಿಟ್ಟಾಗ ಬೆಂದ ಮಾಂಸದ ಘಮ ಮೂಗಿಗೆ ಬಡಿಯಬೇಕು. ಆದರೆ ಇಲ್ಲಿನವರಿಗೆ ಮಸಾಲೆ ಮೂಗಿಗೆ ತಾಗಬೇಕು. ನಾನೂ ಸೌದಿಯಲ್ಲಿ ಬಹಳಷ್ಟು ದಿನ ಉದ್ಯೋಗದಲ್ಲಿದ್ದೆ. ಅಲ್ಲಿನ ರುಚಿ ಬಹಳ ದಿನ ಇಷ್ಟ ಆಗಿರಲಿಲ್ಲ. ಆದರೆ ಕ್ರಮೇಣ ಹೊಂದಿಕೊಂಡೆ. ಒಮ್ಮೆ ಹೊಂದಿಕೊಂಡ ನಂತರ ಇಷ್ಟವಾಗಿಬಿಡುತ್ತದೆ,” ಎಂದರು.

“ಆದರೆ ಜನರ ನಾಲಗೆಗೆ ಹೊಂದಿಸುವುದು ಹೇಗೆ?” ಈ ಪ್ರಶ್ನೆಗೆ ಫಳ್ನೀರ್ ರಸ್ತೆಯಲ್ಲಿರುವ ‘ಫಿಲ್ ಫಿಲ್ ಮ್ಯಾಜಿಕ್’ ರೆಸ್ಟೋರೆಂಟಿನ ಖಾನ್ ಹೀಗೆ ಹೇಳುತ್ತಾರೆ: “ನಮಗೆ ಕೇರಳ ಗಡಿಗೆ ಹೊಂದಿಕೊಂಡಿರುವ ತಲಪಾಡಿ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಎರಡು ಹೋಟೆಲ್ ಗಳಿವೆ. ಅಲ್ಲಿ ಕೂಡ ಅರೆಬಿಕ್ ಆಹಾರ ತಯಾರಿಸುತ್ತೇವೆ. ಆದರೆ ಅಲ್ಲಿ ಸವಿದವರು ಮಂಗಳೂರಿಗೆ ಬಂದಾಗ ಫಳ್ನೀರ್ ರಸ್ತೆಯ ಹೋಟೆಲಿಗೆ ಭೇಟಿ ನೀಡಿ ಅರೆಬಿಕ್ ರುಚಿ ಸವಿಯುವುದುಂಟು. ಕಾರಣ ಇಲ್ಲಿ ನಾವು ಮಸಾಲೆ ಹೆಚ್ಚಿಗೆ ಬಳಸುತ್ತೇವೆ. ಕೆಲವು ಆಮದು ಮಾಡಿಕೊಂಡ ಮಸಾಲೆಗಳನ್ನೂ ಬಳಸುತ್ತೇವೆ. ಹೀಗಾಗಿ ದರ ಕೂಡ ಹೆಚ್ಚು. ಒಂದು ‘ಮಂದಿ ಬಿರಿಯಾನಿ’ಗೆ 700ರಿಂದ 1000 ರೂಪಾಯಿವರೆಗೂ ದರವಿದೆ. ಆದರೂ ನಾಲ್ಕು ಮಂದಿ ತಿನ್ನುವಷ್ಟು ಅಧಿಕ ಪ್ರಮಾಣದಲ್ಲಿರುತ್ತದೆ. ಮಕ್ಬೂಲಾದಂತಹ ತಿನಿಸನ್ನು ಅರ್ಧ ಕಿಲೋ ಅನ್ನ ಮತ್ತು ಅರ್ಧ ಕಿಲೋ ಮಾಂಸ ಬಳಸಿ ತಯಾರಿಸುತ್ತಾರೆ. ಇಲ್ಲಿನ ಜನರಿಗೆ ಊಟ ಸಪ್ಪೆ ಇರುವುದು ಬೇಡ, ಉಳಿದಂತೆ ಅಡ್ಡಿ ಇಲ್ಲ,” ಎಂದು ನಗುತ್ತ ಉತ್ತರಿಸಿದರು. ಅವರ ಮಾತಿನ ಒಟ್ಟು ಸಾರ ಅರೆಬಿಕ್ ತಿನಿಸುಗಳನ್ನು ಇಲ್ಲಿನವರ ಬಾಯಿರುಚಿಗೆ ಹೊಂದಿಸಲು ಏನು ಮಾಡಬೇಕು ಎಂಬುದರ ಸುತ್ತ ಇತ್ತು.

ಬ್ಯಾಂಬೂ ರೆಸ್ಟೋರೆಂಟಿನ ಮುಶಿಬುದ್ದೀನ್ ಮಾತನಾಡುತ್ತ ಇನ್ನೊಂದು ವಿಷಯ ಹೇಳಿದರು. “ಬೆಂಗಳೂರಿನಂತಹ ನಗರಗಳಲ್ಲಿ ಅರಬ್ ಸಂಸ್ಕೃತಿ ಇದೆ. ಅಲ್ಲಿನ ಫ್ರೇಜರ್ ಟೌನ್ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವವರಿಗೆ ಅರಬ್ ಒಡನಾಟ ಹೆಚ್ಚು. ಮಂಗಳೂರಿನ ಜನ ಹೆಚ್ಚಾಗಿ ಕೊಲ್ಲಿ ರಾಷ್ಟ್ರಗಳಿಗೆ ತೆರಳುತ್ತಾರಾದರೂ ಅಲ್ಲಿಯ ತಿನಿಸುಗಳಿಗಿಂತಲೂ ಇಲ್ಲಿಯದನ್ನೇ ಸವಿಯಲು ಹೆಚ್ಚು ಬಯಸುತ್ತಾರೆ. ರುಚಿ ನೋಡಲಷ್ಟೇ ಅರೆಬಿಕ್ ಶೈಲಿಯ ತಿನಿಸುಗಳಿಗೆ ಮೊರೆ ಹೋಗುತ್ತಾರೆ ವಿನಾ ಅದನ್ನೇ ಸವಿಯಬೇಕೆಂದು ಬರುವವರ ಸಂಖ್ಯೆ ಕಡಿಮೆ” ಎಂದರು. ಅವರು ನೀಡಿದ ಮೆನು ಕಾರ್ಡ್ ಕೂಡ ಅದನ್ನೇ ಹೇಳುತ್ತಿತ್ತು. ಅರೆಬಿಕ್ ಶೈಲಿಯ ತಿನಿಸುಗಳಿಗಿಂತಲೂ ಹೆಚ್ಚಾಗಿ ಸ್ಥಳೀಯ ಶೈಲಿಯ ಸಿಗಡಿ, ಮೀನು ಮೊಟ್ಟೆ ಮಟನ್, ಚಿಕನ್ ಅಲ್ಲಿ ರಾರಾಜಿಸುತ್ತಿದ್ದವು.

ಆದರೆ ಅರೆಬಿಕ್ ಶೈಲಿಯ ಆಹಾರವನ್ನು ಮಂಗಳೂರಿಗರು ಇಷ್ಟಪಡುವುದಿಲ್ಲ ಎಂಬ ಮಾತನ್ನು ಮಧು ನಾಯರ್ ಒಪ್ಪುವುದಿಲ್ಲ. ಅರೆಬಿಕ್ ಶೈಲಿ ಊಟಗಳಿಗೆ ಪ್ರಸಿದ್ಧವಾದ ಹಂಪನಕಟ್ಟೆಯಲ್ಲಿರುವ ‘ಸಾವರಿ ರೆಸ್ಟೋರೆಂಟ್’ನ ಪ್ರಧಾನ ವ್ಯವಸ್ಥಾಪಕ ಅವರು. “ಜನರಿಗೆ ಆರೋಗ್ಯ ಪ್ರಜ್ಞೆ ಹೆಚ್ಚಿದೆ. ಹೀಗಾಗಿ ಎಣ್ಣೆ ಅಂಶ ಕಡಿಮೆ ಇರುವ, ಕೊಬ್ಬಿನಂಶವನ್ನು ತೆಗೆದ ಅರೆಬಿಕ್ ಮಾಂಸಾಹಾರಕ್ಕೆ ಬಲು ಬೇಡಿಕೆ ಇದೆ. ಅಲ್ಲದೆ ಮಸಾಲೆ ಕೂಡ ಕಡಿಮೆ ಇದ್ದು ಕೃತಕ ಬಣ್ಣಗಳನ್ನು ಲೇಪಿಸುವುದಿಲ್ಲ. ಡಾಲ್ಡಾ, ತುಪ್ಪ ಮುಂತಾದ ಪದಾರ್ಥಗಳನ್ನೂ ಬಳಸುವುದಿಲ್ಲ. ನಾವು ಇರಾನಿ ಮತ್ತು ಟರ್ಕಿ ಶೈಲಿಯ ಆಹಾರವನ್ನು ಪ್ರಸ್ತುತಪಡಿಸುತ್ತೇವೆ. ಬಹಳ ರುಚಿಕರವಾಗಿರುವ ಅದು ಜನರನ್ನು ಹೆಚ್ಚು ಸೆಳೆಯುತ್ತಿದೆ. ಈಗೀಗ ಬಹಳಷ್ಟು ಯುವ ಗ್ರಾಹಕರು ಬರುತ್ತಿರುವುದು ವಿಶೇಷ,” ಎನ್ನುತ್ತಾರೆ.

ಮಂಗಳೂರಿಗೆ ಅರೆಬಿಕ್ ತಿನಿಸುಗಳ ರುಚಿ ಹತ್ತಿದ್ದು ಕೇರಳದ ಮೂಲಕ. “ಅಲ್ಲಿ ಬಹಳಷ್ಟು ಮಂದಿ ಕೊಲ್ಲಿ ರಾಷ್ಟ್ರಗಳ ಜೊತೆ ನಂಟು ಹೊಂದಿದವರು ಇದ್ದಾರೆ, ಕೇರಳದಲ್ಲಿ ಬಹಳಷ್ಟು ಅರೆಬಿಕ್ ಶೈಲಿಯ ಹೋಟೆಲುಗಳಿದ್ದವು. ಅದರಿಂದ ಪ್ರೇರೇಪಿತರಾಗಿ ಅರಬ್ ದೇಶಗಳ ತಿನಿಸಿನ ಸವಿಯನ್ನು ಉಣಬಡಿಸಲು ಮಂಗಳೂರಿನ ಹೋಟೆಲ್ ಮಾಲೀಕರು ಕೂಡ ಸಿದ್ಧರಾದರು,” ಎನ್ನುವುದು ಬಾವುಟಗುಡ್ಡೆ ರಸ್ತೆಯಲ್ಲಿರುವ ‘ಗುಡೀಸ್ ಅರೆಬಿಯನ್ ಟೇಸ್ಟ್’ ಹೋಟೆಲ್ ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಸತ್ತಾರ್ ಅವರ ಅಭಿಪ್ರಾಯ. ಅದೇ ಹೋಟೆಲಿನ ಕ್ಯಾಷಿಯರ್ ಮಹಮದ್ ಬಷೀರ್ “ನಮ್ಮ ಹೋಟೆಲಿಗೆ ಅರಬ್ ನಿವಾಸಿಗಳು ಕೂಡ ಬಂದು ಊಟ ಸವಿದಿದ್ದಾರೆ. ನಮ್ಮೂರಿನ ರುಚಿಯನ್ನೇ ಇಲ್ಲಿ ಕಂಡಿದ್ದೇವೆ ಎಂದು ಖುಷಿಗೊಂಡಿದ್ದಾರೆ” ಎನ್ನುತ್ತಾರೆ.

ಇದನ್ನೂ ಓದಿ : ರಂಜಾನ್ ವಿಶೇಷ ವಿಡಿಯೋ | ಚಾಮರಾಜಪೇಟೆಯ ಈದ್ಗಾ ಸಂಭ್ರಮದ ವೈಮಾನಿಕ ದೃಶ್ಯ

ಅರೆಬಿಕ್ ತಿನಿಸುಗಳ ರುಚಿಗೆ ಒಮ್ಮೆ ಮಾರು ಹೋದವರು ಅದನ್ನು ಮತ್ತೆ ಮತ್ತೆ ಚಪ್ಪರಿಸುತ್ತಾರೆ ಎನ್ನುವುದನ್ನು ಬೆಂಗ್ರೆ ರಿಯಾಜ್ ಒಪ್ಪಿಕೊಳ್ಳುತ್ತಾರೆ. ಅವರು ಬಂದರು ಪ್ರದೇಶದಲ್ಲಿ ಮನೆ ನಿರ್ಮಾಣ ಸಾಮಗ್ರಿಗಳ ಮಳಿಗೆ ಹೊಂದಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಅರೆಬಿಕ್ ಶೈಲಿಯ ತಿನಿಸುಗಳತ್ತ ಅವರ ನಾಲಗೆ ಹೊರಳುವುದಿದೆ. ರಂಜಾನ್, ಬಕ್ರೀದ್ ಹಬ್ಬದ ಹೊತ್ತಿನಲ್ಲಿ ಗೆಳೆಯರೊಂದಿಗೆ ದೂರದ ಕಾಸರಗೋಡಿನವರೆಗೆ ಹೋಗಿ ಮಂದಿ ಬಿರಿಯಾನಿ ಸವಿದದ್ದೂ ಇದೆ.

ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಸವಿತಾ ಶೆಟ್ಟಿ ಕೂಡ ಇದೇ ಮಾತನ್ನು ಹೇಳುತ್ತಾರೆ. “ಅರೆಬಿಕ್ ಆಹಾರ ತಿನ್ನುವಾಗ ಅಪರೂಪಕ್ಕೆ ಮಸಾಲೆ ಪದಾರ್ಥಗಳು ಸಿಕ್ಕರೂ ಬಾಯಿಯಲ್ಲಿ ನೀರೂರುವಂತೆ ಇರುತ್ತವೆ. ನಮ್ಮಲ್ಲಿಯಂತೆ ಒಣ ಮೆಣಸು, ಹಸಿ ಮೆಣಸು, ಢಾಳಾದ ಒಗ್ಗರಣೆ ಏನೂ ಇರುವುದಿಲ್ಲ. ಸಹೋದ್ಯೋಗಿಗಳೊಂದಿಗೆ ಒಮ್ಮೆ ತಿಂದಿದ್ದೆ. ಆಮೇಲೆ ಅದರ ರುಚಿ ಹತ್ತಿತು. ಬಿಡುವಿನ ಸಮಯದಲ್ಲಿ ಕುಟುಂಬದೊಂದಿಗೆ ಬಂದು ಅರೆಬಿಕ್ ತಿನಿಸುಗಳ ರುಚಿ ನೋಡುತ್ತೇನೆ,” ಎನ್ನುತ್ತಾರೆ.

ಮಂಗಳೂರಿನ ಮಧ್ಯಮವರ್ಗ, ಮೇಲ್ಮಧ್ಯಮ ವರ್ಗದ ಜನ ಅರೆಬಿಕ್ ತಿನಿಸುಗಳನ್ನು ಬಹಳ ಇಷ್ಟಪಡುತ್ತಾರೆ. ಆದರೆ ಇದು ಇನ್ನೂ ಸ್ಥಳೀಯ ಆಹಾರ ಸಂಸ್ಕೃತಿಯ ಭಾಗವಾಗಿಲ್ಲ. ಮನೆಗಳಲ್ಲಿ ಇಂತಹ ಆಹಾರ ತಯಾರಿಸುವುದು ಅಪರೂಪ. ವಿಶಿಷ್ಟವಾದ ಪದಾರ್ಥಗಳನ್ನೇ ಬಳಸಿ ತಯಾರಿಸಬೇಕಿರುವುದರಿಂದಲೂ ಸಮಯದ ಅಭಾವದಿಂದಲೂ ಬಹಳಷ್ಟು ಮಂದಿ ಹೋಟೆಲ್ ತಿನಿಸುಗಳನ್ನೇ ನೆಚ್ಚಿಕೊಂಡಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More