ಸ್ವಚ್ಛ ಭಾರತ | ಬಹಿರ್ದೆಸೆ ಮುಕ್ತ ಜಿಲ್ಲೆಯಲ್ಲಿ ಆತ್ಮಹತ್ಯೆಗೆ ದಾರಿಯಾದ ಶೌಚಾಲಯ

ತಮಿಳುನಾಡಿನ ಸೇಲಂ ಜಿಲ್ಲೆಯಯ ಸೆಲ್ವದೊರೈ ಮತ್ತು ದೀಪಾರದು ಪ್ರೇಮ ವಿವಾಹ. ಆದರೆ, ಶೌಚಾಲಯವಿಲ್ಲದ ಮನೆಗೆ ಬರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದಾಗ ನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತ ‘ಇಂಡಿಯಾ ಟುಡೆ’ ವರದಿಯ ಭಾವಾನುವಾದ ಇಲ್ಲಿದೆ

ತಮಿಳುನಾಡಿನ ಸೇಲಂ ಜಿಲ್ಲೆ ಹೆಸರಿಗೆ ಮಾತ್ರ ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಣೆಯಾಗಿದೆ. ಸ್ವಚ್ಛ ಭಾರತ ಯೋಜನೆಯ ಯಶಸ್ಸನ್ನು ಸೂಚಿಸುವ ಇಂತಹ ‘ಬಹಿರ್ದೆಸೆ ಮುಕ್ತ’ ಜಿಲ್ಲೆಗಳು ರಾಷ್ಟ್ರದಲ್ಲಿ ಬಹಳಷ್ಟು ಸಿಗುತ್ತವೆ. ಇಂತಹ ಯಶಸ್ವಿ ‘ಬಹಿರ್ದೆಶೆ ಮುಕ್ತ’ ಜಿಲ್ಲೆಗಳಲ್ಲಿ ಸ್ವಚ್ಛತೆ, ಶೌಚಾಲಯ ಮತ್ತು ನೈರ್ಮಲ್ಯಗಳ ಕಾರಣದಿಂದ ಜನರು ಸಾವನ್ನಪ್ಪುವುದು ದೊಡ್ಡ ಸುದ್ದಿಯಾಗುವುದೇ ಇಲ್ಲ. ಕೊಟ್ಟಗೌಂಡಪಟ್ಟಿಯ ನಿವಾಸಿ ಸೆಲ್ವದೊರೈ ಅವರದೂ ಅಂತಹುದೇ ಪ್ರಕರಣ.

ನವವಧುವನ್ನು ಖುಷಿಯಿಂದ ಮನೆಗೆ ಕರೆದುಕೊಂಡು ಬಂದ ಸೇಲಂ ಜಿಲ್ಲೆಯ ಓಮಲೂರು ಬಳಿಯ ಕೊಟ್ಟಗೌಂಡಪಟ್ಟಿಯ ನಿವಾಸಿ ಸೆಲ್ವದೊರೈ, ಆಕೆಯ ಜೊತೆಗೆ ಒಂದು ದಿನವೂ ಸರಿಯಾಗಿ ಜೀವನ ನಡೆಸಲು ಸಾಧ್ಯವಾಗಿಲ್ಲ. ಇದೇ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣ ನಡೆದಿರುವುದು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಣೆಯಾಗಿರುವ ಸೇಲಂ ಜಿಲ್ಲೆಯಲ್ಲಿ. ದಂಪತಿಗಳ ನಡುವೆ ಸಮಸ್ಯೆ ಸೃಷ್ಟಿಯಾಗಲು ಮೂಲ ಕಾರಣವಾಗಿದ್ದೂ ಮನೆಯಲ್ಲಿ ಶೌಚಾಲಯ ಇಲ್ಲದೆ ಇರುವುದು!

ಚೆನ್ನೈನ ಸೇಲಂ ಜಿಲ್ಲೆ ಓಮಲೂರು ಬಳಿಯ ಕೊಟ್ಟಗೌಂಡಪಟ್ಟಿಯ ನಿವಾಸಿ ಸೆಲ್ವದೊರೈ ಮತ್ತು ದೀಪಾರದು ಪ್ರೇಮ ವಿವಾಹ. ಪರಸ್ಪರ ಪ್ರೀತಿಸುತ್ತಿದ್ದ ಆ ಜೋಡಿಯ ಪ್ರೀತಿಗೆ ಪೋಷಕರು ಅಸ್ತು ಎಂದ ಕಾರಣ ಕಳೆದ ಸೆಪ್ಟೆಂಬರ್ 23ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮನ ತುಂಬಿದ್ದ ಪತ್ನಿಯನ್ನು ಮನೆ ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದ ಆತ ಮದುವೆಯಾದ ದಿನವೇ, ತನ್ನೂರಿಗೆ ಪತ್ನಿ ಸಮೇತಆಗಮಿಸಿದ್ದಾನೆ. ಆದರೆ, ನೂರಾರು ಕನಸುಗಳೊಂದಿಗೆ ಮೊದಲನೇ ಬಾರಿಗೆ ಗಂಡನ ಮನೆಗೆ ಆಗಮಿಸಿದ ನವವಧುವಿನ ಮನಸು ಮುರಿದು ಹೋಗಲು ಕಾರಣವಾಗಿದ್ದು ‘ಶೌಚಾಲಯ.’ ಸೆಪ್ಟೆಂಬರ್ 23ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿ, ಅದೇ ದಿನ ಕೊಟ್ಟಗೌಂಡಪಟ್ಟಿಯಲ್ಲಿರುವ ತಮ್ಮ ನಿವಾಸಕ್ಕೆ ಬಂದಿದ್ದಾರೆ.

ಆದರೆ, ಪತಿಯ ಮನೆಯಲ್ಲಿ ಶೌಚಾಲಯವಿಲ್ಲದಿರುವುದನ್ನು ಕಂಡು ದಂಗಾದ ನವವಧು, ಬಹಿರ್ದೆಸೆಗೆ ಹೋಗಲು ಹಿಂದೇಟು ಹಾಕಿದ್ದಾಳೆ. ತಕ್ಷಣವೇ ಶೌಚಾಲಯ ನಿರ್ಮಾಣವಾಗಬೇಕು; ಅಲ್ಲಿಯವರೆಗೆ ತಾವು ಹೊಟೇಲ್‌ನಲ್ಲಿ ವಾಸವಿರೋಣ ಎಂದು ದೀಪಾ ಪತಿ ಬಳಿ ಹೇಳಿದ್ದಾಳೆ. ಆದರೆ, ಪತ್ನಿಯ ವಾದಕ್ಕೆ ಸೆಲ್ವದೊರೈ ನಿರಾಕರಿಸಿದ್ದ. ಹೀಗಾಗಿ ಸಿಟ್ಟಾದ ಆಕೆ ತವರಿಗೆ ಮರಳಿದ್ದಾಳೆ.

ಇದಾದ ಬಳಿಕ ದೀಪಾಳ ಮನೆಗೆ ತೆರಳಿದ ಸೆಲ್ವದೊರೈ ಆಕೆಯ ಮನವೊಲಿಸಲು ಹರಸಾಹಸಪಟ್ಟಿದ್ದಾನೆ. ಆದರೆ, ಆಕೆ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡುವವರೆಗೂ ಬರುವುದಿಲ್ಲವೆಂದು ಹಠ ಹಿಡಿದಿದ್ದಳು. ಬೇಸರಗೊಂಡ ಸೆಲ್ವದೊರೈ ಮರಳಿ ತನ್ನೂರಿಗೆ ಬಂದಿದ್ದಾನೆ. ಸೆಪ್ಟೆಂಬರ್ 27ರಂದು ಗುರುವಾರ ಆತನ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ : ಅನ್ನಪೂರ್ಣ ಪ್ರಕರಣ ಮುಚ್ಚಿಹಾಕುತ್ತಿವೆಯೇ ದಾವಣಗೆರೆ ಜಿಲ್ಲಾಡಳಿತ ಮತ್ತು ಪೊಲೀಸ್?

ಘಟನೆ ಕುರಿತಂತೆ ವಿವರಿಸಿರುವ ಮೃತನ ಸಂಬಂಧಿಕರು, “ಬುಧವಾರ ಪತ್ನಿಯ ಮನೆಯಿಂದ ಬರುವಾಗಲೇ ಸೆಲ್ವದೊರೈ ಮನಸ್ಸು ಖೇದಗೊಂಡಿತ್ತು. ಗುರುವಾರ ಆತನ ಮೃತದೇಹವನ್ನು ಬಾವಿಯಿಂದ ಹೊರತೆಗೆಯಲಾಗಿದೆ,” ಎಂದಿದ್ದಾರೆ.

ಶೌಚಾಲಯದ ಕಾರಣಕ್ಕೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದ ಕೂಡಲೇ ಜಿಲ್ಲಾಧಿಕಾರಿಗಳು ಕೊಟ್ಟಗೌಂಡಪಟ್ಟಿ ಗ್ರಾಮದ ಶೌಚಗೃಹಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಲು ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ವಿಶೇಷವೇನೆಂದರೆ, ಅಧಿಕೃತ ಮಾಹಿತಿಯ ಪ್ರಕಾರ ಸೇಲಂ ಜಿಲ್ಲೆಯು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ಎನಿಸಿಕೊಂಡಿದೆ. ಜಿಲ್ಲೆಯಲ್ಲಿ ಸ್ವಚ್ಛ ಭಾರತ್ ಯೋಜನೆಯ ಅಡಿಯಲ್ಲಿ ಸುಮಾರು 2 ಲಕ್ಷ ಶೌಚಾಲಯಗಳನ್ನುನಿರ್ಮಿಸಲಾಗಿದೆ. ಅಲ್ಲದೆ, ಘಟನೆ ನಡೆದಿರುವ ಗ್ರಾಮದಲ್ಲಿ ಸಾಮೂಹಿಕ ಶೌಚಾಲಯವಿರುವ ಬಗ್ಗೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಸ್ವಚ್ಛ ಭಾರತ ಅಭಿಯಾನದ ಯಶಸ್ಸನ್ನು ಕೊಂಡಾಡುತ್ತಿರುವ ಸಂದರ್ಭದಲ್ಲಿ ದೇಶದಲ್ಲಿ ಶೌಚಾಲಯ ಸಮಸ್ಯೆಯಿಂದಾಗಿ ‘ಸಾವು’ ವರದಿಯಾಗುತ್ತಿರುವುದು ದುರದೃಷ್ಟಕರ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More