ತನ್ನ ಕಾರಿನ ಬಾಗಿಲನ್ನು ತಾನೇ ಮುಚ್ಚಿದರೂ ಸುದ್ದಿಯಾದ ಮರ್ಕೆಲ್!

ಬ್ರಿಟನ್ ರಾಜಮನೆತನದ ಸೊಸೆಯಾದ ಮರ್ಕೆಲ್, ಕಾರಿನ ಬಾಗಿಲನ್ನು ತಾವೇ ಮುಚ್ಚುವ ಮೂಲಕ ರಾಜಮನೆತನದ ಸಂಪ್ರದಾಯವನ್ನು ಗಾಳಿಗೆ ತೂರಿದ್ದಾರೆ ಎಂದು ಮಾಧ್ಯಮಗಳು ಹುಯಿಲೆಬ್ಬಿಸಿದರೆ, ಮತ್ತೆ ಕೆಲವರು, ಇದು ಮೆಗನ್ ಅವರ ವಿಶಾಲ ಮನಸ್ಸನ್ನು ತೋರಿಸುತ್ತಿದೆ ಎಂದು ಬಣ್ಣಿಸಿದ್ದಾರೆ

ಬ್ರಿಟನ್ ರಾಜಮನೆತನದ ಐದನೇ ರಾಜಕುಮಾರ ಹ್ಯಾರಿಯನ್ನು ಕೈಹಿಡಿದಾಗಿನಿಂದ ಮೆಗನ್ ಮರ್ಕೆಲ್ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇದೀಗ ಮರ್ಕೆಲ್ ಕಾರಿನ ಬಾಗಿಲು ಮುಚ್ಚುವ ಫೋಟೋ ಹಾಗೂ ವಿಡಿಯೋವೊಂದು  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಚರ್ಚೆಗೆ ಗ್ರಾಸವಾಗಿದೆ.

ಬ್ರಿಟನ್ ರಾಜಮನೆತನದ ಸೊಸೆ ಕಾರಿನ ಬಾಗಿಲನ್ನು ತಾವೇ ಮುಚ್ಚುವ ಮೂಲಕ ರಾಜಮನೆತನದ ಸಂಪ್ರದಾಯವನ್ನು ಗಾಳಿಗೆ ತೂರಿದ್ದಾರೆ ಎಂದು ಮಾಧ್ಯಮಗಳು ಹುಯಿಲೆಬ್ಬಿಸಿದರೆ, ಮತ್ತೆ ಕೆಲವರು, ಇದು ಮೆಗನ್ ಅವರ ವಿಶಾಲ ಮನಸ್ಸನ್ನು ತೋರಿಸುತ್ತಿದೆ ಎಂದು ಬಣ್ಣಿಸಿದ್ದಾರೆ.

ಲಂಡನ್‌ನ ರಾಯಲ್ ಆಕಾಡೆಮಿ ಆಫ್ ಆರ್ಟ್‌ನಲ್ಲಿ ಹಮ್ಮಿಕೊಂಡಿದ್ದ ವಸ್ತುಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕಾಗಿ, 37ರ ಹರೆಯದ ಮೆಗನ್ ಮರ್ಕೆಲ್ ಕಪ್ಪುಬಣ್ಣದ ಸೆಡಾನ್ ಕಾರಿನಲ್ಲಿ ಆಗಮಿಸಿದ್ದಾರೆ. ಈ ಸಂದರ್ಭ ಅವರನ್ನು ಸ್ವಾಗತಿಸಲು ಸಿದ್ಧರಾಗಿದ್ದ ವ್ಯಕ್ತಿ, ಆಕೆಯ ಕೈಕುಲುಕಿ ಅದ್ಧೂರಿ ಸ್ವಾಗತ ನೀಡಿ, ಇನ್ನೇನು ಕಾರಿನ ಬಾಗಿಲು ಹಾಕಬೇಕು ಎನ್ನುವಷ್ಟರಲ್ಲಿ ಮೆಗನ್ ಕಾರಿನ ಬಾಗಿಲು ತಳ್ಳಿದ್ದಾರೆ. ಈ ಘಟನೆಯನ್ನು ಅಲ್ಲಿದ್ದ ಕೆಲವೇ ಮಂದಿ ಗಮನಿಸಿದರೂ ಇದೀಗ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಅದರಲ್ಲೂ ಮಾಧ್ಯಮಗಳು, “ರಾಜಮನೆತನದ ಸೊಸೆಯೊಬ್ಬರು ಕಾರಿನ ಬಾಗಿಲನ್ನು ಹಾಕಿದ್ದು ದೊಡ್ಡ ಅಪರಾಧ, ರಾಜಮನೆತನದ ನೀತಿ-ನಿಯಮಗಳನ್ನು ಪಾಲಿಸುವಲ್ಲಿ ಮೆಗನ್ ವಿಫಲರಾಗುತ್ತಿದ್ದಾರೆ,” ಎಂಬರ್ಥದಲ್ಲಿ ಸುದ್ದಿ ಮಾಡಿವೆ.

‘ದಿ ಎಕ್ಸ್ ಪ್ರೆಸ್’ ಪತ್ರಿಕೆ, ‘ತನ್ನ ಕಾರಿನ ಬಾಗಿಲನ್ನು ತಾವೇ ಮುಚ್ಚಿದ ಮೆಗನ್ ವರ್ತನೆಗೆ ಅಚ್ಚರಿಗೊಳಗಾದ ಜನ’ ಎಂಬ ಅರ್ಥದಲ್ಲಿ ತಲೆಬರಹ ನೀಡಿ ಸುದ್ದಿ ಮಾಡಿದೆ (Meghan Markle Leave people in shock as she shuts own CAR DOOR on first solo engagement). ಆದರೆ, ಕೆಲವರು ಮೆಗನ್ ಅವರ ಸರಳತೆಯನ್ನು ಮೆಚ್ಚಿದ್ದಾರೆ.

ಈ ನಡುವೆ, ಮೆಗನ್ ವರ್ತನೆಯನ್ನು ಶ್ಲಾಘಿಸಿ ಟ್ವೀಟ್ ಮಾಡಿರುವ ‘ಸನ್’ ಟ್ಯಾಬ್ಲಾಯ್ಡ್ ಪತ್ರಿಕೆಯ ರಾಯಲ್ ಕರೆಸ್ಪಾಡೆಂಟ್ ಎಮಿಲಿ ಆಂಡ್ರ್ಯೂಸ್, “ವೆಲ್ ಡನ್ ಮೆಗನ್,” ಎಂದಿದ್ದಾರೆ. ಜೊತೆಗೆ, “ಮೆಗನ್ ರಾಜಮನೆತನದ ಯಾವುದೇ ಸಂಪ್ರದಾಯ ಮೀರಿಲ್ಲ,” ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬ್ರಿಟನ್ ರಾಜಮನೆತನಕ್ಕೆ ಈಗ ಮೌಂಟ್‌ಬ್ಯಾಟನ್ ಸಲಿಂಗ ಮದುವೆಯ ಸಂಕಟ

“ಕಾರಿನ ಬಾಗಿಲು ತೆರೆಯುವುದರಿಂದ ಹಾಗೂ ಹಾಕುವುದರಿಂದ ರಾಯಲ್ಟಿ ಮತ್ತು ಗೌರವ ಬರುವುದಿಲ್ಲ. ಭದ್ರತಾ ದೃಷ್ಟಿಯಿಂದಷ್ಟೇ ಕಾರಿನ ಬಾಗಿಲು ತೆರೆಯುವುದು ಮತ್ತು ಹಾಕಲು ಬೇರೆಯವರನ್ನು ನೇಮಿಸಲಾಗುತ್ತದೆಯೇ ಹೊರತು, ಇದು ರಾಜಮನೆತನದ ನೀತಿ-ನಿಮಯಗಳಿಗೆ ಸಂಬಂಧಿಸಿದ್ದಲ್ಲ,” ಎಂದು ‘ಡೈಲಿ ಮೇಲ್’ ವೆಬ್‌ಸೈಟ್ ಅಂಕಣಕಾರ ವಿಲಿಯಂ ಹ್ಯಾಂಡ್ಸನ್ ಟ್ವೀಟ್ ಮಾಡಿದ್ದಾರೆ.

ಬ್ರಿಟನ್ ರಾಜಮನೆತನದ ಐದನೇ ರಾಜಕುಮಾರ 33ರ ಹರೆಯದ ಹ್ಯಾರಿಯನ್ನು, ಅಮೆರಿಕದ ಕಿರುತೆರೆ ನಟಿ ಮೆಗನ್ ಮರ್ಕೆಲ್ ಕಳೆದ ವರ್ಷ ವಿವಾಹವಾಗಿದ್ದರು. ನಟಿಯೊಬ್ಬರು ರಾಜಮನೆತನದ ಸಂಪ್ರದಾಯಗಳನ್ನು ಪಾಲಿಸಲು ಸಾಧ್ಯವೇ ಎಂಬ ಚರ್ಚೆಗಳು ಆಗಿನಿಂದಲೇ ಆರಂಭವಾಗಿದ್ದವು. ಇದೇ ಕಾರಣಕ್ಕೆ, ಮರ್ಕೆಲ್ ಅವರ ಪ್ರತಿಯೊಂದು ವರ್ತನೆಯನ್ನೂ ಸೂಕ್ಷ್ಮವಾಗಿ ಗಮನಿಸುವ ಮಾಧ್ಯಮಗಳು, ಚಿಕ್ಕ-ಚಿಕ್ಕ ವಿಚಾರಗಳನ್ನು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ.

ಬ್ರಿಟನ್‌ನಲ್ಲಿ ಈಗ ಪ್ರಜಾತಂತ್ರ ವ್ಯವಸ್ಥೆ ಇದ್ದರೂ ರಾಜಮನೆತನದ ಬಗ್ಗೆ ಜನರಿಗೆ ಅಪಾರ ಗೌರವ. ಇದನ್ನೊಂದು ಪ್ರತಿಷ್ಠೆ ಎಂದು ಪರಿಗಣಿಸಿರುವ ಅಲ್ಲಿನ ಜನರು, ರಾಜಮನೆತನದ ಎಲ್ಲ ಶಿಷ್ಟಾಚಾರಗಳೂ ಈಗಲೂ ಇರಬೇಕೆಂದು ಬಯಸುತ್ತಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More