ಹಿಂದಿ ಸಿನಿಮಾಗಳನ್ನು ನೋಡುವುದೇ ಇಲ್ಲ ಎಂದಿದ್ದರು ಮಂಟೋ!

ಹಿಂದಿ ಚಿತ್ರರಂಗದಲ್ಲಿ ದಶಕ ಕಾಲ ದುಡಿದಿದ್ದ ಖ್ಯಾತ ಉರ್ದು ಕತೆಗಾರ ಹಸನ್‌ ಸದತ್‌ ಮಂಟೋ, ಬಾಲಿವುಡ್‌ ಮತ್ತು ಹಿಂದಿ ಸಿನಿಮಾಗಳ ಬಗ್ಗೆ ಸಾಕಷ್ಟು ತಕರಾರು, ಟೀಕೆಗಳನ್ನು ಹೊಂದಿದ್ದರು. ಅವರ ಈ ಎರಡು ಲೇಖನಗಳಲ್ಲಿ ಅಸಮಾಧಾನಕ್ಕೆ ಕಾರಣವಾದ ಅಂಶಗಳು ಸ್ಪಷ್ಟವಾಗಿ ದಾಖಲಾಗಿವೆ

“ಬಹಳ ಕಾಲದಿಂದ ನಾನು ಕಾಯುತ್ತಿದ್ದೇನೆ, ಯಾರಾದರೂ ನನಗೆ ಈ ಪ್ರಶ್ನೆ ಕೇಳಬಹುದು ಎಂದು: 'ನೀವೇಕೆ ಸಿನಿಮಾ ನೋಡುವುದಿಲ್ಲ?' ಆದರೆ, ಯಾರೂ ಕೇಳುತ್ತಿಲ್ಲ. ನನ್ನನ್ನು ಬಹಳ ಕಾಲದಿಂದ ಬಲ್ಲವರಿಗೆ ಗೊತ್ತು, ನನಗೆ ಅತಿಯಾದ ಸಿನಿಮಾ ಹುಚ್ಚೆಂದು. ನಾನು ಆಗಾಗ ಒಂದೇ ದಿನಕ್ಕೆ ಮೂರು ಸಿನಿಮಾಗಳನ್ನು ನೋಡುತ್ತಿದ್ದೆ. ಕೆಲವೊಮ್ಮೆ ಒಂದೇ ಸಿನಿಮಾವನ್ನು ಮತ್ತೆ ಮತ್ತೆ ನೋಡುವುದಕ್ಕೂ ಇಷ್ಟಪಡುತ್ತಿದ್ದೆ...''

-ಹೀಗೆ ಸಾಗುತ್ತದೆ ಹಸನ್‌ ಸದತ್‌ ಮಂಟೋ ಅವರ 'ನಾನೇಕೆ ಸಿನಿಮಾ ನೋಡುವುದಿಲ್ಲ' ಲೇಖನ. ಚಿತ್ರರಂಗಕ್ಕೆ ಸಂಬಂಧಿಸಿದಂತೆ 'ಬಾಲಿವುಡ್‌ ಏನು ಮಾಡಬೇಕು' ಎಂಬ ಲೇಖನವನ್ನೂ ಅವರು ಬರೆದಿದ್ದಾರೆ. ಆಕಾರ್‌ ಪಟೇಲ್‌ ಸಂಪಾದಿಸಿ ಅನುವಾದಿಸಿರುವ 'ವೈ ಐ ರೈಟ್' ಕೃತಿಯಲ್ಲಿ ಈ ಲೇಖನಗಳನ್ನು ಗಮನಿಸಬಹುದು.

ಈಗ ನಂದಿತಾ ದಾಸ್‌ ನಿರ್ದೇಶನದಲ್ಲಿ ಮಂಟೋ ಅವರ ಬದುಕು ತೆರೆಮೇಲೆ ಬಂದಿದೆ. ಇದರಲ್ಲೂ ಅವರ ಚಿತ್ರಬದುಕಿನ ದಿನಗಳನ್ನು ಮೆಲುಕು ಹಾಕಲಾಗಿದೆ. ಕತೆಗಾರರಾಗಿ ಅಷ್ಟೇ ಅಲ್ಲ, ಚಿತ್ರರಂಗದಲ್ಲೂ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದ ಮಂಟೋ, ಹಿಂದಿ ಚಿತ್ರರಂಗ ಮತ್ತು ಹಿಂದಿ ಚಿತ್ರಗಳ ಬಗ್ಗೆ ಸ್ಪಷ್ಟ ನಿಲುವು ತಳೆದಿದ್ದರು. ಅದನ್ನು ಮೇಲೆ ಉಲ್ಲೇಖಿಸಿದ ಎರಡು ಲೇಖನಗಳು ಪ್ರತಿಧ್ವನಿಸುತ್ತವೆ.

ಕತೆಗಾರರಾಗಿ ಬೆಚ್ಚಿಬೀಳಿಸುವಂತೆ ವಾಸ್ತವವನ್ನು ಕಟ್ಟಿಕೊಟ್ಟವರು ಮಂಟೋ. ಸಿನಿಮಾ ಮಾಧ್ಯಮವೂ ಹಾಗೇ ಇರಬೇಕೆಂಬುದು ಅವರ ಪ್ರತಿಪಾದನೆಯಾಗಿತ್ತು. ವಿಚಾರಹೀನ, ಅವಾಸ್ತವ ಕಲ್ಪನೆಗಳು ಹೇಗೆ ಅವರನ್ನು ಕೆಣಕುತ್ತಿತ್ತು, ತಮ್ಮ ತಕರಾರರು ಹೇಗೆ ವ್ಯಕ್ತಪಡಿಸುತ್ತಿದ್ದರು ಮತ್ತು ಅದರಿಂದಾಗಿ ಕೆಲಸಗಳನ್ನು ಹೇಗೆ ಕಳೆದುಕೊಳ್ಳಬೇಕಾಯಿತು ಎಂದು ಮಂಟೋ ಈ ಬರಹದಲ್ಲಿ ವಿವರಿಸುತ್ತಾರೆ. ಹಾಸ್ಯ ಪ್ರಬಂಧದಂತೆ ಸಾಗುವ ಈ ಬರಹದಲ್ಲಿ ತಮ್ಮ ಹಲವು ಅನುಭವಗಳನ್ನು ವಿಚಾರ ಲಹರಿಯೊಂದಿಗೆ ಆಪ್ತವಾಗಿ ಹೆಣೆದು ಓದುಗರ ಮುಂದಿಟ್ಟಿದ್ದಾರೆ.

'ಉಲ್ಲು ಕೆ ದೋ ಪಠ್ಠೆ' ಬದಲು 'ದೋ ಉಲ್ಲು ಕೆ ಪಠ್ಠೆ'

'ಉಲ್ಲು ಕೆ ದೋ ಪಠ್ಠೆ' ಎಂಬ ಹೆಸರಿನ ಚಿತ್ರ ನಿರ್ಮಾಣದ ಸಮಯ. ಅದಾಗಲೇ ಕೆಲಸ ಕಳೆದುಕೊಂಡಿದ್ದ ಮಂಟೋ ಈ ಚಿತ್ರ ತಂಡ ಸೇರಿಕೊಂಡರು. ಚಿತ್ರದ ಶೀರ್ಷಿಕೆಯ ಬಗ್ಗೆ ತಕರಾರು ತೆಗೆದರು. 'ಉಲ್ಲು ಕೆ ದೋ ಪಠ್ಠೆ' ಬದಲು 'ದೋ ಉಲ್ಲು ಕೆ ಪಠ್ಠೆ' ಎಂದಾದರೆ ಸೂಕ್ತವಾಗಿರುತ್ತದೆ ಎಂಬ ಸಲಹೆಯನ್ನೂ ನೀಡಿದರು. ಅದಾಗಲೇ ಚಿತ್ರದ ಶೀರ್ಷಿಕೆ ನೊಂದಣಿಯಾಗಿತ್ತು. ಹಕ್ಕುಗಳ ಹಂಚಿಕೆಯಾಗಿತ್ತು. ಹಣ ಖರ್ಚಾಗಿತ್ತು. ನಿರ್ಮಾಪಕರು ಮಂಟೋ ಅವರನ್ನು ತಂಡದಿಂದ ಹೊರಹಾಕಿದರು.

ಈ ಬೆಳವಣಿಗೆಗಳಲ್ಲಿ ನಿಧಾನವಾಗಿ ಚಿತ್ರಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತ ಹೋಗಿದ್ದನ್ನೂ ಅವರು ವಿವರಿಸುತ್ತಾರೆ. ಭ್ರಮೆಗಳನ್ನು ಸೃಷ್ಟಿಸುವ ಬಗೆಯನ್ನು ಲೇಖನದ ಕಡೆಯಲ್ಲಿ ಹೇಳುವುದುಂಟು. "ಹಾಲು ಕುದಿಯುತ್ತಿರುತ್ತದೆ- ಅದು ವಾಸ್ತವದಲ್ಲಿ ಸುಣ್ಣದ ಕಲ್ಲು ಮತ್ತು ನೀರು. ಕಾಶ್ಮೀರದಲ್ಲಿ ಹಿಮಪಾತ- ತಂಡದ ಕೆಲವರು ಕಾಗದ ಸಣ್ಣ ಚೂರುಗಳೊಂದಿಗೆ ಎರಚುವ ಸೋಪಿನ ನೊರೆ. ಮಂಜಿನಲ್ಲಿ ನಾಯಕ-ನಾಯಕಿಯರ ರೊಮಾನ್ಸ್‌- ಒಣ ಹುಲ್ಲಿಗೆ ಹಾಕಿದ ಬೆಂಕಿಯಿಂದ ಹೊರಬರುವ ಉಸಿರುಗಟ್ಟಿಸುವಂತಹ ಹೊಗೆ...'' ಎಂದು ಪಟ್ಟಿ ಮಾಡುತ್ತ ಹೋಗುವ ಮಂಟೋ, "ಸಿನಿಮಾ ಎಂಬುದು ಪರಿಣಾಮಕಾರಿ ವಂಚಕ ಉದ್ಯಮ,'' ಎಂದೂ ಹೇಳಿಬಿಡುತ್ತಾರೆ.

ಮೇಲ್ನೋಟಕ್ಕೆ ಮಂಟೋ ಅವರ ವಾದವು ತೀರಾ ಅತಿರೇಕದ್ದೆನಿಸುತ್ತದೆ. ಹಾಗೆಯೇ, ಸಿನಿಮಾ ಒಂದು ಕಲೆಯೂ ಆಗಿದ್ದು, ಸೃಜನಶೀಲ ಅಭಿವ್ಯಕ್ತಿಯಲ್ಲಿ ಇದೆಲ್ಲವೂ ಸಹಜ ಎಂದೂ ಪ್ರತಿಪಾದಿಸಬಹುದು. ಆದರೆ, ಇತ್ತೀಚಿನ ಬಾಲಿವುಡ್‌ ಸಿನಿಮಾಗಳನ್ನು ನೋಡುವಾಗ ಮಂಟೋ ಮಾತನ್ನು ತಳ್ಳಿಹಾಕುವಂತೆಯೂ ಇಲ್ಲ ಎಂದೆನಿಸುತ್ತದೆ.

ಎಪ್ಪತ್ತು ವರ್ಷಗಳ ಹಿಂದೆ ಮುಂಬೈನ ಸ್ಟುಡಿಯೋಗಳಲ್ಲಿ ಹತ್ತಾರು ಚಿತ್ರಗಳಿಗೆ ಕೆಲಸ ಮಾಡಿದ ಮಂಟೋ ಅವರಿಗೆ ಚಲನಚಿತ್ರ ಮಾಧ್ಯಮದ ಬಗ್ಗೆ ಇದ ಒಳನೋಟಗಳು ಆಧುನಿಕವಾಗಿದ್ದವು. ಹಾಲಿವುಡ್‌ನ ಮಹಾನ್‌ ಪ್ರತಿಭೆ ಮತ್ತು ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದ ಮಂಟೋ ಅಂಥ ಪ್ರಯತ್ನಗಳು ಬಾಲಿವುಡ್‌ನಲ್ಲೂ ಆಗಬೇಕೆಂದು ಬಯಸುತ್ತಿದ್ದರು. ಸಿದ್ಧ ಮಾದರಿಗಳನ್ನು ಒಡೆಯುವ ಉತ್ಸಾಹ ಮತ್ತು ಅಂಥ ಕ್ರಾಂತಿಕಾರಕ ಆಲೋಚನೆಗಳನ್ನು ಹೊಂದಿದ್ದರು.

'ವಾಟ್‌ ಬಾಲಿವುಡ್‌ ಮಸ್ಟ್‌ ಡು' ಎಂಬ ದೀರ್ಘ ಲೇಖನದಲ್ಲಿ ಮಂಟೋ, ಬಾಲಿವುಡ್‌ ಸಮರ್ಥ ಚಿತ್ರೋದ್ಯಮವಾಗಿ ಬೆಳೆಯಲು ಎಲ್ಲಿ ಬದಲಾವಣೆಗಳನ್ನು ತರಬೇಕೆಂಬುದನ್ನು ಪ್ರಸ್ತಾಪಿಸಿದ್ದಾರೆ.

ಸಂಕ್ಷಿಪ್ತತೆ: ಚಿತ್ರಗಳು ದೀರ್ಘವಾಗುವ ಬದಲು ಕಾಲದ ಒತ್ತಡ ಮತ್ತು ಪ್ರೇಕ್ಷಕರ ಒತ್ತಡಗಳನ್ನು ಅರಿತು ಚಿಕ್ಕದಾಗಿ, ಚೊಕ್ಕವಾಗಿ ಸಿನಿಮಾ ನಿರ್ಮಿಸಬೇಕು. ನಿರ್ಮಾಣ ವೆಚ್ಚದ ದೃಷ್ಟಿಯಿಂದಲೂ ಇದು ಒಳಿತು ಎನ್ನುತ್ತಾರೆ ಮಂಟೋ. ಪ್ರಸ್ತುತ ಬಾಲಿವುಡ್‌ ಶಾರ್ಟ್‌ ಫಿಲ್ಮ್‌ಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದು, ವೆಬ್‌ ಸರಣಿಗಳ ಸ್ವರೂಪಗಳು ಮಂಟೋ ಅವರು ಪ್ರತಿಪಾದಿಸಿದ ಸ್ವರೂಪವನ್ನೇ ಹೋಲುತ್ತವೆ. ಈ ಮಟ್ಟಿಗೆ ಮಂಟೋ ಯೋಚನೆಯ ಪ್ರಭಾವ ಕಾಣುತ್ತದೆ.

ತಾರೆಗಳು: ಈ ಕಲ್ಪನೆಯ ಬಗ್ಗೆಯೇ ಮಂಟೋ ಅವರಿಗೆ ತರಕಾರು. ಈ ವಿಷಯದಲ್ಲಿ ಬಾಲಿವುಡ್‌ ಇನ್ನೂ ತನ್ನ ಚೌಕಟ್ಟನ್ನು ಮೀರುವ ಧೈರ್ಯ ತಾಳಿಲ್ಲ. ಹಾಲಿವುಡ್‌ ನಿರ್ದೇಶಕರು ಚಿತ್ರ ಮುಖ್ಯವೋ ಅಥವಾ ತಾರೆಯರು ಮುಖ್ಯವೋ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೆಹೋದ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ. ಉತ್ತಮವಾದ ಹಾಗೂ ಸಂವೇದನಾಶೀಲ ತಾರಾಗಣದಿಂದ ಒಬ್ಬ ತಾರೆ ಹೊಮ್ಮುತ್ತಾನೆ ಎಂಬುದು ಮಂಟೋ ಅಭಿಪ್ರಾಯ.

ನಿರ್ದೇಶಕರು: ನಾವೀನ್ಯತೆಯುಳ್ಳ ನಿರ್ದೇಶಕರ ಕೊರತೆ ಇದೆ ಎನ್ನುತ್ತಾರೆ ಮಂಟೋ. ಸದ್ಯದ ಮಟ್ಟಿಗೆ ಅಂಥ ಪ್ರತಿಭೆಗಳಿಗೆ ಬಾಲಿವುಡ್‌ನಲ್ಲಿ ಕೊರತೆ ಇಲ್ಲ. ಆದರೆ, ಅವರಿಗೆ ಇರುವ ಅವಕಾಶಗಳು ಕಡಿಮೆ. ಆದರೂ ಮಂಟೋ ಹೇಳುವ ಒಂದು ಅಂಶ ಇಲ್ಲಿ ಗಮನಿಸಬೇಕು: “ಕತೆ ಹೇಳುವ ಕ್ರಮದಲ್ಲಿ ಹೊಸತನವಿಲ್ಲ. ಇದೇ ಒಬ್ಬ ನಿರ್ದೇಶಕರನ್ನು ಭಿನ್ನವಾಗಿ ಕಾಣುವಂತೆ ಮಾಡುತ್ತದೆ. ವ್ಯಕ್ತಿಗತವಾದ ಈ ಅಂಶದ ಕೊರತೆಯಿಂದಲೇ ಎಲ್ಲ ಸಿನಿಮಾಗಳು ಒಂದೇ ತೆರನಾಗಿ ಕಾಣಿಸುತ್ತವೆ.”

ನಟನೆ: ಅಭಿನಯ ಎಂಬುದು ಕಷ್ಟದ ಕಲೆ. ಅದಕ್ಕೆ ವಿಶೇಷ ಮನಸ್ಥಿತಿ ಬೇಕು ಮತ್ತು ದೈಹಿಕ ಸಾಮರ್ಥ್ಯವೂ ಬೇಕು. ಹಾಲಿವುಡ್‌ನಲ್ಲಿ ತಾವು ಸೃಷ್ಟಿಸಿದ ಪಾತ್ರಕ್ಕೆ ಹೊಂದುವ ನಟರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸರಿಯಾದ ನಟ-ನಟಿಯನ್ನು ಆಯ್ಕೆ ಮಾಡಿಕೊಂಡ ಬಳಿಕ, ಅವರ ತರಬೇತಿಗೆ ಹೆಚ್ಚು ವ್ಯಯ ಮಾಡಲಾಗುತ್ತದೆ.

ಇದನ್ನೂ ಓದಿ : ನಂದಿತಾದಾಸ್‌ ನಿರ್ದೇಶನದ ‘ಮಾಂಟೋ’ ಚಿತ್ರಕ್ಕೆ ಬಣ್ಣ ಹಚ್ಚಿದ ಕವಿ ಜಾವೇದ್‌ ಅಖ್ತರ್‌

ಇಷ್ಟು ಗಂಭೀರ ಅಂಶಗಳನ್ನು ಪ್ರಸ್ತಾಪಿಸುತ್ತ, ತಮ್ಮ ಒಳನೋಟಗಳನ್ನು ಹಂಚಿಕೊಳ್ಳುತ್ತ, ಕಡೆಯದಾಗಿ ಹೀರೋಗಳ ದೈಹಿಕ ರೂಪದ ಬಗ್ಗೆ ಇರುವ ಮೂರ್ಖ ನಿಲುವುಗಳನ್ನು ಟೀಕೆ ಮಾಡುತ್ತಾರೆ. "ಎಲ್ಲ ಹೀರೋಗಳು ಸ್ಫುರದ್ರೂಪಿಗಳು, ಯುವಕರು, ಧೈರ್ಯಶಾಲಿಗಳು, ಕರುಣಾಳು... ಹೀಗೆ. ಆರಂಭದಿಂದ ಅಂತ್ಯದವರೆಗೆ ಹೋರಾಡುತ್ತಲೇ ಇರುತ್ತಾನೆ, ತಾನು ಹಿಡಿದ ಖಡ್ಗದಿಂದ ಒಂದೇ ಒಂದು ಗಾಯವೂ ಆಗುವುದಿಲ್ಲ ಎಂಬಂತೆ. ಆತನ ಪ್ರೀತಿ ಯಾವಾಗಲೂ ಸತ್ಯವಾಗಿರುತ್ತದೆ; ಆದರೆ ಬಡ ಖಳನಾಯಕನ ಪ್ರೀತಿಯಲ್ಲಿ ಮಾತ್ರ ಕಾಮವಿರುತ್ತದೆ. ಇಂಥ ಪಾತ್ರಗಳು ನನಗೆ ಯಾವ ರೀತಿಯಲ್ಲೂ ಒಪ್ಪಿತವಾಗುವುದಿಲ್ಲ. ಹೀರೋ ನನಗೆ ಮುಟ್ಟುವಂತಿರಬೇಕು. ಅವನ ಬಗ್ಗೆ ನನಗೆ ಅನುಕಂಪ ಹುಟ್ಟಬೇಕು. ಮನುಷ್ಯ ಸಹಜವಾದ ದುಷ್ಟತನವಿರಬೇಕು. ಆಕಾಶಕ್ಕೆ ಹಾರುವಂತಿರಬೇಕು, ಆದರೆ ಆಳದಲ್ಲಿ ಬೇರೂರಿರಬೇಕು',' ಎಂದು ತಮ್ಮ ಕಲ್ಪನೆಯನ್ನು ವಿವರಿಸುತ್ತಾರೆ.

ಅಂದರೆ, ವಾಸ್ತವವಾದಿ ನೆಲೆಗಟ್ಟಿನಲ್ಲಿ ಪಾತ್ರ, ನಿರ್ಮಾಣಗಳಿರಬೇಕು ಎಂಬುದನ್ನು ಮಂಟೋ ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ. ವಿಪರ್ಯಾಸದ ಸಂಗತಿ ಎಂದರೆ, ಮಂಟೋ ದಶಕಗಳ ಹಿಂದೆ ಚರ್ಚಿಸಿರುವ ಈ ಅಂಶಗಳು ಇಂದಿಗೂ ಚರ್ಚೆಯಾಗುವಂಥವು. ಸಮಾಧಾನದ ಸಂಗತಿ ಎಂದರೆ, ಕೆಲವು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ತಾರಾ ಸಿನಿಮಾಗಳು, ಅವುಗಳ ಅವಾಸ್ತವವಾದಿ ಕತೆಗಳಿಂದ ಅಪ್ರಸ್ತುತವಾಗಿವೆ. ಹಾಗೇ, ತಾರೆಯರೂ ಅಪ್ರಸ್ತುತರಾಗಿದ್ದಾರೆ. ಗಟ್ಟಿ ಕತೆ ಇರುವ ವಾಸ್ತವವಾದಿ ಕತೆಗಳು ಸಿನಿಮಾಗಳಾಗಿ ಗೆಲ್ಲುತ್ತಿವೆ. ಆದರೆ, ಇದಿನ್ನೂ ಅರಂಭ ಎನ್ನುವುದು ಮಾತ್ರ ನಿಜ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More