ವಿಡಿಯೋ | ಅಡುಗೆ ಎಣ್ಣೆಯಲ್ಲಿ ಪೆಟ್ರೋಲಿಯಂ ಉತ್ಪನ್ನ ಬೆರೆಸುವುದು ನಿಜವೇ?

ಖಾದ್ಯತೈಲದಲ್ಲಿ ಪೆಟ್ರೋಲಿಯಂ ವಸ್ತುಗಳನ್ನು ಸೇರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ವದಂತಿ ಆಗಾಗ ಹರಿದಾಡುವುದನ್ನು ಗಮನಿಸಬಹುದು. ಆದರೆ ಆ ವಾದದಲ್ಲಿ ಹುರುಳಿಲ್ಲ ಎನ್ನುತ್ತಾರೆ ಗ್ರಾಹಕ ಹಕ್ಕುಗಳ ಹೋರಾಟಗಾರ ಪ್ರೊ ನರೇಂದ್ರ ನಾಯಕ್. ಅದರ ಪ್ರಾತ್ಯಕ್ಷಿಕೆ ಇಲ್ಲಿದೆ

“ಮಾರುಕಟ್ಟೆಯಲ್ಲಿ ಸಿಗುವ ಖಾದ್ಯತೈಲಗಳು ಕಲಬೆರಕೆಯಾಗಿವೆ. ಅವುಗಳಲ್ಲಿ ಅಪಾಯಕಾರಿ ಖನಿಜ ತೈಲವನ್ನು ಮಿಶ್ರಣ ಮಾಡಲಾಗಿರುತ್ತದೆ ಎಂಬಂತಹ ವಾಟ್ಸ್ಯಾಪ್ ಸಂದೇಶವನ್ನೋ, ಫೇಸ್ಬುಕ್ ಟಿಪ್ಪಣಿಗಳನ್ನೋ ನೀವು ನೋಡಿರಬಹುದು. ಹಾಗೆ ಸಂದೇಶ ಹರಡುವವರು ಕೇವಲ ಮಾರುಕಟ್ಟೆ ತೈಲಗಳ ವಿರೋಧಿಗಳಾಗಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ಬದಲಿಗೆ ತಮ್ಮ ಸರಕುಗಳನ್ನು ದುಪ್ಪಟ್ಟು ಬೆಲೆಗೆ ಮಾರಿಕೊಳ್ಳಲು ಇಲ್ಲಸಲ್ಲದ ಕತೆ ಕಟ್ಟುತ್ತಿದ್ದಾರೆ. ” ಎಂಬ ಆರೋಪ ಗ್ರಾಹಕ ಹಕ್ಕುಗಳ ಹೋರಾಟಗಾರ ಪ್ರೊ ನರೇಂದ್ರ ನಾಯಕ್ ಅವರದು.

ಒಮ್ಮೆ ನರೇಂದ್ರ ನಾಯಕ್ ಅವರ ಮುಂದೆ ಸಾವಯವವಾದಿಯೊಬ್ಬರು “ಅಡುಗೆ ಎಣ್ಣೆಯಲ್ಲಿ ಬಣ್ಣ- ವಾಸನೆ ಇರದ ಆದರೆ ಜೀವಕ್ಕೆ ಕುತ್ತು ತರಬಲ್ಲ ಪೆಟ್ರೋಲಿಯಂ ಉತ್ಪನ್ನಗಳನ್ನು ಬೆರೆಸಲಾಗಿರುತ್ತದೆ. ಹಾಗಾಗಿ ಬೆಲೆ ದುಪ್ಪಟ್ಟಾಗಿದ್ದರೂ ಪರವಾಗಿಲ್ಲ ಸಾವಯವ ತೈಲವನ್ನೇ ಆಹಾರಕ್ಕೆ ಬಳಸಿ” ಎಂದು ಹೇಳುತ್ತಿದ್ದರು. ಇದು ನಿಜವೇ ಎಂದು ಪರಿಶೀಲಿಸಿದಾಗ ನಾಯಕ್ ಅವರಿಗೆ ಬೇರೊಂದು ಸತ್ಯ ಗೋಚರಿಸಿತು. ಕುತಂತ್ರ ನಿಜವಾಗಿಯೂ ಖಾದ್ಯ ತೈಲ ಕಂಪೆನಿಗಳದ್ದಾಗಿರಲಿಲ್ಲ, ಬದಲಿಗೆ ಸಾವಯವ ವಸ್ತುಗಳನ್ನು ಉತ್ತೇಜಿಸುವವರದ್ದಾಗಿತ್ತು. “ಖಾದ್ಯ ತೈಲದಲ್ಲಿ ಪೆಟ್ರೋಲಿಯಂ ಉತ್ಪನ್ನ ಬಳಕೆಯಾಗಿದ್ದರೆ ಅದನ್ನು ಪತ್ತೆ ಹಚ್ಚುವುದು ಸುಲಭ. ಹಾಗೆಲ್ಲಾ ಜೀವವಿರೋಧಿ ವಸ್ತುಗಳನ್ನು ಬಳಸಲು ಆಹಾರ ಸುರಕ್ಷತೆ ಮಾನದಂಡಗಳು ಬಿಗಿಯಾಗಿವೆ?” ಎನ್ನುತ್ತಾರೆ ನರೇಂದ್ರ ನಾಯಕ್.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ ಎಸ್ ಎಸ್ ಎ ಐ) ಆಹಾರ ಸುರಕ್ಷತೆ ಕುರಿತು ಕೈಪಿಡಿಯೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕಲಬೆರಕೆ ಮಾಡುವುದನ್ನು ಪತ್ತೆ ಹಚ್ಚುವುದು ಹೇಗೆ ಎಂಬ ಪ್ರಯೋಗಗಳನ್ನು ವಿವರಿಸಲಾಗಿದೆ. ಹಿಟ್ಟು, ಖಾರದಪುಡಿ, ಹಾಲು, ಇಂಗು, ಧಾನ್ಯಗಳು, ಕೇಸರಿ ಮುಂತಾದ ಪದಾರ್ಥಗಳಿಗೆ ಹೇಗೆ ಕಲಬೆರಕೆ ಮಾಡಲಾಗುತ್ತದೆ ಎಂಬ ವಿವರಗಳನ್ನು ನೀಡಲಾಗಿದೆ. ಅದರಲ್ಲಿ ಅಡುಗೆ ಎಣ್ಣೆಯ ಕಲಬೆರಕೆಗಳನ್ನು ಪತ್ತೆ ಹಚ್ಚುವ ವಿಧಾನಗಳನ್ನು ವಿವರಿಸಲಾಗಿದೆ.

ಆ ವಿಧಾನಗಳನ್ನು ಅನುಸರಿಸಿ ನರೇಂದ್ರ ನಾಯಕರು ಪ್ರಯೋಗ ನಡೆಸಿ ಅದರ ವಿವರಗಳನ್ನು ‘ದಿ ಸ್ಟೇಟ್’ನೊಂದಿಗೆ ಹಂಚಿಕೊಂಡರು. ‘ಲಿಕ್ವಿಡ್ ಪ್ಯಾರಾಫಿನ್’ ಎಂಬ ಖನಿಜ ತೈಲವನ್ನು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಖಾದ್ಯ ತೈಲವಾಗಿ ಬಳಸುವ ಕೊಬ್ಬರಿ ಎಣ್ಣೆಯನ್ನು ಪ್ರಯೋಗದಲ್ಲಿ ಬಳಸಿಕೊಳ್ಳಲಾಯಿತು. ಒಂದು ಪ್ರನಾಳದಲ್ಲಿ ಕೊಬ್ಬರಿ ಎಣ್ಣೆಯನ್ನು ಹಾಗೂ ‘ಎ’ ಎಂಬ ಪಟ್ಟಿ ಹೊಂದಿದ್ದ ಇನ್ನೊಂದು ಪ್ರನಾಳದಲ್ಲಿ ಲಿಕ್ವಿಡ್ ಪ್ಯಾರಾಫಿನ್ ಮಿಶ್ರಣ ಮಾಡಿದ್ದ ಕೊಬ್ಬರಿ ಎಣ್ಣೆಯನ್ನು ಸುರಿಯಲಾಯಿತು. ಖನಿಜ ತೈಲವನ್ನು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿದಾಗ ಒಂದೇ ರೀತಿ ಕಾಣುತ್ತಿತ್ತು. ನಂತರ ಎರಡೂ ಪ್ರನಾಳಗಳಿಗೆ ಸಮ ಪ್ರಮಾಣದಲ್ಲಿ ‘ಆಲ್ಕೋಹಾಲಿಕ್ ಪೊಟ್ಯಾಷಿಯಂ ಹೈಡ್ರಾಕ್ಸೈಡ್’ ಬೆರೆಸಿ ಹದಿನೈದು ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ಇರಿಸಲಾಯಿತು.

ನಂತರ ಅವುಗಳಿಗೆ ನೀರನ್ನು ಬೆರೆಸಿ ಅಲುಗಾಡಿಸಲಾಯಿತು. ಆಗ, ‘ಎ’ ಪಟ್ಟಿಯ ಪ್ರನಾಳದಲ್ಲಿದ್ದ ಖನಿಜ ತೈಲ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಯದೇ ಪ್ರತ್ಯೇಕವಾಗಿ ತೇಲುತ್ತಿತ್ತು. ಆಲ್ಕೋಹಾಲಿಕ್ ಪೊಟ್ಯಾಷಿಯಂ ಹೈಡ್ರಾಕ್ಸೈಡ್ ಎಂಬ ಕ್ಷಾರದಂಶವನ್ನು ಅದರಲ್ಲಿ ಬೆರೆಸಿ ಕುದಿಸಿದ್ದರಿಂದ ಅದು ನೀರಿನಿಂದ ಬೇರ್ಪಟ್ಟು ನಿಂತಿತ್ತು. ಆದರೆ ಕೇವಲ ಕೊಬ್ಬರಿ ಎಣ್ಣೆ ಮತ್ತು ಆಲ್ಕೋಹಾಲಿಕ್ ಪೊಟ್ಯಾಷಿಯಂ ಹೈಡ್ರಾಕ್ಸೈಡ್ ಬೆರೆಸಿದ್ದ ಪ್ರನಾಳದಲ್ಲಿ ನೊರೆಯಂತಹ ಅಂಶ ಕಂಡು ಬಂದಿತ್ತೇ ವಿನಾ ಪ್ರತ್ಯೇಕವಾಗಿ ತೈಲ ತೇಲುತ್ತಿರಲಿಲ್ಲ.

ಯಾಕೆ ಹೀಗೆ? ನಾಯಕ್ ಅವರು ವಿವರಿಸುವಂತೆ, ಖಾದ್ಯ ತೈಲಗಳು ಗ್ಲಿಸರೈಲ್ ಮತ್ತು ಫ್ಯಾಟಿ ಆಸಿಡ್ ಸಂಯೋಜನೆಯಿಂದ ಉಂಟಾದವು. ಅವುಗಳನ್ನು ಕ್ಷಾರೀಯ ಪದಾರ್ಥಗಳೊಡನೆ ಕುದಿಸಿದಾಗ ಅವು ನೀರಿನಲ್ಲಿ ಸುಲಭವಾಗಿ ಕರಗುತ್ತವೆ. ಇದೇವೇಳೆ ಪೆಟ್ರೋಲಿಯಂನಂತಹ ಖನಿಜ ತೈಲಗಳನ್ನು ಕುದಿಸಿದಾಗ ಅದು ನೀರಿನಲ್ಲಿ ಕರಗುವುದಿಲ್ಲ. ಪರಿಣಾಮ ಅದು ಪ್ರತ್ಯೇಕ ಪದರವಾಗಿ ನೀರಿನಲ್ಲಿ ತೇಲುತ್ತದೆ.

ಸಾವಯವ ಪರ ವಾದಿಸುವವರು “ಸೂರ್ಯಕಾಂತಿ ಎಣ್ಣೆ ನೂರು ರೂಪಾಯಿಗೆ ಸಿಗುತ್ತದೆ. ಆದರೆ ಒಂದು ಲೀಟರ್ ಎಣ್ಣೆ ಪಡೆಯಲು ಅವರಿಗೆ ನಾಲ್ಕು ಕಿಲೋ ಸೂರ್ಯಕಾಂತಿ ಬೀಜ ಬೇಕು. ಅಷ್ಟು ದುಬಾರಿ ಬೆಲೆಗೆ ಬೀಜ ಪಡೆದು ಕಡಿಮೆ ಬೆಲೆಗೆ ಎಣ್ಣೆ ಮಾರಾಟ ಮಾಡಲು ಸಾಧ್ಯವಿಲ್ಲ. ಕಲಬೆರಕೆ ಮಾಡಿಯೇ ಮಾರಾಟ ಮಾಡುತ್ತಾರೆ. ಇದರಿಂದ ಮನುಷ್ಯನ ಆಯಸ್ಸು ಕಡಿಮೆಯಾಗುತ್ತದೆ,” ಎಂಬ ತರ್ಕ ಮುಂದಿಡುತ್ತಾರೆ. ಅದಕ್ಕೆ ನಾಯಕ್ ಅವರ ಉತ್ತರ ಹೀಗಿದೆ; “ಕಂಪೆನಿಗಳು ಕಡಿಮೆ ಬೆಲೆಯ ಇತರೆ ಖಾದ್ಯ ತೈಲಗಳನ್ನು ಮಿಶ್ರಣ ಮಾಡುತ್ತಿರಬಹುದು. ಆದರೆ ಖನಿಜ ತೈಲ ಮಿಶ್ರಣ ಮಾಡುತ್ತಿದ್ದಾರೆ ಎನ್ನುವುದಕ್ಕೆ ಆಧಾರಗಳಿಲ್ಲ. ಅಲ್ಲದೆ ಕಂಪೆನಿಗಳು ದೊಡ್ಡಮಟ್ಟದಲ್ಲಿ ತೈಲಬೀಜಗಳನ್ನು ಖರೀದಿಸುವುದರಿಂದ ಅವರಿಗೆ ಇನ್ನೂ ಕಡಿಮೆ ಬೆಲೆಗೆ ಬೀಜಗಳು ಸಿಗಬಹುದು, ಇತರೆ ರಾಷ್ಟ್ರಗಳಿಂದ ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಆದರೆ ಆಧಾರರಹಿತವಾಗಿ, ತಮ್ಮ ಲಾಭದ ಉದ್ದೇಶಕ್ಕೆ ಆರೋಪ ಹೊರಿಸುವುದು ತಪ್ಪು” ಎನ್ನುತ್ತಾರೆ.

ಇದನ್ನೂ ಓದಿ : ರುದ್ರಾಕ್ಷಿ ಮಣಿಗೆ ಆಹಾರದ ತಾಮಸ ಗುಣ ಅಳೆಯುವ ಶಕ್ತಿ ಇರುವುದು ನಿಜವೇ?

ಮನುಷ್ಯನ ಆಯಸ್ಸಿನ ವಿಚಾರಕ್ಕೆ ಸಂಬಂಧಿಸಿದಂತೆ ನಾಯಕ್, “ಕಳೆದ ಶತಮಾನದ ನಲವತ್ತರ ದಶಕದಲ್ಲಿ ಯಾವ ರಾಸಾಯನಿಕವನ್ನೂ ಬಳಸದೆ ಭಾರತದಲ್ಲಿ ಕೃಷಿ ನಡೆಯುತ್ತಿತ್ತು. ಆಗ ಭಾರತೀಯರ ಸರಾಸರಿ ಆಯಸ್ಸು ಇದ್ದದ್ದು ಕೇವಲ 30ರಿಂದ 40 ವರ್ಷ. ಇಷ್ಟೆಲ್ಲಾ ಕ್ರಿಮಿನಾಶಕಗಳು, ರಾಸಾಯನಿಕ ಗೊಬ್ಬರಗಳ ಬಳಕೆಯ ನಡುವೆಯೂ ಈಗ ಆಯಸ್ಸು 68 ವರ್ಷ ಎನ್ನುತ್ತವೆ ಅಂಕಿ ಅಂಶಗಳು. ಹಾಗೆಂದು ರಾಸಾಯನಿಕಗಳು ಎಲ್ಲವೂ ಒಳ್ಳೆಯವು ಎಂದು ವಾದಿಸುತ್ತಿಲ್ಲ. ಅವುಗಳನ್ನು ಖಳನಾಯಕರ ಸ್ಥಾನದಲ್ಲಿಟ್ಟು, ಮಾರುಕಟ್ಟೆ ಬೆಲೆಗಿಂತ ಹಲವು ಪಟ್ಟು ಹೆಚ್ಚಿಗೆ ದರದಲ್ಲಿ ತಮ್ಮ ವಸ್ತುಗಳನ್ನು ಮಾರುವುದು ಗ್ರಾಹಕರ ಶೋಷಣೆ,” ಎಂದು ಹೇಳುತ್ತಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More