ವಿಡಿಯೋ | ಪ್ರಾಕೃತಿಕ ‘ಸ್ವರ್ಗ’ದಲ್ಲಿದ್ದಾರೆ ಪಾಡ್ದನ ಪಾಡುವ ಮೆಚ್ಚು

ಪಾಡ್ದನ ಹೇಳುವ ತಲೆಮಾರಿಗೆ ಸೇರಿದವರು ಈ ಮೆಚ್ಚು. ಪರ್ತಿಯಾರ್ ಗ್ರಾಮದಲ್ಲಿ ಹುಟ್ಟಿ ಬೆಳೆದ ಮೆಚ್ಚು, ೧೧ನೇ ವಯಸ್ಸಿನಲ್ಲಿ ಭತ್ತದ ಗದ್ದೆಗಳಿಗೆ ನಾಟಿಗೆ ಹೋಗುವಾಗ ಪಾಡ್ದನ ಕಲಿತವರು. ಬಡತನದಿಂದಾಗಿ ಶಾಲೆಯ ಮುಖ ಕಾಣದ ಮೆಚ್ಚು ಅವರಿಗೆ ತಾಯಿ ಹೇಳಿಕೊಟ್ಟ ಈ ಪಾಡ್ದನಗಳೇ ಶಿಕ್ಷಣ

ಆಕೆ ಮೆಚ್ಚು. ವಯಸ್ಸು ಸುಮಾರು ಎಂಬತ್ತು ಇರಬಹುದು ಎಂದು ಅವರೇ ಹೇಳುತ್ತಾರೆ. ಎಷ್ಟು ವಯಸ್ಸು ಎನ್ನುವ ಖಚಿತ ಮಾಹಿತಿ ಅವರಿಗೂ ಇಲ್ಲ. ಆದರೆ, ಎಲೆ-ಅಡಿಕೆ ಹಾಕಿಕೊಂಡು ಕುಳಿತರೆಂದರೆ ತುಳು ಜನಪದ ಹಾಡುಗಳು ಧಾರೆಯಾಗಿ ಹರಿಯುತ್ತವೆ. ಮೆಚ್ಚು ಅವರನ್ನು ಮಾತನಾಡಿಸಲೆಂದು ಕಾಸರಗೋಡು ಜಿಲ್ಲೆಯ ಪ್ರಕೃತಿಯ ಮಡಿಲಲ್ಲಿರುವ ಸ್ವರ್ಗ ಎನ್ನುವ ಊರಿಗೆ ತಲುಪಿದಾಗ ಇಳಿಹೊತ್ತು. ಬೆಟ್ಟಗಳನ್ನು ಹತ್ತಿಳಿದು ಮೆಚ್ಚು ಅವರ ಮನೆಗೆ ಬಂದಾಗ ಕತ್ತಲಾವರಿಸಿತ್ತು. ಆದರೂ ಮೆಚ್ಚು ಬಹಳ ಉತ್ಸಾಹದಿಂದ ತಮ್ಮ ನೆನಪಿನ ಪಟಲದಲ್ಲಿರುವ ಪಾಡ್ದನಗಳನ್ನು ನಮ್ಮ ಮುಂದಿಟ್ಟರು.

ತುಳು ಭಾಷೆಯ ಜನಪದ ಸಂಪತ್ತನ್ನು ಪಾಡ್ದನ ಎಂದು ಕರೆಯಲಾಗುತ್ತದೆ. ತಲೆಮಾರಿನಿಂದಲೂ ಈ ಪಾಡ್ದನಗಳನ್ನು ತುಳುವರು ತಮ್ಮ ದಿನನಿತ್ಯದ ಕಾರ್ಯಗಳಲ್ಲಿ ಹಾಡುತ್ತಿದ್ದರು. ಪಾಡ್ದನಗಳನ್ನು ಹಾಡುವುದು ನೇಜಿ (ನಾಟಿ) ನೆಡುವಾಗ, ಹೊಲದಲ್ಲಿ ಕೆಲಸ ಮಾಡುವಾಗ, ತುಳುನಾಡಿನ ಭೂತಗಳ ಪರಿಚಯ ಮಾಡಿಕೊಡಲು ಭೂತಾರಾಧನೆಯ ಸಂದರ್ಭದಲ್ಲಿ ಮಾತ್ರ. ಹೀಗಾಗಿ, ಹೊಸ ತಲೆಮಾರಿಗೆ ಪಾಡ್ದನಗಳ ಪರಿಚಯ ಬಹಳ ಕಡಿಮೆ. ಪರಿಚಯವಿದ್ದರೂ ಹಾಡಲು ಬರುವುದಿಲ್ಲ. ಸಹಜವಾಗಿ ಮೆಚ್ಚು ಅವರನ್ನು ಹೊರತುಪಡಿಸಿ ಕುಟುಂಬದ ಇತರರಿಗೆ ಪಾಡ್ದನಗಳನ್ನು ಹಾಡಲು ಬರುವುದಿಲ್ಲ. ಆದರೆ, ಮಕ್ಕಳು ಅಥವಾ ಮರಿಮಕ್ಕಳು ಕಲಿಯಲು ಬಯಸಿದರೆ ಕಲಿಸಿಕೊಡುವ ಉತ್ಸಾಹ ಮೆಚ್ಚು ಅವರಿಗಿದೆ.

ಮೆಚ್ಚು ತಮ್ಮ ತಾಯಿಯಿಂದ ಪಾಡ್ದನ ಕಲಿತಿದ್ದರು. ಪರ್ತಿಯಾರ್ ಎನ್ನುವ ಗ್ರಾಮದಲ್ಲಿ ಹುಟ್ಟಿ ಬೆಳೆದ ಮೆಚ್ಚು, ಹದಿನಾರನೇ ವಯಸ್ಸಿನಲ್ಲಿ ಭತ್ತದ ಗದ್ದೆಗಳಿಗೆ ನೇಜಿ ನೆಡಲು ಹೋಗುವಾಗ ಪಾಡ್ದನ ಹಾಡಲು ಆರಂಭಿಸಿದ್ದರು. “ಗ್ರಾಮದಲ್ಲಿ ಶಾಲೆ ಇದ್ದರೂ ಓದಲು ಸಾಧ್ಯವಾಗಲಿಲ್ಲ,” ಎನ್ನುತ್ತಾರವರು. ಒಪ್ಪೊತ್ತಿನ ಊಟಕ್ಕಾಗಿ ದುಡಿಮೆ ಮಾಡಬೇಕಾದ ಅನಿವಾರ್ಯತೆಯಿಂದಾಗಿ ಬಾಲ್ಯದಲ್ಲಿಯೇ ಗದ್ದೆ ಕೆಲಸಕ್ಕೆ ಹೋಗುತ್ತಿದ್ದರು. ಬಡತನದಲ್ಲಿಯೇ ಹುಟ್ಟಿ ಬೆಳೆದ ಮೆಚ್ಚು ಅವರಿಗೆ ಓದುವ ಆಸೆ ಬಹಳ ಇತ್ತು. ಆದರೆ, ಬಡತನದಿಂದಾಗಿ ಮನೆಯ ಹುಡುಗರೇ ಅರ್ಧದಲ್ಲಿ ಶಾಲೆ ಬಿಟ್ಟು ಕೆಲಸಕ್ಕೆ ಹೋಗಲಾರಂಭಿಸಿದ್ದರು. ಹೀಗಿರುವಾಗ, ಮೆಚ್ಚು ಶಾಲೆಯ ಮುಖ ನೋಡುವುದೂ ಸಾಧ್ಯವಿರಲಿಲ್ಲ. ಇಂದಿಗೂ ಶಾಲೆಗೆ ಹೋಗಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಸಣ್ಣ ಆಸೆ ಅವರ ಮನದಲ್ಲಿದೆ. ಮೆಚ್ಚು ಅವರ ಓರಗೆಯ ಹೆಣ್ಣುಮಕ್ಕಳು ಅಥವಾ ಸಹೋದರಿಯರೂ ಶಾಲೆಯ ಮುಖ ನೋಡಿದವರಲ್ಲ. ಮನೆಯ ಒಬ್ಬ ಹುಡುಗ ಮಾತ್ರ ಹತ್ತನೇ ತರಗತಿವರೆಗೆ ಶಾಲೆಗೆ ಹೋಗಿದ್ದ ಎನ್ನುತ್ತಾರವರು. ಅಮ್ಮ ಕಲಿಸಿದ ಪಾಡ್ದನ, ಸೋಬಾನೆ ಪದ ಮತ್ತು ಇತರ ಹಾಡುಗಳೇ ಮೆಚ್ಚು ಕಲಿತ ಶಿಕ್ಷಣ. ಜೊತೆಗೆ, ಮನೆ ವಾರ್ತೆಗಳು ಮತ್ತು ಗದ್ದೆ ಕೆಲಸದಲ್ಲೇ ಅವರ ಜೀವನವಿಡೀ ಮುಳುಗಿಹೋಗಿದೆ. ಮದುವೆಯಾದ ಮೇಲೆ ಸ್ವರ್ಗ ಗ್ರಾಮದಲ್ಲಿ ಬಂದು ನೆಲೆಸಿದರು. ಆದರೆ, ಈಗ ಸ್ವರ್ಗದಲ್ಲಿ ಗದ್ದೆಗಳೇ ಮಾಯವಾಗಿವೆ ಎನ್ನುವ ನೋವು ಅವರದು. “ಈ ಗುಡ್ಡದ ಬುಡದಲ್ಲಿದ್ದ ಸಾಲು-ಸಾಲು ಗದ್ದೆಗಳನ್ನೆಲ್ಲ ತೆಗೆದು ತೋಟವಾಗಿ ಬದಲಿಸಲಾಗಿದೆ. ಹಿಂದೆ ಅಲ್ಲೆಲ್ಲ ನಾನು ಗದ್ದೆ ಕೆಲಸ ಮಾಡಿದ್ದೇನೆ,” ಎನ್ನುತ್ತಾರೆ.

ಇದನ್ನೂ ಓದಿ : ‘ಚಮಕ್‌’ ಸಿನಿಮಾ ತಂಡಕ್ಕೆ ಶುಭ ಹಾರೈಸಿದ ಜನಪದ ಗಾಯಕಿ ಸುಕ್ರಿ ಬೊಮ್ಮಗೌಡ

ಅಂದಾಜು ಎಷ್ಟು ಪಾಡ್ದನಗಳು ಗೊತ್ತಿದೆ ಎಂದು ಕೇಳಿದರೆ, ಮೆಚ್ಚು ಅವರಿಗೆ ಹತ್ತಕ್ಕಿಂತ ಹೆಚ್ಚಿನ ಲೆಕ್ಕ ಹೇಳಲು ಬರುವುದಿಲ್ಲ. ಆದರೆ, ಅವರ ಬತ್ತಳಿಕೆಯಲ್ಲಿ ಅಸಂಖ್ಯ ಹಾಡುಗಳಿದ್ದವು. ಈಗ ವಯಸ್ಸಾಗುತ್ತಿದ್ದಂತೆ ಕೆಲವಷ್ಟೇ ನೆನಪಿವೆ. ಎಂಬತ್ತರ ವಯಸ್ಸಿನಲ್ಲಿಯೂ ತಾವು ಕಲಿತ ಶಿಕ್ಷಣವನ್ನು ಇತರರಿಗೆ ಕಲಿಸಬೇಕು ಎನ್ನುವ ಉತ್ಸುಕತೆ ಅವರಲ್ಲಿದೆ. ಆ ಉತ್ಸಾಹದಿಂದಲೇ ಅವರು ಹಾಡಿರುವ ಕೆಲವು ಪಾಡ್ದನಗಳು ಇಲ್ಲಿವೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More