ಶಬರಿಮಲೆ ಅಯ್ಯಪ್ಪಸ್ವಾಮಿಯ ಐತಿಹ್ಯ ಕಥನ ಮತ್ತು ಲೈಂಗಿಕ ಬಯಕೆ

ಅನ್ಯಲಿಂಗಿಗಳ ಲೈಂಗಿಕತೆ ಮತ್ತು ಲೈಂಗಿಕ ಬಯಕೆಯ ಪ್ರತಿರೋಧಿ ಚರಿತ್ರೆಯತ್ತ ಅಯ್ಯಪ್ಪಸ್ವಾಮಿ ಐತಿಹ್ಯ ಗಮನ ಸೆಳೆಯುತ್ತದೆ ಎನ್ನುತ್ತಾರೆ ಲೇಖಕಿ ಮಾಧವಿ ಮೆನನ್. ಮಾಧವಿ ಅವರ ‘ಇನ್ಫಿನೈಟ್‌ ವೆರೈಟಿ: ದಿ ಹಿಸ್ಟರಿ ಆಫ್‌ ಡಿಸೈರ್ ಇನ್‌ ಇಂಡಿಯಾ’ ಕೃತಿಯ ಆಯ್ದ ಭಾಗದ ಭಾವಾನುವಾದವಿದು

ದೇಶದ ಇತರ ಭಾಗಗಳಲ್ಲಿ ಕೇಳಿಬರುವ ಕತೆಗಳು ಬಹಳ ಮುಗುಮ್ಮಾಗಿ ಮತ್ತು ಕೆಲವೊಮ್ಮೆ ತೀರಾ ಮುಚ್ಚುಮರೆಯ ದಾಟಿಯಲ್ಲಿದ್ದರೆ, ಶಿವ-ವಿಷ್ಣು/ ಮೋಹಿನಿಯ ಕುರಿತ ದಕ್ಷಿಣ ಭಾರತದ ಕತೆಗಳು ಶಿವ ಮತ್ತು ವಿಷ್ಣುವಿನ ನಡುವಿನ ಕಾಮನೆಗಳ ಗಾಢತೆಯನ್ನು ಬಹಳ ದಿಟ್ಟವಾಗಿ ಹೇಳುತ್ತವೆ. ಶಿವ ಮತ್ತು ವಿಷ್ಣುವಿನ ನಡುವಿನ ಲೈಂಗಿಕ ಆಕರ್ಷಣೆಯ ತೀವ್ರತೆಯನ್ನು ಹೇಳುವ ಕ್ರಮದಲ್ಲಿ ವ್ಯತ್ಯಾಸವಿದ್ದರೂ, ಅವರಿಬ್ಬರ ನಡುವಿನ ದೈಹಿಕ ಸಂಪರ್ಕ ಮತ್ತು ಅವರ ಸಮಾಗಮದಿಂದಾಗಿ ಅಯ್ಯಪ್ಪ ಹುಟ್ಟಿದ ಎಂಬುದನ್ನು ಮಾತ್ರ ಎಲ್ಲ ಕತೆಗಳೂ ಮುಚ್ಚುಮರೆ ಇಲ್ಲದೆ ಹೇಳುತ್ತವೆ. ಅಂದರೆ, ಅಯ್ಯಪ್ಪ ಇಬ್ಬರು ಪುರುಷರ ಮಗ ಮತ್ತು ಸ್ವತಃ ಪುರುಷನ ಸಂಗಾತಿ.

ಭಾರತೀಯ ಹಿಂದೂ ಪರಂಪರೆಯಲ್ಲೇ ಇಂತಹದ್ದೊಂದು ವಂಶಾವಳಿ ಮತ್ತೊಂದು ಇಲ್ಲ. ಅಯ್ಯಪ್ಪ ಗಂಡಸರ ದೇವರು. ಗಂಡು-ಗಂಡು ನಡುವಿನ ಸಂಬಂಧದ ಬಗ್ಗೆಯೇ ಹೆಚ್ಚು ಪ್ರಾಶಸ್ತ್ಯ ಇರುವ ಕಾರಣಕ್ಕೆ ಅಯ್ಯಪ್ಪ ಸ್ವಾಮಿ ಕುರಿತ ಐತಿಹ್ಯಗಳೆಲ್ಲ ಬಹುತೇಕ ಸ್ತ್ರೀ ವಿರೋಧಿಯಂತೆ ಕಾಣಬಹುದು. ಪುರುಷ ಸಾಂಗತ್ಯವನ್ನು ವಿಜೃಂಭಿಸುವ ಈ ಅಂಶದ ಹೊರತಾಗಿಯೂ, ಅಯ್ಯಪ್ಪ ಐತಿಹ್ಯ ಅನ್ಯಲಿಂಗೀಯ (ಸ್ತ್ರೀ ಮತ್ತು ಪುರುಷ) ಸಂಬಂಧವನ್ನು ಪ್ರತಿರೋಧಿಸುವ ಕಾಮನೆಗಳ ಇತಿಹಾಸದತ್ತ ನಮ್ಮ ಗಮನ ಸೆಳೆಯುತ್ತದೆ. ಆ ಪ್ರತಿರೋಧ ಕೇವಲ ಅನ್ಯಲಿಂಗಿಗಳ ಸಮಾಗಮಕ್ಕೆ ಮಾತ್ರವಲ್ಲ; ಭಾರತ ಉಪಖಂಡದಲ್ಲಿ ಈ ದಿನಗಳಲ್ಲಿ ಅನ್ಯಲಿಂಗ (ಸ್ತ್ರೀ ಮತ್ತು ಪುರುಷ) ಲೈಂಗಿಕತೆ ಸಿಲುಕಿರುವ ಕಟ್ಟುಪಾಡುಗಳ ಸೆರೆಮನೆಯ ಬಗ್ಗೆಯೂ ಹೌದು ಎಂಬುದು ಗಮನಾರ್ಹ. ಅನ್ಯಲಿಂಗೀಯ (ಸ್ತ್ರೀ ಮತ್ತು ಪುರುಷ) ಸಂಬಂಧದ ವಿಷಯದಲ್ಲಿ ಸಂತಾನದ ಮಹತ್ವದ ಕುರಿತು ಹೆಚ್ಚು ಒತ್ತು ನೀಡುವ ಬಗ್ಗೆಯೂ ಈ ಪ್ರತಿರೋಧ ವ್ಯಕ್ತವಾಗಿದೆ. ಪುರುಷ ಮತ್ತು ಮಹಿಳೆ ಮಗುವನ್ನು ಪಡೆಯುವುದಕ್ಕಾಗಿಯೇ, ತಮ್ಮ ಸಂತಾನ ಬೆಳೆಸುವುದಕ್ಕಾಗಿಯೇ ಮದುವೆಯಾಗಬೇಕು ಎಂಬ ಕಟ್ಟುಪಾಡು ಅದು. ಸಂತಾನೋತ್ಪತ್ತಿ ಮತ್ತು ಸಂತಾನದ ಕುರಿತ ಚರ್ಚೆಗೆ ಮುನ್ನ ನಾವು ಇನ್ನಷ್ಟು ವಿಷಯಗಳನ್ನು ಚರ್ಚಿಸೋಣ.

ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಹೋಗುವಾಗ ಸಮೀಪದ ವಾವರ್ ಮಂದಿರವನ್ನು ಬಳಸಿಕೊಂಡೇ ಹೋಗಬೇಕು. ಮಲ್ಲಿಕಾಪುರಮ್ಮ ದೇವಾಲಯ ಕೂಡ ಅಯ್ಯಪ್ಪ ಸ್ವಾಮಿ ದೇವಾಲಯದ ಸಮೀಪದಲ್ಲೇ ಇದ್ದು, ತನ್ನ ಈಡೇರದ ಬಯಕೆಗಳ ಸಾಕ್ಷ್ಯವನ್ನು ಕಾಣಲು ಆಕೆ ಬಹುದೂರ ಹೋಗಬೇಕಾಗಿಲ್ಲ. ಇದೇ ಮಾದರಿ ಜಗತ್ತಿನಾದ್ಯಂತ ಇರುವ ಅಯ್ಯಪ್ಪ ದೇವಾಲಯಗಳಲ್ಲೂ ಪಾಲನೆಯಾಗಿದೆ ಎಂಬುದು ಸಾಮಾನ್ಯ ಗ್ರಹಿಕೆ. ನಾನು ಇತ್ತೀಚೆಗೆ ಭೇಟಿ ನೀಡಿದ ಮತ್ತು ಬಾಲ್ಯದಲ್ಲಿ ನನ್ನಜ್ಜಿ ಆಗಾಗ ನನ್ನನ್ನು ಕರೆದೊಯ್ಯುತ್ತಿದ್ದ ದೆಹಲಿಯಲ್ಲಿನ ಅಯ್ಯಪ್ಪ ದೇವಾಲಯದಲ್ಲಿ ಪ್ರಮುಖವಾಗಿ ಅಯ್ಯಪ್ಪ ಗುಡಿಯೊಂದೇ ಇದ್ದು, ಅದರ ಪಕ್ಕದಲ್ಲಿ ಆತನ ತಂದೆಯವರಲ್ಲಿ ಒಬ್ಬರಾದ ಶಿವನ ಚಿಕ್ಕ ಗುಡಿ ಇದೆ. ವಾವರ್‌ನಂತೆಯೇ ಬಹುತೇಕ ಮಲ್ಲಿಕಾಪುರಮ್ಮನನ್ನೂ ವ್ಯವಸ್ಥಿತವಾಗಿ ಮರೆಮಾಚಲಾಗಿದೆ. ಹಾಗಾಗಿ, ಶಬರಿಮಲೆಯನ್ನು ಹೊರತುಪಡಿಸಿ ಉಳಿದೆಡೆಯ ಅಯ್ಯಪ್ಪ ಸ್ವಾಮಿ ದೇಗುಲಗಳು ಆ ದೇವರು ಮತ್ತು ದೇವಳದ ಹುಟ್ಟಿನ ಮೂಲದಲ್ಲಿರುವ ತೀವ್ರ ಬಯಕೆ ಮತ್ತು ಆಕಾಂಕ್ಷೆಗಳ ರೆಕ್ಕೆಪುಕ್ಕ ಕಳಚಿದ ಐತಿಹ್ಯವನ್ನಷ್ಟೇ ಮುಂದೆ ಮಾಡುತ್ತಿವೆ.

ತೀವ್ರ ಬಯಕೆಗಳ ಹೊರತಾದ (ಗಂಡು-ಗಂಡಿನ ದಾಂಪತ್ಯ, ಗಂಡು- ಗಂಡಿನ ಸಾಂಗತ್ಯ ಮತ್ತು ಹೆಣ್ಣಿನ ತಿರಸ್ಕೃತ ಬಯಕೆಗಳ ಯಾವ ಚಿತ್ರಣವೂ ಇಲ್ಲದ) ಈ ಚಿತ್ರಣವೇ ನನಗೆ ಸಾಮಾನ್ಯವಾಗಿ ಕಾಣುತ್ತಿತ್ತು. ದೆಹಲಿಯ ದೇಗುಲದಲ್ಲಿ ಮಹಿಳೆಯೊಬ್ಬರು ನನ್ನ ಬಳಿ ಬಂದು, ನನ್ನತ್ತ ಅನುಮಾನದ ನೋಟ ಬೀರಿ, ನಾನಲ್ಲಿ ಭಕ್ತೆಯಾಗಿ ಹೋಗಿದ್ದೇನೆಯೇ ಅಥವಾ ಕುತೂಹಲಕ್ಕೆ ಹೋಗಿರುವೆನೇ ಎಂದು ವಿಚಾರಿಸಿದರು. ನಾನು ಕೇವಲ ಕುತೂಹಲಕ್ಕಾಗಿ ಬಂದಿರುವುದಾಗಿ ಖಡಾಖಂಡಿತವಾಗಿ ಹೇಳಿದೆ. ಅದಕ್ಕೆ ಆಕೆ, “ಅಯ್ಯಪ್ಪ ದೇವಾಲಯದಲ್ಲಿ ಕುತೂಹಲಕ್ಕೆ ಯಾವ ಅವಕಾಶವೂ ಇಲ್ಲ, ಇಲ್ಲಿ ಭಕ್ತರಿಗೆ ಮಾತ್ರ ಅವಕಾಶ,” ಎಂದರು. ಆ ಮಾತು ಕೇಳಿ ಕೆರಳಿದ ನಾನು, “ನೀವು ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ನಾನು ನಿಮ್ಮನ್ನು ಕೇಳಲಿಲ್ಲ. ಹಾಗೇ, ನಿಮಗೂ ನನ್ನನ್ನು ಕೇಳುವ ಹಕ್ಕು ಇಲ್ಲ,” ಎಂದೆ. ಆಗ ಆಕೆ ದೇಗುಲದ ಆಡಳಿತ ಮಂಡಳಿಯವರಿಗೆ ದೂರು ನೀಡಲು ದೌಡಾಯಿಸಿದರು. ಆದರೆ, ಆಕೆಗೆ ನಿರಾಸೆಯಾಗುವಂತೆ ಅವರು, “ಇತರ ಹಲವು ಹಿಂದೂ ದೇವಾಲಯಗಳಂತೆ ಅಯ್ಯಪ್ಪ ದೇವಾಲಯಗಳಲ್ಲಿ ಕೂಡ ಜಗತ್ತಿನಾದ್ಯಂತ ಧರ್ಮ, ಜಾತಿ, ನಂಬಿಕೆ (ದೆಹಲಿಯ ಅಯ್ಯಪ್ಪ ದೇಗುಲಕ್ಕೆ ಗಂಡು-ಹೆಣ್ಣುಗಳಿಗೆ ಮುಕ್ತ ಪ್ರವೇಶವಿದೆ!) ಮೀರಿ ಎಲ್ಲರಿಗೂ ಮುಕ್ತ ಅವಕಾಶವಿದೆ,” ಎಂದರು. “ಹಾಗಾಗಿ, ಆಕೆ ಒಳ್ಳೆಯ ಮನಸ್ಸಿನಿಂದ ಇದ್ದರೆ ಇರಲು ಅಡ್ಡಿ ಇಲ್ಲ,” ಎಂದು ನನಗೆ ತಾಕೀತು ಮಾಡಲು ಬಂದರು. ಆದರೆ, ಕುತೂಹಲದ ಕುರಿತ ಆಕೆಯ ಅವಜ್ಞೆ ಮತ್ತು ಅಸಡ್ಡೆ ಅಯ್ಯಪ್ಪನ ಕುರಿತ ಮತ್ತೊಂದು ಐತಿಹ್ಯದ ಬಗ್ಗೆ ಯೋಚಿಸುವಂತೆ ಮಾಡಿತು.

ಶಬರಿಮಲೆಯಲ್ಲಿ ತನ್ನ ದೇಗುಲ ಕಟ್ಟಿದ ಬಳಿಕ (ಕೆಲವರ ಪ್ರಕಾರ ೧೧ನೇ ಶತಮಾನ, ಮತ್ತೆ ಕೆಲವರ ಪ್ರಕಾರ ಅದಕ್ಕೂ ನಂತರ) ಅಯ್ಯಪ್ಪ ಗರ್ಭಗುಡಿಯೊಳಗೆ ಪ್ರವೇಶಿಸಿ, ಬಳಿಕ ಅಲ್ಲಿಂದ ಮಾಯವಾದ. ಈ ಕುರಿತ ಸಾಮಾನ್ಯ ನಂಬಿಕೆ ಎಂದರೆ; ಅಯ್ಯಪ್ಪ ಸ್ವರ್ಗಕ್ಕೆ ಹೋದ, ಅಲ್ಲಿ ಇತರ ದೇವಾನುದೇವತೆಗಳೊಂದಿಗೆ ತನ್ನ ಸ್ಥಾನವನ್ನು ಕಂಡುಕೊಂಡ. ತನ್ನ ನೆಲೆಯಲ್ಲಿ ಕುರುಹವೊಂದನ್ನು ಬಿಟ್ಟುಹೋಗಿದ್ದು, ಅದನ್ನೇ ಭಕ್ತರು ಪೂಜಿಸುವಂತೆ ಹೇಳಿದ್ದಾನೆ ಎನ್ನಲಾಗುತ್ತಿದೆ. ಸ್ವರ್ಗಕ್ಕೆ ಹೋದ ಬಳಿಕ ಆತ ಎಷ್ಟು ಶಕ್ತಿಶಾಲಿ ದೇವರಾದನೆಂದರೆ, ಜಗತ್ತಿನ ಸೃಷ್ಟಿಕರ್ತನಾದ ಬ್ರಹ್ನನನ್ನೇ ಮೀರಿಸಿ, ಆತನ ಸೃಷ್ಟಿ ಕಾರ್ಯದ ಹೊಣೆಯನ್ನೇ ತನ್ನದಾಗಿಸಿಕೊಂಡ. ಆತನ ಇಬ್ಬರು ತಂದೆಯರಾದ ವಿಷ್ಣು (ಪಾಲಕ) ಮತ್ತು ಶಿವ (ಲಯಕಾರ) ಅವರುಗಳು ಈಗಾಗಲೇ ಜಗತ್ತಿನ ಇನ್ನೆರಡು ಮಹತ್ವದ ಕಾರ್ಯಗಳನ್ನು ನಡೆಸುತ್ತಿರುವುದರಿಂದ, ಅಯ್ಯಪ್ಪ ಸೃಷ್ಟಿ ಕಾರ್ಯದ ಹೊಣೆ ಹೊರುತ್ತಲೇ ಕೆಲವು ದೇವತೆಗಳಿಗೆ ಇಡೀ ಲೋಕದ ವ್ಯವಹಾರ ಮತ್ತು ಸ್ವರ್ಗದ ಅಧಿಪತ್ಯವೆಲ್ಲ ಅಪ್ಪ-ಮಕ್ಕಳ ಪಾಲಾಯಿತು ಎಂದು ಅಸಹನೆ ಶುರುವಾಯಿತು. ಸ್ವರ್ಗದ ಅಧಿಕಾರ ಎತ್ತರದ ಸ್ಥಾನಕ್ಕೇರಿದ ಬಳಿಕ ಅಯ್ಯಪ್ಪನ ಮೇಲೆ ಸ್ವರ್ಗದ ದೇವತೆಗಳ ಹೊಟ್ಟೆಯುರಿ ಹೆಚ್ಚಾಗತೊಡಗಿತು. ಅಯ್ಯಪ್ಪನ ಕುರಿತ ಕನ್ನಡ ಜನಪ್ರಿಯ ಗೀತೆಯೊಂದರ ಪ್ರಕಾರ, ಈ ಹೊಟ್ಟೆಕಿಚ್ಚಿಗೆ ಕಾರಣ; ಅಯ್ಯಪ್ಪ ಪಡೆದುಕೊಂಡು ಅಧಿಕಾರವಷ್ಟೇ ಅಲ್ಲ, ಜೊತೆಗೆ ಆ ಅಧಿಕಾರವನ್ನು ಬಳಸಿಕೊಂಡು ಆತ ಮಾಡಲು ಉದ್ದೇಶಿಸಿದ್ದ ಕಾರ್ಯ ಕೂಡ. ಆ ಹಾಡಿನ ಪ್ರಕಾರ, ಅಯ್ಯಪ್ಪ ತನ್ನ ಅಧಿಕಾರ ಬಳಸಿ ದೇವರ ಶಕ್ತಿಯನ್ನೇ ಅಂತ್ಯಗೊಳಿಸುವ ಯೋಜನೆ ಹಾಕಿರುತ್ತಾನೆ. ಹಾಗಾಗಿ, ಇದನ್ನು ಊಹಿಸಿದ ದೇವತೆಗಳು ಅಯ್ಯಪ್ಪನ ವಿರುದ್ಧ ಬಂಡಾಯವೇಳಲು ನಿರ್ಧರಿಸಿದ್ದರು.

ದೇವತೆಗಳನ್ನು ದಿಗಿಲುಬೀಳಿಸಿದ್ದ ಅಯ್ಯಪ್ಪ ಸ್ವಾಮಿಯ ಆ ಭಯಾನಕ ಉಪಾಯವೆಂದರೆ, ಮಾನವರಿಗೆ ಸಾವೇ ಬೇಡ, ಅವರನ್ನು ಅಜರಾಮರನ್ನಾಗಿಸೋಣ ಎಂಬುದು! ಅದು ಕೇವಲ ಸಾವಿನ ಬಗ್ಗೆಯಷ್ಟೇ ಅಲ್ಲ, ಹುಟ್ಟಿನ ಬಗ್ಗೆಯೂ ನಿಷೇಧದ ಕ್ರಮವಾಗಿತ್ತು. ರುತ್ ವನಿತಾ ಅವರು ತಮ್ಮ ‘ಸೇಮ್ ಸೆಕ್ಸ್ ಲವ್ ಇನ್‌ ಇಂಡಿಯಾ’ ಕೃತಿಯಲ್ಲಿ, ಹಿಂದೂ ಧಾರ್ಮಿಕ ಪುರಾಣಗಳಲ್ಲಿ ದೇವತೆಗಳು ಮಕ್ಕಳನ್ನು ಹಡೆದೇ ಇರಲು ಕಾರಣ ಸಂತಾನ ಪಡೆಯುವುದೆಂದರೆ ತನ್ನತನವನ್ನೇ ಕಳೆದುಕೊಳ್ಳುವುದು, ತನ್ನತನದ ಬದಲಿಗೆ ಮತ್ತೊಂದನ್ನು ಸೃಷ್ಟಿಸುವುದು. ಸಂತಾನದ ಉದ್ದೇಶದ ಲೈಂಗಿಕ ಕ್ರಿಯೆ ಎಂಬುದು ಸ್ವಂತಿಕೆ ಅಥವಾ ತನ್ನತನದ ಸಾವಿನೊಂದಿಗೆ ನಿಕಟ ನಂಟು ಹೊಂದಿದೆ. ಮಕ್ಕಳನ್ನು ಪಡೆಯುವುದು ಎಂದರೆ, ವ್ಯಕ್ತಿಯೊಬ್ಬ ತನ್ನನ್ನು ತಾನೇ ತನ್ನದೇ ಮತ್ತೊಂದು ರೂಪದೊಂದಿಗೆ ಬದಲಾಯಿಸಿಕೊಂಡಂತೆ. ಈ ವಾದ ಸರಣಿಯನ್ನು ನಾವು ತಿರುವುಮುರುವುಗೊಳಿಸಿದರೆ; ಒಂದು ವೇಳೆ ಸಾವನ್ನು ತಡೆಯುವುದೇ ಹುಟ್ಟಿನ ಗುರಿಯಾಗದರೆ, ಸಾವೇ ಇಲ್ಲ ಎಂಬ ಅಭಯ, ಹುಟ್ಟು ಕೂಡ ಇಲ್ಲ ಎಂಬದರ ಅಭಯವೂ ಆಗುವುದಲ್ಲವೇ? ಸಾವು ಮತ್ತು ಹುಟ್ಟಿನಿಂದ ಪಾರಾಗುವುದೇ ಆದರೆ, ನಮ್ಮ ಈ ಜಗತ್ತಿನ ರೀತಿನೀತಿಯೇ ಇಡಿಯಾಗಿ ಬದಲಾಗಿಬಿಡುತ್ತದೆ ಅಲ್ಲವೇ?

ಅನ್ಯಲಿಂಗ ಲೈಂಗಿಕತೆಯ ನೆಲೆ ಕೂಡ ಮಕ್ಕಳನ್ನು ಹೊಂದುವುದೇ ಆಗಿದೆ ಅಥವಾ ಜೈವಿಕತೆಯ ಮೇಲೆ ಸ್ಥಾಪಿತವಾದ ಕ್ರಮದಲ್ಲಿ, ತಮ್ಮ ಲೈಂಗಿಕ ಸಮಾಗಮದಿಂದ ಒಬ್ಬ ಪುರುಷ-ಮಹಿಳೆ ಸಹಜವಾಗಿ ಮಗುವನ್ನು ಪಡೆಯಬಲ್ಲರು. ಹಾಗಾಗಿ ಭಿನ್ನಲಿಂಗ ಲೈಂಗಿಕತೆಯೇ ‘ಸಹಜ’ ಕ್ರಿಯೆ. ಆದರೆ, ಅಂತಹ ಲೈಂಗಿಕ ಕ್ರಿಯೆಯನ್ನು ಇಂತಹ ವಾದ ಅಗತ್ಯ ಹಾಗೂ ಅನುಕೂಲದ ದೃಷ್ಟಿಯಿಂದ ನೋಡುತ್ತಿದೆಯೇ ಹೊರತು, ಸುಖದ ದೃಷ್ಟಿಯಿಂದ ಅಲ್ಲ. ಆದರೆ, ಲೈಂಗಿಕ ಸುಖಕ್ಕೆ ಸಂಬಂಧಿಸಿದ ಪುರಾತನ ಹಿಂದೂ ಅಥವಾ ಇಸ್ಲಾಂ ಗ್ರಂಥಗಳಲ್ಲಿ ಸುಖ ಮತ್ತು ಸಂತೃಪ್ತಿಯೇ ಪ್ರಧಾನವಾಗಿದೆಯೇ ವಿನಾ ಸಂತಾನೋತ್ಪತ್ತಿಯ ಪ್ರಸ್ತಾಪವೇ ಇಲ್ಲ ಎಂಬುದನ್ನು ಗಮನಿಸಬಹುದು. ವಿಶ್ವದ ಲೈಂಗಿಕ ಸುಖದ ಮಹಾಗ್ರಂಥ ಕಾಮಸೂತ್ರದಲ್ಲಿ ಕೂಡ ಸಂತಾನೋತ್ಪತ್ತಿಗಾಗಿ ಗಂಡು-ಹೆಣ್ಣು ಸೇರುವ ಪ್ರಸ್ತಾಪವೇ ಬರುವುದಿಲ್ಲ. ಆ ಮೂಲಕ, ಆ ಕೃತಿಯು ಸಂತಾನದಿಂದ ಬಯಕೆ ಅಥವಾ ಲೈಂಗಿಕ ತೃಪ್ತಿಯನ್ನು ಸಂಪೂರ್ಣ ಪ್ರತ್ಯೇಕಿಸುತ್ತದೆ. ಮಧ್ಯಯುಗದ ಹಲವು ಸೂಫಿ ಸಂತರು ಕೂಡ ಮಕ್ಕಳನ್ನು ಪಡೆಯಲು ನಿರಾಕರಿಸಿದರು. ಅವರ ಬದುಕಿನ ಸಾರ್ಥಕತೆ ಇದ್ದದ್ದು ತಮ್ಮದೇ ಮತ್ತೊಂದು ಪ್ರತಿರೂಪವನ್ನು ಸೃಷ್ಟಿಸುವುದರಲ್ಲಿ ಅಲ್ಲ; ಬದಲಾಗಿ ದೇವರಲ್ಲಿ ಒಂದಾಗುವುದರಲ್ಲಿ. ಆದರೆ, ಸಂತಾನಕ್ಕಾಗಿ ಲೈಂಗಿಕತೆ ಎಂಬುದು ಬೈಬಲ್‌ನಲ್ಲಿ ನಾವು ಕಾಣುತ್ತೇವೆ. ‘ಬೀ ಫ್ರೂಟ್‌ಫುಲ್ ಅಂಡ್ ಮಲ್ಟಿಪ್ಲೈ’ ಎಂಬ ಅದರ ಅಭಯ ಅದು ಸಂತಾನೋತ್ಪತ್ತಿಗೆ ನೀಡುವ ಮಹತ್ವ ಸಾರುತ್ತದೆ. ಆದರೆ, ವೇದದ ವಿವಾಹ ಆಚರಣೆಗಳಲ್ಲಿ ಈ ಅಂಶ ಕಾಣುವುದಿಲ್ಲ. ಆ ಆಚರಣೆಗಳು ಸಂತಾನೋತ್ಪತ್ತಿ ಕ್ರಿಯೆ ಬಗ್ಗೆ ಒಮ್ಮೆಯೂ ಪ್ರಸ್ತಾಪಿಸುವುದಿಲ್ಲ.

ಹಾಗಾಗಿ, ಸಾವು ಮತ್ತು ಹುಟ್ಟುಗಳಿಗೇ ವಿದಾಯ ಹೇಳುವ ಅಯ್ಯಪ್ಪ ಸ್ವಾಮಿಯ ಯೋಜನೆ ಭಾರತೀಯ ಧಾರ್ಮಿಕ ಮತ್ತು ಆಧ್ಯಾತ್ಮಿಕ ನಾಡಿಯನ್ನೇ ಹಿಡಿಯುವ ಉದ್ದೇಶ ಹೊಂದಿತ್ತು ಮತ್ತು ಆ ಕಾರಣಕ್ಕಾಗಿ ಅದು ಜೈವಿಕ ಸಂತಾನೋತ್ಪತ್ತಿಯ ಬಗ್ಗೆ ವಿಪರೀತ ಮೋಹ ಹೊಂದಿರುವ ನಮ್ಮ ಈ ಕಾಲಕ್ಕೆ ತೀರಾ ವ್ಯಕ್ತಿರಿಕ್ತವಾಗಿತ್ತು. ಸಾವು ಮತ್ತು ಹುಟ್ಟಿನ ಕಲ್ಪನೆಯನ್ನೇ ಅಳಿಸಿಹಾಕುವ ಮೂಲಕ ಅಯ್ಯಪ್ಪಸ್ವಾಮಿ, ಅನ್ಯಲಿಂಗ ಲೈಂಗಿಕತೆಯ ಕಲ್ಪನೆಗೆ ಅದರ ಮೂಲದಲ್ಲೇ (ಸಂತಾನೋತ್ಪತ್ತಿ) ಪೆಟ್ಟು ಕೊಡುವ ಉದ್ದೇಶ ಹೊಂದಿತ್ತು. ಈಗ ಇಂಥದ್ದೊಂದು ಯೋಚನೆ ತೀರಾ ಆಘಾತಕಾರಿ ಎನಿಸುತ್ತದೆ. ಅದರಲ್ಲೂ, ಸಂತಾನಕ್ಕಾಗಿ ಲೈಂಗಿಕ ಸಂಪರ್ಕ ಎಂಬುದು ಅತ್ಯಂತ ಪವಿತ್ರ ಎಂಬ ಕಲ್ಪನೆ ಇರುವ ಭಾರತೀಯ ವ್ಯವಸ್ಥೆಯಲ್ಲಂತೂ ಅದು ದೊಡ್ಡ ಆಘಾತಕಾರಿ ಸಂಗತಿಯೇ. ಈಗಲೂ, ಮಹಿಳೆಗೆ ನೂರು ಮಕ್ಕಳ ತಾಯಿಯಾಗು ಎಂದು ಹಾರೈಸುವುದನ್ನು ಕಾಣುತ್ತೇವೆ. ಆದರೆ, ಅಯ್ಯಪ್ಪ ಸ್ವಾಮಿಯಿಂದ ಅಂತಹ ಆಶೀರ್ವಾದ ಖಂಡಿತವಾಗಿಯೂ ಬರಲಾರದು!

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More