ವಯಸ್ಕರಿಗಿಂತ ಯುವಜನರನ್ನು ಹೆಚ್ಚು ಕಾಡುತ್ತಿದೆ ಒಂಟಿತನ; ಕಾರಣ ಗೊತ್ತೇ?

ಬಿಬಿಸಿ ರೇಡಿಯೋ ನಡೆಸಿದ ಸಂಶೋಧನೆಯೊಂದರಲ್ಲಿ, ವಯಸ್ಕರಿಗಿಂತ ಯುವಜನರಲ್ಲೇ ಹೆಚ್ಚು ಒಂಟಿತನ ಕಾಡುತ್ತಿರುವುದು ಗೊತ್ತಾಗಿದೆ. ಯುವಜನರಲ್ಲಿ ಒಂಟಿತನ ಕಾಡಲು ಸಾಮಾಜಿಕ ಜಾಲತಾಣಗಳು ಕಾರಣ ಎನ್ನಲಾಗಿದೆ. ಈ ಕುರಿತ ‘ಬಿಬಿಸಿ’ ವರದಿಯ ಭಾವಾನುವಾದವಿದು

ಬಸ್ಸು, ರೈಲು, ವಿಮಾನದಲ್ಲಿ ಹೋಗುವಾಗ ಗಮನಿಸಿದರೆ, ಶೇ.95ರಷ್ಟು ಮಂದಿ ಮೊಬೈಲ್‌ನಲ್ಲಿ ಬ್ಯುಸಿಯಾಗಿರುತ್ತಾರೆ. ಹದಿಹರೆಯದ ಮಂದಿಯಂತೂ ದಿನದ ಬಹು ಹೊತ್ತು ಮೊಬೈಲ್ ಜೊತೆಯೇ ಕಾಲ ಕಳೆಯುುತ್ತಾರೆ. ಸಾಮಾಜಿಕ ಜಾಲತಾಣಗಳು ಬಂದಮೇಲೆ ಪ್ರಪಂಚ ಕಿರಿದಾಗಿದೆ. ಕ್ಷಣಾರ್ಧದಲ್ಲಿ ವಿಶ್ವದಲ್ಲಾಗುವ ಎಲ್ಲ ಸುದ್ದಿಗಳು ಅಂಗೈಯಲ್ಲೇ ಗೋಚರವಾಗುತ್ತದೆ ಎಂಬ ಕಲ್ಪನೆಯನ್ನು ಸೃಷ್ಟಿಸಿರುವ ಸಾಮಾಜಿಕ ಜಾಲತಾಣಗಳು, ಒಂದೆಡೆ ಪ್ರಪಂಚವನ್ನು ಚಿಕ್ಕದಾಗಿಸಿದರೆ, ಮತ್ತೊಂದೆಡೆ ನಮ್ಮ ಪರಿಕಲ್ಪನೆಯನ್ನೂ ಸಂಕುಚಿತಗೊಳಿಸುತ್ತಿವೆ ಎಂದು ಸಮೀಕ್ಷೆಯೊಂದು ಹೇಳಿದೆ.

ಬಿಬಿಸಿ ರೇಡಿಯೋ-4 ಮಾಡಿರುವ ಸಮೀಕ್ಷೆಯ ಪ್ರಕಾರ, 16ರಿಂದ 24ರ ವಯಸ್ಸಿನ ಯುವಕ-ಯುವತಿಯರಲ್ಲಿ ಒಂಟಿತನದ ಸಮಸ್ಯೆ ತೀವ್ರವಾಗಿದೆ. 16ರಿಂದ 24 ವಯಸ್ಸಿನ ಶೇ.40ರಷ್ಟು ಜನರಲ್ಲಿ ಏಕಾಂಗಿತನ ಕಾಡುತ್ತಿದ್ದರೆ, 65ರಿಂದ 74ರ ವಯೋಮಾನದ ಶೇ.29 ರಷ್ಟು ಹಾಗೂ 75 ವಯಸ್ಸಿಗಿಂತ ಹೆಚ್ಚಿನ ವಯೋಮಾನದ ಶೇ.27ರಷ್ಟು ಜನರಲ್ಲಿ ಈ ಒಂಟಿತನದ ಸಮಸ್ಯೆ ಇದೆ.

ಒಂಟಿತನದ ಕುರಿತಂತೆ ಸಮೀಕ್ಷೆ ನಡೆಸಿದ ಲಂಡನ್‌ನ ಬ್ರೂನೆಲ್ ವಿಶ್ವವಿದ್ಯಾಲಯ, ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯ ಮತ್ತು ಎಕ್ಸೆಟರ್ ವಿಶ್ವವಿದ್ಯಾನಿಲಯ, 16 ವರ್ಷ ಹಾಗೂ ಅದಕ್ಕಿಂತ ವಯಸ್ಸಿನ 55 ಸಾವಿರ ಮಂದಿಯನ್ನು ಸಮೀಕ್ಷೆಗಾಗಿ ಮಾತನಾಡಿಸಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಮ್ಯಾಂಚೆಸ್ಟರ್ ವಿವಿಯ ಮನೋಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪಮೇಲಾ ಕ್ವಾಲ್ಟರ್, “ಸಮೀಕ್ಷೆಯಲ್ಲಿ ಭಾಗವಹಿಸಿದವರೆಲ್ಲರೂ ತಮಗೆ ಯಾವಾಗ ಮತ್ತು ಯಾವ ಕಾರಣದಿಂದ ಒಂಟಿತನ ಕಾಡಿದೆ ಎಂದು ಹೇಳಿಕೊಂಡಿದ್ದಾರೆ. ಅವರು ನೀಡಿದ ವಿವರಗಳು ಬಹಳ ಕುತೂಹಲಕರವಾಗಿತ್ತು,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಶೋಧನೆಯಲ್ಲಿ ತಿಳಿದುಬಂದಿರುವ ಪ್ರಕಾರ, ಹಿರಿಯರಿಗೆ ಹೋಲಿಸಿದರೆ ಕಿರಿಯರಲ್ಲಿ ಒಂಟಿತನದ ಸಮಸ್ಯೆ ಶೇ.40ರಷ್ಟು ಹೆಚ್ಚಾಗಿದೆ.

  • ಒಂಟಿತನ ಅನುಭವಿಸುವ ಮಂದಿಯಲ್ಲಿ ಹೆಚ್ಚಿನವರಿಗೆ ಫೇಸ್ಬುಕ್ ಗೆಳೆಯರೇ ಹೆಚ್ಚಾಗಿದ್ದಾರೆ.
  • ಈ ಸಮಸ್ಯೆ ಕಾಡುತ್ತಿರುವ ಮಂದಿಗೆ, ಇತರರು ನೀಡುವ ಸಮಾಧಾನಕರ ಪರಿಹಾರ 'ಡೇಟಿಂಗ್'
  • ಶೇ.41ರಷ್ಟು ಜನರು ಹೇಳುವಂತೆ ಕೆಲವೊಮ್ಮೆ ಒಂಟಿತನ ಎನ್ನುವುದು ಸಕಾರಾತ್ಮಕ ಅನುಭವ ನೀಡುತ್ತದೆ

ಒಂಟಿತನದ ಕುರಿತಂತೆ ಬಿಬಿಸಿ ರೇಡಿಯೋ ಪ್ರಸಾರ ಮಾಡುತ್ತಿರುವ 'ಆಲ್ ಇನ್ ದಿ ಮೈಂಡ್' ಕಾರ್ಯಕ್ರಮದಲ್ಲಿ ಗಾಯಕ ಜಾಝ್ ಮೊರ್ಲೆ, ಕವಿ ದಲ್ಗಿಟ್ ನಾಗ್ರಾ ಮತ್ತು ತತ್ವಶಾಸ್ತ್ರಜ್ಞ ಜೂಲಿಯನ್ ಬ್ಯಾಗ್ನಿನಿ ಅವರೊಂದಿಗೆ ಪ್ರೊಫೆಸರ್ ಪಮೇಲಾ ಕ್ವಾಲ್ಟರ್ ಮತ್ತು ಪ್ರಾಧ್ಯಾಪಕಿ ಕ್ರಿಸ್ಟಿನಾ ವಿಕ್ಟರ್ ಕೂಡ ಪಾಲ್ಗೊಂಡಿದ್ದರು. 'ಅನಾಟಮಿ ಆಫ್ ಲೋನ್ಲಿನೆಸ್' ಶೀರ್ಷಿಕೆಯಡಿಯಲ್ಲಿ ಬಿಬಿಸಿ ರೇಡಿಯೋ ರೂಪಿಸಿರುವ ಕಾರ್ಯಕ್ರಮವನ್ನು ಮೂರು ವಿಭಾಗಗಳಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಹದಿಯರೆಯದವರಲ್ಲಿ ಯಾವ ಕಾರಣಕ್ಕೆ ಈ ಒಂಟಿತನ ಕಾಡುತ್ತದೆ ಎಂಬುದರ ಬಗ್ಗೆಯೂ ಚರ್ಚಿಸಲಾಗುತ್ತಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More