ವಿಡಿಯೋ | ಗುಡ್ಡದೊಳಗಿನ ನೀರಿನ ಸೆಲೆ ಹುಡುಕುವ ಸುರಂಗ ಮಾರ್ಗದ ಸಾಹಸ

ಕಾಸರಗೋಡು ಜಿಲ್ಲೆಯಲ್ಲಿ ಮುಖ್ಯವಾಗಿ ಪಡ್ರೆ, ಸ್ವರ್ಗ, ಬಾಯಾರು, ಪೊಸಡಿಗುಂಪೆ ಮೊದಲಾದ ಪ್ರದೇಶಗಳಲ್ಲಿ ಅಂತರ್ಜಲವನ್ನು ಹೆಚ್ಚಿಸಲು ಮತ್ತು ಸತತ ನೀರಿನ ಸೆಲೆಯಾಗಿ ಬಳಸಿಕೊಳ್ಳಲು ಹಲವು ಪ್ರಯೋಗಗಳು ನಡೆದಿವೆ. ಈ ಪ್ರಯತ್ನಗಳಲ್ಲಿ ಬಹಳ ಯಶಸ್ವಿಯಾದ ನೀರಿನ ಮೂಲಗಳೇ ಸುರಂಗಗಳು

ರಾಜ್ಯದಲ್ಲಿ ಕಡಿಮೆ ಮಳೆ ಬಿದ್ದಿರುವ ಕಾರಣದಿಂದ ೨೩ ಜಿಲ್ಲೆಗಳನ್ನು ಬರಗಾಲ ಪೀಡಿತ ಜಿಲ್ಲೆಗಳೆಂದು ಈಗಾಗಲೇ ಘೋಷಿಸಲಾಗಿದೆ. ಹೀಗಾಗಿ, ಮಳೆಯ ಕೊರತೆ ಇರುವ, ಕಲ್ಲುಗಳಿಂದಲೇ ಕೂಡಿದ ಪ್ರದೇಶವೊಂದು ತನ್ನದೇ ರೀತಿಯಲ್ಲಿ ಪಾರಂಪರಿಕ ನೀರಿನ ಸೆಲೆಗಳ ಮೂಲಕ ನಳನಳಿಸುವ ಗದ್ದೆ, ತೋಟಗಳಿಂದ ಸಂಪದ್ಭರಿತವಾಗಿರುವ ಉದಾಹರಣೆಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು. ಕರ್ನಾಟಕಕ್ಕೆ ಸೇರಬೇಕೆಂದು ಬಹಳ ಹೋರಾಡಿ ವಿಫಲವಾದ ಕಾಸರಗೋಡು ಜಿಲ್ಲೆಯೇ ಆ ಪ್ರದೇಶ.

ಕರ್ನಾಟಕ ಮತ್ತು ಕೇರಳದ ಗಡಿ ಜಿಲ್ಲೆಯಾದ ಕಾಸರಗೋಡು ಮೂಲತಃ ಗುಡ್ಡಗಾಡು ಪ್ರದೇಶ. ಈ ಊರಿನಲ್ಲಿ ನೀರಿನದೇ ಸಮಸ್ಯೆ. ಮಳೆಗಾಲದಲ್ಲಿ ನದಿ, ತೊರೆಗಳು ತುಂಬಿಹರಿದರೆ, ಬೇಸಗೆಯಲ್ಲಿ ಕಲ್ಲುಗುಡ್ಡೆಗಳಲ್ಲಿ ನೀರಿಗಾಗಿ ಹುಡುಕಾಡಬೇಕು. ಹೀಗಾಗಿ, ಅಂತರ್ಜಲವನ್ನು ಕೊರೆದು ನೀರನ್ನು ಮೇಲೆತ್ತಲೇಬೇಕಾದ ಸ್ಥಿತಿ. ೧೦೮೯-೯೦ರ ದಶಕದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮುಖ್ಯವಾಗಿ ಪಡ್ರೆ, ಸ್ವರ್ಗ, ಬಾಯಾರು, ಪೊಸಡಿಗುಂಪೆ ಮೊದಲಾದ ಪ್ರದೇಶಗಳಲ್ಲಿ ಅಂತರ್ಜಲವನ್ನು ಹೆಚ್ಚಿಸಲು ಮತ್ತು ಸತತ ನೀರಿನ ಸೆಲೆಯಾಗಿ ಬಳಸಿಕೊಳ್ಳಲು ಹಲವು ಪ್ರಯೋಗಗಳು ನಡೆದವು. ಶ್ರೀಪಡ್ರೆಯಂತಹ ಖ್ಯಾತ ವ್ಯಕ್ತಿಗಳು ಈ ಪ್ರಯೋಗಕ್ಕೆ ಬೆನ್ನೆಲುಬಾಗಿ ನಿಂತರು.

ಹೀಗೆ ‘ಸುರಂಗ’ ಎನ್ನುವ ನೀರನ್ನು ಪಡೆಯುವ ವ್ಯವಸ್ಥೆಯೊಂದು ಈ ಪ್ರಾಂತದಲ್ಲಿ ಅಭಿವೃದ್ಧಿಯಾಯಿತು. 1980ರ ದಶಕದಲ್ಲಿ ಕಾಸರಗೋಡು ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಬಹಳಷ್ಟು ಗಿರಿಜನರು ಬಡ ಕೂಲಿಗಾರರು. ಇಂದಿರಾ ಗಾಂಧಿ ಸರ್ಕಾರ ಗಿರಿಜನರಿಗೆ ಮತ್ತು ಶೋಷಿತ ವರ್ಗಗಳಿಗೆ ಎಕರೆಗಟ್ಟಲೆ ಪ್ರದೇಶಗಳನ್ನು ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಿದ ಸಮಯದಲ್ಲಿ ಈ ಗಿರಿಜನರು ಗುಡ್ಡಗಳಲ್ಲಿ ತಮ್ಮ ಮನೆಗಳನ್ನು ಕಟ್ಟಿಕೊಂಡು ಸುತ್ತಲಿನ ಜಾಗಕ್ಕೆ ಬೇಲಿ ಹಾಕಿಕೊಂಡು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ಆದರೆ, ಗುಡ್ಡಗಳಲ್ಲಿ ಗೇರು ಬೀಜ ಹೊರತಾಗಿ ಇನ್ಯಾವ ರೀತಿಯ ಬೆಳೆ ಬೆಳೆಯಬೇಕು ಎನ್ನುವ ಸ್ಪಷ್ಟತೆಯೂ ಅವರಲ್ಲಿರಲಿಲ್ಲ. ಗುಡ್ಡದ ತಪ್ಪಲಿನಲ್ಲಿರುವ ಗದ್ದೆಗಳಲ್ಲಿ ಕೆಲಸ ಮಾಡಿ ದಿನಗೂಲಿ ಪಡೆಯುವುದೊಂದೇ ತಿಳಿದಿತ್ತು. ಅಂತಹ ಸಂದರ್ಭದಲ್ಲಿ ಸುರಂಗದ ಕಲ್ಪನೆ ಈ ಪ್ರಾಂತದಲ್ಲಿ ಬೆಳೆಯಿತು. ಗುಡ್ಡಗಳಲ್ಲಿ ತೋಟ ಬೆಳೆಸಬೇಕು ಅಥವಾ ಕೃಷಿ ಮಾಡಬೇಕು ಎಂದರೆ ನೀರು ಬೇಕು. ನೀರು ಪಡೆಯಲು ಬಾವಿ ಕೊರೆಯಬೇಕೆಂದರೆ ಕೆಲಸಗಾರರಿಗೆ ಸಂಬಳ ಕೊಟ್ಟು ಕರೆಸಬೇಕು. ಈ ಸಮಸ್ಯೆಯೇ ಇಲ್ಲದೆ ಗುಡ್ಡಗಳಿಗೆ ರಂಧ್ರ ಕೊರೆದು (ಸುರಂಗ) ನೀರು ಪಡೆಯುವುದು ಈ ಕೂಲಿಗಾರರಿಗೆ ಸುಲಭ ವಿಧಾನವಾಗಿ ಕಂಡುಬಂತು. ಹೀಗೆ, ಒಬ್ಬೊಬ್ಬರೇ ೨೦೦ ಅಡಿಗೂ ಉದ್ದದ ಸುರಂಗಗಳನ್ನು ಕೊರೆದು ನೀರು ಪಡೆದ ಉದಾಹರಣೆ ಈ ಪ್ರಾಂತ್ಯದಲ್ಲಿ ಸಿಗುತ್ತದೆ.

ಇದನ್ನೂ ಓದಿ : ವಿಡಿಯೋ | ಪ್ರಾಕೃತಿಕ ‘ಸ್ವರ್ಗ’ದಲ್ಲಿದ್ದಾರೆ ಪಾಡ್ದನ ಪಾಡುವ ಮೆಚ್ಚು

೮೦ರ ದಶಕದಿಂದಲೇ ಸುರಂಗ ಕೊರೆಯಲು ಆರಂಭಿಸಿ ಸುಮಾರು ೩೦೦ರ ಸಮೀಪ ಸುರಂಗಗಳನ್ನು ಕೊರೆದ ವ್ಯಕ್ತಿಯೊಬ್ಬರು ಕಾಸರಗೋಡು ಜಿಲ್ಲೆಯ ಪೊಸಡಿ ಗುಂಪೆ ಗುಡ್ಡ ಪ್ರದೇಶದಲ್ಲಿ ನೆಲೆಸಿದ್ದಾರೆ. ಸದ್ಯ ೭೦ರ ಪ್ರಾಯದ ಅಪ್ಪಯ್ಯಣ್ಣರಿಗೆ ಮಾತು ಮತ್ತು ಹಿಂದಿನ ನೆನಪು ಬಹಳ ಕಷ್ಟ. ಹಾಗಿದ್ದರೂ ತಮಗೆ ನೆನಪಿದ್ದಷ್ಟು ಸುರಂಗಗಳ ಕತೆಯನ್ನು ‘ದಿ ಸ್ಟೇಟ್’ ಜೊತೆಗೆ ಅವರು ಹಂಚಿಕೊಂಡಿದ್ದಾರೆ. ಅಪ್ಪಯ್ಯಣ್ಣನವರು ಮಹಾರಾಷ್ಟ್ರ ಮತ್ತು ಗೋವಾಗಳ ಗುಡ್ಡ ಪ್ರದೇಶಗಳಿಗೂ ಹೋಗಿ ಸುರಂಗಗಳನ್ನು ಕೊರೆದ ನಿಸ್ಸೀಮರು. ಈಗಲೂ ಅವರಿಗೆ ಸುರಂಗ ಕೊರೆದುಕೊಡುವಂತೆ ಆಹ್ವಾನಗಳು ಬರುತ್ತಲೇ ಇವೆ. ಆದರೆ, ವಯಸ್ಸು ಅವರನ್ನು ತಡೆಯುತ್ತಿದೆ. ವೃದ್ಧಾಪ್ಯದ ಅನಾರೋಗ್ಯದಿಂದಾಗಿ ಅಯ್ಯಪ್ಪಣ್ಣ ಸದ್ಯ ಸುರಂಗ ಕೊರೆಯುವ ಕೆಲಸವನ್ನು ಬಿಟ್ಟು ೨-೩ ವರ್ಷಗಳೇ ಆಗಿವೆ. ಆದರೆ, ಅವರು ಕೊರೆದ ಅತಿ ಉದ್ದದ ಸುರಂಗ ಅವರ ಮನೆಯ ಹಿತ್ತಿಲಲ್ಲೇ ಇರುವ ಗುಡ್ಡದಲ್ಲಿದೆ. ತಮ್ಮ ಮನೆಗೆ ನೀರು ಹನಿಸಲು ಅವರು ಎರಡು ಸುರಂಗಗಳನ್ನು ಸ್ವತಃ ಕೊರೆದಿದ್ದಾರೆ. ಅದರಲ್ಲಿ ಒಂದು ಸುರಂಗ ಸುಮಾರು ೨೮೦ ಕೋಲುಗಳಷ್ಟು ಉದ್ದವಿದೆ. ಒಂದು ಸುರಂಗವು ಮನೆಯ ನೀರಿನ ಸಮಸ್ಯೆಯನ್ನು ನೀಗಿದರೆ, ಮತ್ತೊಂದು ಸುರಂಗ ಈಗ ಅವರು ಬೆಳೆಸಿದ ಅಡಿಕೆ ಮತ್ತು ಬಾಳೆ ತೋಟಕ್ಕೆ ನೀರು ಒದಗಿಸುತ್ತಿದೆ.

ಅಯ್ಯಪ್ಪಣ್ಣ ಒಂದು ಉದಾಹರಣೆಯಷ್ಟೇ. ಈ ಪ್ರಾಂತದಲ್ಲಿ ಅಯ್ಯಪ್ಪಣ್ಣನಂತೆ ಸುರಂಗ ಕೊರೆಯುವ ಬಹಳಷ್ಟು ಮಂದಿ ಇದ್ದಾರೆ. “ಇಲ್ಲಿ ಬಾವಿ ತೆರೆದರೆ ನೀರು ಸಿಗುವ ಖಾತರಿ ಇಲ್ಲ. ಆದರೆ, ಸುರಂಗ ತೆರೆದರೆ ಖಂಡಿತ ನೀರು ಸಿಗುತ್ತದೆ. ನಾನು ನಮ್ಮ ಮನೆಗಾಗಿ ಒಂದು ಸುರಂಗ ಕೊರೆದಿದ್ದೇನೆ. ಈಗ ಮತ್ತೊಂದು ಸುರಂಗದ ಕೆಲಸ ಮಾಡುತ್ತಿದ್ದೇನೆ. ನಾನೊಬ್ಬನೇ ಈ ಸುರಂಗಕ್ಕಾಗಿ ಕೆಲಸ ಮಾಡಿದ್ದೇನೆ. ನಾವು ಸಂಬಳ ಕೊಟ್ಟು ಬೇರೆಯವರನ್ನು ಕೆಲಸಕ್ಕೆ ಇಡುವಷ್ಟು ಶ್ರೀಮಂತರಲ್ಲ. ಹೀಗಾಗಿ, ಸಮಯ ಸಿಕ್ಕಾಗೆಲ್ಲ ಸುರಂಗದ ಕೆಲಸ ಮಾಡುತ್ತಿದ್ದೇನೆ,” ಎಂದು ಸ್ವರ್ಗದ ನಿವಾಸಿ ರಾಮ ಅಭಿಪ್ರಾಯಪಡುತ್ತಾರೆ. ರಾಮ ತಮ್ಮ ಮನೆಗಾಗಿ ಎರಡು ಸುರಂಗಗಳನ್ನು ಕೊರೆದಿದ್ದಾರೆ. ಮನೆವಾರ್ತೆ ಮತ್ತು ಜಮೀನಿಗೂ ಅದೇ ಸುರಂಗಗಳ ನೀರು ಬಳಸುತ್ತಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More