ಪಾತರಗಿತ್ತಿಗಳ ‘ಕತೆ’ ಹೇಳಲೇಬೇಕೆಂದು ಸಮ್ಮಿಲನ್ ಶೆಟ್ಟಿ ಹೊರಟಿರುವುದೇಕೆ?

150ನೇ ಚಿಟ್ಟೆ ತಳಿ ಕಂಡುಹಿಡಿದ ಖುಷಿಯಲ್ಲಿದ್ದಾರೆ ಸಮ್ಮಿಲನ್ ಶೆಟ್ಟಿ. ಅವರು ರಾಜ್ಯದ ಏಕೈಕ ಖಾಸಗಿ ಚಿಟ್ಟೆ ಉದ್ಯಾನದ ಸಂಸ್ಥಾಪಕರು. ಕರಾವಳಿಯ ಪ್ರವಾಸಿತಾಣವಾಗಿಯೂ ಅಭಿವೃದ್ಧಿಯಾಗುತ್ತಿರುವ ಬೆಳುವಾಯಿಯ ಈ ಉದ್ಯಾನ ಚಿಟ್ಟೆಗಳ ಸಂರಕ್ಷಣೆ ಮಾಡವುದು ಹೇಗೆ ಎಂಬುದನ್ನೂ ಕಲಿಸುತ್ತಿದೆ

“ಬಯಾಲಜಿ ಟೀಚರ್ ಅಂದು ಆ ಪ್ರಾಜೆಕ್ಟ್ ನೀಡದೇ ಇದ್ದರೆ ಇಂದು ಈ ಪಾರ್ಕ್ ಇರುತ್ತಲೇ ಇರಲಿಲ್ಲ,” ಎಂದರು ಸಮ್ಮಿಲನ್ ಶೆಟ್ಟಿ. ಅವರು ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ ಸಮೀಪದ ಬೆಳುವಾಯಿಯಲ್ಲಿರುವ ಖಾಸಗಿ ಚಿಟ್ಟೆ ಉದ್ಯಾನ ‘ಸಮ್ಮಿಲನ್ ಶೆಟ್ಟಿ ಬಟರ್ ಫ್ಲೈ ಪಾರ್ಕ್’ನ ಸಂಸ್ಥಾಪಕ. ರಾಜ್ಯದಲ್ಲಿರುವ ಕೇವಲ ಮೂರು ಚಿಟ್ಟೆ ಉದ್ಯಾನಗಳಲ್ಲಿ ಇದೂ ಒಂದು. ಬೆಂಗಳೂರು ಸಮೀಪದ ಬನ್ನೇರುಘಟ್ಟ, ಮೈಸೂರಿನ ಕಾರಂಜಿ ಕೆರೆ ಚಿಟ್ಟೆ ಉದ್ಯಾನಗಳು ಸರ್ಕಾರದ ಉಸ್ತುವಾರಿಯಲ್ಲಿವೆ. ಖಾಸಗಿಯಾಗಿ ಅಭಿವೃದ್ಧಿಪಡಿಸಿದ ರಾಜ್ಯದ ಏಕೈಕ ಚಿಟ್ಟೆ ಪಾರ್ಕ್ ಎಂಬ ಅಗ್ಗಳಿಕೆ ಸಮ್ಮಿಲನ್ ಶೆಟ್ಟಿ ಚಿಟ್ಟೆ ಉದ್ಯಾನದ್ದು.

ಮೇಷ್ಟ್ರು ಹೇಳಿದಂತೆ ಅವರು ಸ್ಥಳೀಯ ಚಿಟ್ಟೆಗಳ ಅಧ್ಯಯನದಲ್ಲಿ ತೊಡಗಿದರು. ಬೆಳುವಾಯಿಯ ಅವರ ಏಳು ಎಕರೆ ವಿಸ್ತೀರ್ಣದ ತೋಟವೇ ಕಾಲೇಜು ದಿನಗಳ ಸಂಶೋಧನೆಗೆ ಆಲಯವಾಗಿತ್ತು. ಕಾಲೇಜು ಮುಗಿದರೂ ‘ಪಾತರಗಿತ್ತಿ ’ ಹುಚ್ಚು ಅವರನ್ನು ಬಿಡಲಿಲ್ಲ. ಜೊತೆಗೆ ಭಾರತದ ಚಿಟ್ಟೆ ಮನುಷ್ಯ ಎಂದೇ ಖ್ಯಾತರಾದ ಕೋಲ್ಕತ್ತಾ ಮೂಲದ ಐಸಾಕ್ ಕೆಹ್ಮಿಕರ್ ಅವರ ಪುಸ್ತಕಗಳು ಸಮ್ಮಿಲನ್ ಶೆಟ್ಟಿ ಆಸಕ್ತಿಯನ್ನು ಮತ್ತಷ್ಟು ಕೆರಳಿಸಿದವು. ಹೀಗೆ ಸಣ್ಣಪುಟ್ಟ ಸಂಗತಿಗಳೇ ಬಣ್ಣಗಟ್ಟಿ ಕಡೆಗೊಮ್ಮೆ ‘ಸಮ್ಮಿಲನ್ ಶೆಟ್ಟಿ ಚಿಟ್ಟೆ ಉದ್ಯಾನ’ ಎಂಬ ಕನಸನ್ನು ನನಸು ಮಾಡಿತು. ಮಂಗಳೂರಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದ ಅವರು ಈಗ ದೇಶದ ಬೆರಳೆಣಿಕೆಯ ಚಿಟ್ಟೆ ಸಂರಕ್ಷಕರಲ್ಲಿ ಒಬ್ಬರು.

ಚಿಟ್ಟೆ ಉದ್ಯಾನಗಳಲ್ಲೇ ಹೆಚ್ಚು ಚಿಟ್ಟೆಗಳು ಕಂಡುಬರುವ ಕಾರಣಗಳನ್ನು ಬಿಚ್ಚಿಟ್ಟರು ಶೆಟ್ಟಿ. “ಎಲ್ಲಾ ಚಿಟ್ಟೆಗಳೂ ಎಲ್ಲಾ ಮರಗಿಡಗಳಲ್ಲಿ ಮೊಟ್ಟೆ ಇಡುವುದಿಲ್ಲ. ಮಾವಿನಮರಕ್ಕೆ ಹೋಲಿಸಿದರೆ ಕರಿಬೇವಿನ ಮರ ಚಿಕ್ಕದು. ಆದರೆ ಎರಡೂ ಮರಗಳಲ್ಲಿ ಕೇವಲ ಎರಡು ಜಾತಿಯ ಚಿಟ್ಟೆಗಳಷ್ಟೇ ಮೊಟ್ಟೆ ಇಡುತ್ತವೆ. ಮುಖ್ಯವಾಗಿ ಚಿಟ್ಟೆಗಳು ಅತಿಥಿ ಸಸ್ಯಗಳತ್ತ ಆಕರ್ಷಿತವಾಗುತ್ತವೆ. ಅಷ್ಟೇ ಅಲ್ಲದೆ ಮಕರಂದ ಸೂಸುವ ಗಿಡಗಳೂ ಸಮೀಪದಲ್ಲಿರುವುದು ಅಷ್ಟೇ ಮುಖ್ಯ” ಎನ್ನುತ್ತಾರೆ.

ಹಾಗೆಂದೇ ಚಿಟ್ಟೆಗಳು ನೆಲೆ ಕಂಡುಕೊಳ್ಳುವ ಗಿಡಮರಗಳನ್ನು ಬೆಳೆಸುವಂತೆ ಸಮ್ಮಿಲನ್ ಶೆಟ್ಟಿ ಉತ್ತೇಜಿಸುತ್ತಾರೆ. ಪಾತರಗಿತ್ತಿಗಳ ಅಧ್ಯಯನಕ್ಕೆ ಬೇಕಾದ ಆಕರಗಳೂ ಅವರ ಬಳಿ ಇವೆ. ಉತ್ಸಾಹಿಗಳು, ಪ್ರವಾಸಿಗರು ಭೇಟಿ ನೀಡಿದಾಗಲೆಲ್ಲಾ ಉದ್ಯಾನದ ಅಂಗಳದಲ್ಲಿರುವ ಅವರ ಮನೆಯೇ ಚಿಟ್ಟೆಗಳ ಜೀವನಗಾಥೆಯನ್ನು ದೃಶ್ಯಗಳ ಮೂಲಕ ಪ್ರಸ್ತುತಪಡಿಸುವ ಥಿಯೇಟರ್ ಆಗಿ ಬದಲಾಗುತ್ತದೆ.

ಇದನ್ನೂ ಓದಿ : ಬಾದಾಮಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ‘ರೊಟ್ಟಿ ಪಾರ್ಕ್’ ಮುನ್ನುಡಿ?

ದೇಶದಲ್ಲಿ 1200 ಚಿಟ್ಟೆ ಪ್ರಭೇದಗಳಿದ್ದು ಪಶ್ಚಿಮಘಟ್ಟದಲ್ಲಿ 339 ಜಾತಿಯ ಚಿಟ್ಟೆಗಳನ್ನು ಕಾಣಬಹುದು. ಇದುವರೆಗೆ ಬೆಳವಾಯಿಯ ಈ ಉದ್ಯಾನದಲ್ಲಿ ಒಟ್ಟು 150 ಜಾತಿಯ ಚಿಟ್ಟೆಗಳು ಕಂಡುಬಂದಿವೆ ಎನ್ನುವುದು ವಿಶೇಷ. “ಚಿಟ್ಟೆಗಳ ಸಂತತಿಯನ್ನು ಆಧರಿಸಿ ನಮ್ಮ ನಿಸರ್ಗ ಎಷ್ಟು ಸಮೃದ್ಧವಾಗಿದೆ ಎಂಬುದನ್ನು ಅಳೆಯುವ ಪರಿಪಾಠವಿದೆ. ಸಂರಕ್ಷಣೆ ಕುರಿತಾಗಿ ನಾವೇನಾದರೂ ಹಂಚಿಕೊಳ್ಳುವುದಿದ್ದರೆ ಅದು ಮಕ್ಕಳೊಂದಿಗೆ ಮಾತ್ರ. ಯಾಕೆಂದರೆ ನಮ್ಮ ನಂತರದ ತಲೆಮಾರು ಅವರದು. ಹಾಗೆಂದೇ ಶಾಲಾಮಕ್ಕಳಿಗೆ ಚಿಟ್ಟೆ ಅಧ್ಯಯನಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ” ಎನ್ನುತ್ತಾರೆ ಸಮ್ಮಿಲನ್.

‘ಬುರಾರಾ ಜೈನಾ’ ಅಥವಾ ‘ಆರೆಂಜ್ ಆವ್ಲೆಟ್ ‘ಉದ್ಯಾನದಲ್ಲಿ ಪತ್ತೆಯಾದ ಹೊಸ ತಳಿ. ಅದು ಉದ್ಯಾನದಲ್ಲಿ ಕಂಡುಬಂದ 150ನೇ ಚಿಟ್ಟೆ ಎನ್ನುವುದು ವಿಶೇಷ. ಅದಕ್ಕೂ ಮೊದಲು ‘ಮಲಬಾರ್ ಬ್ಯಾಂಡೆಡ್ ಪೀಕಾಕ್’ ಎಂಬ ಪಾತರಗಿತ್ತಿ ಪತ್ತೆಯಾಗಿ ಗಮನಸೆಳೆದಿತ್ತು. ಬೆಳುವಾಯಿ ಚಿಟ್ಟೆ ಪಾರ್ಕಿನಲ್ಲಿ ಅಸಂಖ್ಯ ಚಿಟ್ಟೆಗಳು ಗೋಚರಿಸುವ ಸಮಯ ಜೂನ್ ನಿಂದ ನವೆಂಬರ್ ತಿಂಗಳು. ಇಲ್ಲಿ ಚಿಟ್ಟೆಗಳ ಛಾಯಾಗ್ರಹಣಕ್ಕೆ ಕೂಡ ಅವಕಾಶ ಕಲ್ಪಿಸಲಾಗಿದ್ದು ಮುಂದಿನ ದಿನಗಳಲ್ಲಿ ಅವುಗಳ ಸಂಶೋಧನೆಗೆ ಒತ್ತು ನೀಡಲು ಶೆಟ್ಟಿ ಚಿಂತಿಸುತ್ತಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More