ಗಂಡಸರಿಗೆ ಮಾತ್ರ; ಇದು ಸುಖ ಸಂಸಾರಕ್ಕಾಗಿ ಬೆಂಗಳೂರಿನ ಕಾಲೇಜೊಂದರ ಸೂತ್ರ!

ಬೆಂಗಳೂರಿನ ಜಯನಗರ ಮೂರನೇ ಬ್ಲಾಕಿನಲ್ಲಿರುವ ‘ಬದುಕು ಕಮ್ಯುನಿಟಿ ಕಾಲೇಜು’ ವಿಶಿಷ್ಟ ಕಾರ್ಯಾಗಾರವೊಂದನ್ನು ನಡೆಸಲು ಮುಂದಾಗಿದೆ. ಆದರೆ ಅದು ‘ಪುರುಷರಿಗಾಗಿ ಮೀಸಲು’ ಮಾತ್ರ. ಏನು ಅದರ ಮಹತ್ವ? ಗಂಡಸರಷ್ಟೇ ಯಾಕೆ ಆ ಕೋರ್ಸಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಗೊತ್ತೆ?

“ನನ್ನ ಹೆಂಡತಿ ಕೆಲಸಕ್ಕೆ ಹೋಗುತ್ತಾಳೆ. ನಾನೂ ಹೋಗುತ್ತೇನೆ. ಅವಳ ರೀತಿ ನಾನೂ ಮನೆಗೆಲಸದಲ್ಲಿ ತೊಡಗಿಕೊಂಡರೆ ಇಬ್ಬರಿಗೂ ಆರಾಮ. ಆದರೆ ನಮ್ಮಪ್ಪ ಅಮ್ಮ ಅದಕ್ಕೆ ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ,”

“ಮಗು ಹುಟ್ಟಿದ ಬಳಿಕ ನಾನು ಕೆಲಸ ಬಿಟ್ಟೆ. ಹೆಂಡತಿ ಸಂಬಳದಲ್ಲಿ ಜೀವನ ಸಾಗುತ್ತಿದೆ. ಪಾಪು ನೋಡಿಕೊಳ್ಳೋದರಲ್ಲೇ ಸಮಯ ಹೋಯ್ತು. ಈಗ ಕಳೆದು ಹೋದ ಟೈಮು ವಾಪಸ್ ಬರಲ್ಲ ಅನ್ಸುತ್ತೆ. ಡೈವರ್ಸ್ ಕೊಡೋಣ ಅಂತಿದ್ದೀನಿ”

“ನನ್ನ ಗಂಡ ಮನೆ ಸಂಭಾಳಿಸೋದರಲ್ಲಿ ನನಗಿಂತ ಒಂದು ಹೆಜ್ಜೆ ಮುಂದು. ಅವರು ಇರೋದರಿಂದ ನನ್ನ ಎಲ್ಲಾ ಕೆಲಸಗಳೂ ಸುಲಭ. ಆದರೆ ಅವರ ಕೈಯಲ್ಲಿ ಮನೆಗೆಲಸ ಮಾಡಿಸೋಕೆ ನನಗೇ ಇಷ್ಟ ಇಲ್ಲ. ಹಾಗೆಲ್ಲಾ ಗಂಡನನ್ನು ದುಡಿಸಿಕೊಳ್ಳೊದು ತಪ್ಪು ಅಂತಾರೆ ನಮ್ಮಮ್ಮ”

ಇಂತಹ ಮಾತು ನಿತ್ಯದ ಬದುಕಿನಲ್ಲಿ ಕೇಳಿ ಬರುತ್ತವೆ. ಆದರೆ ಕಾಲ ಓಡುತ್ತಿದೆ. ಅದರ ಜೊತೆಗೆ ನಾವೂ ಹೆಜ್ಜೆ ಹಾಕಬೇಕು. ಇನ್ನೊಂದೆಡೆ ಸಂಪ್ರದಾಯ, ಪುರುಷ ಪ್ರಧಾನತೆ ಮುಂತಾದ ಕೆಲವು ರೂಢಿಗತವಾದ ಚೌಕಟ್ಟು ಇದಕ್ಕೆ ಅನುವು ಮಾಡಿಕೊಡುತ್ತಿಲ್ಲ. ಸ್ತ್ರೀ ಸ್ವಾತಂತ್ರ್ಯ ಸಮಾನತೆಗೆ ಆದ್ಯತೆ ದೊರೆಯುತ್ತಿರುವ ಹೊತ್ತು ಇದು. ಗಂಡಿನಷ್ಟೇ ಹೆಣ್ಣು ಸಮಾನವಾಗಿ ತನ್ನ ಶಕ್ತಿಯನ್ನು ವಿಸ್ತರಿಸಿಕೊಂಡಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ಮಹಿಳಾ ಸಮಾನತೆ ಏನು ಎಂಬುದು ಸ್ವತಃ ಗಂಡಸರಿಗೆ ಅರ್ಥವಾಗದಿದ್ದರೆ ಸ್ತ್ರೀಯರನ್ನು ಸಮಾನವಾಗಿ ಕಾಣುವ ವಿಚಾರ ಪರಿಪೂರ್ಣವಾಗದು. ಇದನ್ನು ಮನದಟ್ಟು ಮಾಡಿಕೊಡುವ ಸಲುವಾಗಿ ಬೆಂಗಳೂರಿನ ‘ಬದುಕು ಕಮ್ಯುನಿಟಿ ಕಾಲೇಜು’ ಹೊಸ ಪ್ರಯೋಗವನ್ನು ಮಾಡುತ್ತಿದೆ.

‘ರಿಸರ್ವಡ್ ಫಾರ್ ಮೆನ್’ ಎಂಬ ವಾರಾಂತ್ಯದ ಕಾರ್ಯಾಗಾರವನ್ನು ಕಾಲೇಜು ಏರ್ಪಡಿಸಿದೆ. ಸೆ 22ರಿಂದ ಆರಂಭವಾಗುವ ಕಾರ್ಯಾಗಾರ ನವೆಂಬರ್ ಮೊದಲ ವಾರದಲ್ಲಿ ಮುಕ್ತಾಯಗೊಳ್ಳಲಿದೆ. “ಶೇರಿಂಗ್- ಕೇರಿಂಗ್- ಕುಕಿಂಗ್” ಎಂಬ ಪರಿಕಲ್ಪನೆಯಡಿ, ಸಡಿಲವಾಗುತ್ತಿರುವ ಕೌಟುಂಬಿಕ ಸಂಬಂಧಗಳ ಮಹತ್ವವನ್ನು ಹೇಳಿಕೊಡಲು ಅದು ಮುಂದಾಗಿದೆ. “ಹಲವು ಬಾರಿ ಗಂಡಸರು ನ್ಯಾಯ ಯಾವತ್ತಿದ್ದರೂ ಹೆಣ್ಣಿನ ಪರ ಎಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ. ಹೆಣ್ಣು ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ಚರ್ಚಿಸದೆ ಪೂರ್ವಗ್ರಹ ಪೀಡಿತರಾಗಿ ವರ್ತಿಸುತ್ತಾರೆ. ಅಂತಹ ನಂಬಿಕೆಗಳನ್ನು ಒಡೆಯುವುದು ನಮ್ಮ ಉದ್ದೇಶ. ತಮ್ಮ ಸಂಗಾತಿಯ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಳ್ಳುವ ವಾತಾವರಣವೊಂದನ್ನು ನಾವು ನಿರ್ಮಿಸಲಿದ್ದೇವೆ,” ಎನ್ನುತ್ತಾರೆ ಕಾರ್ಯಾಗಾರದ ಸಂಚಾಲಕ ಮುರಳಿ ಮೋಹನ್ ಕಾಟಿ.

ಇದನ್ನೂ ಓದಿ : ಧಾರವಾಡ ಸುತ್ತಮುತ್ತಲ ಮಹಿಳೆಯರ ಮನಗೆದ್ದ ಕರ್ನಾಟಕ ಕಾಲೇಜು ವಿದ್ಯಾರ್ಥಿಗಳು


“ಕೇರ್ ಮಾಡುವುದು ಎಂದರೆ ಕೇವಲ ಮಕ್ಕಳ ಡೈಪರ್ ಬದಲಿಸುವುದು, ಹೆಂಡತಿಯ ಆಸೆಗಳನ್ನು ಈಡೇರಿಸುವುದಷ್ಟೇ ಆಗಿರುವುದಿಲ್ಲ. ಕುಟುಂಬವನ್ನು ಸಂಭಾಳಿಸಲು ಬೇಕಾದ ಭಾವನಾತ್ಮಕ ವಾತಾವರಣದ ಕಲ್ಪನೆಯನ್ನು ಮೂಡಿಸುವುದು ಇದರ ಉದ್ದೇಶ,” ಎಂದು ಹೇಳುತ್ತಾರೆ ಅವರು.

ಸಂಸಾರದಲ್ಲಿ ಅಡುಗೆ ಮತ್ತಿತರ ಮನೆವಾರ್ತೆ ವಿಚಾರಗಳು ಮಹತ್ವದ ಪಾತ್ರ ವಹಿಸುತ್ತವೆ. “ಗಂಡು ಹೆಚ್ಚೆಂದರೆ, ಅಡುಗೆ ಮಾಡುವ ಹೆಂಡತಿಗೆ ಸಹಾಯ ಮಾಡಬಲ್ಲ. ಆದರೆ ನಿತ್ಯವೂ ಅಡುಗೆ ಮಾಡುತ್ತಾನೆಯೇ ಎಂಬ ಪ್ರಶ್ನೆ ಎಲ್ಲ ಮನೆಗಳಲ್ಲೂ ಸಹಜ. ಅಡುಗೆಯಂತಹ ಮನೆವಾರ್ತೆಯನ್ನು ಗಂಡಸರು ಯಾವುದೇ ಪೂರ್ವಗ್ರಹ ಹೊಂದದೇ ನಿರ್ವಹಿಸುವುದು ಹೇಗೆ ಎಂಬುದನ್ನು ಇಲ್ಲಿ ಕಲಿಸಿಕೊಡಲಾಗುತ್ತದೆ,” ಎನ್ನುತ್ತಾರೆ.

ಕಾಲೇಜು ಶಿಕ್ಷಣದಿಂದ ಹೊರಗುಳಿದ, ಸಂಸಾರದ ನೊಗ ಹೊತ್ತ 21-30ರ ವಯೋಮಾನದವರು, ಕಾಲೇಜು ಶಿಕ್ಷಣ ಪಡೆಯುತ್ತಿರುವವರು, ಹಾಗೂ ಕೌಟುಂಬಿಕ- ಔದ್ಯೋಗಿಕ ಸಮಸ್ಯೆ ಎದುರಿಸುತ್ತಿರುವ ವರ್ಗ ಹೀಗೆ ಮೂರು ಪ್ರಧಾನ ಭಾಗಗಳಾಗಿ ವಿಂಗಡಿಸಿ ಕಾರ್ಯಾಗಾರ ನಡೆಸಲಾಗುತ್ತಿದೆ. ಪ್ರತಿ ವಿಭಾಗದಲ್ಲಿಯೂ ಸುಮಾರು 20 ಮಂದಿ ನೋಂದಾಯಿತರಿಗೆ ತರಬೇತಿ ನೀಡುವ ಸಂಕಲ್ಪ ಕಾಲೇಜಿನದು. ಅರಿವು ಮೂಡಿಸಲು ಬರುವ ಸಂಪನ್ಮೂಲ ವ್ಯಕ್ತಿಗಳೆಲ್ಲಾ ಪುರುಷರೇ ಆಗಿದ್ದು ಅವರು ತಮ್ಮ ಅನುಭವಗಳನ್ನು ಕೂಡ ಹಂಚಿಕೊಳ್ಳಲಿದ್ದಾರೆ.

ಸಂಘಟಕರಲ್ಲಿ ಒಬ್ಬರಾದ ರಮೇಶ್ ಚೀಮಾಚನಹಳ್ಳಿ ಕಾರ್ಯಾಗಾರದ ಮಹತ್ವವನ್ನು ವಿವರಿಸುತ್ತಾ, “ಕೃಷಿ ಪ್ರಧಾನ ಸಮಾಜದ ಬದಲಾಗಿ ಉದ್ಯೋಗ ಪ್ರಧಾನ ಮತ್ತು ನಗರ ಪ್ರಧಾನ ಸಮಾಜಕ್ಕೆ ನಾಗರಿಕತೆ ಹೊರಳಿದೆ. ಆದರೆ ಪುರುಷ ಯಜಮಾನಿಕೆ ಸ್ಥಿತಿ ಮಾತ್ರ ಹಾಗೆಯೇ ಉಳಿದಿದೆ. ಅದು ಇಲ್ಲವಾದರೆ ಹಲವು ಕೌಟುಂಬಿಕ ಸಂಘರ್ಷಗಳು ಇಲ್ಲವಾಗುತ್ತವೆ. ಈ ನಿಟ್ಟಿನಲ್ಲಿ ಶ್ರಮಿಸುವುದು ಕಾರ್ಯಾಗಾರದ ಉದ್ದೇಶ,” ಎನ್ನುತ್ತಾರೆ.

ಇಂತಹುದೊಂದು ಕಲ್ಪನೆಗೆ ಸ್ಫೂರ್ತಿಯಾಗಿದ್ದು ‘ಮೆನ್ ಎಂಗೇಜ್ ಅಲಯನ್ಸ್’ ಎಂಬ ಸಂಘಟನೆ ಜಾಗತಿಕಮಟ್ಟದಲ್ಲಿ ಆರಂಭಿಸಿದ ಚಳವಳಿ. ಈ ಚಳವಳಿ ಗಂಡು ಹೆಣ್ಣಿನ ಸಂಬಂಧಗಳಲ್ಲಿ ಸಮಾನತೆ ಸೌಹಾರ್ದತೆಯನ್ನು ತರಲು ಯತ್ನಿಸುತ್ತಿದೆ. ಕಾರ್ಯಾಗಾರದಲ್ಲಿ ಸಂಗಾತಿಯೊಂದಿಗೆ ಸಂಬಂಧ, ಮಕ್ಕಳ ಪಾಲನೆಯಂತಹ ವಿಚಾರವನ್ನು ಮಾತ್ರವೇ ತಿಳಿಸುವುದಿಲ್ಲ. ಜೀವನಶೈಲಿ, ಹವ್ಯಾಸ, ವೃದ್ಧರ ಪಾಲನೆ, ಹಣಕಾಸು ನಿರ್ವಹಣೆ, ಕೆಲಸದ ಸ್ಥಳ ಮತ್ತು ಪುರುಷರು, ಲೈಂಗಿಕತೆ, ರೊಮಾನ್ಸ್, ಕಾನೂನು ಮತ್ತು ಹಕ್ಕುಗಳು, ಸ್ನೇಹಿತರು, ತಂತ್ರಜ್ಞಾನ, ಸಾಮಾಜಿಕ ಮಾಧ್ಯಮಗಳು ವೈಯಕ್ತಿಕ ಬದುಕಿನಲ್ಲಿ ಹೇಗೆ ಪ್ರಭಾವ ಬೀರುತ್ತವೆ ಎಂಬ ಚರ್ಚೆ ನಡೆಯಲಿದೆ.

ಕಾರ್ಯಾಗಾರದ ಬಗ್ಗೆ ಕುತೂಹಲ ಹೊಂದಿರುವ ಶಿಬಿರಾರ್ಥಿ ಪಿ ಶ್ರೀನಾಥ್, “ಅದಕ್ಕೆ ಇಟ್ಟಿರುವ ಹೆಸರೇ ಆಕರ್ಷಿಸಿತು. ಇದರಲ್ಲೇನೋ ವಿಶೇಷ ಇದೆ ಅನ್ನಿಸಿತು. ಮುಖ್ಯವಾಗಿ ಫ್ಯಾಮಿಲಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಸಂಬಂಧಗಳ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಇದರಲ್ಲಿ ಭಾಗವಹಿಸುತ್ತಿದ್ದೇನೆ” ಎಂದು ಹೇಳುತ್ತಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More