ವಿಡಿಯೋ | ಯಾರ ಕೈಗೂ ಸಿಗದ ತನ್ನದೇ ದಿಕ್ಕನ್ನು ಹಿಡಿಯುತ್ತಿರುವ ಗ್ರಾಮೀಣ ಬದುಕು

ಅರ್ಧ ಗಂಟೆಯ ಚರ್ಚೆ ಬದುಕಿನ ಅನುಭದಿಂದ ಬಂದ ಚರ್ಚೆಯಾಗಿತ್ತು. ಟಿ ವಿ ಗಳಲ್ಲಿ ಬರುವ ಅನುಭವ ಶೂನ್ಯ ಚರ್ಚೆಯಾಗಿರಲಿಲ್ಲ. ಒಟ್ಟಿನಲ್ಲಿ ಗ್ರಾಮೀಣ ಬದುಕು ನಮ್ಮೆಲ್ಲರಿಗೂ ತಿಳಿಯದಂತೆ ತನ್ನದೇ ದಿಕ್ಕನ್ನು ಹಿಡಿಯುತ್ತಿದೆ. ಅದು ಯಾರ ಕೈಗೂ ಸಿಗುತ್ತಿಲ್ಲ. ಆದರೆ ಆ ದಿಕ್ಕು ಸರಿಯಾಗಿಲ್ಲ ಎನ್ನುತ್ತಾರೆ ಸಂತೋಷ ಕೌಲಗಿ

ಕೆಲವು ದಿನಗಳ ಹಿಂದೆ ಹಾವೇರಿ ಜಿಲ್ಲಾ ಹರ್ಲಾಪುರ ಗ್ರಾಮಕ್ಕೆ ಹೀಗೇ ಹೋಗಿದ್ದೆ. ಹರ್ಲಾಪುರ ಗ್ರಾಮವು ಹತ್ತಿ ಮತ್ತು ಮೆಣಸಿನಕಾಯಿ ಬೆಳೆಯುವ ರೈತಾಪಿ ಗ್ರಾಮ. ಆ ಹಳ್ಳಿಯ ಚಾದಂಗಡಿಯ ಮುಂದೆ ಚಾ ಹೀರುತ್ತಾ ಕುಳಿತಿದ್ದಾಗ, ಅಲ್ಲೇ ಕುಳಿತಿದ್ದ ಹಳ್ಳಿಗರೊಂದಿಗೆ ಹರಟೆಗೆ ಇಳಿದೆ. 30 ನಿಮಿಷದ ಹರಟೆಯಲ್ಲಿ ಕೃಷಿ, ಬದಲಾಗುತ್ತಿರುವ ಗ್ರಾಮೀಣ ಬದುಕು, ಹಿಂದೂ-ಮುಸ್ಲಿಂ, ಮೇಲ್ಜಾತಿ-ದಲಿತರ ಸಂಬಂಧ ಹೀಗೆ ಒಂದೇ! ಎರಡೇ! ಎಲ್ಲಾ ವಿಷಯಗಳು ಬಂದು ಹೋದವು. 10/15 ವರ್ಷಗಳ ಹಿಂದೆ ಅಬ್ಬರದ ಪ್ರಚಾರ ಪಡೆದು ಹತ್ತಿ ಬೆಳೆಯುವ ಹಳ್ಳಿಗಳನ್ನು ಪ್ರವೇಶಿಸಿದ ಬಿಟಿ ಹತ್ತಿಯಿಂದ ಪ್ರಾರಂಭವಾದ ಚರ್ಚೆ ಎಲ್ಲೆಲ್ಲೋ ಸುತ್ತಿ, ಗಾರೆದ್ದು ಹೋಗುತ್ತಿರುವ ಹಳ್ಳಿಯ ಬದುಕಿನ ಚರ್ಚೆಯೊಂದಿಗೆ ಮುಕ್ತಾಯವಾಯಿತು.

ಸುಮಾರು 10 ವರ್ಷಗಳ ಹಿಂದೆ ಈ ಹಳ್ಳಿಯನ್ನು ಪ್ರವೇಶಿಸಿದ ಬಿ ಟಿ ಹತ್ತಿ ಪ್ರಾರಂಭದಲ್ಲಿ 8-10 ಕ್ವಿಂಟಾಲ್ ಇಳುವರಿ ಬಂದರೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಇಂದು 3-4 ಕ್ವಿಂಟಾಲ್‍ಗೆ ಬಂದಿರುವುದು ಚರ್ಚೆಗೆ ಬಂತು. ಅಲ್ಲೇ ಇದ್ದ ಬಿ ಟಿ ಹತ್ತಿಯ ಜಾಹಿರಾತನ್ನು ತೋರಿ ಎಕರೆಗೆ 10-12 ಕ್ವಿಂಟಾಲ್ ಇಳುವರಿ ಎನ್ನುತ್ತಾರೆ, ನಮ್ಮ ಊರಿನ ಅತ್ಯಂತ ಫಲವತ್ತಾದ ಭೂಮಿಗೆ ಇದನ್ನು ಬಿತ್ತಿದರೂ 3-4 ಕ್ವಿಂಟಾಲ್ ಮೇಲೆ ಏರುವುದಿಲ್ಲ ಎಂದು ಸವಾಲು ಹಾಕಿದರು. ನಮ್ಮ ವಿಜ್ಞಾನಿಗಳು ಬೆಳೆಯ ಇಳುವರಿ ಎಂದರೆ ಅದರಿಂದ ಬರುವ ಪ್ರತ್ಯಕ್ಷ ಫಸಲನ್ನು ಮಾತ್ರ ಪರಿಗಣಿಸಿ ಏಕ ಬೆಳೆಯನ್ನುಪ್ರೋತ್ಸಾಹಿಸಿದರು.

ನಮ್ಮ ರೈತರಿಗೆ ಮಿಶ್ರಬೆಳೆಯಿಂದ ಆಗುತ್ತಿದ್ದ ಪರೋಕ್ಷವಾದ ಲಾಭವನ್ನು ಮರೆತರು. ಉದಾಹರಣೆಗೆ ಹತ್ತಿ ಬೆಳೆಯಲ್ಲಿ ವಿಜ್ಞಾನಿಗಳು ಕೇವಲ ಹತ್ತಿ ಇಳುವರಿಯನ್ನು ಗಮನದಲ್ಲಿಟ್ಟಕೊಂಡು ಮಾತನಾಡಿದರೆ ಹತ್ತಿಯೊಂದಿಗೆ ಮಿಶ್ರಬೆಳೆಯಾಗಿ ಬೆಳೆಯುತ್ತಿದ್ದ ಶೇಂಗಾ ಕೂಡ ಅಷ್ಟೇ ಮುಖ್ಯವಾಗಿತ್ತು. ಶೇಂಗಾ ಗಿಡ ಮೇವಾಗಿ ತಮ್ಮ ಎತ್ತುಗಳಿಗೆ ಮುಖ್ಯವಾಗಿತ್ತು. ನಮ್ಮ ರೈತರಿಗೆ ಹತ್ತಿಯೊಂದಿಗೆ ಬರುವ ಹತ್ತಿ ಬೀಜದ ಗುಣಮಟ್ಟವೂ ಮುಖ್ಯವಾಗಿತ್ತು. ಹತ್ತಿ ಗಿಡದ ಒಣಗಿದ ಕಾಂಡವನ್ನು ಉರುವಲಾಗಿ ಬಳಸುವುದರಿಂದ ಅದರ ಗುಣಮಟ್ಟವೂ ಮುಖ್ಯವಾಗುತ್ತದೆ. ಅಂದರೆ ರೈತರ ಬದುಕಿನ ಭಾಗವಾಗಿ ಸುಧಾರಣೆಗೊಂಡ ಹಳೆಯ ತಳಿಗಳು ಕೇವಲ ಬೆಳೆಯಾಗಿರದೆ ರೈತರ ಬದುಕಿಗೆ ಇನ್ನೇನೇನೋ ಆಗಿರುತ್ತಿದ್ದವು. ಒಣಗಿದ ಹತ್ತಿ ಕಡ್ಡಿಯನ್ನು ವರ್ಷವಿಡೀ ಉರುವಲಾಗಿ ಬಳಸುತ್ತಿದ್ದರು. ಹತ್ತಿ ಬೀಜವು ಉಳುವ ಎತ್ತುಗಳಿಗೆ, ಹಾಲು ಕೊಡುವ ಹಸುಗಳಿಗೆ ಉತ್ತಮ ಮೇವಾಗಿತ್ತು. ಬಿತ್ತನೆ ಬೀಜವಾಗಿ ಕೂಡ ಬೆಲೆ ಅದಕ್ಕೆ ಇತ್ತು. ಅಂದು ವರ್ಷವಿಡೀ ಮನೆಯ ಹಿಂದೆ ಮೆದೆ ಹಾಕಿ ಇಟ್ಟು ಇಂಧನವಾಗಿ ಬಳಕೆಯಾಗುತ್ತಿದ್ದ ಹತ್ತಿ ಕಡ್ಡಿ ಈಗ ಇಲ್ಲ. ಇಂದು ಬಂದಿರುವ ಬಿಟಿ ಹತ್ತಿಯ ಕಡ್ಡಿ ಎರಡೇ ತಿಂಗಳಲ್ಲಿ ಲೊಡ್ಡು ಹಿಡಿದು ಹೋಗಿ ಮೂರನೇ ತಿಂಗಳು ಉರುವಲಿಗೆ ಪರದಾಟ ಪ್ರಾರಂಭವಾಗುತ್ತಿದೆ. ಉರುವಲಿನ ಮೇಲಿನ ಅವಲಂಬನೆ ಗೊತ್ತಿಲ್ಲದಂತೆ ಆಗಿದೆ. ಇನ್ನು ಬಿ ಟಿ ಹತ್ತಿಯ ಬೀಜವನ್ನು ಬಿತ್ತನೆಗೆ ಮರುಬಳಕೆ ಮಾಡಲು ಆಗದ ಕಾರಣ ಅದಕ್ಕೆ ಬೆಲೆಯೇ ಇಲ್ಲದಂತಾಗಿದೆ.

ಅಂದು ನಾಟಿ ಹತ್ತಿ ಬೀಜವನ್ನು ತಿಂದು ದಷ್ಟ ಪುಷ್ಟವಾಗಿರುತ್ತಿದ್ದ ಎತ್ತುಗಳು ಇಂದು ಸತ್ವವಿಲ್ಲದ ಬಿಟಿ ಹತ್ತಿಯ ಬೀಜ ತಿಂದು ಹೊಲದಲ್ಲಿ 10 ಸುತ್ತು ಸುತ್ತುವ ಮೊದಲೇ ಸುಸ್ತಾಗಿ ಮಂಡಿ ಊರತೊಡಗುತ್ತವೆ. ಎತ್ತಿನ ಹಿಂದೆ ತಿರುಗುತ್ತಿದ್ದ ರೈತನೂ ಪಡಿತರ ವ್ಯವಸ್ಥೆಯಿಂದಾಗಿ ರೊಟ್ಟಿ ಬಿಟ್ಟು ಕೇವಲ ಅನ್ನ ತಿನ್ನಲು ಪ್ರಾರಂಭಿಲಸಿದ್ದರಿಂದ ಅವನೂ ನಾಲ್ಕು ಸುತ್ತು ಬರುವಷ್ಟರಲ್ಲಿ ಸುಸ್ತಾಗುತ್ತಾನೆ. ಎತ್ತು ಸಾಕುವುದು ಕಷ್ಟವಾಗಿ ಟ್ರಾಕ್ಟರ್ ಮೇಲಿನ ಅವಲಂಬನೆ ಹೆಚ್ಚಾಯಿತು. ಬಿ ಟಿ ಹತ್ತಿ ಬಂದ ಮೇಲೆ ಎಕರೆವಾರು ಬಿತ್ತುತ್ತಿದ್ದ ಬೀಜದ ಪ್ರಮಾಣವೂ ಕಡಿಮೆಯಾಯಿತು. ಮಿಶ್ರಬೆಳೆಯಲ್ಲಿ ಹೆಚ್ಚು ಬೀಜ ಬಿತ್ತುತ್ತಿದ್ದಾಗ ಇಲಿಗಳು ಒಂದಿಷ್ಟು ಬೀಜ ತಿಂದು ಹೋಗುತ್ತಿದ್ದವು ಅದರಿಂದ ಬಹು ದೊಡ್ಡ ತೊಂದರೆ ಎನಿಸುತ್ತಿರಲಿಲ್ಲ. ಆದರೆ ಇಂದು ದುಬಾರಿ ಬಿಟಿ ಹತ್ತಿ ಬೀಜವನ್ನು ಎಣಿಸಿ, ಎಣಿಸಿ ಗೇಣಿಗೊಂದು ಹಾಕುವುದರಿಂದ ಇಲಿಗಳು ಅವುಗಳನ್ನು ಹುಡುಕಿ ಹುಡುಕಿ ತಿಂದು ಇಡೀ ಹೊಲದಲ್ಲಿ ಬಿತ್ತನೆ ಬೀಜವೇ ಇಲ್ಲದಂತೆ ಮಾಡುತ್ತಿವೆ. ಕಳೆದ ಎರಡು ವರ್ಷಗಳಿಂದಂತೂ ಇಲಿ ಕಾಟ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಜೊತೆಗೆ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುವ ಮಳೆಯ ರೂಪ ಕೃಷಿಯ ಬಗ್ಗೆ ಆಸಕ್ತಿಯನ್ನು ಕಡಿಮೆ ಮಾಡಿದೆ. ಸೀಮಿತ ದೃಷ್ಟಿಯ ವಿಜ್ಞಾನಿಗಳಿಗೆ, ಬೀಜ ಮಾರಿ ಹಣ ಮಾಡುವ ಕಂಪನಿಗಳಿಗೆ ಈ ಸಣ್ಣ ಸೂಕ್ಷ್ಮಗಳು ಅರ್ಥವಾಗುವುದೇ ಇಲ್ಲ.

ಇದನ್ನೂ ಓದಿ : ೬೫೦ ಕೋಟಿ ಸಾಲ ಎತ್ತಲು ೪೫೭ ಎಕರೆ ಒತ್ತೆ; ಕೈತಪ್ಪಲಿದೆಯೇ ಕೃಷಿ ಫಾರಂ ಜಮೀನು?

ಮಾತು ಮುಂದುವರೆದು ‘ಇಂದಿನ ಕಾಲ’ ಚರ್ಚೆಗೆ ಬಂತು. ಅಲ್ಲೇ ಕುಳಿತಿದ್ದ ಮೇಲು ಜಾತಿಯ ಜನ ಕಳೆದು ಹೋದ ಕಾಲ ಬಹಳ ಚೆನ್ನಾಗಿತ್ತು ಎಂದರೆ, ಅಲ್ಲೇ ಇದ್ದ ದಲಿತನೊಬ್ಬ ಇಂದಿನ ಕಾಲವೇ ಚೆನ್ನಾಗಿದೆ. ಮೇಲ್ವರ್ಗದ ದಬ್ಬಾಳಿಕೆಯಿಂದ ಬಿಡುಗಡೆ ಹೊಂದಿದ್ದೇವೆ. ಅಂದು ನಮಗೆ ತೊಡಲು ಬಟ್ಟೆಯೇ ಇರಲಿಲ್ಲ. ಇಂದು ಮೈತುಂಬಾ ಬಟ್ಟೆ ತೊಡುತ್ತಿದ್ದೇವೆ, ಹೊಟ್ಟೆಯ ತುಂಬ ಒಂದಿಷ್ಟು ಊಟ ಮಾಡುತ್ತಿದ್ದೇವೆ ಎಂದರು. ಮೇಲು ವರ್ಗದವರೊಂದಿಗಿನ ಸಲಿಗೆಯಿಂದಾಗಿ ಇವರ ಮನೆಯ ಜೀತ ಮಾಡಿದ್ದು ಸಾಕು ಎಂದು ವ್ಯಂಗ್ಯ ಮಾಡುತ್ತಾ ಚೇಷ್ಟೆ ಮಾಡಿದ್ದು ಅದಕ್ಕೆ ಎಲ್ಲರೂ ನಕ್ಕಿದ್ದು ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯನ್ನು ಅನಿವಾರ್ಯವಾಗಿಯಾದರೂ ಎಲ್ಲರೂ ಒಪ್ಪುತ್ತಿರುವಂತೆ ತೋರಿತು.

ನಂತರ ಚರ್ಚೆ ಮನೆಯಲ್ಲಿನ ಅಡಿಗೆ-ಊಟ, ಹೆಂಗಸರ ಕಡೆಗೆ ಹರಿಯಿತು. ಮನೆಯಲ್ಲಿ ಟಿ ವಿಯ ಪ್ರಭಾವ ಹೆಚ್ಚಾಗಿರುವುದನ್ನು ಎಲ್ಲರೂ ಒಪ್ಪಿದರು, ಮನೆಯ ಹೆಣ್ಣು ಮಕ್ಕಳು ಧಾರಾವಾಹಿಗಳಲ್ಲಿ ಮುಳುಗಿ ಹೋಗಿ ಮನೆಯಲ್ಲೆ ಪೌಷ್ಠಿಕವಾದ ಅಡುಗೆ ಮಾಡುವುದನ್ನೂ ರೊಟ್ಟಿ ತಟ್ಟುವುದನ್ನು ನಿಧಾನವಾಗಿ ಮರೆಯುತ್ತಿದ್ದಾರೆ, ಇದು ಕೃಷಿಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಚರ್ಚೆ ಮುಂದುವರೆಯಿತು. ಕೃಷ್ಣನ ಕೊಳಲಿನ ಕರೆಗೆ ಓಗೊಟ್ಟು ಭವ ಬಂಧನದಿಂದ ಬಿಡಿಸಿಕೊಂಡು ಬರಲು ನಮ್ಮ ಕವಿ ಪುತಿನ ಅವರ ಕವನವನ್ನು ನಮ್ಮ ಹೆಣ್ಣು ಮಕ್ಕಳು ಟಿ ವಿ ಧಾರಾವಾಹಿಗೆ ಅನ್ವಯಿಸಿಕೊಳ್ಳುತ್ತಿದ್ದಾರೆ ಎನಿಸಿತು.

ಅರ್ಧ ಗಂಟೆಯ ಈ ಚರ್ಚೆ ಬದುಕಿನ ಅನುಭದಿಂದ ಬಂದ ಚರ್ಚೆಯಾಗಿತ್ತು. ಟಿ ವಿ ಗಳಲ್ಲಿ ಬರುವ ಅನುಭವ ಶೂನ್ಯ ಚರ್ಚೆಯಾಗಿರಲಿಲ್ಲ. ಒಟ್ಟಿನಲ್ಲಿ ಗ್ರಾಮೀಣ ಬದುಕು ನಮ್ಮೆಲ್ಲರಿಗೂ ತಿಳಿಯದಂತೆ ತನ್ನದೇ ದಿಕ್ಕನ್ನು ಹಿಡಿಯುತ್ತಿದೆ. ಅದು ಯಾರ ಕೈಗೂ ಸಿಗುತ್ತಿಲ್ಲ. ಆದರೆ ಆ ದಿಕ್ಕು ಸರಿಯಾಗಿಯಂತೂ ಇಲ್ಲ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More