ಕಂಬದ ಮ್ಯಾಲಿನ ಗೊಂಬಿಗಳ ಕತೆ ಹೇಳುವ ಉಡುಪಿಯ ಹಸ್ತಶಿಲ್ಪ ಗ್ರಾಮ

ಉಡುಪಿಯ ಹಸ್ತಶಿಲ್ಪ ಗ್ರಾಮದಲ್ಲಿ ಪರಂಪರೆಯ ಹಾಡು ಗುನುಗುತ್ತಿವೆ. ಇದಕ್ಕೆ ಕಾರಣವಾದವರು ವಿಜಯನಾಥ ಶೆಣೈ. ಏಷ್ಯಾದ ಸಾಂಸ್ಕೃತಿಕ ವಿದ್ಯಮಾನಗಳ ಕುರಿತು ಬರೆಯುವ ಲೇಖಕಿ ಮಾರ್ಗೊಟ್ ಕೊಹೆನ್, ‘ಫಸ್ಟ್ ಪೋಸ್ಟ್’ ಜಾಲತಾಣಕ್ಕಾಗಿ ಬರೆದ ವರದಿಯ ಭಾವಾನುವಾದ ಇದು

ವಿಜಯನಾಥ ಶೆಣೈ ಅವರು ‘ವಸ್ತು ಸಂಗ್ರಹಾಲಯ’ ಎಂಬ ಕಲ್ಪನೆಯನ್ನು ನಂಬಿದವರಾಗಿರಲಿಲ್ಲ. ಗಾಜಿನ ಹಿಂಭಾಗದಲ್ಲಿರುವ ಅಮೂಲ್ಯ ವಸ್ತುಗಳ ಬಗ್ಗೆ ಅವರು ತಲೆಕೆಡಿಸಿಕೊಂಡವರಲ್ಲ. ಆದರೆ ಆಡಿಯೋ ಟೂರ್, ಸ್ಮಾರ್ಟ್‌ಫೋನ್ ಅಪ್ಲಿಕೇಷನ್‌ಗಳು ಹಾಗೂ ಗ್ಯಾಜೆಟ್‌ಗಳ ಮೂಲಕ ನೋಡುಗರ ಅನುಭವವನ್ನು ವಿಸ್ತರಿಸಿದರು.

ಶೆಣೈ ಕೂಡ ಎಲ್ಲರಂತೆ ಛಲ ಬಿಡದ ಸಂಗ್ರಾಹಕರಾಗಿದ್ದರು. ಅವರ ಸಂಗ್ರಹದಲ್ಲಿ ಹಳೆಯ ಹಿತ್ತಾಳೆ ಪಾತ್ರೆಗಳಿಂದ ಹಿಡಿದು ಸೋಡಾ ಯಂತ್ರದವರೆಗೆ ಏನೆಲ್ಲ ಉಂಟು. ಪಾತ್ರೆಗಳ ವ್ಯಾಪಾರ ಮಾಡುತ್ತಿದ್ದ, ಆಯುರ್ವೇದ ಮದ್ದು ನೀಡುತ್ತಿದ್ದ ಉಡುಪಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ 1934ರಲ್ಲಿ ಜನಿಸಿದ ಶೆಣೈ, ದಕ್ಷಿಣ ಕನ್ನಡದ ಭವ್ಯ ಪರಂಪರೆಗೆ ಮಾರುಹೋದರು. ಆಧುನಿಕತೆ ತೋರುತ್ತಿದ್ದ ನಿರ್ಲಕ್ಷ್ಯ ಅವರನ್ನು ಸಿಟ್ಟೆಗೇಳುವಂತೆ ಮಾಡುತ್ತಿತ್ತು. ಕನ್ನಡ ಜಿಲ್ಲೆಗಳ ಅಡುಗೆ ರುಚಿ ಗೊತ್ತಿಲ್ಲದ ಮಾಣಿ ಕೂಡ ಅವರ ಸಿಟ್ಟಿಗೆ ತುತ್ತಾಗುತ್ತಿದ್ದ. ಅವರ ಸೆಡವು ಒಮ್ಮೊಮ್ಮೆ ಬಹಿರಂಗವಾಗಿ, ಮತ್ತೊಮ್ಮೆ ಅಂತರಂಗದಲ್ಲಿ ಕುದಿಯುತ್ತಿತ್ತು. ಆದರೆ, ತಮಗೆ ಸರಿಹೊಂದಿದವರು ಸಿಕ್ಕಾಗ ಶೆಣೈ ತೋರುತ್ತಿದ್ದ ಉದಾರತೆಗೆ ಕೊರತೆ ಇರಲಿಲ್ಲ. ಅಂತಹವರೊಡನೆ ಗಂಟೆಗಟ್ಟಲೆ ಹರಟುತ್ತಿದ್ದುದೇ ಅಲ್ಲದೆ, ಹಸ್ತಶಿಲ್ಪ ಗ್ರಾಮವನ್ನು ಸುತ್ತಾಡಿ ಬನ್ನಿ ಎಂಬ ಹುಕುಂ ಕೂಡ ಹೊರಡಿಸುತ್ತಿದ್ದರು.

ದೇಸಿ ವಾಸ್ತುಶಿಲ್ಪ ಅವರ ಸೌಂದರ್ಯಪ್ರಜ್ಞೆಯ ಪ್ರಮುಖ ಭಾಗವಾಗಿತ್ತು. ಹಲಸಿನ ಮರದ ಕೆತ್ತನೆಯಿಂದ ಹಿಡಿದು ಕುಸುರಿ ಕೆಲಸದ ಛಾವಣಿಗಳವರೆಗೆ, ಕಲೆಯ ಜೀವತಳೆದಂತಿದ್ದ ಕಿಟಕಿಗಳವರೆಗೆ ಅವರ ಸೌಂದರ್ಯದ ಒಳಚಾಚುಗಳು ವಿಸ್ತರಿಸಿಕೊಂಡಿದ್ದವು. 80-90ರ ದಶಕದಲ್ಲಿ ಹಳೆಯ ಮನೆಗಳು ಉರುಳಿ ಕಾಂಕ್ರಿಟ್ ಭವನಗಳು ತಲೆ ಎತ್ತತೊಡಗಿದಂತೆ ಅದನ್ನವರು ನೋಡದಾದರು; ಊರೂರು ಅಲೆಯುತ್ತ ಪಾಳುಬಿದ್ದ ಕಟ್ಟಡಗಳನ್ನು ಗಮನಿಸತೊಡಗಿದರು. ಮನೆಗಳ ಚರಿತ್ರೆಯನ್ನು ಗ್ರಹಿಸುವುದರ ಜೊತೆಗೆ ಅವುಗಳ ಸಂರಕ್ಷಣೆ ಮಾಡುವುದು ಹೇಗೆ ಎಂಬುದರತ್ತ ದೃಷ್ಟಿ ನೆಟ್ಟರು. ಹಲವೆಡೆ ಅವರಿಗೆ ಸ್ವಾಗತ ದೊರೆಯಿತು. ಕೆಲವೆಡೆ ಇವರೇ ಮುಂದೆ ನಿಂತು ಸಂರಕ್ಷಣೆ ಕೈಗೊಂಡರು.

ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ ಶೆಣೈ, ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದವರಲ್ಲ. ಆ ದಿನಗಳನ್ನು ಅವರ ಸಹೋದ್ಯೋಗಿ ಆಗಿದ್ದ ಮಿಲಿಂದ್ ನಾಯಕ್ ಹೀಗೆ ಸ್ಮರಿಸುತ್ತಾರೆ: “ಅವರು ಕಚೇರಿಗೆ ಯಾವಾಗಲೂ ತಡವಾಗಿ ಬರುತ್ತಿದ್ದರು. ನಾನು ಅವರೆಲ್ಲ ಕೆಲಸವನ್ನು ನೋಡಿಕೊಳ್ಳುತ್ತಿದ್ದೆ. ಆಗಾಗ ಬಂದು ಕಡತಗಳಿಗೆ ಸಹಿ ಹಾಕುತ್ತಿದ್ದರು.”

ನಂತರ ಶೆಣೈ ಅವರೊಂದಿಗೆ ನಾಯಕ್ ಅವರೂ ಸಾಥ್ ನೀಡಿದರು. ಬೆಂಗಳೂರಿನಲ್ಲಿ ಕಲಾವಿದರಾಗಿ ಗುರುತಿಸಿಕೊಂಡ ನಾಯಕ್, ತಮ್ಮ ಬಾಸ್ ಜೊತೆ ಅಲೆಯದ ಜಾಗಗಳೇ ಇಲ್ಲ. ಪಾಶ್ಚಾತ್ಯ ತತ್ವಶಾಸ್ತ್ರದಿಂದ ಹಿಡಿದು ಹಳ್ಳಿಗಾಡಿನ ಜನಪದ ಕತೆಯವರೆಗೆ ಅವರಿಬ್ಬರ ನಡುವೆ ಅನೇಕ ಸಂಗತಿಗಳು ಬಂದುಹೋಗುತ್ತಿದ್ದವು. ಹಾಗೆ, ಪಾರಂಪರಿಕ ವಸ್ತುಗಳನ್ನು ಸಂಗ್ರಹಿಸಲು ಅವರು ಬ್ಯಾಂಕಿನ ಯಾವುದೇ ವಾಹನವನ್ನು ಯಾವುದೇ ಸಮಯದಲ್ಲಿ ಕೊಂಡುಹೋಗುವ ಸೌಲಭ್ಯ ಕಲ್ಪಿಸಲಾಗಿತ್ತು.

ಒಂದು ಹಂತದಲ್ಲಿ ಪಾರಂಪರಿಕ ಕಟ್ಟಡಗಳ ಜನಪ್ರಿಯತೆ ಹೆಚ್ಚಿಸಲು ಸಿನಿಮಾವನ್ನು ಬಳಸಿಕೊಳ್ಳಬಹುದು ಎಂದು ಶೆಣೈ ಅವರಿಗೆ ಅನ್ನಿಸಿತು. ಹೀಗಾಗಿ, ‘ಉತ್ಸವ್’ ಚಿತ್ರವನ್ನು ಹಲ್ಸನಾಡಿನ ಮನೆಯೊಂದರಲ್ಲಿ ಚಿತ್ರೀಕರಿಸಲು ನಿರ್ದೇಶಕ ಗಿರೀಶ ಕಾರ್ನಾಡರನ್ನು ಕರೆತಂದರು. 1984ರಲ್ಲಿ ಚಿತ್ರ ಹಿಟ್ ಆದ ಬಳಿಕ ಅನೇಕ ಕನ್ನಡ ಚಲನಚಿತ್ರಗಳು ಆ ಮನೆಯಲ್ಲಿ ಚಿತ್ರೀಕರಣಗೊಂಡವು. ಆದರೆ, ದಕ್ಷಿಣ ಕನ್ನಡದ ಕಾಂಕ್ರಿಟ್ ದಾಳಿಗೆ ತುತ್ತಾಗುತ್ತಿದ್ದ ಹಳೇ ಕಾಲದ ಮನೆಗಳಿಗೆ ಇದೊಂದು ತಾತ್ಕಾಲಿಕ ಪರಿಹಾರ ಮಾತ್ರವೇ ಆಗಿತ್ತು.

ಕಟ್ಟಡಗಳು ಛಿದ್ರಗೊಂಡಂತೆ ಶೆಣೈ ಅವರ ಮನಸ್ಸೂ ಛಿದ್ರಗೊಳ್ಳತೊಡಗಿತು. ರಾತ್ರಿಯಿಡೀ ಕುಳಿತು ದೇಶದ ಸಾಂಸ್ಕೃತಿಕ ದಿಗ್ಗಜರಿಗೆ ಪತ್ರಗಳನ್ನು ಬರೆಯತೊಡಗಿದರು. “5,000 ವರ್ಷಗಳ ಇತಿಹಾಸ ಇರುವ ನಾಗರಿಕತೆ ನಮ್ಮದು ಎಂದು ಬೀಗುವ ನಾವು ಕೇವಲ ನೂರು ವರ್ಷದ ಇತಿಹಾಸ ಇರುವ ಒಂದು ಕಟ್ಟಡವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದು ನಾಚಿಕೆಯ ಸಂಗತಿ ಅಲ್ಲವೇ?” ಎಂದು ಮುಂಬೈನಲ್ಲಿ ನೆಲೆಸಿದ್ದ ಕವಿಯೊಬ್ಬರಿಗೆ ಅವರು ಖಾರವಾಗಿ ಪ್ರಶ್ನಿಸಿದ್ದರು.

ಆ ಕೊರತೆಯನ್ನು ಹೋಗಲಾಡಿಸಿದ್ದು ಉಡುಪಿಯ ಮಣಿಪಾಲ ವಿಶ್ವವಿದ್ಯಾಲಯಕ್ಕೆ ಹೊಂದಿಕೊಂಡಂತೆ ತಲೆಎತ್ತಿರುವ ಶೆಣೈ ಅವರ ಹಸ್ತಶಿಲ್ಪ ಗ್ರಾಮ. ಸ್ಥಳೀಯ ಆಡಳಿತದಿಂದ ಭೋಗ್ಯಕ್ಕೆ ಪಡೆದ ಆರೂವರೆ ಎಕರೆ ಭೂಮಿಯಲ್ಲಿ ಬಡಗಿಗಳು, ಗುತ್ತಿಗೆದಾರರ ದೊಡ್ಡ ತಂಡವನ್ನೇ ಬಳಸಿ ೧೬ ಪಾರಂಪರಿಕ ಮನೆಗಳನ್ನು, 9 ದೇಗುಲಗಳನ್ನು ಮರುಸ್ಥಾಪಿಸಿದರು. ಈ ಕಟ್ಟಡಗಳು 160-700 ವರ್ಷದವರೆಗಿನ ಸುದೀರ್ಘ ಇತಿಹಾಸ ಹೊಂದಿವೆ. ಅವುಗಳಲ್ಲಿ ಕೆಲವು ಆಳರಸರು, ವ್ಯಾಪಾರಿಗಳು, ನೌಕಾದಳದ ವೀರರು, ಪುರೋಹಿತರು ವಾಸಿಸುತ್ತಿದ್ದ ಮನೆಗಳಾಗಿದ್ದವು. ಸಂಗೀತ ವಾದ್ಯ, ಕರಕುಶಲ ವಸ್ತುಗಳು, ಉಡುಗೆ-ತೊಡುಗೆಗಳು, ಶಿಲಾ ಮುದ್ರಣಗಳು ಹಾಗೂ ವರ್ಣಚಿತ್ರಗಳ ಭಂಡಾರವೇ ಹಸ್ತಶಿಲ್ಪ ಗ್ರಾಮದಲ್ಲಿದೆ. ಇವೆಲ್ಲವುಗಳ ನಡುವೆ ಶೆಣೈ ಅವರು ಒತ್ತು ನೀಡಿದ್ದ ದೇಸಿ ವಾಸ್ತುಶೈಲಿ ಉಸಿರಾಡುತ್ತಿದೆ.

ಶೆಣೈ ಅವರ ಅಭಿರುಚಿಗೆ ತಕ್ಕಂತೆ ‘ಹಸ್ತಶಿಲ್ಪ ಗ್ರಾಮ’ದ ಮೂಲೆಮೂಲೆಯಲ್ಲಿ ಕಲಾಕೃತಿಗಳನ್ನು ಪೇರಿಸಿಡಲಾಗಿದೆ. ಗಂಜೀಫಾ ಎಲೆಗಳ ದೊಡ್ಡ ದೊಡ್ಡ ಆಕೃತಿಯೂ ಇಲ್ಲಿ ನೋಡಲು ಸಿಗುತ್ತದೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಶೈಲಿಯ ಮನೆಗಳೂ ಸಮೀಪದಲ್ಲೇ ಇವೆ. ಕೆಲವನ್ನು ಹೊರತುಪಡಿಸಿದರೆ ಇಂಥದ್ದೇ ಸಂಸ್ಕೃತಿಗೆ ಸೇರಿದ ಮನೆಗಳೆಂದು ಹೇಳುವ ಯಾವ ವಿಧಿವತ್ತಾದ ಫಲಕಗಳೂ ಇಲ್ಲಿಲ್ಲ. ಆದರೆ, ಪ್ರತಿ ಮನೆಯನ್ನೂ ಗುರುತಿಸಲು ಶೆಣೈ ವಿಶಿಷ್ಟವಾದ ಏರ್ಪಾಟು ಮಾಡಿದ್ದಾರೆ. ವಿವಿಧ ಸಂಸ್ಕೃತಿಯನ್ನು ಆಧರಿಸಿದ ಸಂಗೀತ, ಸುಗಂಧ ಮನೆಯೊಳಗೆ ಸುಳಿದಾಡುವಂತೆ ಮಾಡಿ, ಇದು ಹಿಂದೂಗಳ ಮನೆಯೋ ಮುಸ್ಲಿಮರ ಮನೆಯೋ ಎಂದು ಪತ್ತೆಮಾಡಲು ಅವಕಾಶ ಕಲ್ಪಿಸಲಾಗಿದೆ. ಉದಾಹರಣೆಗೆ, ಗುಲಾಬಿಯ ಪರಿಮಳ ಮತ್ತು ಮಾಲಿನಿ ರಾಜೂರ್ಕರ್ ಅವರು ಹಾಡಿದ ರಾಗ ದುರ್ಗದ ಸಂಗೀತವನ್ನು ಬಳಸಿ 14ನೇ ಶತಮಾನಕ್ಕೆ ಸೇರಿದ ಸೇನಾಧಿಪತಿಯ ಮನೆಯೊಂದರ ಚಿತ್ರಣವನ್ನು ಕಟ್ಟಿಕೊಡಲಾಗಿದೆ.

ವಿದ್ವಾಂಸರು ಅವರ ಕೆಲವು ಆಯ್ಕೆಗಳನ್ನು ಒಪ್ಪದಿದ್ದರೂ ಶೆಣೈ ತಥಾಕಥಿತ ವಸ್ತು ಸಂಗ್ರಹಾಲಯವೊಂದನ್ನು ಸ್ಥಾಪಿಸಲು ಮುಂದಾದವರಲ್ಲ ಎಂಬುದು ಗಮನಾರ್ಹ. “ಈ ಮನೆಗಳು ಹೇಗಿರಬೇಕು ಎಂಬ ಖಚಿತತೆ ಅವರಿಗೆ ಇತ್ತು. ಇದು ಅವರ ಶೋಧದ ಫಲ,” ಎನ್ನುತ್ತಾರೆ ಹಸ್ತಶಿಲ್ಪ ಗ್ರಾಮ ಟ್ರಸ್ಟ್‌ನ ಅಧ್ಯಕ್ಷರು ಮತ್ತು ‘ಇನ್ಸ್ಕ್ರೈಬ್ಡ್ ಹೆರಿಟೇಜ್: ಸೆಲೆಕ್ಟ್ ಕರೆಸ್ಪಾಂಡೆನ್ಸ್ ಆಫ್ ವಿಜಯನಾಥ್ ಶೆಣೈ’ ಕೃತಿಯ ಸಹಸಂಪಾದಕರಾದ ಧನ್ವಂತಿ ನಾಯಕ್.

ಗ್ರಾಮದಲ್ಲಿ ಹೆಜ್ಜೆ ಹಾಕಿದೊಡನೆ ವಾವ್ ಎನ್ನುವಂತಹ ಅನೇಕ ಕ್ಷಣಗಳಿಗೆ ಅಲ್ಲಿನ ಛಾಯಾಚಿತ್ರಗಳು ಕಾರಣವಾಗಬಹುದು. ಭಾರಿ ಪರಿಶ್ರಮದಿಂದ ಕೂಡಿರುವ ಈ ಕೆಲಸ ಅನೇಕ ಗುಟ್ಟುಗಳನ್ನು ಹೊಂದಿದೆ. “ಮುಖ್ಯವಾಗಿ, ವಾಸ್ತುಶಿಲ್ಪದ ಇಡೀ ಶಬ್ದಕೋಶವೇ ಒಂದು ಕಡೆ ಸಿಗುತ್ತದೆ,” ಎನ್ನುತ್ತಾರೆ ವಿನ್ಯಾಸಕ ಮತ್ತು ದೇಶದ ಐದು ಕಾಲೇಜುಗಳಲ್ಲಿ ಪಾಠ ಮಾಡುವ ಕರಕುಶಲ ತಜ್ಞ ಜೋಗಿ ಪಹಗಲ್.

ಟ್ರಸ್ಟ್‌ಗೆ ಕಳೆದ ಮೂರು ವರ್ಷಗಳಿಂದ ಧನಸಹಾಯ ಒದಗಿಸುತ್ತಿರುವ ಟಾಟಾ ಟ್ರಸ್ಟ್‌ನ ಕಲೆ ಮತ್ತು ಸಂಸ್ಕೃತಿ ವಿಭಾಗದ ದೀಪಿಕಾ ಸೊರಾಬ್ಜಿ, ಪಾರಂಪರಿಕ ಗ್ರಾಮದಲ್ಲಿ ಅಳವಡಿಸಲಾಗಿರುವ ನೂತನ ಸೌಲಭ್ಯಗಳ ಕುರಿತು ಪ್ರತಿಕ್ರಿಯಿಸುತ್ತ, “ಇದೊಂದು ಹುಚ್ಚು ಎನ್ನಬಹುದಾದ ವಿಶಿಷ್ಟ ಕೆಲಸ. ಸಾಂಪ್ರದಾಯಿಕವಲ್ಲದ ಸೃಷ್ಟಿಕಾರ್ಯ,” ಎನ್ನುತ್ತಾರೆ.

2017ರ ಮಾರ್ಚ್‌ನಲ್ಲಿ ನಿಧನ ಹೊಂದಿದ ಶೆಣೈ ಅವರ ಕೆಲಸಗಳು 20ನೇ ಶತಮಾನದ ಅಮೆರಿಕನ್ ವರ್ಣಚಿತ್ರಗಳ ಸಂಗ್ರಹಕಾರ ಪೆನ್ಸಿಲ್ವೇನಿಯಾದ ಆಲ್ಬರ್ಟ್ ಬಾರ್ನೆಸ್ ಅವರನ್ನು ಹಾಗೂ ಯೂರೋಪಿನ ಮಧ್ಯಕಾಲೀನ ಯುಗದ ಕಲ್ಲುಗಳನ್ನು ಸಂಗ್ರಹಿಸಿದ ನ್ಯೂಯಾರ್ಕ್‌ನಲ್ಲಿ ಕ್ಲೋಯಿಸ್ಟರ್ ವಸ್ತುಸಂಗ್ರಹಾಲಯ ಸ್ಥಾಪಿಸಿದ ರಾಕ್‌ಫೆಲ್ಲರ್ ಅವರನ್ನು ನೆನಪಿಗೆ ತರುತ್ತವೆ.

ದೇಶದ ವಿವಿಧ ಭಾಗಗಳ ದಾನಿಗಳು ಮಾತ್ರವಲ್ಲದೆ ಸ್ಕ್ಯಾಂಡಿನೇವಿಯಾದ 6.15 ಕೋಟಿ ಕ್ರೋನ್‌ಗಳು ಹಾಗೂ ನಾರ್ವೆಯ 1.70 ಲಕ್ಷ ಯೂರೊ ಸಹಾಯ ಪಡೆಯಲಾಗಿದೆ. ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಮನಸ್ಸಿಲ್ಲದ ಮನಸ್ಸಿನಿಂದ ದಾನಿಗಳ ಸಹಾಯ ಪಡೆಯಲು ಶೆಣೈ ಒಪ್ಪಿದರು. ಸ್ವಯಂಸೇವಕರ ಗಂಟೆಗಟ್ಟಲೆ ದುಡಿಮೆ, 19 ವರ್ಷಗಳ ಈ ಸುದೀರ್ಘ ಯೋಜನೆಯನ್ನು ಸಾಕಾರಗೊಳಿಸಿತ್ತು. ಆ ಬಳಿಕ ಶೆಣೈ ಒತ್ತಡದಲ್ಲಿದ್ದರು. ಆತುರಾತುರವಾಗಿ ಹಸ್ತಶಿಲ್ಪ ಗ್ರಾಮವನ್ನು ಸಾರ್ವಜನಿಕ ಪ್ರದರ್ಶನಕ್ಕಿಡುವುದು ಅವರಿಗೆ ಇಷ್ಟವಿರಲಿಲ್ಲ. ಗ್ರಾಮದ ಮೂಲೆ ಮೂಲೆಯೂ ಸುಭದ್ರವಾಗಿದೆಯೇ, ಸಾರ್ವಜನಿಕ ವೀಕ್ಷಣೆಗೆ ಸಜ್ಜಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ಮುಂದುವರಿಯಲು ಬಯಸಿದ್ದರು. ಆಪ್ತೇಷ್ಟರಿಗೆ ತಮ್ಮ ಸಂಗ್ರಹಗಳನ್ನು ತೋರಿಸುತ್ತಿದ್ದರಾದರೂ ಯಾತ್ರಾಸ್ಥಳ ಎಂಬ ಕಲ್ಪನೆ ಬಂದಾಗ ಕೊಂಚ ಅಧೀರರಾದರು. “ಮದುವಣಗಿತ್ತಿಯ ತಂದೆಯ ದುಗುಡದಂತಿತ್ತು ಅವರ ಭಾವ. ಆ ಸ್ಥಳ ಕಳೆದುಹೋಗಬಾರದು ಎಂಬುದು ಅವರ ಕಾಳಜಿಯಾಗಿತ್ತು,” ಎನ್ನುತ್ತಾರೆ ಅವರ ಕೆಲಸಗಳನ್ನು ದೃಶ್ಯಗಳ ಮೂಲಕ ದಾಖಲಿಸಿರುವ ಬೆಂಗಳೂರು ಮೂಲದ ಛಾಯಾಗ್ರಾಹಕ ಮಹೇಶ್ ಭಟ್.

ಇದು ಪ್ರವಾಸಿಗರಿಗೆ ಬೇಕಾದಂತೆ ಮಾಹಿತಿ ಒದಗಿಸುವ ವಸ್ತು ಸಂಗ್ರಹಾಲಯವಲ್ಲ. ಅಥವಾ ಜೀವಂತ ಕಲಾವಿದರು ಕತೆ ಹೇಳುವ ಥೀಮ್ ಪಾರ್ಕ್ ಕೂಡ ಅಲ್ಲ. ಚೆನ್ನೈನ ‘ದಕ್ಷಿಣ ಚಿತ್ರ’ ವಸ್ತು ಸಂಗ್ರಹಾಲಯಕ್ಕಿಂತ ಇದು ಭಿನ್ನ. ವಿನ್ಯಾಸದಲ್ಲಿ ಇಲ್ಲಿನ ಒಳಾಂಗಣಗಳು ನೋಡುಗರೇ ತಮ್ಮ ಕಲ್ಪನೆಯನ್ನು ಹರಿಯಬಿಡುವಂತೆ ಮಾಡುತ್ತವೆ.

‘ಗ್ರಾಮ’ದ ಟ್ರಸ್ಟಿಗಳು ‘ಸದರ್ನ್ ಸ್ಟ್ರಾಲ್’, ‘ಈಸ್ಟರ್ನ್ ಜಾಂಟ್’ ಹಾಗೂ ‘ಹೆರಿಟೇಜ್ ಬೈ ನೈಟ್’ ಎಂಬ ಪರಿಕಲ್ಪನೆಗಳ 90 ನಿಮಿಷಗಳ ಅವಧಿಯ ಮೂರು ದೃಶ್ಯಸರಣಿಯನ್ನು ಪ್ರಸ್ತುತಪಡಿಸುತ್ತಾರೆ. ಬ್ರಾಹ್ಮಣ ಮನೆತನವೊಂದು ಜೀವಿಸಿದ್ದ 1856ರ ‘ಮಿಯಾರ್ ನಿವಾಸ’ದಿಂದ ಯಾತ್ರಾ ಸರಣಿ ಆರಂಭವಾಗುತ್ತದೆ. ಮಾರ್ಗದರ್ಶಕರು, ರೆಡ್ ಆಕ್ಸೈಡ್ ನೆಲದ ಮನೆಯ ಮಹತ್ವ, ಹೆಣ್ಣುಮಕ್ಕಳಿಗಾಗಿ ಮೀಸಲಾಗಿದ್ದ ‘ಮುಟ್ಟಿನ ಮನೆ’, ಬರೀದ್ ಶಾಹಿ ಮಹಲಿನಲ್ಲಿ ನರ್ತಿಸುತ್ತಿದ್ದ ನೃತ್ಯಗಾತಿಯರು, ಪೋರ್ಚುಗೀಸರ ಶೈಲಿಯ 160 ವರ್ಷದ ಮನೆಯೊಂದರಲ್ಲಿರುವ ಸೀಮೆಎಣ್ಣೆ ಚಾಲಿತ ಫ್ರಿಜ್ ಮತ್ತಿತರ ಅಮೂಲ್ಯ ಸಂಗತಿಗಳ ಪರಿಚಯ ಮಾಡಿಕೊಡುತ್ತಾರೆ.

ಪ್ರವೇಶ ಶುಲ್ಕ ಹಗಲು ಹೊತ್ತು 300 ರು. ರಾತ್ರಿ ವೇಳೆ 500 ರು. ದೇಶದ ಉಳಿದ ವಸ್ತುಸಂಗ್ರಹಾಲಯಗಳಿಗೆ ಹೋಲಿಸಿದರೆ ಇದು ತುಸು ದುಬಾರಿ ಅನ್ನಿಸಬಹುದು. ಅಲ್ಲದೆ, ಸ್ವಯಂಸೇವಕರು ಸಂದರ್ಶಕರಿಂದ ದೇಣಿಗೆಗೂ ಮನವಿ ಮಾಡುವುದುಂಟು. ಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಪುಟಾಣಿ ಮ್ಯೂಸಿಯಂ ಇದ್ದು ಅದರಲ್ಲಿ ಅಮೂಲ್ಯ ವಸ್ತುಗಳನ್ನು ಗಾಜಿನ ಪೆಟ್ಟಿಗೆಗಳಲ್ಲಿ ಸುರಕ್ಷಿತವಾಗಿಡಲಾಗಿದೆ. ಪೋಷಕರ ಜೊತೆ ಬರುವ ಮಕ್ಕಳಿಗೆ ಹಸ್ತಶಿಲ್ಪ ಗ್ರಾಮಕ್ಕೆ ನೇರ ಪ್ರವೇಶ ಕಲ್ಪಿಸಲಾಗುತ್ತದೆ. ಇದು ಒಂದೊಮ್ಮೆ ಶೆಣೈ ಅವರ ದೇಸಿ ವಾಸ್ತುಶೈಲಿಯಲ್ಲಿ ರೂಪುಗೊಂಡ ಕನಸಿನ ಮನೆಯಾಗಿತ್ತು. ಅವರು ಮನೆಯಲ್ಲಿ ವಾಸವಾಗಿದ್ದಾಗಲೇ ಸಂದರ್ಶಕರು ಅಲ್ಲಿಗೆ ಭೇಟಿ ನೀಡುತ್ತಿದ್ದರು. ಸ್ಥಳೀಯ ಮಾಧ್ಯಮಗಳು ಹೆಚ್ಚು ಪ್ರಚಾರ ನೀಡತೊಡಗಿದಂತೆ ಸಂದರ್ಶಕರನ್ನು ನಿಭಾಯಿಸುವುದೇ ದುಸ್ಸಾಧ್ಯವಾಗಿ ಶೆಣೈ ತಮ್ಮ ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಿದರು. ಶೆಣೈ ಪುತ್ರ ಶ್ರೀನಿವಾಸ್, “ನಾವು ಆಗ ಚಿಕ್ಕಮಕ್ಕಳು. ನಾನು ಮತ್ತು ನನ್ನ ಸಹೋದರಿ ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಓಡಾಡುತ್ತಲೇ ಇರುತ್ತಿದ್ದೆವು. ಕೆಲವರು ಬಚ್ಚಲುಮನೆಗೂ ನುಗ್ಗಿಬಿಡುತ್ತಿದ್ದರು,” ಎಂದು ಪಾರಂಪರಿಕ ಮನೆಯಲ್ಲಿ ಕಳೆದ ದಿನಗಳನ್ನು ನೆನೆಯುತ್ತಾರೆ.

ಈಗ ಟ್ರಸ್ಟಿಗಳು ಹೆಚ್ಚು ಪ್ರವಾಸಿಗರನ್ನು ಗ್ರಾಮಕ್ಕೆ ಕರೆತರುವುದು ಹೇಗೆ ಎಂಬ ಯೋಚನೆಯಲ್ಲಿ ಮಗ್ನರಾಗಿದ್ದಾರೆ. ನಗರಕ್ಕೆ ಅಂಟಿಕೊಂಡಂತೆಯೇ ಇದ್ದರೂ ಗ್ರಾಮದ ಬಗ್ಗೆ ಹೆಚ್ಚಿನ ಜನರಿಗೆ ಅರಿವಿಲ್ಲ. ಬೆಂಗಳೂರು, ದೆಹಲಿಯಂತಹ ಕಡೆಗಳಲ್ಲಿ ಕಲಾಸಕ್ತರಿಗೆ ಕೊರತೆಯೇನೂ ಇರುವುದಿಲ್ಲ. ಆದರೆ, ಭಾರತದ ಮಧ್ಯಮ ವರ್ಗದಲ್ಲಿ ಬೆಳೆಯುತ್ತಿರುವ ‘ಅಲೆಮಾರಿ ಅಭಿರುಚಿ’ಗಳನ್ನು ಒಂದೆಡೆ ಸೇರಿಸಿದರೆ ಇಂತಹ ಗ್ರಾಮಗಳು ಜನನಿಬಿಡವಾಗುತ್ತವೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಗ್ರಾಮದ ಬಗ್ಗೆ ಹೆಚ್ಚು ಪ್ರಚಾರ ನೀಡಿದರೆ ವಿದೇಶಿ ಪ್ರವಾಸಿಗರು, ಕೊಲ್ಲಿ ರಾಷ್ಟ್ರಗಳಿಂದ ಮರಳುವ ಭಾರತೀಯರು ಇಲ್ಲಿಗೆ ಬರಲು ಅನುಕೂಲವಾಗುತ್ತದೆ. ಬೆಂಗಳೂರು ಮೂಲದ ವಾಸ್ತುಶಿಲ್ಪಿ ಸತ್ಯಪ್ರಕಾಶ್ ವಾರಣಾಸಿ, “ಶೆಣೈ ಕೆಲಸಗಳು ಮನಮುಟ್ಟುತ್ತವೆ. ಆದರೆ ಮುಂದೇನು ಎಂಬ ಪ್ರಶ್ನೆ ಕಾಡುತ್ತದೆ,” ಎನ್ನುತ್ತಾರೆ.

ಇಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ರೂಪಿಸುವ ಯೋಜನೆ ಇದೆ. ಭದ್ರತಾ ಕ್ಯಾಮೆರಾಗಳನ್ನು ಈಗಷ್ಟೇ ಅಳವಡಿಸಲಾಗುತ್ತಿದೆ. ವಿಶೇಷ ಸಂಗ್ರಹಗಳಿರುವ ಅನೇಕ ಕೊಠಡಿಗಳು ಇನ್ನೂ ಮುಚ್ಚಿವೆ. ಇಂತಹ ಅಮೂಲ್ಯ ಸಂಗ್ರಹಗಳಲ್ಲಿ ಮಹಾನ್ ಚಿತ್ರಕಲಾವಿದ ರಾಜಾ ರವಿವರ್ಮ ಅವರ ವರ್ಣಚಿತ್ರಗಳು ಮತ್ತು ಶಿಲಾಮುದ್ರಣಗಳು ಕೂಡ ಇವೆ. ಕಳೆದ ಏಪ್ರಿಲ್‌ನಲ್ಲಿ ಎರಡು ಯಾತ್ರೆಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ‘ಮಾನ್ಸೂನ್ ನಡಿಗೆ’ ಎಂಬ ಹೊರಗಿನ ವಾಸ್ತುಶೈಲಿಯನ್ನು ಮಾತ್ರ ಸವಿಯಬಹುದಾದ ಯಾತ್ರೆಯನ್ನು ಪರಿಚಯಿಸಲಾಗಿದೆ (ಶುಲ್ಕ 200 ರು).

ದೇಸಿ ವಾಸ್ತುಶೈಲಿ ತನ್ನ ಭೌತಿಕ ಮತ್ತು ಸಾಂಸ್ಕೃತಿಕ ಕಾರಣಕ್ಕೆ ದೇಶ ವಿದೇಶಗಳ ಗಮನ ಸೆಳೆದಿದ್ದರೂ ಭಾರತದಲ್ಲಿ ಅದರ ಕುರಿತ ಬೋಧನೆ ಕಡಿಮೆ. “ಜನರಿಗೆ ತಮ್ಮ ಪರಂಪರೆಯ ಬಗ್ಗೆ ಗೌರವ ಇಲ್ಲದಿರುವುದರಿಂದ ಸಾಕಷ್ಟು ವಾಸ್ತುಶೈಲಿಗಳು ಕಳೆದುಹೋಗಿವೆ. ಔಪಚಾರಿಕ ವಾಸ್ತುಶಿಲ್ಪ ಶಿಕ್ಷಣ ಅದರ ಬಗ್ಗೆ ಗಮನ ಹರಿಸಲು ವಿಫಲವಾಗಿದೆ,” ಎನ್ನುತ್ತಾರೆ ಪುನರ್ ಸ್ಥಾಪನೆ ಎಂಜಿನಿಯರ್ ಪೈ. “ಏನು ಗೊತ್ತಿಲ್ಲವೋ ಅದರ ಬಗ್ಗೆ ಗೌರವ ಮೂಡುವುದಾದರೂ ಹೇಗೆ?” ಎಂದು ಪ್ರಶ್ನಿಸುತ್ತಾರೆ ಅವರು.

ಇದಕ್ಕೆ ಪರಿಹಾರವೆಂಬಂತೆ ಕೆಲವು ವಿನ್ಯಾಸ ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಹಸ್ತಶಿಲ್ಪ ಗ್ರಾಮಕ್ಕೆ ಕಳಿಸಿಕೊಡುವುದಿದೆ. ಉದಾಹರಣೆಗೆ, ಬೆಂಗಳೂರಿನ ಸೃಷ್ಟಿ ಡಿಸೈನ್ ಸ್ಕೂಲ್ ನ ಹತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಬಂದು ಈ ಸ್ಥಳಕ್ಕೆ ಮಾನವೀಯ ಆಯಾಮ ಕಲ್ಪಿಸುವುದು ಹೇಗೆ ಎಂಬುದನ್ನು ಅಧ್ಯಯನ ಮಾಡಿದರು. ಮಿಯಾರ್ ನಂತಹ ಕಟ್ಟಡವನ್ನು ಅದರ ಮೂಲಸ್ಥಳದಿಂದ ಬದಲಿಸಿ ಹೊಸ ಸ್ಥಳಕ್ಕೆ ತಂದಾಗ ಅದು ಮೂಲದ ಭವ್ಯತೆಯನ್ನೇ ಉಳಿಸಿಕೊಳ್ಳಲು ಹೆಚ್ಚು ಸಹಾಯ ಬೇಕಾಗುತ್ತದೆ ಎಂಬುದನ್ನು ಕಂಡುಕೊಂಡರು.

ಪೆನ್ಸಿಲ್ವೇನಿಯಾ ಸಂಗ್ರಹಕಾರ ಬಾರ್ನೆಸ್ ಅವರಂತಲ್ಲ ಶೆಣೈ. ತಮ್ಮ ಪರಿಕಲ್ಪನೆಯಂತೆಯೇ ಮುಂದೆಯೂ ಹಸ್ತಗ್ರಾಮ ರೂಪುಗೊಳ್ಳಬೇಕು ಎಂದು ವಿಲ್ ಬರೆದಿಟ್ಟು ಪಟ್ಟು ಹಿಡಿಯಲಿಲ್ಲ. ಇದು ಇಲ್ಲಿ ಅನೇಕ ಸುಧಾರಣೆಗಳನ್ನು ತರಲು ಸಾಧ್ಯವಾಗಿದೆ. ಆದರೆ, ದಾಖಲೆಗಳ ಸಂಗ್ರಹ ಕಾರ್ಯ ಇನ್ನೂ ಅಪೂರ್ಣವಾಗಿದ್ದು, ಛಾಯಾಚಿತ್ರಗಳು, ಕಟ್ಟಡಗಳ ನೀಲನಕ್ಷೆ, ಹಲವು ವಿವರಗಳು ಇನ್ನಷ್ಟೇ ಸಾರ್ವಜನಿಕರಿಗೆ ತೆರೆದುಕೊಳ್ಳಬೇಕಿದೆ. “ಬಾರ್‌ವೊಂದರಲ್ಲಿ ಕುಳಿತು ಶೆಣೈ ಮನೆಗಳ ಕುರಿತು ಅನೇಕ ಕತೆಗಳನ್ನು ಹೇಳುತ್ತಿದ್ದರು. ನಾನು ಅವುಗಳನ್ನು ಟಿಶ್ಯೂ ಪೇಪರ್ ಮೇಲೆ ಬರೆದುಕೊಳ್ಳುತ್ತಿದ್ದೆ. ಸ್ಮರಣಶಕ್ತಿಯೇ ಅವರ ಬಹುದೊಡ್ಡ ಆಸ್ತಿಯಾಗಿತ್ತು,” ಎಂದು ಸ್ಮರಿಸುತ್ತಾರೆ ಉಡುಪಿಯ ರಾಜೇಶ್ ಪೈ.

ಶೆಣೈ ಜಗತ್ತಿನಲ್ಲಿ ವಸ್ತುಗಳಿಗಿರುವ ಮೌಲ್ಯಕ್ಕಿಂತಲೂ ಅವು ಸ್ಫುರಿಸುವ ಭಾವನಾತ್ಮಕತೆ ಮುಖ್ಯವಾಗಿ ಕಾಣುತ್ತದೆ. ಕೆಟ್ಟುಹೋದ ರೇಡಿಯೊ ಅಥವಾ ತುಕ್ಕು ಹಿಡಿದ ಬೈಸಿಕಲ್ಲಿನ ಚಕ್ರ ಕೂಡ ಇಲ್ಲಿ ಜೀವದಳೆಯುತ್ತವೆ. ಅವುಗಳಲ್ಲಿ ಕೆಲವು ನಿರುಪಯುಕ್ತ ವಸ್ತುಗಳಿದ್ದವೇ? ಇರಬಹುದು. ಆದರೆ ಶೆಣೈ ಬದುಕು ಅವುಗಳ ಮೂಲಕವೇ ಏನನ್ನೋ ಹೇಳಲು ಹೊರಟಂತಿದೆ. ಅಕಾಡೆಮಿಕ್ ಮಿತಿಗಳನ್ನೂ ಮೀರಿದ ಕುತೂಹಲ ಅವರದಾಗಿತ್ತು. ಹಳ್ಳಿಗರು ಬಳಸದೇ ಇದ್ದ ಪೂಜಾ ವಸ್ತುಗಳೂ ಅವರ ಸಂಗ್ರಹದ ಪಟ್ಟಿಯಲ್ಲಿದ್ದವು. ಶೆಣೈ ಒಬ್ಬ ಒರಟು ಮನುಷ್ಯ ಇರಬಹುದು, ಅವರು ಹೇಳಿದ್ದನ್ನೆಲ್ಲ ಒಪ್ಪಲು ಸಾಧ್ಯವಾಗದೆಯೂ ಹೋಗಬಹುದು. ಆದರೆ ಅವರೊಬ್ಬ ಸದಾ ಪ್ರೀತಿ ತುಳುಕಿಸುವ ಮನುಷ್ಯನಾಗಿದ್ದರು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More