ವಿಡಿಯೋ | ಮರಾಠಿಗರ ಐತಿಹ್ಯ ವಿವರಿಸುವ ಪಾರಂಪರಿಕ ಕಲೆ ಬಾಳಸಾಂತ್

ಬಾಳಾಸಾಂತ್ ನೃತ್ಯ ಮರಾಠಿ ಸಮುದಾಯದ ಪಾರಂಪರಿಕ ಕಲೆ. ಕರ್ನಾಟಕದ ಗಡಿಭಾಗದ ಗ್ರಾಮಗಳಲ್ಲಿ ವಿವಿಧ ಸಮುದಾಯಗಳ ಕಲಾವಿದರು ದೇವರಿಗೆ ಹರಕೆ ಹೊತ್ತು ಮನೆಮನೆಗೆ ತೆರಳಿ ನೃತ್ಯ ಪ್ರದರ್ಶಿಸುವ ವಾಡಿಕೆ ಇದೆ. ಬಾಳಾಸಾಂತ್, ಆಟಿ ಕೆಲಿಂಜ, ಹುಲಿವೇಷಗಳು ಅಂತಹುದೇ ನೃತ್ಯ ಪ್ರಕಾರಗಳು

ಕರ್ನಾಟಕ ಮತ್ತು ಕೇರಳದ ಗಡಿಭಾಗದ ಪ್ರದೇಶಗಳಲ್ಲಿ ಪ್ರಮುಖವಾಗಿ ನೆಲೆಸಿರುವ ಜನಾಂಗ ಗುಡ್ಡಗಾಡು ಮರಾಠಿ ಸಮುದಾಯ. ಮಹಾರಾಷ್ಟ್ರದ ಮರಾಠಿಗರಿಗೂ ಮತ್ತು ಈ ಭಾಗದ ಮರಾಠಿಗರಿಗೂ ಯಾವುದೇ ಸಂಬಂಧವಿಲ್ಲ. ಇವರು ಗಿರಿಜನರು. ಗುಡ್ಡಗಾಡು ಪ್ರದೇಶದಲ್ಲಿಯೇ ನೆಲೆಸಿದ್ದ ಮರಾಠಿ ಸಮುದಾಯ. ಇತ್ತೀಚೆಗಷ್ಟೇ ನಗರದ ಕಡೆಗೆ ಸಾಗಿದ್ದಾರೆ. ಸದ್ಯ ಬಹುತೇಕ ಮರಾಠಿಗರು ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಉತ್ತರ ಕನ್ನಡ ಮತ್ತು ಕಾಸರಗೋಡು ನಿವಾಸಿಗಳು. ಕರ್ನಾಟಕದಲ್ಲಿ ಇವರು ಗಿರಿಜನರೆಂದು ಗುರುತಿಸಿಕೊಂಡಿದ್ದಾರೆ. ಕೇರಳದಲ್ಲಿ ಇತ್ತೀಚೆಗಷ್ಟೇ ಈ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ದೊರೆತಿದೆ. ಈ ಸಮುದಾಯದ ಮುಖ್ಯ ಭಾಷೆ ಮರಾಠಿ. ಆದರೆ, ಸಮುದಾಯದಲ್ಲಿ ತುಳು ಅಥವಾ ಕನ್ನಡ ಭಾಷಿಕರೂ ಇದ್ದಾರೆ.

ಮರಾಠಿ ನಾಯಕ ಸಮುದಾಯಕ್ಕೇ ಸೀಮಿತವಾದ ಹಲವು ಅಪರೂಪದ ಆಚರಣೆಗಳಿವೆ. ಹೊಸ ತಲೆಮಾರಿನ ಮರಾಠಿಗರಿಗೇ ತಿಳಿದಿರದಂತಹ ಕೆಲವು ಆಚರಣೆಗಳೂ ಇವೆ. ಇತ್ತೀಚೆಗೆ ಮರಾಠಿಗರು ತಮ್ಮದೇ ಸಂಘಟನೆಗಳನ್ನು ಕಟ್ಟಿಕೊಂಡು, ಹಳೇ ತಲೆಮಾರಿನವರ ಇಂತಹ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾಸರಗೋಡು ಮೂಲದ ಮರಾಠಿಗರ ಸಂಘಟನೆಯೊಂದು ಮರಾಠಿಗರೇ ಮರೆತಿದ್ದ ‘ಬಾಳಸಾಂತ್’ ಎನ್ನುವ ಆಚರಣೆಯೊಂದನ್ನು ಇದೇ ರೀತಿ ಹುಡುಕಿ ತೆಗೆದಿದೆ. ಬಾಳಾಸಾಂತ್ ಆಚರಣೆಯನ್ನು ನೋಡಿದ್ದ ಹಿರಿಯರು ಯುವಕರಿಗೆ ಆ ಕಲೆಯ ಬಗ್ಗೆ ವಿವರಿಸಿದ್ದಾರೆ. ಆ ವಿವರಗಳನ್ನು ಮುಂದಿಟ್ಟು ಮರಾಠಿ ಸಂಘಟನೆಗಳು ಸದ್ಯ ‘ಬಾಳಾಸಾಂತ್’ ಎನ್ನುವ ಆಚರಣೆಯನ್ನು ಕಲಾಪ್ರಕಾರವಾಗಿ ಬೆಳೆಸಿವೆ. ಇತ್ತೀಚೆಗೆ, ಕಾಸರಗೋಡಿನ ಮರಾಠಿ ಸಂಘಟನೆ ಈ ‘ಬಾಳಾಸಾಂತ್’ ಹೇಗೆ ಹಿಂದಿನ ಕಾಲದಲ್ಲಿ ಆಚರಣೆಯಾಗುತ್ತಿತ್ತು ಎನ್ನುವುದನ್ನು ‘ದಿ ಸ್ಟೇಟ್’ಗಾಗಿ ತಮ್ಮ ಊರಿನ ಸುಮಾರು ನೂರು ವರ್ಷ ಇತಿಹಾಸವಿರುವ ಏಳ್ಕಾನದ ತರವಾಡು ಮನೆಯಲ್ಲಿ ಪ್ರದರ್ಶಿಸಿ ತೋರಿಸಿದ ದೃಶ್ಯಗಳು ಇಲ್ಲಿವೆ. “ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಪುರಾತನ ಕಾಲದಿಂದಲೂ ಆಚರಣೆಯಲ್ಲಿದ್ದ ಕಲಾಪ್ರಕಾರ ಬಾಳಾಸಾಂತ್. ಮರಾಠಿ ಸಮುದಾಯದವರು ಪ್ರದರ್ಶಿಸುತ್ತಿದ್ದ ನೃತ್ಯವಿದು,” ಎನ್ನುತ್ತಾರೆ ಕಾಸರಗೋಡು ಮರಾಠಿ ಸಮುದಾಯದ ಅಪ್ಪಣ್ಣ ನಾಯ್ಕ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪರಿಸರದಲ್ಲಿ ಬಾಲೆಸಾಂತು ಎನ್ನುವ ಮರಾಠಿ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳಿದ್ದಳು. ಈ ಬಾಲಕಿ ಶೃಂಗೇರಿ ಮಠದಲ್ಲಿಯೇ ನೆಲೆಸಿದ್ದ ಅನಾಥೆ. ಬಾಲೆ ಎಂದರೆ ಮಗು ಎಂದರ್ಥ. ಮಗು ಸಾಂತು ಅಥವಾ ಬಾಲೆಸಾಂತು ಎಂದು ಕರೆದು, ಆಕೆಯ ಹೆಸರೇ ಬಾಲೆಸಾಂತು ಎಂದಾಯಿತು. ನಂತರ ಸಾಂತು ಶೃಂಗೇರಿ ತೊರೆದು ಮಡಿಕೇರಿಗೆ ಹೋಗಬೇಕಾಯಿತು. ಆಗ ಮಠದ ಸ್ವಾಮೀಜಿ ಆಕೆಗೆ ವರ್ಷಕ್ಕೊಮ್ಮೆ ತಪ್ಪದೆ ಶೃಂಗೇರಿಗೆ ಬರಬೇಕು ಎಂದು ಹೇಳಿ ಬೀಳ್ಕೊಟ್ಟಿದ್ದರು. ಆದರೆ, ಘಟ್ಟದ ಮೇಲೆ ಹೋದ ಸಾಂತು ಉತ್ತಮವಾದ ಜೀವನ ಕಂಡುಕೊಂಡು ಶೃಂಗೇರಿ ಮಠದ ನೆನಪನ್ನೇ ಮರೆತಳು. ಹೀಗಾಗಿ ಬಾಲೆಸಾಂತು ಏಕೆ ಮಠಕ್ಕೆ ಬರುತ್ತಿಲ್ಲ ಎಂದು ತಿಳಿಯದೆ ಗುರುಗಳು ಮೊದಲಿಗೆ ಒಬ್ಬ ಬ್ರಾಹ್ಮಣರನ್ನು ಆಕೆಯನ್ನು ಕರೆತರಲೆಂದು ಕಳುಹಿಸುತ್ತಾರೆ. ಆದರೆ, ಸಾಂತು ಬಳಿ ಹೋದ ಬ್ರಾಹ್ಮಣರನ್ನು ಆಕೆ ಅಲ್ಲೇ ಉಳಿಸಿಕೊಳ್ಳುತ್ತಾಳೆ. ಹೀಗಾಗಿ, ಮಠದ ಸ್ವಾಮೀಜಿ ಸನ್ಯಾಸಿಯನ್ನು ಕಳುಹಿಸುತ್ತಾರೆ. ಆತನನ್ನೂ ಸಾಂತು ಅಲ್ಲೇ ಉಳಿಸಿಕೊಳ್ಳುತ್ತಾಳೆ. ಹೀಗೆ, ಹಲವರನ್ನು ಕಳುಹಿಸಿದರೂ ಸಾಂತು ಬಾರದಾದಾಗ ಸ್ವತಃ ಗುರುಗಳೇ ಹೋಗುತ್ತಾರೆ. ಗುರುಗಳನ್ನು ಕಂಡಾಗ ಸಾಂತುಗೆ ಜ್ಞಾನೋದಯವಾಗುತ್ತದೆ. ಆಗ ಎಲ್ಲರೂ ಶೃಂಗೇರಿಗೆ ವಾಪಸಾಗುತ್ತಾರೆ; ಬಂದು ಶಾರದಾಂಬೆಗೆ ವಂದಿಸುತ್ತಾರೆ. ಗುರುಗಳು ಸಾಂತುವನ್ನು ಕರೆದುತರಲು ಹೋದಾಗ ಮರಾಠಿಗರು ಅವರ ಜೊತೆಯಲ್ಲಿ ಹೋಗಿದ್ದರು. ಈ ಮರಾಠಿಗರು ಅಂದಿನಿಂದ ಬಾಲೆ ಸಾಂತುವನ್ನು ತಮ್ಮ ಆರಾಧ್ಯ ದೈವ ಎಂದು ಆರಾಧಿಸಲು ಆರಂಭಿಸಿದರು. ಹೀಗೆ ಬಾಳಸಾಂತುವನ್ನು ಮನೆಗೆ ಕರೆತರುವ ಆಚರಣೆ ಆರಂಭವಾಗಿದೆ ಎಂದು ಪೂರ್ವಜರು ಕತೆ ಹೇಳುತ್ತಾರೆ.

ಬಾಳಸಾಂತ್ ಎನ್ನುವ ನೃತ್ಯವನ್ನು ಗ್ರಾಮದ ಮಾರಿಯನ್ನು (ಕೆಟ್ಟ ಶಕುನ) ಓಡಿಸಲು ಜನಪದ ಕಲಾವಿದರು ಪ್ರತಿವರ್ಷ ಮೇ ತಿಂಗಳಲ್ಲಿ ಮನೆಮನೆಗೆ ಹೋಗಿ ಪ್ರದರ್ಶಿಸುತ್ತಿದ್ದರು. ಮರಾಠಿ ಸಮಯದಾಯದವರೇ ಈ ನೃತ್ಯವನ್ನು ತಮ್ಮ ಗ್ರಾಮದ ಶುಭ ಶಕುನಕ್ಕಾಗಿ ಆಚರಿಸುತ್ತಿದ್ದರು. ತುಳುನಾಡಿನಲ್ಲಿ ‘ಆಟಿ ಕೆಲಿಂಜ’ ಎನ್ನುವ ಜನಪದ ಕಲೆಯು ಈ ಬಾಳಾಸಾಂತ್‌ಗೆ ಸಮೀಪದಲ್ಲಿದೆ. ‘ಆಟಿ ಕೆಲಿಂಜ’ ಪ್ರದರ್ಶನ ಆಷಾಡ ಮಾಸದಲ್ಲಿ ಗ್ರಾಮಸ್ಥರ ಒಳಿತಿಗಾಗಿ ಮನೆಮನೆಗೆ ಹೋಗಿ ನೃತ್ಯ ಪ್ರದರ್ಶಿಸಿ ಕಾಣಿಕೆ ಪಡೆದುಕೊಂಡು ಹೋಗುವ ಪದ್ಧತಿ. ಕೇರಳ-ಕರ್ನಾಟಕ ಗಡಿಭಾಗದಲ್ಲಿ ಹೀಗೆ ಮನೆಮನೆಗೆ ಹೋಗಿ ನೃತ್ಯ ಪ್ರದರ್ಶಿಸಿ ಕಾಣಿಕೆ ಪಡೆದುಕೊಂಡು ಹೋಗುವ ಹಲವು ಆಚರಣೆಗಳಿವೆ. ಈಗಲೂ ನವರಾತ್ರಿಯ ಸಂದರ್ಭದಲ್ಲಿ ಹುಲಿ, ಸಿಂಹ, ಕರಡಿ ಮತ್ತಿತರ ವೇಷಧರಿಸಿ ಕಲಾವಿದರು ಮನೆಮನೆಗೆ ಹೋಗಿ ನೃತ್ಯ ಪ್ರದರ್ಶಿಸಿ ಕಾಣಿಕೆ ಪಡೆಯುತ್ತಾರೆ. ಸಾಮಾನ್ಯವಾಗಿ ಹೀಗೆ ನೃತ್ಯ ಪ್ರದರ್ಶಿಸುವ ಕಲಾವಿದರು ದೇವರಿಗೆ ಹರಕೆ ಹೊತ್ತು ಇಂತಹ ಪ್ರದರ್ಶನ ನಡೆಸುತ್ತಾರೆ. ಬಾಳಸಾಂತ್ ಇಂತಹ ಹರಕೆ ಹೊತ್ತು ನಡೆಸುವ ಕಲಾ ಪ್ರದರ್ಶನವೇ ಎನ್ನುವ ಬಗ್ಗೆ ಮತ್ತು ಆ ಕಲಾಪ್ರಕಾರದ ಬಗ್ಗೆ ಅಧ್ಯಯನಗಳು ನಡೆಯಬೇಕಿದೆ.

ಇದನ್ನೂ ಓದಿ : ವಿಡಿಯೋ | ಪ್ರಾಕೃತಿಕ ‘ಸ್ವರ್ಗ’ದಲ್ಲಿದ್ದಾರೆ ಪಾಡ್ದನ ಪಾಡುವ ಮೆಚ್ಚು

ಬಾಳಸಾಂತ್ ಆಚರಣೆ ಹೇಗೆ ಆರಂಭವಾಯಿತು ಎನ್ನುವುದಕ್ಕಿಂತ ಆಚರಣೆಯನ್ನು ಇಂದಿಗೂ ಜೀವಂತವಾಗಿಡುವ ಸಮುದಾಯದ ಯುವಕರ ಪ್ರಯತ್ನ ಶ್ಲಾಘನೀಯ. “ಬಾಳಾಸಾಂತ್ ಆಚರಣೆಯಲ್ಲಿ ಕಲೆಯನ್ನು ಪ್ರದರ್ಶಿಸುವ ಜನರು ಮನೆಮನೆಗೆ ಬಂದು ತಮ್ಮ ನೃತ್ಯವನ್ನು ಪ್ರದರ್ಶಿಸಿ ಕಾಣಿಕೆ ಪಡೆದುಕೊಂಡು ಹೋಗುತ್ತಿದ್ದರು. ಇದು ಮರಾಠಿ ಸಮುದಾಯದ ಐತಿಹ್ಯವನ್ನು ವಿವರಿಸುವಂತಹ ನೃತ್ಯ ಪ್ರದರ್ಶನ. ನಮ್ಮ ಸಮುದಾಯದಲ್ಲಿ ಬಾಳಾಸಾಂತ್ ಎನ್ನುವ ವ್ಯಕ್ತಿ ಇದ್ದರು. ಅವರನ್ನು ಮುಂದಿನ ಜನಾಂಗವೂ ನೆನಪಿಟ್ಟುಕೊಳ್ಳಬೇಕು ಎಂಬ ಕಾರಣದಿಂದ ಈ ಆಚರಣೆ ನಡೆಯುತ್ತಿದೆ. ಇದೇ ಉದ್ದೇಶದಿಂದ ನಾವೂ ಈ ಆಚರಣೆಯನ್ನು ಕಲೆಯಾಗಿ ಪ್ರದರ್ಶಿಸುತ್ತಿದ್ದೇವೆ. ನನ್ನ ಅತ್ತೆ ಈ ಪ್ರದೇಶದಲ್ಲಿ ಬಾಳಸಾಂತ್ ಮನೆಗೆ ಬಂದು ಕುಣಿದದ್ದನ್ನು ನೋಡಿದ್ದಾಗಿ ವಿವರ ಹೇಳಿದ್ದರು. ಹಾಗೆ ಹಲವು ಹಿರಿಯರಿಂದ ವಿವರ ತಿಳಿದು ನಾವು ಈ ಕಲೆಯನ್ನು ಪೋಷಿಸಿಕೊಂಡು ಬಂದಿದ್ದೇವೆ. ನಾವೀಗ ಕಲೆ ಪ್ರದರ್ಶಿಸಿದ ಇದೇ ಅಂಗಳದಲ್ಲಿ ಹಿಂದೆ ಬಾಳಾಸಾಂತ್ ನರ್ತನವನ್ನು ಹಿರಿಯರು ಪ್ರದರ್ಶಿಸಿ ಇದೇ ಮನೆಯಿಂದ ಕಾಣಿಕೆ ಪಡೆದಿದ್ದಾರೆ. ಈ ಮನೆಗೆ ಸುಮಾರು ೧೦೦ ವರ್ಷಗಳ ಇತಿಹಾಸವಿದೆ,” ಎನ್ನುತ್ತಾರೆ ಮರಾಠಿ ಸಮುದಾಯದ ಗೋವಿಂದ ನಾಯ್ಕ.

ಕರ್ನಾಟಕ ಮತ್ತು ಕೇರಳದ ಹಲವು ವೇದಿಕೆಗಳಲ್ಲಿ ಹಲವು ಮರಾಠಿ ಸಂಘಟನೆಗಳು ವಿವಿಧ ರೀತಿಯಲ್ಲಿ ಬಾಳಸಾಂತ್ ಪ್ರದರ್ಶಿಸುತ್ತಿವೆ. ಕೇರಳದಲ್ಲಿ ಇತ್ತೀಚೆಗೆ ಮರಾಠಿ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಸಿಗುವಲ್ಲಿ ಸಹ ಇಂತಹ ಆಚರಣೆಗಳು ಮಹತ್ವದ ಪಾತ್ರ ವಹಿಸಿವೆ ಎಂಬುದು ಗಮನಾರ್ಹ

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More