ಪ್ರವಾಹದ ರೌದ್ರತೆ ಕಣ್ಣಾರೆ ಕಂಡು ಮಾನಸಿಕ ಒತ್ತಡಕ್ಕೆ ತುತ್ತಾದ ಕೇರಳಿಗರು

ಭೀಕರ ಪ್ರವಾಹದ ವೇಳೆ ಪ್ರಾಣ ಉಳಿದರೆ ಸಾಕು ಎಂದು ಪರಿಹಾರ ಶಿಬಿರಕ್ಕೆ ಧಾವಿಸಿದ್ದ ಮಂದಿ, ವಾರಗಳ ನಂತರ ತಮ್ಮ ಮನೆ ಇರುವ ಜಾಗಕ್ಕೆ ಬಂದು ನೋಡಿದರೆ ಏನೂ ಉಳಿದಿರಲಿಲ್ಲ. ಪ್ರವಾಹದ ನಂತರದ ಕೇರಳದಲ್ಲಿನ ಸನ್ನಿವೇಶವನ್ನು ‘ಸ್ಕ್ರಾಲ್’ ವರದಿ ಮಾಡಿದ್ದು, ಅದರ ಭಾವಾನುವಾದ ಇಲ್ಲಿದೆ

ಅದು ಆಗಸ್ಟ್ 14ರ ಮಧ್ಯರಾತ್ರಿ. ಕೇರಳದ ಎರ್ನಾಕುಲಂನಲ್ಲಿರುವ ವರಪ್ಪುಳಾ ಚರ್ಚ್‌ನ ಗಂಟೆ ಜೋರಾಗಿ ಸದ್ದು ಮಾಡಿತ್ತು. ಪ್ರವಾಹದ ನೀರಿನ ಮಟ್ಟ ಹೆಚ್ಚುತ್ತಿದ್ದಂತೆ ಸ್ಥಳೀಯರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಯಿತು. ತುರ್ತು ಕಾರ್ಯಾಚರಣೆ ನಡೆಸಿದ ರಕ್ಷಣಾ ಸಿಬ್ಬಂದಿ, ಸಾವಿರಾರು ಮಂದಿಯನ್ನು ಪರಿಹಾರ ಶಿಬಿರಗಳಿಗೆ ರವಾನಿಸಿದರು. ಈ ಶಿಬಿರಕ್ಕೆ ರವಾನೆಯಾದ ಅದೆಷ್ಟೋ ಕುಟುಂಬಗಳಲ್ಲಿ 63 ವರ್ಷದ ನೆಡಿಯಾಂತರಾ ಫ್ರಾನ್ಸಿಸ್ ಮತ್ತು ಅವರ ಪತ್ನಿ 55ರ ಹರೆಯದ ಮೇರಿ ದಂಪತಿಯೂ ಸೇರಿದ್ದರು.

ಪ್ರಾಣ ಉಳಿದರೆ ಸಾಕು ಎಂದು ಪರಿಹಾರ ಶಿಬಿರಕ್ಕೆ ಧಾವಿಸಿದ್ದ ಮಂದಿ, ವಾರಗಳ ನಂತರ ತಮ್ಮ ಮನೆ ಇರುವ ಜಾಗಕ್ಕೆ ಬಂದು ನೋಡಿದರೆ ಏನೂ ಉಳಿದಿರಲಿಲ್ಲ. ಪ್ರಕೃತಿಯ ಮುನಿಸಿಗೆ ಎಲ್ಲವೂ ಛಿದ್ರ. ಸಾಲ ಮಾಡಿ ಕಟ್ಟಿದ ಮನೆ, ಬೆಳೆದ ಬೆಳೆ, ಜಾನುವಾರುಗಳು ಎಲ್ಲವೂ ಪ್ರವಾಹದಲ್ಲಿ ಕೊಚ್ಚಿಹೋಗಿತ್ತು. ಅಚಾನಕ್ ಆಗಿ ಅಪ್ಪಳಿಸಿದ ಪ್ರವಾಹಕ್ಕೆ ಬದುಕು ಛಿದ್ರವಾಗಿ ಹೋಗಿದೆ.

ಪ್ರವಾಹದ ನಂತರದ ಕೇರಳದಲ್ಲಿನ ಸನ್ನಿವೇಶವನ್ನು ‘ಸ್ಕ್ರಾಲ್’ ವರದಿ ಮಾಡಿದೆ. ಪ್ರವಾಹದಿಂದ ಪಾರಾಗಲು ವಾರಗಳ ಕಾಲ ಪರಿಹಾರ ಶಿಬಿರದಲ್ಲಿದ್ದ ಫ್ರಾನ್ಸಿಸ್ ದಂಪತಿ, ಆರು ದಿನಗಳ ನಂತರ ಬಂದು ನೋಡಿದಾಗ, ವಾಸಿಸುತ್ತಿದ್ದ ಮನೆ, ಪಾತ್ರೆ-ಪಗಡೆಗಳು, ಪೀಠೋಪಕರಣಗಳು ಹೀಗೆ ಎಲ್ಲವೂ ಜಲಾವೃತವಾಗಿದ್ದವು. ಮೂರು ವಾರಗಳ ಕಠಿಣ ಪರಿಶ್ರಮದಿಂದ ಮನೆಯಲ್ಲಿ ತುಂಬಿದ್ದ ನೀರು ಹಾಗೂ ಕೆಸರು ಹೊರಹಾಕಿ ಯಥಾಸ್ಥಿತಿಗೆ ತರುವಲ್ಲಿ ಸಾಕಾಗಿತ್ತು ಎಂದು ನಿಟ್ಟಿಸಿರುಬಿಡುತ್ತಾರೆ ದಂಪತಿ, ತಮ್ಮ ಜೀವನದ ಉಳಿತಾಯದ ದುಡ್ಡಿನಲ್ಲಿ ಕಟ್ಟಿದ ಮನೆ ಪ್ರವಾಹದಿಂದ ಹಾನಿಯಾಗಿದೆ. ಆ ಭೀಕರ ರಾತ್ರಿಯ ಸನ್ನಿವೇಶ ಮರೆಯಲು ಸಾಧ್ಯವಾಗುತ್ತಿಲ್ಲ. ಸರಿಯಾಗಿ ನಿದ್ದೆ ಮಾಡದೆ ಅದೆಷ್ಟೋ ರಾತ್ರಿಗಳಾಯಿತು ಎಂದು ದುಃಖಿತರಾಗುತ್ತಾರೆ ವೃದ್ಧ ದಂಪತಿ. “ರಾತ್ರಿ ಕಣ್ಣುಮುಚ್ಚಿದಾಗೆಲ್ಲ ಚರ್ಚ್ ಬೆಲ್ ಬಾರಿಸಿದಂತೆ ಭಾಸವಾಗಿ ಬೆಚ್ಚಿಬಿದ್ದು ಎದ್ದುಕುಳಿತುಬಿಡುತ್ತೇನೆ. ಮಳೆ ಹನಿಯಲಾರಂಭಿಸಿದರೆ ಸಾಕು, ಗೊತ್ತಿಲ್ಲದಂತೆ ಆತಂಕ, ಭಯ ಆವರಿಸಿಕೊಂಡು ಬಿಡುತ್ತದೆ,” ಎನ್ನುತ್ತಾರೆ ಫ್ರಾನ್ಸಿಸ್.

ಅದೇ ಗ್ರಾಮದಲ್ಲಿ ವಾಸಿಸುತ್ತಿರುವ ಸಹೋದರಿಯರಾದ 15 ವರ್ಷದ ಮೀನು, 14 ವರ್ಷದ ಗೀತು ಮತ್ತು 10 ವರ್ಷದ ನೀತು ಇದೀಗ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಪ್ರವಾಹದ ಹೊಡೆತಕ್ಕೆ ಸಿಲುಕಿದ್ದ ಕಾರಣ ಮಧು ಹಾಗೂ ಅವರ ಪತ್ನಿ ಶ್ಯಾನಿತಮ್ಮ ಮೂವರು ಮಕ್ಕಳೊಂದಿಗೆ ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದಿದ್ದರು. ಪ್ರವಾಹದ ನೀರು ತಗ್ಗಿದ ಬಳಿಕ ವಾಪಸ್ ಬಂದು ನೋಡಿದಾಗ ಮಕ್ಕಳು ಕಂಡಿದ್ದು, ಕೆಸರಿನಡಿಯಲ್ಲಿ ಸಮಾಧಿಯಾಗಿದ್ದ ತಮ್ಮ ಶಾಲಾ ಪುಸ್ತಕಗಳನ್ನು. “ಪುಸ್ತಕಗಳ ಸ್ಥಿತಿ ಕಂಡು ಜೋರಾಗಿ ಅಳಲಾರಂಭಿಸಿದ ಮಕ್ಕಳು ಈಗ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಮೊದಲಿದ್ದ ತುಂಟಾಟ, ವಿನೋದ ಇದೀಗ ಮನೆಯಲ್ಲಿಲ್ಲ. ಮಕ್ಕಳಲ್ಲಿ ಜೀವನೋತ್ಸಾಹ ಬತ್ತಿದೆ,” ಎಂದು ಮಕ್ಕಳ ಪರಿಸ್ಥಿತಿ ನೆನೆದು ಕಣ್ಣೀರಾಗುತ್ತಾರೆ ತಾಯಿ ಶ್ಯಾನಿ.

ಮೀನು ಬುದ್ಧಿವಂತ ಬಾಲಕಿ. ಮುಂದಿನ ವರ್ಷ ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ಆಕೆ, ಶೇ.80ರಷ್ಟು ಅಂಕ ಗಳಿಸುವ ಗುರಿ ಹೊಂದಿದ್ದಳು. ಆದರೆ, ಪ್ರವಾಹದ ನಂತರ ಆಕೆಗೆ ಪಠ್ಯದಲ್ಲಿ ಗಮನ ಕೇಂದ್ರಿಕರಿಸಲು ಸಾಧ್ಯವಾಗುತ್ತಿಲ್ಲ. “ಮನಸ್ಸನ್ನು ಬೇರೆಡೆಗೆ ಕೇಂದ್ರಿಕರಿಸಲು ಯತ್ನಿಸಿದಷ್ಟೂ ಪ್ರವಾಹದ ಚಿತ್ರಣ ಆಕೆಯ ಮನದಲ್ಲಿ ಮೂಡಿ ಮರೆಯಾಗುತ್ತಿರುವುದರಿಂದ ಆಕೆಗೆ ಸಹಜವಾಗಿರಲು ಸಾಧ್ಯವಾಗುತ್ತಿಲ್ಲ,” ಎನ್ನುವುದು ಆಕೆಯ ಪೋಷಕರ ಮಾತು.

ಅಂದಹಾಗೆ, ಪೆರಿಯಾರ್ ನದಿ ಉಕ್ಕಿ ಹರಿದ ಉದಾಹರಣೆ ತೀರಾ ಕಡಿಮೆ. ಅದಕ್ಕೆ‌‌ ನದಿ ತುಂಬಾ ಕಟ್ಟಿದ 6 ಅಣೆಕಟ್ಟುಗಳೂ ಕಾರಣ. ಆದರೆ, ಕಳೆದ ಆಗಸ್ಟ್‌ನಲ್ಲಿ ಪೆರಿಯಾರ್ ಉಕ್ಕಿ ಹರಿಯಿತು. ಪರಿಣಾಮವಾಗಿ, 981 ಗ್ರಾಮಗಳ 55 ಲಕ್ಷ ಜನರು ತೊಂದರೆಗೀಡಾದರೆ, 483 ಮಂದಿ ಸಾವನಪ್ಪಿದ್ದರು. ಸದಾ ಶಾಂತವಾಗಿ ಹರಿಯುತ್ತಿದ್ದ ಪೆರಿಯಾರ್ ನದಿ ಒಮ್ಮಿಂದೊಮ್ಮೆಲೆ ರೌದ್ರಾವತಾರ ತಾಳಿದ್ದರಿಂದ, ಕಷ್ಟಪಟ್ಟು ಮಾಡಿದ ಆಸ್ತಿ, ಮನೆ ಎಲ್ಲವೂ ನೀರಿನಲ್ಲಿ ಕೊಚ್ಚಿಹೋಯಿತು. ಉಟ್ಟಬಟ್ಟೆಯಲ್ಲಿ ಮನೆಬಿಟ್ಟು ಹೋದ ಜನ ವಾಪಸ್ ಬಂದು ನೋಡಿದಾಗ ಬರೀ ಅವಶೇಷ.

ಮಾನಸಿಕ ಸಮಸ್ಯೆಗೆ ಕಾರಣವಾದ ಪ್ರವಾಹ

ಪ್ರವಾಹದಿಂದ ಬದುಕು ಬೀದಿಗೆ ಬಿದ್ದಿದ್ದರಿಂದ, ಹೆಚ್ಚು ಪರಿಣಾಮ ಬೀರಿದ್ದು, ಇಳಿವಯಸ್ಸಿನ ಜನ, ಮಹಿಳೆಯರು ಹಾಗೂ ಮಕ್ಕಳ ಮೇಲೆ. ರಾಜ್ಯ ಆರೋಗ್ಯ ಇಲಾಖೆ ಹೇಳುವಂತೆ, ಪ್ರವಾಹದಿಂದಾಗಿ ಹಲವರಲ್ಲಿ ಮಾನಸಿಕ ಒತ್ತಡದ ಸಮಸ್ಯೆ ಕಂಡುಬಂದಿದೆ. ಪ್ರವಾಹದಲ್ಲಿ ಮನೆ, ಆಸ್ತಿ , ಬೆಳೆ, ಜಾನುವಾರುಗಳನ್ನು ಕಳೆದುಕೊಂಡವರಿಗೆ ಮನೋವೈದ್ಯರ ಸಲಹೆಯ ಅಗತ್ಯವಿದೆ. ಈಗಾಗಲೇ 1.85 ಲಕ್ಷ ಮಂದಿಯಲ್ಲಿ ಒತ್ತಡದ ಲಕ್ಷಣಗಳು ಕಂಡುಬರುತ್ತಿದೆ. ಇದರಲ್ಲಿ 1,525 ಮಂದಿಗೆ ಮನೋವೈದ್ಯರ ಸಲಹೆ ಪಡೆಯಲು ಸೂಚಿಸಲಾಗಿದೆ. ಇನ್ನು, ಪ್ರವಾಹ ಸಂಬಂಧಿ ಖಿನ್ನತೆಯಿಂದಾಗಿ ಇದುವರೆಗೂ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ವರದಿ ನೀಡಿದ್ದಾರೆ.

ಇದನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಹಲವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಕೃತಿ ವಿಕೋಪದ ಬಳಿಕ ಮಾನಸಿಕ ಒತ್ತಡದಿಂದ ಬಳಲುತ್ತಿರುವವರಿಗೆ ಪ್ರಾಥಮಿಕ ಚಿಕಿತ್ಸೆ ನೀಡುವ ಸಲುವಾಗಿ ಕೇರಳ ಆರೋಗ್ಯ ಇಲಾಖೆರಾಷ್ಟ್ರೀಯ ಮಾನಸಿಕ ಹಾಗೂ ನರವಿಜ್ಞಾನ ಸಂಸ್ಥೆ ಜೊತೆಗೆ ಕೈಜೋಡಿಸಿದೆ. ಈ ನಿಟ್ಟಿನಲ್ಲಿ 16,671 ಸ್ವಯಂಸೇವಕರಿಗೆ ತರಬೇತಿ ನೀಡಿದೆ.

ಮಾನಸಿಕ ಆರೋಗ್ಯ ಸಂಸ್ಥೆಯ ಮನೋವೈದ್ಯ ಸಾಮಾಜಿಕ ವಿಭಾಗದ ಮುಖ್ಯಸ್ಥರಾದ ಡಾ.ಕೆ ಸೀಕರ್ ಪ್ರಕಾರ, “ಪ್ರಾಕೃತಿಕ ದುರಂತದಿಂದಾಗಿ ಜನರು ಅಘಾತಕ್ಕೊಳಗಾಗಿದ್ದು, ಮಾನಸಿಕ ಒತ್ತಡದ ಲಕ್ಷಣಗಳು ಕಂಡುಬಂದಿರುವ ಜನರಿಗೆ ಮಾನಸಿಕ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ನಾವು ಈಗಾಗಲೇ ಸ್ವಯಂಸೇವಕರಿಗೆ ತರಬೇತಿ ನೀಡಿದ್ದು, ಈ ಸ್ವಯಂಸೇವಕರು ಜನರೊಂದಿಗೆ ಬೆರೆತು, ಅವರಿಗೆ ಅನುಭೂತಿ ನೀಡಬೇಕು. ಒತ್ತಡದ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಮುಂದೆ ಬಹುದೊಡ್ಡ ಮಾನಸಿಕ ಸಮಸ್ಯೆಗೂ ಕಾರಣವಾಗಬಹುದು.” ಸದ್ಯಕ್ಕೆ ನೇಮಕವಾಗಿರುವ ಸ್ವಯಂಸೇವಕರು ಮಹತ್ವದ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದು, ಮಾನಸಿಕ ಒತ್ತಡದಿಂದ ನರಳುತ್ತಿರುವವರಿಗೆ ಸಾಂತ್ವನ ಹೇಳುವ ಕಾರ್ಯದಲ್ಲಿ ತೊಡಗಿದ್ದಾರೆ.

ಸರ್ಕಾರದ ವರದಿಯಂತೆ, ಕೇರಳಾದ್ಯಂತ ಸುಮಾರು 600 ಮಂದಿ ಮನೋವೈದ್ಯರು ಮತ್ತು 400 ಕ್ಲಿನಿಕಲ್ ಮನೋರೋಗ ತಜ್ಞರು ಇದ್ದಾರೆ. ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಹೇಳುವಂತೆ, ದೇಶದಲ್ಲೇ ಅತಿ ಹೆಚ್ಚು ಮಾನಸಿಕ ಆರೋಗ್ಯ ವೃತ್ತಿಪರರನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೂ ಪಾತ್ರವಾಗಿದೆ. ಆರೋಗ್ಯ ಇಲಾಖೆಯ ನಿರಂತರ ಪ್ರಯತ್ನದ ಹೊರತಾಗಿಯೂ ಇನ್ನೂ ಹಲವು ಮಂದಿ ಮಾನಸಿಕ ಒತ್ತಡ ಮತ್ತು ಆತಂಕದಿಂದ ಬಳಲುತ್ತಿದ್ದಾರೆ.

"ನನ್ನ ಮನೆಯನ್ನು ಪುನರ್ ಸ್ಥಾಪಿಸಲು ನಾನು ತುಂಬಾ ಹಣ ಖರ್ಚು ಮಾಡಿದೆ. ಏನೂ ಮಾಡಿದರೂ ಇತ್ತೀಚೆಗೆ ನಿದ್ರೆ ಮಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ," ಎನ್ನುತ್ತಾರೆ ಸಿ ಜಿ ಅನಿಲ್. ಉತ್ತರ ಪರಾವೂರ್‌ನ ನಿವಾಸಿಯಾಗಿರುವ ಅನಿಲ್ ಕೂಡ ಪ್ರವಾಹ ಸಂತ್ರಸ್ಥರಲ್ಲಿ ಒಬ್ಬರು. ಎರ್ನಾಕುಲಂ ಜಿಲ್ಲೆಯಲ್ಲಿ ಭೀಕರ ಪ್ರವಾಹವನ್ನು ಎದುರಿಸಿದ ಪ್ರಾಂತಗಳಲ್ಲಿ ಒಂದಾಗಿರುವ ಉತ್ತರ ಪರವೂರ್‌ನ ವಾನಿಯಕ್ಕಡ ಗ್ರಾಮದ ನಿವಾಸಿ ಅನಿಲ್, ಆಗಸ್ಟ್ 15ರಂದು ಪರಿಹಾರ ಶಿಬಿರಕ್ಕೆ ತೆರಳಿದ್ದರು. “ಆಗಸ್ಟ್ 22ರಂದು ವಾಪಸ್ ಬಂದು ನೋಡಿದರೆ, ಅಂಗಡಿ ಮತ್ತು ಮನೆ ಸಂಪೂರ್ಣ ನಾಶವಾಗಿತ್ತು,” ಎನ್ನುವಾಗ ಅನಿಲ್ ಕಣ್ಣುಗಳಲ್ಲಿ ಭವಿಷ್ಯದ ಚಿಂತೆ ಕಾಣುತ್ತಿತ್ತು.

ಅದೇ ಗ್ರಾಮದ ಶಿಕ್ಷಕಿ ಎಂ ಸಜಿತಾ ಪ್ರಕಾರ, “ಪ್ರವಾಹದ ನಂತರ ಜನರ ವರ್ತನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಗ್ರಾಮದ ಜನರಲ್ಲಿ ಹತಾಶೆ ಮನೆಮಾಡಿದ್ದು, ಚಿಕ್ಕ-ಚಿಕ್ಕ ಸಮಸ್ಯೆಗಳಿಗೂ ಜನರು ಜಗಳವಾಡುತ್ತಾರೆ. ಒಂದೇ ಕುಟುಂಬದಸದಸ್ಯರು ಪರಸ್ಪರ ಒಬ್ಬರನ್ನೊಬ್ಬರು ನಂಬುತ್ತಿಲ್ಲ,” ಎಂಬುದು ಅವರ ಅಭಿಪ್ರಾಯ.

ಉತ್ತರ ಪರವೂರ್‌ನ ಪುರಸಭಾ ಸದಸ್ಯೆ ಕೆ ಎ ವಿದ್ಯಾನಂದನ್ ಕೂಡ ಸಜಿತಾ ಅವರ ಮಾತಿಗೆ ದ್ವನಿಗೂಡಿಸುತ್ತಾರೆ. “ಪ್ರವಾಹದಿಂದ ತೊಂದರೆಗೊಳಗಾದ ಜನರು ಶೀಘ್ರ ಕೋಪಗೊಳ್ಳುವುದನ್ನು ನಾನು ಗಮನಿಸಿದ್ದು, ಕ್ಷಣಾರ್ಧದಲ್ಲಿ ಅವರುಕುಪಿತರಾಗುತ್ತಾರೆ,” ಎನ್ನುತ್ತಾರೆ.

“ಪ್ರವಾಹದಿಂದಾಗಿ ಜಲಾವೃತವಾದ ಮನೆಯನ್ನು ಎಷ್ಟು ಬಾರಿ ಡಿಟರ್ಜೆಂಟ್ ಹಾಕಿ ತೊಳೆದರೂ ಕೆಸರಿನ ವಾಸನೆ ದೂರವಾಗುತ್ತಿಲ್ಲ. ನಮ್ಮ ಹಾಸಿಗೆ, ಬಟ್ಟೆ, ಅಡುಗೆ ಪಾತ್ರೆಗಳು, ಜಾನುವಾರುಗಳು, ಕೋಳಿ, ಹೀಗೆ ಜೀವನೋಪಾಯಕ್ಕೆ ಇದ್ದ ಎಲ್ಲ ದಾರಿಗಳು ಮುಚ್ಚಿವೆ. ಸಾಲ ಮಾಡಿ ಹಾಕಿದ ಬೆಳೆಯೂ ಕೊಚ್ಚಿಹೋಗಿದೆ. ಇದರಿಂದ ಮಾನಸಿಕವಾಗಿ ಒತ್ತಡಕ್ಕೊಳಗಾಗಿರುವುದು ಸಹಜ,” ಎನ್ನುತ್ತಾರೆ ಉತ್ತರ ಪರವೂರ್‌ ನಿವಾಸಿ ವಿದ್ಯಾನಂದನ್.

ಪ್ರವಾಹ ಬಂದ ನಂತರ ಹಲವು ಮಂದಿ ವಿವಿಧ ರೀತಿಯ ಕಾಯಿಲೆಗೆ ತುತ್ತಾಗಿದ್ದಾರೆ. ಮೊದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಫ್ರಾನ್ಸಿಸ್, ಕಳೆದ ಜೂನ್ ತಿಂಗಳಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೊಳಗಾದರು. ಇದಾದ ಬಳಿಕ ಜಾರಿಬಿದ್ದು ಮೊಣಕಾಲು ಮುರಿದುಕೊಂಡರು. ನಿರಂತರವಾಗಿ ಉಂಟಾಗುತ್ತಿರುವ ಸಮಸ್ಯೆಯಿಂದ ಫ್ರಾನ್ಸಿಸ್ ಕುಟುಂಬದ ಆರ್ಥಿಕ ಪರಿಸ್ಥಿತಿ ಬಿಗಾಡಾಯಿಸುತ್ತಿದೆ. “ಪ್ರವಾಹ ಸಂತ್ರಸ್ಥರಿಗಾಗಿ ಸರ್ಕಾರ ನೀಡಿದ 10,000 ರು.ಗಳ ಪೈಕಿ ಸದ್ಯಕ್ಕೆ ಕೈಯಲ್ಲಿ ಕೇವಲ 2,500 ರು. ಉಳಿದಿದೆ. ಹೊಸ ಬೆಡ್ ಖರೀದಿಸಲು ಕೈಯಲ್ಲಿ ಕಾಸಿಲ್ಲ. ಈಗಾಗಲೇ ಕುತ್ತಿಗೆವರೆಗೂ ಸಾಲ ಮಾಡಿದ್ದು, ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಾನು ನೆಲದ ಮೇಲೆಯೇ ಮಲಗುತ್ತೇನೆ,” ಎನ್ನುತ್ತಾರೆ ಫ್ರಾನ್ಸಿಸ್.

ಉತ್ತರ ಪರವೂರ್ ತಾಲೂಕು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪಿ ಎಸ್ ರೋಸಮ್ಮ ಪ್ರಕಾರ, ಪ್ರವಾಹದ ನಂತರ ಕೌನ್ಸಿಲಿಂಗ್ ಅಗತ್ಯ ಇರುವವರ ಸಂಖ್ಯೆ ಹೆಚ್ಚಾಗಿದೆ. “ಘಟನೆಯಿಂದ ಜನರ ಹೃದಯ ಒಡೆದುಹೋಗಿದೆ. ಅದರಲ್ಲಿ ಹೆಚ್ಚಿನವರು ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳು,” ಎನ್ನುತ್ತಾರೆ ರೋಸಮ್ಮ. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಎಂ ಎಫ್ ಪ್ರಸಾದ್ ಜನರ ಮಾನಸಿಕ ಆರೋಗ್ಯ ಪರಿಸ್ಥಿತಿ ಗಂಭೀರವಾಗುವ ಆತಂಕ ವ್ಯಕ್ತಪಡಿಸಿದ್ದಾರೆ. “ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ಸಾಕಷ್ಟು ಬೆಂಬಲ ನೀಡುತ್ತಿವೆ. ಸರ್ಕಾರ ಹಾಗೂ ನಾಗರಿಕರು ತಮ್ಮ ಸಹಕಾರ ನಿಲ್ಲಿಸಿದಾಗ ಮತ್ತೆ ನಿರಾಶ್ರಿತರು ತೊಂದರೆಗೊಳಗಾಗುವ ಸಾಧ್ಯತೆ ಇದೆ,” ಎಂದವರು ಹೇಳಿದ್ದಾರೆ.

ಎರ್ನಾಕುಲಂನ ಸರ್ಕಾರಿ ಜನರಲ್ ಆಸ್ಪತ್ರೆಯ ಮನೋರೋಗ ತಜ್ಞೆ ಡಾ.ಪ್ಯಾರಿ ಜೋಸೆಫ್ ಹೇಳುವಂತೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆ ಇನ್ನೂ ಕೆಲವು ತಿಂಗಳ ನಂತರ ಹೆಚ್ಚಾಗುವ ಸಾಧ್ಯತೆ ಇದೆ. “ಪ್ರವಾಹದಿಂದ ತಾವು ಅನುಭವಿಸಿದ ನಷ್ಟದ ಕುರಿತಂತೆ ಅವರಿಗೆ ತಿಳಿಯಲು ಆರು ತಿಂಗಳು ಬೇಕು. ಹೀಗಾಗಿ ಕೆಲ ತಿಂಗಳ ನಂತರ ಜನರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಂಪೂರ್ಣ ಸಜ್ಜಾಗಿದ್ದೇವೆ,” ಎಂದು ಅವರು ಹೇಳಿದ್ದಾರೆ. ಜನರೊಂದಿಗೆ ಸಂಪರ್ಕದಲ್ಲಿರುವ ಸಲುವಾಗಿ ನಾವು ಕ್ಷೇತ್ರ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಪರಿಸ್ಥಿತಿ ನಿಭಾಯಿಸಲು ಸಾಕಷ್ಟು ಪ್ರಯತ್ನ ಪಡುತ್ತಿರುವುದಾಗಿಯೂ ಹೇಳಿದ್ದಾರೆ.

ಮಕ್ಕಳ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ

ಪ್ರವಾಹದ ನಂತರದ ಸ್ಥಿತಿ ಹೆಚ್ಚಿನ ಪರಿಣಾಮ ಬೀರಿದ್ದು ವಿದ್ಯಾರ್ಥಿಗಳ ಮೇಲೆ. ಹೀಗಾಗಿ, ವಿದ್ಯಾರ್ಥಿಗಳ ಮನಪರಿವರ್ತನೆಗಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಕೇರಳ ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿದೆ. “ಪ್ರವಾಹದ ರೌದ್ರತೆ ಕಂಡು ನಲುಗಿರುವ ಮಕ್ಕಳನ್ನು ಸಹಜ ಸ್ಥಿತಿಗೆ ತರಲು ಯತ್ನಿಸಲಾಗುತ್ತಿದೆ. ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುವ ಸಲುವಾಗಿ ಆರ್ಟ್ ಥೆರಪಿ ಮತ್ತು ಪ್ಲೇ ಚಿಕಿತ್ಸೆ ನೀಡಲಾಗುತ್ತಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಪ್ರವಾಹ ಸಂತ್ರಸ್ಥ ಮಕ್ಕಳ ಮನಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಹೆಚ್ಚು ಶ್ರಮದ ಅಗತ್ಯವಿದೆ. ಅವರ ಮನಸ್ಸಿನ ನೋವನ್ನು ವರ್ಣಚಿತ್ರ ಅಥವಾ ನೃತ್ಯದ ಮೂಲಕ ಹೊರಹಾಕಲು ಪ್ರೋತ್ಸಾಹಿಸಬೇಕು,” ಎಂದು ಕೇರಳದ ಅಪನಾಲಾಯ ಸಂಸ್ಥೆಯಮಾಜಿ ನಿರ್ದೇಶಕಿ ಲೀನಾ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More